Sunday 26 November 2023

ಉಮರನ ಒಸಗೆ - 03 - ಕನಸೊಂದ ಮುಂಜಾವದಲಿ ಕಂಡೆನೇನೆಂಬೆನ್ ?

ಕನಸೊಂದ ಮುಂಜಾವದಲಿ ಕಂಡೆನೇನೆಂಬೆನ್ ?

ಅರವಟಿಗೆಯಿಂದೆ ಸದ್ದೊಂದಾದುದಿಂತು :

" ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ

ನಿಮ್ಮೊಡಲಬಟ್ಟಲೊಳು ರಸವಿಮರ್ವ ಮುನ್ನ


ಕನಸೊಂದ ಮುಂಜಾವದಲಿ ಕಂಡೆನೇನೆಂಬೆನ್ ?

ಕಂಡೆನೇನೆಂಬೆನ್ = ಕಂಡೆನ್ + ಏನು + ಎಂಬೆನ್

ಎಂಬೆನ್ = ಹೇಳುವೆನು.

ಮುಂಜಾವಿನಲ್ಲಿ ಒಂದು ಕನಸನ್ನು ಕಂಡೆನು. ಏನು ಎಂದು ಹೇಳುವೆನು.

ಅರವಟಿಗೆಯಿಂದೆ ಸದ್ದೊಂದಾದುದಿಂತು :

ಅರವಟಿಗೆ = ಮಧುವಾಟಿಕೆ, ಹೆಂಡದಂಗಡಿ 

ಸದ್ದೊಂದಾದುದಿಂತು = ಸದ್ದು + ಒಂದು + ಆದುದು + ಇಂತು.

ಮಧುವಾಟಿಕೆಯಿಂದ ಈ ರೀತಿಯ ಒಂದು ಸದ್ದು ಆಯಿತು, ಅಂದರೆ ಕೇಳಿಸಿತು.

" ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ

ಎಲೆ ಮಕ್ಕಳಿರಾ ಎದ್ದೇಳಿ, ನಿಮ್ಮ ಬಟ್ಟಲನ್ನು ತುಂಬಿ ಕೊಳ್ಳಿರಿ.

ನಿಮ್ಮೊಡಲಬಟ್ಟಲೊಳು ರಸವಿಮರ್ವ ಮುನ್ನ

ರಸವಿಮರ್ವ = ರಸವ್ +ಇಮರ್, ಇಮರ್ = ಒಣಗು, ಇಮರ್ವ = ರಸವು + ಒಣಗುವ 

ನಿಮ್ಮ ಒಡಲ ಬಟ್ಟಲಲ್ಲಿ ಇರುವ ರಸವು ಒಣಗಿ ಹೋಗುವುದಕ್ಕೆ  ಮುಂಚೆ,

ಎಲೆ ಮಕ್ಕಳಿರಾ, ನಿಮ್ಮ ದೇಹದ ಬಟ್ಟಲಲ್ಲಿ ಇರುವ ರಸವು ಒಣಗಿ ಹೋಗುವ ಮುಂಚೆ ನಿಮ್ಮ  ಬಟ್ಟಲನ್ನು ತುಂಬಿ ಕೊಳ್ಳಿ ಎಂಬುದಾಗಿ  ಮಧುವಾಟಿಕೆಯಲ್ಲಿ ಹೇಳುತ್ತಿದ್ದ ಹಾಗೆ ಕವಿಯು ಒಂದು ದಿನ ಮುಂಜಾವಿನಲ್ಲಿ ಕನಸು ಕಂಡಿದ್ದನ್ನು ಈ ಪದ್ಯದಲ್ಲಿ ಹೇಳಿದ್ದಾನೆ.

ಮೇಲು ನೋಟಕ್ಕೆ ಇದು ಹೆಂಡದಂಗಡಿಯಲ್ಲಿ ಜನ  ಹಿಂದಿನ ದಿನ ಸೇವಿಸಿದ ಮದ್ಯದ ಪರಿಣಾಮವಾಗಿ ದೇಹ ಒಣಗಿ ನೀರಡಿಕೆಯಾಗುವಾಗ ಬೆಳಿಗ್ಗೆ ಎದ್ದು ಮತ್ತೊಂದು ಸುತ್ತು ಮದ್ಯ ಸೇವನೆ ಮಾಡುವುದನ್ನು ಕವಿಯು ತನ್ನ ಕನಸಲ್ಲಿ ಕೇಳಿದಂತೆ ವಿವರಿಸಿದ್ದಾನೆ. ಅದೂ ತನ್ನ ಮುಂಜಾವಿನ ಕನಸಲ್ಲಿ. ಈ ಮುಂಜಾವಿನ ನಸು ಬೆಳಕಲ್ಲಿ ಯಾವುದೂ ಸರಿಯಾಗಿ ಕಾಣುವುದಿಲ್ಲ. ಆದರೆ ಮಾತನಾಡಿದ್ದು ಕೇಳುತ್ತದೆ. ಕವಿಗೂ ಹಾಗೆಯೇ ಆದ ವರ್ಣನೆ ಇದೆ.

ಉಮರನು ಬಳಸಿರುವ ಪ್ರತಿಮೆಗಳ ಹಿನ್ನಲೆಯಲ್ಲಿ ಈ ಪದ್ಯವನ್ನು ನೋಡುವುದಾದರೆ ಅರವಟಿಗೆ ಎನ್ನುವುದು ಒಂದು ಭಕ್ತರ ಗುಂಪು ಅಥವಾ ಸಾಧುಗಳ ಗೋಷ್ಠಿ. ಬಟ್ಟಲು ಎಂದರೆ ಹೃದಯ. ಮಧು ಎಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ

ಬೆಳಗಿನ ಜಾವದಲ್ಲಿ ಭಕ್ತರ ಗುಂಪೊಂದರಲ್ಲಿ ಕೇಳಿದ ಮಾತುಗಳು :- " ಎಲೆ ಮಕ್ಕಳಿರಾ ಏಳಿ, ನಿಮ್ಮ ಬಟ್ಟಲನ್ನು ಮಧುವಿನಿಂದ ತುಂಬಿ ಕೊಳ್ಳಿ. ಅಂದರೆ ನಿಮ್ಮ ಹೃದಯವನ್ನು ಭಗವಂತನ ಉಪಾಸನೆಯಿಂದ ಆಗುವ ಆನಂದದಿಂದ ತುಂಬಿಕೊಳ್ಳಿ.

ಈ ಕೆಲಸವನ್ನು ನಿಮ್ಮ ದೇಹದಲ್ಲಿರುವ ಹೃದಯದಲ್ಲಿ ತುಂಬಿರುವ ಭಗವಂತನ ಉಪಾಸನೆಯ ಆನಂದ ರಸವು ಒಣಗಿ ಹೋಗಿ ನಿಮ್ಮ ದೇಹವು ಶುಷ್ಕವಾಗುವ ಮುಂಚೆ ಹೃದಯದ ಬಟ್ಟಲನ್ನು ಮಧುವಿನಿಂದ ಮತ್ತೆ ತುಂಬಿ ಕೊಳ್ಳಿ ಎಂಬುದು ಅರವಟಿಗೆ ಸದ್ಧಭಿಪ್ರಾಯ. ಭಕ್ತರ ಗುಂಪಿನ ಆಶಯವಿದು.

ಭಗವಂತನ ಉಪಾಸನೆಯಿಂದ ಆಗುವ ಆನಂದವೊಂದು ಕಡೆ, ಮತ್ತೊಂದು ಕಡೆಯಲ್ಲಿ ಅಂತಹ ಸದೋಪಾಸನೆಯಿಂದ ಮಾಡಿದ ಸತ್ಕರ್ಮಗಳ ಫಲದ ಬಲವಿನ್ನೊಂದು ಕಡೆ.

ಇದು ನಮ್ಮ ಒಡಲನ್ನು ಅಂದರೆ ನಮ್ಮ ಇರುವಿಕೆಯನ್ನು ಕಾಯುತ್ತಿರುತ್ತದೆ. 

ಮಾಡಿದ ಉಪಾಸನೆಯ ಆನಂದ ಮತ್ತು ಗಳಿಸಿದ ಸತ್ಕರ್ಮಗಳ ಪುಣ್ಯ ಬಲ ತೀರಿ ಹೋಗಿ ಒಡಲು ಒಣಗುವ ಮುನ್ನ ಅಂದರೆ ನಮ್ಮ ಇರುವಿಕೆ ಶುಷ್ಕವಾಗಿ ಅರ್ಥ ಕಳೆದು ಕೊಳ್ಳುವ ಮುನ್ನ ಮತ್ತೆ ಭಗವಂತನ ಉಪಾಸನೆಯಿಂದ ಹೃದಯದ ಬಟ್ಟಲನ್ನು ತುಂಬಿ ಕೊಳ್ಳಬೇಕು, ತುಂಬಿ ಕೊಳ್ಳಿ ಎಂಬುದು ಕವಿ ಉಮರನ ಈ ಪದ್ಯದ ಆಶಯ, ಹಾಗೂ ಆದೇಶ.

ರವೀಂದ್ರ ಕುಮಾರ್ ಎಲ್ವಿ.

ಮೈಸೂರು.

No comments:

Post a Comment