Monday 13 November 2023

ಮೋಹಿನಿಗೆ - ಕೇತಕೀವನ - ಡಿವಿಜಿ

ಕಸವಾಯಿತೆನ್ನೊಲುಮೆ, ಕಾಲ ಧೂಳೆನ್ನ ಬಾಳ್‍, 
ಪರಿಹಾಸಕೀಡಾಯಿತೆನ್ನ ತಪನೆ. 

ಇನ್ನುಮೆಲೆ ಮೋಹಿನಿಯೆ ನಿನ್ನ ಕಂಗಳ 
ಹೊಳಪ ಕಂಡೆನ್ನ ಕಂಗಳರಳವುವದೇಕೆ? 
ಇನ್ನುಮಾ ನಿನ್ನ ನಗುದನಿಯ ಕೇಳಿದೊಡೆನ್ನ 
ಹೃದಯವೆನ್ನನೆ ಮರೆತು ಕುಣಿವುದೇಕೆ? 
ಇನ್ನುಮೆನ್ನಯ ಜೀವ ನಿನ್ನ ಜೀವಕೆ ಜೋಡಿ 
ತಾನೆನುತೆ ನಿನ್ನ ಬಳಿ ಸುಳಿವುದೇಕೆ? 

ಅಹ, ಏಂ ಮಾಹೆಯೋ ಪಿಡಿದೆನ್ನನೆಳೆಯುತಿಹುದು; 
ಒಂದಾತ್ಮವೆಂತೊ ಮತ್ತೊಂದಕ್ಕೆ ಗಾಳವಹುದು; 
ಈ ಜಗದ ಕಣ್ಣಮುಚ್ಚಾಲೆಯಾಟದಲಿ, ಮಗುವೆ, 
ಅರಸಿ ಬಂದೊಡನಾಡಿಯೊಳು ನಿನಗೆ ಮುನಿಸು ತರವೆ?

1 comment:

  1. ಅರಿಷಡ್ವರ್ಗಗಳಲ್ಲಿ ಮೋಹವು ಜೀವನದ ದಿಕ್ಕನ್ನು ಜಗ್ಗಿ ಹಿಡಿದೆಳೆದು ಅಳ್ಳಾಡಿಸುತ್ತದೆ.
    ಕಾಮಾತ್ ಕ್ರೋಧಃ! ಕ್ರೋಧಾತ್ ಭವತಿ ಸಂಮೋಹಃ! ಮೋಹದ ಬೀಜ ಕಾಮ. ಕಾಮನೆಗಳು ಪೂರಯಿಸದಿದ್ದಾಗ ನರಕದ ದಾರಿಯಾದ ಕ್ರೋಧ. ಪರಿಣಾಮ ಸಂಮೋಹಿನಿಯ ಬಲೆಯೊಳಗೆ ಸಿಲುಕುವ ಪಾತಾಳದ ಕಮರಿ.
    ಮೋಹಿನಿಯ ವಶವರ್ತಿಯಾಗಿ ಪ್ರೀತಿ, ವಾತ್ಸಲ್ಯ, ಅಕ್ಕರೆ, ಒಲುಮೆ, ಪ್ರೇಮಗಳೆಲ್ಲ ಕಾಲಕಸಕ್ಕಿಂತ ಕಡೆಯಾದವು. ಸಾಧನೆಯ ತಪವೆಂಬುದು ನಗೆಗೀಡಾಯಿತು.
    ಹೇ ಮೋಹಿನಿಯೇ! ಇನ್ನೂ ನಿನ್ನ ಚಂಚಲವಾದ ಕಡೆಗಣ್ಣನೋಟವನ್ನು ಕಂಡು, ಕುಂದಿದ ನನ್ನ ಕಣ್ಣುಗಳರಳುವುದೇ! ಏನೆನ್ನಲಿ ನಿನ್ನ ಲೀಲಾಹಾಸದ ವಿಭ್ರಮವನ್ನು!
    ಮೋಹಿನಿಯೇ, ನಿನ್ನ ಕಿಲಕಿಲದನಿಯನ್ನು ಕೇಳಿದೊಡನೆ ನನ್ನ ಹೃದಯಬಡಿತವು ತಾಳತಪ್ಪುತ್ತಿರುವುದೇಕೆ! ನನಗಿನ್ನೂ ನಿನ್ನ ಮೋಹಜಾಲದ ಸುಳಿಯಿಂದ ತಪ್ಪಿಸಿಕೊಳಲಾಗದಲ್ಲ!
    ನನ್ನ ಜೀವವು ನಿನ್ನಲ್ಲಿ ಒಂದಾಗಲು ಹವಣಿಸುತ್ತಾ ಇಹವ ಮರೆಯುತ್ತಿರುವುದಲ್ಲಾ!
    ಅಬ್ಬಬ್ಬಾ! ಅದೆಂತಹ ಮಾಯೆಯ ಬಲೆಯು ನನ್ನನ್ನು ತನ್ನೆಡೆಗೆ ಸೆಳೆಯುತ್ತಿದೆ! ಬಿಡಿಸಿಕೊಳ್ಳದಾಗಿದೆ.
    ಮೀನಿನ ಬಾಯಿಗೆ ಗಾಳವೋ! ಗಾಳದ ಬಾಯಿಗೆ ಮೀನೋ ಎಂಬುದನ್ನರಿಯೆ! ಮಾಯೆಯನ್ನು ನಾ ಸೆಳೆಯಬಲ್ಲೆನೇ! ಕನಸು!! ಆದರೂ ಪೈಪೋಟಿಗೆ ಬಿದ್ದು ಕಣ್ಣುಮುಚ್ಚಾಲೆಯಲ್ಲೇ ಕಾಲಸವೆಯುತ್ತಿದೆ. ಜಗತ್ತೇ ಕಣ್ಣುಮುಚ್ಚಾಲೆಯಾಟದ ಅಂಗಳ. ನಾನು ಕಣ್ಣು ಮುಚ್ಚಿಸಿಕೊಳ್ಳುವೆನೋ! ಓಡಾಟದಲಿ ತಪ್ಪಿಸಿಕೊಳ್ಳುವೆನೋ! ಹಿಡಿಯಬಂದವರ ವಶವರ್ತಿಯೋ ಅರಿಯದಾಗಿದೆ.
    ಮೋಹಿನಿಯೇ, ನಿನ್ನನ್ನರಸಿ ಬಂದ ನನ್ನ ಬಗೆಗೇಕೆ ನಿನಗೀತೆರನಾದ ಮುನಿಸು!
    ಮೋಹಿನಿಯೆಡೆಗೆ ಧಾವಿಸಿದಷ್ಟೂ ಮೋಹಿನಿಯು ಮಾಯಾಜಿಂಕೆಯಾಗಿ ಹಾರುತ್ತಾ ಹಾರುತ್ತಾ 'ನೀನು ನನ್ನ ಗೆಲ್ಲಲಾರೆ' ಎಂದು ಸವಾಲು ಹಾಕುವಂತೆ ಓಡುತ್ತಲೇ ಇರುತ್ತಾಳೆ! ಕಣ್ಣುಮುಚ್ಚಾಲೆಯ ಕೂಸು ಓಡಿಸುತ್ತಲೇ ದಣಿಯುತ್ತಿದೆ.
    ಭಾವಾನುವಾದ- ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

    ReplyDelete