Thursday 30 November 2023

ಬೆಂಕಿಯಾಟ - ಕೇತಕೀವನ - ಡಿವಿಜಿ

ಎಲೆ ತರಳೆ, ಬೇಡುವೆನು : 
ನಿಲಿಸು ನಿನ್ನಾಟವನು; 
ನಿನ್ನೊಲವು ಬೆಂಕಿಕಾಟ. 
ಎದೆಗೆ ಮುಳ್ಳಿರಿಯುವುದೆ 
ಬದುಕನುರಿಗೊಡ್ಡುವುದೆ 
ನಿನ್ನ ಚೆಲುವಾಡುವಾಟ. 

ಎಲೆ ಕುಟಿಲೆ, ದೂರವಿರು; 
ಸನಿಹದಲಿ ಬಾರದಿರು; 
ಸಾಕು ನಿನ್ನೊನಪು ನೋಟ. 
ಹಿಂದೆ ನೀ ಹೊತ್ತಿಸಿದೆ 
ಬೆಂಕಿಯನದಾರದಿದೆ, 
ಈಗದನು ಕೆಣಕಬೇಡ. 

ಒಲವು ಮೇವನು ಸೂಸಿ 
ಚೆಲುವು ಬಲೆಯನು ಬೀಸಿ 
ಬೇಡಿತಿವೊಲಾದೆ ನೀನು. 
ಸೆರೆತೊಡಕ ಶಂಕಿಸದ 
ಗುರಿಗತಿಯ ಚಿಂತಿಸದ 
ಮೂಢ ಖಗವಾದೆ ನಾನು. 

ಮಲಯಮಾರುತವೆಂದು 
ತಿಳಿದಿದ್ದೆ ನಾನಂದು 
ನಿನ್ನ ಮೈಸೋಕಿದೆಲರ; 
ಬಳಿಸಾರಲೀಗಳದು 
ಪ್ರಳಯದ ಜ್ವಾಲೆವೊಲು 
ಸುಡುವುದೆನ್ನಸುವಿನರಲ. 

ಮುಳಿಸು ಬೇಡೀ ನುಡಿಗೆ 
ಹಳಿವು ಸಲ್ಲದು ನಿನಗೆ 
ತಪ್ಪೆನದು, -ವೇಧಸನದು. 
ಬೆಡಗುರೂಪಿನ ಮಾತು 
ದಿಟವೆಂದು ಮನಸೋತು 
ಬೆಪ್ಪಾದೆ, ಮೋಹ ಕವಿದು. 

ಬಲು ವರುಷ ಕಾದಿದ್ದೆ, 
ಹಲತೆರದಿ ನೊಂದಿದ್ದೆ 
ತರಳೆ, ನಿನಗಾಗಿ ನಾನು; 
ನೂರು ಹುಸಿನಗು ನಗುತ 
ಹೇರಾಸೆ ಹುಟ್ಟಿಸುತ 
ಮರುಳನಂ ಗೈದೆ ನೀನು. 

ಇನ್ನು ಸಾಕೀ ನಟನೆ- 
ನಿನ್ನ ವಿಷಮಧು ಘಟನೆ- 
ನೂತನದ ಪೂತನಿವೊಲು. 
ದಿಟದೊಲವ ನೀನರಿಯೆ, 
ಸಟೆಗೆ ನೆಲೆ ನಿನ್ನೆದೆಯೆ, 
ಪ್ರೀತಿ ನಿನಗುಡುಪಿನವೊಲು. 

ಪ್ರೀತಿಯಾತುಮದ ರಸ, 
ನೀತಿಯೆನಗದರ ವಶ; 
ಮುರಿದೆ ನೀನದನು ಸೊಕ್ಕಿ. 
ಎನ್ನ ಕುದಿವೆದೆಯ ಬಿಸಿ 
ನಿನ್ನ ತಾಕದೆ ತಪಿಸಿ 
ಕರುಮವೆಂದಾನುಮ್‍ ಉಕ್ಕಿ? 

ಕನಿಕರವ ತೋರುವೊಡೆ 
ಎನಗೊಳಿತ ಮಾಡುವೊಡೆ 
ಕೆರಳಿಸದಿರೆನ್ನ ನೆನಪನ್‍ 
ಕಳೆದ ನಮ್ಮಯ ಕತೆಯ 
ಅಳಿಸಿ ತೊಳೆ ಎನ್ನೆದೆಯ, 
ಮರೆವನನುಗೊಳಿಸು ಕೃಪೆಯಿಂ. 

ಹೊಳೆಗಣ್ಣ ಮಿಟುಕದಿರು, 
ಚೆಲು ಬಲೆಯ ಬೀಸದಿರು, 
ಸೆರೆಕೊಳದಿರೆನ್ನ ಮರಳಿ. 
ಉರಿಮುಖವ ತೋರುತಿರು, 
ಕರಿ ವಿಷವ ಕಾರುತಿರು, 
ವಿರಸೆ ನೀನಾಗು ಜರೆಯಿಂ. 

ಎಲೆ ತರಳೆ, ಬೇಡುವೆನು; 
ನಿಲಿಸು ನಿನ್ನಾಟವನು. 
ನಿನ್ನೊಲವು ಬೆಂಕಿಕಾಟ.
ಎಲೆ ಕುಟಿಲೆ, ದೂರವಿರು, 
ಸನಿಹದಲಿ ಬಾರದಿರು, 
ಸಾಕು ನಿನ್ನೊನಪು ನೋಟ.

********************

ಪ್ರೇಯಸಿಯಿಂದ ಪ್ರೀತಿವಂಚಿತನಾದ ಭಗ್ನಪ್ರೇಮಿಯು "ನಿಲಿಸು ನಿನ್ನ ಬೆಂಕಿಕಾಟವನು" ಎಂದು ತಹತಹಿಸುತ್ತಾನೆ‌.

    ಪ್ರೇಮವಂಚಿತನಾದರೂ  ಪ್ರೇಮಿಯ ಎದೆಯೊಳಗೆ ತನ್ನ ಕನಸುಗಳನ್ನು ಕದ್ದವಳ ಬಗೆಗಿನ ಮೋಹದಾಟಗಳು ಕಾಡುತ್ತಲೇ ಇರುತ್ತವೆ‌. ಇದರಿಂದ ದುಃಖ, ವೇದನೆ, ಹತಾಶೆಗಳಿಂದ ಪ್ರೇಯಸಿಯ ಕಾಡುವ ಚಿತ್ರಗಳು ಚಿತ್ತದಲಿ ಮೂಡುವಾಗ ಕಾಡಬೇಡೆನ್ನ ತೊಲಗಾಚೆ ಎಂದು ಗೋಗರೆಯುತ್ತಾನೆ‌.
ಸಾಕು ಮಾಡು ನಿನ್ನ‌ ಒಲವಿನ‌ ನಾಟಕವನ್ನು. ದೂರಸರಿ. ನಿನ್ನ ಒಲವಿನ‌ ನಾಟಕವನ್ನರಿಯದೆ  ಬೆಂಕಿಯೊಡನೆ ಸರಸವಾಡಿದೆನು. ಬೆಂಕಿಯ ನಾಲಿಗೆಗೆ ಸಿಲುಕಿದೆನು.
 
ನಿನ್ನ ಚೆಲುವಿಗೆ ಮನಸೋತ ನನ್ನೆದೆಗೆ ಮುಳ್ಳಿನಿಂದ ಇರಿದು ಪ್ರೀತಿಯನ್ನು ಬಲಿಕೊಟ್ಟೆ. ನನ್ನ ಬದುಕಿನರಮನೆಗೆ ಬೆಂಕಿಯಿಟ್ಟೆ. ನಿನ್ನ ಚೆಲುವಿನ ಮಾಟದ ಕಾಟವು ಸಾಕು ಸಾಕಿನ್ನು ಕಾಡದಿರು.
 ಸ್ವಾರ್ಥ ಕುಟಿಲ ಸ್ವಭಾವದ ನೀನು ಮತ್ತೆ ನನ್ನ ಬಳಿ ಬಾರದಿರು.
ನಿನ್ನ ವೈಯಾರದ ಕುಡಿನೋಟದ ಬಲೆಯನ್ನು ಬೀಸಬೇಡ! 

ನಿನ್ನ ವೈಯಾರದ ನೋಟದ ಬೆಂಕಿಯಿಂದ ಬೆಂದು ಹೋಗಿದ್ದೇನೆ. ಅದರ ಕಾವಿನ್ನೂ ಆರಿಲ್ಲ. ಆದರೆ ನಿನ್ನ  ನೋಟಬೇಟದ ಬೆಂಕಿಯ ಕಾಟವಿನ್ನೂ ನಿಂತಿಲ್ಲ. ಬೂದಿಮುಚ್ಚಿದ ಕೆಂಡವನ್ನು ಕೆಣಕಬೇಡ.
ಒಲವೆಂಬ ಚಿಗುರುಮೇವನ್ನು ಮುಂದೊಡ್ಡಿದೆ. ಚೆಲುವಿನ ಬಲೆಯನ್ನು ಬೀಸಿದ್ದನ್ನು ನಾನು ತಿಳಿಯಲೇ ಇಲ್ಲ. ನೀನು ರಾಮನಿಗಾಗಿ ಹಂಬಲಿಸಿದ ಶಬರಿಯಲ್ಲ. ಮಾಯಾ ಜಿಂಕೆಯಾಗಿ ಸೀತೆಯ ಬಳಿ ಸುಳಿದ ಮಾರೀಚನೆಂಬ ಬೇಡತಿ ನೀನು. ನೀನು ಬೀಸಿದ ಬಲೆಯೊಳಗೆ ಸಿಲುಕಿ ವಿಲವಿಲನೆ ಒದ್ದಾಡುವ ಅವಿವೇಕಿ ಹಕ್ಕಿಯಾದೆನು.

 ನಿನ್ನ ಕೋಮಲವಾದ ಶರೀರದ ಸಂಸ್ಪರ್ಶದಿಂದ  ಮಲಯಮಾರುತದ ಮಂದಾನಿಲನದ ಸುಖಸ್ಪರ್ಶವೆಂದು ಭ್ರಮಿಸಿದ್ದೆ. ಇಂದು ನೀನೆನ್ನ ಬಳಿ ಸುಳಿದರೆ ಪ್ರಳಯಕಾಲದ ಜ್ವಾಲೆಯೇ ನನ್ನ ಜೀವಕುಸುಮವನ್ನು ಬಲಿತೆಗೆದುಕೊಳ್ಳಲು ಹಾತೊರೆಯುತ್ತದೆ ಎಂಬುದನ್ನು ಕಾಣುತ್ತಿದ್ದೇನೆ.
    ಬೆಂದು ನೊಂದ ಮನದಿಂದ ಹೊರಹೊಮ್ಮುತ್ತಿರುವ ಈ ನನ್ನ ವೇದನೆಯ ಮಾತುಗಳಿಗೆ ಕೋಪಿಸಬೇಕಿಲ್ಲ. ಇಷ್ಟಕ್ಕೂ ನಿನ್ನನ್ನು  ನಿಂದಿಸುವುದೂ ತರವಲ್ಲ. ತಪ್ಪು  ನಿನದಲ್ಲ . ತಪ್ಪು ನನ್ನದು. ನನ್ನನ್ನು ನಿನ್ನ ಬಳಿ ನಿಲ್ಲಿಸಿದ ಬ್ರಹ್ಮನದು ತಪ್ಪು‌.

 ನಿನ್ನ ಕಣ್ಣುಕೋರೈಸುವ ಚೆಲುವಿಗೆ ಮರುಳಾಗಿ ನಿನ್ನ ಮಾತುಗಳನ್ನು ನಿಜವೆಂದು ಮನಸೋತು ಬೆಪ್ಪನಾದೆ‌. ಮೋಹ ಕವಿದ ಮನಸ್ಸು ಕತ್ತಲಿಗೆ ತಳ್ಳಿತು.

 ನಿನ್ನ ಒಲವನ್ನು ಸಂಪಾದಿಸಿ ನನ್ನವಳನ್ನಾಗಿಸಿಕೊಳ್ಳುವ ಕನಸಿನಲ್ಲಿ ಎಷ್ಟೋ ವರ್ಷಗಳನ್ನು ಸವೆಯಿಸಿದೆ‌. ಹಲವು ಎಡರು ತೊಡರುಗಳ ನ್ನು  ನಿನ್ನಮೇಲಣ ಮೋಹಕ್ಕಾಗಿ ವ್ಯರ್ಥವಾಗಿ ಎದುರಿಸಿದೆ.
ಪ್ರೀತಿ ಪ್ರೇಮದ ಹೆಸರಲ್ಲಿ ನೂರಾರು ಸಲ ಹುಸಿನಗೆಯಿಂದ ನನ್ನನ್ನು ಮರುಳುಗೊಳಿಸಿದೆ. ಬೆಟ್ಟದಂತಹ ಕನಸುಗಳನ್ನು ಮೂಡಿಸಿದೆ.  ನಾನು ಮೂರ್ಖನಾದೆ ಎಂಬುದನ್ನು ಅರಿತಾಗ ತುಂಬ ತಡವಾಗಿತ್ತು .
   ಇನ್ನೂ ಕಾಡಬೇಡ‌ ನಿನ್ನ ನಾಟಕದ ನಟನಾಗಲಾರೆ. ನಿನ್ನ ಒಲವಿನ‌ ನಾಟಕವು ಬಾಲಕೃಷ್ಣನಿಗೆ ವಿಷವುಣ್ಣುಸಲು ಬಂದ ಪೂತನಿಯನ್ನು ನೆನಪಿಸುತ್ತಿದೆ. ಈ ನಿನ್ನ ಮಾಟವಾದ ಪಯೋಧರಗಳಲ್ಲಿ ಅಮೃತವಲ್ಲ,  ವಿಷವೇ ತುಂಬಿದೆ   ಎಂಬುದನ್ನು ಬಲ್ಲೆನು. ನಿನ್ನೆದೆಯಲ್ಲಿ ನಿಜವಾದ ಪ್ರೀತಿಯ ಕ್ಷೀರವಿಲ್ಲ. ಪ್ರೇಮ ಪ್ರೀತಿ ಒಲವುಗಳೆಂಬುದು ನಾಟಕದ  ಉಡುವ - ಬಿಚ್ಚಿಡುವ ಉಡುಪುತೊಡುಪುಗಳಲ್ಲ. ಕೃತಕ ಆಭರಣಗಳಲ್ಲ.

ಪ್ರೀತಿಯೆಂಬುದು ಜೀವಜೀವಗಳನ್ನು ಬೆಸೆಯುವ ಆತ್ಮರಸ.  ನ್ಯಾಯ ನೀತಿಯ ಧರ್ಮದ ದಾರಿಯಲ್ಲಿ ಪ್ರೀತಿಯು ಗೆಲುಮೆಯನ್ನು ಹೊಂದಬೇಕು.

ಒಲವಿನ‌ ಸೇತುವೆಯನ್ನು ನೀನು ಸೊಕ್ಕಿನಿಂದ ಮುರಿದು ನಡುನೀರಲ್ಲಿ ತಳ್ಳಿದೆ.
ನನ್ನೆದೆಯನ್ನು ಕುದಿಸಿದ  ಕಾವು ನಿನ್ನನ್ನು ಬೆಂಬಿಡದೆ ಕಾಡುವುದು. ಮರೆಯದಿರು‌! ಮಾಡಿದ ಕರ್ಮವನ್ನು ಅನುಭವಿಸಲೇ ಬೇಕು.

 ನಿಜಕ್ಕೂ ನನ್ನ ಬಗೆಗೆ ಕನಿಕರವಿದ್ದರೆ, ಮತ್ತೆಮತ್ತೆ  ಮನದೊಳಗೆ ಇಳಿಯ ಬೇಡ! ದಮ್ಮಯ್ಯ ನನ್ನನ್ನು ಮತ್ತೆ ಕಾಡಬೇಡ! ಕಳೆದ ಕತೆಗಳನ್ನು ಮರೆಸಿಬಿಡು‌. ನನ್ನ  ಮನಸನ್ನು ಕಾಲಿಮಾಡಿ   ದೂರಸರಿ. ನನ್ನ ಮನಸ್ಸನು ತೊಳೆದುಬಿಡು.  "ದಯಮಾಡಿ ನನಗೆ ಮರೆವನ್ನು ಕರುಣಿಸು" ಎಂದು ಕಾಡುವ ಇನಿಯೆಯನ್ನು  ಮೊರೆಯಿಡುತ್ತಾನೆ.

  ತುಂಟಮಿನುಗುನೋಟದಿಂದ ಕಾಡಬೇಡ. ಮಾಟವಾದ ಚೆಲುಸೌಂದರ್ಯದಿಂದ ಬಲೆಬೇಸಬೇಡ.
ನನ್ನ ಬಳಿ ಬರಲೇಬೇಕಿದ್ದರೆ ಉರಿಮುಖದಿಂದ ಬಾ! ಉಗ್ರವಾದ ಕರಿವಿಷವನ್ನು ಕಾರುತ್ತಾ ಬಾ! ಬರುವದಾಗಿದ್ದರೆ ಮುಪ್ಪಿನಿಂದ ತೊಗಲುಬಿದ್ದ ಮುದಿಯಾಗಿ ಬಾ!

ಒಲವಿನ ಹೆಸರಲ್ಲಿ ನಾಟಕವಾಡುವ ತರಲೆಯೇ! ದಮ್ಮಯ್ಯ ಬೇಡುವೆನು ನಿನ್ನ ಈ ಚೆಲ್ಲಾಟವನ್ನು ನಿಲ್ಲಿಸು. ನಿನ್ನ ಬೆಂಕಿಕಾಟವನ್ನು ಸಹಿಸಲಾರದಾದೆನು. ಕಟಿಲೆಯೇ ಕಾಡದಿರು. ನಿನ್ನ ವೈಯಾರದ ಕುಟಿಲನೋಟದಿಂದ ನನ್ನನ್ನು ಇನ್ನೂ ಇನ್ನೂ ಕಾಡಬೇಡ. ಸಾಕು ನಿನ್ನ ಒಲವಿನ ನಾಟಕ. ಈ ನಾಟಕದ ಅಂಕಕ್ಕೆ ತೆರೆಯೆಳೆಯೋಣ. ನಾನು ನಟನಾಗಲಾರೆ. 

ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Wednesday 29 November 2023

ಅನಂಗೀಕೃತನ ಶಾಪ - ಕೇತಕೀವನ - ಡಿವಿಜಿ

ಎನ್ನ ಕೈಗೆ ದೊರೆಯದರಲು
ಬಾಡಿ ಬೀಳಲಿ,
ಎನ್ನ ಕಣ್ಣ ತಣಿಸದಿನನು 
ಕಾಡ ಸೇರಲಿ. 

ಎನ್ನ ಬಾಯ್ಗೆ ಬಾರದ ಪಣ್‍ 
ಬೂದಿಯಾಗಲಿ, 
ಎನ್ನ ಮೆಯ್ಯ ಸೋಕದ ಹೊನ್‍ 
ಸೀದುಹೋಗಲಿ. 

ಎನ್ನನುರಿಸಿ ಕುಣಿವ ಕಿಚ್ಚು 
ತಣ್ಣಗಾಗಲಿ, 
ಎನ್ನನಿರಿವ ಮುಳ್ಳುಚುಚ್ಚು 
ನುಣ್ಣಗಾಗಲಿ. 

ಎನ್ನನಣಕಿಪೊಲಪು ಕುಲುಕು 
ಮಂಗನಾಗಲಿ, 
ಎನ್ನ ಕೆಣಕುವೆಲ್ಲ ಥಳುಕು 
ತಂಗಳಾಗಲಿ. 

ಎನ್ನನೊಲ್ಲದಿರುವ ಗರುವ 
ಅಣಗಿಹೋಗಲಿ, 
ಎನ್ನ ಮರುಳನೆನಿಪ ನಗುವು 
ಒಣಗಿಹೋಗಲಿ. 

ಎನ್ನ ಸಾರದಿರುವ ಸೊಬಗು 
ಸೊನ್ನೆಯಾಗಲಿ, 
ಎನ್ನ ಸೇರದಿರುವ ಬೆಡಗು 
ಮಣ್ಣಿಗಾಗಲಿ.

ಎನ್ನ ನುಡಿಗೆ ಮಿಡಿಯದೆದೆಯು 
ಊದಿಹೋಗಲಿ, 
ಎನ್ನ ಮಿಡಿತಕುಲಿಯದುಸಿರು 
ಸೇದಿಹೋಗಲಿ. 

ಎನ್ನ ಹೃದಯದೆಲ್ಲ ಮಮತೆ
 ಬತ್ತಿಹೋಗಲಿ, 
ಚೆನ್ನು ಚೆಲುವು ಒಲವು ನಲಿವು 
ಸತ್ತುಹೋಗಲಿ.

******************

ಪ್ರೇಮನಿವೇದನೆಗೆ ಪೂರಕವಾದ ಪ್ರತಿಸ್ಪಂದನವಿಲ್ಲ. ತೊಳಲಾಡುತ್ತ  ಹಗಲುಗನಸು ಕಾಣುತ್ತಾ ಭ್ರಮನಿರಸನಗೊಂಡ ಭಗ್ನ ಪ್ರೇಮಿಯು ಪ್ರೇಮವೆಂಬ‌ ಮರೀಚಿಕೆಯು ನಾಶವಾಗಲೆಂದು ಶಪಿಸುತ್ತಿರುವ ಚಿತ್ರವು  ಸಹೃದಯನ ಮನಸ್ಸನ್ನು ಕಲಕುತ್ತದೆ.

ದೂರದಿಂದ ಕಂಡ ಮೋಹಕವಾದ ಹೂವು ಕೈವಶವಾಗದ ಮೇಲೆ ಇದ್ದೇನು ಫಲ! ನನ್ನನ್ನು ಮೋಸಗೊಳಿಸಿದಂತೆ ಇನ್ನಾರನ್ನೂ ಹತಾಶರನ್ನಾಗಿ ಮಾಡದಿರಲಿ. ಈ ಹೂವು ಬಾಡಿಸೊರಗಿಹೋಗಲಿ.ನನ್ನ  ಕಣ್ಣುಗಳಿಗೆ ಬೆಳಕು ನೀಡದೆ ಕತ್ತಲೆಯನ್ನು ಕವಿದ ಸೂರ್ಯನು ಕಗ್ಗತ್ತಲೆಯ ಕಾಡನ್ನು ಸೇರಲಿ.

ಕೈಗೆ ಬಂದ  ಹಣ್ಣು ಬಾಯಿಗಿಲ್ಲವಾಯಿತು. ಇಂತಹ ಭ್ರಮಾಲೋಕದ ಹಣ್ಣು ಸುಟ್ಟುಬೂದಿಯಾಗಿ ಹೋಗಲಿ.

ನನ್ನ ಕೈವಶವಾಗದ ಹೊನ್ನಪುತ್ಥಳಿಯು ಸೀದುಹೋಗಲಿ.
ನನ್ನ ತನುಮನಗಳನ್ನು ಬೆಂದು ಬೇಯಿಸುತ್ತಿರುವ ಬೆಂಕಿಯ ಕಾವು ತಣ್ಣಗಾಗಲಿ‌.
ನನ್ನನ್ನು ಅಣಕಿಸುವಂತೆ ಚುಚ್ಚುತ್ತಿರುವ ಮುಳ್ಳಕೊನೆಗಳು ನುಣ್ಣಗಾಗಲಿ.

ನನ್ನನ್ನು ಮರೆಯಲ್ಲಿ ನಿಂತು ಅಣಕಿಸುತ್ತಿರುವ ಒಲವಿನ ಕುಲುಕಾಟವು   ಕಪಿಯಾಗಲಿ. ಸೋತು ಸುಣ್ಣವಾಗಿರುವ ನನ್ನನ್ನು ಕೆಣಕುತ್ತಿರುವ ಥಳುಕು ಬಳುಕಿನ ಮೋಹವೆಂಬ ಮಾಯಾಂಗನೆಯು ಹಳಸಿದ ತಂಗುಳನ್ನವಾಗಲಿ.

ನನ್ನ ಪ್ರೀತಿಯನ್ನು ಆದರಿಸದ ಸ್ವೀಕರಿಸದ  ಗರ್ವದ ಮೊಟ್ಟೆಯು ಕಣ್ಮರೆಯಾಗಲಿ. ಅರ್ಥವಿಲ್ಲದ ನನ್ನ ನಿಸ್ತೇಜವಾದ ನಗುವು‌ ಆವಿಯಾಗಲಿ‌. 

ನನಗೊಲಿಯದ ಸೊಬಗಿನ ಸೋನೆಯು ಪರಮಶೂನ್ಯವಾಗಲಿ. ನನಗೊಲಿಯದ ಬೆಡಗು ಮಣ್ಣಾಗಲಿ.
ನನ್ನ ಪ್ರೇಮನಿವೇದನೆಗೆ ಸ್ಪಂದಿಸದ ಹೃದಯವು ಊದಿಕೊಳ್ಳಲಿ. ನನ್ನ  ಹೃದಯಮಿಡಿತಕ್ಕೆ ಸ್ಪಂದಿಸದ ಉಸಿರು ನಾಶವಾಗಿಹೋಗಲಿ. ನನ್ನ ಮನದಾಳದ ಮಮತೆ ಪ್ರೀತಿಗಳೆಲ್ಲವೂ  ಬತ್ತಿಹೋಗಲಿ.
ಚೆನ್ನು ಒಲವು  ನಲಿವುಗಳೆಲ್ಲವೂ ನಾಶವಾಗಿ ಹೋಗಲಿ.

ಭಾವಾನವಾದ:   ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Tuesday 28 November 2023

ಉಮರನ ಒಸಗೆ - 07 - ಬಾ, ತುಂಬು ಬಟ್ಟಲನು ; ಮಧು ಮಾಸದಗ್ನಿಯಲಿ

ಬಾ, ತುಂಬು ಬಟ್ಟಲನು ; ಮಧು ಮಾಸದಗ್ನಿಯಲಿ

ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು ;

ನಮ್ಮಾಯುಸಿನ ಪಕ್ಕಿ ಪಾರುವ ದೂರವೇ ಕಿರಿದು;

ಅದು ರೆಕ್ಕೆಯೆತ್ತಿಹುದು ನೋಡು, ಮನ ಮಾಡು.


ಮಧು ಮಾಸದಗ್ನಿ = ಚಳಿಗಾಲದ ಥಂಡಿಯನ್ನು ದೂರ ಮಾಡುವ ವಸಂತ ಮಾಸದ ಬಿಸಿ.

ಬೆಸನ = ವ್ಯಸನ,

ಬೊಂತೆ = ಚಿಂದಿ ಬಟ್ಟೆಗಳಿಂದ ಹೊಲಿದ ಹಚ್ಚಡ.

ಪಾರುವ = ಹಾರುವ,

"ಬಾ, ಬಟ್ಟಲನ್ನು ತುಂಬು" - "ಕುಡಿ-ತಿನ್ನು-ಖುಷಿಯಾಗಿರು" ವಿಚಾರದ ಮತ್ತೊಂದು ಪದ್ಯ.

ಕಳೆದು ಹೋದುದಕ್ಕೆ ಚಿಂತಿಸ  ಬೇಡ, ವ್ಯಸನ ಪಡಬೇಡ. ಇಂದಿನ ದಿನಕ್ಕಾಗಿ ಬದುಕು.

ಈಗ ಮಧು ಮಾಸ. ಈ  ಮಾಸದಲ್ಲಿ ಇಡೀ ಪ್ರಕೃತಿಯೇ ಹಳೆಯದನ್ನು ಕಳಚಿ ನವ ನಾವೀನ್ಯತೆಯಿಂದ ಉಲ್ಲಾಸಗೊಳ್ಳುತ್ತದೆ.

ಹಳೆಯ ದಿನಗಳ ನೆನಪಾದ ಚಿಂತೆ, ವ್ಯಸನಗಳಿಂದ ಮಾಡಿದ ಹಚ್ಚಡವನ್ನು ಹೊದೆಯ ಬೇಡ.

ವಸಂತ ಮಾಸದ ಹಿತಕರವಾದ ಬಿಸಿಯಲ್ಲಿ ಆ ಹಚ್ಚಡವನ್ನು ಬಿಸುಟು ಬಿಡು.

ನಮ್ಮ ಬದುಕು ಬಹಳ ಚಿಕ್ಕದು.

ಆಯುಷ್ಯದ ಹಕ್ಕಿಯ ಕಲ್ಪನೆ ಸುಂದರ ಮತ್ತು ಅಮೋಘ.

ನಮ್ಮ ಆಯುಷ್ಯದ ಹಕ್ಕಿಯು ಹೆಚ್ಚು ಹಾರಲು ಸಮರ್ಥವಲ್ಲ.

ಅದು ಹಾರುವ ದೂರ ಬಹಳ ಚಿಕ್ಕದೇ.

ಅದು ಹಾರಲು ಆಗಲೇ ತನ್ನ ರೆಕ್ಕೆ ಬಿಚ್ಚಿ ಸಿದ್ಧವಾಗಿದೆ. ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ.

ಮನಸು ಮಾಡಿ ಬಟ್ಟಲನ್ನು ತುಂಬಿಸು.

ಕುಡಿದು ಈ ಜೀವನದಾಟವ ಆಡೋಣ.

ನಾಳೆಯು ನಮ್ಮದಲ್ಲ.

ಯೌವನದ ಪ್ರೇಮವು ಬೇಗ ಜಾರುತ್ತದೆ.

ಕಾಲವು ದುಃಖವಲ್ಲದೆ ಬೇರೇನೂ ಅಲ್ಲ.

ಕುಡಿ, ಹಾಡು, ಕುಣಿ.

ವಸಂತವು ಮತ್ತೆ ನಮ್ಮ ಬದುಕಿಗೆ ಎಂದು ಬರುವುದೆಂದು ತಿಳಿಯದು.

ಇದು ಈ ಪದ್ಯವು ಸಾರುವ ಉಮರನ ಸಿದ್ಧಾಂತದ ಸಾರ.

ಜಾನ್ ಗೇ ಎಂಬಾತನು ಉಮರನ ವಿಚಾರ ಧಾರೆಯನ್ನು ಹೋಲುವ  ಎರಡು ಸಾಲುಗಳನ್ನು ತನ್ನ ಗೋರಿಯ ಮೇಲೆ ಕೆತ್ತಿಸಿ ಕೊಂಡದ್ದನ್ನು ಇಲ್ಲಿ  ಉಲ್ಲೇಖಿಸಿದರೆ ತಪ್ಪಾಗಲಾರದು. ಆ ಸಾಲುಗಳು  ಹೀಗಿವೆ ;

" Life is a jest, and all things show it.

I thought so once, and now I know it. "

" ಜೀವನವು ಒಂದು ತಮಾಷೆ, ಮತ್ತು ಎಲ್ಲ ಸಂಗತಿಗಳೂ ಅದನ್ನು ತೋರಿಸುತ್ತವೆ.

ನಾನೂ ಒಂದು ಕಾಲದಲ್ಲಿ ಹಾಗೇ ಭಾವಿಸಿದ್ದೆ, ಈಗದು ನನಗೆ ತಿಳಿದಿದೆ. "

ಇದು ಮೇಲ್ನೋಟಕ್ಕೆ ಜೀವನವನ್ನು ಹಗುರವಾಗಿ ತೆಗೆದುಕೊಂಡು;

ನಿನ್ನೆಯನ್ನು ಮರೆತು;

ನಾಳೆಯ ಚಿಂತೆಯಿಲ್ಲದೇ; ಇಂದು ಇರುವುದನ್ನು ಆನಂದಿಸೋಣ, ಎಂಬ ಭಾವದ ಪದ್ಯ.

ಬಟ್ಟಲು ಎಂದರೆ ಹೃದಯವೆಂದೂ, ಮಧು ಎಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದವೆಂದೂ, ಪ್ರಿಯತಮೆ ಎಂದರೆ ಬುದ್ಧಿಯೆಂದೂ  ಉಮರನು ಬಳಸಿರುವ ಪ್ರತಿಮೆಗಳ ಹಿನ್ನಲೆಯಲ್ಲಿ ನೋಡಿದರೆ ;

" ನಮ್ಮ ಆಯುಸ್ಸು ಎಂಬ ಕಾಲದ ಹಕ್ಕಿಗೆ ಬಹಳ ಸಮಯವಿಲ್ಲ. ನಿನ್ನೆಯ ಚಿಂತೆ, ವ್ಯಸನಗಳಲ್ಲಿ ಕಾಲ ಹರಣ ಮಾಡುವುದು ಸಲ್ಲ.

ಆದ್ದರಿಂದ ಬೇಗ ನಿಶ್ಚಯ ಮಾಡಿ ಭಗವಂತನನ್ನು ಆರಾಧಿಸಿ, ಆ ಆನಂದವನ್ನು ಹೃದಯದಲ್ಲಿ ತುಂಬಿಕೊ."

ಎಂಬುದು ಕವಿ ಉಮರನು ಕೊಟ್ಟಿರುವ ಸಂದೇಶ.

ರವೀಂದ್ರ ಕುಮಾರ್ ಎಲ್ ವಿ 

ಮೈಸೂರು

ಉಮರನ ಒಸಗೆ - 06 - ಮಾಂದಳಿರ ಸವಿಯುಂಡು ಮೈ ಮರೆತ ಬುಲ್ಬುಲನು

ಮಾಂದಳಿರ ಸವಿಯುಂಡು ಮೈ ಮರೆತ ಬುಲ್ಬುಲನು

ಚೆಲು ಗುಲಾಬಿಯ ನನೆಯನರಳಿಸಲ್ಕೆಂದು,

ನಗು ನಗುತೆ ಕುಣಿದಾಡಿ ಪಾಡುತಿಹನ್, ಆಲೈಸು :

ಕಳ್ಳು, ಚೆಂಗಳ್ಳು, ಸವಿಗಳ್ಳು ಕಳ್ಳಿನಂತೆ.


ಮಾಂದಳಿರು - ಮಾವಿನ ಚಿಗುರು. 

ಬುಲ್ಬುಲ = ಬುಲ್ಬುಲ್ ( ನೈಟಿಂಗೇಲ್ ) - ಒಂದು ಹಾಡು ಹಕ್ಕಿ,

ನನೆ = ಮೊಗ್ಗು,

ಪಾಡು = ಹಾಡು,

ಕಳ್ಳು = ಮಧು, ಮದ್ಯ.

ವಸಂತನ ಆಗಮನವಾದಾಗ ಪ್ರಕೃತಿಯಲ್ಲಿ ಎಲ್ಲ ಗಿಡ ಮರಗಳು ಹೊಸ ಚಿಗುರಿನಿಂದ ನಳನಳಿಸುತ್ತವೆ.

ಮಾವಿನ ಚಿಗುರಿನ ಅಂದವೇ ಬೇರೆ. ಮಾವಿನ ಚಿಗುರು ಎಲೆಗಳು ನೇರವಾಗಿ ಹಸಿರು ಬಣ್ಣ ಹೊಂದುವುದಿಲ್ಲ. ಆರಂಭದಲ್ಲಿ ಅವು ಕೆಂಪು ಮಿಶ್ರಿತವಾಗಿದ್ದು ಕ್ರಮೇಣ ಗಿಣಿ ಹಸಿರಿಗೆ ತಿರುಗಿ ಕೊನೆಗೆ ಗಾಢ ಹಸಿರನ್ನು ಹೊಂದುತ್ತವೆ.

ಮಾವಿನೆಲೆಗಳು ಕೆಂಪು ಮಿಶ್ರಿತ ಬಣ್ಣದಿಂದ ಮಿರುಗುವಾಗ ಅವು ಬಹಳ ತೆಳುವಾಗಿದ್ದು ಗಾಳಿಯ ಸಣ್ಣ ಬೀಸುವಿಕೆಗೂ ಬಳುಕುತ್ತ ತಮ್ಮ ಸಿಹಿಯಾದ ಕಂಪಿನಿಂದ ಹಕ್ಕಿಗಳನ್ನು ಆಕರ್ಷಿಸುತ್ತವೆ.

ಹಾಗೆ ಮಾವಿನ ಚಿಗುರಿನ ಮೋಹಕ ಕೆಂಪಿಗೂ, ಅದರ ಮಧುರ ಕಂಪಿಗೂ ಮನಸೋತು ಬರುವ ಹಕ್ಕಿ ಬುಲ್ಬುಲ್ ಹಕ್ಕಿ.

ಹೀಗೆ ಮಾವಿನ ಚಿಗುರ ಕಂಪಿನ ಸವಿಯನ್ನು ಸವಿದ ಬುಲ್ ಬುಲ್ ಹಕ್ಕಿಯು, ಆ ಸವಿಗೆ ಮಾರು ಹೋಗಿ ಮೈ ಮರೆತು  ಚಲುವಾದ ಗುಲಾಬಿಯ  ಮೊಗ್ಗನ್ನು ಅರಳಿಸಲೆಂದು ನಗು ನಗುತ ಕುಣಿದಾಡಿ ಹಾಡುತಿದೆ.

ಬುಲ್ಬುಲ್ ಹಕ್ಕಿಗೂ ಗುಲಾಬಿಗೂ ಒಂದು ಆಶ್ಚರ್ಯಕರ ಸಂಬಂಧವಿದೆ.

ಪರ್ಷಿಯಾ ದೇಶದ ಜಾನಪದ ಕಥೆಯೊಂದರಂತೆ ನೈಟಿಂಗೇಲ್ ಅಥವಾ ಬುಲ್ಬುಲ್ ಹಕ್ಕಿಯು ಮೂಲತಃ  ಬಹಳ ಚನ್ನಾಗಿಯೇನು  ಹಾಡುತ್ತಿರಲಿಲ್ಲ ಹಾಗೂ ಎಲ್ಲ ಗುಲಾಬಿಗಳು ಬಿಳೀ ಬಣ್ಣದವಾಗಿದ್ದವು.

ಒಂದು ದಿನ ಬಿಳೀ ಗುಲಾಬಿಯನ್ನು ಕಂಡು ಬುಲ್ಬುಲ್ ಹಕ್ಕಿಯು  ಗುಲಾಬಿಯ ಅಂದಕ್ಕೆ ಮನಸೋತು ಗುಲಾಬಿಯನ್ನು ಆಳವಾಗಿ ಪ್ರೀತಿಸತೊಡಗಿತು. ಆಗಲೇ ಚಮತ್ಕಾರವೆಂಬಂತೆ ಬುಲ್ಬುಲ್ ಮಧುರವಾಗಿ ಹಾಡಲಾರಂಭಿಸಿತು.

ಅಷ್ಟೇ ಅಲ್ಲ, ಬುಲ್ಬುಲ್ ಗುಲಾಬಿಗೆ ತನ್ನ ಪ್ರೇಮ ನಿವೇದನೆ ಮಾಡಲು ನಿರ್ಧರಿಸಿತು. ಆಗ ಹಾಡುತ್ತಾ ತನ್ನ ಶರೀರವನ್ನು ಗುಲಾಬಿಗೆ ಒತ್ತುವಾಗ, ಮುಳ್ಳೊ0ದು ಬುಲ್ಬುಲನ ಹೃದಯಕ್ಕೆ ಚುಚ್ಚಿ ಅದರ ರಕ್ತವು ಗುಲಾಬಿಯ ಮೇಲೆಲ್ಲಾ ಚಲ್ಲಿತು.

"ಗುಲಾಬಿಯು ಕೆಂಪಾಯಿತು."

ಬುಲ್ಬುಲನ ಪ್ರೇಮದ ಬಲಿದಾನದಿಂದ ಕೆಂಪು ಗುಲಾಬಿಯ ಸೃಷ್ಟಿಯಾಯಿತು.

ಅಂದಿನಿಂದ ಬುಲ್ಬುಲ್ ಹಕ್ಕಿಗಳು ಮಧುರವಾಗಿ ಹಾಡುವುದನ್ನು ಕೇಳಿ   ಕುಣಿಯುವುದನ್ನು ನೋಡಿ  ಗುಲಾಬಿಯ ಮೊಗ್ಗುಗಳು ಸಂತೋಷದಿಂದ, ಅರ್ಪಣಾ ಭಾವದಿಂದ ಅರಳಿ ಬುಲ್ಬುಲಗಳ ಪ್ರೀತಿಗೆ ಸ್ಪಂದಿಸುವುದು ನಿರಂತರವಾಯಿತು.

ಈ ಸಂಬಂಧದ ಮತ್ತೊಂದು ಪ್ರಕೃತಿ ವೈಚಿತ್ರವೆಂದರೆ  ಗುಲಾಬಿಗಳು ಅರಳುವ ವಸಂತ ಕಾಲದಲ್ಲಿ ಬುಲ್ಬುಲ್ ಹಕ್ಕಿಗಳು ಪರ್ಷಿಯಾಕ್ಕೆ ವಲಸೆ ಬರುತ್ತವೆ ಮತ್ತು ಗುಲಾಬಿಗಳನ್ನು ಕಂಡು, ಕುಣಿದು,

ಹಾಡಿ,

ನಲಿಸಿ,

ಅರಳಿಸಿ,

ಆನಂದಿಸಿ

ಗುಲಾಬಿಗಳ ಕಾಲ ಮುಗಿದಾಗ  ಮರಳುತ್ತವೆ.

ಮಾವಿನ ಚಿಗುರಿನ ಕೆಂಪಿನ ಕಂಪನ್ನು ಉಂಡ ಬುಲ್ಬುಲನು ಮಧು ಅಥವಾ ಮದ್ಯವನ್ನು ಕುರಿತು ಹಾಡುತ್ತದೆ.

ಕಳ್ಳು - ಮದ್ಯ- ಮಧು 

ಚೆಂಗಳ್ಳು - ಕೆಂಪು ಮದ್ಯ - ಕೆಂಪು ಮಧು

ಸವಿಗಳ್ಳು - ಸವಿಯಾದ ಮದ್ಯ - ಸವಿಯಾದ ಮಧು.

ಕಳ್ಳು - ಚೆಂಗಳ್ಳು - ಸವಿಗಳ್ಳು ಎನ್ನುತ್ತ ಪುನರಾವರ್ತನೆ ಮಾಡಿದರೆ ಅದು ಬುಲ್ಬುಲನ ಹಾಡಿನಂತಯೇ ಧ್ವನಿಸುತ್ತದೆ.

ಅಲ್ಲದೇ ಉಮರನು ಬಳಸಿರುವ ಪ್ರತಿಮೆಗಳಂತೆ  ಮಧು ಎಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ.

ಆದ್ದರಿಂದ ಮಧುವನ್ನು ಕುರಿತು ಹಾಡುವುದು ದೇವರ ಕುರಿತು ಹಾಡುವಷ್ಟೇ ಮಹತ್ವದ್ದು, ದೇವರ ಉಪಾಸನೆಯ ಒಂದು ಭಾಗ  ಎಂಬ ಉಮರನ ದೃಷ್ಟಿಕೋನವನ್ನೂ ಈ ಪದ್ಯದಲ್ಲಿ ಕಾಣಿಸಲಾಗಿದೆ.


ರವೀಂದ್ರ ಕುಮಾರ್ ಎಲ್ವಿ

ಮೈಸೂರು.

ನಿಷ್ಕರುಣಿ ರಮಣಿ - ಕೇತಕೀವನ - ಡಿವಿಜಿ (ಕೀಟ್ಸ್ ಕವಿಯ ಪ್ರಸಾದ)

(೧) ಪ್ರಶ್ನೆ 
“ಏನಿದೆಲೆ ಸುಕುಮಾರ, ಬಾಡಿ ಬಿಳುಪೇರಿರುವೆ; 
ಮೈಯಲ್ಲಿ ಬೇನೆಯೇನು? 
ಏನಿಂತು ಬೆಂಗಾಡೊಳೊಬ್ಬನೇ ಬಳಸುತಿಹೆ; 
ಜೀವಕ್ಕೆ ನೋವದೇನು?” 

“ನೀರಿಲ್ಲ, ನೆರಳಿಲ್ಲ, ಹಕ್ಕಿಗಳ ಹಾಡಿಲ್ಲ; 
ದೊರೆಮಗನಿಗಿತ್ತಲೇನು? 
ಏನ ನೀಂ ಚಿಂತಿಸುತ ಬಳಲಿ ಬಸವಳಿದಿರುವೆ? 
ಜೀವಕ್ಕೆ ನೋವದೇನು?"

“ಜ್ವರದಿಂದ ನಿನ್ನ ಹಣೆ ಬೆಮರಿ ಹನಿಕವಿದಿರುವ 
ಬೆಳ್ನೆಯ್ದಿಲಂತೆ ಇಹುದು; 
ಬಾಡಿದೊಂದು ಗುಲಾಬಿಯೆಸಳು ಬೇಗದಿ ನಿನ್ನ 
ಕೆನ್ನೆಯಲಿ ಕಂದುತಿಹುದು.” 

(೨) ಉತ್ತರ 

“ಹಸಿರು ಬಯಲಲಿ ಕಂಡೆ ನಾನೋರ್ವ ರಮಣಿಯನು, 
ಬಲು ಚೆಲುವೆ, ರತಿಯ ಮಗಳು; 
ನೀಳಾದ ತಲೆನವಿರು, ಹಗುರಾದ ಕಾಲ್ನಡಿಗೆ 
ಬೆರಗು ತುಂಬಿದ ಕಂಗಳು.

“ಅವಳ ತಲೆಗಾನೊಂದು ಪೂಸರವ ಕಟ್ಟಿದೆನು, 
ಪರಿಮಳದ ಬಳೆಡಾಬನು 
ತೊಡಿಸಿದೆನು ನೋಡುತವಳೊಲಿದಳಂತುಸಿರಿದಳು 
ಮುದ್ದಾದ ಮುಲುಕುಗಳನು."

“ಕುಣಿವೆನ್ನ ಹಯದ ಮೇಲವಳ ಕುಳ್ಳಿರಿಸಿದೆನು; 
ನಾನರಿಯೆ ಬೇರೆಯೊಂದ. 
ಅತ್ತಿತ್ತಲವಳೋರೆ ಬಾಗುತ್ತ ಹಾಡಿದಳು 
ಮೋಹಿನಿಯ ಗೀತವೊಂದ."

“ಅವಳೆನಗೆ ತಂದಿತ್ತಳಿನಿಕಂದಮೂಲಗಳ, 
ಕಾಡುಜೇನಮರ್ದುಪನಿಯ; 
ಒಂದು ಹೊಸ ಭಾಷೆಯಲಿ ದಿಟದಿ ಪೇಳಿದಳಿಂತು;
‘ಒಲವೆನಗೆ ನಿನ್ನೊಳಿನಿಯ.’ "

“ಅವಳೆನ್ನ ತನ್ನ ಕಿರು ಯಕ್ಷಿಗವಿಗೊಯ್ದಲ್ಲಿ 
ಮರುಗಿ ಬಿಸುಸುಯ್ದಳಳುತ. 
ಅವಳ ಬೆರಬೆರಗು ಕಂಗಳನಾಗ ಮುಚ್ಚಿದೆನು 
ಮುತ್ತುಗಳ ನಾಲ್ಕನಿಡುತ."

“ಅವಳೆನ್ನ ನಿದ್ರಿಸಲು ತಟ್ಟಿ ಜೋಗುಟ್ಟಿದಳು 
ಕಂಡೆ ನಾಂ ಕನಸಿನಲ್ಲಿ 
ಹಾ, ಕೆಟ್ಟೆನದುವೆನಗೆ ಕಟ್ಟಕಡೆ ಕನಸಾಯ್ತು 
ಮಲೆಬದಿಯ ತಣ್ಪಿನಲ್ಲಿ." 

“ಕಂಡೆನರಸನರಸುಕುವರರನು, ವೀರರನು; 
ಬಿಳುಪೇರ್ದರೆಲ್ಲ ಸಾವೊಲ್‍ 
ಅವರೆಲ್ಲರಿಂತೆಂದರ್‍ : ‘ಈ ರಮಣಿ ನಿಷ್ಕರುಣಿ; 
ಪಿಡಿದಿಹಳು ನಿನ್ನ ಸೆರೆಯೊಳ್‍.’" 

“ಇಂತೆಚ್ಚರಿಸಲವದಿರೊಣಗುತುಟಿಯಗಲಾಯ್ತು 
ಬೆಚ್ಚಿಸುತ ಮಸಕಿನಲ್ಲಿ; 
ನಾನೆಳ್ಚರಂಗೊಂಡು ಕಾಣುತಿಹೆನೆನ್ನನೀ
ಮಲೆಬದಿಯ ತಣ್ಪಿನಲ್ಲಿ." 

“ಆದುದರಿನಾನಿಂತು ಸುಳಿದಾಡುತಿಹೆನಿಲ್ಲಿ 
ಮೈಯಲ್ಲಿ ಬೇನೆಯಾಂತು; 
ನಾನಿಂತು ಬೆಂಗಾಡೊಳೊಬ್ಬನೇ ಬಳಸುವೆನು 
ಜೀವದಲಿ ನೋವನಾಂತು."

*****************

(೧) ಪ್ರಶ್ನೆ 

ಎಲೈ ಕುಮಾರನೆ!  ಇದೇಕೆ ಬಾಡಿ ಬಿಳುಪೇರಿದ ಹೂವಿನಂತಾಗಿರುವೆ?  ಅದೇನೋ ಕಾಡುತ್ತಿರುವ ಚಿಂತೆಯ ಕಾವು ನಿನ್ನ ತನುಮನಗಳನ್ನು  ಒಣಗಿಸುತ್ತಿರುವುದನ್ನು ಕಾಣುತ್ತಿದ್ದೇನೆ. ಮೈಯಲ್ಲಿ ಅದಾವ ಬೇನೆಯೂ ಇಲ್ಲವಷ್ಟೆ.

ಇದೇಕೆ ಮರುಭೂಮಿಯ ಕಾವಿನಲ್ಲಿ ಕಾಯುತ್ತಾ ಬಳಲುತ್ತಿರುವಂತೆ ಕಾಣುತ್ತಿದ್ದೇನೆ. ಅದಾರದೋ ಒಬ್ಬಳ ನಿರೀಕ್ಷೆಯಲ್ಲಿ ಅವಳ ಆಗಮನಕ್ಕಾಗಿ ಕಾಯುತ್ತಾ ಕಾಯುತ್ತಾ ದೇಹ ಮನಸ್ಸುಗಳ ಕಾವು ಏರುತ್ತಾ ಒಣಗಿರುವಂತಿದೆ. ಜೀವನಕ್ಕಾದ ನೋವು ಅದೇನೆಂದು ಹೇಳಬಾರದೇ?
 
  ದೇಹದ ದಾಹವನ್ನು ಹಿಂಗಿಸಲು ನೀರಿನಾಸರೆಯಿಲ್ಲ. ಕಾಯುತ್ತಿರುವ ದೇಹವನ್ನು  ರಕ್ಷಿಸಲು ನೆರಳಿನ ಆಸರೆಯಿಲ್ಲ. ಗಿಡಮರಗಳಿಲ್ಲ. ತರುಲತೆಗಳ ತನಿಗಾಳಿಯ ಸೋಂಕಿಲ್ಲ. ಹಕ್ಕಿಗಳ ಕಲರವಗಳಿಲ್ಲ. ನೋಡುಗರಿಗೆ ದೊರೆಮಗನಂತಿರುವೆ. ಇಂತಹ ಸುಕುಮಾರನು ಈ ರೀತಿಯಲ್ಲಿ ಕುಂದಿರಲು ಕಾರಣಗಳು ಏನಿರಬೇಕು?
 
ನೀನೇಕೆ ಬಳಲಿ ಬಸವಳಿದಿರುವೇ?  ಜೀವನದಲ್ಲಿ ಗಾಢವಾದ ನೋವು ನುರಿತವದೇನು!? ಹೇಳಬಾರದೆ!? 
  ಜ್ವರದಿಂದ ನಿನ್ನ ಹಣೆಯಲ್ಲಿ ಬೆವರಹನಿಗಳು ಮಿನುಗುತ್ತಿವೆ. ಬೆವರಹನಿಗಳಿಂದ ಕೂಡಿದ ನಿನ್ನ ವದನಾರವಿಂದವು ಬಾಡಿದ ನೈದಿಲೆಯಂತೆ ಕಪ್ಪಿಟ್ಟಿದೆ. ಬಾಡಿರುವ ಗುಲಾಬಿಯ ಎಸಳು ನಿ‌ನ್ನ ಕೆನ್ನೆಯಲಿ ನಿಸ್ತೇಜವಾಗಿ ಮುದುಡಿಕೊಂಡಿರುವಂತೆ ಕಾಣುತ್ತಿದೆ.

(೨) ಉತ್ತರ :

ಹಸಿರುಕ್ಕುವ ಬಯಲಲ್ಲಿ ನಾನು ರಾಮಣೀಯಕದ ಕನ್ನೆಯನು ಕಂಡೆ. ರಮಣಿ ಎಂದಮೇಲೆ ಕೇಳಬೇಕೇ!?  ರತಿಯ ಮಗಳೋ ಎಂಬಂತಹ ಕಡುಚೆಲುವೆಯಾಕೆ! ನೀಳವಾದ ನವಿರಾದ ಕೇಶರಾಶಿಯ ಸೊಬಗಿನ ರೂಪಸಿ! ಹೂಗಳ ಮೇಲೆ ಮೆಲುಹೆಜ್ಜೆಗಳಂತಹ ಹಗುರವಾದ ಕಾಲ್ನಡುಗೆ!  ನೋಡುಗರಿಗೆ ಬೆರಗುಂಟುಮಾಡುವ ಬೊಗಸೆ ಕಂಗಳ  ತುಂಟ, ಕಡೆಗಣ್ಣನೋಟ! 

"ಅವಳ ಕೇಶರಾಶಿಯ ಸೊಬಗಿನ‌ಕಾಂತಿಯು ಇಮ್ಮಡಿಸುವುದೆಂಬ ಹಂಬಲದಿಂದ ಆಕೆಗಾಗಿ  ಪರಿಮಳಿಸುತ್ತಿರುವ, ಹೂಮಾಲೆಯನ್ನು  ಕಟ್ಟಿದೆನು. ಕನಸಿನರಮನೆಯಲ್ಲೇ  ನಾ ಕಂಡ ಕನ್ಯೆಯ ನಡುವಿಗೆ ಒಲವಿನ ಒಡ್ಯಾಣವನ್ನು  ನನ್ನ ಕೈಯಾರೆ ಬಿಗಿದು ಆಕೆಯ ಶರೀರ ಸೌಂದರ್ಯವನ್ನು ಕಣ್ತುಂಬಿಕೊಂಡೆ! ತುಸು ಅಂತರದಲ್ಲಿ ನಿಂತು ಅವಳ ಕಂಗಳಲ್ಲಿ ನನ್ನ ಕಣ್ಣುಗಳ ಬಿಂಬವನ್ನು ಕಂಡು, ಅವಳು ನನಗೊಲಿದಳೆಂದು ಮುದ್ದು ಮುದ್ದಾಗಿ ಉಸಿರಿದಂತೆನ್ನಿಸಿತು.

ನನ್ನ ಕನಸಿನ ಕುದುರೆಯ ಮೇಲೆ ರಮಣಿಯನ್ನು ಕುಳ್ಳಿರಿಸಿದೆನು. ಹಯದ ಬೆನ್ನೇರಿದ    ಮದನಾಂಗಿಯು ಅತ್ತಿತ್ತ ಓರೆಯಾಗಿ ವಯ್ಯಾರದಿಂದ ಬಾಗುತ್ತಾ  ತೊನೆದಾಡುತ್ತಾ  ಮೋಹಿನಿಯಂತೆ ಮೋಹಕವಾದ ಹಾಡನ್ನು ಗುಣುಗುಣಿಸತೊಡಗಿದಳು.
   
ಸುರಸುಂದರಿ ರಮಣಿಯು ನನಗಾಗಿ ಕಾಡಿನಲ್ಲಿ ಹುಡುಕಾಡಿ, ಕಂದಮೂಲಫಲಗಳನ್ನು‌ ಆರಿಸಿ ತಂದಳು.

ಜೇನಿನಹುಟ್ಟನ್ನರಸಿ ತಂದು ಮಧುಮಾಸ ಉಕ್ಕೇರುವಂತೆ, ಜೇನಹನಿಗಳ ಹನಿಗಳನ್ನು ನನ್ನ ತುಟಿಗಳ ಮೇಲಿರಿಸಿದಳು. ಮಾದಕವಾದ ನೋಟದಿಂದ ನಸುನಾಚುತ್ತಾ " ಇನಿಯ! ನಿನ್ನೊಳು ಎನಗೆ ಒಲವಿನ ಮಾಧುರ್ಯವು"
 
ಆ ಮಧುಮಾಲತಿಯಂತಹ ಚೆಂದುಳ್ಳಿ ಚೆಲುವೆಯು ನನ್ನನ್ನು  ಕೈಗಳನ್ನು ಹಿಡಿದು, ತನ್ನ ಯಕ್ಷಿಣಿ ಗುಹೆಗೆ ಕರೆದೊಯ್ದಳು.
 
ಅವಳ ಮಾದಕವಾದ ಸೌಂದರ್ಯ, ಕುಡಿನೋಟದ ಮಾಧುರ್ಯಗಳಿಂದ   ಬಿಸುಸುಯ್ಯುತ್ತ ಅಳುತ್ತಾ ಕಣ್ಣೀರಹನಿಗಳನ್ನು ಉದುರಿಸಿದಳು.

ಅವಳ ಬೆರಗುಕಣ್ಣುಗಳ‌ನ್ನು   ಅಂಗೈಗಳಿಂದ ಮುಚ್ಚಿ  ಮುದ್ದಾದ ಅವಳ ತುಟಿಗಳಿಗೆ ತುಟಿಗಳನ್ನು ಸೋಕಿಸುತ್ತ   ಆಕೆಗೆ ಮುತ್ತಿನಸರವನ್ನು ತೊಡಿಸಿದೆನು.

ನನ್ನ ಆ ಕನಸಿನ‌ ಕನ್ಯೆ ಜೋಗುಳ ಹಾಡು ಹಾಡುತ್ತಾ ನನ್ನನ್ನು ನಿದ್ದೆಯ ಲೋಕಕ್ಕೆ ಒಯ್ದಳು. ಕನಸೊಳಗೆ ಕನಸಾಯ್ತು. ಮಲೆಬದಿಯ  ತಣುಪಿನ ಆ ಬನದಲ್ಲಿ‌ ನನಗದು ಕಟ್ಟಕಡೆಯ ಕನಸಾಯಿತು.
 
ಕನಸಲ್ಲಿ ಕಂಡೆನಲ್ಲಿ ಅರಸುಕುಮಾರರನ್ನು. ವೀರರಂತೆ ಕಂಡ ಆ ಅರಸು ಮಕ್ಕಳೆಲ್ಲ ಹತಾಶೆಯಿಂದ ಬಿಳುಪೇರಿದಂತೆ ಕಾಣುತ್ತಿದ್ದರು. ಅವರೆಲ್ಲರೂ ಒಕ್ಕೊರಲಿನಿಂದ ಕೂಗಿ ಹೇಳುತ್ತಿದ್ದರು, " ಈ ನಿರ್ದಯಿಯಾದ ರಮಣಿಯನ್ನು ನಂಬಿ ಮೋಸಹೋಗಬೇಡ! ನೀನಿವಳ ಬೆಡಗಿನ ರೂಪಲಾವಣ್ಯಗಳ ಬಲೆಯಲ್ಲಿ ಸಿಲುಕಿರುವಂತಿದೆ.  ನಿನ್ನನ್ನು ಬಲೆಯೊಳಗೆ ಕೆಡವಿದ ಈಕೆಯನ್ನು ನಂಬಬೇಡ"  ಎಂದು ಎಚ್ಚರಿಸಿದರು.

ಅವರ ಇಂತಹ ಎಚ್ಚರದ ನುಡಿಗಳನ್ನು ಕೇಳುತ್ತಲೇ ಕನಸಿನಲೋಕದಲ್ಲಿ ವಿಹರಿಸುತ್ತಿದ್ದ ನಾನು ಎಚ್ಚರಗೊಂಡವನಾಗಿ ವಾಸ್ತವಲೋಕಕ್ಕೆ ಮರಳಿದೆನು. ಕನಸಿನ ಕನ್ಯೆಗೆ  ಮುತ್ತಿನ ಸರತೊಡಿಸಿದ್ದು ಕನಸಿನಲ್ಲಿ ಎಂಬುದನ್ನು ನೆನಪಿಸಿಕೊಂಡು ಒಣತುಟಿಯು ಪೆಚ್ಚಾಯಿತು‌. ಎಚ್ಚರಗೊಂಡ ನಾನು  ಸಸ್ಯಕಾಶಿಯೂ ಇಲ್ಲ. ಅರಣ್ಯರೋದನವಷ್ಟೇ ಕಂಡಂತಾಯಿತು‌. ಮರೀಚಿಕೆಯ ಬೆಂಬತ್ತಿದೆ.  ಒಂಟಿಯಾಗಿದ್ದೆ.

 ಏನೆನ್ನಲಿ! ಮೈ ಮನಸುಗಳು ಹಸಿಬೇನೆಯ ವೇದನೆಯಿಂದ  ಒಂಟಿಯಾಗಿ ಗುರಿಯಿಲ್ಲದೆ ಬೆಂಗಾಡಿನಲ್ಲಿ  ಅಲೆದಾಡುತ್ತಲೇ ಇದ್ದೇನೆ.

ಭಾವಾನವಾದ:   ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Monday 27 November 2023

ಉಮರನ ಒಸಗೆ - 05 - ಹೊಸವರುಷವೀಗ ಹಳೆಯಾಸೆಗಳ ಬಲಿಸುತಿದೆ

ಹೊಸವರುಷವೀಗ ಹಳೆಯಾಸೆಗಳ ಬಲಿಸುತಿದೆ :

ಜಾನಿಗಳ ಜೀವವೇಕಾಂತವೆಳಸುತಿದೆ:

ಕೊಳದ ತಡಿಯಲಿ ತಳಿರ ಮಲರ ಸೊಂಪಮರುತಿದೆ ;

ದ್ರಾಕ್ಷಿಯಲಿ ಮಾಣಿಕ್ಯರಸವು ಹೊಮ್ಮುತಿದೆ.


ಹೊಸವರುಷವೀಗ ಹಳೆಯಾಸೆಗಳ ಬಲಿಸುತಿದೆ :

ಬಲಿಸು  = ಬಲಪಡಿಸು, ಧೃಢಪಡಿಸು, ನೆಲೆಗೊಳಿಸು, ಉತ್ತೇಜಿಸು, ಪ್ರಚೋದಿಸು.

ಈ ಸಾಲುಗಳು ವಸಂತದೊಂದಿಗೆ ಪ್ರಕೃತಿಯು ನಾವೀನ್ಯತೆಯನ್ನು ಪಡೆಯುವುದನ್ನು ಮಾನವನ ಯೋಚನೆ ಮತ್ತು ಭಾವನೆಗಳ ಜೊತೆ ತಳಕು ಹಾಕಲಾಗಿದೆ.

ಜಾನಿಗಳ ಜೀವವೇಕಾಂತವೆಳಸುತಿದೆ

ಜಾನ = ಧ್ಯಾನ, ಏಕಾಗ್ರ ಚಿತ್ತದಿಂದ ಚಿಂತನೆ ಮಾಡುವುದು.

ಜಾನಿ  = ಧ್ಯಾನ ಮಾಡುವವ, ಯೋಗಿ, ಬುದ್ಧಿವಂತ, ಚಿಂತಕ.

ಪ್ರಕೃತಿಯ ನವ ಪಲ್ಲವವು ಯೋಗಿಗಳ ಮತ್ತು ಚಿಂತಕರ ಮನಸ್ಸನ್ನು ಏಕಾಂತದೆಡೆಗೆ ಸೆಳೆಯುತ್ತಿದೆ.

ಕೊಳದ ತಡಿಯಲಿ ತಳಿರ ಮಲರ ಸೊಂಪಮರುತಿದೆ ;

ತಡಿ = ತಟ, ತಳಿರು =ಚಿಗುರು,

ಮಲರು = ಹೂವು, ಸೊಂಪು = ಚೆಲ್ವಿಕೆ, ಸಮೃದ್ಧಿ, ಸಂತೋಷ.

ಅಮರು = ಆವರಿಸು, ಆಕ್ರಮಿಸು, ತುಂಬಿಕೊಳ್ಳು.

ಕೊಳದ ತಟದಲ್ಲಿ ಮರಗಳ ಚಿಗುರು ಮತ್ತು ಹೂವುಗಳ ಚೆಲ್ವಿಕೆ, ಚಲುವಿಕೆಯು ತುಂಬಿಕೊಳ್ಳುತ್ತಿದೆ.

ದ್ರಾಕ್ಷಿಯಲಿ ಮಾಣಿಕ್ಯರಸವು ಹೊಮ್ಮುತಿದೆ.

ದ್ರಾಕ್ಷಿಯು ಮಾಣಿಕ್ಯ ವರ್ಣದ ರಸದಿಂದ ಕೂಡಿದೆ.

ವಸಂತನ ಆಗಮನದೊಂದಿಗೆ ಹೊಸವರ್ಷ ಬಂದಿದೆ. ಬಂದಿದೆಯಷ್ಟೇ ಅಲ್ಲ ಅದು ಹಳೆಯ ಆಸೆಗಳನ್ನು ಇನ್ನಷ್ಟು ಬಲವಾಗಿಸುತ್ತಿದೆ. ಆ ಆಸೆಗಳ ಈಡೇರಿಕೆಗೆ ಮನಸ್ಸು ಧೃಡವಾಗುತ್ತಿದೆ.  ಪ್ರಕೃತಿಯು ಮತ್ತದೇ ಆಸೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನ್ನ ಹೊಚ್ಚ ಹೊಸತನದ ಮೋಡಿಯಿಂದ ಮನಸ್ಸನ್ನು ಆಸೆಗಳ ಈಡೇರಿಕೆಗೆ ಪ್ರಚೋದಿಸುತ್ತಿದೆ, ಉತ್ತೇಜಿಸುತ್ತಿದೆ.

ಪ್ರಕೃತಿಯು ತನ್ನನ್ನು ತಾನೇ ನವೀಕರಿಸಿಕೊಂಡು ನಳನಳಿಸುವ ವಾತಾವರಣವು ಯೋಗಿಗಳನ್ನು, ಧ್ಯಾನಿಗಳನ್ನು  ಧ್ಯಾನಾಸಕ್ತರನ್ನು, ಗಾಢವಾಗಿ ಆಲೋಚಿಸುವ ಚಿಂತಕರನ್ನು ಏಕಾಂತತೆಗೆ ಆಕರ್ಷಿಸುತ್ತಿದೆ.

ವಸಂತದಲ್ಲಿ ಪ್ರಕೃತಿಯು ಬಣ್ಣ ಬಣ್ಣದ ಚಿಗುರುಗಳನ್ನು, ಹೂವುಗಳನ್ನೂ ಅರಳಿಸಿ ಹೊಸ ಚಲುವನ್ನು ಸೃಷ್ಟಿಸುತ್ತಿದೆ. ಕೊಳದ ತಟದಲ್ಲಿ ನೀರ ಮೇಲೆ ಬೀಸುವ ತಂಗಾಳಿಯಲ್ಲಿ  ಆ ಚಿಗುರುಗಳ, ಹೂವುಗಳ ನವಿರಾದ ಕಂಪು ವಾತಾವರಣವನ್ನು ತುಂಬಿಕೊಂಡು ವಿಹಾರಿಗಳ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ.

ತಳಿರು, ಮಲರು, ಸೊಂಪು ಅಮರು ಈ ನಾಲ್ಕು ಶಬ್ದಗಳಲ್ಲಿ ವಸಂತನ ಅಮೋಘ ಚಿತ್ರಣ.

ಇದೇ ಅಲ್ಲವೇ ಪೂಜ್ಯ ಡಿವಿಜಿಯವರ ಶಬ್ದಗಾರುಡಿ.

ದ್ರಾಕ್ಷಿಯಲ್ಲಿ ಮಾಣಿಕ್ಯ ಬಣ್ಣದ ರಸವು ಹೊಮ್ಮಿ ದ್ರಾಕ್ಷಿಯನ್ನು ನೋಡುವುದೇ ಸೊಗಸಾಗಿಸಿದೆ.

ಚಿಗುರು, ಹೂವುಗಳ ನಂತರ ಹಣ್ಣುಗಳು ರಸಭರಿತವಾಗಿ ತೊನೆಯುತ್ತಿವೆ. ಹಣ್ಣುಗಳು ಜೀವರಸದ ಸಂಕೇತ. ಪ್ರಕೃತಿಯಲ್ಲಿ ಜೀವರಸವು ತುಂಬಿ ಹಣ್ಣುಗಳೂ ತಮ್ಮ ತಮ್ಮ ಬಣ್ಣದೊಂದಿಗೆ ಜೀವಾಮೃತವನ್ನು ಕೊಡಲು ಸಿದ್ಧವಾಗಿವೆ.

ದ್ರಾಕ್ಷಿಯ ಮಾಣಿಕ್ಯ ರಸವು ಮಧುವಿಗೆ ಆಧಾರ. ಉಮರನ ಪ್ರತಿಮೆಗಳಲ್ಲಿ ಮಧುವೆಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ.

ವಸಂತನ ಆಗಮನದಿಂದ ಜೀವ ಸಂಕುಲವೆಲ್ಲವೂ ನಳನಳಿತ ಗೊಂಡು, ಆ ಭಗವಂತನ ಸೃಷ್ಟಿಯ ಭಾಗವಾದ ಮಾನವ ಜೀವಿಯನ್ನು ಸೃಷ್ಟಿಕರ್ತ ಭಗವಂತನ ಉಪಾಸನೆಗೆ ಉತ್ತೇಜಿಸುತ್ತಿದೆ, ಪ್ರಚೋದಿಸುತ್ತಿದೆ.

ಮರಗಿಡಗಳಲ್ಲಿ ಚಿಗುರು ನಳನಳಿಸುವುದು, ಹೂಗಳು ನಗುವುದು ಹಣ್ಣುಗಳು ಜೀವ ರಸ ತುಂಬಿ ಹೊಮ್ಮುವುದು ಪ್ರಕೃತಿಯ ನವೀಕರಣದ ವೈಭವನ್ನು ಸಾರುವುದನ್ನು ಈ ಪದ್ಯದಲ್ಲಿ ಅಮೋಘವಾಗಿ ಕಟ್ಟಿ ಕೊಡಲಾಗಿದೆ.

ರವೀಂದ್ರ ಕುಮಾರ್ ಎಲ್ವಿ.

ಮೈಸೂರು

ಎನ್ನ ಇಮ್ಮಿದಳು - ಕೇತಕೀವನ - ಡಿವಿಜಿ

ತನ್ನ ಮೆಯ್ಸಿರಿಯಿಂದ 
ಹೊನ್ನೊಡವೆಯೆಸಕವನು 
ಇಮ್ಮಡಿಪಳವಳು 
ಎನ್ನ ಇಮ್ಮಿದಳು. 

ಮುಡಿಯ ಸೊಬಗಿಂದ 
ತಾಂ ಮುಡಿದ ಹೂವಿನ ಬೆಡಗ 
ಇಮ್ಮಡಿಪಳವಳು 
ಎನ್ನ ಇಮ್ಮಿದಳು. 

ನಯನರುಚಿಯಿಂ ಮನದ 
ಪ್ರಿಯಭಾವಗಳ ಕೆಣಕಿ 
ಇಮ್ಮಡಿಪಳವಳು 
ಎನ್ನ ಇಮ್ಮಿದಳು. 

ಮುಗುಳುನಗೆಯಿಂ ಜಗದ 
ಸೊಗಸು ಸೊಗಗಳನೆಲ್ಲ 
ಇಮ್ಮಡಿಪಳವಳು 
ಎನ್ನ ಇಮ್ಮಿದಳು.

********

ಪ್ರೇಮಭಿಕ್ಷೆಗಾಗಿ ಹಾತೊರೆಯುತ್ತಾ ಕನಸುಕಾಣುತ್ತಿರುವ  ಪ್ರೇಮಿಯು  ತನ್ನ ಮನದನ್ನೆಯು ತನ್ನ ಸೌಂದರ್ಯದ ಹೊಂಬೆಳಕಿನಿಂದ ನನ್ನನ್ನು ಚೆಲುವನನ್ನಾಗಿಸಿದಳು ಎಂದು ಕನಸುಕಾಣುವ  ಪರಿ ಅನನ್ಯವಾಗಿದೆ.

ನನ್ನ ಈ ಕನಸಿನರಾಣಿಯು ತನ್ನ ಮೈಮಾಟ ಸೌಂದರ್ಯಗಳಿಂದ  ಬಂಗಾರದೊಡವೆಗಳ ಚೆಲುವನ್ನು ಮೀರಿಸುತ್ತಾಳೆ.

ಆಕೆಯ ಸೌಂದರ್ಯದಲ್ಲಿ ಮೀಯುತ್ತಿರುವ ನನ್ನನ್ನು ಈ ಮನದನ್ನೆಯು ಚೆಲುವನನ್ನಾಗಿ ರೂಪಿಸಿದಳು.

ರೂಪರಾಶಿಯಾದ ಎನ್ನ ಇನಿಯಳು  ತನ್ನ ಮುಡಿಯ ಕೇಶರಾಶಿಯ  ಸೊಬಗಿನಿಂದ  ಮುಡಿಗೇರಿಸಿದ ಕೇದಗೆಯ ಹೂವಿನ ಬೆಡಗನ್ನು ಇಮ್ಮಡಿಸಿದಳು. ಮುಡಿದ ಹೂವಿನ ಕಾಂತಿಪರಿಮಳಗಳನ್ನು  ಹೆಚ್ಚಿಸಿದಳು. ಈ ಸೌಂದರ್ಯದಲ್ಲಿ ಮಿಂದೇಳುತ್ತಿರುವ  ನನ್ನೊಲವಿನ ಈ ರೂಪಸಿಯು ನನ್ನನ್ನು  ಚೆಲುವನನ್ನಾಗಿ ರೂಪಿಸಿದಳು.
  
ಅಬ್ಬಬ್ಬಾ! ತನ್ನ ಕುಡಿನೋಟದ ಸವಿಯಿಂದ ಪ್ರಿಯಭಾವನೆಗಳ ತೆರೆಗಳನ್ನೆಬ್ಬಿಸಿ ಅನುರಣಿಸುತ್ತಾ ಇಮ್ಮಡಿಗೊಳಿಸುತ್ತಿದ್ದಾಳೆ. ಈ ನನ್ನ ಅರಗಿಣಿ ಸುರಸುಂದರಿಯ ಸೌಂದರ್ಯದ ಆಕರ್ಷಣೆಯ ಬೆಳಕಿನಿಂದ ನನ್ನನ್ನು  ಚೆಲುವನ್ನಾಗಿ ರೂಪಿಸಿದಳು. ನನ್ನೊಳಗಿನ  ಪ್ರೇಮಲಹರಿಯ ತರಂಗಗಳನ್ನೆಬ್ಬಿಸುತ್ತಾ  ನನ್ನನ್ನು ಚೆಲುವನನ್ನಾಗಿಸಿ ಕುಣಿಸುತ್ತಿದ್ದಾಳೆ.

 ತನ್ನ ಮುಗುಳುನಗೆಯಿಂದ ಚೆಲುವಿನ ಖನಿಯಾದ ಈ ಬೆಡಗಿಯು  ಜಗತ್ತಿನ ಸೌಂದರ್ಯಸೊಬಗನ್ನು ಇಮ್ಮಡಿಗೊಳಿಸುತ್ತ  ನನಗೆ ಅಮಿತಾನಂದವನ್ನುಂಟುಮಾಡುತ್ತಿದ್ದಾಳೆ. ಈಕೆಯ ಮಾಟವಾದ ಸೌಂದರ್ಯದ ಮೇಲಣ ಮೋಹವು  ನನ್ನನ್ನೂ  ಚೆಲುವನನ್ನಾಗಿ ರೂಪಿಸುತ್ತಿರುವುದು  ಬಲು ಚೋದ್ಯವು! 
ಭಾವಾನುವಾದ : © ಕೊಕ್ಕಡ ವೆಂಕಟ್ರಮಣಭಟ್ ಮಂಡ್ಯ

Sunday 26 November 2023

ಉಮರನ ಒಸಗೆ - 04 - ಕೋಳಿ ಕೂಗುವ ವೇಳೆ ಕಳ್ಳಗಂಡಿಯ ಮುಂದೆ

ಕೋಳಿ ಕೂಗುವ ವೇಳೆ ಕಳ್ಳಗಂಡಿಯ ಮುಂದೆ

ಬೊಬ್ಬೆಯಿಡುವರು, ಕೇಳು, 'ತೆರೆ ಕದವನ್' ಎನುತೆ:

"ತೆರೆ ಕದವನ್ ; ಎಮಗಿಲ್ಲಿರಲು ಹೊತ್ತು ಬಹಳಿಲ್ಲ :

ತೆರಳಿದ ಬಳಿಕಿತ್ತ ಬರಲಿಕಳವಲ್ಲ.


ಕೋಳಿ ಕೂಗುವ ವೇಳೆ ಕಳ್ಳಗಂಡಿಯ ಮುಂದೆ

ನಸುಕು ಹರಿದು ಬೆಳಕು ಬರುವ ವೇಳೆಗೆ ಕಳ್ಳ ಗಂಡಿಯ ಮುಂದೆ,

ಬೊಬ್ಬೆಯಿಡುವರು, ಕೇಳು, 'ತೆರೆ ಕದವನ್' ಎನುತೆ:

'ತೆರೆ ಕದವನ್' - ಬಾಗಿಲನ್ನು ತೆಗೆ ಎಂದು  ಕೂಗಾಡುತ್ತಿರುವರು,

 ಎಮಗಿಲ್ಲಿರಲು ಹೊತ್ತು ಬಹಳಿಲ್ಲ :

ನಮಗೆ ಇಲ್ಲಿರಲು ಬಹಳ  ಸಮಯವು ಇಲ್ಲ.

ತೆರಳಿದ ಬಳಿಕಿತ್ತ ಬರಲಿಕಳವಲ್ಲ.

ತೆರಳು = ಹೊರಡು, ಹೋಗು,

ಬಳಿಕಿತ್ತ = ಬಳಿಕ + ಇತ್ತ

ಬರಲಿಕಳವಲ್ಲ = ಬರಲಿಕ್ + ಅಳವಲ್ಲ. ಅಳವು = ಸಾಧ್ಯವಾದುದು.

ಇಲ್ಲಿಂದ ಹೊರಟ ಮೇಲೆ ಈ ಕಡೆಗೆ ಅಥವಾ ಇಲ್ಲಿಗೆ ಬರುವುದು ಸಾಧ್ಯವಾದುದಲ್ಲ, ಅಥವಾ  ಸಾಧ್ಯವಿಲ್ಲ.

ಸೂರ್ಯೋದಯದ ವಸ್ತುವನ್ನೇ ಮುಂದುವರಿಸುತ್ತ ಕವಿ ಈ ಪದ್ಯದಲ್ಲಿ ನಾವು ಈ ಜಗತ್ತಿಗೆ ಬಂದುದರ ಮತ್ತು ನಮ್ಮ ಇಲ್ಲಿನ  ಜೀವಿತ ಕಾಲದ ಬಗ್ಗೆ ಬರೆಯುತ್ತಿದ್ದಾನೆ.

ಇಲ್ಲಿಗೆ ಬಂದವರ ಅರಚಾಟ, ಕೂಗಾಟ, ಅಬ್ಬರ, ಆರ್ಭಟ, ಎಲ್ಲವೂ ಬಂದ ತಕ್ಷಣವೇ ಶುರುವಾಗುವುದು. ಕೋಳಿ ಕೂಗುವುದು ದಿನದ ಆರಂಭ.

ಈ ಜನರು ಸೇರಿ ಕೊಂಡು ಬೊಬ್ಬೆಯಿಡುವುದು ಸಹ ಇಲ್ಲಿಗೆ ಬಂದ ತಕ್ಷಣವೇ ಆರಂಭ.

ಈ ಬೊಬ್ಬಿಡುವಿಕೆ ಕಳ್ಳಂಗಡಿಯಲ್ಲೇ ಇರಬಹುದು, ಇಲ್ಲವೇ ಕಳ್ಳಗಂಡಿಯಲ್ಲಿ ಇರಬಹುದು ಇಲ್ಲವೇ ಕಳ್ಳಂಗಡಿಯ ಕಳ್ಳಗಂಡಿಯಲ್ಲಿಯೇ  ಇರಬಹುದು.

ಎಲ್ಲೆಡೆಯೂ ಒಂದೇ ಕೂಗು - " -'ಅವಸರಿಸಿ' ನಮ್ಮನ್ನು ಅನುಸರಿಸಿ, ಆದರಿಸಿ. " - ಎಂದು. ಕಳ್ಳಂಗಡಿಯಲ್ಲಿಯೂ ಅವಸರ. ಕಳ್ಳಗಂಡಿಯಲ್ಲೂ ಬೇಗ ಬಾಗಿಲು ತೆಗೆಸುವ ಅವಸರ.

ಇಲ್ಲಿಗೆ ಬಂದವರ ಪ್ರಾಪಂಚಿಕ ಅವಸರಕ್ಕೆ ಕಾರಣ ; ಸಮಯ.

ನಮಗೆ ಇಲ್ಲಿ ಇರಲು ಬಹಳ ಸಮಯವಿಲ್ಲ ಎಂಬ ಅನಿಸಿಕೆ.

ಇದ್ದ ಸಮಯದಲ್ಲೇ ಮಧುಪಾನದ ಆನಂದವನ್ನೋ, ಜೀವನದ ಸವಿಯನ್ನೋ ಅನುಭವಿಸ ಬೇಕು. ಒಮ್ಮೆ ಇಲ್ಲಿಂದ ಹೊರಟ  ಮೇಲೆ ಮತ್ತೆ ಇಲ್ಲಿಗೆ ಬರುವುದು ಸಾಧ್ಯವಿಲ್ಲ.

ಹಾಗಾಗಿ ಮಧುವಾಟಿಕೆಯಲ್ಲಿ ಬೇಗ ಬಾಗಿಲು ತೆರೆಸಲು ಬೊಬ್ಬಾಟ.

ಪ್ರಾಪಂಚಿಕವಾದ ಕಳ್ಳಂಗಡಿಯಲ್ಲಿ ಮಧುವನ್ನು ಸವಿದು ಆನಂದಿಸುವುದೇ ಆಗಲಿ,

ಇಲ್ಲವೇ ಸಾಧುಗಳ ಗೋಷ್ಠಿಯಲ್ಲೋ, ಭಕ್ತರ ಗುಂಪಿನಲ್ಲೋ ಸೇರಿ ಭಗವಂತನ ಉಪಾಸನೆಯ ಆನಂದವನ್ನು ಹೃದಯದಲ್ಲಿ ತುಂಬಿ ಕೊಳ್ಳುವುದೇ ಆಗಲಿ, ಮನುಷ್ಯರು ಅದಕ್ಕಾಗಿ ಅವಸರಿಸಿ ಕೂಗಾಡುವುದು ಸಾಮಾನ್ಯ ದೃಶ್ಯ.

 "ಜೀವನವು ತುಂಬಾ ಚಿಕ್ಕದು. ಒಮ್ಮೆ ಸತ್ತರೆ, ಅಷ್ಟೇ - ಅಲ್ಲಿಗೇ ಮುಗಿಯಿತು. ಮತ್ತೆ ಹಿಂತಿರುಗಿ ಕಳ್ಳಂಗಡಿಗೇ ಆಗಲಿ ಈ ಪ್ರಪಂಚಕ್ಕೇ ಆಗಲಿ  ಬರಲಾಗುವುದಿಲ್ಲ." - ಎಂಬ ಭಾವದಿಂದ ಹುಟ್ಟಿದ್ದು,- ಈ ಅವಸರ ಅಥವಾ ಅವಸರಿಸುವಿಕೆ.

ಜೊತೆಗೆ ಎಲ್ಲದೂ ಬೇರಾರಿಗೂ ಸಿಗುವ ಮುನ್ನ ತನಗೆ ಸಿಗಲಿ ಎಂಬ ಆಸೆ.

ಅದರಿಂದಾಗಿಯೇ ಬದುಕಿನ ಎಲ್ಲ ಹಂತದಲ್ಲೂ ಧಾವಂತ.

ರವೀಂದ್ರ ಕುಮಾರ್ ಎಲ್ವಿ

ಮೈಸೂರು.

ಉಮರನ ಒಸಗೆ - 03 - ಕನಸೊಂದ ಮುಂಜಾವದಲಿ ಕಂಡೆನೇನೆಂಬೆನ್ ?

ಕನಸೊಂದ ಮುಂಜಾವದಲಿ ಕಂಡೆನೇನೆಂಬೆನ್ ?

ಅರವಟಿಗೆಯಿಂದೆ ಸದ್ದೊಂದಾದುದಿಂತು :

" ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ

ನಿಮ್ಮೊಡಲಬಟ್ಟಲೊಳು ರಸವಿಮರ್ವ ಮುನ್ನ


ಕನಸೊಂದ ಮುಂಜಾವದಲಿ ಕಂಡೆನೇನೆಂಬೆನ್ ?

ಕಂಡೆನೇನೆಂಬೆನ್ = ಕಂಡೆನ್ + ಏನು + ಎಂಬೆನ್

ಎಂಬೆನ್ = ಹೇಳುವೆನು.

ಮುಂಜಾವಿನಲ್ಲಿ ಒಂದು ಕನಸನ್ನು ಕಂಡೆನು. ಏನು ಎಂದು ಹೇಳುವೆನು.

ಅರವಟಿಗೆಯಿಂದೆ ಸದ್ದೊಂದಾದುದಿಂತು :

ಅರವಟಿಗೆ = ಮಧುವಾಟಿಕೆ, ಹೆಂಡದಂಗಡಿ 

ಸದ್ದೊಂದಾದುದಿಂತು = ಸದ್ದು + ಒಂದು + ಆದುದು + ಇಂತು.

ಮಧುವಾಟಿಕೆಯಿಂದ ಈ ರೀತಿಯ ಒಂದು ಸದ್ದು ಆಯಿತು, ಅಂದರೆ ಕೇಳಿಸಿತು.

" ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ

ಎಲೆ ಮಕ್ಕಳಿರಾ ಎದ್ದೇಳಿ, ನಿಮ್ಮ ಬಟ್ಟಲನ್ನು ತುಂಬಿ ಕೊಳ್ಳಿರಿ.

ನಿಮ್ಮೊಡಲಬಟ್ಟಲೊಳು ರಸವಿಮರ್ವ ಮುನ್ನ

ರಸವಿಮರ್ವ = ರಸವ್ +ಇಮರ್, ಇಮರ್ = ಒಣಗು, ಇಮರ್ವ = ರಸವು + ಒಣಗುವ 

ನಿಮ್ಮ ಒಡಲ ಬಟ್ಟಲಲ್ಲಿ ಇರುವ ರಸವು ಒಣಗಿ ಹೋಗುವುದಕ್ಕೆ  ಮುಂಚೆ,

ಎಲೆ ಮಕ್ಕಳಿರಾ, ನಿಮ್ಮ ದೇಹದ ಬಟ್ಟಲಲ್ಲಿ ಇರುವ ರಸವು ಒಣಗಿ ಹೋಗುವ ಮುಂಚೆ ನಿಮ್ಮ  ಬಟ್ಟಲನ್ನು ತುಂಬಿ ಕೊಳ್ಳಿ ಎಂಬುದಾಗಿ  ಮಧುವಾಟಿಕೆಯಲ್ಲಿ ಹೇಳುತ್ತಿದ್ದ ಹಾಗೆ ಕವಿಯು ಒಂದು ದಿನ ಮುಂಜಾವಿನಲ್ಲಿ ಕನಸು ಕಂಡಿದ್ದನ್ನು ಈ ಪದ್ಯದಲ್ಲಿ ಹೇಳಿದ್ದಾನೆ.

ಮೇಲು ನೋಟಕ್ಕೆ ಇದು ಹೆಂಡದಂಗಡಿಯಲ್ಲಿ ಜನ  ಹಿಂದಿನ ದಿನ ಸೇವಿಸಿದ ಮದ್ಯದ ಪರಿಣಾಮವಾಗಿ ದೇಹ ಒಣಗಿ ನೀರಡಿಕೆಯಾಗುವಾಗ ಬೆಳಿಗ್ಗೆ ಎದ್ದು ಮತ್ತೊಂದು ಸುತ್ತು ಮದ್ಯ ಸೇವನೆ ಮಾಡುವುದನ್ನು ಕವಿಯು ತನ್ನ ಕನಸಲ್ಲಿ ಕೇಳಿದಂತೆ ವಿವರಿಸಿದ್ದಾನೆ. ಅದೂ ತನ್ನ ಮುಂಜಾವಿನ ಕನಸಲ್ಲಿ. ಈ ಮುಂಜಾವಿನ ನಸು ಬೆಳಕಲ್ಲಿ ಯಾವುದೂ ಸರಿಯಾಗಿ ಕಾಣುವುದಿಲ್ಲ. ಆದರೆ ಮಾತನಾಡಿದ್ದು ಕೇಳುತ್ತದೆ. ಕವಿಗೂ ಹಾಗೆಯೇ ಆದ ವರ್ಣನೆ ಇದೆ.

ಉಮರನು ಬಳಸಿರುವ ಪ್ರತಿಮೆಗಳ ಹಿನ್ನಲೆಯಲ್ಲಿ ಈ ಪದ್ಯವನ್ನು ನೋಡುವುದಾದರೆ ಅರವಟಿಗೆ ಎನ್ನುವುದು ಒಂದು ಭಕ್ತರ ಗುಂಪು ಅಥವಾ ಸಾಧುಗಳ ಗೋಷ್ಠಿ. ಬಟ್ಟಲು ಎಂದರೆ ಹೃದಯ. ಮಧು ಎಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ

ಬೆಳಗಿನ ಜಾವದಲ್ಲಿ ಭಕ್ತರ ಗುಂಪೊಂದರಲ್ಲಿ ಕೇಳಿದ ಮಾತುಗಳು :- " ಎಲೆ ಮಕ್ಕಳಿರಾ ಏಳಿ, ನಿಮ್ಮ ಬಟ್ಟಲನ್ನು ಮಧುವಿನಿಂದ ತುಂಬಿ ಕೊಳ್ಳಿ. ಅಂದರೆ ನಿಮ್ಮ ಹೃದಯವನ್ನು ಭಗವಂತನ ಉಪಾಸನೆಯಿಂದ ಆಗುವ ಆನಂದದಿಂದ ತುಂಬಿಕೊಳ್ಳಿ.

ಈ ಕೆಲಸವನ್ನು ನಿಮ್ಮ ದೇಹದಲ್ಲಿರುವ ಹೃದಯದಲ್ಲಿ ತುಂಬಿರುವ ಭಗವಂತನ ಉಪಾಸನೆಯ ಆನಂದ ರಸವು ಒಣಗಿ ಹೋಗಿ ನಿಮ್ಮ ದೇಹವು ಶುಷ್ಕವಾಗುವ ಮುಂಚೆ ಹೃದಯದ ಬಟ್ಟಲನ್ನು ಮಧುವಿನಿಂದ ಮತ್ತೆ ತುಂಬಿ ಕೊಳ್ಳಿ ಎಂಬುದು ಅರವಟಿಗೆ ಸದ್ಧಭಿಪ್ರಾಯ. ಭಕ್ತರ ಗುಂಪಿನ ಆಶಯವಿದು.

ಭಗವಂತನ ಉಪಾಸನೆಯಿಂದ ಆಗುವ ಆನಂದವೊಂದು ಕಡೆ, ಮತ್ತೊಂದು ಕಡೆಯಲ್ಲಿ ಅಂತಹ ಸದೋಪಾಸನೆಯಿಂದ ಮಾಡಿದ ಸತ್ಕರ್ಮಗಳ ಫಲದ ಬಲವಿನ್ನೊಂದು ಕಡೆ.

ಇದು ನಮ್ಮ ಒಡಲನ್ನು ಅಂದರೆ ನಮ್ಮ ಇರುವಿಕೆಯನ್ನು ಕಾಯುತ್ತಿರುತ್ತದೆ. 

ಮಾಡಿದ ಉಪಾಸನೆಯ ಆನಂದ ಮತ್ತು ಗಳಿಸಿದ ಸತ್ಕರ್ಮಗಳ ಪುಣ್ಯ ಬಲ ತೀರಿ ಹೋಗಿ ಒಡಲು ಒಣಗುವ ಮುನ್ನ ಅಂದರೆ ನಮ್ಮ ಇರುವಿಕೆ ಶುಷ್ಕವಾಗಿ ಅರ್ಥ ಕಳೆದು ಕೊಳ್ಳುವ ಮುನ್ನ ಮತ್ತೆ ಭಗವಂತನ ಉಪಾಸನೆಯಿಂದ ಹೃದಯದ ಬಟ್ಟಲನ್ನು ತುಂಬಿ ಕೊಳ್ಳಬೇಕು, ತುಂಬಿ ಕೊಳ್ಳಿ ಎಂಬುದು ಕವಿ ಉಮರನ ಈ ಪದ್ಯದ ಆಶಯ, ಹಾಗೂ ಆದೇಶ.

ರವೀಂದ್ರ ಕುಮಾರ್ ಎಲ್ವಿ.

ಮೈಸೂರು.

ಉಮರನ ಒಸಗೆ - 02 - ಮೂಡಲತ್ತಣ ಬೇಡನದೊ ! ದುಡುಕಿ ಬಂದೀಗ

ಮೂಡಲತ್ತಣ ಬೇಡನದೊ ! ದುಡುಕಿ ಬಂದೀಗ,

ನೋಡು, ಸುಲ್ತಾನನರಮನೆಯ ಗೋಪುರಕೆ

ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ

ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ


ಮೂಡಲತ್ತಣ ಬೇಡನದೊ ! ದುಡುಕಿ ಬಂದೀಗ,

ಅತ್ತಣ - ಆ ಕಡೆಯಲ್ಲಿ, ಮೂಡಲ್  = ಮೂಡಿದ,

ಬೇಡನ್ = ಬೇಡರವನು  ಬೇಟೆಗಾರನು.

ದುಡುಕಿ = ಅವಸರಿಸಿ,

ಪೂರ್ವದ ಆ ಕಡೆಯಲ್ಲಿ ಬೇಡರವನು ಅವಸರಿಸಿ ಬಂದು  ಈಗ,

ನೋಡು, ಸುಲ್ತಾನನರಮನೆಯ ಗೋಪುರಕೆ

ಸುಲ್ತಾನರ ಅರಮನೆಯ ಗೋಪುರಕ್ಕೆ,

ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ

ಹೂಡು = ಆರಂಭಿಸು, ಉಪಕ್ರಮಿಸು,

ಬೀರಿ = ಎಸೆದು.

ತನ್ನ ಹಗ್ಗದ ಕುಣಿಕೆಯನ್ನು  ಎಸೆದು ಉಪಕ್ರಮಿಸುತ್ತಿದ್ದಾನೆ,

ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ

ಓ ಮುಗ್ಧೆಯೇ, ನೀನದನ್ನು ನೋಡು ಬಾ, ಹಾಗೆಯೇ ನಿನ್ನ ಪ್ರೀತಿಯನ್ನು ಕೊಡುವವಳಾಗು.

ಪರ್ಸಿಯಾ ದೇಶದ ಮರಳುಗಾಡುಗಳಲ್ಲಿ ಸೂರ್ಯನನ್ನು ಪೂರ್ವ ದಿಕ್ಕಿನ ಬೇಟೆಗಾರನೆಂದು ಪರಿಗಣಿಸುತ್ತಾರೆ.

ಹಿಂದಿನ ಪದ್ಯದಲ್ಲಿ ಸೂರ್ಯೋದಯದ ವರ್ಣನೆಯನ್ನು ಮಾಡಿದ ಕವಿ ಈ ಪದ್ಯದಲ್ಲಿ ಸೂರ್ಯನು ತನ್ನ ಕಿರಣಗಳಿಂದ ಸಕಲ ಚರಾಚರಗಳನ್ನು ಅವರಿಸಿಕೊಳ್ಳುವುದನ್ನು ಬೇಡನೊಬ್ಬನು ತನ್ನ ಹಗ್ಗದ ಕುಣಿಕೆಯನ್ನು ಎಸೆಯುವುದಕ್ಕೆ ಹೋಲಿಸುತ್ತಿದ್ದಾನೆ.

ಹಾಗೆ ಆ ಮೂಡಣದ ಬೇಡರವನು ಎಸೆದ ಹಗ್ಗದ ಕುಣಿಕೆಯು ಸುಲ್ತಾನನ ಅರಮನೆಯ ಗೋಪುರವನ್ನು ಉಪಕ್ರಮಿಸಿರುವುದನ್ನು ನೋಡು ಬಾ, ಓ ಮುಗ್ದ ಹೆಣ್ಣೇ! ಎಂದು ಕವಿಯು ತನ್ನ ಪ್ರಿಯತಮೆಯನ್ನು ಆ ಬೆಳಗಿನ ಸೂರ್ಯೋದಯದ ದೃಶ್ಯವನ್ನು ನೋಡಲು ಕರೆಯುತ್ತಿದ್ದಾನೆ,

ಹಾಗೆಯೇ ಅವಳಲ್ಲಿ "ನೀಡು ನಿನ್ನೊಲವ " ಎಂದು ಪ್ರೇಮ ಭಿಕ್ಷೆಯನ್ನೂ ಕೇಳುತ್ತಿದ್ದಾನೆ.

ಪೂರ್ವದಿಕ್ಕಿನ ಬೇಡರವನಾದ ಸೂರ್ಯನು ಮೇಲೆ ಮೇಲೆ ಏರುತ್ತಾ ಅರಮನೆಯ ಗೋಪುರವನ್ನು ತನ್ನ ಕುಣಿಕೆಯಲ್ಲಿ ಹಿಡಿದಿದ್ದಾನೆ ಎಂದರೆ ಹೊತ್ತೇರಿದೆ.

 ಓ ನನ್ನ ಮುಗ್ಧ ಹೆಣ್ಣೇ  ನೀನು ಆ ದೃಶ್ಯವನ್ನು ನೋಡು ಬಾ.

ಈಗಲೇ ಹೊತ್ತಾಗಿದೆ. ಇನ್ನು ತಡ ಮಾಡದೇ ನಿನ್ನ  ಪ್ರೀತಿಯನ್ನು ನನಗೆ ನೀಡು ಎಂದು ಪ್ರೇಮವನ್ನು ಕೋರುವ ಭಾವ, ಈ ಪದ್ಯದ್ದು.

ಇಲ್ಲಿಯೂ ಸಹ ಕವಿ ಉಮರನು ಪ್ರಿಯತಮೆಯನ್ನು ಓಲೈಸುವುದರ ಮೂಲಕ  ಬುದ್ದಿಯನ್ನು ಪ್ರಚೋದಿಸಿ ಜೀವನವನ್ನು ಸುಂದರಗೊಳಿಸಲು ಒಲಿದು ಸಹಕರಿಸು ಎಂದು ಪ್ರಾರ್ಥಿಸುತ್ತಿದ್ದಾನೆ.

          ---**---

ರವೀಂದ್ರ ಕುಮಾರ್ ಎಲ್ ವಿ

ಮೈಸೂರು.

ಉಮರನ ಒಸಗೆ - 01 - ಏಳೆನ್ನ ಮನದನ್ನೆ ! ನೋಡು, ಪೊಳ್ತರೆ ಬಂದು

ಏಳೆನ್ನ ಮನದನ್ನೆ ! ನೋಡು, ಪೊಳ್ತರೆ ಬಂದು

ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸದು

ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು :

ನಿದ್ದೆ ಸಾಕಿನ್ನೀಗ, ಮುದ್ದಣುಗಿ ಬಾರ


ಏಳೆನ್ನ ಮನದನ್ನೆ ! ನೋಡು, ಪೊಳ್ತರೆ ಬಂದು

ಪೊಳ್ತರೆ - ನಸುಕು, ಮುಂಜಾವು 

ಓ ನನ್ನ ಪ್ರಿಯತಮೆಯೇ ನೋಡು ನಸುಕು ಮೂಡಿ;

ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸದು

ನಿಶಿ = ರಾತ್ರಿ, ಕಪ್ಪಾದ ಸ್ವರೂಪ, 

ಬೋಗುಣಿ - ತಳ ಚಿಕ್ಕದಾಗಿ ಬಾಯಿ ಅಗಲವಾಗಿರುವ ಪಾತ್ರೆ.

ಬುಗುರಿ = ತಿರುಗುವ ಒಂದು ಆಟಿಕೆ,  ಹೊಂಬುಗುರಿ = ಹೊನ್ನಿನ ಬಣ್ಣದ ಬುಗುರಿ.  

ರಾತ್ರಿಎಂಬ ಕಪ್ಪು ಬೋಗುಣಿಯ ಒಳಗೆ ಮುಂಜಾವಿನ  ಹೊನ್ನಿನ ಬಣ್ಣದ ಬುಗುರಿಯನ್ನು ಎಸೆದು ;

ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು :

ಆ ಬೋಗುಣಿಯೊಳಗೆ ಅರಳುಗಳಂತೆ ಕಾಣುವ ಚಿಕ್ಕಿಗಳನ್ನು ( ತಾರೆಗಳು , ನಕ್ಷತ್ರಗಳು) ಎಲ್ಲೆಡೆಯೂ ಚೆಲ್ಲಾಡಿದ್ದಾನೆ. 

ನಿದ್ದೆ ಸಾಕಿನ್ನೀಗ, ಮುದ್ದಣುಗಿ ಬಾರ

ಸಾಕಿನ್ನೀಗ = ಸಾಕು +ಇನ್ನು + ಈಗ 

ಅಣುಗಿ = ಮಗಳು. 

ಮುದ್ದಣಗಿ = ಮುದ್ದಿನ ಮಗಳು, ಮುದ್ದು = ಪ್ರೀತಿ, ಚೆಲುವು, ಚುಂಬನ. 

ಪ್ರೀತಿ, ಚೆಲುವು, ಒಲವು ಎಂಬುದೇನಿದೆಯೋ ಎಷ್ಟಿದೆಯೋ ಅದೆಲ್ಲದರ ಮಗಳಾಗಿರುವ ನೀನು ಬಾ.

ಸೂರ್ಯೋದಯದ ಸುಂದರ ವರ್ಣನೆಯನ್ನು ಮಾಡುತ್ತಾ ಕವಿ ತನ್ನ ಪ್ರೇಯಸಿಯನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದಾನೆ. 

ನಿಶೆ ಅಥವಾ ರ್ರಾತ್ರಿಯು ಒಂದು ಅರ್ಧ ಗೋಳಾಕಾರದ ಕಪ್ಪನೆಯ  ಬೋಗುಣಿಯನ್ನು ಮುಚ್ಚಿದಂತೆ ಭೂಮಿಯನ್ನು ಆವರಿಸಿರುತ್ತದೆ.

ನಸುಕಿನ ಅಥವಾ ಮುಂಜಾವಿನ  ಸೂರ್ಯ ಕಿರಣಗಳು ಆ ಬೋಗುಣಿಯೊಳಗೆ ಒಂದು ಹೊಂಬಣ್ಣದ ಬುಗುರಿಯನ್ನು ತಿರುಗಿಸಿ ಬಿಟ್ಟಂತೆ ಪ್ರವೇಶ ಮಾಡಿವೆ.  

ಸೂರ್ಯನು ತಿರುಗುವ ಬುಗುರಿಯಿಂದ  ಹೊಮ್ಮುವ ಹೊಂಬಣ್ಣದ ಕಿರಣಗಳನ್ನು ಬೋಗುಣಿಯೊಳಗೆ ಹರಡಿ,  ಮಿಣಿ ಮಿಣಿ  ಮಿಣುಕುತ್ತಿದ್ದ  ನಕ್ಷತ್ರಗಳನ್ನು , ಹುರಿಯುವ ಬಾಣಲೆಯಿಂದ ಅರಳುಗಳು ಸಿಡಿದು ಚಲ್ಲಾಡುವಂತೆ ಚದುರಿಸುತ್ತಿದ್ದಾನೆ. 

ಎಂತಹ ಮನ ಮೋಹಕ ದೃಶ್ಯವಿದು. ಓ ನನ್ನ ಮನದನ್ನೆಯೇ ನಿದ್ದೆಯು ಸಾಕೀಗ, ಎಚ್ಚರವಾಗು.

ಚೆಲುವು, ಒಲವು ಸೇರಿ ಹೆಣ್ಣಾಗಿ ಪಡೆದ ಮುದ್ದಿನ ಮಗಳು ನೀನು. 

ಅಂತಹ ನನ್ನ ಪ್ರಿಯತಮೆಯೇ ಎದ್ದೇಳು ಎಂದು ರಸಿಕ ಕವಿಯು ತನ್ನ ಪ್ರೇಯಸಿಯನ್ನು ಎಚ್ಚರ ಗೊಳಿಸುತ್ತಿದ್ದಾನೆ. 

ಉಮರನು ತನ್ನ ಪ್ರಿಯತಮೆಯನ್ನು ಎಬ್ಬಿಸುವಾಗ ಸುಂದರ ಮುಂಜಾವಿನ ವರ್ಣನೆಯನ್ನು ಮಾಡುತ್ತ ಅವಳಲ್ಲಿನ ಚೆಲುವು ಒಲವುಗಳ ಸಮ್ಮಿಳಿತವನ್ನೂ ವರ್ಣಿಸಿ ಅವಳನ್ನು ನಿದ್ದೆಯಿಂದೇಳಲು ಪ್ರಚೋದಿಸುತ್ತಿದ್ದಾನೆ. 

ಕವಿ ಉಮರನು ಪ್ರತಿಮೆಗಳ ರಾಜ.  ಅವನ ಈ ಕಾವ್ಯದಲ್ಲಿ ಪ್ರಿಯತಮೆಯನ್ನು ಬುದ್ಧಿಯ ಸಂಕೇತವಾಗಿ ಬಳಸಿದ್ದಾನೆ. 

ಈ ಮೊದಲ ಪದ್ಯದಲ್ಲಿ,  ರಾತ್ರಿಯ ತಾಮಸ ಗುಣದ  ಪ್ರಭಾವಕ್ಕೆ ಒಳಗಾಗಿ ಜಡತ್ವವನ್ನು ಮೆರೆಯುತ್ತಿರುವ ಬುದ್ಧಿಯನ್ನು ಎಚ್ಚರಿಸಿ, ಜಾಗೃತ ಗೊಳಿಸಿ ನಮ್ಮ ಜೀವನವನ್ನು ಸತ್ಪಥಗೊಳಿಸಲು ಪ್ರಚೋದಿಸುತ್ತಿದ್ದಾನೆ,  ದಾರ್ಶನಿಕ ಕವಿ ಉಮ್ಮರ್ ಖಯಾಮ್.

" ಧಿಯೋ ಯೋ ನಃ ಪ್ರಚೋದಯಾತ್ - ಒಂದು ಲೋಕೋತ್ತರ ಪ್ರಾರ್ಥನೆಯಲ್ತೆ.

ರವೀಂದ್ರ ಕುಮಾರ್ ಎಲ್ವೀ. 

ಮೈಸೂರು

ಚೆಲುವಿದ್ದರೇನು? - ಕೇತಕೀವನ - ಡಿವಿಜಿ

ಚೆಂಬೊನ್ನ ಮೈಮಿನುಗು 
ಕಂಬುಕಂಠದ ಸೊಬಗು 
ತುಂಬುನಗುವಿನ ಬೆಡಗು 
ಕಲೆತಿದ್ದರೇನು? 
ಒಲವಿಗೊಲವನು ಕೊಡದ 
ಚೆಲುವಿದ್ದರೇನು? 

ಧರೆಯ ಕೊರಗನು ಕೇಳಿ 
ಕರಗದಿಹ ಕಲ್ಲೆದೆಯ 
ಸುರರ ಮನೆಯಲಿ 
ಸುಧೆಯ ಕಲಶವಿದ್ದೇನು? 
ಒಲವಿಗೊಲವನು ಕೊಡದ 
ಚೆಲುವೆಯಿದ್ದೇನು? 

ಜಗದೆಲ್ಲ ಸವಿಗಳನು 
ಮುಗಿಲಿಗಾನಿಪ ಮರದಿ 
ಕಣ್ಗಿದ್ದು ಬಾಯ್ಗಿರದ 
ಫಲ ಮೆರೆದರೇನು? 
ಒಲವಿಗೊಲವನು ಕೊಡದ 
ಚೆಲುವಿರಲದೇನು? 

ಸ್ವರಭಾವಕನುವಾದ 
ಮರುದನಿಯ ಮಿಡಿವೆದೆಯ 
ಸರಸಿಯಿರದಿರೆ ಗಾನ- 
ಕಲೆಯಿಂದಲೇನು? 
ಒಲವಿಗೊಲವನು ಕೊಡದ 
ಚೆಲುವಿಂದಲೇನು? 

ಉಕ್ಕುವನುರಾಗವನು 
ಅಕ್ಕರೆಯಿನೊಪ್ಪಿಕೊಳೆ 
ತಕ್ಕಳನು ಕಾಣದನ 
ನಲುಮೆಯಿಂದೇನು? 
ಒಲವಿಗೊಲವನು ಕೊಡದ 
ಚೆಲುವಿನಿಂದೇನು?

ಅನ್ಯಾಯಕಾರಿ ವಿಧಿ
ನಿನ್ನ ಕಲ್ಲಾಗಿಸಿರ-
ಲೆನ್ನೊಳೊಲುಮೆಯ 
ಚಿಲುಮೆ ತುಳುಕುತಿದ್ದೇನು?
ಒಲವಿಗೊಲವನು ಕೊಡದ
ಚೆಲುವಿದ್ದೊಡೇನು?

*********************

ಮೆಚ್ಚಿ ಪ್ರೇಮನಿವೇದನೆನ್ನು  ಮುಂದಿಟ್ಟು, ಚೆಲುವೆಯ ಸಕಾರಾತ್ಮಕ ಸ್ಪಂದನದ ಸೂಚನೆಯನ್ನು ಕಾಣದೆ ಸದಾ ಆಕೆಯದೇ ಧ್ಯಾನದಲ್ಲಿ   ಮುಳುಗಿರುತ್ತ, ತೊಳಲಾಡುತ್ತಿರುವ  ಪ್ರೇಮಿಯು, "ಪ್ರೇಮನಿವೇದನೆಯ ಕರೆಗೆ  ಓಗೊಡದಿದ್ದರೆ, ಈ ಚೆಲುವಿದ್ದರೇನು?" ಎಂದು  ಪ್ರಶ್ನಿಸುತ್ತಾನೆ.
 ಆಹಾ! ಹೊಂಬಣ್ಣದಿಂದ ಥಳಥಳಿಸುತ್ತಾ ನೋಡುಗರ ಕಂಗಳ ಬೆಳಕನ್ನು ಹೆಚ್ಚಿಸುವ ಮೈಕಾಂತಿಯವಳು ನೀನು!  ಶಂಖದಂತಹ ಕೊರಳಿನಿಂದ ಶೋಭಿಸುವವಳು. ಗುಳಿಬಿದ್ದ ಕೆನ್ನೆಗಳಲ್ಲಿ ಮೂಡುವ ಚೆಲುನಗುವಿನ ಬೆಡಗುಳ್ಳವಳು. ಆದರೇನು ಒಲವಿನ‌ ಕರೆಗೆ ಸ್ಪಂದನವಿಲ್ಲದ ಈ ರೂಪರಾಶಿಗೆ ಬೆಲೆಯೆಲ್ಲಿ?
 
ಇಂದ್ರನು ಭೂಮಿಗೆ ಮಳೆಸುರಿಸುವನಂತೆ. ಕಾದು ಬೆಂಡಾದ ಈ ಧರಣಿಯ ಕೊರಗಿನ ಕರೆಗೆ ಓಗೊಡದ ಪಾಶಾಣಹೃದಯದ  ಸ್ವರ್ಗದಲ್ಲಿ‌ ಅಮೃತಕಲಶವಿದ್ದರೇನು ಪ್ರಯೋಜನ?  ದಾಹಕ್ಕೆ ಮಳೆಸುರಿಯದ ಮೇಲೆ  ಅಮೃತವಾದರೂ ಏಕೆ?
 
ಒಲವಿನ ಕರೆಗೆ ಸಾಮೀಪ್ಯದ ಮರುದನಿ ನೀಡದ ಚೆಲುವೆಯಿದ್ದರೇನು!? ಚೆಲುವಿಗರ್ಥವಿಲ್ಲವೇ! 
ಜಗತ್ತಿನ ಎಲ್ಲಾ ರೀತಿಯ ಸವಿರುಚಿಯನ್ನು  ಅದೃಶ್ಯವಾಗಿ  ಮುಗಿಲಿಗೆ ನೀಡುವ ಮರದಲ್ಲಿ,  ಕಂಗೊಳಿಸುವ ಮನೋಹರವಾದ ಹಣ್ಣುಗಳಿದ್ದೂ, ಕೈಗೆಟುಕದ  ಗಗನಫಲವಾದರೆ ಅದರಿಂದೇನು ಪ್ರಯೋಜನ!?
   
ನಿನಗಾಗಿ ಹಂಬಲಿಸುತ್ತಾ ಬಳಲಿ ಬೆಂಡಾಗಿರುವ ನನ್ನ ಪ್ರೇಮನಿವೇದನೆಗೆ ಸ್ಪಂದಿಸದೆ  ಮೌನವಾದರೆ, ಈ ನಿನ್ನ ರೂಪರಾಶಿಗೆ ಸಾರ್ಥಕತೆಯಿದೆಯೇ!? 
 
ಸ್ವರಭಾವಕ್ಕನುವಾದ  ಮರುದನಿನೀಡುವ  ಸಹೃದಯತೆಯ ಮಿಡಿತವಿಲ್ಲದಲ್ಲಿ ಹಾಡುವ ಗಾಯನಕ್ಕೆ ಬೆಲೆಯಿಲ್ಲದಾಗುತ್ತದೆ ಎಂಬುದನ್ನು  ಮರೆಯದಿರು.

ಉಕ್ಕೇರುತ್ತಿರುವ ಅನುರಾಗವನ್ನು  ಅಕ್ಕರೆಯಿಂದ ಬಾಚಿ ತಬ್ಬಿಕೊಳ್ಳಲು ತಕ್ಕವಳನ್ನು  ಕಾಣದಿದ್ದ ಮೇಲೆ  ನಲುಮೆ ಒಲುಮೆಗಳಿಗೆ ಅರ್ಥವೆಲ್ಲಿದೆ!?  ಒಲವಿಗೆ ಒಲವಿನ ಸವಿಯನ್ನುಣ್ಣಿಸುವವಳಿಲ್ಲದ ಒಲವಿಗರ್ಥವಿಲ್ಲದಾಗುವುದಲ್ತೆ!  ವಿಧಿಯು ಅನ್ಯಾಯಕಾರಿ! ವಿಧಿಯು ನಿನ್ನನ್ನು ಶಿಲಾಮೂರ್ತಿಯಾಗಿಸಿದ್ದರೆ ನಿನ್ನಲ್ಲಿ ಒಲುಮೆಯ ಚಿಲುಮೆ ಪುಟಿದೇಳುತ್ತಿರಲಿಲ್ಲ. ಒಲವಿಗೆ ಅನುರಾಗದ ಝಣತ್ಕಾರದ ಪೂರಕವಾದ ಸ್ಪಂದನದ ಹೃದಯವಿಲ್ಲದ ಮೇಲೆ  ಈ ಚೆಲುವಿಕೆಗೆ ಅರ್ಥವಿಲ್ಲದಾಯಿತು. ಒಲವು - ಚೆಲುವುಗಳು ನಿರರ್ಥಕವಾದವು! 
ಭಾವಾನುವಾದ : © ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
ಗಾಯನ: ಶ್ರೀಮತಿ ಮಂಗಳ ನಾಡಿಗ

Saturday 25 November 2023

ಇದನು ನೀನೊಲ್ಲದಿಹೆಯಾ? - ಕೇತಕೀವನ - ಡಿವಿಜಿ

ಇದನು ನೀನೊಲ್ಲದಿಹೆಯಾ? - ಕೇತಕೀವನ - ಡಿವಿಜಿ

ನಿನ್ನೊಡನೆ ನಡೆದು ನಾಲ್ಕಡಿಯನಿಡುವುದೆ ಸೊಗವು 
ನಿನ್ನ ಬಳಿ ಕುಳಿತೆರಡು ನುಡಿಯ ನುಡಿವುದೆ ಸೊಗವು 
ಅದನು ನೀನೊಲ್ಲೆನೆನಲು 
ನಿನ್ನ ಸೆರಗಿನ ಗಾಳಿಯಲೆಗೆ ಸಿಗುವುದೆ ಸೊಗವು 
ನಿನ್ನ ಕೊರಲುಲಿಯ ಮರೆಯಿಂದಾಲಿಪುದೆ ಸೊಗವು 
ಇದನು ನೀನೊಲ್ಲದಿಹೆಯಾ? 

ನಿನ್ನ ಚೆಂದುಟಿಯೆನ್ನ ತುಟಿಯ ಸೋಕಲು ಸೊಗವು 
ನಿನ್ನ ಕಣ್ಣೆನ್ನ ಕಣ್ಣೊಡನೆ ಬೆರೆಯಲು ಸೊಗವು 
ಅದನು ನೀನೊಲ್ಲೆನೆನಲು 
ನೀನು ಸೋಕಿದುದ ನಾಂ ಸೋಕಿ ಸುಯ್ದುದೆ ಸೊಗಸು 
ನೀನು ನಿಂತೆಡೆ ನಿಂತು ನಿನ್ನ ನೆನೆವುದೆ ಸೊಗವು 
ಇದನು ನೀನೊಲ್ಲದಿಹೆಯಾ? 

ನಿನ್ನ ಮನವೆನ್ನ ಮನದೊಡನೆ ಬೆರೆಯಲು ಸೊಗವು 
ನಿನ್ನ ದನಿಯೆನ್ನ ದನಿಯೊಡನೆ ಪಾಡಲು ಸೊಗವು 
ಅದನು ನೀನೊಲ್ಲೆನೆನಲು 
ಮರೆಯಿಂದಲಿಣಿಕಿ ನಿನ್ನನು ಹೊಂಚುವುದೆ ಸೊಗವು 
ಹೆರರು ನಿನ್ನನು ಹೊಗಳಲದನಾಲಿಪುದೆ ಸೊಗವು 
ಇದನು ನೀನೊಲ್ಲದಿಹೆಯಾ? 

ನೀನೆನ್ನ ರಾಣಿಯಾಗಾಳುತಿರುವುದೆ ಸೊಗವು 
ನೀನೊರೆದ ನಲ್ವಾತಿನಂತೆ ನಡೆವುದೆ ಸೊಗವು 
ಅದನು ನೀನೊಲ್ಲೆನೆನಲು 
ನಿನ್ನ ಹೆಸರೊಳೆ ಸೊಗವು ನಿನ್ನ ಸೆಳೆಯೊಳೆ ಸೊಗವು 
ನಿನ್ನ ಕನಸೊಳೆ ಸೊಗವು ನಿನ್ನ ನೆನಸೊಳೆ ಸೊಗವು 
ಇದನು ನೀನೊಲ್ಲದಿಹೆಯಾ?

***********************

ತಾನು ಮೆಚ್ಚಿ ಪ್ರೇಮಿಸುತ್ತಿರುವ ಪ್ರೇಯಸಿಯ ಬಗೆಗೆ ಪ್ರಿಯಕರನ ನವಿರಾದ ಕನಸುಗಳು ಬಣ್ಣಿಸಲಸದಳವು!
 
ಮನದನ್ನೆಯಾದ ತನ್ನ ಇನಿಯಳೊಡನೆ ಕೈಕೈಹಿಡಿದು ಗುಣಗುಣಿಸುತ್ತಾ ನಾಲ್ಕುಹೆಜ್ಜೆಗಳನ್ನು  ಮೆಲುಹೆಜ್ಜೆಗಳನ್ನಿಡುವುದೇ  ಬಲುಸೊಗಸು.
ತನ್ನ ಪ್ರೇಯಸಿಯೊಡನೆ  ಏಕಾಂತವಾಗಿ ಕುಳಿತು  ನಗುನಗುತ್ತಾ ಒಂದೆರಡು ನುಡಿಗಳನ್ನು ನುಡಿಯುವುದರಲ್ಲಿ  ಅದೇನೋ ಅನನ್ಯ ಆನಂದ. ಹುಸಿಮುನಿಸಿಂದ  ತನ್ನ ನಲ್ಲೆಯು ಒಲ್ಲೆನೆಂದರೆ ಆಕೆಯ ಸೆರಗಿನ ಆಂಚಲವು ಬೀಸಿದಾಗ  ಸುಳಿದಾಡುವ  ತಂಗಾಳಿಯೇ ಪ್ರೇಮಪಿಪಾಸುವಿಗೆ ಸೊಗಸಿನ ಅನುಭವ.

ಪ್ರೇಯಸಿಯ ಮಾತುಗಳನ್ನು ಕದ್ದುಮುಚ್ಚಿ ಆಲಿಸುವುದರಲ್ಲಿ ಈತನಿಗೇನೋ ಅನೂಹ್ಯವಾದ ಆನಂದ! ಇದನ್ನಾಕೆ  ಒಲ್ಲೆ ಎಂದರೂ ಮನದಲ್ಲಿ ಇದನ್ನೇ ಆಶಿಸುವಳೆಂಬ ಕನಸು.

ಚೆಂದುಳ್ಳಿ ಚೆಲುವೆಯೆಂಬ ಕನಸಿನರಾಣಿಯ ಕೆಂದುಟಿಯನ್ನು  ತನ್ನ ತುಟಿಗಳು ಸೋಕುವುದೊಂದು ಸ್ವರ್ಗಸುಖವು.

ಮನದನ್ನೆಯ ಕಣ್ಣುಗಳ ಕನ್ನಡಿಯಲ್ಲಿ ತನ್ನ ಕಂಗಳು  ಲೀನವಾಗುವುದು ಬಣ್ಣಿಸಲಾಗದ ಸೊಗಸು. ಅದೇನೋ ಬಲುನಾಚುಗೆಯಿಂದ 'ನಾನೊಲ್ಲೆ' ಎಂದು ಪ್ರೇಯಸಿಯು ನಿರಾಕರಣೆಯ ನಾಟಕವಾಡಿದರೆ ಅದೂ ಇನಿಯನಿಗೆ ಸೊಗಸೋ ಸೊಗಸು.

ಹುಸಿಮುನಿಸಿಂದ  ಕುಡಿಗಣ್ಣ ನೋಟಬೀರುತ್ತಾ ದೂರಸರಿದರೆ, ಮನದನ್ನೆಯು ಸ್ಪರ್ಶಿಸಿದ ವಸ್ತುಗಳನ್ನು ಸ್ಪರ್ಶಿಸುತ್ತಾ  ಅನನ್ಯ ಆನಂದದ ಕನಸುಕಾಣುವನು. ಪ್ರೇಯಸಿಯು ಎಲ್ಲೆಲ್ಲಿ ಓಡಾಡಿರುವಳೋ ಅಲ್ಲೆಲ್ಲ ಅವಳ ರೂಪವನ್ನೇ ಕಾಣುತ್ತಾ ಕನಸುಕಾಣುವುದರಲ್ಲೇ ಕನಸುಗಾರನಿಗೆ ಪ್ರೇಮಾನಂದ! ಪ್ರೇಯಸಿಯು ಇದನ್ನೇ ಹಂಬಲಿಸುತ್ತಾಳೆ ಎಂಬುದೂ ಸೊಗಸೇ!
 
ತನ್ನ ಚೆಂದುಳ್ಳಿ ಚೆಲುವೆಯ ಮನಸ್ಸು ತನ್ನೊಡನೆ ಬೆರೆಯುವ ಸೊಗಸಿನ ಚಿತ್ರವನ್ನೇ ಮನದಲ್ಲೆ ಮತ್ತೆ ಬರೆದುಕೊಳ್ಳುತ್ತಾನೆ.

ತಾವಿಬ್ಬರೂ ದನಿಗೆ ದನಿಸೇರಿಸಿ ಹಾಡುವಿದೊಂದು ಸೊಗಸು. ಅದನ್ನಾಕೆ ನಿರಾಕರಿಸಿದರೆ, ಮರೆಯಲ್ಲಿ ನಿಂತು ಆಕೆಯ ಸನಿಹಕ್ಕಾಗಿ ಹೊಂಚುಹಾಕುವುದರಲ್ಲೂ ಸೊಗಸೋ ಸೊಗಸು.

ತನ್ನ ಮನದನ್ನೆಯು ರಾಣಿಯಾಗಿ ಮೆರೆಯಬೇಕು. ತಾನವಳ ದಾಸನಾದರೆ,  ಅದೂ ಸೊಗಸು. ಇದನ್ನು ಆಕೆಯು 'ಒಲ್ಲೆ' ಎಂದರೆ ಅವಳ ಹೆಸರನ್ನೇ ಗುಣುಗುಣಿಸುತ್ತಾ ಆಕೆಯನ್ನು ಧ್ಯಾನಿಸುವುದರಲ್ಲೂ ಸೊಗಸು. ತನ್ನ ಕನಸಿನರಾಣಿಯ ಬಗೆಗೆ ಕನಸುಗಳನ್ನು ಕಟ್ಟಿಕೊಳ್ಳುವುದರಲ್ಲೂ ಸೊಗಸು. ಕನಸು ನೆನಸುಗಳಲ್ಲೆಲ್ಲಾ ಪ್ರೇಯಸಿಯದೇ ಚಿತ್ರಗಳು.   ಪ್ರೇಮಿಯಾದ ಪ್ರೇಯಸಿಯು ಒಲ್ಲೆ ಒಲ್ಲೆ ಎಂದು ಮೇಲ್ನೋಟಕ್ಕೆ ಉಲಿಯುತ್ತಿದ್ದರೂ ಆಕೆಯೂ ಇಂತಹ ಕನಸುಗಳಲ್ಲೇ ದಿನಗಳನ್ನು ವರ್ಷಗಳನ್ನಾಗಿ ಎಣಿಸುತ್ತಿರುವುದನ್ನು ಪ್ರಿಯತಮನು ಬಲ್ಲನು.. 
ಭಾವಾನುವಾದ: ©️ ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
ಗಾಯನ: ಶ್ರೀಮತಿ ಮಂಗಳ ನಾಡಿಗ

Friday 24 November 2023

ಮೋಹವಿಲಾಸ - ಕೇತಕೀವನ - ಡಿವಿಜಿ

ನೀನದೆತ್ತಲೊ ಎನಗೆ 
ಕಾಣದವೊಲಿರುತೆನ್ನ 
ಜಾನಿಸದೆ ಮರೆತೊಡಂ 
ಗಳಿಗೆಗಳಿಗೆಯೊಳಂ 
ನಿನ್ನ ಮೆಯ್ಸಿರಿ ಹಾಸ 
ನಿನ್ನ ಮೋಹ ವಿಲಾಸ- 
ವೆನ್ನ ಮನದಲಿ ತುಂಬಿ ತುಳುಕಾಡುತಿರ್ಕುಂ. 

ನಿನ್ನ ದನಿ ಕೇಳಿಬರೆ 
ನಿನ್ನ ನೆರಳಾಡುತಿರೆ 
ನಿನ್ನದೇನಾನುಮಿರೆ 
ನೆನೆನೆನೆದು ನಿನ್ನ 
ಎನ್ನ ಕಿವಿಯಗಲುವುದು
ಎನ್ನ ಕಣ್ಣರಳುವುದು 
ಎನ್ನ ಮೆಯ್ಯುಬ್ಬುವುದು 
ಕುಣಿವುದೆನ್ನೆದೆಯು. 

ಆವ ಜನುಮದ ಕೆಳೆಯೊ 
ಆವ ಸುಕೃತದ ಬೆಳೆಯೊ 
ಆವ ದೈವದ ಬಲೆಯೊ 
ನಿನ್ನಡಿಯೊಳೆನ್ನ 
ಪಿಡಿತಂದು ನಿಲಿಸಿಹುದು 
ಬಿಡದೇನಗೈದೊಡಂ 
ಇಡು ನೇಹ ಬಿಕ್ಕೆಯನು 
ಧನ್ಯತೆಯ ನೀಡು. 

ಕಣ್ಣು ಕಣ್ಗೆದುರಾಗ- 
ಲುಣ್ಮುವದುಭುತವೇನೊ! 
ಕಣ್ಣಿಯೊಂದಸುಗಳನು 
ಬಂಧಿಸುವುದೇನೊ! 
ಸೋಜಿಗವದೇನಿರಲಿ 
ಈ ಜೀವಯಾತ್ರೆಗಿಹ 
ನೈಜಪಾಥೇಯಮೆನ- 
ಗೊಂದೆ-ನಿನ್ನೊಲವು.

*******************

ಮೊದಲನೋಟದಿಂದ ಕಣ್ಣುಗಳು ಸಂಧಿಸಿ ಪ್ರೇಮಾಂಕುರವಾದ ಮರುಕ್ಷಣದಲ್ಲಿ ಪ್ರೇಯಸಿಯು ದೂರವಿದ್ದಾಗ ಪ್ರೇಮಿಯ  ಪ್ರೇಮ ಭಿಕ್ಷೆಯ ಬಯಸುವ ತೊಳಲಾಟದ ಚಿತ್ರವನ್ನು ಡಿವಿಜಿಯವರು ಮಾರ್ಮಿಕವಾಗಿ ಕಂಡಂತಿದೆ!

 ಮನದನ್ನೆಯೇ! ನೀನು ಅದೆಲ್ಲೋ ದೂರದಲ್ಲಿದ್ದು, ನನ್ನನ್ನು  ಅರೆಕ್ಷಣ ಮರೆತರೂ, ನಿನ್ನ ಮೇಲಣ ಮೋಹಮಾಯೆಯು ನಿನ್ನ ಹಾವ- ಭಾವ, ಕುಡಿಗಣ್ಣನೋಟದ,ಲಾಸ್ಯ  ವಿಲಾಸಗಳ ಚಿತ್ರಗಳೇ ನನ್ನ ಮನದಂಗಳದಲ್ಲಿ ಓಡಾಡುತ್ತಾ,  ನೀನೇ ನನ್ನಲ್ಲಿ ತುಂಬಿತುಳುಕಾಡುತ್ತಿರುವೆ. ಸುತ್ತಮುತ್ತ ಏನೇ ದನಿಕೇಳಿದರೂ ನಿನ್ನ ಪಿಸುದನಿಯನ್ನೇ ಕೇಳುತ್ತದ್ದೇನೆ. ಎಲ್ಲೆಡೆಯೂ ನಿನ್ನ ನೆರಳೇ ಓಡಾಡುವುದನ್ನೇ ಕಾಣುತ್ತಿರುವೆ. ಏನೇ ಮಾಡುತ್ತಿರುವಾಗಲೂ  ಅದೇನೇ ಮಾತು, ಸಪ್ಪಳಗಳಾದರೂ ಅಲ್ಲೆಲ್ಲಾ ನಿನ್ನದೇ ಇನಿದನಿಯ ಕರೆಯನ್ನು ಕೇಳಿ ಕಿವಿಗಳು ನಿನ್ನಬಳಿ  ಇರುತ್ತಿವೆ. ಕಂಗಳರಳುತ್ತವೆ. ಮೈಯುಬ್ಬುತ್ತದೆ. ನಿನ್ನ ಸಾಮೀಪ್ಯದ ಹಂಬಲದಿಂದ ಮನಸ್ಸು ಚಡಪಡಿಸುತ್ತಿದೆ.

ಅದಾವುದೋ ಜನ್ಮದ ಸ್ನೇಹರಸವೇ ಕಾಡುತ್ತಿದೆ. ಅದಾವುದೋ ಜನ್ಮದ ಸುಕೃತವು ಬಲವತ್ತರವಾಗಿ ನಿನ್ನರೂಪದಿಂದ ಮೂಡಿಬಂದಿರಬೇಕು.

ದೈವಲೀಲೆಯೇ ನನ್ನನ್ನು ನಿನ್ನೆದುರಿಗೆ ನಿಲ್ಲಿಸಿದೆ. ಏನೇ ಮಾಡಿದರೂ ನಿನ್ನ ನೆನಪುಗಳು ಕಾಡುತ್ತಲೇ ಇದೆ.  ಬಿಟ್ಟೆನೆಂದರೂ ಬಿಡದು  ಈ ಮಾಯೆ!  ಪ್ರೇಮಭಿಕ್ಷೆಯನ್ನು ಬಯಸುತ್ತಿದ್ದೇನೆ. ಮನ್ನಿಸಿ ಧನ್ಯನನ್ನಾಗಿಸು.

ಕಣ್ಣುಕಣ್ಣಗಳು ಸಂಧಿಸಿದಾಗ ಅದೇನು ಅದ್ಭುತದ ಮಾಯಾಲೋಕದ ಸೆಳೆತ! ಕಣ್ಣೆಸುಗೆಯ ನೋಟವೊಂದು ಹಸುವನ್ನು ಕಣ್ಣಿ ಬಿಗಿದಂತೆ ನಮ್ಮನ್ನು ಮೋಹಪಾಶದಲ್ಲಿ ಬಂಧಿಸಿರುವುದು ಸೋಜಿಗವೆ! ಅದು ಹಾಗಿರಲಿ. ಈ ಜೀವನ ಪಯಣದಲ್ಲಿ ಹಸಿವು ದಾಹ ಹಂಬಲಗಳನ್ನು ಪೂರೈಸಲು ನಿನ್ನೊಲವೇ ಎನಗೆ ದಾರಿಬುತ್ತಿ ಎಂಬುದನ್ನು ಮರೆಯದಿರು. ನಿನ್ನೊಲವೇ ಎನಗೆ ಆಸರೆ.
ಭಾವಾನುವಾದ:  © ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Wednesday 22 November 2023

ಒಂದು ಮಾತು - ಕೇತಕೀವನ - ಡಿವಿಜಿ

ಒಂದು ಮಾತು - ಕೇತಕೀವನ - ಡಿವಿಜಿ

ಕಾಣದಿರೆ ಕೊರಗುವುದು; 
ಕಾಣುತಿರೆ ಕೆರಳುವುದು : 
ಎನ್ನೆದೆಯು ಚೆನ್ನರಸಿ ನಿನ್ನನೆಳಸಿ, 
ಏನು ಬೇಹುದೊ ಅದಕೆ 
ನೀನರಿಯಲಹುದದನು 
ತಳ್ಕೈಸು ಬಾಳ್ಕೆ ಬೇಳ್ಪರುಮೆಯಿರಿಸಿ.

*********************
ಪ್ರೇಯಸಿಯ ಸನಿಹವನು ಹಂಬಲಿಸುತ್ತಿರುವ ಪ್ರೇಮಿಯು  ಪ್ರೇಮವನು ಬಲಿಕೊಡಬೇಡ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾನೆ.

ನಿನಗಾಗಿ ಹಂಬಲಿಸುತ್ತ ಸೊರಗಿರುವ ನಿನ್ನರಸ ನಾನು ನಿನ್ನನ್ನು ಕಾಣದೆ ಕೊರಗುತ್ತಿರುವೆ.
ನಿನ್ನ ಸನಿಹದಿಂದ ಈ ನನ್ನ ತನುಮನಗಳು ಅರಳುತ್ತ ಕೆರಳುತ್ತ ಕುಣಿಯಲಾಶಿಸುವುದು.

ಈ ನನ್ನ ಹೃದಯವು ಚೆನ್ನರಸಿಯಾದ ನಿನ್ನ ಸಾಮೀಪ್ಯವನ್ನೆಳಸುತ್ತ , ನಿನ್ನ ಸನಿಹಕ್ಕಾಗಿ ಬೇಹುಗಾರಿಕೆಯಲ್ಲಿ ನಿರತನು. ಒಲವಿನಸೆಳೆತವೆಂಬುದು ಅದೆಂತಹ ಗೂಢಚಾರನೆಂಬುದನ್ನು ಚೆನ್ನನ್ನೇ ಅರಸುತ್ತಿರುವ ನೀನೂ ಬಲ್ಲೆ.

ನಮ್ಮಬಾಳುವೆಯ ಸುವರ್ಣಸೇತುವೆಯಾಗಿ ಬಾ! ನಿನ್ನ ಬಿಸಿಯಪ್ಪುಗೆಯು ಬಾಳಿಗೆ ಸಾರ್ಥಕತೆಯನ್ನುಂಟುಮಾಡಲಿ. ನಮ್ಮ ಒಲವಿನದೀಪವು ದಿವ್ಯ ಸಮರ್ಪಣೆಯ ಯಜ್ಞವಾಗಲಿ. ವ್ಯರ್ಥವಾದ ಬಲಿಯಾಗದಿರಲಿ.

ಭಾವಾನುವಾದ :  ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

ಪ್ರೇಮ - ಕೇತಕೀವನ - ಡಿವಿಜಿ

ಜೀವವೊಂದನೊಂದು ಕರೆದು 
ಭಾವವೆರಡುಮೊಂದುವೆರೆದು 
ನೋವು ನಲಿವುಗಳಲಿ ಕಲೆತು 
ಬದುಕಲೆಳಸಿರೆ- 
ಆವುದದರಿನಿಳೆಯೊಳಿನಿಯ 
ಬಿದಿಯ ಕೈಸೆರೆ? 

ಭುವಿಯ ಪಥವ ಸುಗಮವೆನಿಸೆ 
ಬವಣೆ ಬನ್ನಗಳನು ಮರಸೆ 
ಭವದ ಹೊರೆಯ ಹಗುರವೆನಿಸೆ 
ಪ್ರೇಮರಕ್ಷೆಯಾ 
ಹವಣಿಸಿಹಳು ಪ್ರಕೃತಿ ನರರಿ- 
ಗಾತ್ಮಶಿಕ್ಷೆಯಾ. 

ಪ್ರೇಮವೆಂಬುದೇನು? ಜಗದ 
ಸ್ವಾಮಿಶಕ್ತಿಯೆಂಬರದರ 
ಮೈಮೆಗಳನದಾರು ಗುಣಿಸಿ 
ತಿಳಿಯಲಾರ್ಪರು? 

ವ್ಯೋಮತಲವನಾರು ಪದದಿ- 
ನಳೆಯಲಾರ್ಪರು? 

ದಿನವು ಮೂಡೆ ಜೀವ ತರುಗೆ 
ಕೊನರನಿರಿಸಿ ಸಂಜೆಯಾಗೆ 
ನನೆಯ ಬಿರಿಸಿ ನಿಚ್ಚಮದನು 
ಪೊಸತನೆಸಗಲು 
ಮನದೆ ಮನಕೆ ಪರಿವುದೊಂದು 
ರಸದಿನಿ ಹೊನಲು 

ಪುದಿದು ವಿಶ್ವಲೀಲೆಯೊಳಗೆ
ಮಧುರಗೊಳಿಸಿ ಭವದ ಹುಳಿಯ 
ಕುದಿಸಿ ತಣಿಸಿ ನಮ್ಮನೆಲ್ಲ 
ಕಾವ ಪ್ರೀತಿಯು 
ಎದೆಯ ಕಡೆವ ಮಂತುಮಾದ 
ಜೀವನೀತಿಯು.

*********************

ಇನಿಯನು ವಿಧಿಯ ಕೈಸೆರೆ ಎಂಬುದು ಕವಿಯ ಕಳವಳ! 

ಪ್ರಿಯಕರನು ಪ್ರೇಯಸಿಯೊಡನಿರುವ ಪ್ರೇಮವನ್ನು  ಕಾದಿಟ್ಟುಕೊಂಡು ಎರಡು ಜೀವಗಳು ಒಂದಾಗಿ ಸೇರುವ ಕಾತರದಲ್ಲಿ ದಿನಗಳನ್ನು ಯುಗಗಳಂತೆ ಕಾಣುತ್ತಾನೆ. ಅತಿಸ್ನೇಹಃ ಪಾಪಶಂಕೀ! ತನ್ನ ಜೀವವು ಇನಿಯೆಗಾಗಿ ಅದೆಷ್ಟು ಹಂಬಲಿಸುತ್ತಿರುವುದೋ ಅದರ ಹತ್ತರಷ್ಟು, ಆಕೆಯ ಜೀವವು ಹಂಬಲಿಸುತ್ತಾ ಕಾತರಿಸುತ್ತಿರುವುದನ್ನು  ಪ್ರಿಯಕರನು ಬಲ್ಲವನು.

ನೋವು ನಲಿವುಗಳಲ್ಲಿ ಒಂದಾಗಿ ಸುಂದರವಾದ ಜೀವನಸೌಧವನ್ನು ಕಟ್ಟಿಕೊಳ್ಳುವ ಕನಸಿನಲ್ಲಿ ಕ್ಷಣಗಳನ್ನು ಯುಗಗಳಾಗಿ ಎಣಿಸುತ್ತಾನೆ. ಈ ಭೂಮಿಯಲ್ಲಿರುವ ಇನಿಯನಕನಸು ನೆನಸಾಗುವುದೇ ಎಂಬುದಕ್ಕೆ ಇನಿಯನ ಉತ್ತರ ವಿಧಿಯ ಕೈಸೆರೆ! ಇನಿಯೆಯ ಅದೃಷ್ಟವಿದ್ದರೆ ಕನಸು ನೆನಸಾಗಬಹುದು!
ಪ್ರೇಮರಕ್ಷೆಯೆಂಬುದು ಆತ್ಮಶಿಕ್ಷೆಯೆಂದು ಕವಿ ಪ್ರೇಮಿಗಳ ಒಳತೊಳಲಾಟವನ್ನು ಆಳಕ್ಕಿಳಿದು ಅರಿಯುತ್ತಾರೆ. ಮಾನವನಾಗಿ ಲೋಕಜೀವನದ ಕರ್ತವ್ಯಗಳ ನಡುವೆ ಬರುವ ಎಡರುತೊಡರುಗಳ ಹೊರೆಯ ಭಾರವನ್ನು ಪ್ರೇಮಪೋಷಣೆಯು ಕಾರಣವಾಗುವುದು. ಆದರೆ ಪ್ರೇಮಲತೆಯನ್ನು ಪೋಷಿಸಿಬೆಳೆಸಿ ಸಂರಕ್ಷಿಸುವುದು ಬಲುದೊಡ್ಡ  ಪರೀಕ್ಷೆಯೆಂಬುದು ದಿಟವು. ಪ್ರೇಮವು ಜಗದ ಸ್ವಾಮಿಶಕ್ತಿಯಂತೆ. ಅದರ ಮಹಿಮೆಯು ಅಪಾರವಾದುದು. ಅದರ ಸೆಳೆತದ ಅನನ್ಯ ಶಕ್ತಿಯ ರಿಂಗಣದ ಗುಣಿತ ಕುಣಿತಗಳನ್ನು ಊಹಿಸಲಾಗದು. ವ್ಯೋಮದಿಂದಾಚೆ ಹಾರಿಕುಣಿಯಲೆಳಸುವ ಪ್ರೇಮಲೋಕವನ್ನು   ವಾಮನನಂತೆ ಅಳೆಯಲಾಗದು. ಪ್ರತಿದಿನವೂ ನೇಸರನ‌ಕಿರಣಗಳ ಸ್ಪರ್ಶದೊಡನೆ  ಪ್ರೇಮತರುವು ಚಿಗುರಿ ಪಲ್ಲವಿಸಲು ಕಾತರಿಸುತ್ತದೆ. ಸಂಜೆಯವೇಳೆಗೆ  ಕುಡಿನನೆಗಳು ಹಿಗ್ಗುತ್ತ  ಹೊಸದಾದ ಚೈತನ್ಯದಿಂದ ಬೆಳೆಯಲು ಪೋಷಿಸಲು ಮನದಲ್ಲಿ ರಸದಿನಿಯ ಹೊನಲು ಹರಿಯುತ್ತದೆ.

