Tuesday 12 March 2024

ಶೃಂಗಾರ ಮಂಗಳಂ - ಅರಿಕೆ - ಡಾ. ಡಿ.ವಿ. ಗುಂಡಪ್ಪ

ಶೃಂಗಾರ ಮಂಗಳಂ - ಅರಿಕೆ - ಡಾ. ಡಿ.ವಿ. ಗುಂಡಪ್ಪ

ಬಹುಕಾಲದಿಂದ ನನ್ನ ಮನಸ್ಸಿನಲ್ಲಿ ಮಿಡಿಯುತ್ತ ಉಳಿದುಕೊಂಡಿದ್ದ ಒಂದು ಪ್ರಶ್ನೆಗೆ ಸಮಾಧಾನವೆಂದು ನನ್ನ ಬುದ್ಧಿಗೆ ಈಚೀಚೆಗೆ ತೋರಿದ ಉತ್ತರವನ್ನು ಈ ಗ್ರಂಥದಲ್ಲಿ ರೂಪಗೊಳಿಸಿದ್ದಾಗಿದೆ. ಸಹೃದಯರು ಒಪ್ಪಿಸಿಕೊಳ್ಳಬೇಕೆಂದು ಬೇಡುತ್ತೇನೆ.

ಕೆಲವು ವರ್ಷಗಳಿಂದ ನಾನು ಅರೆಕುರುಡ; ಅರೆಯುಸಿರಿನವನು. ಈ ಅವಸ್ಥೆಯಲ್ಲಿ ನಿದ್ದೆಬಾರದಾಗ, ಆಯಾಸವಾದಾಗ, ತೋರಿಬಂದ ಭಾವನೆಗಳನ್ನು ಆಗ್ಗೆ ಒದಗಿಬಂದ ಮಾತಿನಲ್ಲಿ, ಆ ಸಮಯಕ್ಕೆ ಸಿಕ್ಕಿದ ಕಾಗದದ ಚೂರಿನಲ್ಲಿ, ಆಗ ಕೈಗೆ ದೊರೆತ ಲೇಖನಿಯಿಂದ ಗುರುತು ಮಾಡಿದ್ದಾಯಿತು. ಆದರೆ ಅವುಗಳನ್ನು ಒಂದು ಕ್ರಮದಲ್ಲಿ ಜೋಡಿಸಬೇಕೆಂದು ನೋಡಿದಾಗ ನಾನು ಗೀಚಿದ್ದ ಗೀಟುಗಳು ನನಗೆ ಅರ್ಥವಾಗದೆಹೋಯಿತು. ಈ ಕಷ್ಟಸ್ಥಿತಿಯಲ್ಲಿ ನನ್ನ ಗುರುತುಚೀಟಿಗಳ ಸಿಕ್ಕು ಬಿಡಿಸಿ ಓದಲಾಗುವಂತೆ ಮಾಡಿದವರು ನಾಲ್ವರೈವರು ಸ್ನೇಹಿತರು. ಅವರಲ್ಲಿ ನಾನು ಹೇಳಲೇಬೇಕೆಂದು ಗೊತ್ತುಮಾಡಿಕೊಂಡಿರುವ ಹೆಸರುಗಳು ಎರಡು : ಚಿ ॥ ಬಿ.ಎಸ್‍. ಸುಬ್ಬರಾಯರು. ಚಿ ॥ ಡಿ.ಆರ್‍. ವೆಂಕಟರಮಣನ್‍. ಈ ಸ್ನೇಹಿತರು ನನ್ನ ಕರಡುಗಳನ್ನು ಕೊಂಚಮಟ್ಟಿಗೆ ಅಳವಡಿಸಿಕೊಟ್ಟಮೇಲೆ ಬರವಣಿಗೆಯನ್ನೆಲ್ಲ ಆಮೂಲಾಗ್ರವಾಗಿ ಓದಿ ವಿರಳ ವಿರಳವಾಗಿ ನಕಲು ಬರೆದುಕೊಟ್ಟವರು ಚಿ ॥ ಎಸ್‍.ಆರ್‍. ರಾಮಸ್ವಾಮಿ. ಈತ ಅಂದವಾದ ನಕಲನ್ನು ತಯಾರುಮಾಡಿದ್ದಷ್ಟೇ ಅಲ್ಲ; ಬಿಡಿಬಿಡಿಯಾಗಿ ಬಿದ್ದಿದ್ದ ಪದ್ಯಗಳನ್ನು ಒಂದು ಸಮಂಜಸವಾದ ಕ್ರಮದಲ್ಲಿ ಜೋಡಿಸಿ, ಅರ್ಥ ಸುಲಭವಾಗುವಂತೆ ಅಣಿಮಾಡಿಕೊಟ್ಟಿದ್ದಾರೆ, ಮತ್ತು ಪ್ರಕರಣ ವಿಭಾಗಮಾಡಿ ಶೀರ್ಷಿಕೆಗಳನ್ನು ಬರೆದು ಸಾಂಗೋಪಾಂಗವಾಗಿ ಮುದ್ರಣಕ್ಕೆ ಸಿದ್ಧಪಡಿಸಿದ್ದಾರೆ. ಅಲ್ಲದೆ ಅರ್ಥಕೋಶವನ್ನೂ ಕರಂಡಗಳನ್ನು ಕುರಿತ ಅನುಬಂಧವನ್ನೂ ರಚಿಸಿಕೊಟ್ಟಿದ್ದಾರೆ. ಈ ಚಿರಂಜೀವಿಯ ಕೆಲಸವನ್ನು ಪೂರ್ತಿಯಾಗಿ ವಿವರಿಸುವುದು ಸಾಧ್ಯವಲ್ಲದ ಕೆಲಸ.

ಶ್ರೀ ಚಿದಂಬರಂ ಅವರ ಶ್ರದ್ಧೆ ಉತ್ಸಾಹ ಕಾರ್ಯಪಟುತ್ವಗಳನ್ನು ಈಗ ಕನ್ನಡ ದೇಶವೆಲ್ಲ ಬಲ್ಲದು.

ಈ ಗ್ರಂಥಕ್ಕೆ ಕೆಲವು ಚಿತ್ರಗಳನ್ನು ಬರೆದುಕೊಟ್ಟ ಕಲಾನಿಪುಣರು ಶ್ರೀ ಟಿ.ಕೆ. ರಾವ್‍ ಅವರನ್ನು ಮನಸಾರ ವಂದಿಸುತ್ತೇನೆ. ಇತರ ಚಿತ್ರಗಳನ್ನು ಒದಗಿಸಿಕೊಟ್ಟ ಸ್ನೇಹಿತರಿಗೂ ನನ್ನ ವಂದನೆ.

ಭಸ್ಮಕರಂಡದ ಚಿತ್ರಗಳಿಗಾಗಿ ಈ ಕೆಳಗಿನ ಮಹಾಶಯರಿಗೆ ನಾನು ಋಣಿಯಾಗಿದ್ದೇನೆ:

(1) Keats-Shelley Memorial Association, London, —ಈ ಸಂಸ್ಥೆಯ ಅಧಿಕಾರಿಗಳು;

(2) Keats-Shelley Memorial House, Rome —ಈ ಸಂಸ್ಥೆಯ ಅಧಿಕಾರಿಗಳು;

(3) ಲಂಡನ್ನಿನ Observer ವಾರಪತ್ರಿಕೆಯ ಸಂಪಾದಕರು, ಈ ಪತ್ರಿಕೆಯ ಫೆಬ್ರುವರಿ ೨೮, ೧೯೬೫ರ ಸಂಚಿಕೆಯಲ್ಲಿ Keats ಭಸ್ಮಕರಂಡವನ್ನು ಕುರಿತು Noel Machin ಅವರು ಸಚಿತ್ರ ಲೇಖನ ಬರೆದಿದ್ದಾರೆ.

ಈ ಸಂಸ್ಥೆಗಳ ಆದರಣೆ ಔದಾರ್ಯಗಳು ಸ್ಮರಣೀಯವಾಗಿವೆ. ಜಗದೀಶ್ವರನ ಕೃಪೆ ಈ ಎಲ್ಲ ಉಪಕಾರಿಗಳಿಗೂ ನಿರಂತರವಾಗಿ ಲಭಿಸಲಿ.

ಸರ್ವಂ ಶಿವಂ
ಬೆಂಗಳೂರು, ಅಕ್ಟೋಬರ್‍ ೧೯೭೦
ಡಿ.ವಿ.ಜಿ.

Saturday 9 March 2024

ದೇಶಭಕ್ತ ಪ್ರತಿಜ್ಞೆ - ವಸಂತ ಕುಸುಮಾಂಜಲಿ - ಡಿವಿಜಿ

ದೇಶಭಕ್ತ ಪ್ರತಿಜ್ಞೆ - ವಸಂತ ಕುಸುಮಾಂಜಲಿ - ಡಿವಿಜಿ

(ಗೋಖಲೆಯವರ ದೇಶಸೇವಕ ಸಂಘದ ನಿಬಂಧನೆಗಳಿಂದ)

ಎನ್ನಯ ಮಾನಸ ಭವನದೊ– ।
ಳುನ್ನತ ವೇದಿಯಲಿ ದೇಶಮಾತೆಯನಿರಿಸು– ।
ತ್ತೆನ್ನಯ ಸರ್ವಸ್ವಮನಾ ।
ಪುಣ್ಯೋರ್ವೀದೇವಿಯಂಘ್ರಿಗರ್ಪಿಸಿ ಮಣಿವೆಂ ॥ ೧

ಭಾರತರೊಳ್‍ ವಂಶಮತಾ– ।
ಚಾರಂ ನೂರಿರೆಯುಮವರದೊಂದೆ ಕುಟುಂಬಂ ॥
ಬೇರೆಣಿಕೆಗಳವರೆಡೆಯೊಳ್‍ ।
ತೋರದವೊಲ್‍ ಸೋದರೈಕ್ಯಮಂ ನೆಲೆವಡಿಪೆಂ ॥ ೨

ಕಲಹಿಸೆನಾರೊಳಮ್‍ ಅರ್ಥದ ।
ಕಲುಷಂಗಳ ದೂರವಿಟ್ಟು ಧೀರಸ್ಮೃತಿಯಂ ॥
ತಳೆದುರದೊಳವರ ಚರಿತೆಯ ।
ಬೆಳಕಿಂದಾಂ ನಡೆದು ಬಾಳ ನೋಂಪಿಯ ಮಾಳ್ಪೆಂ ॥ ೩

ರಾಜಕಟಾಕ್ಷ ಮನುಂ ಜನ– ।
ತಾಜಲ್ಪಶ್ಲಾಘನೆಗಳನುಂ ಗಣಿಸದೆ ನಾಂ ॥
ಭೂಜನನಿಯನೊಮ್ಮನದಿಂ ।
ಪೂಜಿಸುವೆಂ ಸತ್ಯಧರ್ಮಸಂಯಮವಿಧಿಯಿಂ ॥ ೪

ಜನಪದಸೇವೆಯೆ ದೈವಾ ।
ರ್ಚನೆಯದು ನಮಗಾತ್ಮಭಾವವಿಸ್ತಾರನಯಂ ॥
ಅನುಗೊಳುವೆಂ ರಾಷ್ಟ್ರಿಕ ಜೀ– ।
ವನ ಕಾರ್ಯಂಗಳ್ಗೆ ದೀಕ್ಷಿತೋಚಿತ ಮತಿಯಿಂ ॥ ೫

ಮಾನವ ಸಂಸ್ಕಾರಕ ಧ ।
ರ್ಮಾನುವ್ರತಮಕ್ಕೆ ಸಾರ್ವಜನಿಕ ವಿಚಾರಂ ॥
ಜ್ಞಾನಿಯಿನಕ್ಕುಂ ಶುಭ ಸಂ– ।
ಧಾನಂ ರಾಜ್ಯಾದಿಲೌಕಿಕ ವ್ಯವಹೃತಿಯೊಳ್‍ ॥ ೬

Friday 8 March 2024

ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ

ಶ್ರೀ ಕೃಷ್ಣರಾಜೇಂದ್ರ ಒಡೆಯರವರು - ವಸಂತ ಕುಸುಮಾಂಜಲಿ - ಡಿವಿಜಿ


ನಿಖಿಲಕರ್ಣಾಟಜನಸಂತೋಷಸಾಧನಂ
ಭಾರತಾವನಿಪಾಲಕುಲಕಿರೀಟಂ ।
ಸ್ಮಾರ್ತಲೋಕಾಧಾರಸಿಂಹಪೀಠಸ್ಥಿತಂ
ಆರ್ಯವಿಹಿತಾಚಾರಧರ್ಮಶೀಲಂ ।
ದೇಶಭಾಷಾಪ್ರೇಮಸಂಪೂರ್ಣಮಾನಸಂ
ದೇವಪೂಜಾನಿರತನಮಲಚರಿತಂ ।
ಪೌರಸ್ತ್ಯಪಾಶ್ಚಾತ್ಯವೈದುಷ್ಯಸಂಯೋಗ
ಸಂಜನಿತ ಶುಭಗುಣಾದರ್ಶಮಹಿಮಂ ॥

ಪ್ರಜೆಯ ಸೇವೆಯೆ ದೇವಸೇವೆಯೆಂದರಿತು ಸತತಂ ।
ಚತುರಸಚಿವರನೊಂದಿ ಜನತೆಯೊಳ್‍ ಜಸಮನೊಂದಿ ।
ಸಕಲಸಂಪತ್ಸೌಖ್ಯಯೋಗದಿಂ ಪುಣ್ಯಪಥದೊಳ್‍ ।
ರಾಜಿಸಿದ ರಾಜನೀ ಶ್ರೀಕೃಷ್ಣ ಭೂಮಿಪಾಲಂ ॥

Thursday 7 March 2024

ಮೋಹನದಾಸ್‍ ಕರಮಚಂದ್‍ ಗಾಂಧಿ - ವಸಂತ ಕುಸುಮಾಂಜಲಿ - ಡಿವಿಜಿ














ಮೋಹನದಾಸ್‍ ಕರಮಚಂದ್‍ ಗಾಂಧಿ - ವಸಂತ ಕುಸುಮಾಂಜಲಿ - ಡಿವಿಜಿ

ಇಂದ್ರಿಯಂಗಳ ಜಯಿಸಿ ಚಿತ್ತಶುದ್ಧಿಯ ಬಯಸಿ
ಲೋಭಮಂ ತ್ಯಜಿಸಿ ರೋಷವ ವರ್ಜಿಸಿ ।
ಸರ್ವಸಖ್ಯವ ಭಜಿಸಿ ತೃಪ್ತತೆಯನಭ್ಯಸಿಸಿ
ಸತ್ಯಪಾಲನೆಯೊಂದ ಮನದೊಳಿರಿಸಿ ।
ಕಾಯಕಷ್ಟವ ಸಹಿಸಿ ವೈರಿಗಣಮಂ ಕ್ಷಮಿಸಿ
ಸರ್ವಸಮತೆಯ ಗಳಿಸಿ ಶಮವನರಸಿ ।
ಸ್ವಾತ್ಮಶಿಕ್ಷಣಮೇ ಸ್ವರಾಜ್ಯಮೆನ್ನುತ ವಚಿಸಿ
ದೇಶಸೇವೆಯನೀಶಸೇವೆಯೆನಿಸಿ ॥

ಸಾಧುವೃತ್ತಿಯ ಪಥವ ತನ್ನ ಬಾಳಿನೊಳೆ ತೋರಿ ।
ಪಾಶವೀ ಬಲದ ದೌರ್ಬಲ್ಯಮಂ ವಿಶದಬಡಿಸಿ ।
ಪಾಶ್ಚಾತ್ಯ ಜನಕಮಧ್ಯಾತ್ಮನೀತಿಯನು ಪೇಳ್ದಾ ।
ದೈವಸಂಪನ್ಮಾರ್ಗದರ್ಶಕಂ ಗಾಂಧಿಯಲ್ತೆ ॥

Wednesday 6 March 2024

ಮೋಕ್ಷಗುಂಡಂ ವಿಶ್ವೇಶ್ವರಯ್ಯ - ವಸಂತ ಕುಸುಮಾಂಜಲಿ - ಡಿವಿಜಿ

ಮೋಕ್ಷಗುಂಡಂ ವಿಶ್ವೇಶ್ವರಯ್ಯ  - ವಸಂತ ಕುಸುಮಾಂಜಲಿ - ಡಿವಿಜಿ

ಜನಪದವೆ ದೇವನಿಲಯಂ ।
ಜನಸೇವೆಯೆ ದೇವಪೂಜೆಯೆನುತುಂ ಸತತಂ ॥
ಘನಸಚಿವಧರ್ಮಮಾರ್ಗವ- ।
ನನುಸರಿಸಿದನೀತನಲ್ತೆ ಸುಜನಪ್ರೀತಂ ॥

ಭಜಕರ ಭಕ್ತಿಯ ಬಗೆಯದೆ
ನಿಜಕರುಣೆಯನೆಂತು ರ‍್ಯಾಜದೇವತೆ ತೋರ್ಕುಂ ॥
ಪ್ರಜೆಯಂತೆಯೆ ರಾಜ್ಯಮೆನು ।
ತ್ತಜಸ್ರಮುಂ ಸಾರಿ ಪೇಳ್ದನೀತಂ ಖ್ಯಾತಂ ॥

ಪರಮೋತ್ಸಾಹಸಮನ್ವಿತಂ ಪರಹಿತೋದ್ಯೋಗೈಕಬದ್ಧಾದರಂ ।
ಸ್ಥಿರಸಂಕಲ್ಪನತಂದ್ರಯತ್ನನತುಲಪ್ರಾಗಲ್ಭ್ಕ ಶೌರ್ಯೋಜ್ಜ್ವಲಂ ॥
ತರುಣರ್ಗೆಂದುಮಮಂದಪೌರುಷ ನಯೌದಾರ್ಯಂಗಳಂ ಬೋಧಿಪಾ ।
ಗುರುವಾಗಿರ್ಕೆ ಗುಣಾಕರಂ ಬುಧವರಂ ವಿಶ್ವೇಶ್ವರಾರ್ಯಂ ಚಿರಂ ॥

Tuesday 5 March 2024

‍ಜಗದೀಶ ಚಂದ್ರ ಬೋಸ್‍ - ವಸಂತ ಕುಸುಮಾಂಜಲಿ - ಡಿವಿಜಿ

‍ಜಗದೀಶ ಚಂದ್ರ ಬೋಸ್‍  - ವಸಂತ ಕುಸುಮಾಂಜಲಿ - ಡಿವಿಜಿ




ಶ್ರೀ ಭಾರತೀ ತಾಯ ವಿಜ್ಞಾನದೈಸಿರಿಯ 
ಲೋಕದೊಳ್‍ ವಿಸ್ತರಿಪ ಕುವರನೆನಿಸಿ । 
ಕಪಿಲ ಕಾಣಾದಾದಿ ಸದಸದ್ವಿಚಾರಕರ 
ಕುಲದ ಕೀರ್ತಿಗೆ ರನ್ನಗಲಶವೆನಿಸಿ । 
ನರನವೊಲೆ ತರುಗಳುಂ ಸುಖದುಃಖಗಳನರಿವ 
ಪರಿಯ ತೋರುವ ಯಂತ್ರಚಯವ ರಚಿಸಿ । 
ಅಣುರೇಣು ತೃಣಗಳೊಳಮಮಲ ಚೈತನ್ಯವಿಹ 
ಮರ್ಮವಂ ಲೋಚನಕೆ ವಿಷಯಮೆನಿಸಿ ॥ 

ಭೌತತಾತ್ವಿಕ ಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ । 
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ । 
ಕಣ್ಗೆ ಕಾಣದ ತತ್ತ್ವಮಂ ಶ್ರಮಿಸುತರಸಿ । 
ಮೆರೆವನೀ ಜಗದೀಶನಾರ್ಯಕುಲತೋಷಂ ॥ 

ಪರತತ್ತ್ವವನರಿವೊಡೆಯುಂ । 
ಸಿರಿಯಂ ಸುಖಮಂ ಸುಕೀರ್ತಿಯಂ ಪಡೆವೊಡೆಯುಂ ॥ 
ಅರಿಭೀತಿಯ ಕಳೆವೊಡೆಯುಂ । 
ತಿರೆಯೊಳ್‍ ವಿಜ್ಞಾನಮೊಂದೆ ಸಾಧನಮಲ್ತೇ ॥ 

ಆ ವಿಜ್ಞಾನಕಲಾರಹಸ್ಯಗಳ ತಾವನ್ವೇಷಿಸುತ್ತಂ ಸುಹೃ– । 
ದ್ಭಾವಂದಾಳ್ದು ಜಗಕ್ಕೆ ಬೋಧಿಸುತುಮಂತೆಂದುಂ ಜಗತ್ಕರ್ತನಾ ॥ 
ಸೇವಾಕಾರ್ಯದಿ ದೀಕ್ಷೆಯೊಂದಿ ನಿಜದೇಶೀಯರ್‍ ಶುಭಂಬೊಂದಲೆಂ– । 
ದಾ ವಿಖ್ಯಾತ ಮಹಾಶಯಂ ರಚಿಸಿಹಂ ಚಿಜ್ಜ್ಯೋತಿಯಾಗಾರಮಂ ॥

Monday 4 March 2024

ರವೀಂದ್ರನಾಥ ಠಾಕೂರ್‍ - ವಸಂತ ಕುಸುಮಾಂಜಲಿ - ಡಿವಿಜಿ

ರವೀಂದ್ರನಾಥ ಠಾಕೂರ್‍  - ವಸಂತ ಕುಸುಮಾಂಜಲಿ - ಡಿವಿಜಿ




































ರವಿಯರಿಯದ ಮರ್ಮಗಳಂ । 
ಕವಿಯರಿತವನೆಂದು ಲೋಕಮೊರೆವುದು ಪುಸಿಯೇಂ ॥ 
ರವಿ ಬೆಳಗೆ ಬಾಹ್ಯಲೋಕವ । 
ಕವಿ ಬೆಳಗಿಪನಲ್ತೆ ಜನರ ಹೃದಯಾನ್ತರಮಂ ॥ 

ಋಷಿಬಲಮಿಲ್ಲದವಂ ಕವಿ । 
ವೃಷನೆನಿಪುದಶಕ್ಯಮೆಂದು ಬಗೆವುದು ಸಾಜಂ ॥ 
ಋಷಿಹೃದ್ಗತ ಚಿನ್ಮೂರ್ತಿಯ । 
ಸುಷಮಾಪ್ರತಿಫಲಮೆ ಕಾವ್ಯವನಿತಾವಿಭವಂ ॥ 

ಪದಬಾಹುಳ್ಯದಿನಪ್ರಸಿದ್ಧ ಪದವೈಚಿತ್ರ್ಯಾಳಿಯಿಂ ಶ್ಲೇಷೆಯಿಂ । 
ಪದುಳಂಗೊಳ್ವಳದೆಂತು ಕಾವ್ಯವಧು ತಾಂ ಕಾಠಿನ್ಯಮಂ ತೋರಳೇಂ ॥ 
ಹೃದಯಾಬ್ಜಂ ರಸಪೂರ್ಣಮಾಗಿ ಕವಿಯೊಳ್‍ ಪ್ರಜ್ಞಾರುಣೋದ್ದೀಪ್ತಿಯಿಂ । ಪದಸೌಭಾಗ್ಯಮರಂದಮುಣ್ಮೆ ಕವಿತಾಶ್ರೀರೂಪಮುಜ್ಜೃಂಭಿಕುಂ ॥ 

ಜೀವಲೋಕದೊಳಳ್ತಿಯಿಂ ಸಮ । 
ಭಾವದಿಂದಲಿ ವರ್ತಿಸುತ ಪರ । 
ದೇವಲೀಲೆಯೆ ಲೌಕಿಕವ್ಯಾಪಾರಮೆಂದೆಣಿಸಿ ॥ 

ಸಾವಧಾನದಿ ವರ್ಣಿಸುತಲದ । 
ತೀವಿದಾನಂದದಲಿ ತನ್ನೊಳು । 
ಭಾವಿಪಂ ತಾನಲ್ತೆ ಕವಿ ಬೇರೊಂದು ಲೋಕವನು ॥ 

ತಾನೆ ಜಗಂಗಳ ಕಲ್ಪಿಸುತುಂ ಸ್ವಾ । 
ಧೀನತೆಯೊಳ್ಮುದಮೊಂದುತಲೆಂದುಂ ॥ 
ಜ್ಞಾನಧನಂ ಕವಿ ಧೀರನುದಾರಂ । 
ಮಾನಸರಾಜ್ಯಕೆ ರಾಜನೆನಿಪ್ಪಂ ॥

Sunday 3 March 2024

ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ

ಬಾಲಗಂಗಾಧರ ತಿಲಕರು - ವಸಂತ ಕುಸುಮಾಂಜಲಿ - ಡಿವಿಜಿ
 


ತಾಮಸಾವೃತರಾಗಿ ನಿಜಜನರ್‍ ನಿದ್ರಿಸಿರ–
ಲವರನೆಳ್ಚರಿಸಿದಾ ಧೀರನಾರು? ।
ದೇಶೀಯರಾತ್ಮಗೌರವವ ಮರೆತಿರಲಂದು
ದೇಶಮಹಿಮೆಯ ಸಾರಿ ಪೇಳ್ದನಾರು? ।
ರಾಷ್ಟ್ರಜನನಿಯುಡುಂಗಿರಲ್‍ ಪಾರತಂತ್ರ್ಯದಲಿ
ಸ್ವಾತಂತ್ರ್ಯವೇಕೆ ತನಗೆಂದನಾರು? ।
ದಾಸ್ಯದೊಳ್‍ ವೈಭವದಿ ನಲಿದು ಮೆರೆವುದಕಿಂತ
ಸೆರೆಮನೆಯೆ ತನಗೆ ಲೇಸೆಂದನಾರು? ॥

ತಿಲಕನಲ್ಲವೆ ಜಾನಪದಕಾರ್ಯಚತುರತಿಲಕಂ ।
ವಿಬುಧಸಂಕುಲತಿಲಕನಾರ್ಯಭೂಭೃತ್ಯತಿಲಕಂ ।
ಆತನೆಂದುಂ ಭರತಬಾಲಕರ ಮನದಿ ನಿಂದು ।
ನೀಡುಗವರಿಗೆ ದೇಶಕೈಂಕರ್ಯಧೈರ್ಯಭರಮಂ ॥

Saturday 2 March 2024

ಗೋಪಾಲ ಕೃಷ್ಣ ಗೋಖಲೆ - ವಸಂತ ಕುಸುಮಾಂಜಲಿ - ಡಿವಿಜಿ

ಗೋಪಾಲ ಕೃಷ್ಣ ಗೋಖಲೆ  - ವಸಂತ ಕುಸುಮಾಂಜಲಿ - ಡಿವಿಜಿ














ವರಗುಣಭೂಷಿತನೀತಂ । 
ಪರಹಿತದೊಳೆ ತನ್ನ ಹಿತವ ಕಂಡವನೀತಂ ॥ 
ಗುರುವೀತಂ ನಮಗೆಂಬುದ । 
ಮರೆವುದೆ, ಹಾ ವಿಧಿಯೆ, ನೀನದೇಂ ನಿರ್ದಯನೋ ॥ 

ಧೀರಾಗ್ರಣಿಯಹ ಸುತನಂ । 
ಬೇರೊಂದಂ ಬೇಡದಿರ್ದ ಭಕ್ತಾಗ್ರಣಿಯಂ । 
ಕ್ರೂರಿಯಮಂ ಕರೆದೊಯ್ದಿರೆ । 
ಭಾರತಭೂಮಾತೆಯೆಂತು ಸೈಸುವಳಕಟಾ ॥ 

ಮನ್ನಣೆಯಂ ಸ್ವಾತಂತ್ರ್ಯಮ– । 
ನುನ್ನತಿಯಂ ಭ್ರಾತೃಭಾಮವಂ ವಿದ್ಯೆಯುಮಂ ॥ 
ನಿನ್ನವರೊಳ್‍ ನೆಲೆಗೊಳಿಪಾ । 
ಜನ್ನದ ದೀಕ್ಷೆಯನು ಬಿಟ್ಟು ಪೋದೆಯ, ಸಖನೇ ॥ 

ತ್ಯಜಿಸಿದೊಡಂ ನಿಜತನುವಂ । 
ಸುಜನರ್‍ ಸತ್ಕೀರ್ತಿಕಾಯರಾಗಿರ್ಪುದರಿಂ ॥ 
ನಿಜರೂಪಮದಿಲ್ಲದೊಡಂ । 
ನಿಜಯಶದಿಂ ಬಾಳ್ವನಲ್ತೆ ಗೋಖಲೆಯೆಂದುಂ ॥ 

ದಿನಮಣಿಯಸ್ತಮಿಸಿದೊಡಂ । 
ಪುನರುದಯವನೊಂದಿ ಲೋಕಮಂ ಬೆಳಗುವವೊಲ್‍ ॥ 
ಘನನಹ ಗೋಖಲೆಯುಂ ತಾಂ । 
ಪುನರುದಯವನೊಂದಿ ಬಾರದಿರ್ಪನೆ ನಮ್ಮೊಳ್‍ ॥

Friday 1 March 2024

ವಿವೇಕಾನಂದ ಸ್ವಾಮಿ - ವಸಂತ ಕುಸುಮಾಂಜಲಿ - ಡಿವಿಜಿ

ವಿವೇಕಾನಂದ ಸ್ವಾಮಿ - ವಸಂತ ಕುಸುಮಾಂಜಲಿ - ಡಿವಿಜಿ

ಪುಣ್ಯಭೂಮಿಯೆ, ನಿನ್ನ ಪುಣ್ಯಗಂಧವನಖಿಲ
ಭುವನದೊಳ್‍ ಪಸರಿಸುತ ನಲಿವುದೆಂದು ।
ಆರ್ಯಕುಲಜರೆ, ನಿಮ್ಮ ನಿಜಧರ್ಮದೀಪಮಂ
ಮರಳಿ ಬೆಳಗಿಸಿ ಗುರುತೆವಡೆವುದೆಂದು ।
ವೇದಜನನಿಯೆ, ನಿನ್ನ ದಿವ್ಯಗಾನವ ಕೇಳೆ ।
ಜಗವೆಲ್ಲ ತಲೆವಾಗಿ ಬರುವುದೆಂದು ।
ವೇದಾಂತಕೇಸರಿಯೆ, ನಿದ್ರೆಯಂ ತೊರೆದು ನೀಂ
ಗುಹೆಯಿಂದ ಪೊರಮಟ್ಟು ಮೆರೆವುದೆಂದು 

ಇಂತು ನಿಜಜನಪದವನೆಳ್ಚರಂಗೊಳಿಸುತನಿಶಂ ।
ಭರತಮಾತೆಯ ಜೈತ್ರಯಾತ್ರೆಯೊಳ್‍ ಪ್ರಮುಖನೆನಿಸಿ ।
ವಿಬುಧವಂದಿತನಾಗಿ ಲೋಕಸಂಮಾನ್ಯನಾಗಿ ।
ಶ್ರೀ ವಿವೇಕಾನಂದನೆಸೆದನಂದು ॥

Thursday 29 February 2024

ದಾದಾಭಾಯಿ ನವರೋಜಿ - ವಸಂತ ಕುಸುಮಾಂಜಲಿ - ಡಿವಿಜಿ

ದಾದಾಭಾಯಿ ನವರೋಜಿ - ವಸಂತ ಕುಸುಮಾಂಜಲಿ - ಡಿವಿಜಿ
 
ನಿಜದೇಶಂ ನಿಜಮಾತೃದೇವಿ ನಿಜದೇಶೀಯರ್‍ ನಿಜಭ್ರಾತೃಗಳ್‍ । 
ನಿಜಸೌಖ್ಯಂ ನಿಜರಾಷ್ಟ್ರಸೌಖ್ಯಮೆ ಎನುತ್ತಂತರ್ಬಹಿಶ್ಶುದ್ಧಿಯಿಂ ॥ 
ಸುಜನಾರಾಧಿತಮಾರ್ಗದೊಳ್‍ ನಡೆದ ದಾದಾಭಾಯಿಯಂ ಧನ್ಯನಂ । 
ಭಜಿಪೆಂ ಮಾನಸಶುದ್ಧಿಯಂ ಬಯಸುತಂ ಶ್ರೀ ಭಾರತೀಸೇವೆಯೊಳ್‍ ॥ 

ತಾತ ನಿವನಾತ್ಮೀಯರಿಗೆ ಸಹ । 
ಜಾತ ನೆಲ್ಲಜನರ್ಗೆ ಭಾರತ । 
ಮಾತೆಗಮಿತ ಶುಭೋದಯ ನವದಿನದ ರವಿಯೆನಿಪಾ ॥ 
ರೀತಿಯಲಿ ಬಾಳ್ದಖಿಲರಿಂ ಸಂ । 
ಪ್ರೀತನಾದ ಯಥಾರ್ಥನಾಮ । 
ಖ್ಯಾತ ದಾದಾಭಾಯಿ ನವರೋಜಿಯ ಸದಾ ನೆನೆವೆಂ ॥ 

ತನುಸೌಖ್ಯವನೆ ಕೋರಿ ಧನದಾಸೆಯಲಿ ಬಳಲು– 
ತೆನಿಬರೋ ಜನನಿಯನೆ ಮರೆಯುತಿಹರು । 
ಘನವೆನಿಪ ಬಿರುದಾವಳಿಯ ಗಳಿಪ ಚತುರತೆಯೊ– 
ಳೆನಿಬರೋ ಜೀವನವ ಕಳೆಯುತಿಹರು । 
ನಿಜಜನರ ಮೇಲ್ಮೆಯಂ ನೆನೆಯದರೆನಿಮಿಷಮುಂ 
ಪಶುಸುಖದೊಳೆನಿಬರೋ ಮುಳುಗುತಿಹರು । 
ಜಾತಿಭೇದವೆ ಸೋದರತ್ವದಿಂ ಮೇಲೆನ್ನು– 
ತೆನಿಬರೋ ವೈರದೊಳ್ಮೆರೆಯುತಿಹರು ॥
 
ದೇಶಹಿತವನೆ ತನ್ನ ಗುರಿಯೊಳಿಡುತೆ । 
ಮುದದಿನಾತ್ಮಾರ್ಪಣೆಯನಾಕೆಗೆಸಗಿ । 
ನಿಲುವ ಮಹನೀಯರತಿವಿರಳರವರೊಳಿಂದು । 
ಪೂಜ್ಯನಾ ನವರೋಜಿ ಮೊದಲೆನಿಪನಲ್ತೆ ॥ 

ಭಾರತೀಯರ ದುಃಖದುರ್ಬಲದೈನ್ಯದಾಸ್ಯಗಳೆಲ್ಲಮಂ । 
ದೂರ ನೀಗುತೆ ವಿದ್ಯೆ ಸೌಖ್ಯ ಸುಸಂಪದಂಗಳನಾಗಿಪಾ ॥ 
ದಾರಿತೋರಿದ ಬಂಧುವಾ ನವರೋಜಿಯಲ್ತೆ ನಿರಂತರಂ । 
ಪ್ರೇರಿಕಾ ಮಹನೀಯನೆನ್ನಯ ಚಿತ್ತವೃತ್ತಿಯ ಧರ್ಮದೊಳ್‍ ॥
 
ಪರಮಶುಭಚರಿತ್ರಂ ಭಾರತೀವೀರಪುತ್ರಂ । 
ಪರಹಿತಕರವೃತ್ತಂ ಸತ್ಯಮಾರ್ಗಪ್ರವೃತ್ತಂ ॥ 
ವಿರಚಿತಬಹುಪುಣ್ಯಂ ದೇಶಭಕ್ತಾಗ್ರಗಣ್ಯಂ । 
ಸ್ಫುರಿಕೆ ಮನದಿ ದಾದಾಭಾಯಿಯೆಂಬಾ ವರೇಣ್ಯಂ ॥
 
ಹನುಮಭೀಷ್ಮರವೊಲದ್ಭುತವೃತ್ತಂ । 
ವಿನಯಶೌರ್ಯಕರುಣಾಗುಣಯುಕ್ತಂ ॥ 
ಜನಪದೋದ್ಧರಣ ಧರ್ಮಕೃತಾರ್ಥಂ । 
ಮನದೊಳಿರ್ಕೆ ನವರೋಜಿ ಮಹಾತ್ಮಂ ॥
 
ಸ್ವರಾಜ್ಯಮಂತ್ರಬೋಧಕಂ ಸುರಾಜನೀತಿಕೋವಿದಂ । 
ಪರೇಶಭಕ್ತಿಪೂರಿತಂ ಪರೋಪಕಾರದೀಕ್ಷಿತಂ ॥ 
ಸ್ಫುರದ್ಯಶಶ್ಶರೀರನಾ ಗುರೂತ್ತಮಂ ಗುಣಾಕರಂ । 
ವಿರಾಜಿಕಾವಗಂ ಮದೀಯ ಮಾನಸಾಬ್ಜಪೀಠದೊಳ್‍ ॥

Wednesday 28 February 2024

ರಾಜಾ ರಾಮಮೋಹನ ರಾಯ್‍ - ವಸಂತ ಕುಸುಮಾಂಜಲಿ - ಡಿವಿಜಿ

ರಾಜಾ ರಾಮಮೋಹನ ರಾಯ್‍ - ವಸಂತ ಕುಸುಮಾಂಜಲಿ - ಡಿವಿಜಿ



ನಿಖಿಲ ಜೀವಂಗಳೊಳ್‍ ನೆರೆದಿರ್ಪ ದೇವನಂ 
ನಿರ್ಜೀವವಸ್ತುಗಳೊಳರಸಲೇಕೆ? । 
ಲೋಕಪಿತನೊರ್ವನಿರೆ ಸೋದರಾದರವಿರದೆ 
ಜಾತಿವಿಷಮತೆಗಳಲಿ ಕುದಿಯಲೇಕೆ? । 
ಬಹುಮಂದಿ ಮಹಿಳೆಯರ ಪುರುಷನುದ್ವಹಿಸುತಿರೆ 
ವಿಧವೆ ತಾನಗ್ನಿಯಲಿ ಬೀಳ್ವುದೇಕೆ? । 
ವಿದ್ಯೆಯಾರಾಧ್ಯವಿರೆ ಪರದೇಶಗಳ ಸಾರ್ದು 
ನೂತ್ನ ಕಲೆಗಳ ಯುವರ್‍ ಕಲಿಯರೇಕೆ? ॥ 

ಇಂತು ನಿಜಜನಕುಲದ ಮೌಢ್ಯಗಳ ತಿರ್ದಿದಾತಂ । 
ಆರ್ಷವೇದಪ್ರಭೆಯ ಜಗಕೆಲ್ಲ ಬೆಳಗಿದಾತಂ । 
ಭಾರತದ ಯಶವನೈರೊಪ್ಯರೊಳು ಸಾರಿದಾತಂ 
ರಾಮಮೋಹನನೆಮ್ಮ ನವಯುಗಕ್ಕರುಣನಾದಂ ॥

Tuesday 27 February 2024

ರಾಮಕೃಷ್ಣ ಪರಮಹಂಸ - ವಸಂತ ಕುಸುಮಾಂಜಲಿ - ಡಿವಿಜಿ


ರಾಮಕೃಷ್ಣ ಪರಮಹಂಸ - ವಸಂತ ಕುಸುಮಾಂಜಲಿ - ಡಿವಿಜಿ

ಶ್ರೀ ಕಾಳಿಕಾ ಪಾದಪದ್ಮ ಮಧುಕರನಾಗಿ
ತತ್ತ್ವಾನುಸಂಧಾನ ನಿರತನಾಗಿ ।
ನಾಸ್ತಿಕ್ಯತಿಮಿರಹರಚಂಡಭಾಸ್ಕರನಾಗಿ
ವೈರಾಗ್ಯರಾಜ್ಯಾಧಿರಾಜನಾಗಿ ।
ವಿವಿಧ ಮತ ಸಿದ್ಧಾಂತ ಸಾಮ್ಯ ದರ್ಶಕನಾಗಿ
ವೇದಾಂತಮರ್ಮೈಕದೃಷ್ಟಿಯಾಗಿ ।
ಶ್ರೀ ಶಂಕರಾದಿ ಸದ್ಗುರುಪಙ್ಕ್ತಿಯೊಳು ಸೇರ್ದ
ಪರಹಂಸನಾಗಿ ಕರುಣಾಳುವಾಗಿ ॥

ಕ್ರೈಸ್ತ ಮಹಮದ ಮುಖ್ಯ ಮತಗಳುಂ ಸಾರ್ಥಮೆಂದು ।
ಸ್ವಾನುಭವದಿಂ ಬಗೆದು ಸಾರುತ್ತೆ ಲೋಕಹಿತಮಂ ।
ಶ್ರೀ ವಿವೇಕಾನಂದಸಂಪೂಜ್ಯಚರಣಕಮಲಂ ।
ಮೆರೆದನಾ ಶ್ರೀ ರಾಮಕೃಷ್ಣಾಖ್ಯ ಯೋಗಿವರ್ಯಂ ॥

Monday 26 February 2024

ವಂದೇ ಮಾತರಂ - ವಸಂತ ಕುಸುಮಾಂಜಲಿ - ಡಿವಿಜಿ

ವಂದೇ ಮಾತರಂ - ವಸಂತ ಕುಸುಮಾಂಜಲಿ - ಡಿವಿಜಿ

(ಶ್ರೀ ಬಂಕಿಮಚಂದ್ರರ ಪ್ರಖ್ಯಾತ ರಾಷ್ಟ್ರಗೀತೆಯನ್ನನುಸರಿಸಿದ್ದು)

ವಂದೇ ಮಾತರಮಮಲಾಂ ।
ಸುಜಲಾಂ ಸುಫಲಾಂ ಸುಸಸ್ಯ ಸಂಪನ್ನಾಂ ।
ಭರಣೀಂ ಭಾರತಧರಣೀಂ ।
ತ್ವಾಂ ರಿಪುಹರಣೀಂ ಸುತಾರ್ತಿಪರಿಹರಿಣೀಂ ॥ ೧

ವಂದೇ ಮಾತರಮಾರ್ಯಾ ।
ಮಖಿಲೇಡ್ಯಾಮಮಿತರತ್ನಕನಕಾಢ್ಯಾಂ ।
ಶುಭ್ರಜ್ಯೋತ್ಸ್ನಾ ಪುಲಕಿತ ।
ರಜನೀಂ ತ್ವಾಂ ಶ್ರೀಮತೀಂ ಚ ಪುಣ್ಯವತೀಂ ॥ ೨

ದೇಶಮಯೀಂ ಕೋಶಮಯೀಂ ।
ಕುಶಲಮಯೀಂ ಸುಖಮಯೀಂ ಪ್ರಮೋದಮಯೀಂ ।
ಅಯಿ ಮಧುರಾಲಾಪಮಯೀಂ ।
ತ್ವಾಂ ವಂದೇ ಮಾತರಂ ಚ ಸುಗುಣಮಯೀಂ ॥೩

ಕರ್ಮ ತ್ವಂ ಮರ್ಮ ತ್ವಂ ।
ಸದ್ಧರ್ಮಸ್ತ್ವಂ ತಥೈವ ಶರ್ಮ ತ್ವಂ ।
ಭರ್ಮ ತ್ವಂ ವರ್ಮ ತ್ವಂ ।
ತ್ವಾಂ ವಂದೇ ಮಾತರಂ ವಿದ್ಯಾಂ ॥ ೪
ಪ್ರಾಣಾಸ್ತ್ವಮೇವ ದೇಹೇ ।
ಭುಜಯೋಶ್ಶಕ್ತಿಸ್ತ್ವಮೇವ ದೇಹಭೃತಾಂ ।
ಹೃದಯೇ ತ್ವಮೇವ ಭಕ್ತಿ ।
ಸ್ತ್ವಾಂ ವಂದೇ ಮಾತರಂ ದೇವೀಂ ॥ ೫

Sunday 25 February 2024

ಬೇಡಿಕೆ - ವಸಂತ ಕುಸುಮಾಂಜಲಿ - ಡಿವಿಜಿ

ಬೇಡಿಕೆ - ವಸಂತ ಕುಸುಮಾಂಜಲಿ - ಡಿವಿಜಿ

ನಿಷ್ಕಳಂಕನೆ ನಿನ್ನ ಸಂಕಲ್ಪಮಿಲ್ಲದೊಡ–
ದೇನುಮಾಗದು ಮೇಣದೇನುಮಿರದೈ ।
ಅನುಪಮಿತಮಹಿಮನೇ ಅರಿಯಲಾರೆನು ಶುಭದ
ಹಾದಿಯನು ನೀನೊಬ್ಬನರಿಯಬಲ್ಲೈ ।
ಕಾರುಣ್ಯಮೂರುತಿಯೆ ಕಾಯಸುಖವನು ಬಯಸಿ
ಕಡು ಕಷ್ಟಪಡುವೆನ್ನೊಳಿರಿಸು ಕೃಪೆಯಂ ।
ಅಮಿತತೇಜೋಮಯನೆ ಅಜ್ಞಾನತಿಮಿರದಿಂ
ಕುರುಡನಾದೆನಗೆ ನೀಂ ಕಣ್ಣ ನೀಡೈ ।
ಪ್ರೇಮಸ್ವರೂಪನೇ ನೀನೆನ್ನ ಹೃದಯಮರುವೊಳ್‍ ।
ಪ್ರೇಮರಸಮಂ ಪರಿಯಿಸುತ್ತೆ ದೃಢಸತ್ತ್ವವಿತ್ತು ।
ಪ್ರೇರಿಸೆನ್ನನು ಜೀವಕೋಟಿಗಳ ಹಿತದೊಳನಿಶಂ ।
ಸಕಲಜೀವಿಗಳ ಸಂಪ್ರೇರಕನೆ ಪಿತನೆ ಹಿತನೇ ॥ ೧

ಬಿದಿಯೆನ್ನ ಬೆಂಬಿಡಿದು ಬೇಟೆಯಾಡುತಿರೆ ನೀಂ
ಸಿಂಹವಿಕ್ರಮವನೆನ್ನೆದೆಯೊಳಿರಿಸೈ ।
ಭವದುರುಬುಮಳುವುಮೆನ್ನಯ ಕಿವಿಯನಿರಿಯೇ ನೀಂ
ಸವಿಹಾಡುಗಳಿನೆನ್ನ ಮನವ ತಣಿಸೈ ।
ಜಗದುಬ್ಬೆಗದಿ ಜೀವ ಕಾದು ಹೊಗೆಯೊಗೆದಂದು
ಮುಗಿಲಾಗಿ ಬಂದು ನೀಂ ಸುಧೆಯ ನೆರೆಯೈ ।
ಬಾಳು ಬೀಳ್ಬಯಲಾಗಿ ಬರಿದೆಂದು ತೋರ್ದಂದು
ದೊರೆಯ ದಿಬ್ಬಣವ ನೀನತ್ತ ಮೆರಸೈ ॥
ಸೃಷ್ಟಿಮೋಹಿನಿಯೆನ್ನ ಕಣ್ಮುಚ್ಚುವಾಟಕೆಳೆದು ।
ಅಷ್ಟದಿಕ್ಕೋಣಗಳೊಳಲೆಯಿಸುತ ಗಾಸಿಗೊಳಿಸೆ ।
ದೃಷ್ಟಿಯಲಿ ನಿಂತು ನೀಂ ನಿರ್ಭಯದ ಪದವ ತೋರೈ ।
ನಿತ್ಯಪರಿಪೂರ್ಣ ಶಿವ ಸಚ್ಚಿದಾನಂದ ಗುರುವೇ ॥ ೨

Saturday 24 February 2024

ದೇವರೆಲ್ಲಿ? - ವಸಂತ ಕುಸುಮಾಂಜಲಿ - ಡಿವಿಜಿ

ದೇವರೆಲ್ಲಿ? - ವಸಂತ ಕುಸುಮಾಂಜಲಿ - ಡಿವಿಜಿ
 
ಮೀನೊಂದು ವಾರಿಧಿಯೊ । 
ಳಾನಂದದಿಂದಿರುತ । 
ತಾನೊಂದುದಿನಮೆಂದಿತಚ್ಚರಿಯೊಳು ॥ 
ನಾನಂಬುಧಿಯ ವರ್ತ । 
ಮಾನವನು ಕೇಳಿರ್ಪೆ । 
ನಾ ನೀರ ರಾಶಿಯನು ಕಾಣ್ಬುದೆಂತು ॥ ೧ 

ಖಗಮೊಂದದೊಂದು ದಿನ । 
ಗಗನದೊಳ್‍ ಪಾರುತಲಿ । 
ಮಿಗೆ ಸಂತಸಂದಳೆದು ಪೇಳ್ದುದಿಂತು ॥ 
ಜಗದಿ ಮಾರುತನೆ ಜೀ ।
ವಿಗಳ ಬದುಕಿಪನೆಂದು । 
ಬಗೆದಿರ್ಪರವನನಾಂ ಕಾಣ್ಬುದೆಂತು ॥ ೨ 

ನರನುಮಂತೆಯೆ ಸತತ । 
ಮಿರುತಲಾ ಪರಮನೊಳೆ । 
ಪರಮಾತ್ಮನಿರ್ಪೆಡೆಯ ತಿಳಿಯದಿಹನು ॥ 
ಪರಿಕಿಸಿದೊಡಾ ಪರಾ । 
ತ್ಪರನೆತ್ತಲೆತ್ತಲುಂ । 
ಮರೆಯುತಿಹನೆನಿತೆನಿತೊ ರೂಪಗಳೊಳು ॥ ೩ 

ಮೂಲ, ವಿಸ್ಮೃತ

Friday 23 February 2024

ಆತ್ಮಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

ಆತ್ಮಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

‘ಆತ್ಮಗೀತೆ’ ಯ ಪ್ರಸ್ತಾವನೆ

ಆತ್ಮಗೀತೆಯು ವಾಲ್ಟ್ ‍ವ್ಹಿಟ್‍ಮನ್‍ (Walt Whitman) ಎಂಬ ಆಂಗ್ಲ ಭಾಷಾ ಕವಿಯ “ಸಾಂಗ್‍ ಆಫ್‍ ಮೈ-ಸೆಲ್ಫ್‍” (ಸ್ವಾತ್ಮವಿಷಯಕವಾದ ಹಾಡು) ಎಂಬ ಕೃತಿಯ ಕೆಲವು ವಾಕ್ಯಗಳ ಅನುವಾದ.

ವ್ಹಿಟ್‍ಮನ್‍ ಕವಿ ಅಮೆರಿಕದವನು. ಆತನು ಕ್ರಿ.ಶ. ೧೮೧೯ ರಿಂದ ೧೮೯೨ರ ವರೆಗೆ ಬಾಳಿದನು. ಆತನು ವಿರಕ್ತನಾಗಿದ್ದುಕೊಂಡು ಬಡವರೂ ಸಾಮಾನ್ಯ ವೃತ್ತಿಗಳಲ್ಲಿರತಕ್ಕವರೂ ದೀನರೂ ಆದ ಜನರಿಗೆ ಆಪ್ತ ಮಿತ್ರನಾಗಿ, ಪರತತ್ತ್ವ ವಿಚಾರಕನಾಗಿ, ತನ್ನ ಅಂತರಾತ್ಮನಿಗೆ ತೋರಿಬಂದ ತತ್ತ್ವಗಳನ್ನು ಉಪಪಾದಿಸುವುದರಲ್ಲಿ ಯಾರಿಗೂ ಹೆದರದವನಾಗಿ, ಯಾವ ನಿರ್ಬಂಧಕ್ಕೂ ಸಿಕ್ಕದವನಾಗಿ ಆಯುಷ್ಯವನ್ನು ಕಳೆದನು.

ಈ ಆತ್ಮಗೀತೆಯ ವಚನಗಳಿಗೆ ಸಮಾನಗಳಾದ ವಚನಗಳನ್ನು ಈಶಾವಾಸ್ಯಾದ್ಯುಪನಿಷತ್ತುಗಳಲ್ಲಿಯೂ ಭಗವದ್ಗೀತಾದಿ ಶಾಸ್ತ್ರಗಳಲ್ಲಿಯೂ ಹೇರಳವಾಗಿ ಕಾಣಬಹುದು. ಇದರ ಮೊದಲನೆಯ ವಿಭಾಗದಲ್ಲಿ ಪರಮಾತ್ಮನ ಸರ್ವವ್ಯಾಪಕತೆಯೂ ಅದರಿಂದ ಬೋಧಿತವಾಗುವ ಸರ್ವ ಸಮತಾ ನೀತಿಯೂ ಸೂಚಿತವಾಗಿವೆ. ಎರಡನೆಯ ವಿಭಾಗದಲ್ಲಿ ಮಾನವ ವ್ಯಕ್ತಿಯು ಅವನ ಸುತ್ತಲೂ ಇರುವ ಸಮಸ್ತ ಪ್ರಪಂಚಕ್ಕೆ ಎಷ್ಟು ಮಹಾ ಋಣಿಯಾಗಿದ್ದಾನೆ. ಹೇಗೆ ಅದರ ಅಂಶಮಾತ್ರನಾಗಿದ್ದಾನೆ, ಎಂಬುದು ಸೂಚಿತವಾಗಿದೆ. ಮೂರನೆಯ ಮತ್ತು ನಾಲ್ಕನೆಯ ವಿಭಾಗಗಳಲ್ಲಿ ಕ್ರಮವಾಗಿ ಸ್ಥಲಚರಗಳಾದ ಮತ್ತು ಜಲಚರಗಳಾದ ಜೀವರಾಶಿಗಳೊಡನೆ ಮನುಷ್ಯನು ಐಕ್ಯವನ್ನು ಅನುಸಂಧಾನ ಮಾಡಬೇಕೆಂದು ಸೂಚಿತವಾಗಿದೆ.

ಆತ್ಮಗೀತೆ



ನಾನವಿದಿತಾಖಂಡ ಪರಸತ್ತ್ವದೊಳಕೆ । 
ಮಾನವರನೆಲ್ಲರಂ ಕರೆವೆ ಸುಖಿಪುದಕೆ ॥ 
ಆತ್ಮತಾನಮಿತಬಲನಾತ್ಮ ತಾಂ ಪರಮಂ । 
ಆತ್ಮ ತಾಂ ಮೃತಿರಹಿತನಾತ್ಮ ತಾಂ ಪೂರ್ಣಂ ॥ 
ಎನ್ನಾತ್ಮವನೆ ನಿಖಿಲರಲ್ಲಿ ಕಾಣುತಿಹೆಂ । 
ಎನ್ನ ಗುಣದೋಷಗಳನವರೊಳೆಣಿಸುತಿಹೆಂ ॥ 
ಪಿರಿಯರುಂ ಕಿರಿಯರುಂ ಸಮರೆನ್ನ ಮನದೊಳ್‍ । 
ಸರಿಯೆಲ್ಲರವರವರ ಕಾಲ ತಾಣಗಳೊಳ್‍ ॥ 
ನರನವೊಲು ನಾರಿಯುಂ ಸಂಭಾವ್ಯಳಲ್ತೆ । 
ಪುರುಷನಂ ಪೆತ್ತವಳೆ ಸಂಮಾನ್ಯಳಲ್ತೆ ॥ 

೨ 

ಎನಿತೋ ಕಾಲದ ಫಲದಿನಿಂತು ಜನ್ಮಿಸಿಹೆಂ । 
ಎನಿಬರೋ ಉಪಕರಿಸೆ ನಾನಿಂತು ಬೆಳೆದೆಂ ॥ 
ಇಂತೆನಿತೊ ಜೀವಿಗಳುಮೆನಿತೊ ಲೋಕಗಳುಂ । 
ತಂತಮ್ಮ ನಿಯಮಗಳೊಳಿಹವು ಸಂತತಮುಂ ॥ 
ಈ ವಿಧಿಯೊಳನ್ಯೋನ್ಯ ಸಂಬದ್ಧಮಾಗಿ । 
ಈ ವಿಶ್ವದೊಳ್‍ ಸಕಲಮಿರೆ ಚಿತ್ರಮಾಗಿ ॥ 
ಇದನೆಲ್ಲ ಭೇದಿಸುತೆ ಮುತ್ತಿಕೊಂಡಿಹುವು । 
ಮೊದಲು ಕೊನೆಯಿಲ್ಲದಿಹ ಕಾಲ ದಿಕ್ಕುಗಳು ॥ 
ಕಾಲ ದೇಶಂಗಳನತಿಕ್ರಮಿಸಿ ನಿತ್ಯಂ । 
ಸ್ಥೂಲ ಸೂಕ್ಷ್ಮಂಗಳೊಳ್‍ ವ್ಯಾಪಿಸುತೆ ಸತ್ಯಂ ॥ 
ಪರಮಾತ್ಮನಿಹನು ನಿಲ್ಲಿಸುತ ಕೊಲ್ಲಿಸುತುಂ । 
ಪರಿಪೂರ್ಣನಾತನಾತನೆ ಸರ್ವಶಕ್ತಂ ॥ 
ಆತನುಚ್ಛ್ವಾಸಗಳೆ ಸಕಲ ರೂಪಗಳುಂ ।
ಆತನಿಂ ಪುಟ್ಟುವುವೆ ಸಕಲ ಶಬ್ದಗಳುಂ ॥ 
ಆತನಂ ಕಾಣಲ್ಕೆ ಕಷ್ಟವೇನಿಹುದೈ । 
ಆತನಿಂ ಬೇರೊಂದು ವಸ್ತುವೆಲ್ಲಿಹುದೈ? ॥ 

೩ 

ವನ ನದೀ ಗಿರಿ ನಿವಹದಿಂ ಮೆರೆವ ಧರೆಯೇ । 
ದಿನಪ ಶಶಿ ಕಿರಣಗಳಿನೆಸೆಯುತಿಹ ತಿರೆಯೇ ॥ 
ಎನಗೊಲವನಿತ್ತು ಸಲಪುವ ತಾಯೆ ಬಂದೆಂ । 
ನಿನಗೆನ್ನ ಸಂಪ್ರೀತಿ ಪುಷ್ಪಮಂ ತಂದೆಂ ॥ 

೪ 

ವಾರಿಧಿಯೆ ನಿನ್ನೊಳಿದೊ ಸೇರುವೆನು ಬೇಗ । 
ಬಾರೆಂದು ನಿನ್ನಲೆಗಳುಲಿಯುತಿಹುವೀಗ ॥ 
ನಿನಗೆನ್ನೊಳೆನಿತು ಸಂಪ್ರೀತಿಯಿಹುದಯ್ಯ । 
ಎನಗಮಂತೆಯೆ ನಿನ್ನೊಳನುರಾಗವಯ್ಯ ॥ 
ನಿನ್ನೊಳೈಕ್ಯವ ಪಡೆಯೆ ಕಾದಿರ್ಪೆನಯ್ಯ । 
ಎನ್ನನೀ ತೀರದಿಂದಾಕರ್ಷಿಸಯ್ಯ ॥ 
ನಿನ್ನ ವೀಚಿಗಳೊಳಾನುಯ್ಯಲಾಡುವೆನೈ । 
ನಿನ್ನೊಳಾಂ ಜಲಕೇಳಿಯಾಡಿ ನಲಿಯುವೆನೈ ॥ 
ನಿನ್ನಯ ಶ್ವಾಸಂಗಳಿನಿತು ಭೀಷಣಮೇಂ । 
ನಿನ್ನುಪ್ಪುನೀರು ಜೀವಿಗಳ ಕಣ್ಣೀರೇಂ ॥ 
ನೀನೆನಿಬರಿಗೆ ರುದ್ರಭೂಮಿಯಾಗಿಹೆಯೈ । 
ನೀನೆನಿತು ಗಂಭೀರನೆನಿತು ಚಂಚಲನೈ ॥ 
ಏಕರೂಪನನೇಕ ರೂಪನಾಂ ನಿನ್ನೊಲ್‍ । 
ಏಕಮಾನಸನಾಗಿ ಬೆರೆವೆನಾಂ ನಿನ್ನೊಳ್‍ ॥

Thursday 22 February 2024

ಸರ್ವಮತ ಸಿದ್ಧಾಂತ - ವಸಂತ ಕುಸುಮಾಂಜಲಿ - ಡಿವಿಜಿ

ಸರ್ವಮತ ಸಿದ್ಧಾಂತ - ವಸಂತ ಕುಸುಮಾಂಜಲಿ - ಡಿವಿಜಿ

ಎನಿತೋ ಮತಂಗಳುಂ ನಿಗಮ ಶಾಸ್ತ್ರ ಪುರಾಣಗಳುಂ ಮಗುಳ್ದು ತಾ– । 
ವೆನಿತೋ ಮಠಂಗಳುಂ ಗುರುಗಳುಂ ವ್ರತಹೋಮಜಪಾದಿಕರ್ಮಮುಂ ॥ 
ಮನುಜರು ಸರ್ವಭೂತಗಳೊಳಂ ಪ್ರಿಯಭಾವವ ತೋರಲಾಗ ಸಂ– । 
ಜನಿಪುದು ಸರ್ವಕರ್ಮಗಳಿನಾಗದ ಸೌಖ್ಯಮದೆಲ್ಲ ಲೋಕಕಂ ॥ 

(ಬಹುಶಃ, ವಿಲ್‍ಕಾಕ್ಸ್)

Wednesday 21 February 2024

ಜೀವಗೀತೆ - ವಸಂತ ಕುಸುಮಾಂಜಲಿ - ಡಿವಿಜಿ

‘ಜೀವಗೀತೆ’ ಯ ಪ್ರಸ್ತಾವನೆ

ಜೀವಗೀತೆಯು ಆಂಗ್ಲಭಾಷೆಯ ಕವಿಗಳ್ಲೊಬ್ಬನಾದ ವ್ಹಿಟ್ಟಿಯರ್‍ (J.G.Whittier) ಎಂಬಾತನ “ಮೈಸೋಲ್‍ ಅಂಡ್‍ ಐ” (ನನ್ನ ಜೀವವೂ ನಾನೂ) ಎಂಬ ಕೃತಿಯ ಅನುವಾದ.

