Friday 29 March 2013

DVG 126@ Rasadhwani Kala Kendra

DVG 126 Birth Anniversary @ Rasadhwani Kala Kendra A Report- ಶ್ರೀಕಾಂತ ಶರ್ಮ

ಡಿ.ವಿ.ಜಿ. ಯವರ 126 ನೇ ಜನ್ಮದಿನದ ಪ್ರಯುಕ್ತ ಮಾರ್ಚ್ 17 - 2013 ರಂದು ಬೆಳಿಗ್ಗೆ 10:30 ಕ್ಕೆ, ಬೆಂಗಳೂರಿನ ರಾಜಾಜಿನಗರದ ರಸಧ್ವನಿ ಕಲಾ ಕೇಂದ್ರದಲ್ಲಿ ಶತಾವಧಾನಿ  ಡಾ । ರಾ.ಗಣೇಶ್ ರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು.

ಶತಾವಧಾನಿಗಳು ಕೇಂದ್ರದಲ್ಲಿ ನೆರದಿದ್ದ ಡಿ.ವಿ.ಜಿ ಅವರ ಅಭಿಮಾನಿಗಳನ್ನು ಉದ್ದೇಶಿಸಿ -- "ಡಿ.ವಿ.ಜಿ. ಯವರ ಸಾಹಿತ್ಯ ಶೈಲಿ - ಒಂದು ಶಾಸ್ತ್ರೀಯ ವಿವೇಚನೆ." ಕುರಿತಂತೆ ಉಪನ್ಯಾಸ ನೀಡಿದರು. ಡಿ.ವಿ.ಜಿ ಅವರ ಪದ್ಯ, ಗದ್ಯ,ನಾಟಕ, ಅನುಭವ ಕಥನ, ಕಗ್ಗ ಇತ್ಯಾದಿ ನಾನಾ ಪ್ರಕಾರಗಳಲ್ಲಿ ಶಾಸ್ತ್ರೀಯತೆ ಮತ್ತು ವಿಶಿಷ್ಟ ಒಳನೋಟಗಳನ್ನು  ಹಂಚಿಕೊಂಡರು.

ಉಪನ್ಯಾಸದ ನಂತರ ಕೇಂದ್ರದ ಸ್ನೇಹಿತರು ಕಗ್ಗದ ವಾಚನ, ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾದರು. ಡಿ.ವಿ.ಜಿ  ಅವರ 30 ಕ್ಕೂ ಹೆಚ್ಚು ಪುಸ್ತಕಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ರಸಧ್ವನಿ ಕಲಾ ಕೇಂದ್ರದ ಕುರಿತು: ಸಂಗೀತ - ಸಾಹಿತ್ಯ ಇತ್ಯಾದಿ ಲಲಿತ ಕಲೆಗಳ ಮೂಲಕ ಸನಾತನ ಧರ್ಮದ ಸೇವೆಗೆಂದು ಸಮಾನ ಮನಸ್ಕ ಸಹೃದಯರಿಂದ ಸ್ಥಾಪನೆಯಾಗಿರುವ "ರಸಧ್ವನಿ ಕಲಾ ಕೇಂದ್ರ" , ರಾಜಾಜಿನಗರದಲ್ಲಿ ಈ ಕೆಳಕಂಡ ಚಟುವಟಿಕೆಗಳನ್ನು ಏರ್ಪಡಿಸುತ್ತಿದೆ.

* ಕರ್ನಾಟಕ ಶಾಸ್ತ್ರೀಯ ಸಂಗೀತ: ಕಲಿಕೆ, ಕಾರ್ಯಕ್ರಮ, ಕಚೇರಿ.
* ಕುಮಾರವ್ಯಾಸ ಭಾರತ ಇತ್ಯಾದಿ ಕಾವ್ಯಗಳ ವಾಚನ: ಗಮಕ ವಾಚನ ತರಗತಿಗಳು.
* ಗೀತಾಧ್ಯಯನ ಹಾಗು ವೇದಾಧ್ಯಯನ ತರಗತಿಗಳು.
* ಸಂಸ್ಕೃತ ಭಾಷೆ - ಸಂಭಾಷಣ ಶಿಬಿರ, ಸಂಸ್ಕೃತ ಅಧ್ಯಯನ ಕೇಂದ್ರ.

Saturday 23 March 2013

ಡಿವಿಜಿ ಯವರ ಕೃತಿ ಪರಿಚಯ - ಸಾಹಿತ್ಯಶಕ್ತಿ

 

ಡಿ.ವಿ.ಜಿ.ಯವರಸಾಹಿತ್ಯಶಕ್ತಿ’ ಸೂತ್ರಸದೃಶವಾದ ರೀತಿಯಲ್ಲಿ ಕವಿ ಕಾವ್ಯ ವಿಚಾರವನ್ನು ನಿರೂಪಿಸುವ ಪುಸ್ತಕ. ಈ ಪುಸ್ತಕವನ್ನು ಡಿವಿಜಿ ಯವರು "ಶ್ರೀ ಬೆಳ್ಳಾವೆ ವೆಂಕಟನಾರಣಪ್ಪ" ಅವರಿಗೆ ಸಮರ್ಪಣೆ ಮಾಡಿದ್ದಾರೆ. ಡಿವಿಜಿ ಅವರ ಉಪನ್ಯಾಸಗಳಲ್ಲಿ ಕೆಲವನ್ನು ಈ ಪುಸ್ತಕರೂಪದಲ್ಲಿ ಶ್ರೀ ಚಿದಂಬರಂ ಅವರು ಪ್ರಕಟಿಸಿದ್ದಾರೆ.  ಪುಸ್ತಕದಲ್ಲಿ ಪ್ರಕಟಿಸಿರುವ ಉಪನ್ಯಾಸಗಳ ಪಟ್ಟಿ ಇಂತಿದೆ:

೧. ರಾಷ್ಟ್ರಕನಿಗೆ ಸಾಹಿತ್ಯ ಬೇಕೆ?
೨. ಆಧುನಿಕ ವಿಚಾರೋಪಾನ್ಯಾಸಗಳು
೩. ನೂತನ ಸಾಹಿತ್ಯ ರಚನೆ
೪. ಭಾಷೆಯ ನವೀಕರಣ
೫. ನವ್ಯತೆಯೇ ಜೀವನ
೬. ವಿಜ್ಞಾನ ಲೋಕಪರಿಜ್ಞಾನ
೭. ಉಪಾಧ್ಯಾಯ ಪಂಡಿತರು
೮. ಕಾವ್ಯದಲ್ಲಿ ಜೀವನ ತತ್ತ್ವದರ್ಶನ
೯. ಕನ್ನಡ ಜನತೆಗೋಸ್ಕರ ಕನ್ನಡ
೧೦. ಉಪಾಧ್ಯಾಯರು ಮತ್ತು ಸಾಹಿತ್ಯಪಾಠ
೧೧. ಕನ್ನಡಿಗರಿಗೆ ಸಂಸ್ಕೃತ
೧೨. ಕಾವ್ಯೋಪಾಸನೆ

 *******

"ಮಹಾಕಾವ್ಯಕ್ರಿಯೆ ಅಷ್ಟಕ್ಕೆ ನಿಲ್ಲುವುದಿಲ್ಲ. ಬರಿಯ ಕಣ್ಣೀರು, ಅಥವಾ ಬರಿಯ ಸಂತೋಷ, ಬರಿಯ ರೋಷ, ಅಥವಾ ಬರಿಯ ಹಂಬಲ-ಅಷ್ಟರಲ್ಲೇ ಅದರ ಉಪಕಾರ ಮುಗಿಯುವುದಿಲ್ಲ. ಕವಿನಿರ್ಮಿತಲೋಕದಲ್ಲಿ ಕಂಡದ್ದನ್ನು ಮನಸ್ಸು ಮತ್ತೆ ಮತ್ತೆ ನೆನೆಯುತ್ತದೆ; ಅದನ್ನು ಕುರಿತು ಚಿಂತಿಸುತ್ತದೆ; "ಅದು ಸರಿಯೆ? ಇದು ಸರಿಯೆ?" "ಅಲ್ಲಿ ಹಾಗೇಕೆ, ಇಲ್ಲಿ ಹೀಗೇಕೆ?"- ಎಂದು ಪ್ರಶ್ನೆ ಮಾಡುತ್ತದೆ. ಈ ಆಂದೋಳನ ವಿಮರ್ಶನಗಳಿಂದ ಫಲಿಸುತ್ತದೆ ಒಂದು ಪ್ರಚೋದಕ ಧ್ವನಿ. ಆ ಮಹಾಧ್ವನಿಯ ಶುಶ್ರೂಷೆಯಿಂದ ಲಭಿಸುತ್ತದೆ ಒಂದು ಶುಭಸೌಂದರ್ಯದರ್ಶನ- ಒಂದು ಒಳ್ಳೆಯದೆಂಬುದರ ತಿಳಿವಳಿಕೆ- ಒಂದು ಧರ್ಮಾನ್ವೇಷಣಪ್ರವೃತ್ತಿ. ಅದೇ ಕಾವ್ಯಸ್ಪೂರ್ತಿ. ಅದರಿಂದ ಜೀವಕ್ಕೆ ಬಂಧ ವಿಮೋಚನೆ, ಅದೇ ಅತ್ಮಕ್ಕೆ ಪುನರ್ಜನ್ಮ." - (ಪುಟ ೨೫)
 
"ಸಾಹಿತ್ಯಕ್ಕಿರುವ ಮುಖ್ಯ ವಿಷಯಗಳು ಮುರು- ಶೃಂಗಾರ, ರಾಜಕೀಯ, ಜೀವಧರ್ಮ. ಇವುಗಳಲ್ಲಿ ರಾಜ್ಯವಿಚಾರವನ್ನು ಬಿಟ್ಟ ಸಾಹಿತ್ಯ ಬರಿಯ ಗೊಣಗಾಟ ಪೇಚಾಟಗಳಾಗಿ ಬಡವಾದೀತು. ರಾಜಕೀಯವೇ ಪೌರುಷಪ್ರಕಾಶದ ಭೂಮಿ. ಅದೇ ವೀರರಂಗ, ರಾಜ್ಯವೆಂಬುದು ಜನತಾ ಜೀವನಭೂಮಿ ತಾನೆ? ಸಾಹಿತ್ಯವೂ ಜನಜೀವನವಲ್ಲದೆ ಮತ್ತೇನು?
 
ಪ್ರಪಂಚದ ಮಹಾಸಾಹಿತ್ಯದಲ್ಲಿ ಬಹುಭಾಗದ ಮುಖ್ಯ ವಿಷಯ ರಾಜಕೀಯವೆಂಬುದನ್ನು ನಾವು ಮರೆಯಬಾರದು. ವೇದವು ರಾಜರಾಜರ್ಷಿಗಳನ್ನು ಬಿಟ್ಟಿಲ್ಲ. ಪೌಷ್ಯ, ಹರಿಶ್ಚಂದ್ರ, ದಿವೋದಾಸ, ಜನಕ, ವಿಶ್ವಾಮಿತ್ರ-ಇಂಥಾ ಕ್ಷತ್ರಿಯವೀರರ ಪ್ರಶಂಸೆಗೂ, ರಾಜಸೂಯ, ವಿಶ್ವಜಿತ್ತು ಮೊದಲಾದ ಜನತಾ ಸಂಗ್ರಹಣಸಾಧಕಗಳಾದ ಯಜ್ಞಾಯಾಗಗಳ ಮಹಿಮಾಖ್ಯಾನಕ್ಕೂ ವೇದವು ಅವಕಾಶ ಕೊಟ್ಟಿದೆ, ರಾಮಾಯಣ ಮಹಾಭಾರತಗಳ ಮುಖ್ಯವಸ್ತು ರಾಜಧರ್ಮ; ರಾಜರುಗಳ ಕಥೆ ಅವೆರಡರಲ್ಲಿ ತುಂಬಿದೆ."(ಪುಟ ೨೮)
 
 "ಪ್ರತಿಯೊಬ್ಬ ಮನುಷ್ಯನಿಗೂ ಒಂದು ವ್ಯಕ್ತಿ ವೈಶಿಷ್ಟ್ಯವಿರುತ್ತದೆ. ಅದು ರಹಸ್ಯ. ಕವಿ ಅಸಾಧಾರಣ ಮನುಷ್ಯ; ಆದ್ದರಿಂದ ಅವನದು ಅಸಾಧಾರಣ ವ್ಯಕ್ತಿತ್ವ. ಅದು ಅಂತರ್ಮುಖ ವ್ಯಕ್ತಿತ್ವ. ವ್ಯಕ್ತಿವೈಶಿಷ್ಟ್ಯದ ಬಹಿಃ ಪ್ರಾಕಟ್ಯವೇ ಕಾವ್ಯ" (ಪು, ೧೭೬-೧೭೭)

"ಸೂಕ್ಷ್ಮಾನುಭವ ಘಟ್ಟ, ಧ್ಯಾನಕಲ್ಪನಘಟ್ಟ, ವಾಕ್ಪ್ರಭಾವಘಟ್ಟ ಎಂಬ ಮೂರು ಘಟ್ಟಗಳಲ್ಲಿ ನಡೆಯುತ್ತದೆ ಕವನಕರ್ಮ. ಅದರ ಫಲಿತಾಂಶ ಕಾವ್ಯ". (ಪು.೧೩)

"ಕಾವ್ಯಕರ್ಮವು ಶಬ್ದಾರ್ಥ ಪ್ರಪಂಚದ ನಾನಾ ಧಾತುಗಳ ಸಮ್ಮಿಳಿತ ಪಾಕ". (ಪು. ೧೭೯)

"ಕವಿ ಸ್ವಪ್ರತಿಭಾಶಕ್ತಿಯಿಂದ ನಮಗಾಗಿ ರಚಿಸುತ್ತಾನೆ ನೂತನ ಲೋಕಭ್ರಾಂತಿಯನ್ನು" (ಪು. ೧೬)

"ಕಾವ್ಯದಿಂದ ನಮಗೆ ಲಭ್ಯವಾಗುವುದು ಒಂದು ಜೀವದ ಅಥವಾ ಒಂದು ಜೀವದ ಪ್ರತಿಬಿಂಬವಲ್ಲ; ಅದು ವಿಶ್ವಜೀವನದ ಪ್ರತಿಬಿಂಬ". (ಪು. ೧೮)

"ವಿಶ್ವಸಂಬೋಧನೆಯೇ ಕಾವ್ಯದ ಮಹತ್ವ". (ಪು. ೨೦೧)

"ಜೀವನದ ಕೊಳೆ ಕಲ್ಮಷಗಳನ್ನು ತೊಳೆಯಬಲ್ಲ ತೀರ್ಥವೆಂದರೆ ಕಾವ್ಯತೀರ್ಥ". (ಪು. ೧೧)
-
ಕೆಲವು ಮಾತುಗಳು ಸಾಕು, ಡಿ.ವಿ.ಜಿ.ಯವರ ಅಭಿವ್ಯಕ್ತಿಯ ತುಂಬ ಎಷ್ಟೊಂದು ವಿಚಾರಗಳು ಘನೀಭವಿಸಿವೆ ಎನ್ನುವುದನ್ನು ತೋರಿಸಲು. ಪುಸ್ತಕದ ತುಂಬ ಇಂಥ ಚಿಂತನೆಯಲ್ಲಿ ಹರಳುಗೊಂಡ ಮಾತುಗಳು ಸುಸಂಬದ್ಧವಾಗಿ ವಿಚಾರ ಪ್ರಚೋದಕವಾಗಿ ತುಂಬಿಕೊಂಡು ಬರುತ್ತವೆ. ಭಾರತೀಯ ಕಾವ್ಯಮೀಮಾಂಸೆ ಮತ್ತು ತತ್ವಶಾಸ್ತ್ರದ ವಿಚಾರಗಳು ಇವರ ಕಾವ್ಯಮೀಮಾಂಸೆಯ ತಳಹದಿಯಾಗಿವೆ. ಜೊತೆಗೆ ಬೇರೆ ಬೇರೆಯ ಸಾಹಿತ್ಯ ಸಂಪ್ರದಾಯದ ಮಾತುಗಳೂ ಇವರ ಆಲೋಚನೆಯಿಂದ ಸ್ಫುಟಗೊಳ್ಳುತ್ತವೆ. ಪೂರ್ವ ಹಾಗೂ ಪಶ್ಚಿಮದ ಕಾವ್ಯ ತತ್ವಾಧ್ಯಯನಗಳಿಂದ ರೂಪುಗೊಂಡ ಡಿ. ವಿ. ಜಿ. ಯವರ ಕಾವ್ಯಮೀಮಾಂಸೆಯಲ್ಲಿ ಪರಂಪರೆಯ ಸತ್ವದಿಂದ ಪುಷ್ಟವಾದ, ನಾವೀನ್ಯ ಮಾತ್ರದಿಂದ ಭಾವವಶವಾಗದ, ಪಾಂಡಿತ್ಯ ಪೂರ್ಣವಾದ ಗಂಭೀರ ವಿಚಾರಸರಣಿಯನ್ನು ಗುರುತಿಸಬಹುದು. ಉತ್ತಮ ಅಭಿರುಚಿ, ಬುದ್ಧಿಯ ಸಮತೂಕ, ಬಾಳಿನ ಶ್ರೇಯಸ್ಸು ಇವುಗಳನ್ನೇ ಗುರಿಯಾಗಿರಿಸಿಕೊಂಡ ಡಿ. ವಿ. ಜಿ. ಯವರ ಕಾವ್ಯಮೀಮಾಂಸೆ ಹಳೆಯದನ್ನೆ ಹೊಸ ರೀತಿಯಲ್ಲಿ ಸ್ಫುಟವಾಗಿ ಪ್ರಕಟಿಸುತ್ತದೆ.
*****
ಪ್ರಕಾಶಕರು: ಕಾವ್ಯಾಲಯ, ಜಯನಗರ, ಮೈಸೂರು
ಪುಟಗಳು: 198
ಬೆಲೆ: 75 ರೂಪಾಯಿಗಳು
ಮುದ್ರಣಗಳು: 1950,1954,1966,1973

ಕಗ್ಗ ರಸಧಾರೆ ಹರಿಸಿದ ಮಹಾಶಯ ಡಿ.ವಿ.ಗುಂಡಪ್ಪನವರು

ಕಗ್ಗ ರಸಧಾರೆ ಹರಿಸಿದ ಮಹಾಶಯ ಡಿ.ವಿ.ಗುಂಡಪ್ಪ

ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡು ಮೊಳೆನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕೆ ಮಣಿಯೊ - ಮಂಕುತಿಮ್ಮ ||

ಈ ಜಗತ್ತಿನಲ್ಲಿರುವ ಪ್ರತಿಯೊಂದು ವಸ್ತುವಿನ ಒಳಗೆ ಮತ್ತು ಹೊರಗೆ ಅದು ಜಡವಸ್ತುವೋ, ಜೀವ ಉಳ್ಳದ್ದೋ ಎಲ್ಲವುಗಳಲ್ಲಿ ಏನೋ ಒಂದು ವಿಶೇಷತೆಯ ಚೈತನ್ಯ ತುಂಬಿಕೊಂಡಿರುತ್ತದೆ. ಅದು ಯಾವುದೇ ರೀತಿಯ ಭಾವನೆಗೆ ಒಳಪಡದೆ ಪ್ರತಿಯೊಂದು ಜೀವಜಂತುವಿಗೂ ಶಕ್ತಿಯನ್ನು ನೀಡುತ್ತಲೇ ಇದೆ.

ಈ ಲೋಕದಲ್ಲಿ ನೆಡೆವ ಎಲ್ಲ ವಿಸ್ಮಯಗಳಿಗೆ ಜಗತ್ತು ಜಡವಾಗಿರುತ್ತದೆ ಅಂತೆಯೇ ಯಾವುದನ್ನೂ ನಾವು ತೂಗಲಾರದಂತ ವಿಶೇಷ ಶಕ್ತಿಯನ್ನೂ ಹೊಂದಿರುತ್ತದೆ ಇಂತಹ ಚೈತನ್ಯಕ್ಕೆ ತಲೆಬಾಗಿ ನಮಿಸು. ಡಿ. ವಿ ಗುಂಡಪ್ಪನವರ ಈ ಕಗ್ಗದ ಸಾಲುಗಳಂತೆ ಪ್ರಕೃತಿ ನಮಗೆ ನೀಡಿದ ಎಲ್ಲಾ ಚೈತನ್ಯಗಳಿಗೆ ನಮಿಸಲೇಬೇಕು
, ಅಂತೆಯೇ ನಮ್ಮೊಂದಿಗೆ ಇಂತಹ ಅದ್ಭುತ ಸಾಲುಗಳನ್ನು ಕೊಟ್ಟಿರುವಂತಹ ಆಧುನಿಕ ಸರ್ವಜ್ಞರಿಗೆ ನಮ್ಮ ನಮನ ಸಲ್ಲಿಸಲೇಬೇಕು.

ಸಾಹಿತ್ಯ ಒಂದು ರೀತಿ ಮನುಷ್ಯನಿಗೆ ಆದರ್ಶಗಳಿದ್ದಂತೆ ಅಲ್ಲದೆ ಯಾವುದೇ ಶತ ಶತಮಾನಗಳ ಸಾಹಿತ್ಯವನ್ನು ನೋಡಿದರೂ ಅಲ್ಲಿ ನಾವು ಕಾಣುವುದು ಸಂಸ್ಕೃತಿ, ಆಧ್ಯಾತ್ಮ, ದಾರ್ಶನಿಕ ಚಿಂತನೆ, ಒಳಿತಲ್ಲಿ ನಡೆಸುವ ಹಾದಿಯ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಇದೇ ರೀತಿ ಆಧುನಿಕ ಬದುಕಿನಲ್ಲಿ ’ಮಂಕುತಿಮ್ಮನ ಕಗ್ಗ’ ಇಂತಹ ಕೃತಿಯ ಮೂಲಕ ನಮ್ಮೆಲ್ಲರಲ್ಲಿ ಸುಸಂಸ್ಕೃತ ಮೌಲ್ಯವನ್ನು ಬಿತ್ತಿದವರು ಡಿ.ವಿ. ಗುಂಡಪ್ಪ.

ತಾಯಿ ಅಲಮೇಲು, ತಂದೆ ವೆಂಕಟರಮಣಯ್ಯನವರ ಮಗನಾಗಿ ೧೮೮೭, ಮಾರ್ಚ್ ೧೭ರಂದು ಕೋಲಾರ ಜಿಲ್ಲೆಯ, ಮುಳಬಾಗಿಲು ತಾಲೂಕಿನ, ದೇವನಹಳ್ಳಿಯಲ್ಲಿ ಜನಿಸಿದರು.  ಇವರು ತಮ್ಮ ಬಾಲ್ಯದಲ್ಲಿಯೇ ಸಂಸ್ಕೃತಾಭ್ಯಾಸದ ಜೊತೆಗೆ  ಇಂಗ್ಲೀಷ್ ಪಾಠವನ್ನು ಕೆ.ವಿ.ರಾಮಸ್ವಾಮಿ ಅಯ್ಯರ್ ಎಂಬುವರ ಬಳಿ ಕಲಿತರು. ಅವರು ಎಲ್. ಎಸ್ ತೇರ್ಗಡೆಯಾದ ನಂತರ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಮೈಸೂರಿನ ಮಹಾರಾಜ ಕಾಲೇಜಿಗೆ ಸೇರಿದರು.

ಆದರೆ ಅವರು ತಮ್ಮ ಮೆಟ್ರಿಕುಲೇಷನ್ ನಲ್ಲಿ ನಪಾಸಾದರು ಅಲ್ಲದೇ ಅದೇ ಸಮಯದಲ್ಲೇ ಅವರ ಅಜ್ಜ ಮತ್ತು ಅಜ್ಜಿ ಸಾವಿನಿಂದ ಊರಿಗೆ ಬಂದವರು ತಿರುಗಿ ಮೈಸೂರಿಗೆ ತೆರಳಲೇ ಇಲ್ಲ. ತದನಂತರ ತಮ್ಮ ವಿದ್ಯಾಭ್ಯಾಸವನ್ನು ಕೋಲಾರದ ಹೈಸ್ಕೂಲಿನಲ್ಲಿ ಕಳೆದರು. ಕೋಲಾರದ ವಿದ್ಯಾಭ್ಯಾಸ ಸಮಯದಲ್ಲಿ ಅಲ್ಲಿ ಚರಿತ್ರೆ ಪಾಠ ಮಾಡುತ್ತಿದ್ದಂತ ಕೃಷ್ಣಸ್ವಾಮಿ ಅಯ್ಯರ್ ರವರು "ಲಾರ್ಡ್ ಮಾರ್ಲ” ಬರೆದಿರುವಂತ ’ಗ್ಲಾಡ್ ಸ್ಟನ್’ ಜೀವನ ಚರಿತ್ರೆಯನ್ನು ಓದಲು ತಿಳಿಸಿದ್ದರು.

ಅಂತೆಯೇ ಡಿ.ವಿ.ಜಿಯವರು ಆ ಪುಸ್ತಕದ ಓದುವಿಕೆಯಿಂದಲೇ ತಮ್ಮ ಜ್ಞಾನದ ಪರಿಧಿಯನ್ನು ಹೆಚ್ಚಿಸಿಕೊಂಡವರು. ಇದೇ ರೀತಿ ತಮ್ಮ ಜ್ಞಾನದ ಬೆಳಕನ್ನು ಬೆಳೆಸುತ್ತ ಬಂದ ಡಿ.ವಿ.ಜಿಯವರು ನಂತರದ ದಿನಗಳಲ್ಲಿ ಎಷ್ಟೋ ಸಂಸ್ಥೆಗಳಿಗೆ ತರ್ಜುಮೆ ಕೆಲಸವನ್ನು ಮಾಡಿ ಬಂದಿದ್ದ ಹಣದಿಂದ ಮತ್ತಷ್ಟು ಪುಸ್ತಕಗಳನ್ನು  ಕೊಂಡು ಓದಲು ಪ್ರಾರಂಭಿಸಿದರು.

ಇನ್ನೂ ಫ್ರೌಢಶಾಲೆಯಲ್ಲಿರುವಾಗ ಗುಂಡಪ್ಪನವರಿಗೆ ಭಾಗೀರಥಿ ಎಂಬವರೊಂದಿಗೆ ಮದುವೆಯಾಗುತ್ತಿದ್ದಂತೆ ಸಂಸಾರದ ಹೊರೆ ಹೊರಬೇಕಾದ ಕಾರಣ ಮುಳಬಾಗಿಲು ಶಾಲೆಯಲ್ಲಿ ಬದಲಿ ಉಪಾಧ್ಯಾಯರಾಗಿ ಸೇರಿಕೊಂಡರು. ಆನಂತರ ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿ ಮುಂದೆ ಬೆಂಗಳೂರಿನಲ್ಲಿ ಕೆಲಸ ಹುಡುಕುತ್ತ ಬಂದವರು ಪತ್ರಿಕೋದ್ಯಮ ವೃತ್ತಿಯನ್ನು ಆಯ್ದುಕೊಂಡರು. ಅಂದಿನ ಸೂರ್ಯೋದಯ ಪ್ರಕಾಶಿಕ, ಮೈಸೂರ್ ಟೈಮ್ಸ್, ವೀರಕೇಸರಿ, ಈವಿನಿಂಗ್ ಮೆಯಿಲ್, ಹೀಗೆ ಹಲವಾರು ಪತ್ರಿಕೆಗಳಲ್ಲಿ ಕೆಲಸಮಾಡಿದರು.

೧೯೦೮ ರಲ್ಲಿ ಪತ್ರಿಕಾ ದಿಗ್ಭಂಧನ ವಿಧಿಸಿದ್ದರಿಂದ ಮದರಾಸಿಗೆ ಹೋಗಿ "ಹಿಂದೂ"  ಮುಂತಾದ ಪತ್ರಿಕೆಗಳಿಗೆ  ಲೇಖನಗಳನ್ನು ಬರೆದರು. ನಂತರ ಬೆಂಗಳೂರಿಗೆ ಹಿಂದಿರುಗಿ ಕನ್ನಡ ಪತ್ರಿಕೆ ‘ಭಾರತಿ’ಯ ಸಹಸಂಪಾದಕತ್ವದಲ್ಲಿ ಕಾರ್ಯ ನಿರ್ವಹಿಸಿದರು. ೧೯೧೨ ರಲ್ಲಿ ಬೆಂಗಳೂರು ನಗರ ಸಭೆಯ ಸದಸ್ಯರಾದರು. ೧೯೧೩ ರಲ್ಲಿ  ವಾರಪತ್ರಿಕೆ ‘ಕರ್ನಾಟಕ’ ಪ್ರಾರಂಭಿಸಿ ನಂತರ ಹೊರ ತಂದ ಪತ್ರಿಕೆ ಇಂಡಿಯನ್ ರಿವ್ಯೂ ಆಫ್ ರಿವ್ಯೂಸ್‌. ೧೯೨೩ ರಲ್ಲಿ ಹೊರತಂದ ಪತ್ರಿಕೆ ‘ಕರ್ನಾಟಕ ಜನಜೀವನ ಮತ್ತು ’ಅರ್ಥ ಸಾಧಕ’. ಹೀಗೆ ಅಂದಿನ ರಾಜಕೀಯ ವಿದ್ಯಮಾನಗಳ ಕುರಿತು ಸತತವಾಗಿ ಪತ್ರಿಕೆಗಳಿಗೆ ಬರೆಯುತ್ತಲೇ ಬಂದರು.

 ಡಿ.ವಿ.ಜಿ ಅವರು ೧೯೨೬ ರಿಂದ ೧೯೪೦ವರೆಗೆ ಮೈಸೂರು ನ್ಯಾಯವಿಧಾಯಕ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು ಇಷ್ಟೆಲ್ಲಾ ಕೆಲಸಗಳ ಒತ್ತಡವಿದ್ದರೂ ತಮ್ಮ ಸಾಹಿತ್ಯಾಸಕ್ತಿಯನ್ನು ಮಾತ್ರ ಕಡೆಗಣಿಸಲಿಲ್ಲ ಇದೇ ಸಮಯದಲ್ಲಿ ರಾಜಕೀಯ ವಿಶ್ಲೇಷಣೆ, ತತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧಗಳು, ಕವನ ಸಂಕಲನಗಳು, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಕೃತಿಗಳನ್ನು ಹೊರತಂದಿದ್ದಾರೆ.

೧೯೩೪ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಆಯ್ಕೆಗೊಂಡ ನಂತರ ಇಲ್ಲಿ ಹಲವು ಬದಲಾವಣೆಗಳನ್ನು ತಂದರು. ಕನ್ನಡ ಶಿಕ್ಷಕರಿಗೆ ತರಬೇತಿ ಶಿಬಿರ, ಗಮಕ ತರಗತಿಗಳು ಮುಂತಾದ ಹಲವಾರು ಚಟುವಟಿಕೆಗಳನ್ನು ಕಾರ್ಯಗತಗೊಳಿಸಿದರು. ಕರ್ನಾಟಕ ವೃತ್ತ ಪತ್ರಕರ್ತರ ಸಂಘ, ಶೀಘ್ರಲಿಪಿಕಾರರ, ಬರಹಗಾರರ ಸಂಘ, ಪಂಡಿತ ಮಂಡಲ, ರಾಮಾಯಣ ಮಹಾಭಾರತಾದಿ ಪ್ರಕಾಶನ ಸಮಿತಿ ಮುಂತಾದವುಗಳು ಇವರ ನೇತೃತ್ವದಲ್ಲಿ ನಡೆಯತೊಡಗಿದವು.
ಡಿ.ವಿ.ಜಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಯಶಸ್ಸು ಕಂಡಂತಹವರು. ಇವರು ಆಧುನಿಕ ಸರ್ವಜ್ಞ ಎಂದೇ ಜನಮನ್ನಣೆ ಪಡೆದವರು.

ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ, ಶ್ರೀರಾಮ ಪರೀಕ್ಷಣಂ, ಅಂತಃಪುರಗೀತೆ, ಗೀತಾ ಶಾಕುಂತಲಾ, ನಿವೇದನ, ಉಮರನ ಒಸಗೆ, ವಸಂತ ಕುಸುಮಾಂಜಲಿ ಕವನಸಂಕಲನಗಳನ್ನುಹೊರತಂದಿದ್ದಾರೆ.ಮಕ್ಕಳ ಸಾಹಿತ್ಯವಾಗಿ ಬೆಕ್ಕೋಜಿ, ನಾಟಕಗಳಾಗಿ ಕನಕಾಲಕಾ, ಸಾಹಿತ್ಯ ಶಕ್ತಿ, ಸಂಸ್ಕೃತಿ, ಕಾವ್ಯ ಸ್ವಾರಸ್ಯ ಮುಂತಾದ ನಿಬಂಧಗಳು, ಕನ್ನಡ ಮ್ಯಾಕ್‌ಬೆತ್‌, ವಿದ್ಯಾರಣ್ಯ ವಿಜಯ, ಜಾಕ್‌ಕೇಡ್, ಪ್ರಹಸನತ್ರಯೀ, ಪರಶುರಾಮ, ತಿಲೋತ್ತಮ ಹಾಗೂ ವಿದ್ಯಾರಣ್ಯ ವೃತ್ತಾಂತದಾದಾಬಾಯಿ ನವರೋಜಿ ಮುಂತಾದ ಜೀವನ ಚರಿತ್ರೆಗಳನ್ನು ಸಹ ಬರೆದಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಹಾಗೂ ೧೯೭೪ರಲ್ಲಿ "ಪದ್ಮಭೂಷಣ" ಪ್ರಶಸ್ತಿ ಹೀಗೆ ಹಲವು ಸನ್ಮಾನಗಳನ್ನು ಡಿ.ವಿ.ಜಿ ಅವರು ತಮ್ಮದಾಗಿಸಿಕೊಂಡಿದ್ದಾರೆ. ಶ್ರೀಯುತ ಡಿ.ವಿ. ಗುಂಡಪ್ಪನವರು ತಮ್ಮ ಜೀವನದಲ್ಲಿ ಆದ ಅನುಭವಗಳನ್ನು ಈ ಮಂಕುತಿಮ್ಮನ ಕಗ್ಗದಲ್ಲಿ ತುಂಬಿದ್ದಾರೆ. ಅವರ ಈ ಕೃತಿಯು "ಕನ್ನಡದ ಭಗವದ್ಗೀತೆ" ಎಂದೇ ಪ್ರಸಿದ್ಧವಾಗಿದೆ.

ಆರ್ಥಿಕವಾಗಿ ಕಷ್ಟದಲ್ಲಿದ್ದಾಗ
, ಅನಾರೋಗ್ಯವಾಗಿದ್ದಾಗಲೂ ಡಿವಿಜಿಯವರು ವಿನೋದ ಭಾವದಲ್ಲೇ ಬೆಳೆದವರು. ಒಮ್ಮೆ ಸಾರ್ವಜನಿಕರು ಒಂದು ಲಕ್ಷ ರೂಪಾಯಿ ಸಂಗ್ರಹಿಸಿ ಅವರಿಗೆ ಕೊಡಲು ಸಮಾರಂಭ ಏರ್ಪಡಿಸಿದ್ದರು. ಅದನ್ನು ಮುಟ್ಟದೆ ಗೋಖಲೆ ಸಾರ್ವಜನಿಕ ಸಂಸ್ಥೆಗೆ ದೇಣಿಗೆಯಾಗಿ ನೀಡಿದರು. ಇದು ಡಿವಿಜಿಯವರ ದೊಡ್ಡತನ.

"ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳ ಸಮಹಿತವಾದ ಸಾಹಿತ್ಯ" ಎಂದು ಹಾ.ಮಾ.ನಾಯಕರು ಹೇಳಿದ್ದಾರೆ. ಡಿ.ವಿ.ಜಿಯವರು ಆಧುನಿಕ ಭಾರತೀಯ ಸಾಹಿತ್ಯದ ಅಶ್ವತ್ಥ ವೃಕ್ಷವಿದ್ದಂತೆ ತಮ್ಮನ್ನು ತಾವು ಸಾಹಿತ್ಯ, ಸಂಸ್ಕೃತಿ, ಪತ್ರಿಕೋದ್ಯಮ, ಆಡಳಿತ ಹಾಗೂ ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದರ ಜೊತೆಗೆ ಸಮಗ್ರವಾಗಿ ಸಮದೂಗಿಸಿಕೊಂಡು ಬಂದವರು. ತಮ್ಮ ೧೭ನೇ ವಯಸ್ಸಿನಲ್ಲಿ ಇಂಗ್ಲೀಷ್ ಭಾಷೆಯನ್ನು ಸರಾಗವಾಗಿ ಮಾತನಾಡಿ ಅದೇ ಭಾಷೆಯಿಂದ ಹಲವು ಲೇಖನಗಳ ತರ್ಜುಮೆ ಮಾಡಬೇಕೆಂದರೆ ಒಂದು ಸಾಹಸದ ಕೆಲಸವೇ ಸರಿ.

ಡಿ.ವಿ. ಗುಂಡಪ್ಪನವರು ೧೯೭೫ ಅಕ್ಟೋಬರ್ ೭ರಂದು ಇಹಲೋಕ ತ್ಯಜಿಸಿದರೂ ಅವರ ಸಾಹಿತ್ಯ ಮುಖೇನ ಎಲ್ಲ ಮನಮನೆಗಳಲ್ಲಿ ನೆಲೆಸಿದ್ದಾರೆ.

ವಿಶದಮಾದೊಂದು ಜೀವನಧರ್ಮದರ್ಶನವ |
ನುಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು ||
ನಿಸದವಂ ಗ್ರಂಥಾನುಭವಗಳಿಂದಾರಿಸುತ |
ಹೊಸೆದನೀ ಕಗ್ಗವನು – ಮಂಕುತಿಮ್ಮ ||

ಜೀವನ ಎಂದ ಮೇಲೆ ಕಷ್ಟ-ಸುಖ, ಒಳಿತು-ಕೆಡುಕು ಎಲ್ಲವೂ ಇದ್ದೇ ಇರುತ್ತದೆ. ಕಷ್ಟವನ್ನು ಸುಖವನ್ನಾಗಿ, ಕೆಟ್ಟದ್ದನ್ನು ಒಳ್ಳೆಯದನ್ನಾಗಿ ಪರಿವರ್ತಿಸುವ ಪ್ರಯತ್ನವೇ ಜೀವನದ ಜೀವಾಳವಾಗಬೇಕು ಎಂದು ಹೇಳುತ್ತಾರೆ ಅಂತೆಯೇ ಡಿ.ವಿ.ಜಿಯವರ ಬದುಕಿನ ದೃಷ್ಟಿಯೂ ಕೂಡ ಅದೇ. ಇಂತಹ ದಾರ್ಶನಿಕರ ಉಪದೇಶಗಳು ಸದಾ ಮನುಕುಲದ ಯಶಸ್ಸಿಗೆ ಕಾರಣವಾಗುತ್ತವೆ.


-ಸುಗುಣ ಮಹೇಶ್, ಕುವೈತ್

Friday 22 March 2013

ಕಗ್ಗ ರಸಧಾರೆ ಪುಸ್ತಕ ಬಿಡುಗಡೆ ಸಮಾರಂಭ

ಕಗ್ಗ ರಸಧಾರೆ ಪುಸ್ತಕ ಬಿಡುಗಡೆ ಸಮಾರಂಭದ ವರದಿ
ಕಗ್ಗ ರಸಧಾರೆಯಲ್ಲಿ ರವಿ ತಿರುಮಲೈ ಮತ್ತು ಅಜ್ಜ!!! - ಶ್ರೀಕಾಂತ್ ಮಂಜುನಾಥ್
"ಅಜ್ಜ ಅಜ್ಜ" 

ಗಂಧರ್ವ ಕಿನ್ನರರು ದೇವಪುರುಷರು ಕೂಗುತ್ತ ಓಡಿಬರುತ್ತಿದ್ದರು

"ಯಾರಪ್ಪ...ಯಾಕಪ್ಪ... ಏನಾಯ್ತು?

"ಅಜ್ಜ ಹೊರಟಾಗ ಎಲ್ಲಿಗೆ ಅಂತ ಕೇಳಬಾರದು ನಿಮ್ಮ ಹಿಂದೆಯೇ ಬರುತ್ತೇವೆ.. "

"ಅಲ್ಲಪ್ಪಾ ನಿಮ್ಮ ಜೊತೆಯಲ್ಲಿ ಕಳೆದ ೩೮ ವಸಂತಗಳಿಂದ ನಿಮ್ಮ ಜೊತೆಯಲ್ಲೇ ಇದ್ದೀನಿ.. ಹೀಗೆ ಸುಮ್ಮನೆ ಒಂದು ಸಣ್ಣ ವಾಕಿಂಗ್ ಮಾಡಿ ಬರುತ್ತೇನೆ"

"ಸರಿ ಅಜ್ಜ..ಹೋಗಿ ಬನ್ನಿ ನಾವು ಇಲ್ಲೇ ನಿಮಗಾಗಿ ಕಾಯುತ್ತಿರುತ್ತೇವೆ"

ಹೋಗಿ ಸುಮಾರು ಘಂಟೆಗಳಾದರೂ ಅಜ್ಜ ಬರಲಿಲ್ಲ... ಸ್ವರ್ಗದಲ್ಲಿ ಗಾಬರಿ ಶುರುವಾಯಿತು.. ಎಲ್ಲರೂ ಚಿಂತಾಕ್ರಾಂತರಾಗಿ ಶತಪಥ ತಿರುಗುತಿದ್ದರು

ಕಿನ್ನರ ಪುರುಷನೊಬ್ಬ ಏದುಸಿರು ಬಿಡುತ್ತ.. "ಅಜ್ಜ ಬರುತಿದ್ದಾರೆ ಅಜ್ಜ ಬರುತಿದ್ದಾರೆ" ಎಂದು ಕೂಗುತ್ತ ಒಳಗೆ ಓಡಿ ಬಂದ!

ಎಲ್ಲರೂ ಅಜ್ಜನನ್ನು ಸುತ್ತುವರಿದು "ಅಜ್ಜ ಎಲ್ಲಿ ಹೋಗಿದ್ದಿರಿ... ನಿಮಗೆ ಈಗ ೧೨೬ ವರ್ಷ.... ನೀವು ತುಂಬಾ ದೂರ ನೆಡೆದು ಹೋಗಬೇಕೆಂದಿದ್ದರೆ ನಮ್ಮ ಪುಷ್ಪಕ ವಿಮಾನವನ್ನು ತೆಗೆದುಕೊಂಡು ಹೋಗಬಹುದಿತ್ತಲ್ಲವೇ?.. ನಮಗೆ ಗಾ.... "
ಅಷ್ಟರಲ್ಲಿಯೇ ಅಜ್ಜ ಅವರ ಮಾತನ್ನು ಅರ್ಧಕ್ಕೆ ನಿಲ್ಲಿಸಿ 

"ಏನಿಲ್ಲಪ್ಪ ಹೀಗೆ ನಡೆಯುತ್ತ ಹೋಗುತಿದ್ದೆ.. ಒಂದು ಕಾಗದದ ತುಂಡಿನ ಆಹ್ವಾನ ಪತ್ರಿಕೆ ತೇಲುತ್ತ ಬಂದು ಇಲ್ಲಿ ಬಿದ್ದಿತ್ತು..

ಇಲ್ಲಿಂದ ಮುಂದೆ ವರದಿಯನ್ನು ಶ್ರೀಕಾಂತ್ ಅವರ ಶ್ರೀ-ಪ್ರಪಂಚ ಬ್ಲಾಗಿನಲ್ಲಿ ತಪ್ಪದೇ ಓದಿ

Wednesday 20 March 2013

ಡಿ.ವಿ.ಗುಂಡಪ್ಪ - ಹೀಗೊಂದು ಸ್ಮರಣೆ

ಮೊನ್ನೆ ತಾನೇ ಓದಿ ಮುಗಿಸಿದ ಪುಸ್ತಕ, ನೀಲತ್ತಹಳ್ಳಿ ಕಸ್ತೂರಿಯವರ ’ಡಾಡಿ.ವಿ.ಗುಂಡಪ್ಪ - ಜೀವನ ಮತ್ತು ಸಾಧನೆ’. ರೋಮಾಂಚನಗೊಳ್ಳುವಂತಹ ಜೀವನಗಾಥೆ ಈ ಮಹಾಪುರುಷರದು. ಆ ಅನುಭವದ ಫಲಶೃತಿ ಈ ಬರಹ.

ಡಿವಿಜಿ ಯವರದು ಸಾಧಾರಣ ಮನೆತನ. ಮೂಲ ತಮಿಳುನಾಡಿನ ತಿರುಚಿನಾಪೆಳ್ಳಿಯ ಸೀಮೆ. ಸುಮಾರು ೫೦೦ ವರ್ಷಗಳ ಹಿಂದೆ ಹೊಟ್ಟೆಪಾಡಿಗಾಗಿ ವಲಸೆಬಂದ ವೈದಿಕ ಕುಟುಂಬಗಳು, ಕೋಲಾರದ ದೇವನಹಳ್ಳಿ, ಮುಳುಬಾಗಿಲುಗಳ ಕಡೆ ಹರಡಿಕೊಂಡರು.

ಡಿವಿಜಿ ಯವರ ಮುತ್ತಜ್ಜ ದೇವನಹಳ್ಳಿ ತಾಲೂಕಿನ ಸೋಮತ್ತನಹಳ್ಳಿ ಗುಂಡಪ್ಪನವರು. ತಾತ ಲಾಯರ್ ಶೇಷಗಿರಿಯಪ್ಪ. ತಂದೆ ವೆಂಕಟರಮಣಯ್ಯ ಶಾಲಾಮಾಸ್ತರು. ಡಿವಿಜಿ ಯವರು ಬೆಳೆದದ್ದು ಚಿಕ್ಕತಾತ ರಾಮಣ್ಣ, ತಾಯಿಯ ತಾಯಿ ಸಾಕಮ್ಮ ಹಾಗೂ ಸೋದರ ಮಾವ ತಿಮ್ಮಪ್ಪನವರ (ಕಗ್ಗದ ಪೀಠಿಕೆಯ ತಿಮ್ಮಗುರು) ಆಶ್ರಯದಲ್ಲಿ.

ಇವರೊಂದಿಗೆ, ಎಳೆತನದಲ್ಲಿ ಡಿವಿಜಿ ಯವರ ಮೇಲೆ ಪ್ರಭಾವ ಬೀರಿದವರೆಂದರೆ, ಮುಳುಬಾಗಿಲಿನ ಶ್ರೀಮದಾಂಜನೇಯ ಸ್ವಾಮಿ (ಕೇತಕಿ ವನ). ಅವಿಭಕ್ತ ಕುಟುಂಬ. ಹಳ್ಳಿಯ ಪರಿಸರ. ಜಾತಿ, ಕಟ್ಟಳೆಗಳು ಬೇರೆ ಬೇರೆ ಇದ್ದರೂ, ಸಂಘರ್ಷಕ್ಕಿಂತ ಸೌಹಾರ್ದವೇ ಹೆಚ್ಚಾದ ಜೀವನ. ನಾಲ್ಕುದಿನದಾಟದಲ್ಲಿ ವಿರಸ ಜಗಳ ತಂಟೆ ತಕರಾರುಗಳೇಕೆ ಎಂಬ ಹೊಂದಾಣಿಕೆ, ಸರಳ, ನೇರ, ಸಹಜ ಸಂತೃಪ್ತಿಮಯ ಬದುಕು. ಇದು ಡಿವಿಜಿ ಬೆಳೆದ ವಾತಾವರಣ. ಈ ಎಲ್ಲ ಮೌಲ್ಯಗಳೇ ಅವರ ಜೀವನದ ಸಾರ.

ಬಾಲ್ಯದಲ್ಲಿ ಮಗ್ಗಿ ಹೇಳುವುದೊಂದು ಪರಿಪಾಟಲಾಗಿತ್ತು ಡಿವಿಜಿಯವರಿಗೆ. ೧ ರಿಂದ ೧೧ ಹೇಗೋ ನಿಭಾಯಿಸುತ್ತಿದ್ದು, ತದನಂತರ ಮಾವನವರ ಸಹಾಯದಿಂದ (ಅವರು ನಿಧಾನಕ್ಕೆ ಕಿವಿಯಲ್ಲಿ ಉಸಿರುತ್ತಿದ್ದುದನ್ನು, ಡಿವಿಜಿಯವರು ಜೋರಾಗಿ ಕೂಗುತ್ತಿದ್ದರಂತೆ) ತಂದೆಯವರ ಕೋಪದಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಮಗ್ಗಿಗೆ ಕಷ್ಟಪಡುತ್ತಿದ್ದ ಡಿವಿಜಿಯವರು, ಜೀವನದ ಸಂಕೀರ್ಣ ಲೆಕ್ಕವನ್ನೇ ಕಗ್ಗದಲ್ಲಿ ಅಷ್ಟು ಸುಂದರವಾಗಿ ಬಿಡಿಸಿರುವುದನ್ನು ಕಂಡಾಗ, ಲೆಕ್ಕ ತಪ್ಪುವ ಪಾಳಿ ನಮ್ಮದಾಗುತ್ತದೆ!

ಡಿವಿಜಿ ಯವರೇ ಹೇಳುವಂತೆ ಅವರು ತೇರ್ಗಡೆಯಾದದ್ದು, ಎರಡೇ ಪರೀಕ್ಷೆಗಳಲ್ಲಿ, ೧೮೯೮-೯೯ ರಲ್ಲಿ ಕನ್ನಡ ಎಲ್.ಎಸ್ (ಲೋಯರ್ ಸೆಕೆಂಡರಿ) ಹಾಗೂ ೧೯೦೦ ರಲ್ಲಿ ಇಂಗ್ಲಿಷ್ ಎಲ್.ಎಸ್. ತಂದೆಯವರ ಸ್ನೇಹಿತ ರಸೂಲ್ ಖಾನ್ ಅವರ ಒತ್ತಾಯದಂತೆ ಮೈಸೂರಿನ ಮಹಾರಾಜ ಕಾಲೇಜಿನ ಹೈಸ್ಕೂಲ್ ಗೆ ಸೇರಿದರು.

ಬಾಪೂ ಸುಬ್ಬರಾಯರು, ಮೈಸೂರು ವೆಂಕಟಕೃಷ್ಣಯ್ಯ (ತಾತಯ್ಯ) ನವರು, ಬೆಳವಾಡಿ ದಾಸಪ್ಪ ಮುಂತಾದ ಉಪಾಧ್ಯಾಯರ ಪ್ರಭಾವ ಹಾಗೂ ಪ್ರೋತ್ಸಾಹ. ಆದರೆ ತಾತ ರಾಮಣ್ಣ, ಅಜ್ಜಿ ಸಾಕಮ್ಮನವರ ನಿಧನ, ಪ್ಲೇಗ್ ಹಾವಳಿ, ಕಳವು, ಬೇಸಾಯ ಹಾನಿ, ವ್ಯವಹಾರ ನಷ್ಟ - ಸಾಲು ಸಾಲಾಗಿ ಬೆನ್ನಟ್ಟಿ ಬಂದ ಅನರ್ಥಗಳಿಂದ ಮೈಸೂರಿನಿಂದ ಹಿಂದಿರುಗಿದರು.

ಸ್ವಲ್ಪ ಸ್ಥಿತಿ ಸುಧಾರಿಸಿದ ನಂತರ, ಪೂಜೆ, ಪಾಠ ಹೇಳಿಕೊಂಡು, ಕೋಲಾರದ ಪ್ರೌಢಶಾಲೆಯಲ್ಲಿ ವ್ಯಾಸಂಗ ಮುಂದುವರೆಸಿದರು. ಉಪಾಧ್ಯಾಯ ಹನುಮಂತರಾಯರು ಡಿವಿಜಿಯವರ ಕನ್ನಡ ಭಾಷೆಗೆ ಸಾಣೆ ಹಿಡಿದರೆ, ಆರ್.ವಿ.ಕೃಷ್ಣಸ್ವಾಮಯ್ಯರ್ (ಆರ್.ಕೆ.ನಾರಾಯಣ್ ಅವರ ತಂದೆ) ಇಂಗ್ಲಿಷ್ ಭಾಷೆಗೆ ಹೊಳಪು ನೀಡಿದರು.

ಆದರೆ ಈ ಬಾರಿ ವಿಧಿ ಖಾಯಿಲೆಯ ರೂಪದಲ್ಲಿ ಕಾಡಿತ್ತು. ಮುಂದಿನ ವರ್ಷ ಮುಂದುವರೆಸಿದ ವಿದ್ಯಾಭ್ಯಾಸದಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ, ಕನ್ನಡ, ಗಣಿತ ಕೈಕೊಟ್ಟವು. ತೇರ್ಗಡೆಯಾಗಲಿಲ್ಲ. ಸಂಸ್ಕೃತವನ್ನೂ ಇವರು ಶಾಲೆಯಲ್ಲಿ ಕ್ರಮಬದ್ಧವಾಗಿ ಅಭ್ಯಾಸ ಮಾಡಲಿಲ್ಲ. ಮನೆಯ ವಾತಾವರಣದಲ್ಲಿ ಪರಿಚಯವಾದ ಸಂಸ್ಕೃತಕ್ಕೆ ತಮ್ಮ ಸ್ವಂತ ಆಸಕ್ತಿ, ಪರಿಶ್ರಮ ಸೇರಿಸಿ ಕಲಿತರು.

ಛಪ್ಪಲ್ಲಿ ವಿಶ್ವೇಶ್ವರ ಶಾಸ್ತ್ರಿಗಳು ಮತ್ತು ಹಾನಗಲ್ಲು ವಿರೂಪಾಕ್ಷ ಶಾಸ್ತ್ರಿಗಳಲ್ಲಿ ಸ್ವಲ್ಪ ಅಭ್ಯಾಸ ಮಾಡಿದರು. ಡಿವಿಜಿ ಯವರು ಪಡೆದುಕೊಂಡದ್ದಲ್ಲೆವೂ ಸ್ವಪ್ರಯತ್ನದಿಂದಲೇ. ಡಿವಿಜಿ ಯವರು ಯಾವ ಕಾಲೇಜನ್ನೂ ಕಾಣಲಿಲ್ಲ. ಯಾವ ಪಂಡಿತ ಪರೀಕ್ಷೆಯನ್ನೂ ಮಾಡಲಿಲ್ಲ. ಆದರೆ ಅವರ ಕೃತಿಗಳು ಕಾಲೇಜು ಉನ್ನತ ವ್ಯಾಸಂಗಕ್ಕೆ ಪಠ್ಯಗಳಾದವು. ಅವರು ಪಂಡಿತ ಪರೀಕ್ಷಕರಾದರು. ಇವರ ಜೀವನ, ವಿದ್ಯೆಗೂ ವಿದ್ವತ್ತಿಗೂ ಕೊಂಡಿಯಿಲ್ಲ, ಪದವಿಗೂ ಪಾಂಡಿತ್ಯಕ್ಕೂ ಸಂಬಂಧವಿಲ್ಲ ಎನ್ನುವುದನ್ನು ರುಜುವಾತು ಮಾಡುವಂತಿದೆ....ಮಂದೆ ಓದಿ....ವಿನುತ ಅವರ ನನ್ನಾಲೋಚನೆ ಬ್ಲಾಗ್ ನಲ್ಲಿ

Monday 18 March 2013

DV Gundappa's 126th Birthday Celebrations on March 17,2013 at Gokhale Institute, Bangalore













Saturday 16 March 2013

DVG in Magazines

ಡಿವಿಜಿ  




ಡಿವಿಜಿ ಅಸ್ತಂಗತರಾದಾಗ ಸುಧಾ ವಾರಪತ್ರಿಕೆಯ ಸಂಪಾದಕೀಯದಲ್ಲಿ ಪ್ರಕಟವಾದದ್ದು (ಕೃಪೆ: ಶ್ರೀ ಎಮ್. ಎ. ವೆಂಕಟೇಶ್)

About DVG- old paper cutting

Saturday 9 March 2013

ಮಂಕುತಿಮ್ಮನ ಕಗ್ಗದ ಮೇಲೆ ಬಂದಿರುವ ಇತರೆ ಪುಸ್ತಕಗಳು

ಡಿವಿಜಿ ಅವರ ಮಹೋನ್ನತ ಕೃತಿ ಮಂಕುತಿಮ್ಮನ ಕಗ್ಗದ ಮೇಲೆ ಬಂದಿರುವ ಇತರೆ ಲೇಖಕರು ಬರೆದಿರುವ ಪುಸ್ತಕಗಳು:

*****