Friday 24 November 2023

ಮೋಹವಿಲಾಸ - ಕೇತಕೀವನ - ಡಿವಿಜಿ

ನೀನದೆತ್ತಲೊ ಎನಗೆ 
ಕಾಣದವೊಲಿರುತೆನ್ನ 
ಜಾನಿಸದೆ ಮರೆತೊಡಂ 
ಗಳಿಗೆಗಳಿಗೆಯೊಳಂ 
ನಿನ್ನ ಮೆಯ್ಸಿರಿ ಹಾಸ 
ನಿನ್ನ ಮೋಹ ವಿಲಾಸ- 
ವೆನ್ನ ಮನದಲಿ ತುಂಬಿ ತುಳುಕಾಡುತಿರ್ಕುಂ. 

ನಿನ್ನ ದನಿ ಕೇಳಿಬರೆ 
ನಿನ್ನ ನೆರಳಾಡುತಿರೆ 
ನಿನ್ನದೇನಾನುಮಿರೆ 
ನೆನೆನೆನೆದು ನಿನ್ನ 
ಎನ್ನ ಕಿವಿಯಗಲುವುದು
ಎನ್ನ ಕಣ್ಣರಳುವುದು 
ಎನ್ನ ಮೆಯ್ಯುಬ್ಬುವುದು 
ಕುಣಿವುದೆನ್ನೆದೆಯು. 

ಆವ ಜನುಮದ ಕೆಳೆಯೊ 
ಆವ ಸುಕೃತದ ಬೆಳೆಯೊ 
ಆವ ದೈವದ ಬಲೆಯೊ 
ನಿನ್ನಡಿಯೊಳೆನ್ನ 
ಪಿಡಿತಂದು ನಿಲಿಸಿಹುದು 
ಬಿಡದೇನಗೈದೊಡಂ 
ಇಡು ನೇಹ ಬಿಕ್ಕೆಯನು 
ಧನ್ಯತೆಯ ನೀಡು. 

ಕಣ್ಣು ಕಣ್ಗೆದುರಾಗ- 
ಲುಣ್ಮುವದುಭುತವೇನೊ! 
ಕಣ್ಣಿಯೊಂದಸುಗಳನು 
ಬಂಧಿಸುವುದೇನೊ! 
ಸೋಜಿಗವದೇನಿರಲಿ 
ಈ ಜೀವಯಾತ್ರೆಗಿಹ 
ನೈಜಪಾಥೇಯಮೆನ- 
ಗೊಂದೆ-ನಿನ್ನೊಲವು.

*******************

ಮೊದಲನೋಟದಿಂದ ಕಣ್ಣುಗಳು ಸಂಧಿಸಿ ಪ್ರೇಮಾಂಕುರವಾದ ಮರುಕ್ಷಣದಲ್ಲಿ ಪ್ರೇಯಸಿಯು ದೂರವಿದ್ದಾಗ ಪ್ರೇಮಿಯ  ಪ್ರೇಮ ಭಿಕ್ಷೆಯ ಬಯಸುವ ತೊಳಲಾಟದ ಚಿತ್ರವನ್ನು ಡಿವಿಜಿಯವರು ಮಾರ್ಮಿಕವಾಗಿ ಕಂಡಂತಿದೆ!

 ಮನದನ್ನೆಯೇ! ನೀನು ಅದೆಲ್ಲೋ ದೂರದಲ್ಲಿದ್ದು, ನನ್ನನ್ನು  ಅರೆಕ್ಷಣ ಮರೆತರೂ, ನಿನ್ನ ಮೇಲಣ ಮೋಹಮಾಯೆಯು ನಿನ್ನ ಹಾವ- ಭಾವ, ಕುಡಿಗಣ್ಣನೋಟದ,ಲಾಸ್ಯ  ವಿಲಾಸಗಳ ಚಿತ್ರಗಳೇ ನನ್ನ ಮನದಂಗಳದಲ್ಲಿ ಓಡಾಡುತ್ತಾ,  ನೀನೇ ನನ್ನಲ್ಲಿ ತುಂಬಿತುಳುಕಾಡುತ್ತಿರುವೆ. ಸುತ್ತಮುತ್ತ ಏನೇ ದನಿಕೇಳಿದರೂ ನಿನ್ನ ಪಿಸುದನಿಯನ್ನೇ ಕೇಳುತ್ತದ್ದೇನೆ. ಎಲ್ಲೆಡೆಯೂ ನಿನ್ನ ನೆರಳೇ ಓಡಾಡುವುದನ್ನೇ ಕಾಣುತ್ತಿರುವೆ. ಏನೇ ಮಾಡುತ್ತಿರುವಾಗಲೂ  ಅದೇನೇ ಮಾತು, ಸಪ್ಪಳಗಳಾದರೂ ಅಲ್ಲೆಲ್ಲಾ ನಿನ್ನದೇ ಇನಿದನಿಯ ಕರೆಯನ್ನು ಕೇಳಿ ಕಿವಿಗಳು ನಿನ್ನಬಳಿ  ಇರುತ್ತಿವೆ. ಕಂಗಳರಳುತ್ತವೆ. ಮೈಯುಬ್ಬುತ್ತದೆ. ನಿನ್ನ ಸಾಮೀಪ್ಯದ ಹಂಬಲದಿಂದ ಮನಸ್ಸು ಚಡಪಡಿಸುತ್ತಿದೆ.

ಅದಾವುದೋ ಜನ್ಮದ ಸ್ನೇಹರಸವೇ ಕಾಡುತ್ತಿದೆ. ಅದಾವುದೋ ಜನ್ಮದ ಸುಕೃತವು ಬಲವತ್ತರವಾಗಿ ನಿನ್ನರೂಪದಿಂದ ಮೂಡಿಬಂದಿರಬೇಕು.

ದೈವಲೀಲೆಯೇ ನನ್ನನ್ನು ನಿನ್ನೆದುರಿಗೆ ನಿಲ್ಲಿಸಿದೆ. ಏನೇ ಮಾಡಿದರೂ ನಿನ್ನ ನೆನಪುಗಳು ಕಾಡುತ್ತಲೇ ಇದೆ.  ಬಿಟ್ಟೆನೆಂದರೂ ಬಿಡದು  ಈ ಮಾಯೆ!  ಪ್ರೇಮಭಿಕ್ಷೆಯನ್ನು ಬಯಸುತ್ತಿದ್ದೇನೆ. ಮನ್ನಿಸಿ ಧನ್ಯನನ್ನಾಗಿಸು.

ಕಣ್ಣುಕಣ್ಣಗಳು ಸಂಧಿಸಿದಾಗ ಅದೇನು ಅದ್ಭುತದ ಮಾಯಾಲೋಕದ ಸೆಳೆತ! ಕಣ್ಣೆಸುಗೆಯ ನೋಟವೊಂದು ಹಸುವನ್ನು ಕಣ್ಣಿ ಬಿಗಿದಂತೆ ನಮ್ಮನ್ನು ಮೋಹಪಾಶದಲ್ಲಿ ಬಂಧಿಸಿರುವುದು ಸೋಜಿಗವೆ! ಅದು ಹಾಗಿರಲಿ. ಈ ಜೀವನ ಪಯಣದಲ್ಲಿ ಹಸಿವು ದಾಹ ಹಂಬಲಗಳನ್ನು ಪೂರೈಸಲು ನಿನ್ನೊಲವೇ ಎನಗೆ ದಾರಿಬುತ್ತಿ ಎಂಬುದನ್ನು ಮರೆಯದಿರು. ನಿನ್ನೊಲವೇ ಎನಗೆ ಆಸರೆ.
ಭಾವಾನುವಾದ:  © ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment