Sunday 19 November 2023

ಒಂದು ಕಾಗದ - ಕೇತಕೀವನ - ಡಿವಿಜಿ

ತಪ್ಪೆನ್ನದಿರಬಹುದು
ಒಪ್ಪಿಕೊಳ್ಳುವೆನು :
ನಿನ್ನ ಸಿಟ್ಟದರಿಂದ
ತಣ್ಣಗಾಗುವುದೆ?

ಆ ಮಹಾತಪ್ಪೇನು?
ಪ್ರೇಮದುಬ್ಬರವೆ?
ಅದಕೆ ಕಾರಣವೇನು
ಎದೆಕುದಿದ ಕಾವೆ?

ಬಿಸಿಲೇರಿ
ಹಸಿರೊಣಗಿ
ವಸುಧೆ ಕಂಗೆಡಲು
ಗಗನ ಮಳೆಗರೆಯದಿರೆ
ಜಗಮುಳಿಯದಿಹುದೆ?
ಹಸಿವೇರಿ
ಬಸವಳಿದು
ಹಸುಳೆಯಳುತಿರಲು
ತಾಯಿ ಪಾಲೆರೆಯದಿರೆ
ಬಾಯ ಮುಚ್ಚುವುದೆ?

ಪ್ರೀತಿಯೇಂ ದುಷ್ಕೃತಿಯೆ?
ತಾತ್ಸಾರವೊಪ್ಪೆ?
ಆತುರತೆಯಪಕೃತಿಯೆ?
ಉತ್ಸಾಹ ತಪ್ಪೆ?

ತಪ್ಪದೇನಾಗಿರಲಿ,
ಕ್ಷಮೆಯ ಬೇಡಿದೊಡೆ
ದರ್ಪವನೆ ಕಾರುತ್ತ
ದುಮಗುಟ್ಟುತಿಹುದು.

ದೋಷವನೆ ನೆನೆನೆನೆದು
ರೋಷ ಚಿಮ್ಮುವುದು-
ತಪ್ಪು ಅದುಮಲ್ಲವೋ?
ಮಮತೆಗದು ಸರಿಯೋ?

ದಯೆಯ ಯಾಚಿಸಿದವಗೆ
ನಯ ತೋರೆಯೇಕೆ?
ಮನ್ನಣೆಯು ಸಲುವ ಕಡೆ
ಕಣ್ಣು ಕಿಡಿಯೇಕೆ?
ನಗುನುಡಿಯ ನುಡಿವ ಕಡೆ
ಮೊಗ ಖಡ್ಗವೇಕೆ?

ಇಬ್ಬರೊಂದಾದ ಕಡೆ
ಹುಬ್ಬುಗಂಟೇಕೆ?

ಮರೆತೆ, ನೀನೆಲ್ಲ ಹಳೆಯೊಲುಮೆಗಳ ಮರೆತೆ;
ಒರುವರೊರುವರನರಸಿ ಬಳಸಿದುದ ಮರೆತೆ;
ಹಿಂದಿನಾ ಸ್ನೇಹಬಂಧಗಳ ನೀಂ ಮರೆತೆ;
ಅಂದು ನಾವಾಡಿದಾಟಗಳೆಲ್ಲ ಮರೆತೆ;
ಆ ಮೋಹಲೀಲೆಯೇನಾ ಕೇಳಿಯೇನು!
ಆ ಮೈಯ ಮರಸಿದ್ದ ಹೊಂಗನಸದೇನು!
ಆ ಸರಸವೀಕ್ಷೆಯೇನಾ ಹಸಿತವೇನು!
ಮೀಸಲೊಬ್ಬರಿಗೊಬ್ಬರೆನುತಿದ್ದುದೇನು!

ಆ ಅಗಲಿಕೆಗಳೇನು! ಆ ಆಪ್ತವೇನು!
ಆ ಅಂಕಿತಗಳೇನು! ಆ ಹಂಬಲೇನು!
ಮರಳಿ ನಾಂ ಸೇರ್ದಂದು ಸಂಭ್ರಮವದೇನು!
ಎರಡೊಡಲು ಒಂದು ಬಾಳೆಂದ ಕಥೆಯೇನು!
ಮರೆತೆ ನೀನಾ ಮೋಹದನುಭವವನೆಲ್ಲ;
ಮರೆತೆ ನೀನಾ ಅಮೃತಘಳಿಗೆಗಳನೆಲ್ಲ;
ಸರಿಪಾಲು ಪಡೆದು ಸುಖಸಾಹಸದಿ ನಾವು
ಬೆರೆತಿದ್ದುದನು ಮರೆವುದಲ್ಲವೋ ತಪ್ಪು?
ಬಹುಕಾಲ ಬೆಳಸಿದಾ ಪ್ರೇಮವಲ್ಲಿಯನು
ಕಹಿಮನದೆ ನೀಂ ಕಡಿವುದಲ್ಲವೋ ತಪ್ಪು?

ತಪ್ಪೆನ್ನದಿರಲಿ
ಒಪ್ಪು ನಿನದಿರಲಿ
ಮರುಗಿ ಬಂದವನ
ತೊರೆಯದಿರು ಸಖನ.

ಚೆಲುವ ನಿನಗಿತ್ತವನು,
ಕಳೆಯನಿತ್ತವನು,
ಒಳ್ತನವನಿತ್ತವನು,
ಗೆಲವನಿತ್ತವನು.

ಏಕೆ ಕೊಡನೆನಗಾಗಿ ನಿನಗೆ ಮೃದುಮನವ?
ಏಕೆ ತೋರಿಸನು ನಿನಗೆನ್ನೆದೆಯ ನೋವ?
ಪ್ರೇಮ ಕೊರಗುವುದು ಮಾರ್‍ಪ್ರೇಮ ದೊರೆಯದಿರೆ
ಭೂಮಿ ಸೊರಗುವುದು ದಿವ ಮಳೆಯ ಸುರಿಯದಿರೆ

ಚಂದಿರನ ಪಿಡಿಯೆ ಕಡಲೆದ್ದು ಕುಣಿಯುವುದು
ಸುಂದರತೆಯಿಂದೆನ್ನ ಹೃದಯ ಕೆರಳುವುದು.

ಕೆರಳುವುದು ತಪ್ಪೊ?
ಕೆರಳಿಪುದು ತಪ್ಪೊ?
ಚೆಲುವಿಂದ ಕೆರಳು
ಕೆರಳಿಂದ ನರಳು.

ರೂಪಕಾಂತಿಯ ಜೊತೆಗೆ
ಕೋಪವಿರಬೇಕೆ?
ರಮಣೀಯತೆಯ ನಡುವೆ
ಕ್ಷಮೆಯಿಲ್ಲವೇಕೆ?
ತಾಳು ತಾಳುಮೆಯ
ಕೇಳು ಕೆಳೆನುಡಿಯ.

ನೋಡು ಸೌಮ್ಯದಲಿ
ನಿನ್ನ ನೆನಪಿನಲಿ
ಹರಿಯುತಿಹುದಿಲ್ಲಿ ಸಂತಸದೊಂದು ಹೊನಲು

ನೋಡು ನೇಹದಲಿ
ಎನ್ನ ಹೃದಯದಲಿ
ಮೊರೆಯುತಿಹುದಿಲ್ಲಿ ಅನುರಾಗದಿಂಗಡಲು.

ನೀನೆನ್ನ ಬಾಳ್ಗೆಲ್ಲ ರಾಣಿಯಾಗಿರುವೆ
ಬಾಳ ಸೊಗಸೆನಿಸು
ನೀನೆನ್ನೆದೆಯ ಕಡಲ ವರುಣನಾಗಿರುವೆ
ಆಳು ನೀನೊಲಿದು.

ನೀನು ಬಿಸಿಯುಸಿರೆ-ತಳಮಳಗಳಲ್ಲಿ
ನೀನು ಸಿಡಿಲಿರಿಯೆ-ತೆರೆ ಮೊರೆತವಲ್ಲಿ
ನೀನು ನಗುತೊಲಿಯೆ-ಕುಣಿತ ಹಾಡಲ್ಲಿ
ನೀನೊಲಿದು ನಲಿಯೆ-ಶಾಂತಿ ಸುಖವಲ್ಲಿ.

ಎನ್ನ ಮನ ನಿನ್ನಡಿಗೆ ದಾಸನಾಗಿಹುದು
ಮನ್ನಿಸುತ ನೀನದನು ಧನ್ಯನಾಗಿಪುದು.

ಈ ಮಾತ ನಂಬು
ಅದೆ ಪ್ರೀತಿಯಿಂಬು
ಅದೆ ನೀತಿತುಂಬು.

******************************

ಒಂದು ಕಾಗದ
ಕೇತಕೀವನ - ಡಿ.ವಿ.ಜಿ.
~~~~~~~~~~
ಪ್ರೇಯಸಿಯ‌ ಮುನಿಸಿಂದ ಕಸಿವಿಸಿಗೊಂಡ ಪ್ರಿಯಕರನು, "ತಪ್ಪನ್ನು ಮನ್ನಿಸು" ಎಂದು  ಒಲವನ್ನು ಕಾಪಿಡಲು ಸಂತೈಸಿ ಇನಿಯೆಗೆ ಬರೆದ ಓಲೆ!
   ನಿನ್ನ ಮುನಿಸು  ತಣ್ಣಗಾಗುವುದಾದರೆ 'ತಪ್ಪು ನನ್ನದೇ' ಎಂದು ಒಪ್ಪಿಕೊಳ್ಳುತ್ತೇನೆ. 
      ಪ್ರೇಮದುಬ್ಬರದಲ್ಲಿ  ನಿನಗಾಗಿ ಹಂಬಲಿಸುತ್ತಿರುವ ನನ್ನೆದೆಯ ಕಾವೇ ತಪ್ಪೇ!?
  ಬಿಸಿಲೇರಿ ಹಸಿರೊಣಗಿದ ನೆಲದಂತೆ ಕಂಗೆಟ್ಟಿರುವೆನು. ಎನ್ನೆದೆಯ ಕಾವಿಗೆ ತಂಪನ್ನೆರೆವ ಮಳೆಹನಿಯ ಸಿಂಚನಕ್ಕಾಗಿ ಹಂಬಲಿಸುತ್ತಾ ಬಸವಳಿದಿರುವೆ. ಕಾದಿರುವ ಭೂಮಿಗೆ ಮಳೆಹನಿಗಳ ಸೇಚನವಿಲ್ಲದೊಡೆ ಲೋಕದ ಜನವೆಲ್ಲ ಪ್ರಕೃತಿಯ ಬಗೆಗೇ ಮುನಿಸಿಕೊಳ್ಳುವರಲ್ತೆ! 
 ಅಮ್ಮನೆದೆಹಾಲಿಗಾಗಿ ಹಂಬಲಿಸುವ ಹಸುಳೆಯಂತಾಗಿರುವೆನು. ಅಮ್ಮನು ಶಿಶುವನ್ನು ಎದೆಗಪ್ಪಿಕೊಳ್ಳುವವರೆಗೆ ಅಳುವನ್ನು ನಿಲ್ಲಿಸುವುದೇ!?
   ಪ್ರೀತಿ ಪ್ರೇಮವೆಂಬುದು  ತಪ್ಪಲ್ಲ ಎಂಬುದು ದಿಟ. ಮನದನ್ನೇ, ಆತುರತೆಯು ತಪ್ಪೋ! 
ಉತ್ಸಾಹದ ಹಂಬಲವು ತಪ್ಪೇ ಯೋಚಿಸಿ ನೋಡು! ತಪ್ಪು ಅದೇನಾದರೂ ಆಗಿರಲಿ. ಕ್ಷಮಿಸೆಂದು ಯಾಚಿಸಿದರೂ, ದುಮುಗುಡುತ್ತಿರುವುದು ತರವಲ್ಲ ಎಂಬೆ.
  ದೋಷವನ್ನೇ ಕಾಣುತ್ತಾ ಚಿಂತೆಯಲ್ಲೇ ಮುಳುಗಿ ರೋಷದ ಚಿಂಗಾರಿಗಳನ್ನುಗುಳುವುದು ತಪ್ಪಲ್ಲವೇ!? ನಿಜವಾದ ಮಮಕಾರದ ಪ್ರೀತಿಗಿದು ತರವೇ! ಯೋಚಿಸು! 
ದಯದಿಂದ ಒಲವಿನಕಟಾಕ್ಷವನು ಬೀರೆಂದು ಹಂಬಲಿಸುತ್ತಿದ್ದೇನೆ. ಆ ನಿನ್ನ  ನವಿರಾದ ಹಸನ್ಮುಖವದೆಲ್ಲಿ ಮರೆಯಾಯಿತು? 
ಕಂಗಳಲಿ ಎದುರಿಸಲಾರದ ಕಿಡಿಗಳೇಕೆ ಸುರಿಯುತ್ತವೆ! ಚೆಲುನಗುವಿರಬೇಕಾದ  ನಿನ್ನ ಮೊಗದಾವರೆಯಲ್ಲಿ ಕತ್ತಿಯಲಗನ್ನು ಕಾಣುವಷ್ಟು ಶಕ್ತಿ ನನಗಿಲ್ಲ.
ಪ್ರೇಮಸಿಂಚನದಿಂದ ಒಂದಾಗಬೇಕಿರುವ ಕಡೆಗಣ್ಣನೋಟವಿರಬೇಕಾದಲ್ಲಿ ಹುಬ್ಬುಗಂಟಿಕ್ಕುತ್ತಾ ನನ್ನನ್ನು ಇರಿಯಬೇಡ ಮನದನ್ನೆ! 
   ನಮ್ಮ  ಆ ದಿನಗಳ ಪ್ರೀತಿಯೊಲುಮೆಗಳನ್ನು ಅದೆಂತು ಮರೆಯಲಾದೀತು? 
ಅಂದಿನ ನಮ್ಮ ಸ್ನೇಹ ಸಂಬಂಧಗಳ ಬಂಧವನ್ನೆಂತು ಮರೆಯಲಿ!?ಅದೆಂತಹ ಮೋಹಲೀಲೆಗಳ ಆಟಗಳೇನು! ಮರೆತೆಯೇನು!? ಅದೆಂತಹ ಹೊಂಗನಸನ್ನು ಕಾಣುತ್ತಿದ್ದೆವು! ನೆನಪಿಸಿಕೋ.
ಪರಸ್ಪರ ಪ್ರಣಯಕೇಳಿಗಾಗಿ ಹಾತೊರೆವ ಕಟಾಕ್ಷಗಳಿಗಾಗಿ ಹಂಬಲಿಸುತ್ತಿದ್ದ ಆ ದಿನಗಳು ಮರೆತವೇನು! 
'ನಾನಿರುವದೇ ನಿನಗಾಗಿ' ಎಂಬ ಅಂದಿನ ಪಲುಕುಗಳ ಗುಂಗು ನನ್ನ ಕಿವಿಗಳಲ್ಲಿ ಈಗಲೂ ಗುಂಜನಗುಡುತ್ತಿದೆ.
ಒಂದರೆಗಳಿಗೆ ಬಿಟ್ಟಿರಲು ಆಗದ ಅಂದಿನ ದಿನಗಳಲ್ಲಿ ಬಳಿ ಸಾರ್ದಂದು ಅದೇನು ಸಂಭ್ರಮವಿತ್ತು, ನೆನಪಿಸಿಕೊಳ್ಳಲಾರೆಯಾ! 'ಒಡಲೆರಡು ಬಾಳೊಂದು' ಎಂದು ಜೀಕಾಡುತ್ತಿದ್ದೆವು. ನೆನಪಾಗಿರಬೇಕಲ್ಲ. ಆ ಅಮೃತಗಳಿಗೆಗಳನ್ನು ನೀನು ಮರೆತಿರಲು ಸಾಧ್ಯವಿಲ್ಲ.
ಸುಖದುಃಖಗಳನ್ನು ಸಮಪಾಲಾಗಿ ಹಂಚಿಕೊಂಡಿದ್ದ ಆ ದಿನಗಳನ್ನು ನೀನು ಮರೆತೆಯಾದರೆ ಅದು ತಪ್ಪಲ್ಲವೇ! 
ಬಹುದಿನಗಳಿಂದ ಜೋಪಾನವಾಗಿ ಪ್ರೀತಿಯ ಜೊನ್ನವನ್ನೇ ಎರೆದು, ಬೆಳೆಸಿದ ಪ್ರೇಮಲತೆಯನ್ನು ಕಾಪಾಡಿ ಕೊಂಡು ಹೂವರಳಿಸಬೇಕಾದ ನೀನೇ ಲತೆಯನ್ನು ಚಿವುಟಬಲ್ಲೆಯಾ!?  ಯೋಚಿಸಿನೋಡು.
  ತಪ್ಪು ನನ್ನದೆಂದೇ ಒಪ್ಪಿಕೊಳ್ಳೋಣ! 
ಮನ್ನಿಸೆಂದು ಬೊಗಸೆಯೊಡ್ಡಿ ಬಂದ ಈ ನಿನ್ನ ಸಖನನ್ನು ದೂರಸರಿಸದಿರು.
ಚೆಲುವನ್ನು ನೀಡಿದವನು. ಒಳಿತನ್ನು  ಉಣಿಸಿದವನು. ಕಳೆಯನ್ನೇರಿಸಿದವನಲ್ತೆ! 
ನನ್ನೆದೆಯ ನೋವನ್ನು ಅರಿತು ಮೆದುಮನಸ್ಸಿನವಳಾಗು! ಪ್ರೇಮನಿವೇದನೆಗೆ ಪೂರಕವಾದ ಸ್ಪಂದನವಿಲ್ಲದೆ ಹೋದರೆ ಪ್ರೇಮಲತೆಯು ಸೊರಗುವುದು! ಆಗಸವು ಮಳೆಗರೆಯದಿದ್ದರೆ ನೆಲ ಒಣಗುವುದು.
ಹುಣ್ಣಿಮೆಯ ಬೆಳಕಿಂದ ಕಡಲತೆರೆಗಳು ಕುಣಿಯುತ್ತವೆ. ನಿನ್ನ ಮೊಗದಾವರೆಯಲಿ ಮಂದಹಾಸದ ಬೆಳಕಿನ ರೇಖೆಗಳಿಂದ  ನನ್ನ ಎದೆತುಂಬಿ ನಿನಗಾಗಿ  ಅರಳುವುದು. ಅರಳುವುದು ತಪ್ಪೇ ! ಕೆರಳಿಸುವುದು ತಪ್ಪೇ ಎಂಬ ಪ್ರಶ್ನೆ ಬೇಡ! ನಗುನಗುತ್ತಾ  ನನ್ನ ಮನಸ್ಸನ್ನರಳಿಸು! 
 ಸುಂದರವಾದ ಈ ನಿನ್ನ ಮುಖಕ್ಕೆ ಕೋಪವು ಆಭರಣವಲ್ಲ. ಸುಂದರವಾದ ಈ ಮೊಗದಾವರೆಯಲ್ಲಿ ಕ್ಷಮಾಪೂರ್ಣ ಕಟಾಕ್ಷವನ್ನು ಕಾಣಬಯಸುತ್ತಿರುವೆ.ತಾಳ್ಮೆಯಿಂದ ಸ್ನೇಹಸಿಂಚನದ ಮಾತುಗಳನ್ನು ಆಲಿಸು. ಸೌಮ್ಯವಾದ ನೋಟದಿಂದ ನನ್ನನ್ನು ನೋಡು. ಸಂತಸವಾದ ಹೊನಲು ಹರಿಯುತ್ತಿರುವುದನ್ನು ನೀನು ಮರೆಯಲಾರೆ.
ಪ್ರೀತಿ ಸ್ನೇಹರಸದ ಆರ್ದ್ರತೆಯಿಂದ ನನ್ನೆಡೆಗೆ ನೋಡು.
ನನ್ನ ಹೃದಯದಲ್ಲಿ ಅನುರಾಗದ ಇಂಗಡಲ ತೊರೆಗಳು ಮೊರೆಯುತ್ತಿರುವುದನ್ನು ಕೇಳುವೆ.
ಭಾವಾನುವಾದ :
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment