Thursday 30 November 2023

ಬೆಂಕಿಯಾಟ - ಕೇತಕೀವನ - ಡಿವಿಜಿ

ಎಲೆ ತರಳೆ, ಬೇಡುವೆನು : 
ನಿಲಿಸು ನಿನ್ನಾಟವನು; 
ನಿನ್ನೊಲವು ಬೆಂಕಿಕಾಟ. 
ಎದೆಗೆ ಮುಳ್ಳಿರಿಯುವುದೆ 
ಬದುಕನುರಿಗೊಡ್ಡುವುದೆ 
ನಿನ್ನ ಚೆಲುವಾಡುವಾಟ. 

ಎಲೆ ಕುಟಿಲೆ, ದೂರವಿರು; 
ಸನಿಹದಲಿ ಬಾರದಿರು; 
ಸಾಕು ನಿನ್ನೊನಪು ನೋಟ. 
ಹಿಂದೆ ನೀ ಹೊತ್ತಿಸಿದೆ 
ಬೆಂಕಿಯನದಾರದಿದೆ, 
ಈಗದನು ಕೆಣಕಬೇಡ. 

ಒಲವು ಮೇವನು ಸೂಸಿ 
ಚೆಲುವು ಬಲೆಯನು ಬೀಸಿ 
ಬೇಡಿತಿವೊಲಾದೆ ನೀನು. 
ಸೆರೆತೊಡಕ ಶಂಕಿಸದ 
ಗುರಿಗತಿಯ ಚಿಂತಿಸದ 
ಮೂಢ ಖಗವಾದೆ ನಾನು. 

ಮಲಯಮಾರುತವೆಂದು 
ತಿಳಿದಿದ್ದೆ ನಾನಂದು 
ನಿನ್ನ ಮೈಸೋಕಿದೆಲರ; 
ಬಳಿಸಾರಲೀಗಳದು 
ಪ್ರಳಯದ ಜ್ವಾಲೆವೊಲು 
ಸುಡುವುದೆನ್ನಸುವಿನರಲ. 

ಮುಳಿಸು ಬೇಡೀ ನುಡಿಗೆ 
ಹಳಿವು ಸಲ್ಲದು ನಿನಗೆ 
ತಪ್ಪೆನದು, -ವೇಧಸನದು. 
ಬೆಡಗುರೂಪಿನ ಮಾತು 
ದಿಟವೆಂದು ಮನಸೋತು 
ಬೆಪ್ಪಾದೆ, ಮೋಹ ಕವಿದು. 

ಬಲು ವರುಷ ಕಾದಿದ್ದೆ, 
ಹಲತೆರದಿ ನೊಂದಿದ್ದೆ 
ತರಳೆ, ನಿನಗಾಗಿ ನಾನು; 
ನೂರು ಹುಸಿನಗು ನಗುತ 
ಹೇರಾಸೆ ಹುಟ್ಟಿಸುತ 
ಮರುಳನಂ ಗೈದೆ ನೀನು. 

ಇನ್ನು ಸಾಕೀ ನಟನೆ- 
ನಿನ್ನ ವಿಷಮಧು ಘಟನೆ- 
ನೂತನದ ಪೂತನಿವೊಲು. 
ದಿಟದೊಲವ ನೀನರಿಯೆ, 
ಸಟೆಗೆ ನೆಲೆ ನಿನ್ನೆದೆಯೆ, 
ಪ್ರೀತಿ ನಿನಗುಡುಪಿನವೊಲು. 

ಪ್ರೀತಿಯಾತುಮದ ರಸ, 
ನೀತಿಯೆನಗದರ ವಶ; 
ಮುರಿದೆ ನೀನದನು ಸೊಕ್ಕಿ. 
ಎನ್ನ ಕುದಿವೆದೆಯ ಬಿಸಿ 
ನಿನ್ನ ತಾಕದೆ ತಪಿಸಿ 
ಕರುಮವೆಂದಾನುಮ್‍ ಉಕ್ಕಿ? 

ಕನಿಕರವ ತೋರುವೊಡೆ 
ಎನಗೊಳಿತ ಮಾಡುವೊಡೆ 
ಕೆರಳಿಸದಿರೆನ್ನ ನೆನಪನ್‍ 
ಕಳೆದ ನಮ್ಮಯ ಕತೆಯ 
ಅಳಿಸಿ ತೊಳೆ ಎನ್ನೆದೆಯ, 
ಮರೆವನನುಗೊಳಿಸು ಕೃಪೆಯಿಂ. 

ಹೊಳೆಗಣ್ಣ ಮಿಟುಕದಿರು, 
ಚೆಲು ಬಲೆಯ ಬೀಸದಿರು, 
ಸೆರೆಕೊಳದಿರೆನ್ನ ಮರಳಿ. 
ಉರಿಮುಖವ ತೋರುತಿರು, 
ಕರಿ ವಿಷವ ಕಾರುತಿರು, 
ವಿರಸೆ ನೀನಾಗು ಜರೆಯಿಂ. 

ಎಲೆ ತರಳೆ, ಬೇಡುವೆನು; 
ನಿಲಿಸು ನಿನ್ನಾಟವನು. 
ನಿನ್ನೊಲವು ಬೆಂಕಿಕಾಟ.
ಎಲೆ ಕುಟಿಲೆ, ದೂರವಿರು, 
ಸನಿಹದಲಿ ಬಾರದಿರು, 
ಸಾಕು ನಿನ್ನೊನಪು ನೋಟ.

********************

ಪ್ರೇಯಸಿಯಿಂದ ಪ್ರೀತಿವಂಚಿತನಾದ ಭಗ್ನಪ್ರೇಮಿಯು "ನಿಲಿಸು ನಿನ್ನ ಬೆಂಕಿಕಾಟವನು" ಎಂದು ತಹತಹಿಸುತ್ತಾನೆ‌.

    ಪ್ರೇಮವಂಚಿತನಾದರೂ  ಪ್ರೇಮಿಯ ಎದೆಯೊಳಗೆ ತನ್ನ ಕನಸುಗಳನ್ನು ಕದ್ದವಳ ಬಗೆಗಿನ ಮೋಹದಾಟಗಳು ಕಾಡುತ್ತಲೇ ಇರುತ್ತವೆ‌. ಇದರಿಂದ ದುಃಖ, ವೇದನೆ, ಹತಾಶೆಗಳಿಂದ ಪ್ರೇಯಸಿಯ ಕಾಡುವ ಚಿತ್ರಗಳು ಚಿತ್ತದಲಿ ಮೂಡುವಾಗ ಕಾಡಬೇಡೆನ್ನ ತೊಲಗಾಚೆ ಎಂದು ಗೋಗರೆಯುತ್ತಾನೆ‌.
ಸಾಕು ಮಾಡು ನಿನ್ನ‌ ಒಲವಿನ‌ ನಾಟಕವನ್ನು. ದೂರಸರಿ. ನಿನ್ನ ಒಲವಿನ‌ ನಾಟಕವನ್ನರಿಯದೆ  ಬೆಂಕಿಯೊಡನೆ ಸರಸವಾಡಿದೆನು. ಬೆಂಕಿಯ ನಾಲಿಗೆಗೆ ಸಿಲುಕಿದೆನು.
 
ನಿನ್ನ ಚೆಲುವಿಗೆ ಮನಸೋತ ನನ್ನೆದೆಗೆ ಮುಳ್ಳಿನಿಂದ ಇರಿದು ಪ್ರೀತಿಯನ್ನು ಬಲಿಕೊಟ್ಟೆ. ನನ್ನ ಬದುಕಿನರಮನೆಗೆ ಬೆಂಕಿಯಿಟ್ಟೆ. ನಿನ್ನ ಚೆಲುವಿನ ಮಾಟದ ಕಾಟವು ಸಾಕು ಸಾಕಿನ್ನು ಕಾಡದಿರು.
 ಸ್ವಾರ್ಥ ಕುಟಿಲ ಸ್ವಭಾವದ ನೀನು ಮತ್ತೆ ನನ್ನ ಬಳಿ ಬಾರದಿರು.
ನಿನ್ನ ವೈಯಾರದ ಕುಡಿನೋಟದ ಬಲೆಯನ್ನು ಬೀಸಬೇಡ! 

ನಿನ್ನ ವೈಯಾರದ ನೋಟದ ಬೆಂಕಿಯಿಂದ ಬೆಂದು ಹೋಗಿದ್ದೇನೆ. ಅದರ ಕಾವಿನ್ನೂ ಆರಿಲ್ಲ. ಆದರೆ ನಿನ್ನ  ನೋಟಬೇಟದ ಬೆಂಕಿಯ ಕಾಟವಿನ್ನೂ ನಿಂತಿಲ್ಲ. ಬೂದಿಮುಚ್ಚಿದ ಕೆಂಡವನ್ನು ಕೆಣಕಬೇಡ.
ಒಲವೆಂಬ ಚಿಗುರುಮೇವನ್ನು ಮುಂದೊಡ್ಡಿದೆ. ಚೆಲುವಿನ ಬಲೆಯನ್ನು ಬೀಸಿದ್ದನ್ನು ನಾನು ತಿಳಿಯಲೇ ಇಲ್ಲ. ನೀನು ರಾಮನಿಗಾಗಿ ಹಂಬಲಿಸಿದ ಶಬರಿಯಲ್ಲ. ಮಾಯಾ ಜಿಂಕೆಯಾಗಿ ಸೀತೆಯ ಬಳಿ ಸುಳಿದ ಮಾರೀಚನೆಂಬ ಬೇಡತಿ ನೀನು. ನೀನು ಬೀಸಿದ ಬಲೆಯೊಳಗೆ ಸಿಲುಕಿ ವಿಲವಿಲನೆ ಒದ್ದಾಡುವ ಅವಿವೇಕಿ ಹಕ್ಕಿಯಾದೆನು.

 ನಿನ್ನ ಕೋಮಲವಾದ ಶರೀರದ ಸಂಸ್ಪರ್ಶದಿಂದ  ಮಲಯಮಾರುತದ ಮಂದಾನಿಲನದ ಸುಖಸ್ಪರ್ಶವೆಂದು ಭ್ರಮಿಸಿದ್ದೆ. ಇಂದು ನೀನೆನ್ನ ಬಳಿ ಸುಳಿದರೆ ಪ್ರಳಯಕಾಲದ ಜ್ವಾಲೆಯೇ ನನ್ನ ಜೀವಕುಸುಮವನ್ನು ಬಲಿತೆಗೆದುಕೊಳ್ಳಲು ಹಾತೊರೆಯುತ್ತದೆ ಎಂಬುದನ್ನು ಕಾಣುತ್ತಿದ್ದೇನೆ.
    ಬೆಂದು ನೊಂದ ಮನದಿಂದ ಹೊರಹೊಮ್ಮುತ್ತಿರುವ ಈ ನನ್ನ ವೇದನೆಯ ಮಾತುಗಳಿಗೆ ಕೋಪಿಸಬೇಕಿಲ್ಲ. ಇಷ್ಟಕ್ಕೂ ನಿನ್ನನ್ನು  ನಿಂದಿಸುವುದೂ ತರವಲ್ಲ. ತಪ್ಪು  ನಿನದಲ್ಲ . ತಪ್ಪು ನನ್ನದು. ನನ್ನನ್ನು ನಿನ್ನ ಬಳಿ ನಿಲ್ಲಿಸಿದ ಬ್ರಹ್ಮನದು ತಪ್ಪು‌.

 ನಿನ್ನ ಕಣ್ಣುಕೋರೈಸುವ ಚೆಲುವಿಗೆ ಮರುಳಾಗಿ ನಿನ್ನ ಮಾತುಗಳನ್ನು ನಿಜವೆಂದು ಮನಸೋತು ಬೆಪ್ಪನಾದೆ‌. ಮೋಹ ಕವಿದ ಮನಸ್ಸು ಕತ್ತಲಿಗೆ ತಳ್ಳಿತು.

 ನಿನ್ನ ಒಲವನ್ನು ಸಂಪಾದಿಸಿ ನನ್ನವಳನ್ನಾಗಿಸಿಕೊಳ್ಳುವ ಕನಸಿನಲ್ಲಿ ಎಷ್ಟೋ ವರ್ಷಗಳನ್ನು ಸವೆಯಿಸಿದೆ‌. ಹಲವು ಎಡರು ತೊಡರುಗಳ ನ್ನು  ನಿನ್ನಮೇಲಣ ಮೋಹಕ್ಕಾಗಿ ವ್ಯರ್ಥವಾಗಿ ಎದುರಿಸಿದೆ.
ಪ್ರೀತಿ ಪ್ರೇಮದ ಹೆಸರಲ್ಲಿ ನೂರಾರು ಸಲ ಹುಸಿನಗೆಯಿಂದ ನನ್ನನ್ನು ಮರುಳುಗೊಳಿಸಿದೆ. ಬೆಟ್ಟದಂತಹ ಕನಸುಗಳನ್ನು ಮೂಡಿಸಿದೆ.  ನಾನು ಮೂರ್ಖನಾದೆ ಎಂಬುದನ್ನು ಅರಿತಾಗ ತುಂಬ ತಡವಾಗಿತ್ತು .
   ಇನ್ನೂ ಕಾಡಬೇಡ‌ ನಿನ್ನ ನಾಟಕದ ನಟನಾಗಲಾರೆ. ನಿನ್ನ ಒಲವಿನ‌ ನಾಟಕವು ಬಾಲಕೃಷ್ಣನಿಗೆ ವಿಷವುಣ್ಣುಸಲು ಬಂದ ಪೂತನಿಯನ್ನು ನೆನಪಿಸುತ್ತಿದೆ. ಈ ನಿನ್ನ ಮಾಟವಾದ ಪಯೋಧರಗಳಲ್ಲಿ ಅಮೃತವಲ್ಲ,  ವಿಷವೇ ತುಂಬಿದೆ   ಎಂಬುದನ್ನು ಬಲ್ಲೆನು. ನಿನ್ನೆದೆಯಲ್ಲಿ ನಿಜವಾದ ಪ್ರೀತಿಯ ಕ್ಷೀರವಿಲ್ಲ. ಪ್ರೇಮ ಪ್ರೀತಿ ಒಲವುಗಳೆಂಬುದು ನಾಟಕದ  ಉಡುವ - ಬಿಚ್ಚಿಡುವ ಉಡುಪುತೊಡುಪುಗಳಲ್ಲ. ಕೃತಕ ಆಭರಣಗಳಲ್ಲ.

ಪ್ರೀತಿಯೆಂಬುದು ಜೀವಜೀವಗಳನ್ನು ಬೆಸೆಯುವ ಆತ್ಮರಸ.  ನ್ಯಾಯ ನೀತಿಯ ಧರ್ಮದ ದಾರಿಯಲ್ಲಿ ಪ್ರೀತಿಯು ಗೆಲುಮೆಯನ್ನು ಹೊಂದಬೇಕು.

ಒಲವಿನ‌ ಸೇತುವೆಯನ್ನು ನೀನು ಸೊಕ್ಕಿನಿಂದ ಮುರಿದು ನಡುನೀರಲ್ಲಿ ತಳ್ಳಿದೆ.
ನನ್ನೆದೆಯನ್ನು ಕುದಿಸಿದ  ಕಾವು ನಿನ್ನನ್ನು ಬೆಂಬಿಡದೆ ಕಾಡುವುದು. ಮರೆಯದಿರು‌! ಮಾಡಿದ ಕರ್ಮವನ್ನು ಅನುಭವಿಸಲೇ ಬೇಕು.

 ನಿಜಕ್ಕೂ ನನ್ನ ಬಗೆಗೆ ಕನಿಕರವಿದ್ದರೆ, ಮತ್ತೆಮತ್ತೆ  ಮನದೊಳಗೆ ಇಳಿಯ ಬೇಡ! ದಮ್ಮಯ್ಯ ನನ್ನನ್ನು ಮತ್ತೆ ಕಾಡಬೇಡ! ಕಳೆದ ಕತೆಗಳನ್ನು ಮರೆಸಿಬಿಡು‌. ನನ್ನ  ಮನಸನ್ನು ಕಾಲಿಮಾಡಿ   ದೂರಸರಿ. ನನ್ನ ಮನಸ್ಸನು ತೊಳೆದುಬಿಡು.  "ದಯಮಾಡಿ ನನಗೆ ಮರೆವನ್ನು ಕರುಣಿಸು" ಎಂದು ಕಾಡುವ ಇನಿಯೆಯನ್ನು  ಮೊರೆಯಿಡುತ್ತಾನೆ.

  ತುಂಟಮಿನುಗುನೋಟದಿಂದ ಕಾಡಬೇಡ. ಮಾಟವಾದ ಚೆಲುಸೌಂದರ್ಯದಿಂದ ಬಲೆಬೇಸಬೇಡ.
ನನ್ನ ಬಳಿ ಬರಲೇಬೇಕಿದ್ದರೆ ಉರಿಮುಖದಿಂದ ಬಾ! ಉಗ್ರವಾದ ಕರಿವಿಷವನ್ನು ಕಾರುತ್ತಾ ಬಾ! ಬರುವದಾಗಿದ್ದರೆ ಮುಪ್ಪಿನಿಂದ ತೊಗಲುಬಿದ್ದ ಮುದಿಯಾಗಿ ಬಾ!

ಒಲವಿನ ಹೆಸರಲ್ಲಿ ನಾಟಕವಾಡುವ ತರಲೆಯೇ! ದಮ್ಮಯ್ಯ ಬೇಡುವೆನು ನಿನ್ನ ಈ ಚೆಲ್ಲಾಟವನ್ನು ನಿಲ್ಲಿಸು. ನಿನ್ನ ಬೆಂಕಿಕಾಟವನ್ನು ಸಹಿಸಲಾರದಾದೆನು. ಕಟಿಲೆಯೇ ಕಾಡದಿರು. ನಿನ್ನ ವೈಯಾರದ ಕುಟಿಲನೋಟದಿಂದ ನನ್ನನ್ನು ಇನ್ನೂ ಇನ್ನೂ ಕಾಡಬೇಡ. ಸಾಕು ನಿನ್ನ ಒಲವಿನ ನಾಟಕ. ಈ ನಾಟಕದ ಅಂಕಕ್ಕೆ ತೆರೆಯೆಳೆಯೋಣ. ನಾನು ನಟನಾಗಲಾರೆ. 

ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment