Friday 1 December 2023

ಅವಳು-ನಾನು - ಕೇತಕೀವನ - ಡಿವಿಜಿ (ಒಂದು ಉರ್ದು ಕವಿತೆಯ ಛಾಯೆ)

ಕದವ ತಟ್ಟುವನದಾರ್‍?- ಎಂದು ಕೇಳಿದಳು; 
ನಿನ್ನ ಅರ್ಚಕನ್‍ ಎಂದು ಪೇಳ್ದೆನ್‍. 
ಈ ಮನೆಯನೇನೆಂಬೆ?-ಎಂದು ಕೇಳಿದಳು; 
ನಿನ್ನ ದೇಗುಲ-ಎಂದು ಪೇಳ್ದೆನ್‍. 

ಅದಕೇನು ರುಜುವಾತು?-ಎಂದು ಕೇಳಿದಳು; 
ಎನ್ನಡಿಯ ಗುರುತೆಂದು ಪೇಳ್ದೆನ್‍. 
ಉದ್ಯೋಗವೇನು ನಿನಗೆಂದು ಕೇಳಿದಳು; 
ವಿಗ್ರಹಾರ್ಚನೆ ಎಂದು ಪೇಳ್ದೆನ್‍. 

ಆರ ವಿಗ್ರಹವೊ ಅದು?-ಎಂದು ಕೇಳಿದಳು; 
ಎನ್ನ ದೇವರದೆಂದು ಪೇಳ್ದೆನ್‍. 
ಆರು ನಿನ್ನ ದೇವರೆಂದು ಕೇಳಿದಳು; 
ಒಲವ ಗೆಲಿದಿಹರ್‍ ಎಂದು ಪೇಳ್ದೆನ್‍. 

ನೀನೊಲಿವ ಸೊಬಗದೇನೆಂದು ಕೇಳಿದಳು : 
ನುಡಿಯ ಮೀರಿದುದೆಂದು ಪೇಳ್ದೆನ್‍, 
ವರವನೇಂ ಬೇಡಿರುವೆ?-ಎಂದು ಕೇಳಿದಳು; 
ಅರ್ಚಕತೆಯನೆ-ಎಂದು ಪೇಳ್ದೆನ್‍. 

ನೈವೇದ್ಯಕೇನಿಹುದು?-ಎಂದು ಕೇಳಿದಳು; 
ಎನ್ನ ಶಿರವಿಹುದೆಂದು ಪೇಳ್ದೆನ್‍. 
ಕಡಿಯಲದ ಕೊಡಲಿಯೆಲ್ಲೆಂದು ಕೇಳಿದಳು; 
ಅದು ನಿನ್ನ ಹುಬ್ಬೆಂದು ಪೇಳ್ದೆನ್‍. 

ನಿನ್ನ ಬಿಗಿದಿಡೆ ಹಗ್ಗ?-ಎಂದು ಕೇಳಿದಳು; 
ನಿನ್ನ ಮುಂಗುರುಳೆಂದು ಪೇಳ್ದೆನ್‍. 
ನಿನಗಿಂತು ದುಗುಡವೇಕೆಂದು ಕೇಳಿದಳು; 
ನಿನ್ನ ಮೌನದಿನ್‍-ಎಂದು ಪೇಳ್ದೆನ್‍. 

ಈ ಬೇನೆಗೆಂದು ಮೊದಲೆಂದು ಕೇಳಿದಳು; 
ನೀಂ ಕೈಯ ಬಿಟ್ಟದಿನವೆಂದೆನ್‍. 
ಅದಕೇನು ಪರಿಹಾರ?-ಎಂದು ಕೇಳಿದಳು; 
ನಿನ್ನ ಮುಖದುಷೆ-ಎಂದು ಪೇಳ್ದೆನ್‍. 

ನಿನ್ನ ಬದುಕೇತರಿಂದೆಂದು ಕೇಳಿದಳು; 
ನಿನ್ನ ಸೊಬಗಿಂದೆಂದು ಪೇಳ್ದೆನ್‍. 
ನಿನ್ನ ಸಾವೇತರಿಂದೆಂದು ಕೇಳಿದಳು; 
ನಿನ್ನ ತೊರೆತದಿನೆಂದು ಪೇಳ್ದೆನ್‍. 

ಮರಳಿ ನೀನೆಂದುದಿಪೆ?-ಎಂದು ಕೇಳಿದಳು; 
ನೀನೆ ಕರೆವಂದೆಂದು ಪೇಳ್ದೆನ್‍. 
ನೀನಾರ ನಿಂದಿಸುವೆ?-ಎಂದು ಕೇಳಿದಳು; 
ಎನ್ನದೃಷ್ಟವನೆಂದು ಪೇಳ್ದೆನ್‍. 

ನಿನ್ನ ದೃಷ್ಟವದೆಲ್ಲಿ ಎಂದು?-ಕೇಳಿದಳು; 
ನಿನ್ನ ಮನದೊಳಗೆಂದು ಪೇಳ್ದೆನ್‍.

****************************

ಹೊಂಗುರುಳಿನ ಕಡೆಗಣ್ಣ ನೋಟದ ಆ ಮನದನ್ನೆಯ ಆರಾಧಕನಾದ ಪ್ರೇಮಿಯು ಕಾರಣಾಂತರಗಳಿಂದ ತನ್ನಿಂದ ದೂರವಾದ ಪ್ರೇಯಸಿಯ ಸಮಾಗಮವನ್ನು  ಕನವರಿಸುತ್ತಾ ನಡೆಸುವ ಸಂಭಾಷಣೆ ಕುತೂಹಲಕರವಾಗಿದೆ.

ತನ್ನ ಕನಸಿನ ಬೊಗಸೆಕಂಗಳ ಇನಿಯಳ ಮನದ ಮನೆಬಾಗಿಲಲಿ ನಿಂತು ಕದವ ತಟ್ಟುತ್ತಿದ್ದಾನೆ. ಆಗ, ಮನೆಯೊಳಗಿಂದಲೇ, "ಮನೆಯ ಕದತಟ್ಟುವವನು ಯಾರದು?" ಎಂದು ಪ್ರಶ್ನಿಸಿದಳು.
" ನಿನ್ನನ್ನು ಆರಾಧಿಸುವ‌ ಪೂಜಾರಿಯಿವನು" ಎಂದು ಉತ್ತರಿಸಿದನು.
" ಹೌದೇ! ಈ ಮನೆಯನ್ನು  ಏನೆಂದು ಕರೆಯುವೆ? " ಎಂದು ಆಕೆಯ ಪ್ರಶ್ನೆ.
" ನಿನ್ನ  ದೇವಮಂದಿರ" ಎಂದು  ಉತ್ತರಿಸಿದನು
"ಹಾಗಾ! ಹಾಗಾದರೆ, ಇದಕ್ಕೆ ಪುರಾವೆಯನ್ನು  ತೋರಿಸುವೆಯಾ!?" ಎಂಬ ಕುತೂಹಲದ ಪ್ರಶ್ನೆಗೆ " ಎನ್ನಡಿಯ ಗುರುತುಗಳು ಎಂದು ಉತ್ತರಿಸಿದೆ.
" ನಿನ್ನ ಉದ್ಯೋಗ!? "
" ಆರಾಧ್ಯದೇವತೆಯ ಮೂರ್ತಿಯನ್ನು ಪೂಜಿಸುವುದಲ್ತೆ!".  "ಹಾಗೇನು? ಯಾರ ವಿಗ್ರಹವೆಂದು ಹೇಳಬಾರದೆ!?" ಎಂಬ ಕೆಣಕುವ‌ ಪ್ರಶ್ನೆಗೆ,
"ನನ್ನ ಆರಾಧ್ಯದೇವತೆಯ ಮೂರುತಿ" ಎಂದು ಉತ್ತರಿಸಿದೆನು‌. 
" ಅದಾರು ನಿನ್ನ ಆ ಆರಾಧ್ಯದೇವತೆ!?" ಎಂಬ  ಸವಾಲಿಗೆ  "ನನ್ನ ಒಲವನ್ನು ಗೆದ್ದಿಹಳಾಕೆ" ಎಂದರೆ,
"ಆ ದೇವತೆಯಲ್ಲಿ     ನಿನ್ನನ್ನು  ಒಲಿಸಿಕೊಂಡ  ಸೊಬಗು ಯಾವುದು"? ಎಂದು ಕೇಳಿದಳು.
" ತುಟಿಗೆಮೀರಿದ ಸೊಬಗು, ಬಣ್ಣಿಸಲಾಗದು." ಎಂದೆನು‌.                   "ಒಲಿದ ಆ ದೇವಿಯಲ್ಲಿ ಏನೆಂದು ಬೇಡಿದೆ?" ಎಂದು ಕೇಳಿದರೆ,        "ಆರಾಧನೆಯನ್ನೇ" ಎಂಬ ಉತ್ತರಕ್ಕೆ
ನೀನು ಸಲ್ಲಿಸುವ ಪೂಜೆಗೆ ನೈವೇದ್ಯವಾವುದು!?" ಎಂಬ ಸವಾಲಿನ ಪ್ರಶ್ನೆ! 
"ನನ್ನ ಶಿರವೇ ನೈವೇದ್ಯ!"  ಎಂದು ಉತ್ತರಿಸಿದೆನು.
"ಬಲಿನೀಡಲು ಕತ್ತಿಯೆಲ್ಲಿಹುದು?"
"ನಿನ್ನ ಕುಡಿನೋಟವೇ ಬಲಿಗತ್ತಿಯೆಂಬೆನಲ್ತೆ!" 
"ಬಲಿಯಾಗಿ ನಿಂತ ನಿನ್ನನ್ನು ಯಾವ ಹಗ್ಗದಿಂದ ಬಿಗಿದಿಹರು!?" 
"ನಿನ್ನ ಮುಂಗುರುಳೇ ನನ್ನನ್ನು ಬಿಗಿದಿರುವ ಪಾಶ!" 
"ನಿನ್ನ ಈ ದುಗುಡಕ್ಕೇನದು ಕಾರಣವೆಂದು ಕೇಳಬಹುದೇ!?" ಎಂಬ‌ ಕೆಣಕುವ ಪ್ರಶ್ನೆಗೆ, "ನಿನ್ನ ಮೌನವೆಂದು ತಿಳಿದೂ ತಿಳಿದೂ ಪರೀಕ್ಷೆಗಾಗಿ ಪ್ರಶ್ನೆಯೇ!?" ಎಂದು ಪಾಟೀಸವಾಲಿನಂತೆ ಉತ್ತರಿಸಿದೆ.

"ಈ ವೇದನೆಯು ಈ ಚಡಪಡಿಕೆಯು ಎಂದಿನಿಂದಾರಂಭವಾಯಿತು!?" ಎಂಬ ವಿಚಾರಣೆಗೆ, "ನೀನು ನನ್ನನ್ನು ಉಪೇಕ್ಷಿಸಿ  ಮುಖತಿರುವಿದ ಕ್ಷಣದಿಂದ" ಎಂದು ಉತ್ತರಿಸಿದೆನು.
"ಅಂತಿರ್ಪೊಡೆ, ನಿನ್ನ ಬದುಕು ಯಾವುದರಿಂದ !?" 

"ನಿನ್ನೊಡನೆ ಬೆರೆಯುವುದರಿಂದ" 
"ನಿನ್ನ ಸಾವು  ಯಾವುದರಿಂದ!?" 
"ನಿನ್ನನ್ನು ನಾನು ತೊರೆದರೆ ಆ ಕ್ಷಣವೇ ಎನಗೆ ಮೃತ್ಯು!" 
" ಮತ್ತೆ ನೀನೆಂದು ನನ್ನ ಹುಣ್ಣಿಮೆಯ ಚಂದಿರನಾಗಿ ಮೂಡಿಬರುವೆ!?" ಎಂಬ ಅವಳ  ಇಂಗಿತದ  ವಿಚಾರಣೆಗೆ "ನೀನು ಮತ್ತೆ ಕರೆಯುವ ಕ್ಷಣವನ್ನು ಎದುರು ನೋಡುತ್ತಿರುವೆ" ಎಂದೆನು.

"ಘಟಿಸಿರುವ ಬಿರುಕಿಗೆ ಆರು ಕಾರಣವೆಂಬೆ!? ಯಾರನ್ನು ನಿಂದಿಸುವೆ?" ಎಂಬ ಜಾಣ್ಮೆಯ ಪ್ರಶ್ನೆಗೆ " "ಎನ್ನ ಅದೃಷ್ಟವನ್ನು" ಎಂದೆನು.

"ನಿನಗೆ ಕಾಣದ  ಆ ಕಾರಣವು ಎಲ್ಲಿಹುದು!?" ಎಂಬ ಚತುರ ಪ್ರಶ್ನೆಗೆ ಸೋಲದೆ, "ನಿನ್ನ ಮನದೊಳಗೆ ಎಂಬುದು  ನಿನಗೇ  ತಿಳಿದಿರುವುದಲ್ಲವೇ!" ಎಂದು ಉತ್ತರಿಸಿದೆನು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment