Wednesday 27 December 2023

ಟೋಜೋವಿನ ಅಂತ್ಯೋಕ್ತಿ (೨೨ ಡಿಸೆಂಬರ್‍ 1948) - ಕೇತಕೀವನ - ಡಿವಿಜಿ

“ಏರುವೆನದೃಶ್ಯರ್ಪತವ; ಬುದ್ಧಿಸ್ಥಲವ 
ಸೇರುವೆನು; ಸಕಲರ್ಗಮಾಶಿಪೆನು ಮಂಗಲವ. 
ಬುದ್ಧನ ದಯಾವೀಕ್ಷೆಯಲಿ ನಾಳೆ ಶಾಂತಿಯಲಿ 
ನಿದ್ರಿಸಿರೆ ನಾನ್‍. ಎನ್ನ ಕಾಡನಾವನುಮ್‍ ಅಲ್ಲಿ. 

ಓ ಧರೆಯ ಧಾರ್ಮಿಕರೆ, ನೈಜದಿಂದೇಷಿಯವು 
ಸಾಧುವೆಂದರಿಯಿರೇಂ? ಕಟುಕರೆಡೆಯಲ್ಲವದು. 
ಕ್ರೂರಿಗಳ್‍ ಜಾಪ್ಯರೇನಲ್ಲ; ನಿಮ್ಮೊಳ್ತನಕೆ 
ತೋರುವರ್‍ ಕೆಳೆತನವ; ನಲುಮೆಯೊಳ್ಳಿತು ಜಗಕೆ.”

-ಇಂತೊರೆದನಾ ವೀರ ಟೋಜೋ, ಜಪಾನ್‍ ಸಚಿವ- 
ನಂತಿಮ ಕ್ಷಣದಿ, ಪಗೆ ತನಗಿಡಲ್‍ ಉರುಳ್‍ಸರವ. 
ಸ್ವೀಯ ರಾಷ್ಟ್ರೌನ್ನತ್ಯಕುಬ್ಬಿದಾ ವ್ಯಾಮೋಹ- 
ವಾಯಿತರಿರಾಷ್ಟ್ರದೃಷ್ಟಿಯಲಿ ವಿಶ್ವದ್ರೋಹ. 

ಅವರೆಸಗದಿರ್ದುದೇನ್‍? ಏನಾ ಜಯೋಪಾಯ? 
ಬವರದೊಳ್‍ ನ್ಯಾಯ ಜವನಿಗೆ ತೆತ್ತ ಸಂದಾಯ. 
ಶುದ್ಧ ನಾಂ ದೋಷಿ ನೀನೆಂಬ ನೀತಿಯ ಗಡಣೆ 
ಯುದ್ಧವೆಂಬನ್ಯೋನ್ಯವಧೆಯಡುಗೆಯೊಗ್ಗರಣೆ. 

ಓ ಹಿರೋಷಿಮ ಭಕ್ಷಿ, ನೋಡು ನಿನ್ನಮೆರಿಕವ; 
ದ್ರೋಹಿಯಾರದ್ರೋಹಿ ಯಾರು, ಪೇಳ್‍ ನೀಂ ದಿಟವ, 
ಓ ಗುಟ್ಟಿನಣುಭೂತ, ನೀನಂಧಕಾಸುರನೊ! 
ನಾಣ್ಗೆಟ್ಟ ಲೋಕಕ್ಕೆ ತಕ್ಕಂತ್ಯಶಿಕ್ಷಕನೊ!

**********************************

ಟೋಜೋ  ಹಿಡೆಕಿಯು ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಜಪಾನಿನ ಪ್ರಧಾನಮಂತ್ರಿಯಾಗಿದ್ದ  ಮಹತ್ತ್ವಾಕಾಂಕ್ಷೆಯ ರಾಜನೀತಿಜ್ಞ.  ಮಿಲಿಟರಿಯ  ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ,ಜಪಾನಿನ ಆಡಳಿತವನ್ನು ವಶಕ್ಕೆ ಪಡೆದವನು.  ಟೋಜೋ ಹಿಡೆಕಿ ಜನಿಸಿದ್ದು, ೩೦ -೧೨- ೧೮೮೪ ರಲ್ಲಿ. ಎರಡನೆಯ ಮಹಾಯುದ್ಧದ ಮಾರಣಹೋಮಕ್ಕೆ ಕಾರಣನಾದವನೆಂಬ ಆಪಾದನೆಯಿಂದ  ೧೯೪೮ರ ಡಿಸೆಂಬರ್ ೨೩ರಂದು ಗಲ್ಲಿಗೇರಿಸಲ್ಪಟ್ಟರು.
 
ಗಲ್ಲು ಶಿಕ್ಷೆಯು ನಿಗದಿಯಾದ ಸಮಯದಲ್ಲಿ ೨೨ - ೧೨ -೧೯೪೮ರಂದು ಟೋಜೋವಿನ ಕೊನೆಯ ಮಾತುಗಳು ಡಿವಿಜಿಯವರ ನುಡಿಗಳಲ್ಲಿ

      "ಯಾರೂ ಕಾಣದಂತೆ ಅದೃಶ್ಯಪರ್ವತವನ್ನೇರುವೆನು. ಬುದ್ಧನ ಆರಾಧನೆಯ ನಾಡಲ್ಲಿ ಜನಿಸಿ ಬಾಳಿದರೂ ಬುದ್ಧಿಸ್ಥಲವನ್ನರಸದೆ, ಮಾನವಹತ್ಯೆಗೆ ಕಾರಣನಾಗಿ ಇದೀಗ ಬಲು ತಡವಾಗಿ ಬುದ್ಧಿಸ್ಥಳವನ್ನರಸುತ್ತಾ ಕಾಣದ ಲೋಕಕ್ಕೆ ಪಯಣಕ್ಕೆ ಸಿದ್ಧನಾಗಲೇ ಬೇಕಾದ ಅನಿವಾರ್ಯತೆ." 
"ಸಕಲರಿಗೂ ಒಳಿತಾಗಲಿ ಮಂಗಲವಾಗಲಿ ಎಂದು ಆಶಿಸುತ್ತಾ ಹೊರಟಿರುವೆನು."

"ಬುದ್ಧನ ದಯಾಪೂರ್ಣ ಕಟಾಕ್ಷವನ್ನು ನಿರೀಕ್ಷಿಸುತ್ತಾ ಚಿರನಿದ್ದೆಯನ್ನು ಬಯಸುತ್ತೇನೆ‌." "ಶಾಂತಿಯನ್ನರಸುತ್ತಾ ನಿದ್ರಿಸಬಯಸುತ್ತೇನೆ. ನಾನು ಶಾಂತವಾಗಿ ನಿದ್ರಿಸುತ್ತಿರುವಾಗ ಅಲ್ಲಿ ನನ್ನನ್ನು ಯಾರೂ ಕಾಡಲಾರರು."   ನೇಣನ್ನೇರಿದ ಮೇಲೆ ತನಗೆ ಶಾಂತಿ ಸಿಗಲೆಂದು ಟೋಜೋ ಪ್ರಾರ್ಥಿಸುತ್ತಾನೆ.
ಟೋಜೋ ಹಿಡೆಕಿಯ ಕೊನೆಯ ಮಾತು ಏನಾಗಿತ್ತೆಂದು ಡಿವಿಜಿಯವರಿಂದ ಆಲಿಸೋಣ

       "ಏಷಿಯಾ ಧರೆಯಭೂಭಾಗದ ಜನರೆಲ್ಲರೂ ಸಾಧು ಸಜ್ಜನರು ಎಂಬುದನ್ನು  ಧಾರ್ಮಿಕರು  ಅರಿತವರಲ್ಲವೇ!? ಕಟುಕರಂತಹ ಜನರು ಏಷಿಯಾದವರಲ್ಲ.  ಬುದ್ಧನಂತಹ ದಯಾವಂತರ ನಾಡು ಏಷಿಯಾ.  ಈ ನಾಡಿನ‌ ಜನರು ಕ್ರೂರಿಗಳಲ್ಲ. ಜಗತ್ತಿನ ಜನರ ಒಳಿತನ್ನು ಬಯಸುವವರಾಗಿ ಎಲ್ಲರೊಡನೆ ಗೆಳೆತನ ಬಯಸುವವರು ಏಷಿಯದವರು. ಪ್ರೀತಿ ಸ್ನೇಹ ಗೆಳೆತನವು ಜಗತ್ತಿಗೆ ಒಳಿತು. ದ್ವೇಷ ಸ್ವಾರ್ಥ ಯುದ್ಧ ರಣರಂಗವು ಒಳಿತಲ್ಲ."

     ತನ್ನ ಕೊರಳಿಗೆ ನೇಣಿನ ಕುಣಿಕೆಯನ್ನಿಡುವ ಅಂತಿಮ‌ಕ್ಷಣದ ಸಮಯದಲ್ಲಿ ಹೀಗೆಂದು ಜಪಾನಿನ ಮಿಲಿಟರಿ ಸಾರ್ವಭೌಮ ಪ್ರಧಾನಿ ಟೋಜೋ   ಜಗತ್ತು ಕೇಳಲೆಂದು ಹೀಗೆಂದು ನುಡಿದನು. "ನನ್ನ ರಾಷ್ಟ್ರದ ಔನ್ನತ್ಯದ ವ್ಯಾಮೋಹದಿಂದ ವಿಶ್ವಸಮರದ ರಣರಂಗದ ಕೆನ್ನೀರ ವಿಪ್ಲವಕ್ಕೆ ಕಾರಣನಾಗಿ, ವಿಶ್ವದ್ರೋಹವನ್ನೆಸಗಿದವನೆಂದು ಶತ್ರುರಾಷ್ಟ್ರದ ದೃಷ್ಟಿಯಿಂದ ಬಲಿಯಾಗುವುದು ಅನಿವಾರ್ಯವಾಯಿತು."

       "ಶತ್ರುರಾಷ್ಟ್ರದವರು ಮಾನವಹತ್ಯೆ ಮಾಡಿಲ್ಲವೇ!  ರಣರಂಗದಲ್ಲಿ ವಿಜಯಸಾಧನೆಯ ದಾರಿಯಲ್ಲಿ ವೀರನಿಗೆ, ಸೈನಿಕನಿಗೆ  ನ್ಯಾಯ ಅನ್ಯಾಯಗಳ ತುಲನೆಲೆಗೆಲ್ಲಿದೆ ಬೆಲೆ? 
ರಣರಂಗದಲ್ಲಿ ನ್ಯಾಯವೆಂಬುದು ಯಮನಿಗೆ ನೀಡುವ ಬಲಿಯೇ ಸರಿ!  ರಣರಂಗದಲ್ಲಿ, ಯಾರು ಶುದ್ಧ,  ಯಾರು ಅಶುದ್ಧರು ,  ಯಾರು ಅನ್ಯಾಯವೆಂದು ಹೇಳಲಾಗದು. ಪರಸ್ಪರ ಕೊಚ್ಚಿಹರಗುವ ಸೌನಿಕನ ಅಡುಗೆಯ ಪಾಕದಲ್ಲಿ ನ್ಯಾಯ ಅನ್ಯಾಯವೆಂಬ ಮಾತು ಅಡುಗೆಯ ಕೊನೆಗೆ ಚಟಪಟಿಸುವ ಒಗ್ಗರಣೆಯಾದೀತು."

   "ಓ, ಹಿರೋಷಿಮಾದ ರಾಜಭವನದ ಭಕ್ಷಿ!  ಅಮೆರಿಕವನ್ನು ನೋಡು!  ಯಾರು ದ್ರೋಹಿ!? ಯಾರ ದ್ರೋಹಿ? ತಥ್ಯವನ್ನು ನೀನೇ ಯೋಚಿಸು.  ಅಣುಸಮರದ ಮಹಾಭೂತವಾಗಿ ಒಕ್ಕರಿಸಿದ ಆಟಂಬಾಂಬಿನ ಕಣಗಳು ಉತ್ತರಿಸಲಾರವು‌. ನೀನು   ಕಣ್ಣಿದ್ದೂ ಕುರುಡನಾದ ಅಂಧಕಾಸುರನೇ!?  ನಾಚಿಕೆಬಿಟ್ಟ ಮರ್ಯಾದೆಗೆಟ್ಟ ಲೋಕಕ್ಕೆ  ತಕ್ಕಪಾಠ ಕಲಿಸಹೊರಟ ಶಿಕ್ಷಕನೋ ಕಾಲವೇ ಉತ್ತರಿಸಬೇಕು"

ಭಾವಗ್ರಹಣ: ©✒ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Tuesday 26 December 2023

ನಗುವ ಬಾಲೆ - ಕೇತಕೀವನ - ಡಿವಿಜಿ

ನಗುವ ಬಾಲೆ ಗುಲಾಬಿ- 
ಸೊಗವ ಚೆಲ್ಲುವ ಬಾಲೆ, 
ಭಗವಂತನಣುಲೀಲೆ. 
ಇಂದೊ ನಾಳೆಯೊ ನೋಡು, 
ಮುದುರಿ ಬೀಳುವುದು, 
ಎದೆಯ ಸೀಳುವುದು. 

ಸುಧೆಯ ಪಾನವೊ ಪ್ರೇಮ- 
ಬದುಕ ಬೆಳಗಿಪ ಪಾನ, 
ವಿಧಿಯ ಮಧು ಸಂಧಾನ- 
ಇಂದೊ ನಾಳೆಯೊ ನೋಡು, 
ಬತ್ತಿ ಬರಿದಹುದು, 
ಚಿತ್ತವಿರಿಯುವುದು. 

ಮಲರುದುರಿದೆದೆಯಿರಿತ,
ಒಲವಿಮರಿದೆದೆಬಿರಿತ, 
ಚೆಲುವೊಣಗಿದೆದೆಸಿಡಿತ 
ಕಾಣದನೆ ಸುಖಿಯೋ! 
ಇನಿಗನಸ ಬಿಸುಸುಯ್ದು 
ನೆನೆವವನೆ ಸುಖಿಯೋ

****************************

'ನಗುವ ಹೆಣ್ಣನ್ನು ನಂಬಬೇಡ' ಎಂಬ ಹಿರಿಯರ ಅನುಭವಾಮೃತಮಾತು ಸುಳ್ಳಲ್ಲ.
ನಗುವ ಹೆಣ್ಣಿನ ನಗುವನ್ನು  ನಂಬಿ ಸಾಮ್ರಾಜ್ಯಗಳೇ ಅಡಿಮೇಲಾಗಿವೆ. ಹೆಣ್ಣಿನ ನಗುವು ಸಾಮ್ರಾಜ್ಯವನ್ನು ಕಟ್ಟಿದ್ದೂ ಇರಬಹುದು.

  ನಗುವ  ಬಾಲೆಯು ಗುಲಾಬಿಚೆಲುವನ್ನು  ಚೆಲ್ಲುವ ಕೋಮಲೆ!  ಸುಮಸುಂದರಿಯಾದ ನಗುವ ಬಾಲೆ ಭಗವಂತನು ಸೃಷ್ಟಿಸಿದ ಅತಿಸೂಕ್ಷ್ಮವಾದ ಕುಸುರಿಕಲೆಯ ಲೀಲೆ! 
 ಈ ಕ್ಷಣವೋ ಮುಂದಿನ ಕ್ಷಣವೋ ನಾಳೆಯೋ ಮುದುರಿ ಬೀಳುವುದು ನಿಶ್ಚಿತ! ಮುದುಡಿದ ಬಾಲೆಯ ಹೀನಾವಸ್ಥೆಯನ್ನು ಕಂಡು ನೆಚ್ಚಿ ಮೆಚ್ಚಿದವರ ಎದೆಸೀಳುವುದೂ ನಿಶ್ಚಿತ! 

 ನಗುವ ಬಾಲೆಯು ಬದುಕನ್ನು ಬೆಳಗಿಸಿದ ಪ್ರೇಮಪಾನದ ಅಮೃತ! 

ವಿಧಿಯ ಲೀಲೆಯನ್ನು  ಪ್ರೇಮವರಿಯದು. ಪ್ರೇಮಿಯೂ ಅರಿಯನು. ವಿಧಿಯ ಮಧುಸಂಧಾನವು ಇಂದೂ ಇರಬಹುದು.  ನಾಳೆಯೇ ಇರಬಹುದು. ಬಲ್ಲವರಿಲ್ಲ. ಪ್ರೇಮದೀಪದ ಬತ್ತಿಯ ಆಯುಷ್ಯ ಈ ಕ್ಷಣವೋ ಆಕ್ಷಣವೋ ಬರಿದಾಗಬಹುದು. ಪ್ರೇಮದ ಬತ್ತಿ ಬರದಾದ ಕ್ಷಣದಲ್ಲಿ ಚಿತ್ತ ಇರಿಯುವುದೂ ದಿಟ! 

 ನಗುವಬಾಲೆಯೆಂಬ ಗುಲಾಬಿ ಎಸಳುಗಳು ಒಣಗಿದಾಗ ಪ್ರೇಮಿಯ ಎದೆಗೆ ಗುಲಾಬಿಗಿಡದ ಮುಳ್ಳುಗಳೇ ಚುಚ್ಚಿದಂತಹ ವೇದನೆ ! ಒಲವು ಬತ್ತಿದಡೆ ಪ್ರೇಮಿಯ ಎದೆಯ ಉರಿತ ಅಸದಳವು. ಚೆಲುವು ಒಣಗಿದರೆ ಎದಸಿಡಿತದ ವೇದನೆ!  ಇಂತಹ ವೇದನೆಯನ್ನು ಅನುಭವಿಸಿದವನು ಸುಖಿ! ನಗುವಬಾಲೆಯ ಬಗೆಗೆ ಚೆಲುವಿನ ಹಗಲುಗನಸನ್ನು  ಕಟ್ಟಿಕೊಳ್ಳದವನು ಸುಖಿ! ಹಗಲುಗನಸಿನ‌ಬಗೆಗೆ ನೆನೆಸಿಕೊಂಡವನೇ ಸುಖಿ! ಭಾವಗ್ರಹಣ: ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

ಬಿ.ಎಂ.ಎಸ್‍. - ಕೇತಕೀವನ - ಡಿವಿಜಿ

ಕಾವ್ಯತಪಸ್ಸಂಪಾದಿತ । 
ದಿವ್ಯಯಶಃಕಾಯ ಶಾಶ್ವತಂ ಶ್ರೀಕಂಠಂ ॥ 
ಸೇವ್ಯಂ ಕನ್ನಡಮೆಂಬೊಂ- । 
ದವ್ಯಾಹತ ಭವ್ಯ ದೀಕ್ಷೆಯೊಳ್‍ ಗುರುವಾದಂ ॥

************************************

ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ  ಅವರು 'ಕನ್ನಡದ ಕಣ್ವ' ಎಂದು ಹೆಸರಾದವರು‌.  ಕನ್ನಡವನ್ನೇ ಉಸಿರಾಡಿದವರು. ಆಂಗ್ಲಭಾಷೆಯ ಸಾಹಿತ್ಯವನ್ನೂ ಕನ್ನಡಕ್ಕೆ ಅನುವಾದಿಸಿ  ಕನ್ನಡವನ್ನೇ ಉಸಿರಾಡಿದರು‌.  

ಕಾವ್ಯವನ್ನೇ ತಪಸ್ಸನ್ನಾಗಿ ಸ್ವೀಕರಿಸಿದರು. ಕಾವ್ಯ ತಪಸ್ಸಿದ್ಧಿಯಿಂದ ಯಶಸ್ಸನ್ನು  ಸಾಧಿಸಿದರು. ಯಶಃಶ್ರೀಯಿಂದ ಕನ್ನಡಾಂಬೆಯ ವಿಜಯಧ್ವಜವನ್ನು ಹಿಡಿದೆತ್ತಿದರು. ಕನ್ನಡಸಾಹಿತ್ಯಸಿರಿಯನ್ನು ಹೆಚ್ಚಿಸಿದ ಬೆಳ್ಳೂರಿನ ಶ್ರೀ ಕಂಠಯ್ಯನವರು ಶಾಶ್ವತ ಶ್ರೀಕಂಠರಾದರು.

ಕನ್ನಡ ಸಾಹಿತ್ಯ ಸೇವೆಯನ್ನು ಜೀವಿತದೀಕ್ಷೆ ಯನ್ನಾಗಿ ಸ್ವೀಕರಿಸಿದವರು‌. ಕನ್ನಡಸೇವೆಯ ನಿರಂತರ ದೀಕ್ಷೆಯಿಂದ   ಗುರುವಾದರು. 
ಭಾವಗ್ರಹಣ : ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Saturday 23 December 2023

ಕೋಟೆಗಲ್ಲಿನ ರಾಣಿ (ಸ್ಮೃತಿಚಿತ್ರ) - ಕೇತಕೀವನ - ಡಿವಿಜಿ

ಕೋಟೆಗಲ್ಲಿನ ರಾಣಿ, ಕಾಳಾಹಿ ವೇಣಿ, 
ಘೋಟಕ ಶ್ರೋಣಿ, ಓ ಕೂರ್ಪು ಕಟ್ಟಾಣಿ 
ಓ ಶಾಮಲಾಂಗ ಸುಂದರಿ, ನೀನದಾರು? 
ಹಾಸ್ಯವಿಲಸಿತ ನಯನದರ್ಪೆ ನೀನಾರು? 

ನೀನಾರೊ ನಾನಾರೊ ಹೊಗೆಬಂಡಿ ನಿಲ್ವ 
ತಾಣದೊಳದೇಂ ಚೇಷ್ಟೆಯಾಗಿಸಿತೊ ದೈವ! 
ನಾನಲ್ಲಿ ಸೇರ್ದಂದು ನೀನಿರ್ದುದೇಕೆ? 
ನನ್ನ ಕಣ್‍ ನಿನ್ನ ಕಣ್‍ ಒಂದಾದುದೇಕೆ? 

ಪಯಣದಾಯಸವ ನಾಂ ನಸು ನೀಗಲೆಂದು? 
ಬಯಸಿ ಹೊಸ ನೋಟವನು ಬಂಡಿಯಿಂದಿಳಿದು 
ದೃಷ್ಟಿಗಳ ಪಸರಿಸುತಲತ್ತಿತ್ತ ತಿರುಗೆ, 
ದಿಟ್ಟತನದವಳೆ, ನೀಂ ಕಣ್ಗೊದಗಬೇಕೆ? 

ಏನು ನಿನ್ನಾ ಬೆಡಗದೇನು ಕಣ್ಮಿಂಚು! 
ಏನು ನಡಿಗೆಯ ಠೀವಿಯೇನು ನಗುಸಂಚು! 
ಮುಗಿಲ ತೆಳುಗಪ್ಪು ಮೈ, ಮೈಕಟ್ಟಿನೊಪ್ಪು, 
ಅಗಲ ಮುಖ, ಮುಂಗುರುಳ ಮಿರುಮಿರುಗು ಕಪ್ಪು 

ಒಡವೆಯೊಂದಿಲ್ಲ; ಉಡಿಗೆಯ ಡಂಭವಿಲ್ಲ; 
ನಿಡುಜಡೆಯ ಮೇಲ್ಮುಡಿದ ಹೂವೆ ತೊಡವೆಲ್ಲ. 
ಕಣ್ಣ ಹೊಳಹೊಳಪು, ಹುಸಿ ಮುಸಿನಗೆಯ ಸುಳಿವು 
ನುಣ್ಣ ನಿಡುತೋಳ್‍ ಬೀಸು, ನೀಳೊಡಲ ನಿಲುವು 

ಈ ಸೊಬಗಿನಿಂದೆನ್ನ ಕಣ್ಮನವ ನೀನು 
ಕೈಸೆರೆಯ ಪಿಡಿದು ಗಳಿಸಿದ ಲಾಭವೇನು? 
ನಿನ್ನೆಡೆಗೆ ನನ್ನ ಕಣ್‍ ಪರಿದಾಗ ನೀನು 
ಕಣ್ಣಿನೆಡಹುಬ್ಬ ಹಾರಿಸಿದ ಗುಟ್ಟೇನು? 

ಕಡೆಗೇನೊ ನೆವದಿಂದ ನೀನೆನ್ನ ಬಳಿಗೆ 
ಸಡಗರದಿ ನುಗ್ಗಿಬರಲೆನ್ನ ಕೈ ನಿನಗೆ 
ತಗುಲಲೆನ್ನಂಕ್ಷಮಿಪುದೆಂದ ನಯವೇನು? 
ದ್ವಿಗುಣ ನಾಂ ಕ್ಷಮೆ ಬೇಡೆ ನೀಂ ನಕ್ಕುದೇನು? 

ಬಳಿಕ ನೀಂ ತೆರಳೆ ನಾನನುಸರಿಸಿ ನಡೆದು 
ಬಳಿನಿಂತು ವಂದಿಸಲು ನೋಡಿ ನೀಂ ಬಿಗಿದು 
ಹೊರಡುವುದದೋ ಬಂಡಿಯೆಂದ ಬಿರುಸೇನು? 
ಸರಸಕಾ ಒರಟುತನವಷ್ಟೆ ಕೊನೆಯೇನು? 

