Monday 20 November 2023

ಮೋಹಯಕ್ಷಿಣಿಗೆ - ಕೇತಕೀವನ - ಡಿವಿಜಿ

ದೇವಿಯೆಂದೆ
ನಿನ್ನನೆನ್ನ
ಜೀವವೆಂದೆ
ಹಿಗ್ಗಿದೆ
ರಾಣಿಯೆಂದೆ
ನಿನ್ನ ನೆನ್ನ
ಪ್ರಾಣವೆಂದೆ
ಉಬ್ಬಿದೆ.

ಎನ್ನ ಜೀವಕಿವಳು ಕಾಂತಿ
ಎನ್ನ ತಾಪಕಿವಳು ಶಾಂತಿ
ಮನವನಿವಳು ತಣಿಪಳು
ಬಲವನೆನಗೆ ಕೊಡುವಳು
ಎನುತ ನಂಬಿದೆ
ಮನದಿ ನೆಚ್ಚಿದೆ.

ಆದುದೇನು? ಪಾಪಿಪಾಡು
ಕಾದ ನಿನ್ನ ಕೋಪಕೀಡು.

ಇಂದು ನೋಡು ನಿನ್ನ ಮಹಿಮೆ!
ನೊಂದ ಜೀವವೆನ್ನದು;
ಬೆಂದು ನಿನ್ನುಪೇಕ್ಷೆಯಿಂದ
ಕಂದುತಿರುವುದು
ಏನನೆಸಗಿದೆ!-ನೀ
ಪ್ರಾಣ ಕುದಿಸಿದೆ!

ನಿನ್ನ ಕಣ್ಣು ಹಾವು ಹುತ್ತೆ?
ನಿನ್ನ ನಗುವು ನಂಜು ಬಿತ್ತೆ?
ಚಿತ್ತವೇತಕೆನ್ನದಿಂತು ತೊಳಲಿ ಬಳಲಿದೆ,
ಮತ್ತುಹಿಡಿದು ಮಬ್ಬುಕವಿದು ಜಡತೆಯೊಂದಿದೆ?

ಸುಧೆಯ ಸುರಿವ ನೋಟದೊಳಗೆ
ಇರಿತವೇತಕೆ?
ಮುದವ ಕರೆವ ತುಟಿಗಳೊಳಗೆ
ಗರಳವೇತಕೆ?

ನಿನ್ನ ಕಾಲ್ಗೆ ನಾನು ಕಸ
ಎನ್ನ ಹದಕೆ ನೀನು ವಿಷ
ನಿನ್ನ ಪೂಜೆಗಾನು ಬಲಿ
ಎನ್ನಾತ್ಮಕೆ ನೀನು ಸುಳಿ,

ಹಾವು ಕಪ್ಪೆಗಿಡುವ ಮಾಟ-
ಸಾವು-ಎನಗೆ ನಿನ್ನ ನೋಟ
ನಿನ್ನ ಧ್ಯಾನದಿಂದಲೆನ್ನ
ಆಯುವರ್ಧವಾಯಿತು

ಕಾಯ ಕರಣವುಡುಗಿತು
ಹರುಷ ಸರಸ ಹಾರಿತು
ಹುರುಪು ಗೆಲವು ಜಾರಿತು
ನಿನ್ನ ಮಾಹೆಗಾಹುತಿ ಎನ್ನ ಜೀವಸಂಗತಿ.

ಜವನ ದೂತಿಯಲ್ಲ ನೀನು,
ಜವದಿನ್‍ ಅವನು ಸೆಳೆವನು;
ಶಕ್ತಿಕಾಳಿಯಲ್ಲ ನೀನು
ಭಕ್ತಿಗಾಕೆಯೊಲಿವಳು;
ಮೃತ್ಯು ಕೊಳುವನ್‍ ಒಂದು ಸಾರಿ.
ನಿತ್ಯ ಕೊಲುವೆ ನೀನು ಕ್ರೂರಿ.

ಎನ್ನ ಕರ್ಮವೇನು ಇಂತು
ಬೆನ್ನ ಹತ್ತಿತೆ?
ಪಾಪಕಿರುವುದುಂಟೆ ಇಂತು
ರೂಪರಮ್ಯತೆ?

ನೀನದೇನೊ ಅರಿಯಲಾರೆ
ಮಾರಮಾಯೆಯೋ
ಮರುಳುಗೊಳಿಸಿ ಕೊರಳ ಕೊಯ್ವ
ಸ್ನೇಹಘಾತಿನಿ;
ಬರಿದೆ ಕಾಟವಿಟ್ಟು ಕೊಲುವ
ಮೋಹಯಕ್ಷಿಣಿ.

ಎನ್ನೆದೆಯ ಕಡಲಿನಲಿ
ತೆರೆಗಳೇಳುತಿವೆ;
ಉನ್ನತದ ತೆರೆಯೇಳು-
ತುರುಬಿ ಮೊರೆಯುತಿವೆ;

ತರುಣಿ, ನಿನ್ನಯ ನೆನಪು
ಬಿರುಗಾಳಿಯಾಗಿ
ಹೊರಳಿಸುವುದಾತುಮದ
ಹರಿಗೋಲನೀಗ.

ಎನ್ನೆದೆಯ ಬೀಡಿನೊಳ-
ಗುರಿಯುತಿದೆ ಕಿಚ್ಚು
ಜನ್ನದಾಹುತಿಗಿಚ್ಚು
ಹರಡಿ ಹಬ್ಬುತಿದೆ
ಬೆಡಗಿ, ನಿನ್ನ ಬೆಡಂಗು
ಬೆಂಕಿಯುರಿಯಾಗಿ
ಸುಡುವುದೆನ್ನಾತುಮವ
ಸಂಕಟದೊಳೀಗ.

ನನ್ನ ಸೊಬಗಿನ ನೆನಹು
ಸಿಡಿಲುಮಿಂಚಾಗಿ
ಎನ್ನಾತುಮವನೆಲ್ಲ
ಬಡಿದು ಕೆಡಹುತಿದೆ

ಸ್ಮರಣೆ ತಾಂ ಬರುತಿಹುದು
ನೆರೆಯ ನದಿಯಾಗಿ
ಹರಣಗಳ ನಿಲಗೊಡದೆ
ಉರುಳಿಸುತಲಿಹುದು.

ಗಾಳಿ ಬೆಂಕಿ ನೀರು
ಮೇಳವಿಸಿವೆ ಮೂರು
ಕಾಳಿಯುಗ್ರತೆಯನು
ತಾಳಬಹುದೆ ನೀನು?
ರಾಮಣೀಯ ನಿಧಿಗೆ
ಪ್ರೇಮವೊಂದೆ ಸಲಿಕೆ

*************************

ಮೋಹಯಕ್ಷಿಣಿಗೆ 
ಕೇತಕೀವನ - ಡಿ‌‌.ವಿ.ಜಿ
******************
ಪ್ರೇಯಸಿಯ ಮೋಹಪಾಶದ ಬಲೆಯೊಳಗೆ ವಿಲಿವಿಲಿ ಒದ್ದಾಡುತ್ತಿರುವ ಪ್ರಿಯತಮನ ತೊಳಲಾಟವನ್ನು ಡಿವಿಜಿಯವರು ಚಿತ್ರಿಸಿದ್ದಾರೆ‌.
 ಎನ್ನರಗಿಣಿಯೇ! ನಿನ್ನನ್ನು ದೇವಿಯೆಂದು ಆರಾಧಿಸಿದೆ. ನಿನ್ನನ್ನು ನನ್ನ ಜೀವವೆಂದು ಕಣ್ಣಲ್ಲಿ ಕಣ್ಣಿಟ್ಟು ನಿನ್ನಮೇಲಣ ಮೋಹವನ್ನು ಕಾಪಾಡಿಕೊಂಡು ಬಂದೆ. ನೀನೆನ್ನ ರಾಣಿಯೆಂದು ಹಿಗ್ಗಿದೆನು‌. ನೀನು ನನ್ನ ಪ್ರಾಣವೆಂದು ಹಿರಿಹಿರಿಹಿಗ್ಗಿದ್ದೆನು.
 ನನ್ನ ಜೀವನದ ಕಾಂತಿಮಣಿಯೆಂದು ಬಗೆದೆನು. ನನ್ನ  ಜೀವನದ ತಾಪಗಳನ್ನೆಲ್ಲ ಕಳೆಯುವ ಶಾಂತಿ ನನ್ನ ಪ್ರೇಯಸಿಯೆಂದು ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದೆ.  ಪ್ರೀತಿ ಸ್ನೇಹಸಿಂಚನದಿಂದ ನನ್ನ ಮನಸ್ಸನ್ನು ತಣಿಸಿ, ನನ್ನಾಸರೆಯ ಬಲವಾಗುವಳೆಂಬ ಹಂಬಲದ ಹಸಿವಲ್ಲಿದ್ದೆ.
ಮನಸಾರೆ ಮೆಚ್ಚಿ ನಚ್ಚಿಕೊಂಡಿದ್ದೆನು.
    ಆದರೆ! ಕನಸು ಹರಿದಾಗ ಕಂಡುದೇನು! ಕುದಿಯುತ್ತಿರುವ  ಕೋಪತಾಪಗಳ ಬೆಂಕಿಗೆ ಬಿದ್ದ ಪತಂಗವಾಗಿಹೆನು!  ನಾನೇನು ಪಾಪವೆಸಗಿಹೆನೋ ಅರಿಯದಾದೆ. 
ನಿನ್ನ ದುಡುಕಿನ ರೋಷಾವೇಶಗಳ ಬಿರುಗಾಳಿಗೆ ಬಲಿಯಾದ ನಾನು ನೊಂದಿಹೆನು, ಬೆಂದಿಹೆನು! 
ನನ್ನ ಬಗೆಗಿನ ತೀರಾ ತಾತ್ಸಾರ ಉಪೇಕ್ಷೆ ಅಸಡ್ಡೆಗಳಿಂದ ಕಂದಿಹೋಗಿರುವೆ. ಕುಂದಿರುವೆ.ಕುಸಿದುಹೋಗುತ್ತಿರುವೆನು. ನನ್ನ ಪ್ರಾಣವನ್ನೇ ಕುದಿಸುವುದು ನಿನಗೆ ತರವೇ ಮೋಹಿನಿ! 
ನಿನ್ನ ಕಂಗಳಲ್ಲಿ ಹುತ್ತದಿಂದ ಹೊರಹೊಮ್ಮುತ್ತಿರುವ  ಸೀಳುನಾಲಿಗೆಯ ಹಾವನ್ನೇ ಕಾಣುತ್ತಿರುವೆನು! ಅದಾವ ಯಕ್ಷಿಣಿಯೋ ನೀ ನಾನರಿಯದಾದೆ.
ನಿನ್ನ ವಿಕಾರವಾದ ನಗುವಿನಲ್ಲಿ  ವಿಷದ ಬೀಜಗಳನ್ನೇ  ಕಂಡಂತೆ ಭಾಸವಾಗುತ್ತಿದೆ.
ನಿನ್ನ ಸನಿಹಕ್ಕಾಗಿ ತೊಳಲಾಡುತ್ತಿರುವ ನನ್ನ ಚಿತ್ತವು ಈ ದಿನ ಬಳಲಿ ಬೆಂಡಾಗುತ್ತಿದೆ. ಸೋಲುತ್ತಿದ್ದೇನೆ. ನಿನ್ನ ಮೇಲಣ ಮೋಹದಿಂದ ಬೇರೇನನ್ನೂ ಕಾಣುತ್ತಿಲ್ಲ. ಮತ್ತೇರಿದೆ. ಮಬ್ಬು ಕವಿಯುತ್ತಿದೆ.
   ಪ್ರೇಮಾಮೃತವನ್ನು ಹನಿಸಬಯಸುವ ನೋಟವನ್ನು ಕ್ರೂರವಾಗಿ ಕತ್ತಿಯಲಗಿನಿಂದ ಇರಿಯುವುದನ್ನು ಸಹಿಸಲಾರೆ. ಅಧರಾಮೃತದಾ ಆಮೋದವನ್ನು ಬಯಸುತ್ತಿರುವ ನಿನ್ನಕೆಂದುಟಿಗಳಲ್ಲಿ  ವಿಷಧರನ ವಿಷವನ್ನೇ ಕಾಣುತ್ತಿರುವೆನು.
    ನಾನು ನಿನ್ನ ಕಾಲಿಗೆ ತೊಡರುವ ಕಸವಾದೆನೇ? 
ನನ್ನ ಪಾಲಿಗೆ ನೀನು ವಿಷವನ್ನುಗುಳುವ ಹಾವಾಗಬೇಕೇ!
ನಿನ್ನ ಪ್ರೇಮವನ್ನಾರಾಧಿಸುತ್ತ ನಾನು ನಿನ್ನಬಲಿಯಾದೆ. ನೀನು ನನ್ನ ಮನಸ್ಸನ್ನು  ಸೆಳೆವ ಸುಳಿಯಾದೆ. 
 ಕಪ್ಪೆಯನ್ನು ನುಂಗಲು‌ಹವಣಿಸುತ್ತಿರುವ ಹಾವಿನ ನೋಟವನ್ನೇ ನಿನ್ನಲ್ಲಿ ಗುರುತಿಸುತ್ತಿದ್ದೇನೆ.
ನಿನಗಾಗಿ ಹಂಬಲಿಸುತ್ತಾ ಅರ್ಧಾಯುಷ್ಯವನ್ನು ಸವೆಸಿರುವೆನು.
ಶರೀರವೆನ್ನದು ನಿನ್ನ ಧ್ಯಾನದಲ್ಲೇ ಕಸುವನ್ನು ಕಳೆದುಕೊಳ್ಳುತ್ತಿದೆ.
ಇನ್ನೆಲ್ಲಿಯ ಹರುಷ ! ಇನ್ನೆಲ್ಲಿಯ ಸರಸ!?
ನಿನ್ನ ಮಾಯೆಗಾಹುತಿಯಾಯಿತು ಎನ್ನ ಜೀವಸಂಗತಿ!
ನೀನು ಯಮನ ದೂತಿಯಾಗಿ ಬಂದಿದ್ದರೆ  ಬೇಗನೇ ನನ್ನನ್ನು ಯಮನ ಬಳಿಗೆ ಎಳೆದಿಯ್ಯುತ್ತಿದ್ದೆ. ಯಮನ‌ ಕಿಂಕರರು ಬಲುಬೇಗನೇ ಹಿಡಿದೆಳೆದೊಯ್ಯುವರು. ಕಾಳಿದೇವಿಯಾಗಿ ನೀ ನನ್ನೆಡೆಗೆ ಬರುತ್ತಿದ್ದರೆ ಭಕ್ತಿಗೊಲಿಯುತ್ತಿದ್ದೆ. 
ಯಮನಾದರೋ ಒಮ್ಮೆಯೇ ಕೊಲ್ಲುವನು. ನನ್ನನ್ನು ದಿನದಿನವೂ ಕೊಲ್ಲುವ ನೀನು ನನ್ನ ಪಾಲಿಗೆ ಬಲುಕ್ರೂರಿಯಾದೆ.