ಪ್ರೇಮಮಹಿಮೆಯು ವಿಶ್ವವನ್ನೆಲ್ಲಾ ವ್ಯಾಪಿಸಿದ ಜಗನ್ನಾಟಕವನ್ನಾಡಿಸುವ ಪರಮಾತ್ಮನದೇ ಲೀಲಾವಿನೋದ. ಜನ್ಮ ಜನ್ಮಾಂತರಗಳ ಮಧುರಪಾಕವನ್ನು  ಕುದಿಸಿ, ತಣಿಸಿ ನಮ್ಮನ್ನೆಲ್ಲಾ ಕಾಪಾಡುವ ಪೋಷಕದ್ರವ್ಯವೆಂದರೆ ಪ್ರೀತಿ- ಪ್ರೇಮ. ಹೃದಯಭಾಂಡದೊಳು  ಮುದದಿ ಕೂಡಿರುವ  ಜೀವನವೆಂಬ ಮೊಸರನ್ನು ಕಡೆದು ಸಂತಸದ ನವನೀತವನ್ನು ಮೂಡಿಸುವ ಕಡೆಗೋಲಿನ ಮಂಥನವೇ ಪ್ರೇಮಲೀಲೆಯ ನೀತಿ
ಭಾವಾನುವಾದ : ಕೊಕ್ಕಡ ವೆಂಕಟ್ರಮಣ ಭಟ್

Tuesday 21 November 2023

ಚೋದ್ಯ - ಕೇತಕೀವನ - ಡಿವಿಜಿ

ಹಾಡಿನೊಳಗಿಂಪಿಹುದು; 
ಮೋಡದೊಳು ತಂಪಿಹುದು 
ಆದೊಡಿದು ಚೋದ್ಯಂ. 

ಹಾಡು ಬರುವುದು ತುಟಿಗೆ 
ತುಟಿ ದೊರೆಯದಂದು 
ಮೋಡ ಸುರಿವುದು 
ಧರೆಗೆ ದಿವ ಕರಗುವಂದು 
ಭೇದವಿದು ಹೃದ್ಯಂ.

************************

ಕವಿಸೃಷ್ಟಿಯಾದ ಕಾವ್ಯದೊಳಗೆ ಇಂಪು ಹುದುಗಿರುತ್ತದೆ. ಗಾಯಕನ ಕಂಠದಿಂದ ಹಾಡಾಗಿ ಹೊರಹೊಮ್ಮಿದಾಗ ಕಾವ್ಯದೊಳಗಿನ ಇಂಪು ಕೇಳುಗನಿಗೆ ಅನುಭವವೇದ್ಯ! 
 ವರುಣನ ಕೃಪೆಯಿಂದ ಗಗನವೇರಿದ ಮೋಡದೊಳಗೆ ತಂಪಿದೆ ಎಂಬುದು ಯಾರಿಗೂ ಅನುಭವವಾಗದು. 

ಆಗಸದ ಮೋಡವು ಕರಗಿ ಮಳೆಯಾಗಿ ಭೂಮಿಯನು ಸ್ಪರ್ಶಿಸಿದಾಗ ಮೋಡದೊಳಗಿನ ತಂಪಿನ ಸಾಕ್ಷಾತ್ಕಾರವಾಗುತ್ತದೆ.  ಇದು ಸೋಜಿಗವಲ್ಲವೇ! 

ತುಟಿಗಳ ಸಂಸ್ಪರ್ಶದಿಂದ ಹಾಡು ಜೀವಚೈತನ್ಯದ ಸೃಷ್ಟಿಯಾಗುತ್ತದೆ. ಇಂಪಿನ ಅನುಭವ ಸಾಕ್ಷಾತ್ಕಾರವಾಗುತ್ತದೆ.

ಮಂತ್ರಕ್ಕೆ ಮಾವು ಉದುರುವುದಿಲ್ಲ. ಹಾಡುವುದರಿಂದ ಮೋಡ ಕರಗಿ ಮಳೆಯಾಗಿ ಧರೆಯನ್ನು ತಂಪಾಗಿಸುವುದಿಲ್ಲ. ಮೋಡವು ಮಳೆಯಾಗುವ ಬಗೆಗೆ ಅದೆಷ್ಟು ಬಣ್ಣಿಸಿದರೂ,     ಮಳೆಯಾಗಿ ಸುರಿಯಲಾರದು. ಮೋಡವು ಮಿಂಚಿನ ಸಂಸ್ಪರ್ಷದಿಂದ ಮಳೆಯಾಗಿ ಸುರಿಯುವುದು. ತುಟಿಮೀರಿದ  ಅನುಭವದಿಂದ ದಿವ ಕರಗಿ ಧರೆಗೆ ಸುರಿಯುವುದು‌.
 
ಇನಿಯ ಇನಿಯೆಯರ ಮಾತುಮೀರಿದ ದಿವ್ಯ  ಸಂಸ್ಪರ್ಶದಿಂದ ಮೋಡ ಕರಗುವುದು. ಮಳೆಯು ಸುರಿಯುವುದು. ಅನುಭವೈಕಗೋಚರದಿಂದ ಚೈತನ್ಯವೊಂದರ ಸೃಷ್ಟಿಯಾಗುವುದು ಕೌತುಕವಲ್ಲವೇ! 
ಮೋಡ ಕರಗಿ ಮಳೆಯಾಗಿ ಸುರಿಯುವುದು ದೈವಕೃಪೆ!
 
ದೈವಸಂಬಂಧದ ಕೃಪೆಯಾಗಿ ಮಾತಿಗೆ ಮೀರಿದ ಜೀವಸೃಷ್ಟಿಯೂ ಕೌತುಕವಲ್ಲವೇ!            

ಮಳೆ ಸುರಿಯುವ ನಿಸರ್ಗದ ಪ್ರತಿಮೆಯಿಂದ ಜೀವಸೃಷ್ಟಿಯ  ಕೌತುಕವನ್ನು ಡಿವಿಜಿಯವರು ಅದ್ಭುತವಾಗಿ  ಕಟ್ಟಿಕೊಟ್ಟಿದ್ದಾರೆ. ಕವಿಯ ಕಾವ್ಯಸೃಷ್ಟಿ, ಇಳೆಗೆ ಮಳೆ ಹಾಗೂ ಜೀವಸೃಷ್ಟಿಗಳ ಹಿಂದೆ ದೈವಕೃಪೆಯನ್ನು ಕವಿತೆಯು ಧ್ವನಿಸಿದೆ
     
ಭಾವಾನುವಾದ : ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Monday 20 November 2023

ಮೋಹಯಕ್ಷಿಣಿಗೆ - ಕೇತಕೀವನ - ಡಿವಿಜಿ

ದೇವಿಯೆಂದೆ
ನಿನ್ನನೆನ್ನ
ಜೀವವೆಂದೆ
ಹಿಗ್ಗಿದೆ
ರಾಣಿಯೆಂದೆ
ನಿನ್ನ ನೆನ್ನ
ಪ್ರಾಣವೆಂದೆ
ಉಬ್ಬಿದೆ.

ಎನ್ನ ಜೀವಕಿವಳು ಕಾಂತಿ
ಎನ್ನ ತಾಪಕಿವಳು ಶಾಂತಿ
ಮನವನಿವಳು ತಣಿಪಳು
ಬಲವನೆನಗೆ ಕೊಡುವಳು
ಎನುತ ನಂಬಿದೆ
ಮನದಿ ನೆಚ್ಚಿದೆ.

ಆದುದೇನು? ಪಾಪಿಪಾಡು
ಕಾದ ನಿನ್ನ ಕೋಪಕೀಡು.

ಇಂದು ನೋಡು ನಿನ್ನ ಮಹಿಮೆ!
ನೊಂದ ಜೀವವೆನ್ನದು;
ಬೆಂದು ನಿನ್ನುಪೇಕ್ಷೆಯಿಂದ
ಕಂದುತಿರುವುದು
ಏನನೆಸಗಿದೆ!-ನೀ
ಪ್ರಾಣ ಕುದಿಸಿದೆ!

ನಿನ್ನ ಕಣ್ಣು ಹಾವು ಹುತ್ತೆ?
ನಿನ್ನ ನಗುವು ನಂಜು ಬಿತ್ತೆ?
ಚಿತ್ತವೇತಕೆನ್ನದಿಂತು ತೊಳಲಿ ಬಳಲಿದೆ,
ಮತ್ತುಹಿಡಿದು ಮಬ್ಬುಕವಿದು ಜಡತೆಯೊಂದಿದೆ?

ಸುಧೆಯ ಸುರಿವ ನೋಟದೊಳಗೆ
ಇರಿತವೇತಕೆ?
ಮುದವ ಕರೆವ ತುಟಿಗಳೊಳಗೆ
ಗರಳವೇತಕೆ?

ನಿನ್ನ ಕಾಲ್ಗೆ ನಾನು ಕಸ
ಎನ್ನ ಹದಕೆ ನೀನು ವಿಷ
ನಿನ್ನ ಪೂಜೆಗಾನು ಬಲಿ
ಎನ್ನಾತ್ಮಕೆ ನೀನು ಸುಳಿ,

ಹಾವು ಕಪ್ಪೆಗಿಡುವ ಮಾಟ-
ಸಾವು-ಎನಗೆ ನಿನ್ನ ನೋಟ
ನಿನ್ನ ಧ್ಯಾನದಿಂದಲೆನ್ನ
ಆಯುವರ್ಧವಾಯಿತು

ಕಾಯ ಕರಣವುಡುಗಿತು
ಹರುಷ ಸರಸ ಹಾರಿತು
ಹುರುಪು ಗೆಲವು ಜಾರಿತು
ನಿನ್ನ ಮಾಹೆಗಾಹುತಿ ಎನ್ನ ಜೀವಸಂಗತಿ.

ಜವನ ದೂತಿಯಲ್ಲ ನೀನು,
ಜವದಿನ್‍ ಅವನು ಸೆಳೆವನು;
ಶಕ್ತಿಕಾಳಿಯಲ್ಲ ನೀನು
ಭಕ್ತಿಗಾಕೆಯೊಲಿವಳು;
ಮೃತ್ಯು ಕೊಳುವನ್‍ ಒಂದು ಸಾರಿ.
ನಿತ್ಯ ಕೊಲುವೆ ನೀನು ಕ್ರೂರಿ.

ಎನ್ನ ಕರ್ಮವೇನು ಇಂತು
ಬೆನ್ನ ಹತ್ತಿತೆ?
ಪಾಪಕಿರುವುದುಂಟೆ ಇಂತು
ರೂಪರಮ್ಯತೆ?

ನೀನದೇನೊ ಅರಿಯಲಾರೆ
ಮಾರಮಾಯೆಯೋ
ಮರುಳುಗೊಳಿಸಿ ಕೊರಳ ಕೊಯ್ವ
ಸ್ನೇಹಘಾತಿನಿ;
ಬರಿದೆ ಕಾಟವಿಟ್ಟು ಕೊಲುವ
ಮೋಹಯಕ್ಷಿಣಿ.

ಎನ್ನೆದೆಯ ಕಡಲಿನಲಿ
ತೆರೆಗಳೇಳುತಿವೆ;
ಉನ್ನತದ ತೆರೆಯೇಳು-
ತುರುಬಿ ಮೊರೆಯುತಿವೆ;

ತರುಣಿ, ನಿನ್ನಯ ನೆನಪು
ಬಿರುಗಾಳಿಯಾಗಿ
ಹೊರಳಿಸುವುದಾತುಮದ
ಹರಿಗೋಲನೀಗ.

ಎನ್ನೆದೆಯ ಬೀಡಿನೊಳ-
ಗುರಿಯುತಿದೆ ಕಿಚ್ಚು
ಜನ್ನದಾಹುತಿಗಿಚ್ಚು
ಹರಡಿ ಹಬ್ಬುತಿದೆ
ಬೆಡಗಿ, ನಿನ್ನ ಬೆಡಂಗು
ಬೆಂಕಿಯುರಿಯಾಗಿ
ಸುಡುವುದೆನ್ನಾತುಮವ
ಸಂಕಟದೊಳೀಗ.

ನನ್ನ ಸೊಬಗಿನ ನೆನಹು
ಸಿಡಿಲುಮಿಂಚಾಗಿ
ಎನ್ನಾತುಮವನೆಲ್ಲ
ಬಡಿದು ಕೆಡಹುತಿದೆ

ಸ್ಮರಣೆ ತಾಂ ಬರುತಿಹುದು
ನೆರೆಯ ನದಿಯಾಗಿ
ಹರಣಗಳ ನಿಲಗೊಡದೆ
ಉರುಳಿಸುತಲಿಹುದು.

ಗಾಳಿ ಬೆಂಕಿ ನೀರು
ಮೇಳವಿಸಿವೆ ಮೂರು
ಕಾಳಿಯುಗ್ರತೆಯನು
ತಾಳಬಹುದೆ ನೀನು?
ರಾಮಣೀಯ ನಿಧಿಗೆ
ಪ್ರೇಮವೊಂದೆ ಸಲಿಕೆ

*************************

ಮೋಹಯಕ್ಷಿಣಿಗೆ 
ಕೇತಕೀವನ - ಡಿ‌‌.ವಿ.ಜಿ
******************
ಪ್ರೇಯಸಿಯ ಮೋಹಪಾಶದ ಬಲೆಯೊಳಗೆ ವಿಲಿವಿಲಿ ಒದ್ದಾಡುತ್ತಿರುವ ಪ್ರಿಯತಮನ ತೊಳಲಾಟವನ್ನು ಡಿವಿಜಿಯವರು ಚಿತ್ರಿಸಿದ್ದಾರೆ‌.
 ಎನ್ನರಗಿಣಿಯೇ! ನಿನ್ನನ್ನು ದೇವಿಯೆಂದು ಆರಾಧಿಸಿದೆ. ನಿನ್ನನ್ನು ನನ್ನ ಜೀವವೆಂದು ಕಣ್ಣಲ್ಲಿ ಕಣ್ಣಿಟ್ಟು ನಿನ್ನಮೇಲಣ ಮೋಹವನ್ನು ಕಾಪಾಡಿಕೊಂಡು ಬಂದೆ. ನೀನೆನ್ನ ರಾಣಿಯೆಂದು ಹಿಗ್ಗಿದೆನು‌. ನೀನು ನನ್ನ ಪ್ರಾಣವೆಂದು ಹಿರಿಹಿರಿಹಿಗ್ಗಿದ್ದೆನು.
 ನನ್ನ ಜೀವನದ ಕಾಂತಿಮಣಿಯೆಂದು ಬಗೆದೆನು. ನನ್ನ  ಜೀವನದ ತಾಪಗಳನ್ನೆಲ್ಲ ಕಳೆಯುವ ಶಾಂತಿ ನನ್ನ ಪ್ರೇಯಸಿಯೆಂದು ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದೆ.  ಪ್ರೀತಿ ಸ್ನೇಹಸಿಂಚನದಿಂದ ನನ್ನ ಮನಸ್ಸನ್ನು ತಣಿಸಿ, ನನ್ನಾಸರೆಯ ಬಲವಾಗುವಳೆಂಬ ಹಂಬಲದ ಹಸಿವಲ್ಲಿದ್ದೆ.
ಮನಸಾರೆ ಮೆಚ್ಚಿ ನಚ್ಚಿಕೊಂಡಿದ್ದೆನು.
    ಆದರೆ! ಕನಸು ಹರಿದಾಗ ಕಂಡುದೇನು! ಕುದಿಯುತ್ತಿರುವ  ಕೋಪತಾಪಗಳ ಬೆಂಕಿಗೆ ಬಿದ್ದ ಪತಂಗವಾಗಿಹೆನು!  ನಾನೇನು ಪಾಪವೆಸಗಿಹೆನೋ ಅರಿಯದಾದೆ. 
ನಿನ್ನ ದುಡುಕಿನ ರೋಷಾವೇಶಗಳ ಬಿರುಗಾಳಿಗೆ ಬಲಿಯಾದ ನಾನು ನೊಂದಿಹೆನು, ಬೆಂದಿಹೆನು! 
ನನ್ನ ಬಗೆಗಿನ ತೀರಾ ತಾತ್ಸಾರ ಉಪೇಕ್ಷೆ ಅಸಡ್ಡೆಗಳಿಂದ ಕಂದಿಹೋಗಿರುವೆ. ಕುಂದಿರುವೆ.ಕುಸಿದುಹೋಗುತ್ತಿರುವೆನು. ನನ್ನ ಪ್ರಾಣವನ್ನೇ ಕುದಿಸುವುದು ನಿನಗೆ ತರವೇ ಮೋಹಿನಿ! 
ನಿನ್ನ ಕಂಗಳಲ್ಲಿ ಹುತ್ತದಿಂದ ಹೊರಹೊಮ್ಮುತ್ತಿರುವ  ಸೀಳುನಾಲಿಗೆಯ ಹಾವನ್ನೇ ಕಾಣುತ್ತಿರುವೆನು! ಅದಾವ ಯಕ್ಷಿಣಿಯೋ ನೀ ನಾನರಿಯದಾದೆ.
ನಿನ್ನ ವಿಕಾರವಾದ ನಗುವಿನಲ್ಲಿ  ವಿಷದ ಬೀಜಗಳನ್ನೇ  ಕಂಡಂತೆ ಭಾಸವಾಗುತ್ತಿದೆ.
ನಿನ್ನ ಸನಿಹಕ್ಕಾಗಿ ತೊಳಲಾಡುತ್ತಿರುವ ನನ್ನ ಚಿತ್ತವು ಈ ದಿನ ಬಳಲಿ ಬೆಂಡಾಗುತ್ತಿದೆ. ಸೋಲುತ್ತಿದ್ದೇನೆ. ನಿನ್ನ ಮೇಲಣ ಮೋಹದಿಂದ ಬೇರೇನನ್ನೂ ಕಾಣುತ್ತಿಲ್ಲ. ಮತ್ತೇರಿದೆ. ಮಬ್ಬು ಕವಿಯುತ್ತಿದೆ.
   ಪ್ರೇಮಾಮೃತವನ್ನು ಹನಿಸಬಯಸುವ ನೋಟವನ್ನು ಕ್ರೂರವಾಗಿ ಕತ್ತಿಯಲಗಿನಿಂದ ಇರಿಯುವುದನ್ನು ಸಹಿಸಲಾರೆ. ಅಧರಾಮೃತದಾ ಆಮೋದವನ್ನು ಬಯಸುತ್ತಿರುವ ನಿನ್ನಕೆಂದುಟಿಗಳಲ್ಲಿ  ವಿಷಧರನ ವಿಷವನ್ನೇ ಕಾಣುತ್ತಿರುವೆನು.
    ನಾನು ನಿನ್ನ ಕಾಲಿಗೆ ತೊಡರುವ ಕಸವಾದೆನೇ? 
ನನ್ನ ಪಾಲಿಗೆ ನೀನು ವಿಷವನ್ನುಗುಳುವ ಹಾವಾಗಬೇಕೇ!
ನಿನ್ನ ಪ್ರೇಮವನ್ನಾರಾಧಿಸುತ್ತ ನಾನು ನಿನ್ನಬಲಿಯಾದೆ. ನೀನು ನನ್ನ ಮನಸ್ಸನ್ನು  ಸೆಳೆವ ಸುಳಿಯಾದೆ. 
 ಕಪ್ಪೆಯನ್ನು ನುಂಗಲು‌ಹವಣಿಸುತ್ತಿರುವ ಹಾವಿನ ನೋಟವನ್ನೇ ನಿನ್ನಲ್ಲಿ ಗುರುತಿಸುತ್ತಿದ್ದೇನೆ.
ನಿನಗಾಗಿ ಹಂಬಲಿಸುತ್ತಾ ಅರ್ಧಾಯುಷ್ಯವನ್ನು ಸವೆಸಿರುವೆನು.
ಶರೀರವೆನ್ನದು ನಿನ್ನ ಧ್ಯಾನದಲ್ಲೇ ಕಸುವನ್ನು ಕಳೆದುಕೊಳ್ಳುತ್ತಿದೆ.
ಇನ್ನೆಲ್ಲಿಯ ಹರುಷ ! ಇನ್ನೆಲ್ಲಿಯ ಸರಸ!?
ನಿನ್ನ ಮಾಯೆಗಾಹುತಿಯಾಯಿತು ಎನ್ನ ಜೀವಸಂಗತಿ!
ನೀನು ಯಮನ ದೂತಿಯಾಗಿ ಬಂದಿದ್ದರೆ  ಬೇಗನೇ ನನ್ನನ್ನು ಯಮನ ಬಳಿಗೆ ಎಳೆದಿಯ್ಯುತ್ತಿದ್ದೆ. ಯಮನ‌ ಕಿಂಕರರು ಬಲುಬೇಗನೇ ಹಿಡಿದೆಳೆದೊಯ್ಯುವರು. ಕಾಳಿದೇವಿಯಾಗಿ ನೀ ನನ್ನೆಡೆಗೆ ಬರುತ್ತಿದ್ದರೆ ಭಕ್ತಿಗೊಲಿಯುತ್ತಿದ್ದೆ. 
ಯಮನಾದರೋ ಒಮ್ಮೆಯೇ ಕೊಲ್ಲುವನು. ನನ್ನನ್ನು ದಿನದಿನವೂ ಕೊಲ್ಲುವ ನೀನು ನನ್ನ ಪಾಲಿಗೆ ಬಲುಕ್ರೂರಿಯಾದೆ.
  ಅದಾವ ಕರ್ಮಬಂಧನವು ನಿನ್ನ ಈ ಮೋಹಯಕ್ಷಿಣಿಯ ಹಿಂದೆ ಬೆಂಬಡುತ್ತಿದೆಯೋ ಕಾಣದಾದೆ.! ನಿನ್ನನ್ನು 
ಪಾಪಿವೆನ್ನಲೇ ! ಪಾಪವು ಇಂತಹ ಮೋಹಕವಾದ ರೂಪಲಾವಣ್ಯಗಳಿಂದ ಕಂಗೊಳಿಸುವುದೇ?‌
 ನೀನದಾರೆಂದು ಗುರುತಿಸುವುದರಲ್ಲೇ ಸೋತುಹೋದೆ. ಮದನನ ಮಾಯೆಯೋ!  ಮಾಯಾಂಗನೆಯಾಗಿ ಮೋಹದಿಂದ ಬೆನ್ನುಬಿದ್ದ ನನ್ನ ಸ್ನೇಹಘಾತಿನಿಯಾಗಿ ಕಾಡುತ್ತಿರುವೆ.! ನಿರಂತರ ಕಾಡಿಸುತ್ತಾ ಪೀಡಿಸುತ್ತಿರುವ ಮೋಹಯಕ್ಷಿಣಿಯಾದೆ! 
ನನ್ನದೆಯ ಕಡಲಲ್ಲಿ ಉನ್ಮಾದದ ತೆರೆಗಳು ದುಮುಕುತ್ತಿವೆ. ಮೊರೆಮೊರೆಯುತ್ತ ಹಾರುತ್ತಿವೆ.
   ನವತಾರುಣ್ಯದ ಮೋಹಿನೀ ನಿನ್ನನೆನಪಿನ ಬಿರುಗಾಳಿಗೆ ಸಿಲುಕಿದ ದಿಕ್ಕೆಟ್ಟಿರುವ ಹರಿಗೋಲಿಗನಾದೆ! 
ನನ್ನದೆಯಲ್ಲಿ ಪ್ರೇಮೋನ್ಮಾದದ ಕಿಚ್ಚು ನನ್ನನ್ನು ಸುಡುತ್ತಿದೆ. ಯಜ್ಞಕುಂಡದ ಅಗ್ನಿಗೆ ನನ್ನನ್ನು ಬಲಿನೀಡಬೇಡ!
ರೂಪಸಿಯೇ! ಬೆಡಗುಬಿನ್ನಾಣದ ಮೋಹಿನಿಯೇ ! ನಿನ್ನ ನೆನಪುಗಳು ಬೆಂಕಿಯಾಗಿ ನನ್ನ ಮನಸ್ಸನ್ನು ಉರಿಸುತ್ತಿದೆ.
ನನ್ನ ಕನಸಿನ  ಸೊಬಗಿನ ನೆನಪುಗಳು ಸಿಡಿಲು ಮಿಂಚುಗಳಾಗಿ ಬದಲಾಗುತ್ತಿದೆ.‌ನಿನ್ನ ನೆನಪುಗಳು ಕೊಚ್ಚಿಕೊಂಡು ಒತ್ತರಿಸುತ್ತಿರುವ ವಿನಾಶಕಾಲದ ನೆರೆಪ್ರವಾಹದಂತಾಗಿದೆ. ಈ ಪ್ರವಾಹದಲ್ಲಿ ಎಲ್ಲಿ ಕೊಚ್ಚಿಹೋಗುವೆನೋ ಎಂಬ ಕಳವಳವು ಬಾಧಿಸುತ್ತಿದೆ. ಗಾಳಿ ಬೆಂಕಿ ನೀರುಗಳು ಒಂದಾಗಿ ಕರಾಳಕಾಳಿಯಂತೆ  ದಾಳಿಯಿಡುತ್ತದೆ. ಈ ದಾಳಿಯನ್ನು ಸಹಿಸಲಾದೀತೇ? ಸುಂದರವಾದ ಸಂಪತ್ತಿಗೆ ಪ್ರೇಮವೊಂದೇ ಆಸರೆ! 
ಭಾವಾನುವಾದ :- 
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Sunday 19 November 2023

ಒಂದು ಕಾಗದ - ಕೇತಕೀವನ - ಡಿವಿಜಿ

ತಪ್ಪೆನ್ನದಿರಬಹುದು
ಒಪ್ಪಿಕೊಳ್ಳುವೆನು :
ನಿನ್ನ ಸಿಟ್ಟದರಿಂದ
ತಣ್ಣಗಾಗುವುದೆ?

ಆ ಮಹಾತಪ್ಪೇನು?
ಪ್ರೇಮದುಬ್ಬರವೆ?
ಅದಕೆ ಕಾರಣವೇನು
ಎದೆಕುದಿದ ಕಾವೆ?

ಬಿಸಿಲೇರಿ
ಹಸಿರೊಣಗಿ
ವಸುಧೆ ಕಂಗೆಡಲು
ಗಗನ ಮಳೆಗರೆಯದಿರೆ
ಜಗಮುಳಿಯದಿಹುದೆ?
ಹಸಿವೇರಿ
ಬಸವಳಿದು
ಹಸುಳೆಯಳುತಿರಲು
ತಾಯಿ ಪಾಲೆರೆಯದಿರೆ
ಬಾಯ ಮುಚ್ಚುವುದೆ?

ಪ್ರೀತಿಯೇಂ ದುಷ್ಕೃತಿಯೆ?
ತಾತ್ಸಾರವೊಪ್ಪೆ?
ಆತುರತೆಯಪಕೃತಿಯೆ?
ಉತ್ಸಾಹ ತಪ್ಪೆ?

ತಪ್ಪದೇನಾಗಿರಲಿ,
ಕ್ಷಮೆಯ ಬೇಡಿದೊಡೆ
ದರ್ಪವನೆ ಕಾರುತ್ತ
ದುಮಗುಟ್ಟುತಿಹುದು.

ದೋಷವನೆ ನೆನೆನೆನೆದು
ರೋಷ ಚಿಮ್ಮುವುದು-
ತಪ್ಪು ಅದುಮಲ್ಲವೋ?
ಮಮತೆಗದು ಸರಿಯೋ?

ದಯೆಯ ಯಾಚಿಸಿದವಗೆ
ನಯ ತೋರೆಯೇಕೆ?
ಮನ್ನಣೆಯು ಸಲುವ ಕಡೆ
ಕಣ್ಣು ಕಿಡಿಯೇಕೆ?
ನಗುನುಡಿಯ ನುಡಿವ ಕಡೆ
ಮೊಗ ಖಡ್ಗವೇಕೆ?

ಇಬ್ಬರೊಂದಾದ ಕಡೆ
ಹುಬ್ಬುಗಂಟೇಕೆ?

ಮರೆತೆ, ನೀನೆಲ್ಲ ಹಳೆಯೊಲುಮೆಗಳ ಮರೆತೆ;
ಒರುವರೊರುವರನರಸಿ ಬಳಸಿದುದ ಮರೆತೆ;
ಹಿಂದಿನಾ ಸ್ನೇಹಬಂಧಗಳ ನೀಂ ಮರೆತೆ;
ಅಂದು ನಾವಾಡಿದಾಟಗಳೆಲ್ಲ ಮರೆತೆ;
ಆ ಮೋಹಲೀಲೆಯೇನಾ ಕೇಳಿಯೇನು!
ಆ ಮೈಯ ಮರಸಿದ್ದ ಹೊಂಗನಸದೇನು!
ಆ ಸರಸವೀಕ್ಷೆಯೇನಾ ಹಸಿತವೇನು!
ಮೀಸಲೊಬ್ಬರಿಗೊಬ್ಬರೆನುತಿದ್ದುದೇನು!

ಆ ಅಗಲಿಕೆಗಳೇನು! ಆ ಆಪ್ತವೇನು!
ಆ ಅಂಕಿತಗಳೇನು! ಆ ಹಂಬಲೇನು!
ಮರಳಿ ನಾಂ ಸೇರ್ದಂದು ಸಂಭ್ರಮವದೇನು!
ಎರಡೊಡಲು ಒಂದು ಬಾಳೆಂದ ಕಥೆಯೇನು!
ಮರೆತೆ ನೀನಾ ಮೋಹದನುಭವವನೆಲ್ಲ;
ಮರೆತೆ ನೀನಾ ಅಮೃತಘಳಿಗೆಗಳನೆಲ್ಲ;
ಸರಿಪಾಲು ಪಡೆದು ಸುಖಸಾಹಸದಿ ನಾವು
ಬೆರೆತಿದ್ದುದನು ಮರೆವುದಲ್ಲವೋ ತಪ್ಪು?
ಬಹುಕಾಲ ಬೆಳಸಿದಾ ಪ್ರೇಮವಲ್ಲಿಯನು
ಕಹಿಮನದೆ ನೀಂ ಕಡಿವುದಲ್ಲವೋ ತಪ್ಪು?

ತಪ್ಪೆನ್ನದಿರಲಿ
ಒಪ್ಪು ನಿನದಿರಲಿ
ಮರುಗಿ ಬಂದವನ
ತೊರೆಯದಿರು ಸಖನ.

ಚೆಲುವ ನಿನಗಿತ್ತವನು,
ಕಳೆಯನಿತ್ತವನು,
ಒಳ್ತನವನಿತ್ತವನು,
ಗೆಲವನಿತ್ತವನು.

ಏಕೆ ಕೊಡನೆನಗಾಗಿ ನಿನಗೆ ಮೃದುಮನವ?
ಏಕೆ ತೋರಿಸನು ನಿನಗೆನ್ನೆದೆಯ ನೋವ?
ಪ್ರೇಮ ಕೊರಗುವುದು ಮಾರ್‍ಪ್ರೇಮ ದೊರೆಯದಿರೆ
ಭೂಮಿ ಸೊರಗುವುದು ದಿವ ಮಳೆಯ ಸುರಿಯದಿರೆ

ಚಂದಿರನ ಪಿಡಿಯೆ ಕಡಲೆದ್ದು ಕುಣಿಯುವುದು
ಸುಂದರತೆಯಿಂದೆನ್ನ ಹೃದಯ ಕೆರಳುವುದು.

ಕೆರಳುವುದು ತಪ್ಪೊ?
ಕೆರಳಿಪುದು ತಪ್ಪೊ?
ಚೆಲುವಿಂದ ಕೆರಳು
ಕೆರಳಿಂದ ನರಳು.

ರೂಪಕಾಂತಿಯ ಜೊತೆಗೆ
ಕೋಪವಿರಬೇಕೆ?
ರಮಣೀಯತೆಯ ನಡುವೆ
ಕ್ಷಮೆಯಿಲ್ಲವೇಕೆ?
ತಾಳು ತಾಳುಮೆಯ
ಕೇಳು ಕೆಳೆನುಡಿಯ.

ನೋಡು ಸೌಮ್ಯದಲಿ
ನಿನ್ನ ನೆನಪಿನಲಿ
ಹರಿಯುತಿಹುದಿಲ್ಲಿ ಸಂತಸದೊಂದು ಹೊನಲು

ನೋಡು ನೇಹದಲಿ
ಎನ್ನ ಹೃದಯದಲಿ
ಮೊರೆಯುತಿಹುದಿಲ್ಲಿ ಅನುರಾಗದಿಂಗಡಲು.

ನೀನೆನ್ನ ಬಾಳ್ಗೆಲ್ಲ ರಾಣಿಯಾಗಿರುವೆ
ಬಾಳ ಸೊಗಸೆನಿಸು
ನೀನೆನ್ನೆದೆಯ ಕಡಲ ವರುಣನಾಗಿರುವೆ
ಆಳು ನೀನೊಲಿದು.

ನೀನು ಬಿಸಿಯುಸಿರೆ-ತಳಮಳಗಳಲ್ಲಿ
ನೀನು ಸಿಡಿಲಿರಿಯೆ-ತೆರೆ ಮೊರೆತವಲ್ಲಿ
ನೀನು ನಗುತೊಲಿಯೆ-ಕುಣಿತ ಹಾಡಲ್ಲಿ
ನೀನೊಲಿದು ನಲಿಯೆ-ಶಾಂತಿ ಸುಖವಲ್ಲಿ.

ಎನ್ನ ಮನ ನಿನ್ನಡಿಗೆ ದಾಸನಾಗಿಹುದು
ಮನ್ನಿಸುತ ನೀನದನು ಧನ್ಯನಾಗಿಪುದು.

ಈ ಮಾತ ನಂಬು
ಅದೆ ಪ್ರೀತಿಯಿಂಬು
ಅದೆ ನೀತಿತುಂಬು.

******************************

ಒಂದು ಕಾಗದ
ಕೇತಕೀವನ - ಡಿ.ವಿ.ಜಿ.
~~~~~~~~~~
ಪ್ರೇಯಸಿಯ‌ ಮುನಿಸಿಂದ ಕಸಿವಿಸಿಗೊಂಡ ಪ್ರಿಯಕರನು, "ತಪ್ಪನ್ನು ಮನ್ನಿಸು" ಎಂದು  ಒಲವನ್ನು ಕಾಪಿಡಲು ಸಂತೈಸಿ ಇನಿಯೆಗೆ ಬರೆದ ಓಲೆ!
   ನಿನ್ನ ಮುನಿಸು  ತಣ್ಣಗಾಗುವುದಾದರೆ 'ತಪ್ಪು ನನ್ನದೇ' ಎಂದು ಒಪ್ಪಿಕೊಳ್ಳುತ್ತೇನೆ. 
      ಪ್ರೇಮದುಬ್ಬರದಲ್ಲಿ  ನಿನಗಾಗಿ ಹಂಬಲಿಸುತ್ತಿರುವ ನನ್ನೆದೆಯ ಕಾವೇ ತಪ್ಪೇ!?
  ಬಿಸಿಲೇರಿ ಹಸಿರೊಣಗಿದ ನೆಲದಂತೆ ಕಂಗೆಟ್ಟಿರುವೆನು. ಎನ್ನೆದೆಯ ಕಾವಿಗೆ ತಂಪನ್ನೆರೆವ ಮಳೆಹನಿಯ ಸಿಂಚನಕ್ಕಾಗಿ ಹಂಬಲಿಸುತ್ತಾ ಬಸವಳಿದಿರುವೆ. ಕಾದಿರುವ ಭೂಮಿಗೆ ಮಳೆಹನಿಗಳ ಸೇಚನವಿಲ್ಲದೊಡೆ ಲೋಕದ ಜನವೆಲ್ಲ ಪ್ರಕೃತಿಯ ಬಗೆಗೇ ಮುನಿಸಿಕೊಳ್ಳುವರಲ್ತೆ! 
 ಅಮ್ಮನೆದೆಹಾಲಿಗಾಗಿ ಹಂಬಲಿಸುವ ಹಸುಳೆಯಂತಾಗಿರುವೆನು. ಅಮ್ಮನು ಶಿಶುವನ್ನು ಎದೆಗಪ್ಪಿಕೊಳ್ಳುವವರೆಗೆ ಅಳುವನ್ನು ನಿಲ್ಲಿಸುವುದೇ!?
   ಪ್ರೀತಿ ಪ್ರೇಮವೆಂಬುದು  ತಪ್ಪಲ್ಲ ಎಂಬುದು ದಿಟ. ಮನದನ್ನೇ, ಆತುರತೆಯು ತಪ್ಪೋ! 
ಉತ್ಸಾಹದ ಹಂಬಲವು ತಪ್ಪೇ ಯೋಚಿಸಿ ನೋಡು! ತಪ್ಪು ಅದೇನಾದರೂ ಆಗಿರಲಿ. ಕ್ಷಮಿಸೆಂದು ಯಾಚಿಸಿದರೂ, ದುಮುಗುಡುತ್ತಿರುವುದು ತರವಲ್ಲ ಎಂಬೆ.
  ದೋಷವನ್ನೇ ಕಾಣುತ್ತಾ ಚಿಂತೆಯಲ್ಲೇ ಮುಳುಗಿ ರೋಷದ ಚಿಂಗಾರಿಗಳನ್ನುಗುಳುವುದು ತಪ್ಪಲ್ಲವೇ!? ನಿಜವಾದ ಮಮಕಾರದ ಪ್ರೀತಿಗಿದು ತರವೇ! ಯೋಚಿಸು! 
ದಯದಿಂದ ಒಲವಿನಕಟಾಕ್ಷವನು ಬೀರೆಂದು ಹಂಬಲಿಸುತ್ತಿದ್ದೇನೆ. ಆ ನಿನ್ನ  ನವಿರಾದ ಹಸನ್ಮುಖವದೆಲ್ಲಿ ಮರೆಯಾಯಿತು? 
ಕಂಗಳಲಿ ಎದುರಿಸಲಾರದ ಕಿಡಿಗಳೇಕೆ ಸುರಿಯುತ್ತವೆ! ಚೆಲುನಗುವಿರಬೇಕಾದ  ನಿನ್ನ ಮೊಗದಾವರೆಯಲ್ಲಿ ಕತ್ತಿಯಲಗನ್ನು ಕಾಣುವಷ್ಟು ಶಕ್ತಿ ನನಗಿಲ್ಲ.
ಪ್ರೇಮಸಿಂಚನದಿಂದ ಒಂದಾಗಬೇಕಿರುವ ಕಡೆಗಣ್ಣನೋಟವಿರಬೇಕಾದಲ್ಲಿ ಹುಬ್ಬುಗಂಟಿಕ್ಕುತ್ತಾ ನನ್ನನ್ನು ಇರಿಯಬೇಡ ಮನದನ್ನೆ! 
   ನಮ್ಮ  ಆ ದಿನಗಳ ಪ್ರೀತಿಯೊಲುಮೆಗಳನ್ನು ಅದೆಂತು ಮರೆಯಲಾದೀತು? 
ಅಂದಿನ ನಮ್ಮ ಸ್ನೇಹ ಸಂಬಂಧಗಳ ಬಂಧವನ್ನೆಂತು ಮರೆಯಲಿ!?ಅದೆಂತಹ ಮೋಹಲೀಲೆಗಳ ಆಟಗಳೇನು! ಮರೆತೆಯೇನು!? ಅದೆಂತಹ ಹೊಂಗನಸನ್ನು ಕಾಣುತ್ತಿದ್ದೆವು! ನೆನಪಿಸಿಕೋ.
ಪರಸ್ಪರ ಪ್ರಣಯಕೇಳಿಗಾಗಿ ಹಾತೊರೆವ ಕಟಾಕ್ಷಗಳಿಗಾಗಿ ಹಂಬಲಿಸುತ್ತಿದ್ದ ಆ ದಿನಗಳು ಮರೆತವೇನು! 
'ನಾನಿರುವದೇ ನಿನಗಾಗಿ' ಎಂಬ ಅಂದಿನ ಪಲುಕುಗಳ ಗುಂಗು ನನ್ನ ಕಿವಿಗಳಲ್ಲಿ ಈಗಲೂ ಗುಂಜನಗುಡುತ್ತಿದೆ.
ಒಂದರೆಗಳಿಗೆ ಬಿಟ್ಟಿರಲು ಆಗದ ಅಂದಿನ ದಿನಗಳಲ್ಲಿ ಬಳಿ ಸಾರ್ದಂದು ಅದೇನು ಸಂಭ್ರಮವಿತ್ತು, ನೆನಪಿಸಿಕೊಳ್ಳಲಾರೆಯಾ! 'ಒಡಲೆರಡು ಬಾಳೊಂದು' ಎಂದು ಜೀಕಾಡುತ್ತಿದ್ದೆವು. ನೆನಪಾಗಿರಬೇಕಲ್ಲ. ಆ ಅಮೃತಗಳಿಗೆಗಳನ್ನು ನೀನು ಮರೆತಿರಲು ಸಾಧ್ಯವಿಲ್ಲ.
ಸುಖದುಃಖಗಳನ್ನು ಸಮಪಾಲಾಗಿ ಹಂಚಿಕೊಂಡಿದ್ದ ಆ ದಿನಗಳನ್ನು ನೀನು ಮರೆತೆಯಾದರೆ ಅದು ತಪ್ಪಲ್ಲವೇ! 
ಬಹುದಿನಗಳಿಂದ ಜೋಪಾನವಾಗಿ ಪ್ರೀತಿಯ ಜೊನ್ನವನ್ನೇ ಎರೆದು, ಬೆಳೆಸಿದ ಪ್ರೇಮಲತೆಯನ್ನು ಕಾಪಾಡಿ ಕೊಂಡು ಹೂವರಳಿಸಬೇಕಾದ ನೀನೇ ಲತೆಯನ್ನು ಚಿವುಟಬಲ್ಲೆಯಾ!?  ಯೋಚಿಸಿನೋಡು.
  ತಪ್ಪು ನನ್ನದೆಂದೇ ಒಪ್ಪಿಕೊಳ್ಳೋಣ! 
ಮನ್ನಿಸೆಂದು ಬೊಗಸೆಯೊಡ್ಡಿ ಬಂದ ಈ ನಿನ್ನ ಸಖನನ್ನು ದೂರಸರಿಸದಿರು.
ಚೆಲುವನ್ನು ನೀಡಿದವನು. ಒಳಿತನ್ನು  ಉಣಿಸಿದವನು. ಕಳೆಯನ್ನೇರಿಸಿದವನಲ್ತೆ! 
ನನ್ನೆದೆಯ ನೋವನ್ನು ಅರಿತು ಮೆದುಮನಸ್ಸಿನವಳಾಗು! ಪ್ರೇಮನಿವೇದನೆಗೆ ಪೂರಕವಾದ ಸ್ಪಂದನವಿಲ್ಲದೆ ಹೋದರೆ ಪ್ರೇಮಲತೆಯು ಸೊರಗುವುದು! ಆಗಸವು ಮಳೆಗರೆಯದಿದ್ದರೆ ನೆಲ ಒಣಗುವುದು.
ಹುಣ್ಣಿಮೆಯ ಬೆಳಕಿಂದ ಕಡಲತೆರೆಗಳು ಕುಣಿಯುತ್ತವೆ. ನಿನ್ನ ಮೊಗದಾವರೆಯಲಿ ಮಂದಹಾಸದ ಬೆಳಕಿನ ರೇಖೆಗಳಿಂದ  ನನ್ನ ಎದೆತುಂಬಿ ನಿನಗಾಗಿ  ಅರಳುವುದು. ಅರಳುವುದು ತಪ್ಪೇ ! ಕೆರಳಿಸುವುದು ತಪ್ಪೇ ಎಂಬ ಪ್ರಶ್ನೆ ಬೇಡ! ನಗುನಗುತ್ತಾ  ನನ್ನ ಮನಸ್ಸನ್ನರಳಿಸು! 
 ಸುಂದರವಾದ ಈ ನಿನ್ನ ಮುಖಕ್ಕೆ ಕೋಪವು ಆಭರಣವಲ್ಲ. ಸುಂದರವಾದ ಈ ಮೊಗದಾವರೆಯಲ್ಲಿ ಕ್ಷಮಾಪೂರ್ಣ ಕಟಾಕ್ಷವನ್ನು ಕಾಣಬಯಸುತ್ತಿರುವೆ.ತಾಳ್ಮೆಯಿಂದ ಸ್ನೇಹಸಿಂಚನದ ಮಾತುಗಳನ್ನು ಆಲಿಸು. ಸೌಮ್ಯವಾದ ನೋಟದಿಂದ ನನ್ನನ್ನು ನೋಡು. ಸಂತಸವಾದ ಹೊನಲು ಹರಿಯುತ್ತಿರುವುದನ್ನು ನೀನು ಮರೆಯಲಾರೆ.
ಪ್ರೀತಿ ಸ್ನೇಹರಸದ ಆರ್ದ್ರತೆಯಿಂದ ನನ್ನೆಡೆಗೆ ನೋಡು.
ನನ್ನ ಹೃದಯದಲ್ಲಿ ಅನುರಾಗದ ಇಂಗಡಲ ತೊರೆಗಳು ಮೊರೆಯುತ್ತಿರುವುದನ್ನು ಕೇಳುವೆ.
ಭಾವಾನುವಾದ :
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Thursday 16 November 2023

ನರ-ಹರಿ - ಕೇತಕೀವನ - ಡಿವಿಜಿ

ನರಗೆರಡು ವರಗಳನು 
ಕರುಣಿಸಿಹನೀಶ್ವರನು; 
ಕೊರಗುವೆದೆಯೊಂದು, 
ಒರೆವ ಬಾಯೊಂದು- 
ಎಡೆಬಿಡದ ಕೊರಗು, 
ಸುಡುನುಡಿಯ ಬುರುಗು. 

ಈ ವರಗಳುಳಿದಾವ 
ಜೀವಿಗಣಕುಮಭಾವ. 
ಎಂಥ ವರದ ಹೊರೆ! 
ಅಂತದಾಗದಿರೆ, 
ಹರಿಯ ಹೆಸರನದಾರು 
ಧರೆಯೊಳೆತ್ತ್ಯಾರು? 
ನರನಾರ್ತಭಾಷೆ

**************

ಪರಮಕರುಣಾಳುವಾದ ಜಗದೀಶ್ವರನು ಮನುಷ್ಯನಿಗೆ ಅನನ್ಯವಾದ ಎರಡುವರಗಳನ್ನು ನೀಡಿರುವನು. ಕೊರಗುವ ಹೃದಯವನ್ನೂ ನೀಡಿದನು. ಜೊತೆಗೆ ಮಾತನಾಡುವ ನಾಲಿಗೆಯುಳ್ಳ ಬಾಯನ್ನೂ ನೀಡಿದನು. ಕೊರಗು ಎಂದರೆ ಚಿಂತೆ, ಚಿಂತನೆ, ಕೊರತೆಯಬಗೆಗೇ ಮನದಂಗಳವನ್ನು ಕೊರೆಯುವಂತೆ ದುಃಖಿಸುವುದು.

   ಶ್ರೀಹರಿಯು  ತನ್ನ ಸಂರಕ್ಷಣೆಗಾಗಿ ನೀಡಿದ ವರವನ್ನು ಅರ್ಥ ಮಾಡಿಕೊಳ್ಳುವಲ್ಲಿ  ಈ ನರನು ಸೋತವನಾಗಿ ವರವನ್ನು ಶಾಪವೋ ಎಂಬಂತೆ ಅವರಿವರೊಡನೆ ತನ್ನನ್ನು ಹೋಲಿಸಿಕೊಂಡು  'ಇಲ್ಲ ಇಲ್ಲ' ಎಂದು ತನ್ನ ಮನಸ್ಸನ್ನು ಇಲ್ಲದ ಸಂತೆಯೊಳಗೆ ತಳ್ಳಿ ಸದಾ ಚಿಂತೆಯಲ್ಲೇ ಮುಳುಗಿ ಕಾಲಹರಣಮಾಡುತ್ತಾನೆ. ಚಿಂತೆಯು  ಚಿತೆಗಿಂತ ಬಲುಘೋರ!  ಚಿಂತೆಯಕುಲುಮೆಯೊಳಗೆ ಬೇಯುತ್ತಿರುವ ಈ ನರನು 'ನರಹರಿ'ಯನ್ನು ಅರಿಯುವಲ್ಲಿ ಎಡವಿದವನಾಗಿ ದೇವನನ್ನು ಪ್ರಾರ್ಥಿಸುವ ಬದಲಾಗಿ    ತನ್ನ ನರನಾಡಿಗಳು ಹರಿದುಹೋಗುವಂತೆ ಭಗವಂತನ್ನೇ  ಸುಡುನುಡಿಗಳಿಂದ ನಿಂದಿಸತೊಡಗುತ್ತಾನೆ. ಬೇರೆಯ ಜೀವಿಗಳಿಗಿಲ್ಲದ ಅಮೂಲ್ಯವಾದ ಚಿಂತನೆಯಿಂದ ಸರಿಯಾದ ದಾರಿಯನ್ನು ಕಂಡುಕೊಳ್ಳುವುದನ್ನು ಮಾಡದೆ ಎಲ್ಲರನ್ನೂ ನಿಂದಿಸುತ್ತಾನೆ.  ಪ್ರಾಣ ಸಂಕಟದ ಕ್ಷಣಗಳಲ್ಲೂ ಶ್ರೀಹರಿಯ ಧ್ಯಾನವನ್ನೇ ಉಸಿರಾಗುಳ್ಳ  ಭಕ್ತ ಪ್ರಹಲ್ಲಾದನನ್ನು ಮತ್ತು ಅವನನ್ನು ಸಂರಕ್ಷಿಸಿದ ಶ್ರೀವಿಷ್ಣುವಿನ ಮಹಿಮೆಯನ್ನರಿಯದೆ, ದೇವನನ್ನು ಮತ್ತು ಭಕ್ತನನ್ನು ಇಬ್ಬರನ್ನೂ ನಿಂದಿಸುತ್ತಾ ಅಮೂಲ್ಯವಾದ ಕ್ಷಣಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದಾನೆ. ಕಾಮಕ್ರೋಧಗಳನ್ನು ಬಿಡದೆ ಕೊರಗಿನಿಂದ ಸುಡುನುಡಿಯ ಬುರುಗಿನಿಂದ ತನ್ನ  ಜೀವನಸೌಧಕ್ಕೆ ತಾನೇ ಕೊಳ್ಳಿಯಿಡುವುದನ್ನು ಅರಿಯದೆ ಕಂಗೆಡುತ್ತಿದ್ದಾನೆ‌.

   ಬೇರಾವ ಜೀವಿಗಳಿಗೂ ನೀಡದ ಅಮೂಲ್ಯವಾದ ವಿವೇಕ, ಚಿಂತನಶೀಲಬುದ್ಧಿ ಹಾಗೂ  ಮಾತನಾಡುವ ಅನನ್ಯ ಶಕ್ತಿಯನಾಲಿಗೆಯನ್ನು  ನಾರಾಯಣನು ನರನಿಗೆ ಕರುಣಿಸಿದ್ದಾನೆ. ಇನ್ನುಳಿದ ಚರಾಚರಗಳಿಗೆ ಈ ವರವನ್ನು ನರಹರಿಯು ಕರುಣಿಸಿಲ್ಲ.
ಆದರೆ ವರಗಳನ್ನೇ ಹೊರೆಯೆಂಬಂತೆ ಈ ಹುಲುಮಾನವನು ಹರಿಯನ್ನೇ ದೂಷಿಸುವಂತೆ ಬಡಬಡಿಸವನೇ! ನಿಂದಿಸುವನೇ?
 
   ದೇವನು ಕರುಣಿಸಿದ ವರಗಳನ್ನು ಅರಿತಿದ್ದರೆ   ಮನುಷ್ಯರು ಸಂಕಟದ ಸಮಯದಲ್ಲಾದರೂ ಭಗವಂತನನ್ನು ಭಕ್ತಿಯಿಂದ ಮೊರೆಯಿಟ್ಟು ಕೂಗಿಕರೆಯುತ್ತಿದ್ದನು!? 
ಕಡುಸಂಕಟದ ಸಮಯದಲ್ಲಿ ನರನು ನಾರಾಯಣನನ್ನು ಆರ್ತನಾದದಿಂದ ಕೂಗಿಕರೆಯುತ್ತಾನೆ. ಭಕ್ತಪ್ರಹಲ್ಲಾದ, ದ್ರೌಪದಿ, ಮೊಸಳೆಯ ಹಲ್ಲುಗಳಲ್ಲಿ ಬಂದಿಯಾದ ಗಜೇಂದ್ರನಂತೆ ಸಂಕಟದ ಕ್ಷಣಗಳಲ್ಲದರೂ ಏಕೋಭಕ್ತಿಯಿಂದ ಕೂಗಿಕರೆಯುವ ನರನ್ನು ನರಹರಿಯು ಕೈವಿಡಿದು ಸಂರಕ್ಷಿಸುತ್ತಾನೆ. 

 ಕೊರಗದೆ ನಾರಾಯಣನನ್ನು ನಿರಂತರ ಧ್ಯಾನಿಸೋಣ! 
ಚಿಂತೆ ಬೇಡ, ಚಿಂತನೆಯಿರಲಿ! ಚಿಂತನೆಯ ಬೆಳಕಿನಲ್ಲಿ  ನಾಲಿಗೆಯ ಮಾತುಗಳು ಬೆಳಗುತ್ತಿರಲಿ ಎಂಬುದು ಡಿ.ವಿ.ಜಿ.ಯವರ ಆಶಯ
ಭಾವಾನುವಾದ: ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Wednesday 15 November 2023

ದೂರು - ಕೇತಕೀವನ - ಡಿವಿಜಿ

ದೂರು - ಕೇತಕೀವನ - ಡಿವಿಜಿ

ನೂರಾರು ದೂರುಗಳ ಹೇಳಿದರು ನಿನಗವರು, 
ಸಲಸಲವು ಹಳಿದರೆನ್ನ, 
ಎನ್ನ ಜೀವದ ನೋವದೇನೆಂದು ತಿಳಿಯದರು; 
ಅವರ ನುಡಿ ನಿನಗೆ ಚೆನ್ನ. 

ನೀನವರ ಕರುಬುಮಾತನು ಕೇಳಿ ಕೆರಳಿರುವೆ 
ದಿಟವನರಸದೆಯೆ ಮುಳಿದು; 
ಕಟ್ಟುಕತೆ ನಿಟ್ಟುಸಿರುಗಳಿಗೆ ಮರುಳಾಗಿರುವೆ 
ಎನ್ನೆದೆಯ ನಿಜವ ಮರೆತು. 

ಅವರ ಕಣ್ಗಳವಡದ ತಪ್ಪೆನ್ನೊಳೊಂದಿಹುದು 
ಈಯೆದೆಯೊಳಾಳವಾಗಿ; 
ಆ ತಪ್ಪಿನಿಂದೆನ್ನ ಬಾಳೆಲ್ಲ ನೊಂದಿಹುದು; 
ಆ ಹಂಬಲೊಲುಮೆಗಾಗಿ.

Tuesday 14 November 2023

ಪ್ರೀತಿ - ಕೇತಕೀವನ - ಡಿವಿಜಿ

ಮುಗಿಲು ಮುಗಿಲನರಸಿ ಸಾರ- 
ಲೊಗೆವುದೊಂದು ಮಿಂಚಿನೋಜೆ 
ಅದನು ಮೀರ್ದ ಮಿಂಚನಿಳೆಯೊ-
ಳರಿತರಿಲ್ಲವೇಂ? 
ಎದೆಯ ಕೊರೆವ 
ಮಿನುಗುಲತೆಯ ಮರೆಯಲಪ್ಪುದೇಂ? 

ನಯನಯುಗಳ ಯುಗದೊಳೊಂದ 
ಬಯಸುತೊಂದು ಸಾರಿದಂದು 
ಹೊಳೆವ ಜೀವಮಿಂಚು ಜನವ 
ಕೆಣಕುತಿರುವುದು; 
ಸುಳಿವ ನಗೆಯ ಹೊಳಪು 
ಜಗವ ಕುಣಿಸುತಿರುವುದು.

Monday 13 November 2023

ಮೋಹಿನಿಗೆ - ಕೇತಕೀವನ - ಡಿವಿಜಿ

ಕಸವಾಯಿತೆನ್ನೊಲುಮೆ, ಕಾಲ ಧೂಳೆನ್ನ ಬಾಳ್‍, 
ಪರಿಹಾಸಕೀಡಾಯಿತೆನ್ನ ತಪನೆ. 

ಇನ್ನುಮೆಲೆ ಮೋಹಿನಿಯೆ ನಿನ್ನ ಕಂಗಳ 
ಹೊಳಪ ಕಂಡೆನ್ನ ಕಂಗಳರಳವುವದೇಕೆ? 
ಇನ್ನುಮಾ ನಿನ್ನ ನಗುದನಿಯ ಕೇಳಿದೊಡೆನ್ನ 
ಹೃದಯವೆನ್ನನೆ ಮರೆತು ಕುಣಿವುದೇಕೆ? 
ಇನ್ನುಮೆನ್ನಯ ಜೀವ ನಿನ್ನ ಜೀವಕೆ ಜೋಡಿ 
ತಾನೆನುತೆ ನಿನ್ನ ಬಳಿ ಸುಳಿವುದೇಕೆ? 

ಅಹ, ಏಂ ಮಾಹೆಯೋ ಪಿಡಿದೆನ್ನನೆಳೆಯುತಿಹುದು; 
ಒಂದಾತ್ಮವೆಂತೊ ಮತ್ತೊಂದಕ್ಕೆ ಗಾಳವಹುದು; 
ಈ ಜಗದ ಕಣ್ಣಮುಚ್ಚಾಲೆಯಾಟದಲಿ, ಮಗುವೆ, 
ಅರಸಿ ಬಂದೊಡನಾಡಿಯೊಳು ನಿನಗೆ ಮುನಿಸು ತರವೆ?

Sunday 12 November 2023

ಅಳು - ಕೇತಕೀವನ - ಡಿವಿಜಿ

ಮಧುವಿಹುದೇಂ ಕಂಬನಿಯೊಳ್‍ । 
ವಿಧಿ ಪೇಳ್‍ ಅಂತಲ್ಲದಿರ್ದೊಡೆನ್ನೊಡಲಿಂದಂ ॥ 
ರುಧಿರೆವ ನೀಡುವೆನೀಂಟಲ್‍ । 
ಬದುಕನೆ ನೀಂ ಬಗಿಯಲುಗುವ ನೀರುಪ್ಪಲ್ತೇಂ ॥

ನರಜೀವನ ಪರಿಪಾಕದ । 
ಮರುಮಂ ಬಾಷ್ಪೋಷ್ಣಮ್‍ ಅರಿಯೆ ಹಸಿತಮದಲ್ಲಂ ॥ 
ಕರಗಿಪುದೆದೆಯಂ ಕಣ್ಣೀರ್‍ । 
ಹರಣಕೆ ಪುಟವಿಡಿಸಲಂತು ನಗುವಿಂದಹುದೇಂ ॥ 

ಮರುಳಂ ಕೃತ್ರಿಮಿ ಗಾಂಪಂ । 
ಗರುವಿತನಣುಗಂ ವಿದೂಷಕಂ ನಗುವರಿವರ್‍ ॥ 
ಅರಿವರೆ ಬಾಳೊಳಗನವರ್‍ । 
ಪಿರಿಯೆದೆಯೊಳಗವಿಯಿನಲ್ತೆ ಕಣ್ಪೊನಲೊಗೆಗುಂ ॥

ರಘುವರಕಥಾಪ್ರವಾಹಮ- । 
ದೊಗೆದುದು ವಾಲ್ಮೀಕಿಕವಿಯ ಕರುಣಾಶ್ರುವಿನಿಂ ॥ 
ಜಗದಚ್ಚರಿ ತಾಜ್‍ ಬೆಳ್ಸರಿ । 
ನಗುವಿನ ಕಿಲಕಿಲವೆ? ಬಾಷ್ಪಬಿಂದುವದಲ್ತೇಂ ॥ 

ಪ್ರೀತಿಯ ನಿದಾಘ ಮುಖವಳು । 
ಸೇತುವದಳಲಿಂದೆ ನಮ್ಮನುಪಶಮಕೊಯ್ಯಲ್‍ ॥ 
ನೀತಿನದೀ ಸ್ರವಭುವಿಯದು । 
ಯಾತನೆಯರಿಯದನದೆಂತು ಶೋಧಿತನಕ್ಕುಂ ॥

Saturday 11 November 2023

ನಗು - ಕೇತಕೀವನ - ಡಿವಿಜಿ

ದೆಸೆದೆಸೆಯಿಂ ಸಂಸಾರದ । 
ಬೆಸನಂಗಳ ಮೋಡದೋಳಿ-ಬಾಳಿನ ಬಾನಂ ॥ 
ಮುಸಿಕಿರಲಾ ಕತ್ತಲೆಯೊಳ್‍ । 
ಹಸಿತದ ಮಿನ್‍ಮಿನುಗಲಾಗ ಪಥ ಸುಳುವಲ್ತೆ ॥ 

ಪರಮ ಬ್ರಹ್ಮಸ್ಫುರಣಂ । 
ಸುರನಗರಾಮೋದ ಕಲಕಲ ಪ್ರತಿಕಲನಂ ॥ 
ಸರಲಹೃದಮೃತಸ್ರವಣಂ । 
ನರನಾರೀತರುಲತಾ ಪ್ರಸೂನಂ ಹಸನಂ ॥ 

ಭೀರು ನಿರುದ್ಯಮಿ ಮತ್ಸರಿ । 
ನೈರಾಶಿಗನಶುಭಿ ಕೃಪಣ ತಾಮಿವರಳುವರ್‍ ॥ 
ಪೌರುಷ ವಿವೇಕಶೀಲಂ । 
ಸ್ಮೇರಾಸ್ಯದೆ ಬಾಳ ಹೊರೆಯ ಲಘುತರವೆನಿಪನ್‍ ॥

ವನಧಿಯ ಲಂಘಿಪ ಮುನ್ನಾ । 
ಹನುಮಂತಂ ನಕ್ಕನಲ್ತೆ ಗೋಳಾಡಿದನೇಂ? ॥ 
ಮುನಿದಾ ಭಾಮೆಗಮಳುವ- । 
ರ್ಜುನಗಂ ಧೃತಿ ಕೃಷ್ಣಮಂದಹಾಸದಿನಲ್ತೇಂ ॥ 

ಪ್ರೀತಿಯಿನರಲ್ದ ನಗುಗಣ್‍ । 
ಸೇತುವದದರಿಂದೆ ನಮ್ಮನುಚ್ಛ್ರಯಕೊಯ್ಯಲ್‍ ॥ 
ಭೀತಿಯೊಳದೆ ರಕ್ಷಾಮಣಿ । 
ಸೀತೆಯುಮಾ ಕಪಿಯ ಸಾಸದಿಂ ನಸುನಕ್ಕಳ್‍ ॥

Friday 10 November 2023

ನೀನು-ನಾನು - ಕೇತಕೀವನ - ಡಿವಿಜಿ

ಆನಂದನಿಧಿ ನೀನು
ಆಕಾಂಕ್ಷೆ ನಾನು
ಅಮೃತವರ್ಷಿಣಿ ನೀನು
ಆಳುಬೀಡು ನಾನು
ನೀನೊರ್ವಳಿಲ್ಲದೆನಗೇನಿರ್ದೊಡೇನು?
ನೀನಿರ್ದೊಡೆನಗೆ ಮತ್ತೇನಿರದೊಡೇನು?

ಸಿರಿಯ ಕಮಲವೆ ನೀನು
ತಿರಿದುಂಬಿ ನಾನು
ಶಶಿಯ ತಿಂಗಳು ನೀನು
ನಿಶಿಮಬ್ಬು ನಾನು
ನಿನ್ನ ಮಧುವಿಂದೆನ್ನ ಹಸಿವು ತೊಲಗುವುದು
ನಿನ್ನ ಕಿರಣದಿನೆನ್ನ ಕುರುಡು ಕಳೆಯುವುದು.

ಸುಳಿವ ಗಾಳಿಯು ನೀನು
ಬಳುಕುವೆಲೆ ನಾನು
ತಿಳಿಹೊಳೆಯ ನೆರೆ ನೀನು
ಕೆಲದ ಹೊಲ ನಾನು
ನಯದಿಂದ ನೀಂ ಸಾರಿ ಬರಲೆನ್ನ ಬಾಳು,
ದಯೆ ತೊರೆದು ನೀನೋಡಲೆನಗೆಲ್ಲ ಪಾಳು.

ವಿಧಿಯ ಲೇಖನಿ ನೀನು
ಬರವ ಹಣೆ ನಾನು
ಅಧಿಕಾರವತಿ ನೀನು
ಅಡಿಯಾಳು ನಾನು
ನಿನ್ನ ತಿಳಿನಗುವೆನ್ನ ಕಣ್ಗಳಿಗೆ ಬೆಳಕು
ನಿನ್ನೊಲಿದ ನುಡಿಯೆನ್ನ ಜೀವಕಿಹ ಬದುಕು.

ಆತ್ಮದೈವವು ನೀನು
ಅರ್ಚಕನು ನಾನು
ಐಶ್ವರ್ಯವತಿ ನೀನು
ಆಶ್ರಿತನು ನಾನು
ಕೊರಗಿ ನಾನಿರೆ ನಿನಗೆ ಸಫಲತೆಯದೆಂತು?
ತೊರೆದು ನೀನಿರಲೆನಗೆ ಪೂರ್ಣತೆಯದೆಂತು?

Thursday 9 November 2023

ಜಯಭಾರತೀ - ಕೇತಕೀವನ - ಡಿವಿಜಿ

ಜಯ ಭಾರತೀ ಜಯ ಜಯ ॥ 
ಶ್ರೀಮತೀ । ಜಯಭಾರತೀ ಜಯ ಜಯ ॥ 
ಹಿಮವಂತನೊಂದು ಕಡೆ-ಹನುಮಂತನೊಂದು ಕಡೆ । 
ಜಯದ ಗುರುತಿರಿಸಿರಲು-ಭಯವೇತಕೆಲೆ ತಾಯೆ ॥ 

ಜಯ ಭಾರತೀ ಜಯ ಜಯ ॥ 
ಜಗವೆಚ್ಚರುವ ಮುನ್ನ-ನಿಗಮ ಗೀತವ ಪಾಡಿ । 
ಅರಿವಿನೊಸಗೆಯನಿತ್ತ-ಗುರುವು ನೀನೆಲೆ ತಾಯೆ ॥ 
ಜಯ ಭಾರತೀ ಜಯ ಜಯ ॥ 

ಧರೆಯ ಜೋತಿಯ ಪರಕೆ-ಪರದ ಜೋತಿಯ ಧರೆಗೆ । 
ಬೆಳಗುವಗ್ಗಳಿಕೆ ನಿನ-ದೊಬ್ಬಳದೆ ಲೋಕದಲಿ ॥ 
ಜಯ ಭಾರತೀ ಜಯ ಜಯ ॥

Tuesday 7 November 2023

ವೀರಗೀತೆ - ಕೇತಕೀವನ - ಡಿವಿಜಿ

ಎಲ್ಲಿಹರೆಮ್ಮಯ ನಾಡಿನ ಹೆಸರನು
ಕಾಯುವ ಕಲಿತನದಾಳುಗಳು
ಕರೆಸೋಕದ ಕರವಾಳುಗಳು?
ಧರುಮದ ಮುಡುಪಿನ ಬಾಳುಗಳು?
ಎಲ್ಲಿಹರೆಮ್ಮಯ ಜನನಿಯ ಪಾಡನು
ನೆನೆದಳಲುವ ಕರುಣಾಳುಗಳು?

ಬರುತಿದೆ ದೂರದ ಯುಗಗಳ ದಾಟುತ
ಹಿಮಗಿರಿ ವನಗಳ ದನಿಯೊಂದು
ಸೇತುವೆ ಚಿಮ್ಮುವ ಪನಿಯೊಂದು
ಗೀತೆಯ ಬೀರದ ಪೊನಲೊಂದು
ನೆನೆಯುತ ನಾವದ ನಲಿಯುತ
ಮಾತೆಯ ಚರಣಕೆ ಮಣಿಯುವ ಶರಣೆಂದು.

ಇಂದೀ ನಾಡೊಳು ಮೂಡುತಲಿರುವುದು
ಪೊಸ ಬೆಳಕಿನ ತಿಳಿಕಳೆಯೊಂದು
ಗೌರವಬೀಜದ ಬೆಳೆಯೊಂದು
ಪೌರುಷವೇಗದ ಹೊಳೆಯೊಂದು
ಬನ್ನಿರಿ ಸೇರುವ ಬಾಳನು ತೊಳೆಯುವ
ನಾವೆಲ್ಲರುಮದರೊಳು ಮಿಂದು.

ಬನ್ನಿರಿ ಧೀರರೆ ಬನ್ನಿರಿ ಶೂರರೆ
ತನ್ನಿರಿ ಕೆಚ್ಚಿನ ಜೀವಗಳ
ಬನ್ನಿರಿ ನೆನೆಯದೆ ನೋವುಗಳ
ಬನ್ನಿರಿ ಗಣಿಸದೆ ಸಾವುಗಳ
ಬನ್ನಿರಿ ಗೆಳೆಯರೆ ತನ್ನಿರಿ ಮಾತೆಗೆ
ಬೀರದ ಸಾಸದ ಸೇವೆಗಳ!

ಕತ್ತಿಯನರಿಯದ ನೆತ್ತರ ಸುರಿಯದ
ಸಾತ್ತ್ವಿಕ ಶೌರ್ಯದ ಕಾಳಗಕೆ
ಸತ್ಯದ ಸೇನೆಯ ಪಾಳೆಯಕೆ
ಆತುಮಬಲದೊಡ್ಡೋಲಗಕೆ
ಬನ್ನಿರಿ ಸೇರುವ ಬನ್ನವನರಿಯದ
ಧರುಮದ ದೇವತೆಯೂಳಿಗಕೆ.

ವಿನಯದ ಪಡೆ ದುರ್ವಿನಯವನೊಡೆಯಲು
ಲೋಕಕದಚ್ಚರಿಯೆನಿಸುವುದು
ನಾಕದ ಮೆಚ್ಚಿಕೆಯೆನಿಸುವುದು
ನೀತಿಯ ಪೆಚ್ಚುಗೆಯೆನಿಸುವುದು
ನಡೆಯುವ ಜಯಜಯವೆನುತಲಿ
ನಾವದು ಮಾತೆಯ ನಚ್ಚುಗೆಯೆನಿಸುವುದು.

ಬನ್ನಿರಿ ಸೇವಿಪ; ಬಂಧವ ಕಳೆಯುವ;
ತಣಿಸುವ ನಮ್ಮನು ಪೆತ್ತವಳ,
ಪರದೀಪವನಿಳೆಗಿತ್ತವಳ,
ಪರಕಿಳೆಯಾರತಿಯೆತ್ತುವಳ ಬನ್ನಿ
ಪೂಜಿಪ ಭುವನದ ಬದುಕಿಗೆ
ತನ್ನಯ ಬದುಕನು ಬಿತ್ತುವಳ!

ನಾರದ - ಕೇತಕೀವನ - ಡಿವಿಜಿ

ಭುವನ ಮರುಸಿಕತದೊಳು ಮಾ- ।
ನವಹೃದಯದ್ರವ ತರಂಗಿಣಿಯ ನಿರವಿಸುವಾ ॥
ಕವಿ ಗಾಯಕ ನರ್ತಕ ಪುಂ- ।
ಗವ ನಾರದನೋವುಗೆಮ್ಮ ಜೀವನವನಮಂ ॥

Monday 6 November 2023

ನವನಿಧಿ - ಕೇತಕೀವನ - ಡಿವಿಜಿ

ಎನ್ನವಳು ನೀನೆಂಬ ಭರವಸೆಯನೆಂದೆನಗೆ 
ಮನ್ಮನೋಹಾರಿ ಕೊಡುವೆ? 
ಸಂದೇಹದಿಂದಂತರಪಿಶಾಚಿಯಾದೆನ್ನ- 
ನೆಂದು ನೀಂ ಪಾರುಗೆಯ್ವೆ? 

ಬರಿ ನಗುವಿನಿಂದೇನು? ನೆರೆನೋಟದಿಂದೇನು? 
ಬೆರಗಾಗೆನದಕೆ ನಾನು. 
ಇಂಬು ಮುಖವಾಡಗಳ ತುಂಬಿದೊಯ್ಯಾರಗಳ 
ನಂಬಿ ಕೆಟ್ಟವನು ನಾನು. 

ನಿನ್ನೊಂದು ನುಡಿಯಿಂದಲೆನಗೆ ಬಿಡುಗಡೆ, 
ಗೆಲವು. ಎನ್ನು ನೀನ್‍ “ಒಲಿದೆನ್‍" ಎಂದು. 
“ನಿನ್ನವಳು ನಾನ್‍" ಎನ್ನು; ಅದುವೆ ನವನಿಧಿಯೆನಗೆ, 
ಜನ್ಮಕದೆ ಬೇಳ್ಪ ಫಲವು.

Sunday 5 November 2023

ನೆಲದಾವರೆ - ಕೇತಕೀವನ - ಡಿವಿಜಿ

(೧) ಎಳೆಬೆಳಕಿನಲಿ 
ಕಳಕಳಿಸುತಲಿ 
ಹಳದಿಯ ಸಗ್ಗಿ 
ನೆರೆದಿದೆ ಹಿಗ್ಗಿ. 

ಎಲೆಯೊಂದಿಲ್ಲ; 
ಸೆಲೆಯಿನಿತಿಲ್ಲ; 
ಬೆಳಸಿನ ಮುಗಿತ, 
ಬದುಕಿನ ನೆಗೆತ.

(೨) ತಿರೆಯ ಕರಿಮೈಯಾಗಿ, 
ಮೈಯೆಲ್ಲ ಹೂವಾಗಿ, 
ಹೂವೆಲ್ಲ ಹೊನ್ನಾಗಿ, 
ನಿಂದಿಹುದು ಮರವು; 
ಮರವಲ್ಲ ಸಿರಿಯು 
-ಧರಣಿಯೈಸಿರಿಯು, 

(೩) ಅರೆದಿನದ ಸೊಗಕೆಂದು 
ವರುಷವೆಲ್ಲವು ನಿಂದು 
ಕೊರೆವ ಚಳಿಯಲಿ ನೊಂದು 
ಉರಿವ ಬಿಸಿಲಲಿ ಬೆಂದು 
ನೋಂತಳಿವಳು. 
ಅರಿಶಿನದ ವಸನದಲಿ 
ಗರಿಕೆ ಹಸೆಹಸುರಿನಲಿ 
ಸಂತಸಿಪಳು. 

(೪) ತೊರೆದೆಲೆಯ 
ಹೊರೆಹೊರೆಯ 
ಮರಲ ಮುಡಿದಿಹಳು
ಏನಿವಳ ನಗುವು । 
ಕಳೆದು ಹೂಮೆದೆಯ 
ತಿಳಿಹೊನ್ನ ಹೊದೆಯ 
ಒಳ್ಳಿದರ ನಲುವು 
ಮಸಿಯೊಡಲು 
ಮಿಸುನಿ ನಗು 
ಪಳ್ಳಿವೆಣ್‍ ಚೆಲುವು । 

(೫) ಬದುಕಿಗಿದು ತುಂಬು 
ಪೊಡವಿಗೊಂದಿಂಬು 
ಮೊಗದ ಮಸಕಿನಲಿ 
ನಗೆಯ ಬೆಳಕಿರಲಿ 
ಅಲರಿಂದೆ ತರುತೆ 
ಒಲವಿಂದೆ ನರತೆ.

Saturday 4 November 2023

ಭುವಿ-ದಿವ - ಕೇತಕೀವನ - ಡಿವಿಜಿ

ಏಂ ಮರೆವೊ ಹುವಿಗೆ ದಿವವಿನಿ- ।
ಸಿಂಮಿದನವೊಲೆವೆಯ ಮಿಸುಕಲವನಿಂ ತನಗಾ- ॥
ದುಮ್ಮಳವ ಮರೆತು ಪಸಿರುಡೆ- ।
ಯಿಂ ಮೆಯ್ಸೊಬಗಾಂತು ಮದುವೆಯಣುಗಿವೊಲೆಸೆವಳ್‍ ॥

ಏಂ ನೆನಪೊ ದಿವಕೆ ಭುವಿಯಿಂ ।
ಮನ್ನಣೆಯಂ ಕೊಂಡುಮವಳನಣಕಿಪ ಚಲದಿಂ ॥
ಮುನ್ನಿನ ಗಣಿತವನೆಣಿಸುತೆ ।
ತಿನ್ನಿಪನವಳಣುಗರಿಂಗೆ ಪಳಸುಣಿಸುಗಳಂ ॥

ಓ ಬಾಳೆ, ದಿವಕೆ ಮಣಿದೆ- ।
ನಾ ಬೆದರಿಪ ದೇವರೆಂಬ ಋಣಗಣಕರಿನೇಂ ॥
ಆ ಬಿದಿಯ ಚಲವನೆದುರಿಸ- ।
ಲೀ ಭುವಿ ತಾಯ್ಮಡಿಲನೊಲುಮೆ ತುಂಬಿರೆ ಸಾಲ್ಗುಂ ॥

Thursday 2 November 2023

ಕಲ್ಯಾಣಮುನಿಯ ಪಶ್ಚಾತ್ತಾಪ - ಕೇತಕೀವನ - ಡಿವಿಜಿ

ಪುಣ್ಯದೇಶವ ತೊರೆದು ಧನ್ಯಚರಿತೆಯ ಮರೆತು
ದೂರ ಬಂದೆ
ವೇದಬಾಹಿರನಾಗಿ ಸಾಧುವರ್ಜಿತನಾಗಿ
ಜಾರಿ ನಿಂದೆ

ಸ್ವಜನದೆಡೆ ಸೊಗಮೆಂದು ನಿಜಧರುಮ ಲೇಸೆಂದು
ಗೆಳೆಯರೆಲ್ಲರ್
ಯವನನೃಪನೇಕೆಂದು ಅವನೊಲಿವದೇಕೆಂದು
ಪಳಿದು ನಿಂತರ್‍

ಶ್ರುತಿಮತವ ಪರಪಿ ಸಂಸ್ಕೃತಕಲೆಯ ಕಲಿಸಿ ನಾಂ
ತಿಳಿವಿನಿಂದೆ
ಎನ್ನ ನಾಡನು ರಣದಿ ಬನ್ನವಡಿಸಿದ ಜನರ
ಗೆಲುವೆನೆಂದೆ

ವ್ರತವನದ ಸಾಧಿಸಲು ಹಿತಗತಿಯ ಬೋಧಿಸಲು
ಇತ್ತ ಸಾರ್ದೆ
ಸಾಧಿಪ್ಪುದರಿದಾಗೆ ಮೂದಲಿಕೆಗೀಡಾಗಿ
ಸತ್ತು ಬಾಳ್ದೆ
ಕಾಕಕಂಠವ ತಿರ್ದೆ ಕೋಕಿಲೆಯು ಸಾರಿ ತಾಂ
ಕುಂದುವಂತೆ
ಸ್ವಜನಧರ್ಮವ ವಿಜನಕರುಹೆ ಸಾಹಸಗೈದು
ನೊಂದು ನಿಂತೆ
ಜಾತಿಕರುಮವ ಪರಿದು ಪೂತಮಾರ್ಗಿದಿನಲೆದು
ಮರುಳನಾದೆ
ಅನ್ಯಜನದಲಿ ಬೆರೆತು ಶೂನ್ಯಪಥವನು ಹಿಡಿದು
ದುರುಳನಾದೆ
ಯೋಗವಿಧಿಗಳ ತೊರೆದೆ ಯಾಗ ಸವಗಳ ತೊರೆದೆ
ತಪವ ತೊರೆದೆ
ಯಾಜನಂಗಳ ತೊರೆದೆ ಪೂಜೆ ವ್ರತಗಳ ತೊರೆದೆ
ಜಪವ ತೊರೆದೆ
ಗತಿ ಯಾವುದಿನ್ನೆನಗೆ ಹುತವಹನೆ ಕರುಣೆಯಿಡು
ಅನಲ ನೀನು
ಉರಿಯ ಕರಗಳಿನೆನ್ನ ದುರಿತ ತತಿಯನು ನೀಗಿ
ತನುವ ತಡಹು
ಪೂತನಾಗಿಸು ಭರತ ಭೂತಲದೊಳೇ ಮಗುಳೆ
ಜನುಮ ನೀಡು
ಆರ್ಯದೇಶದಿ ವಿಪ್ರಚರ್ಯೆಯೊಳೆ ನೀನೆನ್ನ
ಮನವ ಮಾಡು
ವಾಯುದೇವನೆ, ಎನ್ನ ಕಾಯಭಸ್ಮವ ಕೊಂಡು
ಕರುಣೆಯಿಂದೆ
ಭುವನ ಪಾವನೆಯೆನಿಪ ದಿವಿಜಗಂಗೆಯೊಲಿರಿಸು
ತ್ವರಿತದಿಂದೆ
ಯಾಗದೇವನೆ, ಎನ್ನ ಬೇಗದಿಂ ಬಿಡಿಪುದೀ-
ಯೊಡಲ ಸೆರೆಯಿಂ
ಪಾಳು ಬಡಿದಿರ್ಪ ಈ ಬಾಳ ನೀಂ ಕೈಪಿಡಿದು
ನಡಸು ದಯೆಯಿಂ.

Wednesday 1 November 2023

ಒಬ್ಬ ತರುಣ ಕವಿಗೆ - ಕೇತಕೀವನ - ಡಿವಿಜಿ

(ಆತನ ಮದುವೆಯ ಸಂದರ್ಭದಲ್ಲಿ)

ಸಿರಿವಂತ ತರುಣ ಕವಿ ಮದುವಣಿಗ ಕೇಳಿದನು,
ಸಿರಿಸೊಂಪದೊಂದುಮಿಲ್ಲದ ಗುಂಡು ರಗಳೆಯನು-

ಗೆಳೆಯ, ನೀಂ ಸ್ವೀಕರಿಪುದೆನ್ನ ಅಭಿನಂದನೆಯ
ನಿನ್ನಯಾಹ್ವಾನವೆನ್ನಯ ಹಸ್ತಚಿತ್ತಗಳ
ಮುಟ್ಟಿಹುದು; ಸಂತಸಂಬಟ್ಟು ನಾಂ ವಂದಿಪೆನು.

ಪರಿಶೆಯ ವಿಶೇಷ ಸಾಹಿತ್ಯೋತ್ಸವದ ದುಡಿತ-
ವೆನಗೆ ತಪ್ಪಿಸಿತು (ನೀನೇ ಶಂಕೆಪಟ್ಟಂತೆ)
ನಿನ್ನಯ ವಿಶೇಷ ಸಾಹಿತ್ಯೋತ್ಸವದ ಸೊಗವ.
ಕೆಳೆನುಡಿಯ ಬರೆಯಲುಂ ಬಿಡುವಿಲ್ಲದಾಯ್ತಾಗ.

ನೀನೀಗಳಾನುಮೀ ಹರಕೆಯನು ಕೊಳ್ಳುವೆಯ?
ಪೊಸಬಳ್ಳಿಯೊಂದೀಗ ನಿನ್ನಿರವನಪ್ಪಿಹುದು,
ಅದರ ತಳಿರಲರುಗಳ ಸವಿ ಬೆಡಗು ಬಣ್ಣಗಳು
ನಿನ್ನ ತಿಳಿಗಣ್ಣನಿನ್ನಷ್ಟಗಲವರಳಿಸಲಿ.
ಅದರ ಮೆಲ್ಲುಲಿಯ ನಸುನಗೆಯ ಸೆಲೆಸೊಲ್ಲುಗಳು

ನಿನ್ನ ಕಿವಿಗಿನ್ನಷ್ಟು ಸೂಕ್ಷ್ಮತೆಯ ತಂದಿಡಲಿ.
ಅಂತು ನೀಂ ಜಗದ ಬದುಕಿನ ಮಹಿಮೆ ಮರ್ಮಗಳ
ಕಾಣುತ್ತೆ ಕೇಳುತ್ತೆ ಪೇಳುತ್ತಲಿಹುದೆಮಗೆ
ಆಲಿಸುತೆ ಬಾಳೊಳ್ಳಿತೆನುತೆ ನಾಂ ನಲಿಯುವೆವು.
ನಿನ್ನ ಕೊಳಲೊಡನೆ ಕೊರಲಿನ್ನೊಂದು ಸೇರಿಹುದು
ಅಂತಿನ್ನು ಹೊಸ ರಾಗದಿಂಬೊಂದು ಹೊಮ್ಮುವುದು
ಅದು ನಮ್ಮ ಕನ್ನಡದ ಬಾಳನ್ನು ತಣಿಸುವುದು.