ವ್ಹಿಟ್ಟಿಯರನು ಅಮೆರಿಕಾ ಖಂಡದ ಸಂಯುಕ್ತ ರಾಷ್ಟ್ರದಲ್ಲಿ ಕ್ರಿ.ಶ. ೧೮೦೭ ರಿಂದ ೧೮೯೨ರ ವರೆಗೆ ಜೀವಿಸಿದ್ದನು. ಆತನು ಭಕ್ತಿಭರಿತವೂ ನೀತಿಬೋಧಕವೂ ಆದ ಅನೇಕ ಪದ್ಯಾವಳಿಗಳನ್ನು ಬರೆದಿರುತ್ತಾನೆ. ಅವು ಅತಿ ಲಲಿತವಾಗಿಯೂ ರಸವತ್ತಾಗಿಯೂ ಇರುವ ಕಾರಣ ಜನಸಾಮಾನ್ಯಕ್ಕೆಲ್ಲ ಆದರಣೀಯವಾಗಿವೆ. ಇಂಗ್ಲೆಂಡಿನ ಪ್ರಖ್ಯಾತವಾಗ್ಮಿಯೂ ರಾಜನೀತಿಕೋವಿದನೂ ಪ್ರಜಾಭಿಮಾನಿಯೂ ಆಗಿದ್ದ ಜಾನ್‍ ಬ್ರೈಟ್‍ ಮಹಾಶಯನು ವ್ಹಿಟ್ಟಿಯರನ ಕಾವ್ಯಗಳನ್ನು ಪದೇ ಪದೇ ಓದಿ ಸಂತೋಷಪಡುತ್ತಿದ್ದನು.

ವ್ಹಿಟ್ಟಿಯರನು ಧರ್ಮಸೂಕ್ಷ್ಮದರ್ಶಿಯೂ ಲೋಕಹಿತ ಚಿಂತಕನೂ ಆಗಿದ್ದನು. ಸಾಮಾನ್ಯ ಜನರ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನೆಲ್ಲ ಆತನು ತನ್ನ ಕಾವ್ಯಗಳಲ್ಲಿ ವಿಮರ್ಶಿಸಿ, ಅನ್ಯಾಯ ದೂಷಣೆಯನ್ನೂ ನ್ಯಾಯ ಪೋಷಣೆಯನ್ನೂ ಮಾಡಿರುತ್ತಾನೆ. ಪ್ರಜಾಪಕ್ಷವಾದಿಗಳಾದ ಕವಿಗಳಲ್ಲಿ ಆತನು ಅಗ್ರಗಣ್ಯನೆಂದು ಸುಪ್ರಸಿದ್ಧ ಪತ್ರಿಕಾಕರ್ತನೂ ಲೋಕೋಪಕಾರಿಯೂ ಆಗಿದ್ದ ಸ್ಟೆಡ್‍ ಮಹಾಶಯನ ಅಭಿಪ್ರಾಯ.

ಜೀವಗೀತೆಯು ಪ್ರಶ್ನೋತ್ತರ ರೂಪದಲ್ಲಿದೆ; ಮನುಷ್ಯನು ತನ್ನ ಬಾಳಿಕೆಯ ರೀತಿಯನ್ನು ತನ್ನ ಮನಸ್ಸಿನಲ್ಲಿ ತಾನೇ ವಿಚಾರಮಾಡಿಕೊಂಡು, ತನ್ನೊಡನೆ ತಾನೇ ಸಂವಾದ ಬೆಳೆಯಿಸಿದಂತೆ ಇದೆ. ನಮ್ಮ ಪುರಂದರಾದಿ ದಾಸರುಗಳ “ಸಿಕ್ಕಿದೆಯಾ ಎಲೊ ಜೀವ”, “ಮನವೇ ಮರೆಯದಿರೋ ಹರಿಯ” ಮೊದಲಾದ ಆತ್ಮ ಪರಿಶೋಧನೆಯ ಪದಗಳೂ, ಮಹಾರಾಷ್ಟ್ರದ ರಾಮದಾಸ ಸ್ವಾಮಿಗಳ “ಮನಾಚೆ ಶ್ಲೋಕ” ವೂ, ಭರ್ತೃಹರಿಯ ಮನಸ್ಸಂಬೋಧನ ವಾಕ್ಯಗಳೂ ಇದೇ ಜಾತಿಯ ಕವಿತೆಯೆಂದು ಹೇಳಬಹುದು. ಬುದ್ಧಿಯು ಕೇಳುವ ಪ್ರಶ್ನೆಗಳಿಗೆ ಜೀವನು ಹೇಳುವ ಪ್ರತ್ಯುತ್ತರಗಳನ್ನು ವಾಚಕರ ಸೌಕರ್ಯಕ್ಕಾಗಿ (“” ಈ ಬಗೆಯ) ಉದಾಹರಣ ಚಿಹ್ನೆಗಳಿಂದ ಸ್ಪಷ್ಟಪಡಿಸಿದೆ.

ಅಮೆರಿಕದ ವ್ಹಿಟ್ಟಿಯರನು ಪ್ರತಿಪಾದನೆ ಮಾಡಿರುವ ತತ್ತ್ವಗಳು ಭರತಖಂಡದ ಜನರಿಗೆ ಅಪೂರ್ವವಾದುವಲ್ಲ. ಆತನ ವಾಕ್ಯಗಳಿಗೆ ಸಮಾನವಾದ ವಾಕ್ಯಗಳನ್ನು ಭಗವದ್ಗೀತೆಯಲ್ಲಿಯೂ ಪುರಾಣಗಳಲ್ಲಿಯೂ ನಮ್ಮ ಮತಾಚಾರ್ಯರುಗಳ ಉಪದೇಶಗಳಲ್ಲಿಯೂ ದಾಸರ ಕೀರ್ತನೆಗಳಲ್ಲಿಯೂ ಯಥೇಷ್ಟವಾಗಿ ಕಾಣಬಹುದು. ಹೀಗೆ ಪಾಶ್ಚಾತ್ಯ ಮಹಾಕವಿಗಳೂ ಪೌರಸ್ತ್ಯ ಮಹಾಕವಿಗಳೂ ಮಾನವ ಜೀವನದ ಮುಖ್ಯವಿಷಯಗಳಲ್ಲಿ ಏಕವಾಕ್ಯವಾಗಿರುವುದನ್ನು ನೋಡಿದರೆ, ‘ಭಗವಂತನು ತನ್ನ ಮಹಿಮೆಯನ್ನು ಎಲ್ಲ ಜನರಿಗೂ ತೋರಿಕೊಂಡಿರುವನು; ಮಹನೀಯರು ಎಲ್ಲೆಲ್ಲಿಯೂ ಇರುವರು; ಅವರು ಒಮ್ಮುಖದಿಂದ ಹೇಳುವ ತತ್ತ್ವಗಳು ಎಲ್ಲ ಕಾಲ ದೇಶಗಳಲ್ಲಿಯೂ ಎಲ್ಲರಿಂದಲೂ ಮನ್ನಣೆ ಪಡೆಯಲು ಅರ್ಹವಾದುವು’ ಎಂದು ಯಾರ ಮನಸ್ಸಿಗೂ ಹೊಳೆಯದೇ ಇರದು.

ಶ್ರೀಃ

ಪ್ರಣವ ವಿಬೋಧಕ ವದನಂ ।
ಪ್ರಣತ ಶ್ರೇಯೋನಿಕೇತನಂ ಪ್ರಾಜ್ಞಧನಂ ॥
ಗಣನಾಥಂ ಕವಿಗೀತಂ ॥
ಗುಣಸಂಪದವೀಗೆ ಕೃತಿಗೆ ಕರುಣೋಪೇತಂ ॥

ಜೀವಗೀತೆ

ನಿಲ್ಲು ನಿಲ್ಲೆಲೊ, ಜೀವ, ನಿನ್ನನೇಕಾಂತದಲಿ
ದೇವನಿದಿರಲಿ ಮಾತನೊಂದ ಕೇಳ್ವೆಂ ।
ನಿರ್ವಿಚಾರದಿ ಭವದ ಘೋರಾಂಧಕಾರದೊಳು
ನೀನೆತ್ತ ಪೋದಪೆಯೊ ನಿಂತು ನೋಡೈ ।
ಪುರುಷರೂಪವ ಧರಿಸಿ ಧರೆಯೊಳಾದರದಿ ನೀ–
ನಾವ ಕರ್ತವ್ಯಕಾಗಿರುವೆ ತಿಳಿಯೈ ।
ಜೀವ ನಿನ್ನಯ ಜನ್ಮ ಸಾಫಲ್ಯವೆಂತಹುದು
ನಿನ್ನ ಧರ್ಮವದೇನು ಬಗೆದು ಪೇಳೈ ॥

ದೇಹಸೌಖ್ಯವನಾಂತು ಮೆರವುದೋ ಬಂಧುಕುಲದೊಳ್‍ ।
ಮುದವನೊಂದುವುದೊ ಮೇಣತಿಶಯದ ಧನವ ಗಳಿಸಿ ।
ಕೀರ್ತಯೊಂದುವುದೊ ಮತ್ತಾವುದೈ ನಿನ್ನ ಧರ್ಮಂ? ।
– “ತಾನೊಂದುಮಲ್ತಿದರೊಳಾವುದುಂ ಧರ್ಮಮಲ್ತು” ॥೧

ಸರ್ವಲೋಕಕೆ ಸಾಕ್ಷಿಯಾದ ದೇವನು ನಿನ್ನ
ಕರ್ಮಗಳನಾವಗಂ ನೋಳ್ಪನಲ್ತೆ ।
ಆತನಿಚ್ಛೆಯನರಿಯುತದನೆ ಅನುವರ್ತಿಸುತ–
ಲಾತನಂ ಸೇವಿಪುದೆ ಧರ್ಮಮಲ್ತೆ ।
ಅಂತಾದೊಡೀಗಳಾ ದೇವನ ಸನ್ನಿಧಿಯೊ–
ಳೇನ ಪೇಳುವೆ, ಜೀವ, ಭಯವದೇಕೆ ।
ನರರ ಬಳಿಯೊಳು ಹರುಷದಿಂದ ಚರಿಸುವ ನಿನಗೆ
ಪರಮನಿದಿರಲಿ ಬರಲು ಚಿಂತೆಯೇಕೆ ॥
ಸತ್ಯಮಂ ಧರ್ಮಮಂ ನೀನೆಂತು ಕಾಯುತಿರ್ಪೆ ।
ದೇವನಂ ನೀನೆನಿತು ಭಕ್ತಿಯಿಂ ಭಜಿಸುತಿರ್ಪೆ ।
ಭೂತಕೋಟಿಯೊಳೆನಿತು ಮೈತ್ರಿಯಿಂ ನಡೆಯುತಿರ್ಪೆ ।
ಆಯುಷ್ಯವೆಲ್ಲಮಂ ನೀನೆಂತು ಕಳೆಯುತಿರ್ಪೆ? ॥ ೨

“ಅನ್ಯಾಯಮೆಲ್ಲಿರ್ದೊಡಂ ಧೈರ್ಯದಿಂದೆ ನಾ–
ನದರ ಮೂಲವ ನಾಶಗೊಳಿಸುತಿರ್ಪೆಂ ।
ಧರ್ಮಮದು ತಾನೆನಿತು ಬಲಮಿಲ್ಲದಿರ್ದೊಡಂ
ನಾನದರ ಕೈಂಕರ್ಯವೆಸಗುತಿರ್ಪೆಂ ।
ಸ್ವಾತಂತ್ರ್ಯರಿಪು ನಿಹಿತ ಬಂಧನಂಗಳ ಕಳೆವ
ಜನರಿಂಗೆ ನಾಂ ಜಯವ ಬಯಸುತಿರ್ಪೆಂ ।
ಅನೃತಮದು ತಾನೆನಿತು ಶಕ್ತಿವಡೆದಿರ್ದೊಡಂ
ನಾನದನು ಭರದಿಂದ ತಡೆಯುತಿರ್ಪೆಂ” ॥
–ಇಂತುಸಿರ್ವೊಡೆ ನಿನ್ನ ದನಿಯೇಕೆ ನಡುಗುತಿಹುದು ।
ಜೀವ, ನೀನಿಂತು ಮಾಡಿರ್ಪೊಡದೆ ಸುಕೃತಮಲ್ತೆ ।
ಆದೊಡಂ ನೀನಂತು ಮಾಳ್ಪುದಕೆ ಕಾರಣಮದೇಂ ।
ತತ್ತ್ವಚಿಂತೆಯೊ ಯಶಶ್ಚಿಂತೆಯೋ ದಿಟವನುಸಿರೈ ॥ ೩

“ಮಾನಿಸರ ಮೆಚ್ಚಿಕೆಯೆ ನಾನೆಸುತಿರ್ಪೆಲ್ಲ
ಕಾರ್ಯಕಂ ಫಲ” ಮೆಂದು ಪೇಳ್ವೆಯೇನೈ ।
ಅಂತು ನೀನುಸಿರುವೊಡೆ ಬಲುಧನಮನಾರ್ಜಿಸುವ
ಕೃಪಣಗಂ ನಿನಗಮಿಹ ಭೇದಮೇನೈ ।
ಸ್ವಾರ್ಥತೆಯದೇತಕೈ ಕೀರ್ತಿಯೇತಕೆ ನಿನಗೆ
ನಿನ್ನ ಪಯಣದ ಬಗೆಯನರಿಯೆಯೇನೈ ।
ಇಹದಿ ನಿನ್ನಯ ಬಾಳು ಮುಗಿದ ಬಳಿಕೆಲ್ಲಿ ನೀ–
ನಾವಪರಿಯಿರ್ದಪೆಯೊ ಬಲ್ಲೆಯೇನೈ ॥
ಮೃತ್ಯುವಿನ ಕಾರ್ಮುಗಿಲು ನಿನ್ನನಾವರಿಸಿದಂದು ।
ನಿನ್ನ ದೃಷ್ಟಿಯು ನಷ್ಟಮಾಗೆ ನೀನಬಲನಾಗೆ ।
ನಿನ್ನ ಗತಿಯಿಂತೆಂದು ನಿನಗಾರು ತೋರ್ಪರೈಯ ।
ಜೀವ, ನೀಂ ಸಾವೆನ್ನಲೇಕಿಂತು ಭೀತನಾದೆ? ॥ ೪

“ಮೃತ್ಯುವಿನ ಕತ್ತಲೆಯು ಮುತ್ತಲೆತ್ತೆತ್ತಲುಂ
ಹಿಂದುಮುಂದುಗಳ ನಾನೆಂತು ತಿಳಿವೆಂ ।
ಎನಿಬರೋ ಜೀವರ್ಕಳಾ ಮೃತ್ಯುಮುಖವನೇ
ದುಃಖದಿಂ ಪೊಕ್ಕು ಪಿಂದಿರುಗದಿರ್ಪರ್‍ ।
ಮೃತ್ಯು ಬಳಿಸಾರಲಿನ್ನೆನಿಬರೋ ಚಿತ್ತದೊಳು
ಜಗದೊಡೆಯನನು ನೆನೆದು ನಲಿಯುತಿರ್ಪರ್‍ ।
ಮೃತ್ಯುವನು ಮರೆಮರೆತು ಬದುಕಿ ಮತ್ತೆನಿಬರೋ ।
ಮೃತ್ಯುಮುಖವನೆ ಕಡೆಗೆ ಸೇರುತಿರ್ಪರ್‍ ॥
ಅವರೊಳಾರುಂ ತಮ್ಮಹದನೆನಗೆ ತಿಳಿಪಲಾರರ್‍ ।
ಮೃತ್ಯುಭಯದಿಂ ಜಗವು ಗೋಳಿಡುತ ನಡುಗುತಿಹುದು ।
ನಿಚ್ಚಮಾ ಮೃತ್ಯುವಿನ ಬಳಿಗೆ ನಾಂ ನಡೆಯುತಿಹೆನು ।
ಅಲ್ಲಿನೆಲ್ಲಿಗೊ ಮುಂದೆ ನಾನದನದೆಂತು ತಿಳಿವೆಂ” ॥ ೫

ಏನಿದೇನಿಂತು ಪೇಳುವೆ, ಜೀವ, ನಿನ್ನಯಾ
ಬುದ್ಧಿ ಧೈರ್ಯಗಳಿನಿತು ಕುಂದಲೇಕೆ ।
ಲೌಕಿಕೋದ್ಯಮಗಳಲಿ ನಿನಗಿರ್ಪ ಜಾಣ್ಮೆಯದು
ಮೃತ್ಯುಮುಖದಲಿ ಮಾಯವಾಗಲೇಕೆ ।
ಮೋದ ಖೇದಗಳಂತೆ ಭೀತಿಯುಂ ನಿನ್ನಯ
ಸ್ವಾಭಿಮಾನದೆ ಪುಟ್ಟಿ ಬೆಳೆವುದಯ್ಯ ।
ಮತಿಯು ಮಂಕಾಗಲಜ್ಞಾನವಪ್ಪುದು ನಿನ್ನ
ಮತಿವೈಪರೀತ್ಯವೇ ಭೀತಿಯಯ್ಯ ॥
ದೇವದೇವನು ನಿನ್ನ ರಿಪುಗಳಂ ಸದೆವನಲ್ತೆ ।
ಆತನೆಡೆಯೊಳು ಭೀತಿಯೊಂದಿನಿಸುಮಾಗದಲ್ತೆ ।
ಆತನಿಂ ನಿನ್ನ ಕತ್ತಲೆಯೆಲ್ಲ ಪರಿವುದಲ್ತೆ ।
ಆತನಂ ಬಿಟ್ಟು ನೀಂ ಚಿಂತಿಪುದೆ ಮೌಢ್ಯಮಲ್ತೆ ॥ ೬

ಪಿಂತಾದುದಂ ಮುಂದೆ ಬರ್ಪುದಂ ಚಿಂತಿಪುದು
ಮರುಳುತನವೆಂಬುದನು ಮರೆಯಬೇಡೈ ।
ವರ್ತಮಾನದಿ ದೈವಭಕ್ತಿಯಂ ಸ್ಥಿರಗೊಳಿಸಿ
ಧರ್ಮಮಾರ್ಗದಿ ಚರಿಸಿ ಜಾಣನಾಗೈ ।
ಮೃತ್ಯುವಿಂ ನಿನಗಾವ ಹಾನಿಯುಂ ಬಾರದೈ
ಮರಣಭೀತಿಯು ಮೂರ್ಖಜನರಿಗಯ್ಯ ।
ಇಹದೊಳಂ ಪರದೊಳಂ ಪರಮೇಶನೊರ್ವನೇ
ತನ್ನ ಸಂತಾನದೊಡನಿರ್ಪನಯ್ಯ ॥
ಅವನಿನನ್ಯವನೊಂದ ಭಾವಿಪುದೆ ಪಾಪಮಲ್ತೆ ।
ಆತನೊಳೆ ಜೀವಕೋಟಿಗಳು ನಿಂದಿರ್ಪುವಲ್ತೆ ।
ಅವರನಾತಂ ಭ್ರಾತೃವಾತ್ಸಲ್ಯ ಸೂತ್ರದಿಂದಂ ।
ಬಂಧಿಸಿಹನಾ ಸೂತ್ರವಿಭಜನಮೆ ದುಃಖಮೂಲಂ ॥ ೭

ಜಗಮೆಂಬ ವೀಣೆಯಾ ತಂತ್ರಿಗಳೆ ಜೀವಿಗಳ್‍
ಅವರೆಲ್ಲ ಸಮದೊಳಿರೆ ಮಧುರ ನಿನದಂ ।
ಆ ತಂತ್ರಿಗಳೊಳಾವುದೊಂದು ವಿಷಮಿಸಿದೊಡಂ
ನಾದಮೆಲ್ಲಂ ಕೆಡುಗುಮದರ ಕತದಿಂ ।
ಜೀವ, ನೀನದರಿನಾ ಪ್ರೇಮ ಸೂತ್ರವನರಿಯು–
ತದರಂತೆ ಚರಿಸುವುದೆ ಧರ್ಮಸೂಕ್ಷ್ಮಂ ।
ಭೂತಹಿತವಾಚರಿಸೆ ಭೂತಲವೆ ನಾಕವೈ
ತಪ್ಪಿದೊಡೆ ಭೂತಲವೆ ನರಕವಯ್ಯ ॥
ನೀನೆನಿತು ಹಿತವನೆಸಗಿದೊಡೆ ನಿನಗನಿತು ಹಿತವೈ ।
ನೆರೆಹೊರೆಯ ದುಃಖಮೇ ನಿನಗೀಗ ನರಕ ದುಃಖಂ ।
ಅವರ ಸಂತಸಮೆ ನಿನ್ನಾತ್ಮಕ್ಕೆ ಪರಮ ಸುಖದಂ ।
ಅದರಿನಾವಗಮೆಸಗುತಿರು ಜೀವ ಲೋಕಹಿತಮಂ ॥ ೮

ಇಹದೊಳಂ ಪರದೊಳಂ ದಿನದೊಳಂ ನಿಶಿಯೊಳಂ
ಸರ್ವರಂ ಸರ್ವೇಶನೋವುತಿಹನು ।
ಮನಸಿಗಂ ಬುದ್ಧಿಗಂ ಗೋಚರಿಸದೆಡೆಗಳೊಳ್‍
ಸರ್ವ ಕಾಲಂಗಳೊಳಮಾತನಿಹನು ।
ನಿನ್ನಯ ಕ್ಲೇಶಂಗಳಾತನಿಂ ತೊಲಗುವುವು
ಆತನಭಯವನಿತ್ತು ಕಾವನಯ್ಯ ।
ಆತನಂ ನೆರೆನಂಬುತಾತನಾಜ್ಞೆಯನರಿಯು–
ತದರವೊಲು ಚರಿಪವನೆ ಧನ್ಯನಯ್ಯ ॥
ಆತನೊಲವಿಂ ನಿನ್ನ ದುರ್ಬಲವು ಸುಬಲವಹುದು 
ಆತನ ಪ್ರಭೆಯಿಂದೆ ತಮಸೆಲ್ಲ ನಾಶವಹುದು ।
ನೀನಾತನಲ್ಲಿ ನಿಲೆ ಭೂತಭವ್ಯಗಳ ಮಾತೇಂ ।
ಆ ಪರಬ್ರಹ್ಮನೊಳೆ ಸಕಲಮುಂ ಲೀನಮಲ್ತೆ ॥ ೯

ಗುಡಿಗೋಪುರಂಗಳಿಂ ದೀಪಧೂಪಂಗಳಿಂ
ಮಂತ್ರಪುಷ್ಪಂಗಳಿಂ ಪರನೊಲಿಯನೈ ।
ಪ್ರಾಣಿವರ್ಗದೊಳೆಲ್ಲ ಸೋದರತ್ವದಿ ಚರಿಪ
ಧರ್ಮಮಾ ದೇವಂಗೆ ನೈವೇದ್ಯಮೈ ।
ಕರುಣೆಯಿರ್ಪೆಡೆಯೊಳಾತನ ಶಾಂತಿಯಿರ್ಪುದೈ
ಲೋಕೋಪಕಾರಮಾತನ ಪೂಜೆಯೈ ।
ಶೋಕತಪ್ತರನಂಗಹೀನರಂ ದೀನರಂ
ಸಂತೋಷಗೊಳಿಪುದಾತನ ಸೇವೆಯೈ ॥
ಈ ಧರ್ಮತತ್ತ್ವಮಂ ನರರೆಲ್ಲ ತಿಳಿದು ನಡೆಯೆ ।
ದ್ವೇಷಮುಂ ಪಾಪಮುಂ ದುಃಖಮುಂ ದೂರ ತೊಲಗಿ ।
ಪ್ರೀತಿಯುಂ ಪುಣ್ಯಮುಂ ಶಾಂತಿಯುಂ ಸ್ಥಿರದಿ ನೆಲಸಿ ।
ಸ್ವರ್ಗಾಪವರ್ಗಗಳ್‍ ಭೂಮಿಯೊಳೆ ಸಿದ್ಧಿಸುವುವೈ ॥ ೧೦

Tuesday 20 February 2024

ಸರಳರಿಗೆ - ವಸಂತ ಕುಸುಮಾಂಜಲಿ - ಡಿವಿಜಿ

ಸರಳರಿಗೆ - ವಸಂತ ಕುಸುಮಾಂಜಲಿ - ಡಿವಿಜಿ

ಸಂಜೆಯಲಿ ತೆಲೆಯೆತ್ತಿ
ನಿಶಿಯಲ್ಲಿ ಬೆಳೆದು
ಮುಂಜಾವದಲಿ ಬಿರಿದು
ಬಿಸಿಲೇರೆ ಬತ್ತಿ
ತೀರಿಕೊಳ್ಳುವುದು ಬೇಗ, ಕಿರಿಬಾಳು, ನೋಡು;
ಪಾರಿಜಾತವದೇನು, ಅರೆದಿನದ ಪಾಡು.

ನನೆಯಾಗಿ ಹತ್ತುದಿನ
ಅರಳುತೈದುದಿನ
ವನಿತೆಯರ ಹೆರಳಿನಲಿ
ಮೆರೆವುದೇಳುದಿನ;
ಹಲವು ತಲೆಗೊಂದೆ ತಾಳೆಯ ಹೂವು ಸಾಕು;
ಬಲದ ಬದುಕದು, ನೋಡು, ಬಿತ್ತರದ ಜೋಕು.

ಹೆಸರಿಲ್ಲದಲರುಗಳು
ಬೀಳ್ಬಯಲಿನಲ್ಲಿ
ನಸುನಗುತ ನಲಿಯುವುವು
ಬೇಳ್ಪರಿರದಲ್ಲಿ;
ಗರುವಗೌರವವಿನಿಸುಮರಿಯದವುಗಳನು
ಗುರಿ ಮರೆತು ನಿರವಿಸಿದನೋ ವಿರಿಂಚನನು!

ಬಿರಿದಳಿವ ಹೂವೇಕೆ?
ಕಿರಿ ಬಾಳದೇಕೆ?
ಮರೆವಿಗಾಹುತಿಯಪ್ಪ
ಕಿರುಗವಿತೆಯೇಕೆ?
ಎಡೆಯುಂಟು ಸೃಷ್ಟಿತಾಯುದ್ಯಾನದೊಳಗೆ
ಬಡಹೂವು ಬಡಹಾಡು ಬಡಬಾಳುಗಳಿಗೆ.

ಕಲೆ ಚಮತ್ಕಾರಗಳ
ನರಿಯದೀ ಕಂತೆ
ಗೆಳೆಯರಿರ್ವರಿಗೊರ್ಮೆ
ಸರಸ ತೋರ್ದಂತೆ
ಮುಂದೆಯುಂ ಸುಲಭದೊಲಿವರ ಕಾಣಲಹುದೆ?
ಹಿಂದಿನಂದದ ಸರಳಜನರಿನ್ನುಮಿಹರೆ?

ಜುಲೈ ೨೦, ೧೯೫೦

Monday 19 February 2024

ಕೃತಿಪರಿಚಯ/ಹೊಸ ಮುನ್ನುಡಿ/ಮುನ್ನುಡಿ/ವಿಜ್ಞಾಪನೆ - ವಸಂತ ಕುಸುಮಾಂಜಲಿ - ಡಿವಿಜಿ

ಕೃತಿಪರಿಚಯ/ಹೊಸ ಮುನ್ನುಡಿ/ಮುನ್ನುಡಿ/ವಿಜ್ಞಾಪನೆ - ವಸಂತ ಕುಸುಮಾಂಜಲಿ - ಡಿವಿಜಿ

ಕೃತಿಪರಿಚಯ (ಕೃಪೆ - ಪ್ರಜಾವಾಣಿ):

ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ 1922ರಲ್ಲಿ ಪ್ರಕಟಿಸಿದ ಅನನ್ಯ ಕೃತಿ ಡಿ.ವಿ. ಗುಂಡಪ್ಪನವರ "ವಸಂತ ಕುಸುಮಾಂಜಲಿ" ಕವನ ಸಂಕಲನ. ಸಂಘದ ಅಧ್ಯಕ್ಷರಾದ ಬೆಳ್ಳಾವೆ ವೆಂಕಟನಾರಾಯಣಪ್ಪನವರು ಈ ಕೃತಿಯನ್ನು ಪ್ರಕಟಪಡಿಸಿರುವುದರ ಜೊತೆಗೆ ಮುನ್ನುಡಿಯನ್ನೂ ಬರೆದಿದ್ದಾರೆ.

52 ಪುಟಗಳ ಅಷ್ಟಕಿರೀಟಾಕಾರದ ಈ. ಪುಟ್ಟ ಕವನ ಸಂಕಲನ ಇದೇ ಲೇಖಕರ "ನಿವೇದನ" ಕೃತಿಗಿಂತ ಎರಡು ವರ್ಷ ಮೊದಲು ಮುದ್ರಣಗೊಂಡಿದೆ. ಈ ಸಂಕಲನದ ಮೊದಲ ಐದು ಪದ್ಯಗಳು 1911ರ ಹೊತ್ತಿಗೇ ಮುದ್ರಿತವಾಗಿದ್ದವು. 

"ವಸಂತ ಕುಸುಮಾಂಜಲಿ" ಪ್ರಕಟಣೆಯ ಬಗ್ಗೆ ಡಿ.ವಿ.ಜಿ. ಅವರಿಗಿದ್ದ ಅಳುಕು ಗ್ರಂಥಾರಂಭದ ವಿಜ್ಞಾಪನೆಯಲ್ಲಿ ಸ್ಪಷ್ಟವಾಗಿದೆ. ಈ ಬಗೆಯ ಸಂಶಯವು ಬಲವಾಗಿದ್ದರೂ ಕನ್ನಡಿಗರಿಗೆ ಪರಮ ಗೌರವಾರ್ಹರಾದ ಮ ಬೆಳ್ಳಾವೆಯ ವೆಂಕಟನಾರಾಯಣಪ್ಪನವರೂ ಮ ತಳುಕಿನ ವೆಂಕಣ್ಣಯ್ಯನವರೂ, ಹಾಗೆಯೇ ಈ ಪದ್ಯಗಳನ್ನು ಆಗಾಗ ಓದಿದ್ದ ಅಥವಾ ಕೇಳಿದ್ದ ಕಾವ್ಯಜ್ಞರಾದ ಇತರ ಕೆಲ ಮಿತ್ರರೂ ಈ ಪದ್ಯಸಮುಚ್ಛಯವು ಪ್ರಕಟನೆಗೆ
ಅರ್ಹವಾಗಿದೆಯೆಂದು ಲೇಖಕನಿಗೆ ಭರವಸೆ ಹೇಳಿ, ಇದು ಪ್ರಕಟವಾಗಲೇಬೇಕೆಂದು ನಿಶ್ಚಯಿಸಿದರು.   

ತೋಟದಲ್ಲಿ ಎತ್ತರವಾದ ಮರಗಳೂ ಬಹುದೂರ ಹಬ್ಬಿರುವ ಬಳ್ಳಿಗಳೂ ಇದ್ದರೂ ನೆಲವನ್ನೇ ಅವಲಂಬಿಸಿಕೊಂಡಿರುವ ಬಡ ಹುಲ್ಲೂ ಇರುವಂತೆ ಸಾಹಿತ್ಯವನದಲ್ಲಿ ಮಹಾಕಾವ್ಯಗಳೂ ಉದ್ದಾಮ ಗ್ರಂಥಗಳೂ ಇದ್ದರೂ ಇಂತಹ ಅಲ್ಪಕೃತಿಗಳೂ ಇರಬಹುದಲ್ಲವೆ? ಎಂದು ಡಿ.ವಿ.ಜಿ. ಹೇಳಿದ್ದಾರೆ. 

ತಮ್ಮ ಭಾಷಾ ರಚನೆಯ ವಿನ್ಯಾಸಗಳು ಕವಿತೆಗಳಲ್ಲವೇನೋ ಎಂಬ ಸಂಶಯ ಡಿ.ವಿ.ಜಿ. ಅವರಿಗೆ ಯಾವಾಗಲೂ ಇದ್ದೇ ಇತ್ತು. ಒಂದು ಪತ್ರದಲ್ಲಿ ಅವರು, "ಕನ್ನಡ ಸಾಹಿತ್ಯದಲ್ಲಿ ನಾನು ಮಾಡಿರುವುದು ತೇಪೆ ಹಾಕುವ ಕೆಲಸ" ಎಂದು ಬರೆದಿದ್ದಾರೆ. ಇದರ ಜೊತೆಗೆ, `ಉತ್ತಮ ಕವಿತ್ವಕ್ಕಿರಬೇಕಾದ ಲಕ್ಷಣಗಳು ಅವುಗಳಲ್ಲಿಲ್ಲದೆ ಇರಬಹುದು; ಅವಿದ್ವತ್ಕವಿತೆಯ ದೋಷಗಳು ಹೇರಳವಾಗಿರಬಹುದು~ ಎಂದೂ ಸಂದೇಹಿಸಿದ್ದಾರೆ.

ಇದು ಅವರ ವಿನಮ್ರತೆಗೆ ಉದಾಹರಣೆಯಷ್ಟೇ. ಈ ಸಂದರ್ಭದಲ್ಲಿ, ಕುವೆಂಪು ಅವರು ತಮ್ಮ "ಆಧುನಿಕ ಕನ್ನಡ ವಾಙ್ಮಯ"  ಎಂಬ ಲೇಖನದಲ್ಲಿ ಡಿ.ವಿ.ಜಿ. ಅವರ ಕಾವ್ಯವನ್ನು ಕುರಿತು ಕನ್ನಡ ಕಬ್ಬವೆಣ್ಣು ಸನಾತನ ಮತ್ತು ನೂತನಗಳ ಮಧ್ಯೆ ಹೊಸ್ತಿಲ ಮೇಲೆ ನಿಂತಂತಿದೆ. ಅನೇಕ ಪದ್ಯಗಳು ವೃತ್ತಕಂದ ರೂಪವಾಗಿವೆ. 

ಆತ್ಮವು ನೂತನವಾದರೂ ವೇಷವು ಪುರಾತನವಾದುದು ಎಂದು ಹೇಳುವ ಮಾತುಗಳನ್ನು ಗಮನಿಸಬಹುದು.ಬೆಳ್ಳಾವೆ ವೆಂಕಟನಾರಾಯಣಪ್ಪನವರು 'ವಸಂತ ಕುಸುಮಾಂಜಲಿ'ಗೆ ಬರೆದ ಮುನ್ನುಡಿಯಲ್ಲಿ- ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಜೀವನ ತತ್ವಾಲೋಚನೆಯೂ ಎರಡನೆಯದರಲ್ಲಿ ಆಧುನಿಕ ಭಾರತೀಯ ಮಹಾಪುರುಷ ವಿಷಯಕವಾದ ಕವಿತೆಗಳೂ ಇವೆ.
 
ಮೊದಲನೆಯ ಭಾಗವು ಉತ್ತಮವಾದ ಜೀವನಕ್ರಮದ ಸ್ವರೂಪವನ್ನು ತೋರಿಸುತ್ತದೆ. ಲೋಕಸೇವೆಯೇ ಮಾನವನ ಪರಮಧರ್ಮವೆಂಬ ನೀತಿಯು ಅದರಲ್ಲಿ ಪ್ರತಿಪಾದಿತವಾಗಿದೆ. ಈ ನೀತಿಯನ್ನು ನಡೆವಳಿಕೆಯಲ್ಲಿ ತೋರಿಸಿರುವ ಆಧುನಿಕ ಭಾರತೀಯ ಮಹಾಪುರುಷರ ಗುಣವಿಶೇಷಗಳು ದ್ವಿತೀಯ ಭಾಗದಲ್ಲಿ ಸೂಚಿತವಾಗಿವೆ ಎಂದು ವಿವರಿಸಿದ್ದಾರೆ.

ವ್ಹಿಟ್ಟಿಯರ್ ಕವಿ, ಶ್ರೀ ರಾಮಕೃಷ್ಣ ಪರಮಹಂಸರು, ರಾಜಾರಾಮ ಮೋಹನರಾಯರು, ದಾದಾಭಾಯಿ ನವರೋಜಿ, ಗೋಪಾಲಕೃಷ್ಣ ಗೋಖಲೆ, ವಿವೇಕಾನಂದ, ಬಾಲಗಂಗಾಧರ ತಿಲಕರು, ಕವಿ ರವೀಂದ್ರರು, ವಿಜ್ಞಾನಿ ಜಗದೀಶ ಚಂದ್ರ ಬೋಸ್, ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು, ಮಹಾತ್ಮ ಗಾಂಧಿ ಮತ್ತು ಮಹಾರಾಜ ಶ್ರೀಕೃಷ್ಣರಾಜೇಂದ್ರ ಒಡೆಯರ್ ಅವರುಗಳ ಚಿತ್ರಗಳ ಜೊತೆಗೆ ದಾದಾಭಾಯಿ ನವರೋಜಿಯವರ ಹಸ್ತಾಕ್ಷರದ ಚಿತ್ರವನ್ನೂ ನೀಡಿರುವುದು `ವಸಂತ ಕುಸುಮಾಂಜಲಿ~ ಸಂಕಲನದ ಒಂದು ವಿಶೇಷ.

`ವಸಂತ ಕುಸುಮಾಂಜಲಿ~ಯಲ್ಲಿ ಕಂದ ಪದ್ಯ, ಹಲವು ಬಗೆಯ ವೃತ್ತಗಳು, ಷಟ್ಪದಿಗಳು ಹಾಗೂ ಸೀಸಪದ್ಯಗಳಿವೆ. ಅದರಲ್ಲಿಯೂ ಸೀಸಪದ್ಯಗಳನ್ನು ವಿಶೇಷವಾಗಿ ಬಳಸಲಾಗಿದೆ. ಸೀಸಪದ್ಯ ಇಂಗ್ಲಿಷಿನ ಸಾನೆಟ್‌ಗೆ ಹತ್ತಿರವಾದ ಛಂದೋರೂಪ. ಸಾನೆಟ್ ಹದಿನಾಲ್ಕು ಸಾಲಿನ ಪದ್ಯವಾದರೆ ಸೀಸಪದ್ಯ 12 ಸಾಲಿನ ಪದ್ಯದ ಕಟ್ಟು ಮತ್ತು ಇದು ಶುದ್ಧ ದ್ರಾವಿಡ ಛಂದೋರೂಪ. ಇದರಲ್ಲಿ ಒಂದು ಅಷ್ಟಪದಿಯೂ ಮತ್ತು ಒಂದು ಚೌಪದಿಯೂ ಇರುತ್ತದೆ. ಸಾನೆಟ್ ಕನ್ನಡದಲ್ಲಿ ಅಷ್ಟು ಹೊತ್ತಿಗಾಗಲೇ (1916) ಗೋವಿಂದ ಪೈ ಅವರ `ಕವಿತಾವತಾರ~ದ ಮೂಲಕ ಅವತಾರವಾಗಿಬಿಟ್ಟಿತ್ತು. 

ಈ ಸಂಕಲನದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಜೀವಗೀತೆ, ಆತ್ಮಗೀತೆ, ಸರ್ವಮತ ಸಿದ್ಧಾಂತ, ದೇವರೆಲ್ಲಿ?, ಮತ್ತು ಬೇಡಿಕೆ ಎಂಬ ಐದು ಪದ್ಯಗಳಿವೆ. ಜೀವಗೀತೆಯು ವ್ಹಿಟ್ಟಿಯರ್ ಕವಿಯ `ಮೈ ಸೋಲ್ ಅಂಡ್ ಐ~ ಎಂಬ ಕವಿತೆಯ ಅನುವಾದ. ಆತ್ಮಗೀತೆಯು ವಾಲ್ಟ್ ವ್ಹಿಟ್‌ಮನ್ನನ `ಸಾಂಗ್ ಆಫ್ ಮೈ-ಸೆಲ್ಫ್~ ಎಂಬ ಕವಿತೆಯ ಅನುವಾದ. 
ಎರಡನೆಯ ಭಾಗದಲ್ಲಿ ಆ ಕಾಲಕ್ಕೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಹಿರಿಯ ಚೇತನಗಳಾದ ರಾಮಕೃಷ್ಣ ಪರಮಹಂಸ, ಗಾಂಧಿ, ಜಗದೀಶ್‌ಚಂದ್ರ ಬೋಸ್, ಟ್ಯಾಗೋರ್ ಮುಂತಾದ ಮಹಾಪುರುಷರನ್ನು ಕುರಿತ ವ್ಯಕ್ತಿಚಿತ್ರ ಗೀತಗಳಿವೆ.

ಹೊಸ ಮುನ್ನುಡಿ:

ಈ ಕವನಸಂಗ್ರಹಕ್ಕೆ “ವಸಂತ ಕುಸುಮಾಂಜಲಿ” ಎಂದು ಹೆಸರು ಕೊಟ್ಟವರು ಶ್ರೀ ಟಿ.ಎಸ್‍. ವೆಂಕಣ್ಣಯ್ಯನವರು.

ವಿಷಯದಲ್ಲಿಯೂ ಶೈಲಿಯಲ್ಲಿಯೂ ಈ ಕವನಗಳು ಕನ್ನಡಪ್ರಪಂಚಕ್ಕೆ ಆಗ ಬರಲಿದ್ದಂತೆ ತೋರಿದ ಹೊಸ ವಸಂತಕಾಲದ ಮೊದಲ ಗುರುತಿನ ಮೊಗ್ಗುಗಳಂಥವು ಎಂಬುದು ಅವರ ಭಾವನೆ. ಅದು ಸ್ನೇಹಾಭಿಮಾನದ ಕಲ್ಪನೆ ಎಂದು ನನ್ನ ಮನಸ್ಸಿಗೆ ಆಗಲೂ ತೋರಿತ್ತು.

ಆಂದಿನಿಂದ ಇದುವರೆಗಿನ ಸುಮಾರು ೩೦ ವರ್ಷಗಳಲ್ಲಿ ಕನ್ನಡ ಹೊಸತನವನ್ನು ಸಂಪಾದಿಸಿಕೊಂಡಿರುವುದು ಈಗ ಚೆನ್ನಾಗಿ ಕಾಣುತ್ತಿದೆ. ಗ್ರಂಥದ ವಿಷಯ, ಶಬ್ದಸಾಮಗ್ರಿ, ವಾಕ್ಯರಚನೆಯ ರೀತಿ, ಪ್ರತಿಪಾದನಕ್ರಮ–ಇವೆಲ್ಲ ಹೊಸದಾಗುತ್ತಿವೆ. ಭಾಷೆಗೆ ಬಂದಿದ್ದ ಪೆಡಸುತನ, –ಅದರ ಎರಕದಚ್ಚಿನ ಸರಿತನ, –ಅದರ ಮರಮುಟ್ಟಿನ ಒಣ ಅಚ್ಚುಕಟ್ಟು–ಈಗ ಸಡಿಲವಾಗಿ, ಅದಕ್ಕೆ ಜೀವಂತಾಂಗದ ಮೃದುತೆ ನಯನಮ್ಯತೆಗಳು ಬರುತ್ತಿವೆ. ಇಂಗ್ಲಿಷ್‍ ಮೊದಲಾದ ಇತರ ವ್ಯಾವಹಾರಿಕ ಭಾಷೆಗಳ ಧೋರಣೆಯ ಅನುಕರಣೆ ಕನ್ನಡ ಸಾಹಿತ್ಯದಲ್ಲಿ ಆಗುತ್ತಿದೆ. ಹೀಗೆ ಶ್ರೀಮಾನ್‍ ವೆಂಕಣ್ಣಯ್ಯನವರ ಭವಿಷ್ಯದ್ದೃಷ್ಟಿ ಈಗ ಫಲಕ್ಕೆ ಬರುತ್ತಿದೆಯೆಂದು ಹೇಳಬಹುದಾಗಿದೆ. (ಅದು ಈ ಕೃತಿಗಳ ಪ್ರಭಾವವೆಂದು ಲೇಖಕನು ಎಷ್ಟುಮಾತ್ರವೂ ಎಣಿಸಿಕೊಂಡಿಲ್ಲವೆಂಬುದನ್ನು ಹೇಳಬೇಕಾದದ್ದಿಲ್ಲವಷ್ಟೆ?) ಈ ನವೋದಯಕ್ಕೆ ಕಾರಣ ಕಾಲಗರ್ಭದಲ್ಲಿ ಅಡಗಿಕೊಂಡಿರುವ ಮಾನವ ಪ್ರಗತಿ ಬೀಜ. ಆಗಿಂದಾಗಿಗೆ ಹೊಸಹೊಸದಾಗುತ್ತಿರುವುದು ಪ್ರಪಂಚದ ಎಲ್ಲ ಜೈವ ವಸ್ತುಗಳಿಗೂ ಸ್ವಭಾವಸಿದ್ಧವಾಗಿರುವ ಲಕ್ಷಣ. ಅದು ಭಾಷೆಸಾಹಿತ್ಯಗಳಿಗೂ ಉಂಟು.

ಪ್ರಕೃತ, ಈ ಮುದ್ರಣದಲ್ಲಿ ಕೆಲವುಕಡೆ ಕೊಂಚ ಕೊಂಚ ತಿದ್ದುಪಡಿಗಳಾಗಿರುವುದಲ್ಲದೆ ಮೂರು ತುಣಕುಗಳು ಹೊಸದಾಗಿ ಸೇರಿವೆ. ಇವುಗಳಲ್ಲಿ ಒಂದು ಬಹುಶಃ ಇಪ್ಪತ್ತೈದು ವರ್ಷಗಳಷ್ಟು ಹಳೆಯದು.

ಏಪ್ರಿಲ್‍, ೧೯೫೧
ಡಿ.ವಿ.ಜಿ.

ಮುನ್ನುಡಿ:

ಉತ್ತಮವಾದ ಚಿಕ್ಕ ಗ್ರಂಥವೊಂದನ್ನು “ಪ್ರಬುದ್ಧ ಕರ್ಣಾಟಕದ” ಚಂದಾದಾರರಿಗೂ ಪೋಷಕರಿಗೂ ಸಂಘದ ಕೃತಜ್ಞತಾ ಸೂಚಕವಾಗಿ ಅರ್ಪಿಸಬೇಕೆಂದು ಸಂಕಲ್ಪಿಸಿ ಈ ಗ್ರಂಥವನ್ನು ಪ್ರಕಟಿಸಿರುವೆವು.

ಈ ಪುಸ್ತಕದಲ್ಲಿ ಎರಡು ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಜೀವನ ತತ್ತ್ವಾಲೋಚನೆಯೂ ಎರಡನೆಯದರಲ್ಲಿ ಆಧುನಿಕ ಭಾರತೀಯ ಮಹಾಪುರುಷ ವಿಷಯಕವಾದ ಕವಿತೆಗಳೂ ಇವೆ. ಈ ಪುಸ್ತಕಕ್ಕೆ ವಸಂತ ಕುಸುಮಾಂಜಲಿ ಎಂಬ ಹೆಸರನ್ನಿಟ್ಟು ಪ್ರಕಟಿಸಿದ್ದೇವೆ. ಮೊದಲನೆಯ ಭಾಗವು ಉತ್ತಮವಾದ ಜೀವನಕ್ರಮದ ಸ್ವರೂಪವನ್ನು ತೋರಿಸುತ್ತದೆ. ಲೋಕಸೇವೆಯೇ ಮಾನವನ ಪರಮಧರ್ಮವೆಂಬ ನೀತಿಯು ಅದರಲ್ಲಿ ಪ್ರತಿಪಾದಿತವಾಗಿದೆ. ಈ ನೀತಿಯನ್ನು ನಡೆವಳಿಕೆಯಲ್ಲಿ ತೋರಿಸಿರುವ ಆಧುನಿಕ ಭಾರತೀಯ ಮಹಾಪುರುಷರ ಗುಣ ವಿಶೇಷಗಳು ದ್ವಿತೀಯ ಭಾಗದಲ್ಲಿ ಸೂಚಿತವಾಗಿವೆ.

ಪರೋಪಕಾರ ಧರ್ಮವು ನಮ್ಮ ದೇಶಕ್ಕೆ ಹೊಸದಲ್ಲವಾದರೂ ಅದಕ್ಕೆ ಸಮಾಜೋಪಯುಕ್ತವಾದ ರೂಪವನ್ನು ಕೊಡುವ ವಾಡಿಕೆಯು ಈಚೀಚಿಗೆ ಕಡಿಮೆಯಾಗುತ್ತ ಬಂದಿದೆ. ಒಂದು ದೇಶದ ಜನರು ಸಚೇತನರಾಗಿರುವರೆಂಬುದಕ್ಕೆ ಅವರ ಸಮಾಜಸೇವಾ ನಿಷ್ಠೆಯೇ ದೊಡ್ಡ ಗುರುತು. ಈ ವಿಷಯವನ್ನು ನಮ್ಮ ವಾಚಕರು ಗಮನಕ್ಕೆ ತಂದುಕೊಂಡು ಈ ನಮ್ಮ ಕಾಣಿಕೆಯನ್ನು ಆದರದಿಂದ ಪರಿಗ್ರಹಿಸುವರೆಂದು ದೃಢವಾಗಿ ನಂಬಿದ್ದೇವೆ.

ಬೆಳ್ಳಾವೆ ವೆಂಕಟನಾರಾಯಣಪ್ಪ
ಅಧ್ಯಕ್ಷಕರ್ಣಾಟಕ ಸಂಘ, ಸೆಂಟ್ರಲ್‍ ಕಾಲೇಜು

ವಿಜ್ಞಾಪನೆ:

ಈ ಸಣ್ಣ ಪುಸ್ತಕದ ಮೊದಲನೆಯ ಭಾಗದಲ್ಲಿರುವ ಪದ್ಯಗಳು ಹತ್ತು ವರ್ಷಗಳ ಹಿಂದೆ (ಸುಮಾರು ೧೯೧೧) ಮುದ್ರಿತವಾಗಿದ್ದವು. ಅಲ್ಲಿಂದೀಚೆಗೆ ತನ್ನ ವಯಸ್ಸು ಹೆಚ್ಚಿದಂತೆ ಲೇಖಕನಿಗೆ ಅವುಗಳ ಗುಣ ವಿಷಯದಲ್ಲಿ ಸಂದೇಹವೂ ಹೆಚ್ಚುತ್ತ ಬಂತು.

ಎರಡನೆಯ ಭಾಗದಲ್ಲಿರುವ ಪದ್ಯಗಳು ಬಹುಶಃ ಕಳೆದ ಆರೇಳು ವರ್ಷಗಳಲ್ಲಿ ಆಗಾಗ ಲಿಖಿತವಾದುವು. ಇಂತಹ ಪ್ರಾಸ್ತಾವಿಕ ಪದ್ಯಗಳಲ್ಲಿರಬಹುದಾದ ಗುಣಲೇಶವು ಸಾಮಾನ್ಯವಾಗಿ ಬಹುಕಾಲ ನಿಲ್ಲತಕ್ಕುದಲ್ಲವೆಂದು ಅನೇಕರು ಹೇಳುವರು.

ಹೀಗಿರಲಾಗಿ, ಈ ಪದ್ಯಗಳನ್ನು ಪುನಃ ಗ್ರಂಥರೂಪದಲ್ಲಿ ಪ್ರಕಟಗೊಳಿಸಬೇಕೆಂಬ ಆಸೆಯು ಲೇಖಕನಿಗೆ ಅಷ್ಟೇನೂ ತೀವ್ರವಾಗಿರಲಿಲ್ಲ. ಉತ್ತಮ ಕವಿತ್ವಕ್ಕಿರಬೇಕಾದ ಲಕ್ಷಣಗಳು ಅವುಗಳಲ್ಲಿಲ್ಲದೆ ಇರಬಹುದು; ಅವಿದ್ವತ್ಕವಿತೆಯ ದೋಷಗಳು ಹೇರಳವಾಗಿರಬಹುದು.

ಈ ಬಗೆಯ ಸಂಶಯವು ಬಲವಾಗಿದ್ದರೂ ಕನ್ನಡಿಗರಿಗೆ ಪರಮ ಗೌರವಾರ್ಹರಾದ ಮ ॥ ಬೆಳ್ಳಾವೆಯ ವೆಂಕಟನಾರಾಯಣಪ್ಪನವರೂ ಮ ॥ ತಳಕಿನ ವೆಂಕಣ್ಣಯ್ಯನವರೂ, ಹಾಗೆಯೇ ಈ ಪದ್ಯಗಳನ್ನು ಆಗಾಗ ಓದಿದ್ದ ಅಥವಾ ಕೇಳಿದ್ದ ಕಾವ್ಯಜ್ಞರಾದ ಇತರ ಕೆಲಮಂದಿ ಮಿತ್ರರೂ ಈ ಪದ್ಯ ಸಮುಚ್ಚಯವು ಪ್ರಕಟನೆಗೆ ಅರ್ಹವಾಗಿದೆಯೆಂದು ಲೇಖಕನಿಗೆ ಭರವಸೆ ಹೇಳಿ, ಇದು ಪ್ರಕಟವಾಗಲೇಬೇಕೆಂದು ನಿಶ್ಚಯಿಸಿದರು.

ತೋಟದಲ್ಲಿ ಎತ್ತರವಾದ ಮರಗಳೂ ಬಹುದೂರ ಹಬ್ಬಿರುವ ಬಳ್ಳಿಗಳೂ ಇದ್ದರೂ ನೆಲವನ್ನೇ ಅವಲಂಬಿಸಿಕೊಂಡಿರುವ ಬಡ ಹುಲ್ಲೂ ಇರುವಂತೆ ಸಾಹಿತ್ಯ ವನದಲ್ಲಿ ಮಹಾಕಾವ್ಯಗಳೂ ಉದ್ದಾಮ ಗ್ರಂಥಗಳೂ ಇದ್ದರೂ ಇಂತಹ ಅಲ್ಪ ಕೃತಿಗಳೂ ಇರಬಹುದಲ್ಲವೆ?

ಮಾರ್ಚಿ, ೧೯೨೨
ಡಿ.ವಿ.ಜಿ.

Sunday 18 February 2024

ಅರೆಮೂಕ - ಹಾಡುಗಳು - ನಿವೇದನ - ಡಿವಿಜಿ

ಅರೆಮೂಕ - ಹಾಡುಗಳು - ನಿವೇದನ - ಡಿವಿಜಿ
(ರೀತಿಗೌಳ ರಾಗ) 

ಅರೆಮೂಕನಾಗಿಹೆನು । 
ಕರೆಕರೆಯ ಪಡುತಿಹೆನು । 
ಒರೆಯಲರಿಯೆ–ನುಡಿವ ಪರಿಯನರಿಯೆ ॥ 

ಮನವಿಹುದು ತವಕದಲಿ । 
ಪನಿಯಿಹುದು ಕಣ್ಗಳಲಿ । 
ಮಾತನರಿಯೆ-ಪೇಳ್ವ ರೀತಿಯರಿಯೆ ॥ 

ಜೀವನವು ಕುಂದಿಹುದು । 
ಆವುದೋ ಬೇಕಿಹುದು । 
ಪೇಳಲರಿಯೆ–ನುಡಿದು ಕೇಳಲರಿಯೆ ॥ 

ಅಳಲಿನಲಿ ಮೊರೆಯಿಡಲು । 
ನಲವಿನಲಿ ನುತಿಕುಡಲು ನುಡಿಯ । 
ನುಡಿಯ ತಿಳಿಯೆ–ಬಾಯ ಬಿಡಲು ತಿಳಿಯೆ ॥ 

ಶಿರವೆತ್ತಿ ನೋಡುವೆನು । 
ಕರವೆತ್ತಿ ಜೋಡಿಪೆನು । 
ಬೇಡಲರಿಯೆ–ಪದದಿ ಪಾಡಲರಿಯೆ ॥

Saturday 17 February 2024

ದಾರಿಗರ ಹಾಡು- ಹಾಡುಗಳು - ನಿವೇದನ - ಡಿವಿಜಿ

ದಾರಿಗರ ಹಾಡು- ಹಾಡುಗಳು - ನಿವೇದನ - ಡಿವಿಜಿ

(ಮೋಹನ ರಾಗ)

ದಾರಿಹೋಕರು ನಾವು-ಊರ ತೊಡಕಿಗೆ ನಮ್ಮ ।
ಸೇರಿಸದೆ ಬಿಡಿರಿ ಸಖರೇ ॥ ಪ ॥

ದೂರದಿಂದಲಿ ಬಂದು–ಊರ ಸತ್ರದಿ ನಿಂದು । 
ಸಾರುವೆವು ಮುಂದಕಿಂದು-ಸಖರೇ ॥ ಅ–ಪ ॥ 

ಗುರುಗಳಾಣತಿಯಂತೆ ಚರಿಸುತಿರುವರು ನಾವು । 
ಇರಲಾಗದೆರಡುದಿನಮೊಂದೆಡೆಯೊಳಂ ॥ 
ಕೊರತೆ ಕನಲಿಕೆಗಳನು ಮರೆಯಿಪೆಮ್ಮಯ ಬಗೆಯ । 
ನೊರೆವೆವದನಾಲಿಪುದು ನೀಂ–ಸಖರೇ ॥ ೧ ॥ 

ಹೊರಟು ಮುಂಬೆಳಗಿನಲಿ ಶಿರದಿ ಭಾರವ ತಳೆದು । 
ಬಿರುಗಾಳಿ ಬೀಸುತಿರೆ ಭರದಿಂದ ನಡೆದು ॥ 
ತರುಣಿಯೊಲುಮೆಯ ಪಡೆದು ಹರುಷದಿಂ ಮುಂಬರಿದು । 
ತೊರೆಯೊಂದ ಕಂಡೆವತ್ತ–ಸಖರೇ ॥ ೨ ॥ 

ತೊರೆಯ ನೀರೊಳು ಮಿಂದು ಮರದ ನೆರಳಲಿ ಕುಳಿತು । 
ಶಿರದ ಬುತ್ತಿಯ ತಂಗಳೂಟವುಂಡು ॥ 
ಬಳಿಯ ತರುಗಳ ಬಳಸಿ ದೊರೆತ ಫಲಗಳ ಭುಜಿಸಿ । 
ಬಳಲಿ ಮಲಗಿದೆವತ್ತಲೇ–ಸಖರೇ ॥ ೩ ॥ 

ಖಗಕುಲದ ಕಲರವಂ ಬಗೆಬಗೆಯ ಪರಿಮಳಂ । 
ಮಿಗೆ ಸಂತಸವ ಸೂಸೆ ಮೈಯ ಮರೆತು ॥ 
ಸೊಗದಿ ನಿದ್ರಿಸಿ ಬಳಿಕಲೆಚ್ಚತ್ತು ನೀರ್ಗುಡಿದು । 
ಮಗುಳೆ ನಡೆದೆವು ಮುಂದಕೆ–ಸಖರೇ ॥ ೪ ॥ 

ತೆರಳಿ ಮುಂದಕೆ ಮುನ್ನ ಕರುಣಿಸಿದ ದಿನಪತಿಯ । 
ಕಿರಣಗಳು ಕನಲಿ ಬೇಯಿಸೆ ನಮ್ಮ ತನುವ ॥ 
ಮರದ ನೆರಳನು ಬಯಸಿ ಮುಗಿಲ ರಾಶಿಯನರಸಿ । 
ನಿರುಕಿಸಿದೆವಾಗಸವನು–ಸಖರೇ ॥ ೫ ॥ 

ಮುಗಿಲು ತಾನೊಂದೊಗೆದು ತಂಬೆಲರುಗಳನೆಸೆದು । 
ಗಗನವೆಲ್ಲವ ಕವಿಯೆ ನಲಿದು ನಡೆದು ॥ 
ಮಿಂಚೆಸೆದು ಸಿಡಿಲಿರಿದು ಮಳೆಗರೆಯೆ ನಾವಾಗ । 
ನಡನಡುಗೆ ನಡೆನಡೆದೆವೈ–ಸಖರೇ ॥ ೬ ॥ 

ನಡೆದು ಬಂದೀಯೂರ ಗುಡಿಯ ಸತ್ರವ ಸೇರಿ । 
ಬಡದಾರಿಗರ ಹಲವರನು ಕಂಡೆವು ॥ 
ಕೂಡಿ ನಾವವರೊಡನೆ ಪಾಡಿ ಸುದ್ದಿಗಳಾಡಿ । 
ಬಿಡುವೆವಿಲ್ಲಿಯೆ ನಿಶಿಯನು–ಸಖರೇ ॥ ೭ ॥ 

ಹೊರಟು ನಾವಿಲ್ಲಿಂದಲರುಣೋದಯದಿ ಮರಳಿ । 
ಭರದಿಂದ ಕಾಲಿಡುತ ಮರೆತು ಬಳಲಿಕೆಯ ॥ 
ಪರಿಪರಿಯ ನೋಟಗಳ ನೋಡಿ ರಾಗದಿ ಪಾಡಿ । 
ಸರಿವೆವಿನ್ನೊಂದೂರಿಗೈ–ಸಖರೇ ॥ ೮ ॥ 

ಪಯಣವನು ನಾವಿಂತು ಗೈಯುತಿಹೆವನುದಿನವು । 
ಬಯಕೆಗಳು ನಿಲವೆಮ್ಮೊಳರೆಗಳಿಗೆಯುಂ ॥ 
ಭಯವನರಿಯೆವು ಸಾಹಸಕ್ಕೆ ತೊಡಗೆವು ನಿಮ್ಮ । 
ದಯೆಯೊಂದೆ ಸಾಕು ನಮಗೈ–ಸಖರೇ ॥ ೯ ॥ 

ಊರುಗಳ ಸುತ್ತಿಹೆವು ಕೇರಿಗಳ ತಿರುಗಿಹೆವು । 
ಊರಿಗರ ಜಪ ತಪಂಗಳನರಿತೆವು ॥ 
ಊರಿನಲ್ಲಿರುವೆಲ್ಲುದಾರತೆಯ ಸವಿದಿಹೆವು । 
ಊರು ಸಾಕಿನ್ನು ನಮಗೈ–ಸಖರೇ ॥ ೧೦ ॥ 

ಅಳುವವರ ಕಂಡಿಹೆವು ನಗುವವರ ಕಂಡಿಹೆವು । 
ಕಂಡಿರುವೆವಳುಕಿಪರನಳುಕದರನು ॥ 
ದುರುಳರನು ಕಂಡಿಹೆವು ಮರುಳರನು ಕಂಡಿಹೆವು । 
ಕಂಡಿಹೆವು ಬಲ್ಲವರನು-ಸಖರೇ ॥ ೧೧ ॥ 

ನೋಡಿಹುದೆ ಸಾಕು ನಿನ್ಮೋಡಾಟಗಳನಿನ್ನು । 
ಗೂಡ ಸೇರುವ ಹಕ್ಕಿಯಂತೆ ನಾವು ॥ 
ಸಾರಿ ಮುಂದಕೆ ಜವದಿ ಸೇರಿ ನಮ್ಮಾಲಯವ । 
ಭಾರಗಳನಿಳುಹಬೇಕೈ–ಸಖರೇ ॥ ೧೨ ॥ 

ಹಳ್ಳಗಳ ಮುಚ್ಚುತ್ತ ಮುಳ್ಳುಗಳ ಬಿಸುಡುತ್ತ । 
ಒಳ್ಳೆದಾರಿಯ ತೋರಿ ಯಾತ್ರಿಕರಿಗೆ ॥ 
ಒಳ್ಳೊಳ್ಳೆ ಕಥೆಗಳನು ಪೇಳುತ್ತ ಕೇಳುತ್ತ । 
ತಳ್ಳುವೆವು ಚಿಂತೆಗಳನು–ಸಖರೇ ॥ ೧೩ ॥ 

ಇಂತೆಸಗಬೇಕೆಂಬ ಹಟದ ಬಂಧನವಿಲ್ಲ । 
ಪಂಥವಿದು ಕಡಿದೆಂಬ ಭೀತಿಯಿಲ್ಲ ॥ 
ಅಂತರಂಗದೊಳು ನಾವಾಂತು ಗುರುಗಳ ಪದವ । 
ಸಂತಸಿಪೆವವರ ನುಡಿಯಿಂ–ಸಖರೇ ॥ ೧೪ ॥ 

ಬಿದಿಯಣಕಿಪುದ ಕಂಡು ಹೆದರುವರು ನಾವಲ್ಲ । 
ಎದುರುಗೊಳ್ಳುವೆವದನು ವಿನಯದಿಂದೆ ॥ 
ಎದೆಯೊಳಿಹುದೆಮಗೊಂದು ಸುಧೆಯ ಸಾರದ ಬಿಂದು । 
ಅದ ಸವಿಯುತಳುಕದಿಹೆವೈ–ಸಖರೇ ॥ ೧೫ ॥ 

ಕಂಡುಕಂಡುದನೆಲ್ಲ ಬೇಡುವರು ನಾವಲ್ಲ । 
ಉಂಡು ಸುಖಿಪೆವು ಕೈಗೆ ಬಂದ ಫಲವ । 
ಎಮ್ಮ ಸುಖವೆಮಗಿಹುದು ನಿಮ್ಮ ದುಗುಡವು ನಿಮಗೆ । 
ನಿಮ್ಮೂರು ನಮಗೆ ಸಾಕೈ–ಸಖರೇ ॥ ೧೬ ॥

Friday 16 February 2024

ಸ್ವಾತಂತ್ರ್ಯವೇಕೆ?- ಹಾಡುಗಳು - ನಿವೇದನ - ಡಿವಿಜಿ

ಸ್ವಾತಂತ್ರ್ಯವೇಕೆ?- ಹಾಡುಗಳು - ನಿವೇದನ - ಡಿವಿಜಿ

(ಸಾವೇರಿ ರಾಗ)

ಸ್ವಾತಂತ್ರ್ಯವನು ದೇವ ಏತಕೆನಗಿತ್ತೆ ಅದು ।
ನೀತಿಯಿಂದೆನ್ನ ಬೀಳಿಪ ಯುಕುತಿಯೇನೈ ॥ ಪ ॥

ಚೈತನ್ಯಕಾದಿಕಾರಣನೆ ನೀನಿರಲೆನ್ನ ।
ಚೇತಸದ ಸಾಸಂಗಳೆಲ್ಲ ಬರಿದಾಯಸವು ॥ ಅ–ಪ ॥

ಶುಕಪಿಕಂಗಳಿಗೆ ನೀನತಿಮತಿಯನೀಯದಿರೆ ।
ನಲಿದು ನುಣ್ಚರದೊಳವು ಪಾಡಿ ಸುಳಿದಾಡಿ ।
ನಿನ್ನ ನಿಂದಿಸವೆ ಮೇಣನ್ಯರನು ಕುಂದಿಸದೆ ।
ನಿನ್ನ ರಚನೆಯ ಸೊಬಗ ತೋರ್ಪ ಹರುಷದೊಳಿರಲು ॥ ೧ ॥

ತರುಲತೆಗಳರಿವಿನೊಳು ನರನಿಗೆಣೆಯಿರದೊಡಂ ।
ನಿನ್ನಾಣತಿಯನರಿದು ದುಗುಡಬಡದೆ ।
ಫಲ ಪುಷ್ಪಗಳ ತಳೆದು ಪರಹಿತವನೆಸಗುತಲಿ ।
ನಿನ್ನೊಲವು ಜಾಣ್ಮೆಗಳ ತೋರ್ಪ ಹರುಷದೊಳಿರಲು ॥ ೨ ॥

*****************

ತರಣಿಶಶಿಪಥಗಳನು, ಧರೆವರುಣಗತಿಗಳನು ।
ಮರುದಗ್ನಿವೇಗಗಳ ನಿಯಮಿಸಿಹ ದಕ್ಷನ್ ॥
ನರನರಸಿಕೊಳಲಿ ದಾರಿಯ ತನಗೆ ತಾನೆಂದು ।
ತೊರೆದನೇತಕೆ ನಮ್ಮ? - ಮಂಕುತಿಮ್ಮ ॥ ೫೩೭ ॥

Thursday 15 February 2024

ನಿನ್ನ ನಾಟಕ - ಹಾಡುಗಳು - ನಿವೇದನ - ಡಿವಿಜಿ

ನಿನ್ನ ನಾಟಕ - ಹಾಡುಗಳು - ನಿವೇದನ - ಡಿವಿಜಿ

(ಮಧ್ಯಮಾವತಿ ರಾಗ)

ನಿನ್ನ ನಾಟಕ ಚಿತ್ರವೋ–ಜೀವಾಧಾರ–ಎನ್ನ ನಾಟಕ ಚಿತ್ರವೋ ॥ ಪ ॥
ಭುವನ ರಂಗದಿ ನೀನು ಭವ ರಂಗದೊಳು ನಾನು ।
ವಿವಿಧ ವೇಷಗಳಿಂದ ನಟಿಸಿ ತೋರಿಸುತಿಹ ॥ ಅ–ಪ ॥

ಅಮಿತ ಕಾಯವು ನಿನ್ನದು–ಮಹಾದೇವ–ನೀನಿತ್ತ ತನುವೆನ್ನದು ।
ಖಗ ಮೃಗೋರಗ ಮುಖ್ಯ ಬಹು ರೂಪ ನಿನದಾಗೆ ।
ಸೊಗಯಿಪುವೆನ್ನೊಳಾ ಬಗೆಬಗೆ ಗುಣಗಳು ॥ ೧ ॥

ಶಿಲೆ ನೆಲೆ ಜಲಗಳೊಳು–ನಭಸ್ಥಲ–ತಾರಾ ಸಂಕುಲಗಳೊಳು ।
ಪರಿಪರಿ ಗುಣವ ನೀ ತೋರುತಿರ್ಪುದನೆಲ್ಲ ।
ಅನುಕರಿಸುತಲಿಹೆ ದಿನಚರಿಯೊಳು ನಾನು ॥ ೨ ॥

ಕಾರುಣ್ಯವನು ತೋರುವೆ–ನಿನ್ನಂತೆಯೆ–ಕ್ರೂರತನವ ತೋರುವೆ ।
ಕಟ್ಟುವೆ ಜಗಗಳನಾಳುವೆನವುಗಳ ।
ಕಟ್ಟಿಹುದನು ಮುರಿದಿನ್ನೊಂದ ಕಟ್ಟುವೆ ॥ ೩ ॥

ಅಮಿತ ಶಕ್ತಿಯು ನಿನ್ನದು–ಹೇ ಗುರುದೇವ ನೀನಿತ್ತ ಬಲವೆನ್ನದು ।
ನಿನ್ನ ನಾಟಕದುಪನಾಟಕವೆನ್ನದು ।
ಅಭಯವನೀವುದು ಅನುಚರನಿಗೆ ದೇವ ॥ ೪ ॥

ಅಮಿತಕಾಯ-ಮಿತಿಯಿಲ್ಲದ, ಎಲ್ಲೆಗೊತ್ತಿಲ್ಲದ, ದೇಹ.

Wednesday 14 February 2024

ವನಸುಮ (ಅಠಾಣ ರಾಗ) - ಹಾಡುಗಳು - ನಿವೇದನ - ಡಿವಿಜಿ

ವನಸುಮ - ಹಾಡುಗಳು - ನಿವೇದನ - ಡಿವಿಜಿ 
(ಅಠಾಣ ರಾಗ)

ವನಸುಮದೊಲೆನ್ನ ಜೀ ।
ವನವು ವಿಕಸಿಸುವಂತೆ ।
ಮನವನನುಗೊಳಿಸು ಗುರುವೇ–ಹೇ ದೇವ ॥ ಪ ॥

ಜನಕೆ ಸಂತಸವೀವ ।
ಘನನು ನಾನೆಂದೆಂಬ ।
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್‍ ಬಿಡದೆ ॥ ಅ–ಪ ॥

ಕಾನನದಿ ಮಲ್ಲಿಗೆಯು ।
ಮೌನದಿಂ ಬಿರಿದು ನಿಜ ।
ಸೌರಭವ ಸೂಸಿ ನಲವಿಂ ॥
ತಾನೆಲೆಯ ಪಿಂತಿರ್ದು ।
ದೀನತೆಯ ತೋರಿ ಅಭಿ ।
ಮಾನವನು ತೊರೆದು ಕೃತಕೃತ್ಯತೆಯ ಪಡೆವಂತೆ ॥ ೧ ॥

ಉಪಕಾರಿ ನಾನು ಎ ।
ನ್ನುಪಕೃತಿಯು ಜಗಕೆಂಬ ।
ವಿಪರೀತ ಮತಿಯನುಳಿದು ॥
ವಿಪುಲಾಶ್ರಯವನೀವ ।
ಸುಫಲ ಸುಮ ಭರಿತ ಪಾ ।
ದಪದಂತೆ ನೈಜಮಾದೊಳ್ಪಿನಿಂ ಬಾಳ್ವವೊಲು ॥ ೨ ॥

ವನಸುಮದೊಲ್‍, ವನಸುಮದವೊಲು-ಕಾಡಿನಲ್ಲಿಯ ಹೂವಿನಂತೆ.
ಎಚ್ಚರಿಕೆ : ವನಸುಮದೊಳ್‍ (-ದೊಳು) ಅಲ್ಲ. “ಲ” ಕಾರಕ್ಕೆ ಬದಲಾಗಿ “ಳ” ಕಾರವನ್ನು ನುಡಿಯಬಾರದು.
ವಿಪರೀತಮತಿ-ತಲೆಕೆಳಗು ಬುದ್ಧಿ. ವಿಪುಲ-ವಿಸ್ತಾರ.
ಪಾದಪ-ಗಿಡ, ಮರ.

ಎನ್ನದು ಯಾವುದು? - ಹಾಡುಗಳು - ನಿವೇದನ - ಡಿವಿಜಿ

ಎನ್ನದು ಯಾವುದು? - ಹಾಡುಗಳು - ನಿವೇದನ - ಡಿವಿಜಿ

(ಕಲ್ಯಾಣಿ ರಾಗ)

ಎನ್ನದು ಯಾವುದಯ್ಯಾ–ಎನ್ನಯ ದೊರೆ
ಅನ್ಯರದಾವುದಯ್ಯಾ ॥ ಪ ॥

ಎಲ್ಲಾ ಸೌಭಾಗ್ಯವು ನಿನ್ನದಾಗಿರಲಾಗಿ ॥ ಅ-ಪ ॥

ಗಂಗೆಯ ಜಲವೆಲ್ಲಿ ತುಂಗಭದ್ರೆಯದೆಲ್ಲಿ ।
ಮಂಗಳಕರಳಹ ಯಮುನೆಯದೆಲ್ಲಿ ।
ತುಂಗತರಂಗೆಯಾ ಸಿಂಧೂನದಿಯದೆಲ್ಲಿ ।
ವಿಂಗಡಿಸುವರಾರು ಜಲನಿಧಿಯೊಳು ಪೊಕ್ಕು ॥ ೧ ॥

ಚಂಪಕ ರಜವೆಲ್ಲಿ ಚಂದನ ರಜವೆಲ್ಲಿ ।
ಸೊಂಪಿನ ಪಾಟಲ ರಜವು ಅದೆಲ್ಲಿ ॥
ಪಾರಿಜಾತದ ರಜವೆಲ್ಲಿ ಎಂಬುದನಾರು ।
ಪರಿಕಿಸಿ ಪೇಳ್ವರು ವನ ವಾತದೊಳು ನಿಂದು ॥ ೨ ॥

ಭಿನ್ನ ಭಾವವ ಬಿಟ್ಟು ನಿನ್ನ ಪೂರ್ಣತೆಯನು ।
ಚೆನ್ನಾಗಿ ನೋಳ್ಪ ಕಣ್‍ ಎನ್ನದಾಗಿರಲಿ ॥
ನಿನ್ನ ಮೈಮೆಯನೆನ್ನ ಕಣ್ಣಿಗೆ ತೋರಿಪ ।
ಪುಣ್ಯವೆ ಅನ್ಯರದಾಗಿರಲೆಂದಿಗು ॥ ೩ ॥

Monday 12 February 2024

ನಿನ್ನ ವಿಲಾಸ - ಹಾಡುಗಳು - ನಿವೇದನ - ಡಿವಿಜಿ

ನಿನ್ನ ವಿಲಾಸ - ಹಾಡುಗಳು - ನಿವೇದನ - ಡಿವಿಜಿ 

(ಮೋಹನ ರಾಗ) 

ನಿನ್ನ ವಿಲಾಸವ–ನರಿವರದಾರೋ । 
ನಿಖಿಲಾದಿಮೂಲಾ ॥ ಪಲ್ಲವಿ ॥ 

ದಯೆಯ ಬೀರುವಾ ದೊರೆ । 
ಭಯವ ತೋರುವಾ ಅರಿ । 
ನಯವ ಸಾರುವಾ ಗುರು । 
ನೀನಲ್ಲದಾರೋ ॥ ಅನುಪಲ್ಲವಿ ॥

ಒಲಿದು ಬೊಂಬೆಯನೆತ್ತಿ 
ಮುದ್ದಿಸಿ ಬಳಿಕದ । 
ಮುಳಿದು ಬಿಸುಡುವಾ 
ಶಿಶು ಲೀಲೆಯ ಪೋಲುವ ॥ ೧ ॥ 

ನಾಟ್ಯರಂಗಕೆ ಬಂದು 
ವಿವಿಧ ವೇಷದಿ ನಿಂದು । 
ಅಳಿಸುವಾ ನಗಿಸುವಾ 
ನಟನ ರೀತಿಯ ಪೋಲ್ವ ॥ ೨ ॥

Sunday 11 February 2024

ಗೋಮಟೇಶ್ವರ - ನಿವೇದನ - ಡಿವಿಜಿ

















ನರನಾಗಿರ್ದೊಡದೆಂ ನರಾಧಿಪತಿಯುಂ ತಾನಾದೊಡೇನೀ ವಸುಂ । 
ಧರೆಯೊಳ್‍ ತೃಷ್ಣೆಯ ಪಾಶಮಂ ಪರಿದು ಕರ್ಮಾವರ್ತಮಂ ದಾಂಟಿ ಜೀ ॥ 
ವರಿಗೆಲ್ಲಂ ಶಮ ದೀಕ್ಷೆಯಂ ಕರುಣಿಪಾ ನಿನ್ನಂದದೌನ್ನತ್ಯದಿಂ । 
ಮೆರೆವಾ ಸಂಯಮಿಯೊರ್ವನೇ ಕೃತಿಯಲೈ ಶ್ರೀಗೋಮಟಾಧೀಶ್ವರಾ ॥ ೧ ॥ 

ಜಗದೊಳ್‍ ಜೀವಿಸವೇಳ್ಕುಮೆಂಬುದುಚಿತಂ ಜೀವಿಪ್ಪ ಸಂರಂಭದೊಳ್‍ । 
ಸೊಗಮಂ ಸಾಧಿಸಮೇಳ್ಕುಮೆಂಬುದುಚಿತಂ ತತ್ಸಾಧನೋದ್ಯೋಗದೊಳ್‍ ॥ 
ಪಗೆಯಂ ಗೆಲ್ಲಲೆವೇಳ್ಕುಮೆಂಬುದುಚಿತಂ ನ್ಯಾಯಂಗಳಿಂತಿರ್ದೊಡಂ । 
ಬಗೆಯಲ್‍ ವಾಂಛೆಯ ಗೆಲ್ವುದೇ ಸುಖಮಲೈ ಶ್ರೀಗೋಮಟಾಧೀಶ್ವರಾ ॥ ೨ ॥ 

ಭೋಗಾಪೇಕ್ಷೆಯ ನೀಗಿಯುಂ ಮುದಿತ ದೀಪ್ತಸ್ವಾಂತನಾಗಿರ್ದು ಮೇಣ್‍ । 
ರಾಗ ದ್ವೇಷ ಗಣಂಗಳಂ ತೊರೆದೊಡಂ ತಾಳಿರ್ದು ಸನ್ಮೈತ್ರಿಯಂ ॥ 
ತ್ಯಾಗಾವಸ್ಥಿತನಾದೊಡಂ ಜನತೆಯಂ ನಿನ್ನಂತೆ ಸಂತೈಸುವಾ । 
ಯೋಗಿಶ್ರೇಷ್ಠನೆ ಧನ್ಯನಲ್ತೆ ಭುವಿಯೊಳ್‍ ಶ್ರೀಗೋಮಟಾಧೀಶ್ವರಾ ॥ ೩ ॥ 

ತನುಭೃತ್ಕೋಟಿಯನಾಳುವ ಪ್ರಕೃತಿಯೀ ವಿಶ್ವಂಭರಾ ಚಕ್ರದೊಳ್‍ । 
ಮನುಜಂಗಗ್ರತೆಯಿತ್ತಳೆಂಬ ನುಡಿಯಂತಿರ್ಕಾ ಮಹಾಮಾಯೆ ತಾಂ ॥ 
ತನಯರ್ಗೊಡ್ಡುವ ಮೋಹಜಾಲವನದಾರ್‍ ಭೇದಿಪ್ಪರಾ ತಂತ್ರದಿಂ । 
ಜನಿಪ ಸ್ಪರ್ಧೆಯ ನೀನಲೈ ಗೆಲಿದವಂ ಶ್ರೀಗೋಮಟಾಧೀಶ್ವರಾ ॥ ೪ ॥ 

ಸುತರಂ ತೋಷಿಸಲಾಟವಾಡುತವರಂ ಕಾಡುತ್ತವರ್‍ ಗೋಳಿಡಲ್‍ । 
ಸ್ಮಿತದಿಂ ನೋಡುವ ತಾಯನೊರ್ವ ತನುಜಂ ತಾಂ ಜಾಣ್ಮೆಯಿಂ ಸೋಲಿಸಲ್‍ ॥ ಅತಿಸಂತುಷ್ಟಿಯನಾಂಪಳಾಕೆಯದರಿಂ ನೀನಂತು ಮಾಯಾ ತಿರ । 
ಸ್ಕೃತಿಯಿಂ ವಿಶ್ವವಿಧಾತ್ರಿಯಂ ತಣಿಸಿದೈ ಶ್ರೀಗೋಮಟಾಧೀಶ್ವರಾ ॥ ೫ ॥ 

ಕಲಿಯೀತಂ ಕಲಿತಿರ್ದೊಡಂ ಕಲೆಗಳಂ ಮೌನವ್ರತಖ್ಯಾತ ದೋ । 
ರ್ಬಲಿಯೀತಂ ಬಲಮುಳ್ಳೊಡಂ ಪ್ರಥಿತ ಸೌಮ್ಯಾಕಾರನೀತಂ ಮಹೋ ॥ 
ಜ್ಜ್ವಲರೂಪೋನ್ನತನೀತನೀ ಸೊಬಗನಾಂತಿರ್ದುಂ ತೃಷಾತೀತನೆಂ । 
ದುಲಿಯುತ್ತಿರ್ಪುವು ನಿನ್ನನೀ ಭುವನಗಳ್‍ ಶ್ರೀಗೋಮಟಾಧೀಶ್ವರಾ ॥ ೬ ॥ 

ಧರೆಯೊಳ್‍ ಪುಟ್ಟಿದೊಡಂ ಧರಾಧರವರಂ ಮೇಲೆಳ್ದು ಕಾರ್ಮೋಡಮಾ । ವರಿಸುತ್ತೆಚ್ಚೊಡಮೆರ್ದೆಯೊಳ್‍ ನಿಲದೆ ಮೇಲೇಳುತ್ತೆ ಸೂರ್ಯಾಪ್ತಿಯಿಂ ॥ 
ಮೆರೆವಂತುನ್ನತಿಗೆಳ್ದ ನಿನ್ನ ತೆರನಂ ಪೌರುಷ್ಯ ಪಾರಮ್ಯಮಂ । 
ಪರಮೋತ್ತುಂಗತೆಯಿಂದೆ ನೀನರಿಯಿಪಯ್‍ ಶ್ರೀಗೋಮಟಾಧೀಶ್ವರಾ ॥ ೭ ॥ 

ಅತ್ಯುಚ್ಚಂಡ ಪರಾಕ್ರಮ ಪ್ರಥಿತನಾ ಚಾಮುಂಡರಾಯಂ ಮಹತ್‍ । 
ಕೃತ್ಯಾದರ್ಶನುಮಾದನಲ್ತೆ ಮಹಿಯೊಳ್‍ ನಿನ್ನಾಖ್ಯೆಯಂ ಬಿತ್ತೆ ಸಂ ॥ 
ಸ್ತುತ್ಯಂ ಮಾನವಮಾನದಂ ಪ್ರಕೃತಿಯಿಂದುಚ್ಚಾಶಯಂ ನೀನೆನಿ । 
ಪ್ಪತ್ಯೌನ್ನತ್ಯವ ತೋರಿ ನಿನ್ನಿರವಿನೊಳ್‍ ಶ್ರೀಗೋಮಟಾಧೀಶ್ವರಾ ॥ ೮ ॥ 

೧೧ನೆಯ ಡಿಸೆಂಬರ್‍ ೧೯೨೩.

ಪದ್ಯ ೩ : ಮುದಿತ-ಸಂತೋಷಪಟ್ಟ; ದೀಪ್ತ-ಪ್ರಕಾಶವುಳ್ಳ; ತ್ಯಾಗಾವಸ್ಥಿತ-ವಿರಕ್ತಿಯಲ್ಲಿರುವ. 
ಪದ್ಯ ೪ : ತನುಭೃತ್‍-ದೇಹ ಧರಿಸಿರುವಂಥಾದ್ದು, ಪ್ರಾಣಿ. ಜನಿಪ-ಹುಟ್ಟುವ; ಸ್ಪರ್ಧೆ- Challenge. 
ಪದ್ಯ ೭ : ಧರಾಧರ-ಪರತ್ವ; ಎರ್ದೆ-ಎದೆ. ಪೌರುಷ್ಯ-ಪುರುಷ ಶಕ್ತಿ; ಉತ್ತುಂಗತೆ-ಉನ್ನತಿ. ಇದನ್ನು ನೋಡಿರಿ : “As some tall cliff that lifts its awful form, Swells from the vale, and midway leaves the storm, though round its breast the rolling clouds are spread, Eternal sunshine settles on its head”. –Goldsmith, The Deserted Village. 
ಪದ್ಯ ೮ : ಪ್ರಥಿತ-ಪ್ರಸಿದ್ಧ; ಆಖ್ಯೆ-ಹೆಸರು, ಕೀರ್ತಿ. ಇರವು-ನೆಲೆ, ನಿಲುವು (ಎರಡರ್ಥವೂ ಹೊಂದುತ್ತದೆ).

ಬೇಲೂರಿನ ಶಿಲಾ ಬಾಲಿಕೆಯರು - ನಿವೇದನ - ಡಿವಿಜಿ

*ಬೇಲೂರಿನ ಶಿಲಾ ಬಾಲಿಕೆಯರು - ನಿವೇದನ - ಡಿವಿಜಿ*

ಶ್ರವಣಕೆ ಸಿಲುಕದ ಲಲಿತಾ । 
ರವ ಸುಖಮಂ ರಸನೆಗೊದವದಮೃತ ದ್ರವಮಂ ॥ 
ಎವೆಯಿಕ್ಕದ ನಯನಗಳಿಂ । 
ಸವಿವುದು ನೀಮೆಂಬ ಮಾಯಗಾತಿಯರಿವರಾರ್‍ ॥ ೧ ॥ 

ಶೃಂಗಾರ ವಲ್ಲರಿಯೆ ಲತೆಯೊಡನೆ ಬಳುಕಿ ನೀಂ 
ನೃತ್ಯ ಲಾಸ್ಯದಿನಾರನೊಲಿಸುತಿರುವೆ । 
ಮಾಧುರ್ಯ ಮಂಜೂಷೆ ಮಧುರತರ ಮೌನದಿಂ 
ದಾರ ಚರಿತೆಗಳ ಶುಕಿಗುಸಿರುತಿರುವೆ । 
ಮುಗ್ಧ ಮೋಹನ ವದನೆ ಮುಕುರದೊಳ್‍ ನೋಡಿ ನೀ 
ನಾರ ನೆನೆದಿಂತು ನಸುನಗುತಲಿರುವೆ ॥ 
ಪ್ರಣಯ ಪ್ರರೋಹೆ ನೀಂ ಪ್ರಿಯತರಾಕೃತಿಯಿಂದೆ 
ರುಷೆಯನಿಂತಾರೊಳಭಿನಯಿಸುತಿರುವೆ ॥ 
ಶಿಲ್ಪಿ ವರ ಕುವರಿಯರೆ ಸೌಂದರ್ಯ ಮುದ್ರಿಕೆಯರೆ । 
ದೇವದೇವನ ಸೇವೆಗೈತರ್ಪ ಸಾಧುಕುಲಮಂ । 
ಭಾವ ವಿನ್ಯಾಸ ವೈಕೃತಿಗಳಿಂ ಬೆರಗುವಡಿಸಿ 
ಚಂಚಲತೆಗೆಡೆಯೆನಿಸಿ ನೀವಿಂತು ನಿಲುವುದೇಕೆ ॥ ೨ ॥ 

ಇನ್ನೆವರಮೊಲಿದು ಬಾರದ ನಿಮ್ಮ ಮನದಿನಿಯ 
ನಿನ್ನು ಬಹನೆಂದು ನೀಂ ತಿಳಿವುದೆಂತು । 
ಅಗಣಿತ ಪ್ರೇಕ್ಷಕರೊಳಿಲ್ಲದಾ ಪ್ರೇಮಿ ಯೀ 
ವಿಷಮ ಸಮಯದಿ ನಿಮಗೆ ದೊರೆವುದೆಂತು । 
ನಿಮ್ಮ ವದನದ್ಯುತಿಗೆ ಮರುಳಾಗಿ ಸೋಲದನ 
ರಸಜೀವಿಯೆನ್ನುತಾದರಿಪುದೆಂತು । 
ನಿಮ್ಮ ನೂಪುರ ರವಕೆ ಬೆರಗಾಗಿ ನಿಲ್ಲದನ 
ಭಾವಜ್ಞನೆಂದು ನೀಂ ಬಗೆವುದೆಂತು ॥ 
ರೂಪಮಿಲ್ಲದನೇನೊ ನಿಮ್ಮಿನಿಯನಲ್ಲದಿರೆ ತಾಂ । 
ರೂಪ ವಿಭವದಿನಿತ್ತಲೈತಂದು ಮೆರೆಯೆ ನಿಮ್ಮ । 
ಲಾಸ ಲಾವಣ್ಯಗಳ್‍ ಧರೆಯಿಂದೆ ಪಾರ್ವುವೆನುತೆ । 
ಮರೆಯಿಂದೆ ಕಂಡು ನಿಮ್ಮೊಲವಿಂದೆ ನಲಿವನೇನೋ ॥ ೩ ॥ 

ಶ್ರುತ ಗಾನಮಭಿರಾಮಮಾದೊಡಶ್ರುತಗಾನ 
ಮಭಿರಾಮತರಮೆನುತೆ ರಸಿಕರೊಸೆವರ್‍ ।
ರಾಮಣೀಯಕ ಕುಲುಮೆ ನಿಮ್ಮೆದೆಯ ನುಡಿ ಕಿವಿಯ 
ನಾನದೊಡಮೆಮ್ಮೆದೆಯ ಸೇರಲರಿಗುಂ । 
ಅದರಿಂದಮಲ್ತೆ ನಿಮ್ಮಭಿಮತಂಗಳನರಿತು 
ಜಾಣರೆನಿಬರೊ ನಿಮ್ಮ ಪೊಗಳಿ ನಲಿವರ್‍ । 
ವರ್ಷಶತಕಗಳಿಂದೆ ಕುಂದದಿಹ ಲಾವಣ್ಯ 
ದಂತರಂಗವನಿಂತು ಬಗೆವೆನೀಗಳ್‍ ॥ 
ಬಿದಿಯ ಕರ ಚಾತುರಿಯೊಳನಿತಿನಿತು ಸುಳಿದು ಸರಿವ । 
ಮನುಜ ಮಾನಸದೊಳತಿ ಚಿತ್ರದಿಂ ಚಲಿಸಿ ಮೆರೆವ । 
ಭುವನ ಜೀವನ ಸಸ್ಯಕಮೃತ ಬಿಂದುಗಳನೆರೆವ । 
ಪರತತ್ತ್ವ ಮಾಧುರಿಯನಿನಿಸು ನೀಂ ತೋರ್ಪಿರಲ್ತೆ ॥ ೪ ॥ 

ಆನಂದನಿಧಿಯಾ ಪರಾತ್ಪರನೆನಲ್‍ 
ಜಗದೊ ಳಾನಂದವೀವರಂ ಕಳೆಯಲಹುದೇಂ । 
ಪ್ರೇಮಮಯ ಮೂರ್ತಿಯಾ ಪರದೇವನೆನುತಿರಲ್‍
ಪ್ರೇಮಾಂಕುರಂಗಳಂ ಮುರಿಯಲಹುದೇಂ । 
ಸೌಂದರ್ಯ ಸರ್ವಸ್ವ ನಿಧಿಯಾತನೆನುತಿರಲ್‍ 
ಸುಂದರಾಕಾರರೊಳ್‍ ಮುಳಿಯಲಹುದೇಂ ॥ 
ಜೀವನಾಧಾರನವನೆನುತೆ ಪೊಗಳುತ್ತಿರಲ್‍ 
ಜೀವನೋಜ್ಜ್ವಲೆಯರಂ ಪಳಿಯಲಹುದೇಂ ॥ 
ಜಗದುದಯಕಾರಣನ ಮೈಮೆಗಳನರಿತು ನೆನೆದು । 
ಜಗದ ಯಾತ್ರೆಯ ನಡೆವ ಜನಕೆ ನಿಮ್ಮಂದದಿಂದಂ । 
ಸೊಗಮಿನಿಸು ತೋರಿ ಸಂಸೃತಿಪಥಂ ಸುಗಮಮೆನಿಸಲ್‍ । 
ಅದುವೆ ದೇವಂಗೆ ನೀಮೆಸಗುವಾ ಸೇವೆಯಲ್ತೆ ॥ ೫ ॥ 

ವಿಶ್ವ ತಂತ್ರ ರಹಸ್ಯ ಬೋಧನೋತ್ಸಾಹಮಿದು 
ವಿಶ್ವ ಶಿಲ್ಪಿಯ ಸಭೆಯೊಳುಚಿತಮೆನಿಕುಂ । 
ವಿಗತ ಸೌಮನಸರುಂ ವಿಪರೀತ ಚರಿತರುಂ 
ವಿಮುಖತೆಯನಾನಲದರಿಂದೆ ನಿಮಗೇಂ । 
ಮೊಳಗುಗೆಲೆ ಸರಳೆಯರೆ ನಿಮ್ಮ ಮೃದು 
ಪದವನನು ಕರಿಪ ವಾದಿತ್ರಗಳ್‍ ಸೂಕ್ಷ್ಮದಿಂದೆ । 
ನೆಳಲನಿತ್ತೀ ಲತಾವಳಿ ನಿಮ್ಮನಾದರಿಸು 
ಗೆಂದಿಗುಂ ತಂಬೆಲರ ಸುರಭಿಯಿಂದೆ ॥ 
ನಗುತ ನಲಿಯುತ ಮೆರೆದು ಹಾವ ಭಾವಗಳಿನೆಸೆದು । 
ಮಂಜು ಜಲ್ಪವ ತೋರಿ ಮುಗ್ಧ ವೀಕ್ಷಣವ ಬೀರಿ । 
ಕಠಿನರಾಗದೆ ಕಾಲ ದೌಷ್ಟ್ಯದಿಂ ಕುಂದುವಡದೆ । 
ಶುಷ್ಕ ಹೃದಯರ್ಗೆ ನೀಂ ಸೌಹೃದವ ನೀಡುತಿಹುದೌ ॥ ೬ ॥ 

ಅವ್ಯಕ್ತ ನಿನದದಿಂದಕಲಂಕಿತಾಂಗದಿಂ 
ದನ್ಯೂನ ತರುಣತೆಯಿನಮಿತಯಶದಿಂ । 
ಚಿರ ಕಾಲಮೆಸೆವುದೌ ಚಿತ್ತವೇಧನಿಯರಿರ 
ಕುದಿವ ಲೋಕಕೆ ಮುದದ ತಣಿವ ಬೀರಿ । 
ಸೌಂದರ್ಯಮೇ ವಿಶ್ವತತ್ತ್ವಮಾ ಪರತತ್ತ್ವ 
ಭಾಸಮೇ ಸೌಂದರ್ಯಮೆನುತ ಸಾರಿ । 
ನಿಮಗೆ ಜನ್ಮವನಿತ್ತ ಚಿತ್ರ ಚತುರರ ಚಿತ್ತ 
ದೇಕಾಗ್ರ ಭಕ್ತಿ ದೀಪಿಕೆಯ ಬೆಳಗಿ ॥ 
ಪೊಳೆಯಿರೌ ಸರಸ ಜೀವನ ಮಂತ್ರ ಗುರುಗಳೆನಿಸಿ । 
ಪಳಿಯಿರೌ ಮಧುರ ಭಾವವ ಪಳಿವ ವಿಕೃತ ಮತಿಯಂ । 
ಕಳೆಯಿರೌ ರಸಕಲಾವಿಮುಖತೆಯ ಜನದ ಮನದಿಂ । 
ಬೆಳೆಯಿರೌ ಪ್ರೇಮ ಧರ್ಮೋದ್ಧರಣ ವಿಧಿಯೊಳೆಂದುಂ ॥ ೭ ॥ 

೧೧ನೆಯ ಡಿಸೆಂಬರ್‍ ೧೯೨೩

ಪದ್ಯ ೧ : ಶ್ರವಣ-ಕಿವಿ; ಆರವ (ರವ) ಧ್ವನಿ, ನಾದ; ರಸನೆ-ನಾಲಗೆ. ಕಿವಿಗೂ ನಾಲಗೆಗೂ ದೊರೆಯಲಾರದ ಒಂದು ಇಂಪು ಇಲ್ಲಿ ಕಣ್ಣಿನ ಮೂಲಕ ದೊರೆಯುವುದಾಗಿದೆ. 
ಪದ್ಯ ೨ : ವಲ್ಲರಿ-ಹಬ್ಬಿದ ಬಳ್ಳಿ; ಲಾಸ್ಯ-ಗೀತಾಭಿನಯ ಸಮೇತ ನರ್ತನ. ಮಂಜೂಷಾ-ಕೈಪೆಟ್ಟಿಗೆ, ಡಬ್ಬಿ. ಪ್ರರೋಹ-ಮೊಳಕೆ; ರುಷೆ-ರೋಷ. 
ಪದ್ಯ ೩ : ನೂಪುರ-ಕಾಲಂದುಗೆ, ಗೆಜ್ಜೆ. 
ಪದ್ಯ ೪ : ಶ್ರುತ-ಕೇಳಿಸಿದ, ಕಿವಿಮುಟ್ಟಿದ; ಅಶ್ರುತ-ಕೇಳಿಸದ, ಕಿವಿತಾಕದ; ಅಭಿರಾಮತರಮ್‍-ಹೆಚ್ಚು (More) ಮನೋಹರವಾದದ್ದು. “Heard melodies are sweet, but those unheard Are sweeter”. –Keats, Ode on A Grecian Urn. ಎದೆಯ ನುಡಿ–ಅಂತರಂಗದ ಮಾತು, ಹೃದಯವಾಣಿ; ಬಿದಿಯ–ವಿಧಿಯ, ಸೃಷ್ಟಿಕರ್ತನ; ಕರಚಾತುರಿ-ಕೈಚಳಕ. 
ಪದ್ಯ ೫ : ಆನಂದನಿಧಿ... ಪ್ರೇಮಮಯಮೂರ್ತಿ... 
“ತಸ್ಯ ಪ್ರಿಯಮೇವ ಶಿರಃ । ಮೋದೋ ದಕ್ಷಿಣಃ ಪಕ್ಷಃ । ಪ್ರಮೋದ ಉತ್ತರಃ ಪಕ್ಷಃ । ಆನನ್ದ ಆತ್ಮಾ ॥ –ತೈತ್ತಿರೀಯ ಉಪನಿಷತ್ತು II - ೫.

Friday 9 February 2024

ಬಲಿ ಚಕ್ರವರ್ತಿ - ನಿವೇದನ - ಡಿವಿಜಿ















ಬಲಿ ಚಕ್ರವರ್ತಿ ಭೂಸ್ವ । 
ರ್ವಲಯಗಳಂ ಭುಜದ ಬಲದೆ ನೀಂ ಗೆಲ್ದೊಡದೇ ॥ 
ನೊಲಿದಾ ವಟುವಿಂಗೆಲ್ಲವ । 
ಬಲಿಗೈಯುತೆ ತೋರ್ದ ಬಲಮೆ ಬಲುಮೆಯೆನಿಕ್ಕುಂ ॥ ೧ ॥ 

ಛಲದಿಂ ಮೂರಡಿಯುರ್ವಿಯಂ ಬಯಸಿದಂ ದೈತ್ಯಾರಿಯೆಂದೆಂಬುದೇಂ । 
ಬಲಿ ನಿನ್ನಂದದಿ ಭೂ ದಿವಂಗಳೊಳದಾರುಂ ಚಾಗಿಯಿಲ್ಲೆಂದೆನು ॥ 
ತ್ತೊಲಿದಿನ್ನಾರ್ಗಮಲಭ್ಯಮಾದ ಚರಣ ಶ್ರೀ ರಾಶಿಯಂ ನಿನ್ನಯಾ । 
ತಲೆಯೊಳ್‍ ಸೂಸಿದನಾ ತ್ರಿವಿಕ್ರಮನಲೈ ನಿನ್ನಂತದಾರ್‍ ಧನ್ಯರೋ ॥ ೨ ॥

ಹರಿಚರಣಂ ನಿನ್ನಿಂ ಬಲಿ । 
ಪಿರಿದೆನಿಪವೊಲಾದುದೊಂದು ಸೋಜಿಗಮಲ್ಲಂ ॥ 
ಗುರುತೆಯನರಿದೊಡೆಯುಂ ನೀಂ 
ಶಿರದೊಳದಂ ತಾಳ್ದುದಲ್ತೆ ಲೋಕದಿ ಚಿತ್ರಂ ॥ ೩ ॥ 

ಮೀನದಂ ಕೂರ್ಮನಾದಂ ದನುಜರನಿರಿಯಲ್‍ ಪಂದಿಯಾದಂ ಪರೇಶಂ । 
ಮೇಣಾ ಸಿಂಹಾಸ್ಯನಾದಂ ಮಗುಳೆ ಜನಿಸಿದಂ ಶೂರರಂತಾದೊಡಂ ತಾ ॥ 
ದೀನಾಲ್ಪಾಕಾರದಿಂ ಬಂದತಿಶಯ ನಯದಿಂ ಬೇಡಿದಂ ವಿಷ್ಣು ನಿನ್ನಂ । 
ದಾನೋದ್ದಾಮಾಗ್ರಣೀ ನೀಂ ಹರಿಯ ಕಿರಿಯನಂ ಗೈದನಾದೈ ಬಲೀಂದ್ರಾ ॥ ೪ ॥ 

ಶ್ರದ್ಧೆಯನರ್ಜನ ವಿಧಿಯೊಳ್‍ । 
ಸಿದ್ಧತೆಯಂ ದಾನ ದೀಕ್ಷೆಯೊಳ್‍ ಪ್ರಕಟಿಸುವಾ ॥ 
ಶುದ್ಧಾತ್ಮತೆಯಂ ಭುವನದೊ । 
ಳುದ್ದೀಪಿಪ ದೀಪಮಲ್ತೆ ಬಲಿ ನಿನ್ನ ಯಶಂ ॥ ೫ ॥

ಪದ್ಯ ೫: “ಭೂತ್ಯೈನ ಪ್ರಮದಿತವ್ಯಂ” (ಸಂಪಾದನೆಯಲ್ಲಿ ಅಜಾಗ್ರತೆ ಕೂಡದು), “ಶ್ರದ್ಧಯಾ ದೇಯಂ” (ಶ್ರದ್ಧೆಯಿಂದ ದಾನಮಾಡಬೇಕಾದದ್ದು) -ಇವೆರಡೂ ವೇದ ವಿಧಿ.

Thursday 8 February 2024

ಜ್ಞಾಪಕ, ವಿಜ್ಞಾಪನೆ ಮತ್ತು ಮುನ್ನುಡಿ - ನಿವೇದನ - ಡಿವಿಜಿ

ಜ್ಞಾಪಕ:

“ನಿವೇದನ” ಪುಸ್ತಕವು ಮೊದಲ ಸಾರಿ ಪ್ರಕಟವಾದದ್ದು ೧೯೨೪ನೆಯ ಇಸ್ವಿ ಏಪ್ರಿಲ್‍ ತಿಂಗಳಲ್ಲಿ, ಬೆಂಗಳೂರು ಸೆಂಟ್ರಲ್‍ ಕಾಲೇಜಿನ ಕರ್ಣಾಟಕ ಸಂಘದ ಆಶ್ರಯದಲ್ಲಿ.

ಆಗ ಅದರ ಪೀಠಿಕೆಯಲ್ಲಿ ಹೀಗೆ ಹೇಳಿತ್ತು:

“ತನ್ನ ದೇಶದಲ್ಲಿ ಪ್ರಕೃತಿ ನಿರ್ಮಿತಗಳಾಗಿಯೂ ಮನುಷ್ಯ ನಿರ್ಮಿತಗಳಾಗಿಯೂ ಖ್ಯಾತಿಗೊಂಡಿರುವ ದೃಶ್ಯ ವಿಶೇಷಗಳನ್ನು ಲೇಖಕನು ಮೊಟ್ಟ ಮೊದಲು ನೋಡಿದಾಗ ತನಗಾದ ಅನುಭವವು ಮರಳಿ ಆಗಾಗ ತನ್ನ ನೆನಪಿಗೆ ದೊರೆಯಲಾಗುವಂತೆ ಅದನ್ನು ಮಾತುಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕೆಂದು ಮಾಡಿದ ಪ್ರಯತ್ನದ ಫಲವೇ ಈ ಪುಸ್ತಕದ ಪದ್ಯಗಳು.”... “ಬೇಲೂರಿನ ವಿಗ್ರಹಗಳು ಕೀಟ್ಸ್‍ (Keats) ಎಂಬ ಇಂಗ್ಲಿಷ್‍ ಕವಿಯ Ode on a Grecian Urn ಎಂಬ ಕಾವ್ಯದಲ್ಲಿಯ ಸೌಂದರ್ಯ ಪ್ರಶಂಸೆಯನ್ನು ಜ್ಞಾಪಕಕ್ಕೆ ತಂದವು. ಇಲ್ಲಿಯ ಒಂದೆರಡು ಪಂಕ್ತಿಗಳು ಆ ಮಹಾಕವಿಯ ಪ್ರಸಾದವಾಗಿವೆ”.

ಈ ಸಾರಿಯೂ ಕರ್ಣಾಟಕ ಸಂಘವು ಕೆಲವು ಚಿತ್ರಪಟಗಳ ಪಡಿಯಚ್ಚುಗಳನ್ನು ಕೊಟ್ಟು ಉಪಕರಿಸಿದೆ.

ಶ್ರೀಮುಖ
ಕ್ರಿ. ೧೯೩೩
ಡಿ.ವಿ.ಜಿ.

ವಿಜ್ಞಾಪನೆ:

ಈ ಪುಸ್ತಕಕ್ಕೆ ಇಂದಿನ ಪುನರ್ಮುದ್ರಣಯೋಗ ಬಂದಿರುವುದು ಬಹುಮಟ್ಟಿಗೆ ಮೈಸೂರು ವಿಶ್ವವಿದ್ಯಾಲಯದ ಕೃಪೆಯಿಂದ. ಆ ವಿದ್ಯಾಪೀಠದ ಅಧಿಕಾರಿಗಳು ಇದನ್ನು ೧೯೫೮ರ ಇಂಟರ್‍ಮೀಡಿಯೆಟ್‍ ಪರೀಕ್ಷೆಗೆ ಪಠ್ಯಗ್ರಂಥವನ್ನಾಗಿರಿಸಿದ್ದಾರೆ. ಈ ಉಪಕಾರಕ್ಕಾಗಿ ಅವರಿಗೆ ಲೇಖಕನ ಹೃದಯದಿಂದ ವಂದನೆ.

ಇದರಲ್ಲಿಯ ಪದ್ಯಗಳು ಈಗ್ಗೆ ಮೂವತ್ತುಮೂರು ವರ್ಷಗಳಷ್ಟು, –ಇನ್ನೂ ಹೆಚ್ಚು, –ಹಳೆಯವು. ಈ ಕಾಲಧಾವಿತದಲ್ಲಿ ಭೂಮುಖ ಬಹುಮಟ್ಟಿಗೆ ಬದಲಾಯಿಸಿದೆ. ೧೯೨೩ರ ಕಣ್ಣಿಗೆ ಕಾಣಿಸಿದ್ದು ೧೯೫೬ರ ಕಣ್ಣಿಗೆ ಕಾಣಬಂದೀತೋ, ಬಾರದೋ! ಪ್ರಕೃತಿಯ ಪ್ರೇಕ್ಷಣೀಯ ಕ್ಷೇತ್ರಗಳಲ್ಲಿ ಉಳಿದು ನಿಲ್ಲದೆ ಇಮಿರಿಹೋಗಬಹುದಾದ ಸೌಂದರ್ಯಾಂಶವನ್ನು ಬಹುದಿನದ ಪುನರ್ದರ್ಶನಕ್ಕಾಗಿ ಹಿಡಿದಿರಿಸುವ ಸಾಧನ (ಫೊಟೋ) ಛಾಯಾಗ್ರಹಣ ಯಂತ್ರಕಲೆಯದು. ಅಂಥ ಸೌಂದರ್ಯದರ್ಶನದಿಂದ ಮನಸ್ಸಿಗಾದ ಒಂದು ಕ್ಷಣದ ಅನುಭವವನ್ನು ಸ್ಥಿರರೂಪದಲ್ಲಿ ಹಿಡಿದಿರಿಸುವ ಪ್ರಯತ್ನ ಕವನ ಕಲೆಯದು. ಪದ್ಯದಲ್ಲಿ ಹುದುಗಿಸಿದ ಭಾವವನ್ನು ಮತ್ತಷ್ಟು ವಿಶದಪಡಿಸಲು ಅದನ್ನು ಪ್ರೇರಿಸಿದ ಕ್ಷೇತ್ರದ ಪ್ರತ್ಯಕ್ಷ ದರ್ಶನ ಸಹಾಯವಾಗುತ್ತದೆ. ಆ ಕ್ಷೇತ್ರಗಳ ಮೇಲ್ಗುರುತುಗಳು ಕೆಲವು ಬದಲಾಯಿಸಿದ್ದರೂ ಹೆಗ್ಗುರುತುಗಳು ಕೆಲವಾದರೂ ಉಳಿದುಕೊಂಡಿರುತ್ತವೆ. ಇವು ಪುನರನುಭವಕ್ಕೆ ಸ್ಫೂರ್ತಿಕಾರಣಗಳಾಗುತ್ತವೆ. ಆದದ್ದರಿಂದ ಕುತೂಹಲಿಗಳಾದ ವಾಚಕ ಮಿತ್ರರು ಪ್ರಸಕ್ತ ಕ್ಷೇತ್ರಗಳಿಗೆ ಹೋಗಿ ಕಣ್ಣಾರ ನೋಡಬೇಕೆಂಬುದು ಲೇಖಕನ ಬೇಡಿಕೆ. ಅವೇನೂ ದೂರದೇಶಗಳಲ್ಲ,

ಇನ್ನೊಂದು ಮಾತು: ಬೇಲೂರಿನ ಶಿಲ್ಪ ಬೈಭವವನ್ನು ಕುರಿತು ಇಲ್ಲಿರುವ ಪದ್ಯಾವಳಿಯ ಜೊತೆಗೆ ನೋಡಬಹುದಾದ ಇನ್ನೊಂದು ಪ್ರಬಂಧ–ಅದೇ ವಸ್ತುವನ್ನು ಕುರಿತದ್ದು– “ಶ್ರೀ ಚೆನ್ನಕೇಶವ ಅನ್ತಃಪುರ ಗೀತೆ” (೧೯೫೦). ಸೌಂದರ್ಯ ತತ್ತ್ವದ ವಿಚಾರ ಅದರಲ್ಲಿ ಒಂದಷ್ಟಿದೆ.

ಈ ಪದ್ಯಗೀತೆಗಳಿಗೆ ಹಿನ್ನೆಲೆಯನ್ನೂ “ಬೇಲೂರುಗುಡಿ” ಎಂಬ ಎ.ಐ.ಆರ್‍. ಭಾಷಣದಲ್ಲಿ ಕಾಣಬಹುದು. ಸೌಂದರ್ಯಕ್ಕೂ ಧರ್ಮಕ್ಕೂ ಇರುವ ಸಂಬಂಧವನ್ನು ಅಲ್ಲಿಯೂ ಸಂಕ್ಷೇಪವಾಗಿ ಪ್ರಸ್ತಾವಿಸಿದೆ. (“ಅನ್ತಃಪುರಗೀತೆ”, “ಬೇಲೂರುಗುಡಿ” –ಇವೆರೆಡೂ ಮೈಸೂರು ಕಾವ್ಯಾಲಯದ ಪ್ರಕಟನೆಗಳು.)

ಈಚೆಗೆ (೨೬-೧-೧೯೫೬) ಬೆಂಗಳೂರು ಸೆಂಟ್ರಲ್‍ ಕಾಲೇಜಿನ ಕರ್ಣಾಟಕ ಸಂಘದಿಂದ ಪ್ರಕಟವಾದ “ಅರೆಮೂಕ” ಎಂಬ ಹೆಸರಿನ ಲೇಖನ ಸಂಗ್ರಹದಲ್ಲಿ (ಕಾಲೆಜ್‍ ಬರವಣಿಗೆ–೧೦), ಆ ಹೆಸರಿನ ಹಾಡನ್ನು ಕುರಿತ ವ್ಯಾಖ್ಯಾನವೊಂದು ಸೇರಿದೆ. ಹೀಗೆ ವಿದ್ಯಾರ್ಥಿಗಳಿಗೆ ಒಪ್ಪಿಗೆಯಾದ ಹಾಡು ಪುಸ್ತಕದಲ್ಲಿದ್ದರೆ ಉಪಯೋಗವಾದೀತೆಂದು ಅದನ್ನಿಲ್ಲಿ ಸೇರಿಸಿದೆ. ಅದು ಮೊದಲು ಪ್ರಕಟವಾದದ್ದು “ಪ್ರಬುದ್ಧ ಕರ್ಣಾಟಕ” ಪತ್ರಿಕೆಯ ೧೯೨೬ರ ವಿನಾಯಕನ ಸಂಚಿಕೆಯಲ್ಲಿ (VIII-1).

ಈ ಪುಸ್ತಕದ ವಿಷಯ ಲೇಖಕನ ಮನಸ್ಸಿಗೆ ಬಂದಾಗಲೆಲ್ಲ ಒಡಗೂಡಿ ಜ್ಞಾಪಕಕ್ಕೆ ಬರುವ ಹೆಸರುಗಳು ಬೆಳ್ಳಾವೆಯ ವೆಂಕಟನಾರಣಪ್ಪನವರು, ಟಿ.ಎಸ್‍.ವೆಂಕಣ್ಣಯ್ಯ–ಇವರವು. ಅವರು ಇಲ್ಲಿಯ ಮುನ್ನುಡಿಯಲ್ಲಿ ನೆನೆದಿರುವ “ಗೆಳೆಯರ್‍”, “ಸರಳರ್‍”. ಅಂಥ ಜನ ನಮ್ಮ ನಾಡಿನಲ್ಲಿ ಈಗಲೂ ಕೆಲವರಾದರೂ ಇದ್ದಾರಲ್ಲವೆ? ಹಾಗೆಂಬ ನಂಬಿಕೆ ಲೇಖಕನಿಗೆ ಈಗ ಇರುವ ಧೈರ್ಯ.

ಆಗಸ್ಟ್ ೧೯೫೬
ಡಿ.ವಿ.ಜಿ.


ಮುನ್ನುಡಿ:

ದಿನದಿನಮುಂ ಪೊಸಪೊಸ ಕಲಿ ।
ತನದಿನಜಂ ಜಗವನೆಸಗುತಿರಲವನ ಪುರಾ ॥
ತನ ಶಿಲ್ಪಶೇಷ ಚಯನಕೆ ।
ಮನವಿತ್ತಿಹರಲ್ತೆ ಸೃಷ್ಟಿವಿಜ್ಞಾನಚಣರ್‍ ॥ ೧ ॥

ಪೊಸಕಲೆಯ ಕಲಿತು ಕುವರಂ ।
ಪೆಸರಾಂತೊಡಮಂತದಿರ್ಕೆಯೆನ್ನುತಲವನಾ ॥
ಪಸುಳೆ ನಡೆನುಡಿಯ ನೆನೆಯು ।
ತ್ತೊಸೆದದ ಬಿತ್ತರಿಪಳಲ್ತೆ ತಾಯೆಲ್ಲರ್ಗಂ ॥ ೨ ॥

ಗೆಳೆಯರ್ಗಂ ಸರಳರ್ಗಂ ।
ಪಳದರೊಳಂ ಸೊಗಸದೊಂದು ತೋರ್ಪುದು ಸಾಜಂ ॥
ಕೊಳುಗವರೊಲಿದೀ ಪದ್ಯಾ ।
ವಳಿಯಂ ಸೊಡರಿದು ಕುಟೀರಕಾಗಸಕಲ್ಲಂ ॥ ೩ ॥

ಇದು ಪಳದದು ಪೊಸತೆನಲೇಂ ।
ಬದುಕಿನರಲ್ಗಿಟ್ಟ ಸಾರಯಂತ್ರಂ ಕವನಂ ।
ಒದವೆ ರಸಂ ಕವಿಸಿದ್ಧಿಯ ।
ದೊದವದಿರಲ್‍ ತಪಸದವನದೆಂಬರ್‍ ಸರಸರ್‍ ॥ ೪ ॥

ತಳಿರನೆಳನೇಸರಪ್ಪುವ ।
ಜಳದಕುಲಂ ಗಿರಿಶಿರಂಗಳಂ ಮುದ್ದಿಸುವಾ ॥
ತಿಳಿಗಣ್‍ ಕಿರುನಗೆಗರಳುವ ।
ವಿಳಸಿತಗಳ ಪಿಡಿವ ಯಂತ್ರಮಂ ಕಂಡವರಾರ್‍ ॥ ೫ ॥

ಬಾಬಾಬುಡನ್‍ ಬೆಟ್ಟ- ನಿವೇದನ - ಡಿವಿಜಿ

(ದತ್ತಾತ್ರೇಯ ಪೀಠಕ್ಕೆ ಹೋಗುವಾಗ)

ಕುಲಪರ್ವತ ಹೃದಯಾಂಶಮೊ । 
ಇಳೆಯಾ ಕನಲಿಕೆಯ ಬುದ್ಬುದೋದ್ರೇಕಮೊ ಮೇ ॥ 
ಣೊಲವಿನ ಪುಲಕಮೊ ಎನ್ನಿಪ ।
ವೊಲು ಬೆರಗಾಗಿಸುವುದಿತ್ತ ಚಂದ್ರದ್ರೋಣಂ ॥ ೧ ॥ 

ಬಿಸಿಲಪ್ಪಿರ್ದ ಪೊಳಲ್ಗಳ್‍ । 
ಮಿಸುಗಲ್‍ ಮಳಲೊಟ್ಟಿಲಂತೆ ಮಲೆಗಳ ಸಾಲ್ಗಳ್‍ ॥ 
ಮಸಗಲ್‍ ಪೇರಲೆಗಳವೋಲ್‍ । 
ಪಸುರ ಕಡಲ್‍ ಕಣ್ಗಳೋಡುವನ್ನೆಗಮೆಸೆಗುಂ ॥ ೨ ॥ 

ಉರಮಂ ಶಿರಮಂ ಚುಂಬಿಸಿ । 
ಸರಸತೆಯಿಂ ಸುಳಿಯುತಿರ್ಪ ಗೌರಾಂಗ ಮನೋ ॥ 
ಹರೆ ಕಾದಂಬಿನಿಯ ತಿರ । 
ಸ್ಕರಿಪೀ ಶೈಲಾಧಿರಾಜನೇಂ ನೀರಸನೋ ॥ ೩ ॥ 

ಶೃಂಗಶತಂ ಮರಕತಮ । 
ಸಿಂಗರಗಳ ತೊಟ್ಟು ಮೆರೆವ ಸಾಮಂತರವೋಲ್‍ ॥ 
ಕಂಗೊಳಿಸುವುವೆತ್ತಲುಮತಿ । 
ತುಂಗಾಕೃತಿಯಾಗಿ ನೋಡುವೀತನ ಸಭೆಯೊಳ್‍ ॥ ೪ ॥ 

ಘೋರಂ ಯೋಜನ ಶತ ವಿ । 
ಸ್ತಾರಂ ತಾನಾಗಿ ವಕ್ರ ಕಂದರ ಪಥದೊಳ್‍ ॥ 
ತೋರುತ್ತಿರ್ಪುದು ಕಣ್ಗೆ ಮ । 
ಹಾರಣ್ಯಂ ಮಲಗಿ ಸುಯ್ಯುವಜಗರೆಪತಿವೋಲ್‍ ॥ ೫ ॥ 

ಗರ್ವಿತ ಸುತರಂ ನಿಂದಿಸು । 
ವುರ್ವರೆಯತ್ಯುಗ್ರ ದಂಷ್ಟ್ರ ಚೇಷ್ಟೆಯ ಪೋಲ್ವೀ ॥ 
ಪರ್ವತ ಗಹ್ವರಮೆಂದುಂ । 
ಶರ್ವರಿಯೋಲಗಕೆ ಗುಪ್ತ ಭವನಮೆನಿಕ್ಕುಂ ॥ ॥ ೬ ॥ 

ಆರೋ ಮಲ್ಲರ್‍ ಪಲಬರ್‍ । 
ವೀರವ್ಯಾಯಾಮಿಕಾಂಗ ವಿನ್ಯಾಸಗಳಿಂ ॥ 
ಪೋರಿದರಿತ್ತಲದಿಲ್ಲದೆ । 
ಭೂರಿಸ್ನಾಯುವನದೇಕೆ ಧರೆಯುರ್ವಿಸುಗುಂ ॥ ೭ ॥ 

ಭೈರವ ತಾಂಡವ ಭುವಿಯೇಂ । 
ಮಾರುತಿ ಲೀಲಾಪ್ರದೇಶಮೇಂ ಭೀಮಗದಾ ॥ 
ಧೋರಣಿಯಂಗಣಮೇನೀ । 
ಧಾರಿಣಿಯೇಕಲ್ಲದೀ ಕರಾಳತೆಯಾಂಪಳ್‍ ॥ ೮ ॥

ಪದ್ಯ ೧ : ಕುಲಪರ್ವತ-ಪುರಾಣ ಪ್ರಸಿದ್ಧಗಳಾದ ಮಹಾ ಪರ್ವತಗಳು ಏಳು-ಮಾಹೇಂದ್ರ ಮೊದಲಾದವು. ಅವುಗಳಲ್ಲೊಂದರ ಅಂತರಂಗ ಭಾಗವೊ ಇದು? ಪುಲಕ-ರೋಮಾಂಚ, ನವಿರ್‍-ನಿಮಿರು. 
೨ : ಆ ಹಸಿರು ಕಡಲಿನ ನಡುವೆ ಊರುಗಳು ಮರಳು ಗುಡ್ಡೆಗಳಂತೆಯೂ ಬೆಟ್ಟಗಳು ತೆರೆಯೇಳಿಕೆಯಂತೆಯೂ ಕಾಣುತ್ತವೆ. 
೩ : ಕಾದಂಬಿನಿ-ಮೋಡದ ಸಾಲು, ಮೇಘಮಾಲೆ. 
೪ : ತುಂಗ-ಎತ್ತರವಾದ (ಚಂದ್ರದ್ರೋಣರಾಜನ ಒಡ್ಡೋಲಗ). 
೫ : ಅಜಗರ-ಮಹಾಸರ್ಪ, ದೊಡ್ಡ ದೊಡ್ಡ ಜಂತುಗಳನ್ನು ನುಂಗಬಲ್ಲದ್ದು. 
೬ : ಉರ್ವರೆ-ಭೂಮಿದೇವಿ; ಶರ್ವರಿ-ರಾತ್ರಿ, ಕತ್ತಲೆ. 
೭ : ಸ್ನಾಯು-ದೊಡ್ಡ ನರ, Muscle; ಉರ್ವಿಸು=ಉಬ್ಬಿಸು.

Wednesday 7 February 2024

ಶಿವನ ಸಮುದ್ರ - ನಿವೇದನ - ಡಿವಿಜಿ

ತರುಗುಲ್ಮಾವೃತ ಶೈಲಮೆ ।
ಮರಕತ ಶಿವಲಿಂಗಮೆನುತೆ ಕಾವೇರಿಯದಂ ॥
ಪರಿಚರಿಸಿ ಲೋಕಕೆಲ್ಲಂ ।
ದೊರೆಯಿಪ ತೀರ್ಥಾಂಬುವಲ್ತೆ ಶಿವನ ಸಮುದ್ರಂ ॥ ೧ ॥

ಒಂದೆಡೆಯೊಳಾದಿಶಕ್ತಿಯ ।
ಸಂಧಾನಾದ್ಭುತ ವಿಶೇಷಮಾರ್ಭಟಿಸಲ್‍ ಮೇ ॥
ಣೊಂದೆಡೆ ಮೆರೆವುದು ಮನುಜನ ।
ಸಂಧಾನಾದ್ಭುತ ವಿಶೇಷಮಾ ಮಂಡಲದೊಳ್‍ ॥ ೨ ॥

ಮೊರೆಯುತೆ ಸರಿಯುತೆ ಭರದಿಂ ।
ಪರಿದೋಡುತೆ ಜಾರಿ ಪಾರಿ ಮುಕ್ತಾಂಜಲಿಯಂ ॥
ಎರಚುತಲೆರಗುತೆ ರಭಸದಿ ।
ಬರುತಿರ್ಪಾ ಜಲವಿಲಾಸಮೇನತಿಶಯಮೋ ॥ ೩ ॥

ಶಿವನೊಡಲ ಹಾರಮೇಂ ನಿಜ ।
ಭವನಕೆ ಸರಿವಾದಿಶೇಷ ಸಂತತಿಯೇನಾ ॥
ಧವಳತರ ಧಾರೆ ಮಾಡುವು ।
ದವಲೋಕನಕೊಂದು ಭೀಷ್ಮ ಸಂಮೋಹನಮಂ ॥ ೪ ॥

ಒಲವೇಂ ಸಂಭ್ರಮವೇಂ ಪ್ರಿಯಾಭಿಸರಮೇಂ ಲಾವಣ್ಯಮೇಂ ಲೀಲೆಯೇಂ ।
ಮುಳಿಸೇಂ ಸಾಹಸಮೇಂ ಮಹಾಗರುವಮೇಂ ಯಾತ್ರಾವ್ರತೋತ್ಸಾಹಮೇಂ ॥
ಬಲಮಂ ತೋರುವ ಠೀವಿಯೇಂ ಚಪಲಮೇಂ ಮಂದಾತ್ಮರಂ ನಿಂದಿಪಾ ।
ಚಲಮೇನೀಪರಿ ಧಾವಿಸುತ್ತಲಿಹುದೇಂ ಕಾವೇರಿ ರಾಜ್ಯೇಶ್ವರೀ ॥ ೫ ॥

ಧೂಮಸ್ತೋಮದ ಮೂಲದತ್ತ ಮೊರೆಗುಂ ಶೀತಾಂಬುಪಾತಂ ಸರಿ ।
ದ್ರಾಮಾನೇತ್ರದಪಾಂಗಮೆತ್ತಲೆನೆ ವಿದ್ಯುಜ್ಜ್ವಾಲೆಯುಜ್ಜೃಂಭಿಕುಂ ॥
ಈ ಮಾಚಿತ್ರದಿ ಕಾಣ್ಗುಮಲ್ತೆ ದಿಟಮಲ್ಲಂ ತೋರ್ಕೆಯೆಂದೆಂಬುದಾ ।
ಭೀಮಾಕಾರವ ತಾಳ್ದೊಡೇಂ ಸದಯೆ ನೀಂ ಕಾವೇರಿ ಭದ್ರಂಕರೀ ॥ ೬ ॥

ಗತಿಯಿಂದದ್ಭುತಮಂ ಜನೋಪಕೃತಿಯಿಂದೌದಾರ್ಯಮಂ ನಿತ್ಯ ಶು ।
ದ್ಧತೆಯಿಂ ಶಾಂತಿಯನುಗ್ರಭಾವವ ಶಿಲಾನಿರ್ಭೇದದಿಂ ಪರ್ವತ ॥
ಚ್ಯುತಿಯಿಂ ರೌದ್ರವ ತಣ್ಪಿನಿಂ ಪ್ರಿಯತೆಯಂ ಗಾಂಭೀರ್ಯಮಂ ಘೋಷದಿಂ ।
ಸತತಂ ಬೋಧಿಸುತಿರ್ಪೆ ದೇವಿ ಸರಸೇ ಕಾವೇರಿ ಕಾವ್ಯಾಶ್ರಯೇ ॥ ೭ ॥

ಗಿರಿಯ ಕೆಲದಿ ಬನದ ನಡುವೆ ಝರಿಯ ತೆರದಿ ಸುಳಿದು ಬರುತೆ ।
ತಲದ ಶಿಲೆಯನಿರಿದು ಕೊರೆದು ಕೆಲದ ನೆಲವನರೆದು ಮುರಿದು ॥ ೮ ॥
ವಿಮಲ ಜಲದ ವಿಪುಲ ಧಾರೆಯಮೃತ ಲಹರಿಯಂತೆ ತೋರೆ ।
ದಣಿವ ಕಳೆಯುವೆಲರ ಬೀರಿ ಮೃದುಲ ರವದಿ ಮುಂದೆ ಸಾರಿ ॥ ೯ ॥

ಅತ್ತಲತ್ತ ಸುಳಿದು ಸುತ್ತಿ ಇತ್ತಲಿತ್ತ ಮೆಲ್ಲನೊತ್ತಿ ।
ಅಲ್ಲಿ ಬಳುಕುತಿಲ್ಲಿ ಬಾಗಿ ಅಲ್ಲಿ ಬಳಸುತಿಲ್ಲಿ ಸಾಗಿ ॥ ೧೦ ॥

ನೊರೆಯ ಸೇಸೆಗಳನು ಸೂಸಿ ತೆರೆಯ ಚವರಗಳನು ಬೀಸಿ ।
ಬಾಲೆಯಂತೆ ನಲಿದು ಕುಣಿದು ಕಾಳಿಯಂತೆ ಕನಲಿ ಮೊರೆದು ॥ ೧೧ ॥

ಉರಗಿಯಂತೆಯುರುಗಿ ತಿರುಗಿ ಛಲದ ಭರದಿ ಸರಿದು ಮಸಗಿ ।
ಬೆಟ್ಟದಿಂದಲುರುಳಿ ಹೊರಳಿ ದಿಟ್ಟತನದಿ ತೊಳಗಿ ಮೊಳಗಿ ॥ ೧೨ ॥

ಘೋರ ವೇಗದಿಂದ ನೆಗೆದು ಭೋರೆನುತ್ತೆ ಮಂಜನೆಸೆದು ।
ಪನಿಯ ಮುಗಿಲ ಕವಿಸಿ ಸರಿದು ಮನುಜ ಸೇವೆಯಿಂದಲೊಲಿದು ॥ ೧೩ ॥

ಬಲವ ಬೆಳಕ ನೀಡುತುಂ ನಿಲದೆ ನಾಟ್ಯವಾಡುತುಂ ।
ನುಗ್ಗಿ ಬೀಳುತೇಳುತುಂ ನೆಗೆದು ಪಾರುತೋಡುತುಂ ॥ ೧೪ ॥

ಭುವನ ರಚನೆಯೆನಿತು ಕುತುಕಮೆನುತ ಜನಕೆ ಸಾರುತುಂ ।
ಭುವನ ಜನನಿಯೆನಿತು ಚತುರಳೆನುತ ಕಣ್ಗೆ ತೋರುತುಂ ॥ ೧೫ ॥

ಪುರುಷ ಬಲವ ಬೆಳಗಿರೆನುತ ಜಡರ ಪಳಿದು ಮೊಳಗುತುಂ ।
ಪರಿವಳೀ ಕವೇರತನಯೆ ಧೀರಜನನಿಯೆನಿಸುತುಂ ॥ ೧೬ ॥

ಕನ್ನಡ ನಾಡಿನ ಕುತುಕಂ ।
ಕನ್ನಡಿಗರ ಸಾಹಸಕ್ಕೆ ಕನ್ನಡಿ ಮೇಣೀ ॥
ಕನ್ನಡಿಗರ ಭಾಗ್ಯದ ನಿಧಿ ।
ಯುನ್ನತಿಯಂ ಪಡೆದು ಬಾಳ್ಗೆ ಶಿವನ ಸಮುದ್ರಂ ॥ ೧೭ ॥

ರುಧಿರೋದ್ಗಾರಿ ಸಂ ॥
ಆಶ್ವಯುಜ ಶು ॥
೧೦೧೯ನೆಯ ಅಕ್ಟೋಬರ್‍ ೧೯೨೩

ಪದ್ಯ ೧ : ಗುಲ್ಮ-ಪೊದರು. ನದಿ ಗುಡ್ದವನ್ನು ಬಳಸಿ ಹರಿಯುವ ನೋಟ.
೨ : ಒಂದು ಕಡೆ ಜಲಪಾತ, ಒಂದು ಕಡೆ ವಿದ್ಯುದ್ಯಂತ್ರ.
೬ : ಸರಿತ್‍-ನದಿ; ರಾಮಾನೇತ್ರದಪಾಂಗ-ಚೆಲುವೆಯ ಕಣ್ಕುಡಿ ನೋಟ.
೮ : ಕೆಲದಿ-ಪಕ್ಕದಲ್ಲಿ.
೧೧-೧೨ : ಚವರ-ಚಾಮರ; ಉರಗಿ-ಹೆಣ್ಣು ಹಾವು; ಉರುಗಿ-ದುಡುಕಿ, ಮೊಂಡುತನ ಮಾಡಿ; ಭುವನಜನನಿ-ಪ್ರಕೃತಿ, Nature.
೧೬ : ಕವೇರತನಯೆ-ಕವೇರನೆಂಬ ಋಷಿಯ ಮಗಳಾದ ಕಾವೇರಿ.

Tuesday 6 February 2024

ಚಾಮುಂಡಿಯ ದೀಪಗಳು - ನಿವೇದನ - ಡಿವಿಜಿ

(ದೀವಳಿಗೆಯ ರಾತ್ರಿ-ಲಲಿತಾದ್ರಿಗೆ ಹೋಗುವಾಗ)

ಜ್ಯೋತಿಸ್ಸಮುದ್ರಮಿತ್ತಲ್‍ ।
ಭೂತಲದಾಂಧ್ಯದ ನಿವಾಸಮತ್ತಲ್‍ ನೋಡೀ ॥
ಕೌತುಕದ ಗಿರಿಪಥಂ ಮನು ।
ಜಾತರ ಜೀವನದ ಚಿತ್ರಗತಿಯಂ ಪೋಲ್ಗುಂ ॥ ೧ ॥

ಪುರದೀಪ ಪ್ರಭೆಯವೊಲಾ ।
ಗಿರಿಕಂದರದಮಿತ ಗಾಢ ತಿಮಿರೋತ್ಕರಮುಂ ॥
ಬೆರಗಾಗಿಪುದು ಮನಕ್ಕೀ ।
ಪರಿ ಸೋಜಿಗಮಲ್ತೆ ಸೃಷ್ಟಿ ವಿಭವಮದೆಂತುಂ ॥ ೨ ॥

ಗೌರಿಯ ನಿವಾಸ ಶೈಲಮ ।
ನಾರಾಧಿಸವೇಳ್ಕುಮೆಂದು ಗಗನತಲಂ ತಾಂ ॥
ತಾರಾಸಹಿತಂ ಬಂದವೊ ।
ಲಾರಾಜಿಪುದೀ ಪ್ರದೀಪ್ತ ಪುರ ದಿಗ್ಭಾಗಂ ॥ ೩ ॥

ನೀಲಾಂಭೋಧಿಯ ತೆರೆಗಳೊ ।
ಳೋಲಾಡುವ ದೀಪ್ತ ದೇವ ಯಾನೋತ್ಸವಮಂ ॥
ಪೋಲುತ್ತಿರ್ಪುವು ವಿದ್ಯು ।
ಜ್ಜ್ವಾಲೆಗಳೀ ಗಿರಿಯ ತಳದಿ ಚಿತ್ರಾಕೃತಿಯಿಂ ॥ ೪ ॥

ಮೂಲಪ್ರಕೃತಿಯಿನೊಗೆವೀ ।
ಜ್ವಾಲಾವಳಿ ಸಲ್ಗುಮಾಕೆಗೆನ್ನುತಲೀ ಭೂ ॥
ಪಾಲಂ ಘನ ವಿದ್ಯುನ್ಮಣಿ ।
ಮಾಲೆಯಿನೀ ಶೈಲವರಕಲಂಕೃತಿಗೆಯ್ದಂ ॥ ೫ ॥

ಪದ್ಯ : ಯಾನೋತ್ಸವ-ತೆಪ್ಪೋತ್ಸವ.
೫ : ಮೂಲಪ್ರಕೃತಿ-ಸೃಷ್ಟಿಶಕ್ತಿ, Nature, ಆದಿಶಕ್ತಿ, ಆ ಆದಿಶಕ್ತಿಯೇ ಗೌರಿ, ಪಾರ್ವತಿ, ಚಾಮುಂಡಿ.

Monday 5 February 2024

ಕೃಷ್ಣರಾಜ ಸಾಗರ - ನಿವೇದನ - ಡಿವಿಜಿ

ಕ್ರೀಡಾವಸ್ತು ವಿನೋದ ಪೇಟಿಕೆಯೆನಿಪ್ಪೀ ವಿಶ್ವಮಂ ಕೊಂಡು ನೀ ।
ವಾಡುತ್ತಗ್ಗದ ಜಾಣ್ಮೆಯಿಂದಮೊಲಿಸಲ್‍ ನಾಂ ಪಾರಿತೋಷಂಗಳಂ ॥
ನೀಡುತ್ತಿರ್ಪೆನೆನುತ್ತಲಾ ಪ್ರಕೃತಿ ಸಂಕೇತಗಳಿಂ ಪುತ್ರರಂ ।
ಬೇಡುತ್ತಿರ್ಪಳು ಕಾಡುತಿರ್ಪಳವಳಾ ತಂತ್ರಗಳೇಂ ಚೋದ್ಯಮೋ ॥ ೧ ॥

ಆ ವಿವಿಧ ವಸ್ತು ನಿಕರದೊ ।
ಳಾವಿಷ್ಟ ಮನಸ್ಕರಾಗಿ ತದ್ಯೋಜನೆಯೊಳ್‍ ॥
ಭಾವಿತ ಸುತಂತ್ರರಾದಾ ।
ಕೋವಿದರೀ ಭುವಿಗೆ ಮಾನ್ಯರವರೆ ವದಾನ್ಯರ್‍ ॥ ೨ ॥

ಶೀತಲ ಕಾವೇರೀ ಜಲ ।
ಪಾತದೆ ನಗರಗಳ ಬೆಳಗಿ ಕಜ್ಜಗಳೆಸಪಾ ॥
ಜ್ಯೋತಿಯ ನಿರ್ಮಿಸಿ ಭುವನ ।
ಖ್ಯಾತಿಯನೊಂದಿದನದೊರ್ವನತಿಶಯ ಚತುರಂ ॥ ೩ ॥

ಪರಿವಾ ಕಾವೇರಿಗೆ ನಾಂ ।
ಗಿರಿಯಂದದೊಳಡ್ಡವಿಟ್ಟು ಸರಸಿಯನತ್ತಲ್‍ ॥
ವಿರಚಿಸುವೆನೆಂದೊರ್ವಂ ।
ಪರಮೋತ್ಸಾಹದಿ ನೆಗಳ್ಚಿ ಮುಂದಡಿಯಿಟ್ಟಂ ॥ ೪ ॥

ಅವನಿಂದಾದುದು ನಯನೋ ।
ತ್ಸವಮಿದು ಶ್ರಿ ಕೃಷ್ಣರಾಜ ವಿಮಲ ಯಶೋ ವೈ ॥
ಭವಮಿದು ಜನಪದ ಸುಕೃತೋ ।
ದ್ಭವಮಿದು ಮೇಣ್‍ ಪುರುಷಕಾರ ಮಹಿಮಾನುಭವಂ ॥ ೫ ॥

ಪದ್ಯ ೧: ಕ್ರೀಡಾ... ಪೇಟಿಕೆ-ಆಟದ ಸಾಮಾನಿನ ಪೆಟ್ಟಿಗೆ Toy Box. ಕಾಡುತಿರ್ಪಳ್‍- Teases.
ಪದ್ಯ ೨: ವದಾನ್ಯರ್‍-ದೊಡ್ಡ ಮನಸುಳ್ಳವರು, ಉದಾರಿಗಳು.
ಪದ್ಯ ೩: ಮೈಸೂರಿನ (೧೮೮೩-೧೯೦೦) ದಿವಾನರಾಗಿದ್ದ ರಾಜ್ಯಧುರಂಧರ ಸರ್‍.ಕೆ. ಶೇಷಾದ್ರಯ್ಯರವರು.
ಪದ್ಯ ೪: ಮೈಸೂರಿನ (೧೯೧೨-೧೯೧೮) ದಿವಾನರಾಗಿದ್ದ ಸರ್‍. ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು.

ಜೋಗದ ಜಲಪಾತ - ನಿವೇದನ - ಡಿವಿಜಿ

ಗಿರಿ ಕಾನನಂಗಳೊಳ್‍ ಮುನಿ
ವರರಂ ಪರವಶರ ಗೈದ ಬೆಡಗೆಂತಹುದೆಂ ॥
ದರಿವೊಡೆ ತೆರಳ್ದು ಜೋಗಕೆ ।
ನಿರುಕಿಪುದಾ ನಿರ್ಝರ ಪ್ರಪಾತಾದ್ಭುತಮಂ ॥ ೧ ॥

ಪರದೈವಕ್ಕರ್ಘ್ಯಮನಾ ।
ದರದಿಂದಂ ಪ್ರಕೃತಿಯೀವ ತೆರನಿದೊ ಮೇಣೀ ॥
ಧರಣಿಯ ಸಂತಾಪವ ಪರಿ ।
ಹರಿಸಲ್‍ ವನದೇವಿ ಗೈವ ಸೇಕಮೊ ತಿಳಿಯೆಂ ॥ ೨ ॥

ಧೂರ್ಜಟಿ ಕಿರೀಟದಿಂದಾ ।
ಸ್ಫೂರ್ಜದ್ಗಂಗಾವರೋಹಮಾದ ಕ್ರಮಮಂ ॥
ಗರ್ಜಿತದಿಂ ಗಹನತೆಯಿಂ ।
ದೂರ್ಜಸ್ವತಿ ತೋರುತೀ ಶರಾವತಿಯಿಳಿವಳ್‍ ॥ ೩ ॥

ಒಂದೆಡೆ ವಕ್ರ ಶಿಲೋಚ್ಚಯ ।
ಮೊಂದೆಡೆ ವಿಸ್ತೃತ ಗಂಭೀರ ಭೀಕರ ಗರ್ತಂ ॥
ಸಂದಿರೆ ವಿಪಿನಾಂತರದೊಳ ।
ಮಂದ ಪ್ರಗತಿಯಿನುರುಳ್ವ ನದಿಯೇಂ ಸ್ಮಯಮೋ ॥ ೪ ॥

ಕ್ಷೀರಾಸೇಚನ ಧಾರೆಯಂತೆ ಸುರಿವಾ ನೀರ ಪ್ರವಾಹಂಗಳುಂ ।
ಸ್ಫಾರನ್ಮೌಕ್ತಿಕ ವೃಷ್ಟಿಯಂತೆ ಪೊಳೆವಾ ಬಿಂದು ಪ್ರವರ್ಷಂಗಳುಂ ॥
ಧಾರಾಭೃನ್ನಿ ಕರಂಬೊಲಾಡಿ ಸುಳಿವಾ ಫೇನ ಪ್ರತಾನಂಗಳುಂ ।
ತೋರುತ್ತಿರ್ಪುವದೊಂದು ಚಿತ್ರವ ಜನಕ್ಕಾ ಚೆಲ್ವನಾರ್‍ ಬಣ್ಣಿಪರ್‍ ॥ ೫ ॥

ಅತಿ ಗಾಂಭೀರ್ಯದಿ ಸಾರ್ವುದೇಂ ಮಗುಳೆ ನೀನೌದ್ಧತ್ಯದಿಂ ಪಾರ್ವುದೇಂ ।
ಲತೆಯಂತಾಡಿ ವಿಲಾಸದಿಂ ಸರಿವುದೇಂ ಶೈಲಾಗ್ರದಿಂ ಬೀಳ್ವುದೇಂ ॥
ಕ್ಷಿತಿಯೆಂದೇಳುತೆ ನಾಟ್ಯದಿಂ ನಲಿವುದೇಂ ಪಾತಾಳಮಂ ಸೇರ್ವವೋಲ್‍ ।
ಖತಿಗೊಂಡೋಡುವುದೇಂ ಶರಾವತಿಯಿದೇಂ ನಿನ್ನಾಯಮಂ ಬಲ್ಲರಾರ್‍ ॥ ೬ ॥

ಶಮಮಂ ಸೂಸುವೆ ಮತ್ತಂ ।
ರಮಣೀಯಾಕೃತಿಯನಾಂತು ಬಳುಕುವೆ ಮೇಣ್‍ ಸಂ ॥
ಭ್ರಮಿಸುತೆ ಘೋರಾವಟದೊಳ್‍ ।
ಗಮಿಸುವೆ ನಿನ್ನಯ ವಿಲೋಲ ಭಾವಮಿದೇನೌ ॥ ೭ ॥

ದಿವಸೇಶ್ವರಂಗೆ ನಲವಿಂ ।
ನವರತ್ನಚ್ಛವಿಯ ತೋರಿ ದರ್ಶದ 1 ನಿಶೆಯೊಳ್‍ ॥
ಧವಳಾಂಶುವಾಗಿ ತಾರಾ ।
ಧವನಂ ನೀನರಸಿ ಮೊರೆವುದೇಂ ಚಪಲತೆಯೋ ॥ ೮ ॥

ಇದು ಸೃಷ್ಟಿಯ ಹಾಸಮೊ ಮೇ ।
ಣಿದು ಧಾತ್ರಿಯ ಭಾಷ್ಪ ಸಲಿಲ ಧಾರೆಯೋ ನೋಳ್ಪ ॥
ರ್ಗಿದು ನವನವಮೆನಿಸುತೆ ತೋ ।
ರ್ಪುದದೊಂದಗ್ಗದ ಸರೌದ್ರ ಸಂಮೋಹನಮಂ ॥ ೯ ॥

ಮೈಸೂರು ಬಂಗಲೆ, ಜೋಗ
ಅಮಾವಾಸ್ಯೆ, ಕಾರ್ತಿಕ
೭ ನೆಯ ಡಿಸೆಂಬರ್‍ ೧೯೨೩.

Saturday 3 February 2024

ಕೊಡಗಿನ ಬೆಡಗು - ನಿವೇದನ - ಡಿವಿಜಿ

*ಕೊಡಗಿನ ಬೆಡಗು - ನಿವೇದನ - ಡಿವಿಜಿ*
(ತಲಕಾವೇರಿಯ ಬಳಿ–ಬ್ರಹ್ಮಗಿರಿಯ ಮೇಲಿನಿಂದ)

ಬಿದಿಯದ್ಭುತ ಕಾರ್ಯಾಂಗಣ ।
ಮಿದು ಸೃಷ್ಟಿಯ ರತ್ನಪೇಟಿಯಲ್ಲದೊಡಿಂತ ॥
ಗ್ಗದ ಚಿತ್ರದಿ ಸೇರ್ದಪುವೇಂ ।
ಹ್ರದಿನೀ ಗಿರಿ ಕಂದರಾಟವೀ ವಿಭವಂಗಳ್‍ ॥ ೧ ॥

ಈ ವಿಭವಮುಮೀ ಬೆಡಗುಂ ।
ಭಾವೋತ್ಕರ್ಷವನೊಡರ್ಚುವೀ ರಮ್ಯತೆಯುಂ ॥
ದೈವ ಪ್ರಸಾದ ಲಹರಿಯ ।
ಕಾವೇರಿಯ ಜನನಸದನಕಲ್ಲದೆ ಸರಿಯೇಂ ॥ ೨ ॥

ಭುವನ ಕುಲಾಲನೀ ಗಿರಿಯ ನಾಭಿಯನಾಗಿಸಿ ತನ್ನ ಚಕ್ರಮಂ ।
ಜವದಿ ಪರಿಭ್ರಮಂಗೊಳಿಸೆ ಪುಟ್ಟಿದ ವರ್ತುಲ ಜಾಲಮೇನೆನಿ ॥
ಪ್ಪವೊಲೆಸೆಯುತ್ತುಮಿರ್ಪುದಿದರೆಣ್ದೆಸೆಯೊಳ್‍ ವನಶೋಭಿ ಪರ್ವತ ।
ಪ್ರವಲಯ ಪಂಕ್ತಿಯಚ್ಚರಿಯ ಬೀರುತೆ ಲೋಚನಮೋಡುವನ್ನೆಗಂ ॥ ೩ ॥

ಜಲಧಿಯನನುಕರಿಸುವೆನೆಂ ।
ದಿಳೆಯುಂ ತಾಂ ಕರಗಿ ಪರಿದು ನೆರೆ ಬೀಗುತೆ ಪೇ ॥
ರಲೆಗಳ ತಳೆದಿರ್ಪಂದದಿ ।
ವಿಲಸಿಪುವಾ ವಿಪುಲ ಶೈಲ ಸರಣಿಯ ಸಾಲ್ಗಳ್‍ ॥ ೪ ॥

ಧರಣಿಯ ಸುಕೃತ ಚಯಂಗಳ್‍ ।
ಸುರಪದಸೋಪಾನಮೆಂದು ಗಿರಿಶಿಖರಗಳೊಳ್‍ ॥
ನೆರೆದಿಹುವೇನೆನಿಪಂದದಿ ।
ಮರೆದಪುದಾ ಧವಳ ಮೇಘ ಮಂಡಲ ವಿಸರಂ ॥ ॥ ೫ ॥

ವಿಶ್ವಶಿಲ್ಪಿಯ ಚಿತ್ರ ಚಾತುರಿಯ ಬಗೆಗೊಳಿಪ
ವಿವಿಧ ವರ್ಣಾಕಾರ ಪಟಲದಿಂದಂ ॥
ಸ್ವಾತಂತ್ರ್ಯ ಸಾಮ್ರಾಜ್ಯ ಗರ್ವಚೇಷ್ಟಿತಮೆನಿಪ
ಶಾಖೋಪಶಾಖಾ ಪ್ರತಾನದಿಂದಂ ।
ಮಂದ ಪರಿಮಳಿತ ಶೀತಲ ವಾತ ಸಂಚಲಿತ
ಕುಸುಮ ಕಿಸಲಯ ಫಲಪ್ರಕರದಿಂದಂ ।
ಶಬ್ದಸರ್ವಸ್ವಾವತಾರಮೆಂದೆನಿಪ ಮೃಗ
ವಿಹಗ ಕೀಟಕ ಕೋಟಿ ನಾದದಿಂದಂ ॥
ಸೊಗಯಿಪಾ ತರುಗುಲ್ಮ ಲತೆಗಳಿಂ ನಿಬಿಡಮಾಗಿ ।
ರವಿಯನವಗಡಿಸಿ ಯೋಜನಶತವನಿಂಬುಗೊಳಿಸಿ ।
ಸೃಷ್ಟಿಮಾಹಾತ್ಮ್ಯ ಸಂಸ್ಫೂರ್ತಿ ಪ್ರಕೀರ್ತಿಯೆನಿಸಿ ।
ಮಾತ ಮೂದಲಿಸುತಿಹುದೀ ಮಹಾರಣ್ಯ ಸರಣಿ ॥ ೬ ॥

ಗಿರಿಗಳ ಕಂದರಗಳ ನಿ ।
ರ್ಝರಗಳ ವಿಪಿನಗಳ ವಕ್ರಪಥಗಳ ದರ ಸುಂ ॥
ದರ ಶಮಕರ ರೂಪಂಗಳ ।
ನರಿವೊಡೆ ನೀಂ ನಡೆದು ನೋಡು ಕೊಡಗಿನ ಬೆಡಗಂ ॥ ೭ ॥

ಪ್ರಕೃತಿಯ ನರ್ತನರಂಗಂ ।
ಸುಕೃತಾತ್ಮರಿಗಿದುವೆ ಲೋಚನೋತ್ಸವರಂಗಂ ॥
ಅಕೃತಕ ಕವಿತಾ ರಂಗಂ ।
ವಿಕೃತಮನಸ್ಕರಿಗಿದೊಂದು ಶಾಂತಿಯರಂಗಂ ॥ ೮ ॥

(21ನೆಯ ನವಂಬರ್‍ 1923)

Friday 2 February 2024

ನಿವೇದನ - ಡಿವಿಜಿ

ಮೇಲೆ ನೋಡೆ ಕಣ್ಣ ತಣಿಪ
ನೀಲ ಪಟದಿ ವಿವಿಧ ರೂಪ
ಜಾಲಗಳನು ಬಣ್ಣಿಸಿರ್ಪ
ಚಿತ್ರ ಚತುರನಾರ್‍ ।
ಕಾಲದಿಂದೆ ಮಾಸದಾ ವಿ
ಚಿತ್ರವೆಸಪನಾರ್‍ ॥ ೧ ॥

ಸುತ್ತ ಪೊಳೆವ ಶೈಲಗಣದ
ಕೊತ್ತಲಂಗಳಿಟ್ಟು ಕಡಲ
ಸುತ್ತುಗಟ್ಟಿ ಕೋಟೆಯಿದನು
ಕಲ್ಪಿಸಿರ್ಪನಾರ್‍ ।
ವಸ್ತುಚಯವನಿಂತು ರಚಿಪ
ಶಿಲ್ಪಿವರ್ಯನಾರ್‍ ॥ ೨ ॥

ಗಿರಿಯ ತೊರೆಯ ಬನದ ಹೊಲದ
ಬೆರಗಿನಿಂದೆ ಮೃಗದ ಖಗದ
ಮೆರೆತದಿಂದಲೀ ವಿಹಾರ
ಭವನವೆಸಪನಾರ್‍ ।
ಮರೆಯಲಿರ್ದು ಸೊಗವನಿಂತು
ಕವಿಸುತಿರ್ಪನಾರ್‍ ॥ ೩ ॥

ಜ್ಯೋತಿಗಳನು ಗಗನ ತಲದಿ
ಗೀತಗಳನು ವಿಹಗ ಮುಖದಿ
ಪ್ರೀತಿಗಳನು ಜನದ ಮನದಿ
ತೋರುತಿರ್ಪನಾರ್‍ ।
ಮಾತನುಳಿದ ಕವಿತೆಯಿಂತು
ಬೀರುತಿರ್ಪನಾರ್‍ ॥ ೪ ॥

ಅವನ ಕೃತಿಯ ನೋಡಿ ಮಣಿವೆ
ವವನ ದನಿಯ ಕೇಳೆ ನಲಿವೆ
ವವನ ಭಿಕ್ಷೆಯುಂಡು ಬೆಳೆವೆ
ವವನನರಿಯೆವು ।
ಅವನ ಲೀಲೆಗಳನು ಕಾಣ್ಬೆ
ವವನ ಕಾಣೆವು ॥ ೫ ॥

ರವಿಗೆ ಬೆಳಕ ಭುವಿಗೆ ಬಲವ
ಜವವ ವಾಯುಗೀವ ತೆರದಿ
ಕವಿಯ ವಚನಕವನೆ ಸರಸ
ಭಾವವೀವನು ।
ಅವನೆ ಶಿಲ್ಪ ಚಿತ್ರಕೃತಿಗೆ
ಜೀವವೀವನು ॥ ೬ ॥

ಪಿಡಿದು ಗುರುವೆನುತ್ತಲಾತ
ನಡಿಯ ಮನದೊಳವನ ಬಲದೆ
ನುಡಿಯಲರಿತ ಕವಿಯೆ ಜಗದಿ
ಧನ್ಯನು ।
ಮುಡುಪನವಗೆ ಸಲಿಪ ಶಿಲ್ಪಿ
ವರನೆ ಗಣ್ಯನು ॥ ೭ ॥

ಮನಕೆ ತೋರ್ಪೆ ಸೊಬಗನೆಲ್ಲ
ತನಗೆ ತುಷ್ಟಿಯಪ್ಪ ತೆರದಿ
ಜನಕೆ ನುಡಿಯಲರಿತ ಸುಕವಿ
ತಿಲಕನಾತನು ।
ಅನುವಿನಿಂದ ಬರೆವ ಕಲೆಯ
ಕಲಿತನಾತನು ॥ ೮ ॥

ಅನಿತು ಗುರುವಿನೊಲುಮೆಯಿಲ್ಲ
ವನಿತು ಮತಿಯೊಳೆಸಕಮಿಲ್ಲ
ವಿನಿಸು ಭಕುತಿ ಮಾತ್ರವೆನ್ನ
ನುಡಿಸುತಿರ್ಪುದು ।
ಜನುಮ ಭುವಿಯ ಮಮತೆ ಬಾಯ
ಬಿಡಿಸುತಿರ್ಪುದು ॥ ೯ ॥

ಉನ್ನತಾಚಲವನು ಮಸಕು
ಗನ್ನಡಿಯಲಿ ತೋರಲೆಳಸು
ವೆನ್ನಕಜ್ಜವಿದನು ಬುಧರು
ಜರೆದು ನಗುವರೇಂ ।
ಸನ್ನೆಯಿಂದೆ ಪಸುಳೆಯುಲಿಯೆ
ಪಿರಿಯರೊಲಿಯರೇಂ ॥ ೧೦ ॥

ಎನ್ನ ಮನೆಯೊಳೆಸೆದ ಬೆಳಕೆ
ಎನ್ನ ಬದುಕಿನೊಂದು ಸಿರಿಯೆ
ನಿನ್ನನಿನಿಸು ಹರುಷಗೊಳಿಸೆ
ಬರೆದ ಬರಹವ ।
ಇನ್ನದೆಂತು ನೋಡಿ ನಗುತ
ಲೊರೆವೆ ಸರಸವ ॥ ೧೧ ॥

ಕಿರಿಯ ಮಕ್ಕಳಳುವ ದನಿಗೆ
ಪಿರಿಯರಿಡುವ ಕಣ್ಣ ಪನಿಗೆ
ಕರಗದೆದೆಯ ಬಿದಿಯು ಬಣಗು
ಕವಿತೆಗೊಲಿವನೇಂ ।
ಮರುಳು ನುಡಿಯನಿದನು ನಿನ್ನ
ಕಿವಿಯೊಳುಲಿವನೇಂ ॥ ೧೨ ॥

ಇರಲಿ; –ಜಗದಿ ಜನರು ಕಣ್ಗೆ
ದೊರೆಯದೊಂದ ನೆನೆದು ಕುಸುಮ
ವಿರಿಸಿ ಪೂಜೆಗೈದೆವೆಂದು
ನಲವ ತಾಳ್ವವೊಲ್‍ ।
ಕೊರಗಿ ನಿನ್ನ ನೆನಪಿಗಿದನು
ಸಲಿಪೆನಳ್ತಿಯೊಳ್‍ ॥ ೧೩ ॥

ನೆನಪು ನಿನ್ನ ಬಾಳ್ಕೆಯಮಲ
ಗುಣದ ಸೊಬಗ ಪಡೆಯಲಾಗ
ಮಣಿಯ ಮಿಸುನಿಯೊಡನೆ ಕೂಡಿ
ಮಿರುಗುವಂದವು ।
ವನದಿ ಸುರಭಿ ಕಲನವಂಗ
ಳಿರುವ ಚೆಂದವು ॥ ೧೪ ॥

ದೈವ ಕೃತಿಯ ಸೊಬಗ ಸರಸ
ಭಾವತತಿಯ ಸೊಬಗ ಸುಜನ
ಜೀವ ಕಥೆಯ ಸೊಬಗ ಬರಿಯ
ಕನಸದೆಂಬರೇಂ ।
ಬೇವ ಮನವ ಸೊಬಗಿನೊಂದು
ನೆನಪೆ ತಣಿಸದೇಂ ॥ ೧೫ ॥

Thursday 1 February 2024

ಕೇತಕೀ-ಕೇದಗೆ - ಕೇತಕೀವನ - ಡಿವಿಜಿ

ಮನಕೆ ಮತ್ತೀ ಗಂಧ
ತನುವು ಚೆಂಬೊನ್ನಂದ
ವನಸುಮ ಮಧುಸ್ಯಂದ
ಏನೆನ್ನ ಭಾಗ್ಯ!
ಎಷ್ಟೆಲ್ಲಿ ಭೋಗ್ಯ!

ಔತಣವು ತನಗೆಂದು
ಆತುರದಿ ಮರಿದುಂಬಿ
ಕೀರ್ತಿ ಬಣ್ಣವ ನಂಬಿ
ಕೇತಕಿಗೆ ತುತ್ತು
ಕ್ಷುತ್ತಿಂಗೆ ಮಿತ್ತು

ಧೂಳ್‍ ಕಣ್ಣ ಕವಿದು
ಮುಳ್‍ ರಕ್ಕೆ ಹರಿದು
ಲದ್ದಿ ತುಟಿ ಬಿಗಿದು
ಮಧುಪಂಗೆ ಮಸಣ
ವಿಧಿಗದುವೆ ಹಸನ

ಜೀವ ವಿಭ್ರಾಂತಿ
ಸಾಕೆ ವಿಶ್ರಾಂತಿ.

*************
ಗಂಧಾಢ್ಯಾ ಸಾ ಭುವನವಿದಿತಾ ಕೇತಕೀಸ್ವರ್ಣಪರ್ಣಾ ।
ತೋಯಭ್ರಾಂತ್ಯಾ ಕ್ಷುದಿತಮಧುಪಃ ಪುಷ್ಪಮಧ್ಯೇ ಪಪಾತ ॥
ಅಂಧೀಭೂತಃ ಕುಸುಮರಜಸಾ ಕಂಟಕೈಶ್ಛಿನ್ನ ಪಕ್ಷಃ ।
ಸ್ಥಾತುಂ ಗಂತುಂ ದ್ವಯಮಪಿ ಸಖೇ ನೈವಶಕ್ತೋ ದ್ವಿರೇಫಃ ॥

ಕಾವ್ಯ - ಕೇತಕೀವನ - ಡಿವಿಜಿ

ಹೃದಯಂ ಹೃದಯದೊಡಂ ಸಂ-
ವದಿಸುತೆ ಬದುಕಿರ್ಪ ಮನೆಯ ಮೊಡಕೊಂದರೊಳಿಂ* ।
ಮುದ ಖೇದ ಕರುಬು ಬೆರಗುಗ-
ಳೆದೆಯೊತ್ತನುಭವಕೆತರುವ ವಾಕ್ಯಮೆ ಕಾವ್ಯಂ ॥

ರುದಿತವ ಮುದಿತವ ಮಾನವ
ಹೃದಯದ ವಿಲಸಿತವನೆಲ್ಲ ಶಬ್ದವಿಭವದಿನೆ- ।
ಮ್ಮೆದೆಗನುಭವವಾಗಿಪ್ಪಾ
ಪದಯೋಗಮೆ ಕಾವ್ಯಮದುವೆ ಜೀವಕೆ ಭವ್ಯಂ ॥

ಕಾವ್ಯಂ ಹೃತ್ಸಂಭಾವ್ಯಂ
ಸೇವ್ಯಂ ಸರ್ವಾಂತರಂಗ ಪರಿಪಾಕಿಗೆ ತಾಂ ।
ಜೈವ್ಯಂ ಜೀವನಸಾರಂ
ಜೈವ್ಯಂ ಪ್ರಭವ ಪ್ರಸಾದ ಮಹಿಮೆಗಳಿಂದಂ ॥

Wednesday 31 January 2024

ಪ್ರೇಮ - ಕೇತಕೀವನ - ಡಿವಿಜಿ

ಜನನಾಂತರ ಋಣಶೇಷಂ
ಮನಸಿನ ಗಹ್ವರದೊಳುದಿಸಿ ತನ್ನಂ ಪೋಲ್ವಾ ।
ಋಣಕಾಂಡದೊಳವಲಂಬನೆ
ತನಗಪ್ಪನ್ನಂ ನಿಜ ಪ್ರಣಯ ಲತೆ ಬೆಳೆಗುಂ ॥

ಪ್ರೇಮಂ ಜೀವಿತ ಕುಸುಮಂ
ಸಾಮೋದಂ ಸಕಲ ಜೈವ ಸಾರ ಪರಾಗಂ ।
ಮಾಮಕತೆಯ ಕಲಿಸಿ ತೊಳೆವುದ
ದಾಮರಕಂ ತೀರ್ಥಮದರವೊಲ್‍ ಪೆರತುಂಟೇ ॥

ನಾಮಿರ್ವರೆನ್ನುತಿದ್ದರ್‍
ನಾಮೀರ್ವರೆ ಕೂಡಲೊರ್ವನಂತಹರೀಗಳ್‍ ।
ಪ್ರೇಮದ ಬೆರಗಿನ ಮಾಟಮ
ದಾಮಿಷಮಾತ್ರದಿನೆ ನಡೆವ ಮಾಳ್ಕೆಯದಲ್ಲಂ ॥

ಜೀವಾನ್ಯೋನ್ಯ ವಿಭಾವಂ
ಪಾವಕಮುಭಯರ್ಗಮಾತ್ಮಲಾಭ ವಿಧಾನಂ ।
ದೈವಿಕಮದಮಾನುಷ್ಯಂ
ಆವಶ್ಯಕಯಂತ್ರಮಾತ್ಮವಿಸ್ತರ ನಯದೊಳ್‍ ॥

ಪ್ರೇಮಂ ಜೀವಾನ್ಯೋನ್ಯಂ
ತಾಮರೆಜೀವಂಗಳೆರಡುಮೇಕದ ಭಾಗಂ ।
ಧಾಮಂ ತಮಗೊಂದೆನುವೊಲ್‍
ಕಾಮಿಸುತಿರಲದುವೆ ನಿಜದಿನಾದ ಪ್ರೇಮಂ ॥

ನವ ಮಣಿ ಸೂತ್ರ - ಕೇತಕೀವನ - ಡಿವಿಜಿ

ನವ ಮಣಿ ಸೂತ್ರ - ಕೇತಕೀವನ - ಡಿವಿಜಿ
 
ಎಲ್ಲರನಾಳುವನೆಲ್ಲರೊಳಿರುವಂ ।
ಸಲ್ಲಿಪೆನವನಿಗೆ ಜೀವಿತ ಸುಮವಂ ॥ ೧

ದೇವನ ಸೊತ್ತೀ ಜಗವೆನದಲ್ಲಂ ।
ಸೇವಕ ನಾನವನಿತ್ತುದನುಣುವೆಂ ॥ ೨

ಮನವಾಕ್ತನುಗಳ ಕರ್ಮಂ ಸರ್ವಂ ।
ದಿನ ನಿಶಿಯೆನ್ನಯ ಹರಿಕೈಂಕರ್ಯಂ ॥ ೩

ಗೃಹ ಕುಲ ಜನಪದ ನೀತಿ ನಿಯಮನಂ ।
ವಿಹಿತಂ ನರಜನ್ಮಕೆ ಸಂಸ್ಕರಣಂ ॥ ೪

ಎನ್ನದು ಕೃಷಿತಂ ದೈವಿಕ ಫಲಿತಂ ।
ಹಣ್ಣೋ ಹುಲ್ಲೋ ಸಮವೆನೆ ಕೊಳುವೆಂ ॥ ೫

ಗುಡಿಯ ಹಸಾದದವೊಲು ಕರ್ಮಫಲಂ ।
ಗುಡವೋ ಮೆಣಸೋ ಸಮದಿಂ ಗ್ರಾಹ್ಯಂ ॥ ೬

ಇಳೆ ದೇವೋದ್ಯಾನಂ ನೀಂ ಭೃತ್ಯಂ ।
ಕಳೆ ಪರಿ ನೀರೆರೆ ಕಾವುದು ಕೃತ್ಯಂ ॥ ೭

ಸಹಜದೆ ಪಶು, ಸಂಸ್ಕಾರದೆ ಪುರುಷಂ ।
ಇಹಪಥದಿ ಹರಿಸ್ಮೃತಿಯಿರೆ ಕುಶಲಂ ॥ ೮

ಗುರಿಯೊಂದೊಳ್ಕಜ್ಜಮಿರಲ್‍, ಸ್ವತೆಯಂ ।
ಮರೆಯಿಪುದದು ಜೀವಕೆ, ಶುಭದುದಯಂ ॥ ೯

ಲೋಕದ ತರುವಿಂ ಜೀವಿತ ಕುಸುಮಂ ।
ಲೋಕೇಶಾರ್ಚೆಗೆ ಪಾಲಿಸು ವನಮಂ ॥ ೧೦


To receive the posts on your personal email, pls subscribe to https://groups.google.com/g/todayskagga

Tuesday 30 January 2024

ಸರ್ವಂ ಶಿವಂ - ಕೇತಕೀವನ - ಡಿವಿಜಿ

ಭಾನುಬಿಂಬದೊಳಾರೊ
ಎನ್ನೆದೆಯೊಳವನು ।
ನಾನೆಂಬವನದಾರೊ
ನೀನುಮವನು ॥

ಬಾನ ಗಾಳಿಯೊಳಾರೊ
ಎನ್ನುಸಿರೊಳವನು ।
ನಾನೆನುತ್ತಿಹನಾರೊ
ನೀನುಮವನು ॥

Sunday 28 January 2024

ಆಡೋಣ, ಹಾಡೋಣ ಬಾ - ಕೇತಕೀವನ - ಡಿವಿಜಿ

ಯಾರೆಲ್ಲಿ ಹೋದರೇನು
ಊರು ಕೊಳ್ಳೆಯಾದರೇನು
ನಾರಿ ಮೀಸೆ ತೊಟ್ಟರೇನು
ಆಡೋಣ ಹಾಡೋಣ ಬಾ- ಗಿಣಿಯೇ
ನಾಡೇನು ಕಾಡೇನು ಬಾ.

ಲೋಕವೆಂಬುದೊಂದು ಸಂತೆ
ಬೇಕು ಬೇಡಗಳ ಕಂತೆ
ಸಾಕು ನಮಗಾ ಚಿಂತೆ
ಆಡೋಣ ಹಾಡೋಣ ಬಾ-ಗಿಣಿಯೇ
ನಾಡೇನು ಕಾಡೇನು ಬಾ.

ಚಿಂತೆಪಟ್ಟು ಫಲವೇನು
ಪಂತ ತೊಟ್ಟು ಗೆಲುವೇನು
ಸಂತಸಕ್ಕೆ ಬೆಲೆಯೇನು
ಆಡೋಣ ಹಾಡೋಣ ಬಾ-ಗಿಣಿಯೇ
ನಾಡೇನು ಕಾಡೇನು ಬಾ.

ಗಗನ ಬರಿ ನೀಲ ಕಡಲು
ಮುಗಿಲ ಮೂಟೆ ನಮ್ಮೊಡಲು
ದುಗುಡ ಬಿಡು ಸೊಗವ ತೊಡು
ಆಡೋಣ ಹಾಡೋಣ ಬಾ-ಗಿಣಿಯೇ
ನಾಡೇನು ಕಾಡೇನು ಬಾ.

Friday 19 January 2024

123

ಕೇಳೌ ಹೃದಯೇಶ್ವರಿ ನೀ- ।
ನಾಲಿಪುದಾನೊರೆವ ಧರ್ಮಸೂಕ್ಷ್ಮವ ದಯಿತೇ ॥
ತಾಳಳಲನ್‍, ಎದೆಯ ಸಂತವಿ- ।
ಡಾಲೋಚಿಸು ತತ್ತ್ವಗತಿಯ ಶಾಂತದ ಮನದಿಂ ॥ ೩೮


ಜಾನಕಿ ನೀಂ ಸುಖದುಃಖಸ- ।
ಮಾನಸ್ವೀಕಾರೆಯೆಂದು ನಾನೆಣಿಸಿರ್ದೆನ್‍ ॥
ಮಾನವಸಾಮಾನ್ಯರವೊಲೆ ।
ನೀನುಂ ವೈಷಯಿಕ ಮೋಹ ಮೋಕಾವೃತಳೇಂ? ॥ ೩೯

ಧರಣಿಜೆ ಧರ್ಮದ ತುಲೆಯೊಳ್‍ ।
ಪುರುಷಂ ನಿಜಭೋಗ ಲೋಕಸಂಸ್ಥಿತಿಯೆಂಬೀ ॥
ಎರಡು ಧನಂಗಳ ತೂಗಿಸಿ ।
ಗುರುತರವಂ ಗ್ರಹಿಪುದಲ್ತೆ ಸುಕೃತ ವಿವೇಕಂ? ॥ ೪೦

ದೊರೆಯ ಕುಟುಂಬಂ ಪ್ರಜೆ, ಪಾ- ।
ಮರರೋ ಪಂಡಿತರೊ ಆರೊ ಪರಿಪಾಲ್ಯರವರ್‍ ॥
ಗುರುವೊಲು ಗೃಹಪತಿವೊಲವಂ ।
ಪರಿರಕ್ಷಿಪುದವರ ಧರ್ಮಸಮಯಾದರಮಂ ॥ ೪೧

ಜನದೊಳ್‍ ದಂಪತಿಜೀವನ- ।
ಧನುರಾಗವ ಶಂಕೆ ಸೋಕದಂತೆಸಗಲ್‍ ಮೇ- ॥
ದಿನಿಪಾಲಪಾಲೆಯರ್‍ ತಾಂ ।
ಮನೆಬದುಕಂ ಬಲಿಯ ಕುಡುವುದೆನೆ ತಪ್ಪುವರೇಂ? ॥ ೪೨

ಅನ್ಯಾಯವ ನಿನಗೆಸಗದೆ ।
ನಾಣ್ನುಡಿಗಾಂ ಕಿವಿಯ ಕುಡದೆ ನಡೆದಿರಲಾಗಳ್‍ ॥
ಮುನ್ನಿನ ಧರ್ಮಾಚರಣೆಗೆ ।
ಮನ್ನಣೆಯಂ ನೀಡುತಿರ್ಕುಮೇಂ ಜಾನಪದಂ? ॥ ೪೩

ತ್ಯಾಗಕೆ ನಾಂ ಮನಮಿಲ್ಲದೆ ।
ಲೋಗರ ಮಾತೇನದೆಂದುಪೇಕ್ಷಿಸಿ ಬಾಳ್ದುಂ ॥
ಬೇಗುದಿಯದುಸಿರುತಿರ್ದೆವೆ? ।
ಬಾಗಿಸದೇಂ ಚಿಂತೆ ನಮ್ಮ ಶಿರಗಳನಂದುಂ? ॥ ೪೪

ಸಲುವುದಬಲರಿಗೆ ಮರುಕಂ ।
ಬಲವಂತರ್ಗುಚಿತಮಾತ್ಮನಿಗ್ರಹನಿಯಮಂ ॥
ಎಳೆಗೂಸನೆತ್ತಿಕೊಳುವಳು ।
ಬೆಳೆದವನಂ ತಾಯಿ ನಡೆಯ ಪೇಳಳೆ ನಲವಿಂ? ॥ ೪೫

ಊರ್ಮಿಳೆಯೇಂ ಲಕ್ಷ್ಮಣನೊಳು ।
ಕೂರ್ಮೆಯನಿಡದವಳೆ? ಬಗೆದು ನೈಜಸ್ಥಿತಿಯಂ ॥
ಧರ್ಮವನರಿತದರರ್ಚೆಗೆ ।
ನಿರ್ಮಲಜೀವಿತವನಿತ್ತಳವಳೆ ಸುತೃಪ್ತಳ್‍ ॥ ೪೬

ನಿನಗದಕಿಂತಾದುದೇಂ? ।
ವನವಾಸಕ್ಲೇಶ ನಿನಗೆ ಪೊಸತೆರದೆಡರೇಂ? ॥
ಎಣಿಸೆಯ ನಿನ್ನಂತೆಯೆ ನಾ- ।
ನನುಭವಿಸಿಹೆನೆಂದು ನಿನ್ನ ವಿವಸಿಸಿದಳಲಂ? ॥ ೪೭

ಚಿರದಿಂ ರಾಜ್ಯವ ಕಾಯ್ದು ಜಾನಪದದಂಗೀಕಾರದಿಂ ನಿಂದು ಸು- ।
ಸ್ಥಿರಮಾರ್ಗಂಗಳೊಳೆಲ್ಲರಂ ನಡೆಯಿಸುತ್ತಿರ್ಪಾರ್ಷಧರ್ಮಂಗಳೊಳ್‍ ॥
ಧರಣೀಸಂಭವೆ ನಿನ್ನ ನನ್ನ ಕಥೆಯಿಂ ಲೋಗರ್ಗೆ ಸಂದೇಹಮಂ- ।
ಕುರಿಸಲ್ಕಾಗದವೋಲು ನಾಮಿರುವುದೆಂದಾಂ ಗೈದೆನಾ ಕ್ರೂರಮಂ ॥ ೪೮

ಮಾತೆಕ್ಷ್ಮಾದೇವಿಸರ್ವಂಸಹೆಶಮಮಯೆಸಾಕ್ಷಾತ್‍ ಕ್ಷಮಾಮೂರ್ತಿನಿನ್ನಾ ।
ತಾತಂ ರಾಜರ್ಷಿಮುಖ್ಯಂ ಜನಕ ನರವರಂ ಬ್ರಹ್ಮಯೋಗಪ್ರತಿಷ್ಠಂ ॥
ಸೀತೇ ನೀಂ ತ್ಯಕ್ತಸರ್ವಸ್ಪೃಹೆಯವರವೊಲೇ ಲೌಕಿಕದ್ವಂದ್ವ ಭೋಗಾ- ।
ತೀತಾಂತರ್ಭಾವೆಯೆಂದಾನೆಣಿಸಿದೆನದು ತಾನಾಯಿತೆನ್ನ ಪ್ರಮಾದಂ ॥