  ಅದಾವ ಕರ್ಮಬಂಧನವು ನಿನ್ನ ಈ ಮೋಹಯಕ್ಷಿಣಿಯ ಹಿಂದೆ ಬೆಂಬಡುತ್ತಿದೆಯೋ ಕಾಣದಾದೆ.! ನಿನ್ನನ್ನು 
ಪಾಪಿವೆನ್ನಲೇ ! ಪಾಪವು ಇಂತಹ ಮೋಹಕವಾದ ರೂಪಲಾವಣ್ಯಗಳಿಂದ ಕಂಗೊಳಿಸುವುದೇ?‌
 ನೀನದಾರೆಂದು ಗುರುತಿಸುವುದರಲ್ಲೇ ಸೋತುಹೋದೆ. ಮದನನ ಮಾಯೆಯೋ!  ಮಾಯಾಂಗನೆಯಾಗಿ ಮೋಹದಿಂದ ಬೆನ್ನುಬಿದ್ದ ನನ್ನ ಸ್ನೇಹಘಾತಿನಿಯಾಗಿ ಕಾಡುತ್ತಿರುವೆ.! ನಿರಂತರ ಕಾಡಿಸುತ್ತಾ ಪೀಡಿಸುತ್ತಿರುವ ಮೋಹಯಕ್ಷಿಣಿಯಾದೆ! 
ನನ್ನದೆಯ ಕಡಲಲ್ಲಿ ಉನ್ಮಾದದ ತೆರೆಗಳು ದುಮುಕುತ್ತಿವೆ. ಮೊರೆಮೊರೆಯುತ್ತ ಹಾರುತ್ತಿವೆ.
   ನವತಾರುಣ್ಯದ ಮೋಹಿನೀ ನಿನ್ನನೆನಪಿನ ಬಿರುಗಾಳಿಗೆ ಸಿಲುಕಿದ ದಿಕ್ಕೆಟ್ಟಿರುವ ಹರಿಗೋಲಿಗನಾದೆ! 
ನನ್ನದೆಯಲ್ಲಿ ಪ್ರೇಮೋನ್ಮಾದದ ಕಿಚ್ಚು ನನ್ನನ್ನು ಸುಡುತ್ತಿದೆ. ಯಜ್ಞಕುಂಡದ ಅಗ್ನಿಗೆ ನನ್ನನ್ನು ಬಲಿನೀಡಬೇಡ!
ರೂಪಸಿಯೇ! ಬೆಡಗುಬಿನ್ನಾಣದ ಮೋಹಿನಿಯೇ ! ನಿನ್ನ ನೆನಪುಗಳು ಬೆಂಕಿಯಾಗಿ ನನ್ನ ಮನಸ್ಸನ್ನು ಉರಿಸುತ್ತಿದೆ.
ನನ್ನ ಕನಸಿನ  ಸೊಬಗಿನ ನೆನಪುಗಳು ಸಿಡಿಲು ಮಿಂಚುಗಳಾಗಿ ಬದಲಾಗುತ್ತಿದೆ.‌ನಿನ್ನ ನೆನಪುಗಳು ಕೊಚ್ಚಿಕೊಂಡು ಒತ್ತರಿಸುತ್ತಿರುವ ವಿನಾಶಕಾಲದ ನೆರೆಪ್ರವಾಹದಂತಾಗಿದೆ. ಈ ಪ್ರವಾಹದಲ್ಲಿ ಎಲ್ಲಿ ಕೊಚ್ಚಿಹೋಗುವೆನೋ ಎಂಬ ಕಳವಳವು ಬಾಧಿಸುತ್ತಿದೆ. ಗಾಳಿ ಬೆಂಕಿ ನೀರುಗಳು ಒಂದಾಗಿ ಕರಾಳಕಾಳಿಯಂತೆ  ದಾಳಿಯಿಡುತ್ತದೆ. ಈ ದಾಳಿಯನ್ನು ಸಹಿಸಲಾದೀತೇ? ಸುಂದರವಾದ ಸಂಪತ್ತಿಗೆ ಪ್ರೇಮವೊಂದೇ ಆಸರೆ! 
ಭಾವಾನುವಾದ :- 
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment