Sunday 14 April 2019

ಶ್ರೀರಾಮನಿಗೆ ಸೀತಾವಿವಾಸನವು ಕರ್ತವ್ಯವಾಗಿತ್ತೆ?


ಶ್ರೀರಾಮನು ರಾಜ್ಯವಾಳುತ್ತಿದ್ದಾಗ ಹುಟ್ಟು ಹೊಣೆ ಯಾವುದೂ ಗೊತ್ತಿಲ್ಲದ ಒಂದು ಬೀದಿಮಾತಿಗೆ ಆತನು ತಲೆಬಾಗಿ, ಸೀತಾದೇವಿಯನ್ನು, ಅದೂ ಆಕೆ ಗರ್ಭಿಣಿಯಾಗಿದ್ದಾಗ, ಕಾಡಿಗೆ ಕಳುಹಿಸಿದ್ದು ಸರಿಯೆ ? ಈ ಪ್ರಶ್ನೆಯನ್ನೆತ್ತುವ ಜನ ಇದ್ದಾರು. ಆ ಪ್ರಶ್ನೆಯ ಹಿಂದುಗಡೆ ಎರಡು ಮನೋಭಾವಗಳು ಕಾಣಬರುತ್ತವೆ :

(೧) ಆಜ್ಞೆಯು ಕಷ್ಟದ್ದಾಗಿದ್ದರೆ ಆಜ್ಞಾಪಕನು ಕ್ರೂರಿಯಾಗಿರಬೇಕು.
(೨) ಆ ಕಷ್ಟವು ನಮಗೆ ಅಸಹನೀಯವಾದದ್ದೆನಿಸಿದರೆ ಅದು ಮಿಕ್ಕೆಲ್ಲರಿಗೂ ಅಸಹನೀಯವಾಗಿಯೇ ಆಗಿರಬೇಕು.

ಈ ಎರಡು ಭಾವನೆಗಳೂ ಅವಶ್ಯಸಂಗತಗಳಲ್ಲ. ಆಜ್ಞೆಯ ಸ್ವಭಾವವು ಆಜ್ಞಾಪಕನ ಕರುಣೆ ಕ್ರೂರತೆಗಳನ್ನವಲಂಬಿಸತಕ್ಕದ್ದಲ್ಲ; ಅದು ಆಜ್ಞಪ್ತನ ಇಷ್ಟಾನಿಷ್ಟಗಳನ್ನೂ ಅವಲಂಬಿಸಲಾರದು. ಅದು ಸಂದರ್ಭಸ್ವಭಾವದಿಂದ ಉತ್ಪನ್ನವಾಗುತ್ತದೆ. ಆ ಸಂದರ್ಭಕ್ಕೆ ಸಂಬಂಧಪಟ್ಟ ಜನರೊಟ್ಟಿನ ಕ್ಷೇಮ ಸಮಾಧಾನ ವಿಚಾರದಿಂದ ಅಲ್ಲಿಯ ಕರ್ತವ್ಯವು ನಿಶ್ಚಿತವಾಗುತ್ತದೆ. ಅಂಥಾದ್ದು ಯುಕ್ತವಾದ ಆಜ್ಞೆ, ಒಂದು ರೋಗದ ಸಂದರ್ಭದಲ್ಲಿ ಕರ್ತವ್ಯವು ವೈದ್ಯನ ಇಚ್ಛೆಯಂತಲ್ಲ ; ರೋಗಿಯ ಅಭಿಪ್ರಾಯದಂತೆಯೂ ಅಲ್ಲ. ಅಲ್ಲಿ ಬೇಕಾದದ್ದು ಶಾಸ್ತ್ರಸಮ್ಮತವಾದ ಚಿಕಿತ್ಸೆ. ರೋಗವು ವೈದ್ಯ ವ್ಯಾಧಿತರಿಬ್ಬರಿಂದಲೂ ಸ್ವತಂತ್ರವಾದ ವಸ್ತು, ಶಾಸ್ತ್ರವೂ ಅಂಥಾದ್ದೇ. ರೋಗದ ಸ್ವಭಾವದಿಂದ ಶಾಸ್ತ್ರಾನುಸಾರವಾಗಿ ಚಿಕಿತ್ಸಾನಿರ್ಣಯ.- ರಾಜಪದಸ್ಥನ ಕರ್ತವ್ಯವು ಅವನ ಸಹಜಕಾರುಣ್ಯ ಕಟುತೆಗಳಿಂದ ನಿರ್ಣಿತವಾಗತಕ್ಕದ್ದಲ್ಲ; ಅವನ ಪ್ರಜೆಯಲ್ಲವರಿವರ ಆಗ್ರಹ ಅಭಿಮಾನಗಳಿಂದಲೂ ಅದು ನಿಶ್ಚಿತವಾಗತಕ್ಕದ್ದಲ್ಲ. ಸಮಗ್ರ ಪ್ರಜಾಜನದ ಕ್ಷೇಮ ಸಮಾಧಾನ ವಿಚಾರಮಾತ್ರದಿಂದಲೇ ಅವನಿಗೆ ಕರ್ತವ್ಯನಿರ್ಣಯ, ಅದೇ ಅವನ ಆಜ್ಞೆಗೆ ಉತ್ಪತ್ತಿ ಸ್ಥಾನ. ಅದು ಯಾರಿಗೆ ಅನುಕೂಲವಾಗಲಿ, ಯಾರಿಗೆ ಪ್ರತಿಕೂಲವಾಗಲಿ, ಅದು ತನ್ನಿಂದ ಯಾವ ತ್ಯಾಗವನ್ನಾದರೂ ಬಯಸಲಿ, ಅದರಿಂದ ಪ್ರಜಾಸಂತೃಪ್ತಿಯಾಗುವುದಾದರೆ ಅದು ಅವನಿಗೆ ಧರ್ಮ ಕರ್ತವ್ಯ. ಈ ಕರ್ತವ್ಯ ಧರ್ಮಕ್ಕೆ ಬಾಧೆ ಬಾರದಂತೆ ದಯೆದಾಕ್ಷಿಣ್ಯಗಳು ನಡೆಯಬಹುದು. ಆದರೆ ದಯೆದಾಕ್ಷಿಣ್ಯಗಳು ಮುಖ್ಯವಾಗಿ, ಧರ್ಮಕರ್ತವ್ಯವು ಗೌಣವಾಗಬಾರದು.

ಈ ನೀತಿಸೂತ್ರವು ಎಲ್ಲ ಸಾರ್ವಜನಿಕ ಕಾರ್ಯಸ್ತರಿಗೂ ಅನ್ವಯಿಸಬೇಕಾದದ್ದು. "ನಾನು ದೇಶಸೇವೆ ಮಾಡಿಯೇನು”, “ನಾನು ಪ್ರಜಾಹಿತಕ್ಕಾಗಿ ಬದುಕತಕ್ಕವನು' ಎಂದು ಯಾರು ಸಂಕಲ್ಪಿಸಿರುತ್ತಾನೋ ಅವನಿಗೆ ಸ್ವಸುಖತ್ಯಾಗವೂ ನಷ್ಟಸ್ವೀಕಾರವೂ ಕರ್ತವ್ಯವಾಗುವ ಸಂದರ್ಭಗಳು ಆಗಾಗ ಬರುತ್ತವೆ. ಅಂಥವರಿಗೆಲ್ಲ ಶ್ರೀರಾಮಚಂದ್ರನ ಆದರ್ಶವು ಧೈಯವಾಗಬೇಕಾದದ್ದು.
ಧರ್ಮಸಂಕಟದ ಪ್ರಕರಣ ಎಂತಿದ್ದರೂ ಸುಲಭವಾಗಿ ಪರಿಹಾರವಾಗತಕ್ಕದ್ದಲ್ಲ. ಆಗ ನಮ್ಮ ಬುದ್ಧಿಗೆ ತೋರುವ ಅನೇಕ ಪರಿಹಾರಮಾರ್ಗಗಳಲ್ಲಿ ಒಂದು ಪೂರ್ತಿತೃಪ್ತಿಕರವಾಗಿಯೂ ಇನ್ನೊಂದು ತೀರ ಅತೃಪ್ತಿಯದಾಗಿಯೂ ಇರುವುದಿಲ್ಲ. ಅನ್ಯಾಯದ ಶಂಕೆಯೂ ಅನಿಷ್ಟಫಲವೂ ಎರಡೂ ಎರಡು ಮಾರ್ಗಗಳಲ್ಲಿಯೂ ಅಷ್ಟೋ ಇಷ್ಟೋ ಬೆರೆತುಕೊಂಡು ಇದ್ದೇ ಇರುತ್ತವೆ. ಹೀಗೂ ಕಷ್ಟ, ಹಾಗೂ ಕಷ್ಟ. ಇಂಥಾ ವಿಷಯದಲ್ಲಿ ಹೆಚ್ಚು ಅನ್ಯಾಯದ ದಾರಿ ಯಾವುದು, ಕಡಮೆ ಅನ್ಯಾಯದ್ದಾವುದು ? ಹೆಚ್ಚು ಕಷ್ಟವೆತ್ತಕಡೆ, ಕೊಂಚ ಕಷ್ಟವ್ಯಾವಕಡೆ ?-ಇದಿಷ್ಟೇ ನಮ್ಮ ವಿವೇಕಕ್ಕಿರುವ ಅವಕಾಶ, ಸ್ಟೇಚ್ಛಾಪ್ರಾಪ್ತಿಯೆ, ಸ್ವಜನತೃಪ್ತಿಯೆ ?

ಈಗ ಈ ಪ್ರಕರಣಕ್ಕೆ ಹೊಂದಿಕೊಂಡಂತೆ ಮೂರು ಐರೋಪ್ಯ ಚಾರಿತ್ರಕ ಪ್ರಕರಣಗಳನ್ನು ನೋಡೋಣ.

೧) ಜ್ಯೂಲಿಯಸ್ ಸೀಸರ್
ಜ್ಯೂಲಿಯಸ್ ಸೀಸರನು (Julius Caesar) ಕ್ರಿಸ್ತಪೂರ್ವದ ಮೊದಲನೆಯ ಶತಮಾನದಲ್ಲಿ ರೋಮ್ (Rome) ರಾಜ್ಯದ ರಾಷ್ಟ್ರನಾಯಕನಾಗಿದ್ದು ಅನೇಕ ಮಹಾಕಾರ್ಯಗಳನ್ನು ಸಾಧಿಸಿದ ಪರಾಕ್ರಮಿ, ರಾಜ್ಯಧುರಂಧರ ಮತ್ತು ಪ್ರತಿಭಾವಂತ ಲೇಖಕ. ಆ ಜಗತ್ಪಸಿದ್ದ ಪುರುಷನನ್ನು ಕುರಿತು ಪ್ರಸಿದ್ಧ ಐತಿಹಾಸಿಕವಾದ ಪ್ಲೂಟಾರ್ಕ್ (Plutarch) ಬರೆದಿರುವುದರಲ್ಲಿ ಹೀಗಿದೆ :
ರೋಮ್ ಪಟ್ಟಣದಲ್ಲಿ ಕ್ಲೋಡಿಯಸ್ (Clodius) ಎಂಬ ಶ್ರೀಮಂತ ಯುವಕನಿದ್ದ. ಅವನು ಹಣವಂತ, ರೂಪವಂತ, ವಾಗ್ಮಿ; ಆದರೆ ದುಷ್ಟ ಮತ್ತು ವ್ಯಭಿಚಾರಿ, ಅವನಿಗೆ ಜೂಲಿಯಸ್ ಸೀಸರನ ಹೆಂಡತಿ ಪೋಲಿಪಿಯ (Pompeia) ಎಂಬಾಕೆಯ ಮೇಲೆ ಅತಿಯಾದ ಅನುರಾಗ, ಆಕೆ ಅದನ್ನೇನೂ ನಿರಾಕರಿಸಿರಲಿಲ್ಲ. ಆದರೆ ಸೀಸರನ ತಾಯಿ ಆರೇಲಿಯ (Aurelia) ಸರ್ಪಗಾವಲಾಗಿದ್ದದ್ದರಿಂದ ಕೋಡಿಯಸ್ಸಿನ ಯೋಚನೆಗೆ ಅವಕಾಶವಾಗದೆಹೋಯಿತು. ಒಂದು ದಿನ ಒಂದು ದೇವತೋತ್ಸವದ ಸಂದರ್ಭದಲ್ಲಿ ಸೀಸರನ ಮನೆಯಲ್ಲಿ ಸ್ತ್ರೀಜನ ನೆರೆದಿದ್ದರು. ಅದು ಕೇವಲ ಸ್ತ್ರೀಯರು ರಹಸ್ಯದಲ್ಲಿ ಮಾಡುವ ಪೂಜಾಕಲಾಪ, ಕ್ಲೋಡಿಯಸ್ಸನು ಆ ರಾತ್ರಿ ಸ್ತ್ರೀವೇಷ ಧರಿಸಿ,
ತಾನು ಗಾಯಕಿಯೆಂದು ಹೇಳಿಕೊಂಡು, ಒಬ್ಬ ಸೇವಕಿಯ ಸಹಾಯದಿಂದ ಆ ಸ್ತ್ರೀ ಸಮೂಹದಲ್ಲಿ ತಾನೂ ಸೇರಿಕೊಳ್ಳಬೇಕೆಂದು ಬಂದ. ಆ ಸಂಗತಿಯನ್ನು ಅಲ್ಲಿ ಆರೇಲಿಯಳ ಒಬ್ಬ ಸೇವಕಿ ಕಂಡುಹಿಡಿದು ಪ್ರಕಟಪಡಿಸಿದಳು. ಬೊಬ್ಬೆಯೆದ್ದಿತು. ಮಾರನೆಯ ದಿನ ಊರೆಲ್ಲಾ ಅದೇ ಗುಲ್ಲು, ಕ್ಲೋಡಿಯಸ್ಸನನ್ನು ನ್ಯಾಯಸ್ಥಾನದಲ್ಲಿ ವಿಚಾರಣೆಗೆ ತರಿಸಬೇಕಾಯಿತು. ಊರು ಎರಡು ಕಕ್ಷಿಯಾಗಿ ಒಡೆಯಿತು. ಕೋಡಿಯಸ್ಸನು ಐಶ್ವರ್ಯವಂತನೂ ಪ್ರಬಲನೂ ಆಗಿದ್ದದ್ದರಿಂದ ಒಂದು ಗುಂಪು ಅವನ ಕಡೆಯಿತ್ತು. ಆಗ ಜೂಲಿಯಸ್ ಸೀಸರನು ತನ್ನ ಪತ್ನಿಯನ್ನು ಪರಿತ್ಯಾಗಮಾಡಿದ (Divorce). ಇಲ್ಲಿ 'ಸೀಸರ್” ಎಂಬ ಪದವು ಅಧಿಕಾರ ಪದವಿಯ ಹೆಸರು ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು. ಅದು ರಾಜ, ನವಾಬ್' ಮೊದಲಾದ ಮಾತುಗಳಂತೆ ಪ್ರಭುಸ್ಥಾನವನ್ನು ಸೂಚಿಸುವ ಪದ. “ಸೀಸರ್' ಎಂಬುದು ಕ್ರಮೇಣ 'ಚಕ್ರವರ್ತಿ'' ಎಂಬುದಕ್ಕೆ ಸಮಾನ ಪದವಾಯಿತು. ನ್ಯಾಯಸ್ಥಾನದಲ್ಲಿ ಜೂಲಿಯಸ್ ಸೀಸರನು ಸಾಕ್ಷ್ಯ ಕೊಡಬೇಕಾಯಿತು. ಆಗ ಆತನು ಕ್ಲೋಡಿಯಸ್ಸಿನ ಮೇಲಣ ದೋಷಾರೋಪಣೆಯ ವಿಷಯ ತನಗೆ ಏನೂ ತಿಳಿಯದೆಂದು ಉತ್ತರಕೊಟ್ಟ. ಹಾಗಾದರೆ ತಾನು ಪತ್ನಿತ್ಯಾಗ ಮಾಡಿದ್ದೇಕೆ ? ಆಗ ಜೂಲಿಯಸ್ ಹೇಳಿದ ಮಾತು ಗಾದೆಯಾಗಿದೆ. ಅದು ಹೀಗೆಂದು : “ಸೀಸರನ ಪತ್ನಿಯ ಪರಿಶುದ್ಧತೆಯ ವಿಷಯದಲ್ಲಿ ಸಂಶಯವೂ ಇರಕೂಡದೆಂಬುದು ನನ್ನ ಆಶಯ.” ಹೀಗೆ ಹುಟ್ಟಿದ್ದು ಗಾದೆ : - Caesar's wife should be above suspicion. “ರಾಷ್ಟ್ರನಾಯಕನ ಭಾರ್ಯೆ ಸಂದೇಹಕ್ಕೆ ಮೇಲ್ಪಟ್ಟಿರಬೇಕು.”

ರಾಜನಿಗೆ ಮೊದಲು ಬೇಕಾದ ಬಲ ಪ್ರಜಾವಿಶ್ವಾಸ, ವಿಶ್ವಾಸವೆಂದರೆ ಸಂಪೂರ್ಣವಾದ ನಂಬಿಕೆ. ಇಂಥ ನಂಬಿಕೆಯಿಲ್ಲದಿದ್ದರೆ ಯಾವ ಅಧಿಕಾರಿಯ ಕೆಲಸವೂ ಸಫಲವಾಗದು. ಗುರು ಹೇಳುವ ಪಾಠವು ಸಾರ್ಥಕವಾಗಬೇಕಾದರೆ ಮೊದಲು ಅವನಲ್ಲಿ ಶಿಷ್ಯರಿಗೆ ವಿಶ್ವಾಸವಿರಬೇಕು. ವೈದ್ಯ ಕೊಡುವ ಔಷಧ ಸಾರ್ಥಕವಾಗಬೇಕಾದರೆ ಅವನಲ್ಲಿ ರೋಗಿಗೆ ವಿಶ್ವಾಸವಿರಬೇಕು. ಜಡ್ಡಿ ಕೊಡುವ ತೀರ್ಮಾನ ಅಂಗೀಕೃತವಾಗಬೇಕಾದರೆ ಅವನಲ್ಲಿ ಕಕ್ಷಿಗಾರನಿಗೆ ವಿಶ್ವಾಸವಿರಬೇಕು. ಹೀಗೆ ಎಲ್ಲ ಮಾನವವ್ಯಾಪಾರಗಳಲ್ಲಿಯೂ ಕಾರ್ಯವು ಸಫಲವಾಗಬೇಕಾದರೆ ಕಾರ್ಯಕರ್ತನು ಮೊದಲು ಸಂಪಾದಿಸಿಕೊಳ್ಳಬೇಕಾದ ಬಲವು ಆ ಕಾರ್ಯಕ್ಕೆ ಸಂಬಂಧಪಟ್ಟವರ ವಿಶ್ವಾಸ, ರಾಜಪದವಿಯಲ್ಲಿರುವವನು ತನ್ನ ಕಾರ್ಯವನ್ನು ಸಾರ್ಥಕವಾಗುವಂತೆ ನಡೆಸಬೇಕಾದರೆ ಅವನು ಮೊದಲು ಸಂಪಾದಿಸಬೇಕಾದ್ದು ಪ್ರಜಾವಿಶ್ವಾಸವನ್ನು, ವೇದ ಹೇಳುತ್ತದೆ :
ಸಾಂಗ್ರಹಣೇಷ್ಠಾ ಯಜತೇ 1 : ಇಮಾಂ ಜನತಾಗ್ಂ ಸಂಗ್ರಸ್ಥಾನೀತಿ || ತೈತ್ತಿರೀಯ ಬ್ರಾಹ್ಮಣ, ೩ : ೮-೧
“ರಾಜನು ಮೊದಲು ಜನಸಂಗ್ರಹ ಮಾಡಿಕೊಳ್ಳಬೇಕು. ಅದಕ್ಕಾಗಿ ಸಾಂಗ್ರಹಣೀ ಎಂಬ ಯಾಗ.”
ರಾಜನಿಗೆ ಮನೆ, ಮಡದಿ, ಬಂಧುಗಳು, ಸ್ನೇಹಿತರು ಇವರೆಲ್ಲರೂ ಇರುತ್ತಾರೆ. ಆ ಎಲ್ಲರ ವಿಷಯದಲ್ಲಿಯೂ ಅವನಿಗೆ ಕರ್ತವ್ಯಗಳಿರುತ್ತವೆ. ಆದರೆ ಆ ಯಾವ ಕರ್ತವ್ಯವೂ
ಪ್ರಜಾವಿಶ್ವಾಸಸಂಪಾದನೆಗಿಂತ ದೊಡ್ಡದಲ್ಲ. ಪ್ರಜಾವಿಶ್ವಾಸಕ್ಕೆ ಕುಂದಾಗದಂತೆ ನಡೆಯಬೇಕಾದವು. ಆ ಇತರ ಕರ್ತವ್ಯಗಳು, ಆ ಇತರ ಕರ್ತವ್ಯದಿಂದ ಪ್ರಜಾವಿಶ್ವಾಸಪೋಷಣೆಗೆ
ಅಡ್ಡಿಯಾಗುವುದಾದಲ್ಲಿ ಪ್ರಚಾಚಿಂತನೆಯೇ ಪ್ರಬಲವಾಗಬೇಕಾದದ್ದು.

೨. ಎಂಟನೆಯ ಎಡ್ವರ್ಡ್ ದೊರೆಯ ತ್ಯಾಗ:
ಬ್ರಿಟನ್ ದೇಶದ ದೊರೆ ಎಂಟನೆಯ ಎಡ್ವರ್ಡ್ ಎಂಬಾತನು ೧೮೯೪ರಲ್ಲಿ ಹುಟ್ಟಿ, ೧೯೧೧ರಿಂದ ಯುವರಾಜನಾಗಿದ್ದು, ತನ್ನ ತಂದೆಯಾದ ಐದನೆಯ ಜಾರ್ಜ್‌ ದೊರೆ ಕಾಲಾಧೀನನಾದ ಬಳಿಕ, ೧೯೩೬ನೆಯ ಜನವರಿ ೨೦ರಂದು ಸಿಂಹಾಸನಕ್ಕೆ ಬಂದನು. ಆಗಿಗೆ ಆತ ಅವಿವಾಹಿತನಾಗಿದ್ದ. ಆ ಬಳಿಕ ಆತನಿಗೆ ಮಿಸೆಸ್ ಸಿಂಪ್ಸನ್ ಎಂಬಾಕೆಯನ್ನು ಮದುವೆಯಾಗುವ ಮನಸ್ಸಾಯಿತು. ಆಕೆ ಅಮೆರಿಕದವಳು. ವ್ಯಾಲಿಸ್‌ ವಾರ್‌ಫೀಲ್ಡ್ ಎಂಬುದು ಆಕೆಯ ಕನ್ಯಾದಶೆಯ ಹೆಸರು. ೧೯೧೬ರಲ್ಲಿ ಆಕೆ ಸ್ಪೆನ್ಸರ್ ಎಂಬಾತನನ್ನು ಮದುವೆಯಾಗಿ ೧೯೨೩ರಲ್ಲಿ ದಾಂಪತ್ಯವಿಚ್ಛೇದನ ಮಾಡಿಸಿಕೊಂಡಿದ್ದಳು ; ಮತ್ತೆ ೧೯೨೮ರಲ್ಲಿ ಸಿಂಪ್ಸನ್ ಎಂಬಾತನನ್ನು ಮದುವೆಯಾಗಿ ೧೯೩೬ರ ಅಕ್ಟೋಬರಿನಲ್ಲಿ ಆ ಸಂಬಂಧವನ್ನೂ ಹರಿಸಿಕೊಂಡಿದ್ದಳು. ಇಂಥ ಹೆಂಗಸನ್ನು ರಾಣಿಯಾಗಿ ಅಂಗೀಕರಿಸಲು ಬ್ರಿಟನ್ ದೇಶದ ಮತಧರ್ಮ ಸಂಸ್ಥೆಗಳೂ, ಮುಖ್ಯ ಮುಖ್ಯ ರಾಜಕೀಯ ವರ್ಗಗಳೂ, ಪ್ರಜಾಸಾಮಾನ್ಯರಲ್ಲಿ ಬಹುಸಂಖ್ಯಾತರೂ ಸಿದ್ದರಾಗಿಲ್ಲವೆಂದೂ, ಬ್ರಿಟನ್ನಿನ ಸಹವರ್ತಿ ರಾಷ್ಟ್ರಗಳಾದ ಕೆನಡಾ ಆಸ್ಟ್ರೇಲಿಯಾ ಮೊದಲಾದ ದೇಶಗಳವರು ಸಹ ಅಂಥಾ ರಾಜವಿವಾಹಕ್ಕೆ ಸಮ್ಮತಿಸಲಾರರೆಂದೂ ಬ್ರಿಟನ್ನಿನ ಅಂದಿನ ಮುಖ್ಯಮಂತ್ರಿ ಬಾಲ್ಡ್ವಿನ್ ಎಂಬಾತನು ದೊರೆಗೆ ವಿಹಿತ ಕ್ರಮದಲ್ಲಿ ಅರಿಕೆ ಮಾಡಿದ. ಆಗ ದೊರೆಗೆ ಮೂರು ಬಗೆಯ ನಡವಳಿಕೆಗಳಲ್ಲಿ ಯಾವುದಾದರೊಂದು ಕರ್ತವ್ಯವಾಯಿತು :

- (೧) ರಾಜಪದವಿಯನ್ನು ತ್ಯಾಗಮಾಡಿ, ಪ್ರಜಾಕೋಟಿಯ ಒಬ್ಬ ಸಾಮಾನ್ಯಪ್ರಜೆಯಂತೆ, ತಾನು ಮೆಚ್ಚಿ ತನಗೊಲಿದಿದ್ದ ಹೆಣ್ಣನ್ನು ಮದುವೆ ಮಾಡಿಕೊಂಡು ಬಾಳುವುದು ;(೨) ಆ ಹೆಣ್ಣನ್ನು ಕೈಬಿಟ್ಟು, ಸಿಂಹಾಸನಾಧಿಕಾರವನ್ನುಳಿಸಿಕೊಂಡು ರಾಜ್ಯವನ್ನಾಳುವುದು ; (೩) ಸಿಂಹಾಸನವನ್ನು ಬಿಟ್ಟುಕೊಡದೆ, ಆ ಹೆಣ್ಣನ್ನೂ ಕೈಬಿಡದೆ, ಮೊಂಡಾಟದಿಂದ ರಾಜನಾಗಿ ರಾಜ್ಯಕ್ಟೋಭೆಗೂ ಜನತೆಯಲ್ಲಿ ಅಂತರ್ಯುದ್ದಕ್ಕೂ ದಾರಿಮಾಡುವುದು." 

ಎಂಟನೆಯ ಎಡ್ವರ್ಡ್ ದೊರೆ ಮೂರನೆಯ ದಾರಿಯನ್ನು ಹಿಡಿದಿದ್ದಿದ್ದರೆ ಉತ್ತರೋತ್ತರ ಆತನ ಪದವಿಯ ಮೂಲಕ್ಕೇ ಅಪಾಯ ತಗುಲಬಹುದಾಗಿತ್ತೆಂಬ ಮಾತು ನಿಜ. ಆದರೆ ಅಷ್ಟರೊಳಗಾಗಿ ಆತನು ಹಟವನ್ನೂ ಸೇಡನ್ನೂ ತೀರಿಸಿಕೊಳ್ಳಬಹುದಾಗಿತ್ತು. ಆತನಲ್ಲಿ ಅಂಥಾ ಹಟ ಸೇಡುಗಳು ಕಾಣಬರಲಿಲ್ಲ. ತಾನೊಲಿದಿದ್ದಾಕೆಯನ್ನು ಬಿಟ್ಟರೆ ತಾನು ಯಥಾಯೋಗ್ಯವಾಗಿ ರಾಜಕಾರ್ಯ ನಡೆಸುವುದು ಅಸಾಧ್ಯವಾದೀತೆಂಬ ಸ್ವಭಾವ ಪರಿಮಿತಿಯ ಗ್ರಹಿಕೆಯಿಂದ ಆತನು ಸಿಂಹಾಸನವನ್ನ ಪರಿಗ್ರಹಿಸಿದನು. ಇದರಲ್ಲಿ ಆತನು ಪ್ರಜಾಭಿಪ್ರಾಯಕ್ಕೂ, ಪ್ರಜಾಕ್ಷೇಮಕ್ಕೂ ಮನ್ನಣೆ ತೋರಿದ್ದು ವ್ಯಕ್ತವಾಗಿದೆ. ಆ ಪ್ರಜಾಭಿಪ್ರಾಯ ತನ್ನ ವ್ಯಕ್ತಿದೃಷ್ಟಿಯಲ್ಲಿ ಸರಿಯಿರಲಿ, ತಪ್ಪಿರಲಿ ಅದು ರಾಜ್ಯದಲ್ಲಿ ಹಾಗಿರುವಾಗ ತಾನು ಅದಕ್ಕೆ ತಲೆಬಾಗತಕ್ಕದ್ದೆಂಬ ತತ್ತ್ವವನ್ನು ಅವನು ಪರಿಪಾಲಿಸದನು. ಆತನ ಮಾತು ಹೀಗಿದೆ.
"You all know the reasons which have impelled me to renounce the Throne, but I want you to understand that in making up my mind I did not forget the country which, as Prince of Wales and lately as King, I have for 25 years tried to serve...I have found it impossible to carry the heavy burden of responsibility and discharge my duties as King as I would wish to do, without the help and support of the woman I love.... The decision I have made has been mine and mine alone.
This was a thing I had to judge entirely for myself. The other person most nearly concerned has tried up to the last to persuade me to take a different course. I have made this, the most serious decision of my life, only upon a single thought-of what would in the end be best for all... My brother, with his long training in public affairs and with his fine qualities, will be able to take my place forthwith without interruption or injury to the life and progress of the Empire. And he has one matchless blessing, enjoyed by so many of you, and not bestowed on me, a happy home with his wife and children.
11th December 1936.

ರಾಜಪದವಿಯನ್ನು ತ್ಯಜಿಸಿದ ಬಳಿಕ ಎಡ್ಕರ್ಡ್ ಮಹಾಶಯನು 'ಡ್ಯೂಕ್ ಆಫ್ ವಿಂಡರ್‌” ಎಂಬ ಮಹಾಶ್ರೀಮಂತ ನಾಮಧೇಯವನ್ನು ಅಂಗೀಕರಿಸಿ ತನ್ನಾಕೆಯನ್ನು ಕಾನೂನಿನ ಮೇರೆಗೆ ವಿವಾಹಮಾಡಿಕೊಂಡು ಸಾಮಾನ್ಯ ಜನರಂತೆ ಇದ್ದುಕೊಂಡಿದ್ದಾನೆ. ಶ್ರೀರಾಮನು ಸೀತಾದೇವಿಯನ್ನು ಕಾಡಿಗೆ ಕಳುಹಿಸದೆ ತನ್ನರಮನೆಯಲ್ಲಿರಿಸಿಕೊಂಡಿದ್ದಿದ್ದರೆ ಆಕೆಯ ಮೇಲಣ ಅಪವಾದ ಬೇರೂರಿ ಹರಡಿ, ಅದರಿಂದ ಜನತೆಗೆ ರಾಜ್ಯ ನಡೆಸುವವರ ವಿಷಯದಲ್ಲಿ ಗೌರವ ಕಡಮೆಯಾಗುವ ಸಂಭವ ಅಪಾರವಾಗಿತ್ತು. ಅದು ರಾಜ್ಯಕ್ಕೆ ಕೆಡುಕು. ಶ್ರೀರಾಮನು ರಾಜ್ಯವನ್ನು ತಾನೇ ತ್ಯಾಗಮಾಡಿ ಸೀತೆಯೊಡನೆ ವನವಾಸ ಮಾಡಿಕೊಂಡಿರತಕ್ಕದ್ದೆಂದು ನಿಶ್ಚಯಿಸಿದ್ದಿದ್ದರೆ ಆತನಿಗೆ ಬದಲಾಗಿ ಸಿಂಹಾಸನವನ್ನೇರಲು ಭರತನಾಗಲಿ ಲಕ್ಷ್ಮಣನಾಗಲಿ ಶತ್ರುಘ್ನನಾಗಲಿ ಒಪ್ಪುತ್ತಿದ್ದವರಲ್ಲ ; ಇದು ಆತನಿಗೆ ಚೆನ್ನಾಗಿ ತಿಳಿದುಬಂದಿತ್ತು ; ಮತ್ತು ಆ ಮಾರ್ಗದಿಂದ ಸೀತೆಯ ಮೇಲಣ ಅಪವಾದವೇನೂ ಕಡಮೆಯಾಗುತ್ತಿರಲಿಲ್ಲ.

೩. ಮಾರ್ಗ್ರೆಟ್ ರಾಜಕುವರಿಯ ತ್ಯಾಗ:
* ಇಂಗ್ಲೆಂಡಿನ ಮಹಾರಾಣಿ ಎರಡನೆಯ ಎಲಿಸಬೆತ್ ರಾಣಿಯ ತಂಗಿ ಮಾರ್ಗ್ರೆಟ್ ರಾಜಕುವರಿ ೧೯೩೦ರಲ್ಲಿ ಹುಟ್ಟಿದವಳು. ಆಕೆ ಆ ದೇಶದ ಸಿಂಹಾಸನಕ್ಕೆ ಕಾನೂನುಮೇರೆಗೆ ಅಂಗೀಕೃತರಾದ ಉತ್ತರಾಧಿಕಾರಿಗಳ ಪೈಕಿ ೧೯೫೫ರಲ್ಲಿ ಮೂರನೆಯ ಸ್ಥಾನದಲ್ಲಿದ್ದಳು. ಆಕೆ ೧೯೫೫ರಲ್ಲಿ ಪೀಟರ್‌ಟೌನ್‌ಸೆಂಡ್ ಎಂಬಾತನನ್ನು ಮದುವೆಯಾದಾಳೆಂದು ಸುದ್ದಿ ಹಬ್ಬಿತ್ತು. ಆದರೆ ಆತನ ಪೂರ್ವಚರಿತ್ರೆ ಇಂಗ್ಲೆಂಡಿನ ಮತಧರ್ಮ ಸಂಸ್ಥೆಗೂ ಮಹಾಜನದಲ್ಲಿ ಬಹುಮಂದಿಗೂ ಅಭಿಮತವಾಗತಕ್ಕದ್ದಾಗಿರಲಿಲ್ಲ. ರಾಜ್ಯಾಧಿಕಾರದ ಸಂಭವವುಳ್ಳವರಿಗೆ ವಿವಾಹಾದಿ ವೈಯಕ್ತಿಕ ವಿಷಯಗಳಲ್ಲಿ ಸಹ ಇಂಗ್ಲೆಂಡಿನ ಶಾಸನವಿಧಿಯಿಂದಲೂ ಲೋಕರೂಢಿಯಿಂದಲೂ ಕೆಲವು ಕಟ್ಟುಪಾಡುಗಳು ಸಂಗತಗಳಾಗಿವೆ. ಅದಕ್ಕೆ ಮನ್ನಣೆ ಕೊಟ್ಟು, ಮಾರ್ಗರೆಟ್ ರಾಜಕುವರಿ ತನ್ನ ಸ್ವಂತ ಇಷ್ಟವನ್ನು ದೇಶಾರಾಧನೆಗಾಗಿ ಆಹುತಿ ಕೊಟ್ಟಳು. ಆಕೆ ೧೯೫೫ರ ಅಕ್ಟೋಬರ್ ೩೧ರಲ್ಲಿ ಪ್ರಕಟಗೊಳಿಸಿದ ಹೇಳಿಕೆ ಈ ರೀತಿ ಇದೆ :
"I have decided not to marry Group Captain Peter Townsend. I have been aware that, subject to my renouncing my rights of succession, it might have been possible for me to contract a civil marriage. But mindful of the Church's teaching that Christian marriage is indissoluble, and conscious of my duty to the Commonwealth, I have resolved to put these considerations before any others.”
(ಶ್ರೀ ಡಿವಿಜಿ- ರಾಮಪರೀಕ್ಷಣಂ - ಅನುಬಂಧ)