ಕಲ್ಲೆದೆಯ ಕಾಮಬ್ಬೆ, ಬೆಡಗು ಭೂತಬ್ಬೆ, 
ಕೊಲ್ಲುವೆಯ ಯುವಕರನು ಕರೆದು ರಸವುಬ್ಬೆ? 
ಕೊರೆದೆಯಲೆ ನಿನ್ನ ಕಟು ಭಾವಚಿತ್ರವನು, 
ಅರಿಯದೆನ್ನೆದೆಯ ಹಲಗೆಯಲಿ ಗಾಯವನು 

ಬಿನದ ನಿನಗೇನೊ ಅದು! ಎನಗದುನ್ಮಾದ, 
ನೆನಪಿನಲಿ ಮುಳ್ಳಾಯ್ತು ನಿನ್ನ ಪ್ರಸಾದ.

************************

ಉಗಿಬಂಡಿ ಪಯಣದ ಸಮಯದಲ್ಲಿ  ಕೋಟಗಲ್ಲಿನ ರೈಲು ನಿಲ್ದಾಣದಲ್ಲಿ ಒಂದಿನಿತುಹೊತ್ತು ರೈಲು ನಿಂತಾಗ  ಕಣ್ಸೆಳೆದು ಮಾಯವಾದ ಕಾಳಾಹಿವೇಣಿಯ ಚಿತ್ರವು ಕವಿಯ ಮನದಲ್ಲಿ ಕಾಡುತ್ತಲೇ ಇದೆ.
ಕೋಟೆಗಲ್ಲಿನಲ್ಲಿ ಮಿಂಚಿದಂತೆ ಕಣ್ಸೆಳೆದು ಕಾಡುತ್ತಿರುವ  ಸುಂದರಿಯು ಕಾಳಸರ್ಪದಂತಹ ಶ್ಯಾಮಲವಾದ ಉದ್ದನ್ನೆಯ ಜಡೆಯಿಂದ ಶೋಭಿಸುತ್ತಿದ್ದಾಳೆ‌. ಕೆನೆಯುತ್ತ ಹಾರಾಡುವ ಕುದುರೆಯ ನಡುವಿನಂತಹ ಬಳುಕುವ ಸೊಂಟದಿಂದೊಪ್ಪುವ ಕೋಟೆಗಲ್ಲಿನ  ರಾಣಿಯು ಒನಪು ವಯ್ಯಾರಗಳಿಂದ ಚೆಲುವೆಕಟ್ಟಾಣಿ!‌. 

      ಕವಿಯು  ಕಾಳಾಹಿವೇಣಿಯನ್ನು  (ಕಾಳಿಂಗಸರ್ಪವನ್ನ ಹೋಲುವ ಜಡೆಯವಳು) ಸ್ಮರಿಸುತ್ತಾ, ನೀಳಕಾಯದ ನೀಳವೇಣಿ! ಶ್ಯಾಮಲಾಂಗಿಯಾದ ಸೌಂದರ್ಯರಾಣಿ! ನೀನಾರು? ತುಂಟನಗೆಯ ವಿಶಾಲಾಕ್ಷಿಯೇ ನೀನಾರೆಂದು  ಕೌತುಕವೆನಗೆ!

     ನೀನಾರೆಂದು ತಿಳಿವಿಲ್ಲ. ನಾನಾರೆಂದು ನಿನಗೂ ಅರಿವಿಲ್ಲ. ಉಗಿಬಂಡಿ ನಿಲ್ದಾಣದಲ್ಲಿ  ದೈವವೇ ನಮ್ಮಿಬ್ಬರನು ಸಂಧಿಸುವ ಚೇಷ್ಟೆಯಾಡಿಸಿತು. ನಾನು ಹೊಗೆಬಂಡಿ ನಿಲ್ದಾಣದಲ್ಲಿದ್ದಾಗ  ನೀನೇಕೆ ಆಗಸದ ಚಿಕ್ಕೆಯಂತೇಕೆ ಕಾಣಿಸಿಕೊಂಡೆ!  ನಮ್ಮ ಕಂಗಳೇಕೆ ಒಂದಾದವು?  

ರೈಲುಪಯಣದ ಆಯಾಸವನ್ನು  ಒಂದಿನಿತು ಪರಿಹರಿಸಿಕೊಂಡು ಹಾಯೆನ್ನಿಸಿಕೊಳ್ಳಲು ಒಂದಿನಿತು  ಆ ಊರಿನ ಹೊಸನೋಟವನ್ನು  ಬಯಸಿ ಬಂಡಿಯಿಂದಿಳಿದೆ.  ಹಾಗೆ ಸುಮ್ಮನೆ ಅತ್ತಿತ್ತ ನೋಡುತ್ತಿರಲು,  ತುಂಟನಗುವಿನ ಬೊಗಸೆಕಂಗಳ  ನಿನ್ನ ಕಂಗಳ ತುಂಟನೋಟವು  ನನ್ನೆಡೆಗೆ ತೂರಿಬರಬೇಕೇ? 
  ಮಿಂಚಿನಲಗಿನಂತಹ ಚಂಚಲ‌ನೋಟದ ನಿನ್ನ ಸೌಂದರ್ಯದ ಬೆಡಗನ್ನು ಬಣ್ಣಿಸಲಾಗದು! ಅದೇನು  ಬಿಂಕದ ಸಿಂಗಾರಿಯಂತಹ ಠೀವಿಯ ನಡುಗೆಯದು!  ತುಂಟತನದಿಂದ ಯುವಕರ ಮನಸ್ಸನ್ನು ಹುಚ್ಚೆಬ್ಬಿಸುವ ನಗೆಸಂಚನ್ನು ಕಂಡರೆ ಅದೂ ನಿನ್ನ ಸೊಬಗಿನ ಸೌಂದರ್ಯದ‌ಮಿನುಗು ಮಿಂಚು!. ತಿಳಿಮುಗಿಲಿನಂತಹ ನಸುಗಪ್ಪಿನ ತನುಸೌಂದರ್ಯವು  ನಿನ್ನ ತೊನೆದಾಡುವ ಯೌವನದ ಮೈಕಟ್ಟಿಗೊಪ್ಪುವಂತಿದೆ.

  ವಿಶಾಲವಾದ  ನಿನ್ನ ಮೊಗದಾವರೆಗೆ  ಮಿರಿಮಿರಿ ಮಿಂಚುವ ಕಸ್ತೂರಿಯಂತಹ ಮುಂಗುರುಳು  ಚೆಲುವನ್ನು  ಕುಣಿಸುತ್ತದೆ.

   ನಿರಾಭರಣ ಸುಂದರಿಯಾದ ಉಡುಗೆ ತೊಡುಗೆಗಳಲ್ಲಿ ಆಡಂಬರವಿಲ್ಲ. ನೀಳವಾದ ನೀಲವೇಣಿಗೆ ಮುಡಿದ ಹೂವೇ ನಿನ್ನ ಅಲಂಕರಣದ ಆಭೂಷಣವು ! 

  ಮಿಂಚಿಮಿನುಗುವ ಕಣ್ಣುಗಳು! ಹುಸಿನಗೆಯ ಕಳ್ಳನೋಟದ ತುಂಟತನ! 
 ನಯವಾದ ನೀಳವಾದ ತೋಳುಗಳ ಬೀಸಿ ನಡೆಯುವ ಭಂಗಿ! ನೀಳವಾದ ನಿಲುವಿನ ಚೆಲುವಿನ ಸುಗ್ಗಿ ನೀನು!

      ಇಂತಹ ರೂಪರಾಶಿಯಿಂದ ನೀನು ನನ್ನ  ಕಣ್ಮನಗಳನ್ನು  ಸೆರೆಹಿಡಿದೆ. ಗಳಿಸಿದ ಲಾಭವಾದರೂ ಏನು? 

ನಿನ್ನೆಡಗೆ ನನ್ನ ಕಣ್ಣನೋಟ ಹರಿದಾಗ  ನೀನು  ಕಣ್ಣ ಎಡಹುಬ್ಬನ್ನು ಹಾರಿಸಿದ ಗುಟ್ಟು ಏನೆಂದು  ಅರಿಯದಾದೆ. ಕನ್ನೆಗೆ ಎಡಹುಬ್ಬು ಹಾರಿದರೆ ಶುಭವಲ್ಲ ಎಂಬುದು ನಂಬುಗೆ.

  ಏನೋ ಕಾರಣವೊಡ್ಡಿ ನೀನೆಲ್ಲ ಬಳಿಬಂದೆ. ನಾನು ಸಡಗರ ಸಂಭ್ರಮಗಳಿಂದ ನಿನ್ನಬಳಿಗೆ ನುಗ್ಗಿಬರುತಿರಲು,  ನನ್ನ ಕೈ ನಿನ್ನನ್ನು  ಸ್ಪರ್ಶಿಸಿತು. ಆಗ ನೀನೇ "ಕ್ಷಮಿಸಿ" ಎಂದು ನುಡಿದ ಮಾತಲ್ಲಿ  ವಿನಮ್ರತೆಯು ನಾಚಿ ನಿಂತಿತ್ತು!  ಪ್ರತಿಯಾಗಿ ನಾನು ಎರಡೆರಡುಬಾರಿ ಕ್ಷಮೆ ಕೋರಿದಾಗ ನೀನು ಕಿಸಕ್ಕನೆ ನಕ್ಕಿದ್ದರ ರಹಸ್ಯವೇನು!? 

     ನೀನತ್ತ ತೆರಳಿದೆ. ನೀನತ್ತ ನಡೆಯುವಾಗ ನಿನ್ನನ್ನು ಹಿಂಬಾಲಿಸಿ ಬಂದು, ನಿನ್ನ ಸನಿಹದಿ ನಿಂತು ವಂದಿಸುತ್ತಿರುವಾಗಲೇ,  ಸಮಯವಾಯಿತು. ಸೀಟಿಯೂದಿತು. ಬಂಡಿಹೊರಡುತ್ತದೆ ಎಂದು ಬಿರುಸಾಗಿ ನಡೆದೆ. ಒರಟುತನದಿಂದ ಕಣ್ಮುಚ್ಚಾಲೆಯಾಟದಂತೆ ಟಾಟಾ ಹೇಳಿ ಹೊರಟುಹೋಗುವದು ನಿನ್ನಲ್ಲಿರುವ ಸರಸತನಕ್ಕೆ   ಸರಿಹೊಂದುವುದೇ!?
 
ಕಾಮದೇವನಿಗೆ ಅಬ್ಬೆಯಿರುತ್ತಿದ್ದರೆ ನಿನ್ನಂತೆ ಇರುತಿದ್ದಳು, ಆದರೆ ನಿನ್ನಂತಹ ನಿರ್ದಯಿ ಕಲ್ಲೆದೆಯವಳಾಗಿರುತ್ತಿರಲಿಲ್ಲ!  ಬೆಡಗುಗಾತಿಯಾದರೂ  ನೀನು ಭೂತದಂತೆ ಕಾಡುತ್ತಿರುವೆ. ಮೋಹಿನಿಯಂತೆ ಯುವಕರನು ಬಳಿಕರೆದು  ರಸೋತ್ಕರ್ಷಕ್ಕೆ  ಕಾರಣವಾಗಿ  ಯುವಕರನ್ನು ಜೀವಂತವಾಗಿ ಕೊಲ್ಲುವಂತೆ ಕಾಡುವೆಯೇಕೆ?             

ನಿನ್ನ  ಕಟುವಾದ ಕರಾಳವಾದ ಭಾವಚಿತ್ರವನ್ನು ನನ್ನ ಹೃದಯ ಹಲಗೆಯಲ್ಲಿ ಕೊರೆದು ಘಾಸಿಗೊಳಿಸಿದೆ. ನನ್ನ ಎದೆಯ ಗಾಯದ ನೋವನ್ನು ನೀನೆಂತು ಬಲ್ಲೆ? 

ನನ್ನ ಹೃದಯವನ್ನು ಕೊರೆದು ಘಾತಿಸುವುದು ನಿನಗೇನೋ ತಮಾಷೆ, ವಿನೋದವಾಗಿರಬಹುದು. ಆದರೆ ನನಗೆ ಅದು ಉನ್ಮಾದಕ್ಕೆ ಕಾರಣವಾಯಿತು. ನಿನ್ನ ಹಸ್ತದ ಆ ದಿವ್ಯ ಸ್ಪರ್ಶಪ್ರಸಾದವು  ನನಗೆ ಪ್ರಸನ್ನತೆಯನ್ನು ನೀಡುವ  ಅಮೃತವಾಗಲಿಲ್ಲ. ಹೃದಯವನ್ನು ಚುಚ್ಚಿದ ಮುಳ್ಳಾಯಿತು.  ನಿನ್ನ   ತುಂಟನಗು ನನಗೆ ಪ್ರಸಾದವಾಗುವ ಬದಲು,ಮನವನ್ನು ಇರಿಯುವ ಮುಳ್ಳಾಯಿತು.
ಭಾವಾನುವಾದ ಹಾಗೂ ದನಿ: ©✒ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Friday 22 December 2023

ಶ್ಯಾಮಸುಂದರಿ (ಸ್ಮೃತಿಚಿತ್ರ) - ಕೇತಕೀವನ - ಡಿವಿಜಿ

ಯಾರ ಮನೆ ಹೆಣ್ಣಿವಳು? ಯಾರುಣುವ ಹಣ್ಣು? 
ಏನು ನಗುವಗಲ ಮೊಗವೇನರಳುಗಣ್ಣು! 
ಬಿಳುಪಲ್ಲ ಮೈಬಣ್ಣ ಕೆಂಪಲ್ಲ, ಮಸುಕು, 

ತೆಳುಹೊಗೆಯ ನಸುಮಸಕು, ಇವಳಿಗದೆ ಸೊಬಗು! 
ನಗಲಿವಳ ತುಟಿನಡುವೆ ಪರಿವ ಬಿಳಿಹೊಳಪು 
ಮುಗಿಲೋಳಿ ನಡುವಣಿಂ ಸಸಿ ಸುರಿವ ಬೆಳಕು. 
ಮುಂಗುರುಳು ಪಣೆಯ ಮೇಲಲೆಯೆ ಸುಳಿ ಸುರುಳಿ 
ಕಂಗಳಿಂ ಪಾರುವುದು ಮಿನ್‍ ಮಿನುಗು ಹೊರಳಿ 
ನುಣ್ಗದಪು ನಗುವಿನಿಂದದಿರೆ ಮಾಣಿಕವು 
ಚೆಂಗುಲಾಬಿಯ ನೆರೆಯ ಪಸಿರೆಲೆಯ ಸುಳಿವು 
ಕುರಿಚು ಪೆರ್ಚುಗಳೆನಿಸದಿವಳೊಡಲ ನಿಲುವು 
ಹರುಷ ಮಿಗೆ ಲವಲವಿಕೆ ಪೆರ್ಚಿದವಯವವು 
ಒಡವೆಗಳ ಮೆರುಗಿಲ್ಲ ಉಡಿಗೆ ಜರುಬಿಲ್ಲ 
ಬೆಡಗು ಮೊಗದಲಿ, ಮಿಕ್ಕ ಮೈ ಲಕ್ಷ್ಯಕಿಲ್ಲ. 

ಆರಿವಳು? ಹೆಸರೇನೊ, ಕುಲವೇನೊ, ಎಂತೋ 
ಊರ ಬಾಯ್ಗಿವಳು ತುತ್ತಾಗದಿಹುದೆಂತೋ! 
ಮನೆಯೊಳ್ಳಿತಿದ್ದೀತು; ದನಿಯೊಳುಂಟು ನಯ. 
ತನು ಯವ್ವನದ ನಿಲಯ, ಮನಕಾಶೆಯುದಯ. 
ಚಿಂತೆಯಿಲ್ಲದ ಬದುಕು, ಸಂಭ್ರಮವಿಲಾಸ 
ಸಂತಸವ ನಿರುಕಿಪಾ ಭಾವಿ ವಿಶ್ವಾಸ 
ಆ ಮುಗ್ಧ ಮಧುರತೆಯ ನೆನಪೆ ಒಂದು ವರ 
ಶ್ಯಾಮಸುಂದರಿಯಿವಳನೊಲಿಸುವನೆ ಧೀರ 
ತರಳೆ, ತರಳಾಕ್ಷಿ, ತರಳತೆಯುಂಟೆ ಮನದಿ? 
ಇರಿಸಿದನು ತಡೆದು ನೀನೆಚ್ಚರಿರು ಜಗದಿ.

**************************************************

ಕೆಲವರು ಹೆಣ್ಣಿನ ಸೌಂದರ್ಯವನ್ನು ಚರ್ಮದ ಬಣ್ಣದಿಂದ ಗುರುತಿಸಬಯಸುತ್ತಾರೆ. ಸೌಂದರ್ಯವಿರುವುದು ಬಣ್ಣದಲ್ಲಿ ಅಲ್ಲ. ಕವಿಯ ಕಣ್ಣಿಗೆ ಬಿದ್ದ ಚೆಲುವೆಯು ಕೆನೆಹಾಲಿನ ಬಿಳಿಬಣ್ಣದವಳಲ್ಲ. ನಸುಕೆಂಪುಬಣ್ಣದವಳೂ ಅಲ್ಲ. ಎಣ್ಣಗಪ್ಪಿನ ಮಸುಕುಬಣ್ಣದ ಚೆಲುವೆ.  ಕಪ್ಪು ಕತ್ತುರಿಯಲ್ತೆ. ಪರಿಮಳಿಸುವ ಗುಣಶೀಲಗಳು, ಮುಖಕ್ಕೆ ಬೆಳದಿಂಗಳು ಹರಿದಂತಹ ಅರಳುಗಣ್ಣಿನ ಚೆಲುನಗುವು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.

     ಬೊಗಸೆಗಣ್ಣಿನ ಈ ಕೃಷ್ಣ ಸುಂದರಿಯ ಮೊಗದಾವರೆಯು  ಅರಳುಗಣ್ಣುಗಳ ಚೆಲುನಗುವಿನಿಂದ  ನೋಡುಗರಿಗೆ ಯಾರಮನೆಯ ಚೆಲುವೆ ಈಕೆ ಎಂಬ ಅಚ್ಚರಿಯನ್ನುಂಟುಮಾಡುತ್ತದೆ. ಈಕೆಯನ್ನು ವಿರಿಸುವ ಅದೃಷ್ಟವಂತನಿಗೆ ಈಕೆ ಜಂಬುನೇರಳೆಯ ಹಣ್ಣು ಎಂದು ಕವಿ ಬಣ್ಣಿಸುತ್ತಾರೆ.

     ಚೆಲುವೆಯೆಂದೊಡೆ, ಇವಳೇನು ದಂತಧವಳದ ಮೈಯವಳಲ್ಲ. ಊಹೂಂ! ಕೆಂಬಣ್ಣದ ಸುಂದರಿಯೂ ಅಲ್ಲ. ಮಸುಕುಕಾದ  ಶ್ಯಾಮಲವರ್ಣದಿಂದ ಕಾಂತಿಯುತವಾಗಿ ಮಿನುಗುತ್ತಿದ್ದಾಳೆ.
ತಿಳಿಯಾದ ಹೊಗೆಯ ಬಣ್ಣದಂತಹ ತೆಳುಮೈಯವಳು‌. ಮಸುಕಾದ ಕೃಷ್ಣಕಾಂತಿಯು ಇವಳ ಮೈಸೊಬಗನ್ನು ಶೋಭಿಸುತ್ತಿದೆ. 

ಸ್ನಿಗ್ಧಸ್ವಭಾವದ ಈ ನವಕಾಂತಿಯ ತರುಣಿಯು  ಒಂದಿನಿತು ತುಟಿತೆರೆದು ಮಂದಹಾಸವನ್ನು ಬೀರುತ್ತಿದ್ದರೆ, ಬೆಳ್ನಗೆಯ ಬೆಳಕು ಹೊರಸೂಸುತ್ತದೆ.

ಮೋಡಗಳ ನಡುವೆ  ಚಂದ್ರಕಲೆಯಂತೆ ಶೋಭಿಸುತ್ತಾಳೆ. ಶ್ಯಾಮಸುಂದರಿಯು ‌ಮೋಡವಾದರೆ  ಅವಳ ನಗುವಿನಿಂದ ಒಂದಿನಿತು ಇಣುಕುವ ಬಿಳುಪಾದ ರದನಗಳ ಕಾಂತಿಯು ಚಂದ್ರಕಾಂತಿ!  ಕವಿಯು ಅದೆಂತಹ ಸುಂದರ ಚಿತ್ರವನ್ನು ಕಲ್ಪಿಸುತ್ತಾನೆ! 

      ಹಣೆಯ ಅತ್ತಿತ್ತ  ಸುರುಳಿ ಸುರುಳಿಯಾಗಿ ಹಾರಾಡುವ  ಮುಂಗುರುಳಿನ ಕುಣಿತವು ಸಾಗರದ ಅಲೆಗಳಂತೆ   ಕಂಗೊಳಿಸುತ್ತಿದೆ. ಚಂಚಲವಾದ ಕಂಗಳ ನೋಟವು  ‌ಮಿನುಗುತ್ತಾ ನೋಡುಗರ ಕಂಗಳಿಗೆ ಹಬ್ಬವಾಗುತ್ತಾಳೆ.

      ಈ ಶ್ಯಾಮಸುಂದರಿಯ ನುಣ್ಣನೆಯ ಕೆನ್ನೆಗಳಲ್ಲಿ‌ತುಂಬಿಹೊರಸೂಸುವ ನಗುವು ಮಾಣಿಕ್ಯವು ಮಿನುಗುತ್ತಿರುವಂತೆ ಭಾಸವಾಗುತ್ತಿದೆ. 

    ಈಕೆಯ ಮೊಗವು ಚೆಂಗುಲಾಬಿಯಾದರೆ ಶರೀರವು ಹಸಿರೆಲೆಗಳಿಂತೆ ಶೋಭಿಸುತ್ತಾಳೆ. ಸಸ್ಯಶ್ಯಾಮಲೆಯಾಗಿ ಶೋಭಿಸುವ  ಈ ಸೌಂದರ್ಯಲಕ್ಷ್ಮಿಯು,  ಹೆಚ್ಚು ಎತ್ತರದನಿಲುವಲ್ಲ, ಹಾಗೂ ಕುಳ್ಳಿಯೂ ಅಲ್ಲದ ಸುಂದರ ನಿಲುವಿನ ತನುಗಾತ್ರದವಳು.

ತಾರುಣ್ಯದ ತೊನೆಯುವ ತನುವಿಗೆ ಇವಳ ನಿಲುವಿನಭಂಗಿಯೇ  ಆಭೂಷಣದಂತಿದೆ.
ನೋಡುಗರ ಕಣ್ಣು ಮನಸುಗಳ ಲವಲವಿಕೆ ಹರ್ಷತರಂಗಗಳನ್ನು ಬಡಿದೆಬ್ಬಿಸುವ ಸುಮಕೋಮಲವಾದ ಅಂಗಾಂಗಗಳಿಂದ    ಕನಸಿನ ಕನ್ಯೆಯಂತೆ ಶೋಭಿಸುತ್ತಿದ್ದಾಳೆ.
        
ಸಹಜವಾದ ಸೌಂದರ್ಯವುಳ್ಳ ಕನ್ನೆಗೆ  ಕಟ್ಟಿಕೊಂಡ ಆಭರಣಗಳು ಬೇಡ.  ಈ ಕೃಷ್ಣವೇಣಿಯು  ಸೌಂದರ್ಯವರ್ಧಕಗಳಾಗಿ ಅಲಂಕರಣಗಳನ್ನು ಮೈಮೇಲೆ ಪೇರಿಸಿದವಳಲ್ಲ.  ಒಡವೆಗಳ ಮೆರುಗಿಗೆ ಮನಸೋತವಳಲ್ಲ. ಉಡುಗೆ ತೊಡುಗೆಗಳಲ್ಲಿ ಆಡಂಬರದ ಭೋಗವಿಲಾಸಗಳ ಪ್ರದರ್ಶನವಿಲ್ಲ‌. ನಿರಾಭರಣ ಸುಂದರಿ‌.

 ಮುಖದಲ್ಲಿ ತಾವರೆಯಂತಹ ಬೆಡಗಿನ ಕಾಂತಿಯಿದೆ.  ನಗುಮೊಗದ ಅರವಿಂದದಂತಹ ಶೋಭೆ. ಇಂತಹ ಸೌಂದರ್ಯದ ಖನಿಯಾಗಿರುವಲ್ಲಿ, ದೇಹದ ಬಣ್ಣ ಕರಿ ಮೋಡದಂತಿದ್ದರೇನು! ಬೆಳ್ಮುಗಿಲಂತಿದ್ದರೇನು! ಬಣ್ಣವು ಗಣನೆಗಿಲ್ಲ. ಗುಣವೇ ಬಣ್ಣ! 

    ಈ ಶ್ಯಾಮಲೆಯ  ಸೌಂದರ್ಯವನ್ನು ಕಂಡ ಕಣ್ಣುಗಳು, ಯಾರಿವಳು?   ಹೆಸರೇನೋ? ಯಾರ ಮನೆಯವಳೋ!  ತನ್ನ ಮನೆತುಂಬುವವಳಾಗ ಬಹುದೇ  ಎಂದು ಹತ್ತಾರು ಕನಸಿನ ಪ್ರಶ್ನೆಗಳಿಗೆ ಆಹಾರವಾಗುತ್ತಾಳೆ..
    
 ಸುಸಂಸ್ಕೃತವಾದ ಸ್ನಿಗ್ಧ ಸ್ವಭಾವವನ್ನು ಕಂಡಾಗ, ಒಳ್ಳೆಯ ಮನೆತನದಲ್ಲಿ ಹುಟ್ಟುದವಳೆಂದು ಅವಳ ನಯವಿನಯಗಳೇ  ಮಾತಾಡುತ್ತವೆ. ತೊನೆದಾಡುವ ತುಂಬುಯೌವನದ ಸ್ನಿಗ್ಧ ಸೌಂದರ್ಯಕ್ಕೆ ಆಹಾರವಾಗುವ ನೋಟಗಳು ಇವಳೆನ್ನ ಮನದನ್ನೆಯಾಗಲಾರಳೇ ಎಂದು ಹಗಲುಕನಸು ಕಾಣುತ್ತಾರೆ. ಇವಳೆನ್ನ ರಾಣಿಯಾದರೆ, ನಿಶ್ಚಿಂತೆಯ ಬದುಕು,  ಸಂಭ್ರಮದ ವಿಲಾಸದ ಅಲೆಗಳು!  ಸಂತಸದ ಕಡಲುಕ್ಕಿಸುವ ಭಾವೀ ವಿಶ್ವಾಸ! 

ಇಂತು ಕಂಡ  ಕೃಷ್ಣವೇಣಿಯಾದ ಸುಂದರಿಯ ಮಧುರ ನೆನಪುಗಳೇ  ನವಚೈತನ್ಯಲಹರಿಗೆ ಕಾರಣವು! ಮಧುರ ನೆನಪುಗಳೇ ವರವು!

ಶ್ಯಾಮಲವರ್ಣದ ಈ ಸುಂದರಿಯನ್ನು ವರಿಸುವವನೇ ಧೀರ ಭಾಗ್ಯವಂತ!  ಚಂಚಲವಾದ  ಮೀನಾಕ್ಷಿಯೇ ಮನಸಲ್ಲಿ ಚಾಂಚಲ್ಯವು ಇಲ್ಲವಷ್ಟೆ!  ನೋಟದಲ್ಲಿರುವ ಚಾಂಚಲ್ಯವು ಮನದೊಳಗೆ ಇಳಿಯದಿರಲಿ. ನೀನು ಎಚ್ಚರವಾಗಿರು ಎಂಬ ನಿಶಾನೆಯಾಗಿ ಪರಮಾತ್ಮನು  ನಿನ್ನನ್ನು ಶ್ಯಾಮಲೆಯಾಗಿ ಸೃಷ್ಟಿಸಿರಬೇಕು
ಭಾವಾನುವಾದ : ©✒ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Thursday 21 December 2023

ಕಟ್ಟೆದಾಟು (Tennyson’ s “Crossing the Bar") - ಕೇತಕೀವನ - ಡಿವಿಜಿ

ರವಿಯಸ್ತಮಯ ಶುಕ್ರನುದಯ ಜೊತೆಗೂಡಿರಲು
ಸ್ಫುಟದಿ ಕರೆಯೆನಗೆ ಬರಲಿ;
ಕಡಲೊಳೆನ್ನಯ ಹಡಗನಾಗ ನಾಂ ತೇಲ್ಬಿಡಲು
ಕಟ್ಟೆಯೆಡೆ ಮುಲುಗದಿರಲಿ.

ಪಾರವಿಲ್ಲದ ಕಡಲಿನಿಂದುಕ್ಕಿ ಬಂದ ನೆರೆ
ತನ್ನೆಡೆಗೆ ಮರಳಿ ಸಾರ್ಗುಂ;
ನೊರೆಮೊರೆತಗಳಿಗೆಡೆಯ ಬಿಡದಷ್ಟು ತುಂಬುನೆರೆ
ಭರದಿ ನಿದ್ರೆಯನು ಪೋಲ್ಗುಂ.

ಸಂಜೆ ಬೆಳಕಾಗ; ದೇಗುಲದಿ ಘಂಟೆಯ ಮೊಳಗು;
ಆ ಬಳಿಕ ಕತ್ತಲಿರುಳು;
ಕೇಳ ಬರದಿರಲೆನಗೆ, ನಾಂ ಪೊರಮಡುವ ಘಳಿಗೆ,
ಬೀಳ್ಕೊಟ್ಟು ಕಳುಹುವಳಲು.

ಸ್ಥಲ ಕಾಲಗಳ ನಮ್ಮ ದಡದಿಂದ ನೆರೆಯೆನ್ನ
ಬಲು ದೂರಕೊಯ್ಯಬಹುದು;
ಕಟ್ಟೆಯನು ದಾಟಿ ನಾನೆಮ್ಮ ನೌನಾಯಕನ
ಸಮ್ಮುದಿ ನಿಲ್ಲಲಹುದು.

********************************

Sunset and evening star,
      And one clear call for me!
And may there be no moaning of the bar,
      When I put out to sea,

   But such a tide as moving seems asleep,
      Too full for sound and foam,
When that which drew from out the boundless deep
      Turns again home.

   Twilight and evening bell,
      And after that the dark!
And may there be no sadness of farewell,
      When I embark;

   For tho' from out our bourne of Time and Place
      The flood may bear me far,
I hope to see my Pilot face to face
      When I have crost the bar.

*****************************
(ಆಲ್ಫ್ರೆಡ್ ಲಾರ್ಡ್ ಟೆನಿಸನ್ ಅವರ 'ಕ್ರಾಸಿಂಗ್ ದಿ ಬಾರ್' ಆಂಗ್ಲ ಕವನದ ಅನುವಾದ) 
ಕವಿ ಟೆನಿಸನ್ ಜನನ: ೧೮೦೯
ಕವನ ರಚನೆ: ೧೮೮೯
ಕವಿ ಟೆನಿಸನ್ ನಿಧನ: ೧೮೯೨
~~~~~~~~~~~~~
ಆಂಗ್ಲಕವಿ ಆಲ್ಫ್ರೆಡ್ ಟೆನಿಸನ್ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮುಂಗಾಣ್ಕೆಯ ಮರಣವನ್ನು  ನಿರಾಕರಿಸದೆ, ಸಮಾಧಾನದ ಚಿತ್ತದಿಂದ   ಪಯಣದ ಹಡಗಿನ ಪಯಣಿಗನಾಗಿ ಭರವಸೆಯಿಂದ ಸ್ವಾಗತಿಸುತ್ತಾರೆ.

ಸೂರ್ಯನು ಅಸ್ತಮಿಸುವ ಇಳಿಸಂಜೆಯ ಕಾಲ ಸಮೀಪಿಸಿದೆ. ಸೂರ್ಯನು ಮುಳುಗಿದ ಮೇಲೆ ಎಲ್ಲೆಡೆ ಕತ್ತಲಾವರಿಸುತ್ತದೆ. ಆದರೆ, ರವಿಯು ಅಸ್ತಮಿಸುವ ಸಮಯದಲ್ಲಿ ಆಗಸದಲ್ಲಿ ಬೆಳ್ಳಿಚಿಕ್ಕೆಯಾಗಿ ಶುಕ್ರನ ಉದಯವಾಗುತ್ತದೆ. ಕತ್ತಲಾವರಿಸು ಸಮಯ ಬೆಳಕಿನ ರೇಖೆಯೊಂದು ಆಕಾಶದಲ್ಲಿ ಮೂಡುತ್ತದೆ.

       ರವಿಯು ಅಸ್ತಮಿಸುವ ಸಮಯದಲ್ಲಿ ಬೆಳ್ಳಿ‌ಮೂಡುವ ಸಮಯದಲ್ಲಿ  ತನಗೆ ಹಡಗಿನ ಪಯಣಕ್ಕೆ ಕರೆಬರಲಿ ಎಂದು ಬಯಸುತ್ತಾರೆ. ಅಸ್ತಮಾನವು ಕವಿಯ ಇಳಿವಯಸ್ಸು ಹಾಗೂ ಬಾಳುವೆಯ ಅಂತಿಮಚರಣವನ್ನು ಸಂಕೇತಿಸುತ್ತದೆ.  ಹಡಗಿನ ಪಯಣದ ಕರೆಯು ಮರಣವನ್ನು ಸಂಕೇತಿಸುತ್ತದೆ. ಅನಿಶ್ಚಿತವಾದ ಬದುಕಿನಲ್ಲಿ  ಅನಿವಾರ್ಯವಾದ ಮರಣವು ಯಾವಾಗ ಬರುವುದೆಂದು ಮನುಷ್ಯನಿಗೆ ತಿಳಿದಿಲ್ಲ. ಆದರೆ, ನಿಶ್ಚಿತವಾಗಿ ಬರಲಿರುವ ಮರಣವನ್ನು ನಿರಾಕರಿಸದೆ, ಬೇಸರಿಸದೆ ಸಮಾಧಾನದ ಚಿತ್ತದಿಂದ ಸ್ವಾಗತಿಸಲು ಸಿದ್ಧನಾಗಿರಬೇಕೆಂದು ಸಂದೇಶ ನೀಡುತ್ತಾರೆ.

ವಿಷಾದವನ್ನೂ ಬೆಳ್ಳಿಯಂತಹ ಸಮಾಧಾನಚಿತ್ತದಿಂದ ಸ್ವೀಕರಿಸಬೇಕೆನ್ನುತ್ತಾರೆ‌.
ಬದುಕೆಂಬುದು ಪರಮಾತ್ಮನ‌ಲೀಲೆ. ಅವನ ಸನ್ನಿಧಿಗೆ  ನೌಕೆಯಲ್ಲಿ ಪಯಣಿಸುವುದು ಸಂತೋಷವೇ ವಿನಾ ವಿಷಾದವಲ್ಲ. ಪಯಣವು ಕಡಲಲ್ಲಿ ತೆರೆಗಳ ಏರಿಳಿತಗಳೊಡನೆ ತೊನೆದಾಡುತ್ತಾ ಸಾಗಬೇಕಿದೆ.  ರವಿಅಸ್ತಮಿಸುವ ವೇಳೆಗೆ ಶುಕ್ರನು ಬೆಳ್ಳಿಬೆಳಕಾಗಿ ಮಿನುಗಿದಾಗ  ಹಡಗನ್ನು ಕಡಲಲ್ಲಿ ತೇಲಿಬಿಡಲು ಕವಿ ಬಯಸುತ್ತಾರೆ. ವಿಷಾದವಿಲ್ಲದೆ, ಬೇಸರವಿಲ್ಲದೆ ಮಂದಹಾಸವನ್ನು ಬೀರುತ್ತಾ ಕಡೆಯಪಯಣವನ್ನು  ಬಯಸುತ್ತಾರೆ. ಮರಣವನ್ನು ನಿರಾಕರಿಸುವುದಿಲ್ಲ.  ಅನಿಶ್ಚಿತವಾದ ಬದುಕಿನಲ್ಲಿ ಅನಿವಾರ್ಯವಾದ ಮರಣವನ್ನು  ಸಮಾಧಾನಚಿತ್ತದಿಂದ ಮಂದಹಾಸದಿಂದ ಬರಮಾಡಿಕೊಳ್ಳಬೇಕೆಂದು ಕವಿಯ ಆಶಯ. ಜೀವನಪಯಣದ ಹಡಗನ್ನು ಕಟ್ಟೆಯಿಂದಾಚೆ ಕಳುಹುವಾಗ  ವೇದನೆಯೇಕೆ!  ವ್ಯಸನವೇಕೆ! ಪಯಣವು ಶುಭದಾಯಕವೆಂಬ  ಭರವಸೆಯ ಆಶಾಭಾವನೆ ಇರಬೇಕು.

  ಈ ಹಡಗು ಸಾಗುವ ಜೀವನವೆಂಬ‌ ಕಡಲಿನ ಆಳ ಪರಮಸೀಮೆಯನ್ನು ಕಂಡವರಿಲ್ಲ. ಆದರೆ ಕಡಲ ಮೇಲೆ ತೆರೆಗಳು ಅಬ್ಬರಿಸಿ ದೂರದಿಂದ ಬಂದು ಕಡಲತೀರದಲ್ಲಿ ನಿಂತ ಹಡಗಿನ ಕಟ್ಟೆಗೆ ಅಪ್ಪಳಿಸುತ್ತದೆ, ದೂರಸಾಗುತ್ತದೆ. ಮತ್ತೆಮತ್ತೆ ತೆರೆಗಳಬ್ಬರದ ಸುಯ್ಲು ಹಾರಾಡುತ್ತಲೇ ಇರುತ್ತದೆ. ಭೋರ್ಗರೆಯುತ್ತಾ ಬಂದಪ್ಪಳಿಸುವ ಹೆದ್ದರೆಗಳು ಬಂದಂತೆಯೇ  ಹಿಂತಿರುಗುತ್ತವೆ. ತೆರೆಯ ಏರಿಳಿತಗಳಿಗೆ ಕೊನೆಮೊದಲಿಲ್ಲ. ಎಡೆಬಿಡದ ನೆರೆಮೊರೆತಗಳಿಗೆ ಎಡೆಯಿಲ್ಲ, ತಡೆಯಿಲ್ಲ. ಜೀವನದಲ್ಲಿ ನಿರಂತರವಾಗಿ ಬರುವ ಏರಿಳಿತಗಳಿಗೆ ವಿರಾಮವಿಲ್ಲ.  ನೀರಸುಳಿಯ ಸುಳಿವಿನಕೇಂದ್ರವು ಆವೇಗದ ಮೌನನಿದ್ರೆಯಲ್ಲಿರುವಂತೆ, ಏರಿಳಿತಗಳ ಸುಳಿಯು ನಿದ್ರಿಸುವಂತೆ ಭಾಸವಾಗುತ್ತದೆ. ಜೀವನಸುಳಿಯಲ್ಲಿ ಅದೆಷ್ಟೋ ಜನರು ಸುಳಿಯೊಳು ಮುಳುಗುತ್ತಾರೆ.

     ಸಂಜೆಯ ವೇಳೆಗೆ ಸೂರ್ಯಮುಳುಗಿದ ಮೇಲೆ ಮನೆಮನೆಗಳಲ್ಲಿ, ಮಂದಿರಗಳಲ್ಲಿ ದೀಪಗಳು ಬೆಳಗುತ್ತವೆ. ಕತ್ತಲೆಯನ್ನು ದೂರಸರಿಸುತ್ತವೆ. ದೇವಮಂದಿರಗಳಲ್ಲಿ ಮೊಳಗುವ ಘಂಟೆಗಳ ಮಂಗಳಧ್ವನಿಯು  ಜನರನ್ನು ಭಗವಂತನ ಸನ್ನಿಧಿಗೆ ಕೂಗಿ ಕರೆಯುತ್ತವೆ.  ಗಂಟೆಗಳ ದನಿ ನಿಂತಮೇಲೆ ನೀರವ ಕಾರಿರುಳು! 

ಪಯಣಕ್ಕಾಗಿ ಹಡಗನ್ನೇರಿ ಸನ್ನದ್ಧನಾದ ಕವಿಗೆ ದೇಗುಲದ ಮಂಗಲಧ್ವನಿಯು ದೂರದ ಪಯಣದ ಕರೆಯಾಗಿ ಕೇಳಿಸುತ್ತದೆ. ಆದ್ದರಿಂದ ಈ ಗಂಟೆಗಳ ದನಿಮೂಡುವಲ್ಲಿಗೆ ಹೋಗಬಯಸುವುದಿಲ್ಲ. ತಾನು ಹೊರಡುವ ಸಮಯ ಸನ್ನಿಹಿತವಾಗಿದೆ.   ಬೀಳ್ಕೊಡಲು ಬರುವವರ ಅಳಲನ್ನು ಕವಿಯು ಕೇಳಬಯಸುವುದಿಲ್ಲ.  ಸಂಸಾರಿಕ ವ್ಯಾಮೋಹದಿಂದ ಬಿಡಲಾರೆ ಎಂಬ ದುಃಖ ಕಣ್ಣೀರು ವಿಷಾದ ಅಳಲುಗಳನ್ನು ಕವಿಯು ನಿರಾಕರಿಸುತ್ತಾರೆ. ತುಟಿಯಂಚಿನಲ್ಲಿ ಬೆಳ್ಳಿ ರೇಖೆಯಂತೆ ನಸುನಗುತ್ತಾ ಸಮಾಧಾನಚಿತ್ತದಿಂದ ಪಯಣಿಸಲು ಬಯಸುತ್ತಾರೆ.

             ಸಮುದ್ರದ ದಂಡೆಯಿಂದ ಕಟ್ಟೆದಾಟಿ ಅಂತಿಮ‌ಪಯಣವು ಆರಂಭವಾಗುವುದು. ಪಯಣ ಆರಂಭವಾಗುವ ನಿಗದಿಯಾದ ಸಮಯ ತಿಳಿದಿಲ್ಲ. ಢಣ್ ಎಂದು ಗಂಟೆ ಬಾರಿಸಿತೆಂದರೆ  ಹಡಗಿನ ನಾವಿಕನು ಹಡಗಿನ ಪಯಣಕ್ಕೆ ಚಾಲನೆ ನೀಡುವನು. ತಾನು ನಾವಿಕನ ಆಣತಿಯಂತೆ ಸಂತೋಷದಿಂದ ಅವನು ತೋರಿದ ದಾರಿಯಲ್ಲಿ ತಡಬಡಿಸದೆ ಸಮಾಧಾನಚಿತ್ತದಿಂದ ಆನಂದದಿಂದಲೇ ಪಯಣಿಸಬೇಕು. ಪಯಣವು ಅನಿವಾರ್ಯ. ಪಯಣದ ಕರೆಗಾಗಿ ಸಿದ್ಧರಾಗಿರುವುದು ಅನಿವಾರ್ಯ. 
ಕವಿಯು ಮರಣವನ್ನು ಸಮಾಧಾನಚಿತ್ತದಿಂದ ಸ್ವಾಗತಿಸುತ್ತಾ ೧೮೮೯ರಲ್ಲಿ ಕವನವನ್ನು ಬರೆದರು.೧೮೯೨ರಲ್ಲಿ ಅಂತಿಮಕರೆ ಬಂತು ಗೊಣಗಾಡದೆ ಸಮಾಧಾನಚಿತ್ತದಿಂದ ಅಂತಿಮ ಪಯಣದ ವಾಹನವನ್ನೇರಿದರು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Wednesday 20 December 2023

ಮುಂದೆ ನೋಡು [ರಾಬರ್ಟ್‍ ಬ್ರೌನಿಂಗ್‍ ಕವಿಯ “ಪ್ರಾಸ್ಪೈಸ್‍" (Prospice) ಎಂಬ ಕವಿತೆಯ ಛಾಯೆ] - ಕೇತಕೀವನ - ಡಿವಿಜಿ

೧ 
ಮೃತ್ಯುಭಯವೇನ್‍?-ಎನ್ನ ಕಂಠದಲಿ ಕಫದೆಳೆತ; 
ಮೋರೆಯಲಿ ಕುಳಿರು; 
ಪಯಣ ಕೊನೆಯೆನಿಸುತಿದೆ; ಬಿರುಗಾಳಿಗಳ ಹೊಡೆತ; 
ಪೂರ ಕಾರಿರುಳು. 

೨ 
ಹಗೆಯೆನಿಪನೆಡೆಯಿದವನಿಲ್ಲಿಯೇ ನಿಂದಿಹನು 
ಘೋರ ರೂಪಿಂದೆ 
ಆದೊಡಂ ಬರಲೆಬೇಕಿತ್ತ ಬಲುಹುಳ್ಳವನು 
ಧೀರಗತಿಯಿಂದೆ. 

೩ 
ಪಯಣ ಮುಗಿದೀ ಶಿಖರ ಸೇರ್ದಂದು ಕಳಚುವುದು 
ಎಲ್ಲ ತಡೆಗಡುವು. 
ಇನ್ನುಮತ್ತಲ್‍ ಪೋರಿ ಸಾಧಿಸುವುದಿರಬಹುದು 
ಗೆಲುವಿನಾತೊಡವು 

೪ 
ಪೋರುವನೆ ನಾನೆಂದುಮ್‍. ಇನ್ನೊಂದಿಹುದು ಪೋರ್ಕೆ 
ಕಡೆಯದುಚ್ಚದುದು. 
ಸಾವೆನ್ನ ಕಣ್‍ಕಟ್ಟಿ “ನುಸುಳು ನೀನ್‍" ಎನ್ನುವೊಡೆ 
ಎನಗೆ ಮೆಚ್ಚದದು. 

೫ 
ಆಗದದು; ನಾನೆಲ್ಲವನುಮನುಭವಿಸಬೇಕು 
ಹಿರಿ ಧೀರರವೊಲು 
ಪೊತ್ತು ಭಾರವ, ಜೀವನದ ಋಣವ ತೆರಬೇಕು 
ನೋವು ಚಳಿಯಿರುಳು. 

೬ 
ಧೀರಂಗೆ ತಿರುಗೀತು ನೀಚವುಚ್ಚಕೆ ಘಳಿಲೆ 
ಕಾರಿರುಳು ಮುಗಿದು. 
ಸೃಷ್ಟಿ ಭೂತಗಳೊರಳೆ ಪೈಶಾಚಗಳ ರಗಳೆ 
ಕಳೆವುದಳಿಯುವುದು. 

೭ 
ಅಂದೆನ್ನ ನೋವೆನ್ನ ಮಾರ್ಪಟ್ಟು ಶಾಂತಿಯಾಗುವುದು, 
ಬೆಳಕು ಬೆಳಗುವುದು 
ನಿನ್ನ ನಾನ್‍ ಓ ಜೀವ ಜೀವನವೆ ತಬ್ಬಿಕೊಳಲಹುದು, 
ಉಳಿದುದೀಶನದು

*********************************************
ಕವಿ ರಾಬರ್ಟ್ ಬ್ರೌನ್ ಅವರು ಜೀವನದ ಏರಿಳಿತಗಳನ್ನು ಧನಾತ್ಮಕವಾಗಿ ಸ್ವೀಕರಿಸಿದವರು‌. ತಂದೆಯೊಡನೆ ವಿರೋಧ    ಕಟ್ಟಿಕೊಂಡು  1846ರಲ್ಲಿ ರಾಬರ್ಟ್ ಅವರು ತಾನು ಪ್ರೀತಿಸಿದ ಎಲಿಝಬೆತ್ ಅವರನ್ನು ಮದುವೆಯಾದರು. ಪ್ರೀತಿಸಿ ಮದುವೆಯಾದ ಹೆಂಡತಿ1861ರಲ್ಲಿ ಗತಿಸಿದಳು. ಅನಿರೀಕ್ಷಿತವಾಗಿ ಬಂದ ಈ ಕಹಿಯನ್ನೂ ಕವಿಯು ದಿಟ್ಟತನದಿಂದ ಎದುರಿಸಿದರು. ಸ್ಥಿತಪ್ರಜ್ಞನಾಗಿ  ಸೆಟೆದು ನಿಂತು ಸಾವನ್ನು  ಕಂಡು ಹಿಂದೋಡಬೇಡ ಎಂದು ತನಗೆ ತಾನೇ ಸಮಾಧಾನವನ್ನು ಹೇಳುತ್ತಾ 'ಸಾವೆಂಬುದು ಮಹಾನವಮಿ' ಎಂಬಂತೆ ಅಂಜಲಿಲ್ಲ,ಅಳುಕಲಿಲ್ಲ.  ಸಾವು ಮತ್ತು ನೋವನ್ನು ಪರಿಪೂರ್ಣವಾಗಿ ಪಯಣದ ದಾರಿ ಎಂದು ಸ್ವಾಗತಿಸಿ ಮುನ್ನಡೆದರು. ರಾಬರ್ಟ್ ಬ್ರೌನ್ ಅವರ ಈ ಕವನವು 'ಹಿಂದೆನೋಡಬೇಡ ಮುಂದೆ ನೋಡು' ಎಂದು ಸಂದೇಶಿಸುತ್ತದೆ. ಮೃತ್ಯುವಿಗೆ ಹೆದರದಿರು ಎನ್ನುವುದು ಕವನದ ಆಶಯ.

         ಮರಣದಿಂದ ಬೆದರದೆ, ಮರಣವನ್ನು ನಿಂದಿಸದೆ, ಮರಣವೆನ್ನುವುದು ಜೀವನವೆಂಬ ಪರ್ವತಾರೋಹಣವೆಂದು ಬಗೆಯುತ್ತಾರೆ. ಪಯಣದಲ್ಲಿ ತೊಡಕುಗಳುಂಟು, ತಿಣುಕುಗಳುಂಟು, ಏಣುಕೊಳ್ಳ ಕೊನ್ನಾರಗಳಿವೆ. ಮುಗ್ಗರಿಸುವ ಕೊರಕಲು ಸನ್ನಿವೇಶಗಳೂ ಇವೆ ಎಂಬುದನ್ನು ಬಲ್ಲ ಕವಿಯು, ಮಡದಿಯ ಸಾವನ್ನು ಕಂಡು ಕಂಗೆಡದೆ ಬರಲಿರುವ ತನ್ನ ಮರಣವನ್ನೂ ಎಂಟೆದೆಯಿಂದ ಸ್ವಾಗತಿಸಲು ಸಿದ್ಧರಿದ್ದಾರೆ.

   ಡಿ ವಿ ಗುಂಡಪ್ಪನವರ ಕನ್ನಡದ ಅನುವಾದದ ಕಡೆಗೆ ಗಮನಹರಿಸೋಣ
 ಮರಣದಿಂದ ಭಯವೇ? ಪ್ರೀತಿಸಿ ಮದುವೆಯಾದ ಮಡದಿಯ ಸಾವು ಅಪಾರವಾದ ವೇದನೆಯ ಯಾತನೆಯನ್ನು ಉಂಟುಮಾಡಿದೆ. ಸಾವಿಗಾಗಿ ಹೆದರದೆ, ಕುಗ್ಗದೆ,   ಮೃತ್ಯುವಿನಿಂದ ಭಯವೇ?  ಪಯಣದ ದಾರಿಯಲ್ಲಿ ವಾತಾವರಣದ ಏರಿಳಿತದ ವೈಪರೀತ್ಯದಿಂದ ಆರೋಗ್ಯ ಏರುಪೇರಾಗಿದೆ. ಗಂಟಲು ಕಫದ ಸೆಳೆತದಿಂದ ನರಕ ಯಾತನೆ. ಮೂಳೆಕೊರೆಯುವ ಚಳಿಯಿಂದ ಮೋರೆಯ ಚರ್ಮವು ನಲುಗುತ್ತಿದೆ. ಒಲವಿನ‌ಮಡದಿಯ ಪಯಣವು ಕೊನೆಗೊಂಡ ಹಂತದಲ್ಲಿ ನನ್ನ  ಪರ್ವತಯಾನದ ಕೊನೆಯ ಹಂತವು ಸಮೀಪಿಸುವಂತಿದೆ. ಬಿರುಗಾಳಿಯ ಹೊಡೆತ ಅಪ್ಪಳಿಸುತ್ತಿದೆ. ಮುಂದಿನ ದಾರಿಯೆಲ್ಲವೂ ಗಾಢಾಂಧಕಾರದ ಕಗ್ಗತ್ತಲೆಯ ದಾರಿ.  ಆದರೇನು ಇಟ್ಟಹೆಜ್ಜೆಗಳನ್ನು ಮುಂದಿಡುವುದು ವೀರ ಸೈನಿಕನ ನಡೆ. ಮುಂದೆ ನೋಡುತ್ತಾ ನಡೆಯುವುದು ಕಾಲನ ನಿರ್ದೇಶ.
 ಹಗೆ ಎನಿಪನ ಎಡೆ ಇದು ಇಲ್ಲಿಯೇ ನಿಂದಿಹನು.

ಏರುಹಾದಿಯ ದೀರ್ಘಪ್ರಯಾಣದಲ್ಲಿ   ಹಗೆಯಂತೆ ಮೃತ್ಯುದೇವನು ಇಲ್ಲೇ ಎಲ್ಲೋ ಘೋರ ರೂಪದಿಂದ ಸುಳಿದಾಡುತ್ತಿದ್ದಾನೆ‌. 

ತನ್ನಲ್ಲಿ ಬಲವಾದ ನಂಬುಗೆಯುಳ್ಳವನು   ಧೀರಗತಿಯಿಂದ ಮುಂದೆ ಬರಲೇ ಬೇಕು. ಅದು ಅನಿವಾರ್ಯ.  ಬಲುಹುಳ್ಳವನು ಆರಂಭಿಸಿದ ಪಯಣದ ದಾರಿಯಲ್ಲಿ ಮುಂದೆ ನೋಡುತ್ತಾ ದಿಟ್ಟಹೆಜ್ಜೆಗಳನ್ನು ಉನ್ನತ ಏರಿನತ್ತ ಇಡುವುದೇ ಕರ್ತವ್ಯ. ಸತ್ತವರಿಗಾಗಿ ಕಣ್ಣೀರಿಡುತ್ತಾ ಮೂಲೆಸೇರುವಂತಿಲ್ಲ. ಆದರೆ ಗತಿಸಿದಂತವರು ನಡೆದ ದಾರಿಯಲ್ಲಿ ನಡೆದು ಅವರ ಒಲವಿಗೆ ಸಾರ್ಥಕತೆಯನ್ನು ಮೂಡಿಸಬೇಕು.

     ಶಿಖರದತ್ತ ಪಯಣವು ಸಾಗಬೇಕಿದೆ.  ಏಣು, ಕಮರಿ, ಕೊಳ್ಳಕೊನ್ನಾರಗಳ ದಾರಿಯನ್ನು ಕ್ರಮಿಸುತ್ತಾ ಶಿಖರದ ತುದಿಯನ್ನೇರಿದಾಗ  ಎಲ್ಲಾ ತಡೆಗಳು ಕಳಚಿಕೊಳ್ಳುವುದು.  

ಶಿಖರವನ್ನೇರಿದಷ್ಟಕ್ಕೆ ಪಯಣ ಮುಗಿಯುವುದಿಲ್ಲ. ನನಗಿಂತ ಮೊದಲೇ ಅಲ್ಲಿ ಸೇರಿದವರ ಜೊತೆಗೂಡಿ ಇನ್ನೂ ಸಾಧಿಸಲು ಉಳಿದಿದೆ. ಕವಿಯು, ಅಲ್ಲಿ ಸಾಧಿಸುವ ಮೂಲಕ ಗೆಲುವಿನ ಆಭೂಷಣವನ್ನು ತೊಡಬಯಸುತ್ತಾನೆ ಕವಿಯು ಹತಾಶನಲ್ಲ. ಆಶಾಭಾವನೆಯಿಂದ  ಮುನ್ನುಗ್ಗಲು ಬಯಸುತ್ತಾನೆ. ಧೀರತನದಿಂದ ಬಲವಂತನಾಗಿ ಮುನ್ನಡೆಯನ್ನು ಬಯಸುತ್ತಾನೆ.

      ನಾನು ಸಾವಿಗಾಗಿ ಹೆದರುವವನಲ್ಲ. ನಿರಂತರವಾಗಿ ಬಾಳುವೆಗಾಗಿ ಹೋರಾಡುವವನು. ಹೋರಾಟದ ಇನ್ನೊಂದು ಮಜಲು ಇದೆ. ಈ ಕಡೆಯ ಹೋರಾಟವೇ ಅತ್ಯುನ್ನತವಾದುದು. ಈ ಹೋರಾಟದಲ್ಲಿ ಸಾವೆಂಬುದು ನನ್ನೊಡನೆ ಕಣ್ಣುಮುಚ್ಚಾಲೆಯಾಡಿ ಸಾವಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿದರೆ, ನನಗದು ಮೆಚ್ಚುಗೆಯ ವಿಷಯವಲ್ಲ,  ವಿಷಾದವಾದೀತು! 

        ಊಹೂಂ! ಆಗದು, ನಾನು  ಅನುಭವಗಳಿಂದ  ತಪ್ಪಿಸಿಕೊಳ್ಳುವವನಲ್ಲ. ನಾನು ಸುದೀರ್ಘಪಯಣದ ನೋವು ನುರಿತ ಯಾತನೆಗಳೆಲ್ಲವನ್ನೂ ಮಹಾಪ್ರಸಾದವೆಂದು ಅನುಭವಿಸಬೇಕು. ವೀರಸೈನಿಕನಂತೆ, ಎಂಟೆದೆಯ ಪರ್ವತಾರೋಹಿಯಂತೆ ಅನುಭವಿಸಬೇಕು.
 ಋಣಭಾರವನ್ನು ಹೊತ್ತುಕೊಂಡು ಮುನ್ನಡೆಯಬೇಕು. ಮೈಕೊರೆಯುತ್ತಿರುವ ಈ ಕಾರುರುಳ ಪಯಣದಲ್ಲಿ ಋಣಭಾರವನ್ನು ಹಗುರಗೊಳಿಸುವುದು ಅನಿವಾರ್ಯ. 

     ಧೀರನಾದವನು  ಪಾತಾಳದಿಂದ ಔನ್ನತ್ಯದ ಪರಮತುದಿಯನ್ನು ಕತ್ತಲೆಯು ಕಳೆದು, ಶುಭಗಳಿಗೆಯಲ್ಲಿ ಜಯಿಸಬಲ್ಲನು.

ಧೀರತನದಿಂದ ಹೋರುವುದು ಅನಿವಾರ್ಯ.  ಸಾಹಸಿಯಾದವನು ದಾರಿಯಲ್ಲಿ ಎದುರಾಗುವ ಭೂತ,ಪಿಶಾಚಿಗಳ ರಗಳೆಗಳನ್ನು ಗೆದ್ದು  ವಿಜಯದ ದಾರಿಯಲ್ಲಿ ಮುನ್ನಡೆಯುತ್ತಾನೆ.

       ನಾನು ಸಾಹಸದ ದಾರಿಯ ಪಯಣವನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬರುವೆನು.  ನಿನ್ನೊಡನೆ ಸೇರುವೆನು. ಆಗ ನನಗೆ ಸಮಾಧಾನವಾಗುವುದು. ಆಗ ನನಗೆ ಶಾಂತಿಯು ದೊರಕುವುದು. ಆಗ ಬೆಳಕಾಗುವುದು. ಅಲ್ಲಿಯ ವರೆಗೆ  ಕತ್ತಲೆಯ ದಾರಿಯಲ್ಲೇ ಬರಬೇಕಾಗಿದೆ. ಬೆಳಕಾದ ಮೇಲೆ ನಾನು ನಿನ್ನೊಡನೆ ಸೇರಿದವನಾಗಿ ನಾವು ಬೆಳಗುತ್ತಿರುತ್ತೇವೆ. ಅಲ್ಲಿ ನೀನು ನನ್ನ ಬರುವಿಕೆಗಾಗಿ ಕಾಯುತ್ತಿರುವುದನ್ನು ಬಲ್ಲೆ.   ನನ್ನ ಜೀವದ ಜೀವಾಳವಾದ ನಿನ್ನನ್ನು ನಾನು, ನನ್ನನ್ನು ನೀನು  ಗಾಢವಾಗಿ ಆಲಂಗಿಸಿಕೊಂಡು ನಮ್ಮ ಪ್ರೀತಿಯನ್ನು ಅಮರವಾಗಿಸೋಣ. ಇದಕ್ಕಿಂತ ಹೆಚ್ಚಿನ ವಿಚಾರಗಳು ಪರಮಪ್ರಭುವಿನ ಇಚ್ಛೆಗೆ ಸೇರಿದುದು.
ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Tuesday 19 December 2023

ಐವತ್ತೊಂದು - ಕೇತಕೀವನ - ಡಿವಿಜಿ

ಪುರುಷಾಯುವಿನೊಳರ್ಧವಿಂದೆನಗೆ ಮುಗಿದಿಹುದು 
ಕರಡು ಮರದವೊಲೆನ್ನ ಬಾಳಿಂದಿನಿಂದಹುದು 
ಇನ್ನು ಹೊಸ ಚಿಗುರಿರದು, ಹೂವಿರದು, ಹಣ್ಣಿರದು 
ತಣ್ಣೆಳಲ ಹರವಿರದು, ತೊಗಟಿನಲಿ ಹಸಿರಿರದು; 
ಬರಿದಾಗಿ ನಿಂದಿಹುದು ಧರೆಗೊಂದು ಹೊರೆಯಾಗಿ 
ವರುಷಗಳ ಲೆಕ್ಕದಿಂದಲೆ ಗಣನೆಗೀಡಾಗಿ. 

ಮರದವೊಲು ಎಂದೆನೇನ್‍? ಎನ್ನಿಂದೆ ಮರ ಮೇಲು 
ಕೊರಗು ಹಂಗುಗಳುಳಿದುದದರ ಮೌನದ ಬಾಳು 
ಬಿಸಿಲು ಮಳೆಗಾಳಿಗಳ ಬಿರುಬಿಂಗೆ ಬೆದರದದು 
ಹೊಸ ಬಯಕೆ ಹಳೆಕೊರತೆಗಳನೆಣಿಸಿ ಕದಲದದು. 
ಆ ನಿರ್ವಿಕಾರತೆಯ ಗುಣವ ನಾಂ ಕಲಿತಿಹೆನೆ, 
ದೀನತೆಯ ತೋರದಾ ಸ್ಥೈರ್ಯವನು ಗಳಿಸಿಹೆನೆ? 
ಅಂತು ನಾಂ ಚಾಪಲದ ಭೂತದಿಂ ದೂರದಲಿ 
ಅಂತಸ್ಸಮಾಧಾನದಿಂದಿರ್ದೊಡದುವೆ ಸರಿ. 

ಸ್ಮೃತಿಯೊಂದೆ ಇನ್ನೆನಗೆ ಮಿಕ್ಕಿರುವ ಜೀವನಿಧಿ 
ಕತೆಕಗ್ಗಗಳನದರಿನೆತ್ತಿ ಮೆಲಕುವುದೆ ಗತಿ. 
ಇನ್ನು ಹೊಸ ಸಾಹಸದ ಚಿಂತೆಗಳ್ಗೆ ನಮೋ 
ಇನ್ನು ಹೊಸ ಸಾಧನೆಯ ಚಪಲಗಳ್ಗೆ ನಮೋ 
ಹಿಂದೆಂದೊ ಗೈದುದನೆ ಅಂದಿನೊಳ್ಳಿತನೆ, 
ಹಿಂದಿನಾ ಹಿರಿಮೆಯನೆ ಅಂದಿನೆಸಕವನೆ 
ನೆನೆನೆನೆದು ಬಣ್ಣಿಸುತ ರಂಗುರಂಗಿನಲಿ 
ಜನುಮ ಬರಿದಾಗಲಿಲ್ಲೆಂದು ನಟಿಸುತಲಿ 
ಕೇಳ್ವವರ ಬೇಸರವ ಮರೆತು ಬಡಬಡಿಸಿ 
ಬಾಳ್ವೆಗದರಿಂ ಸಮಾಧಾನವನು ಗಳಿಸಿ 
ಸೈಸಬೇಕಿನ್ನುಳಿದ ಬರಡುದಿನಗನಳನು 
ನೀಸಬೇಕಿನ್ನು ಮರುಭೂಮಿ ಪಯಣವನು 
ಸಾಕಿನ್ನು ದೇವ ಎನಗಿಹದ ಮಧುಪಾನ, 
ಬೇಕಿನ್ನು ವಿಶ್ರಾಂತಿ, ಬೇಕೆನೆಗೆ ಮೌನ.

****************

ಅನುಭವಗಳ  ರಸಪಾಕವಾದ ಡಿವಿಜಿಯವರು ಐವತ್ತು ಸಂವತ್ಸರಗಳನ್ನು ಕಳೆದು ಐವತ್ತೊಂದಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ಮೂಡಿದ ಭಾವಲಹರಿಯ ಪಲ್ಲವ ಐವತ್ತೊಂದು ಎಂಬ ಕವನ.

ಮನುಷ್ಯನ ಜೀವಿತಾವಧಿ ಸುಮಾರು ನೂರು ಸಂವತ್ಸರ ಎಂಬುದು ಜನಬಳಕೆಯ ಮಾತು. ಮನುಷ್ಯನು ನೂರು ವರ್ಷ ಬಾಳುವುದಾದರೆ ಅರ್ಧಾಯುಷ್ಯವು ತನಗಿಂದು ಸಂದಿತು ಎಂದು ಡಿವಿಜಿಯವರು‌ ನೆನಪಿಸಿಕೊಂಡು ಹಂಚಿಕೊಳ್ಳುತ್ತಾರೆ‌.

ಮನುಷ್ಯನು ತುಂಬು ಯೌವನದವರೆಗೆ ದೈಹಿಕವಾಗಿ ಬೆಳವಣಿಗೆಯಲ್ಲಿರುತ್ತಾನೆ. ಅರ್ಧಾಯುಷ್ಯ ಕಳೆದ ಮೇಲೆ ದೈಹಿಕವಾಗಿ ಬೆಳವಣಿಗೆಯಿಲ್ಲ. ಮುಂದಿನ ದಿನಗಳಲ್ಲಿ ದೈಹಿಕವಾಗಿ  ಹಿಂಗುವ ಕುಗ್ಗುವ ದಾರಿ. ಈ ಕಾರಣದಿಂದ  ಐವತ್ತರ ಅನಂತರ ಮುಂದಿನ  ದಿನಗಳು ಕೊರಡುಮರದಂತೆ  ಎಂದು ಬಣ್ಣಿಸಿದರು.

 ಮುಂದಿನ ದಿನಗಳಲ್ಲಿ  ನವನವೀನವಾದ ಚಿಗುರುವ ಸ್ವಭಾವಗಳಿರದು. ಹೂಗಳಂತೆ ಸಮಾಜಕ್ಕೆ ಪರಿಮಳಿಸುವ ಕಾಣಿಕೆಗಳನ್ನು ಕೊಡಲಾಗದು. ಮಾಗಿದ ಫಲಗಳನ್ನು  ನೀಡಲಾಗದು. ಮರವೇ ಬರಿದಾಗಿರುವುದರಿಂದ ಬಳಿ ಸುಳಿದಾಡುವವರಿಗೆ ನೆರಳು ನೀಡಲೂ ಸಾಧ್ಯವಾಗದು. ಮರದ ತೊಗಟೆಯು ಬಿರುಸಾಗಿ ಸಾರಹೀನವಾಗಿ ಹಸಿರೆಲೆಗಳು ಕಾಣಲಾರವು. ನಿಸ್ಸಾರವಾದ ಕೊರಡುಮರವು ಭೂಮಿಗೆ ಭಾರವೋ ಎಂಬಂತೆ ಇರುತ್ತದೆ. ಮನುಷ್ಯನು ದೈಹಿಕವಾಗಿ ಕುಗ್ಗುವತ್ತ ಸರಿಯುತ್ತಾನೆ, ಮಾನಸಿಕವಾಗಿಯೂ ಕುಗ್ಗುವ ಸಂದರ್ಭಗಳು ಬರುತ್ತವೆ. ತನಗೆ ಎಷ್ಟು ವರ್ಷಗಳಾದವು ಎಂದು ಗಣಿಸುತ್ತಲೇ ಇರುವವರು ದಿನೇ ದಿನೇ ಕುಗ್ಗುತ್ತಾ   ಮೂಲೆಸೇರುತ್ತಾರೆ.

ಮರದಂತೆ ಜೀವಂತ ಕೊರಡಾಗುತ್ತಾರೆ ಎಂಬುದು ಸರಿಯಾಗದು.  ಮನುಷ್ಯನ ಬರಡುಜೀವನವನ್ನು ಮರದೊಡನೆ ಹೋಲಿಸುವುದೂ ಸರಿಯಾಗದು. ಮನುಷ್ಯನಿಗಿಂತ ಮರಗಳೇ ಮೇಲು. ಮರಗಳು ಕೊರಗುವುದಿಲ್ಲ.  ಹಂಗಿನಾಳಾಗುವುದಿಲ್ಲ. ವಟವಟವೆಂದು ಯಾರನ್ನೂ ನಿಂದಿಸದೆ, ನಿಂದಿಸಿಕೊಳ್ಳದೆ ಮೌನವಾಗಿ ದಿನಗಳನ್ನು  ಕಳೆಯುತ್ತದೆ.  ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಹೊಂದಿಕೊಂಡು ಬಾಳುತ್ತವೆ. ಬಿಸಿಲಿಗೆ ಬೇಸರವಿಲ್ಲ. ಮಳೆಗಾಳಿಗಳ ಹೊಡೆತಕ್ಕೆ  ಬೆದರುವುದಿಲ್ಲ. ಹಳೆಯ ಕೊರತೆಗಳನ್ನು ನೆನಪಿಸಿಕೊಳ್ಳುವುದಿಲ್ಲ.ಭಾವೀ ಭವಿಷ್ಯದ ದಿನಗಳ ಬಗೆಗೆ ಕನಸುಕಾಣುವುದಿಲ್ಲ. ಕೊರಡುಮರವು ನಿಶ್ಚಲವಾಗಿರುತ್ತದೆ.

ತರುವು ಕಲಿಸುವ ನಿರ್ವಿಕಾರಗುಣವನ್ನು ಮನುಷ್ಯನು ಐವತ್ತು ಉರುಳಿದರೂ ಕಲಿತಿರುವುದಿಲ್ಲ‌.
ದೈನ್ಯತೆಯನ್ನು ತಿರೆದು ಸ್ಥಿರತೆಯನ್ನು ಸಾಧಿಸಿರುವವರು ಎಷ್ಟು ಮಂದಿ ಇದ್ದಾರೆ!  ವಿರಳಾತಿವಿರಳರು!  ಪಂಚಭೂತಗಳಿಂದೆದ್ದು ಬಂದ ಈ ದೇಹವು ಪ್ರಾಪಂಚಿಕ ಆಕರ್ಷಣೆಯ ಚಪಲತೆಯಿಂದ ಹೊರಬಂದು, ಆಂತರಿಕ ಸಮಾಧಾನವನ್ನು  ಕಂಡು ಮೌನದ ಅರಮನೆಯನ್ನು ಹೊಕ್ಕರೆ ಅದುವೇ ನಿಜವಾದ ಅನುಭವ. ಅಂತಹವನು ಅನುಭಾವಿ! .

ಐವತ್ತರ ಅನಂತರದ ಬಾಳುವೆಯು ಹಳೆಯ  ಹೊನ್ನು ಇಲ್ಲವೇ ಹಳವಂಡಗಳ ನೆನಪುಗಳ ಸುರುಳಿ ಬಿಚ್ಚಿಕೊಳ್ಳುವುದರಲ್ಲೇ ಸವೆಯುವುದೇ!? ಕಂತೆ ಕಗ್ಗಗಳನ್ನು ಬಿಚ್ಚುವುದು, ಹೊಸೆಯುವುದರಲ್ಲೇ   ಜೀವನಿಧಿಯನ್ನು ಅರಸುವುದು ತರವಲ್ಲ.

ಮುಂದಿನ ದಿನಗಳು ಹೊಸಸಾಹಸದ ದಿನಗಳಲ್ಲ. ಚಿಂತೆಗಳ ಕಂತೆಗಳನ್ನು ದೂರಚೆಲ್ಲಬೇಕು. ಒಳಿತಿನ ಚಿಂತನೆಯ ದಾರಿಯಲಿ ಹೆಜ್ಜೆಗಳನ್ನಿಡಬೇಕು.

ಹಿಂದಿನ ದಿನಗಳ ಒಳಿತಿನವಿಚಾರಗಳನ್ನು ಸ್ಮರಿಸಿಕೊಂಡು ಸಮಾಧಾನದಿಂದ ಮುಂದಿನ ಹೆಜ್ಜೆಗಳತ್ತ ಮನಸ್ಸಿಡಬೇಕು. ಜೀವನದಲ್ಲಿ ಘಟಿಸಿದ ಬಣ್ಣಬಣ್ಣಗಳ ದಿನಗಳನ್ನು ನೆನಪಿಸಿಕೊಳ್ಳಬೇಕು. ಒದಗಿದ ಭುವನದ ಭಾಗ್ಯದ ದಿನಗಳನ್ನು  ರಂಗುರಂಗಾಗಿ ಬಣ್ಣಿಸುತ್ತಾ, ಜೀವನವು ಬರಡಲ್ಲ, ಜೀವನವೊಂದು ಒಸಗೆ ಎಂದು ಕಿರಿಯರೊಡನೆ ಬೆರೆಯುತ್ತಾ ನಗುನಗುತ್ತಾ ನಗಿಸುತ್ತಾ ಜೀವನ ನಾಟಕದ ಅನುಕರಣೀಯ ಅನುಭವೀ ನಟನಾಗಿ ಬಾಳಬೇಕು.

ಕೇಳುತ್ತಿರುವವರ ಬೇಸರವನ್ನು ಕಂಡು ತಾನೂ ಬೇಸರಗೊಳ್ಳಬಾರದು. ಬಡಬಡಿಸುವವರನ್ನು ಸಮಾಧಾನಪಡಿಸುತ್ತಾ  ತಾನು ಸಮಾಧಾನವನ್ನು ಹೊಂದಬೇಕು. ಹಿಂದಿನ ದಿನಗಳು ಹೊನ್ನು ಎಂದು ಭಾವಿಸಿಕೊಂಡು, ಸಹಿಸಿಕೊಳ್ಳಬೇಕು. ಸಹನೆಯೇ  ದಿವ್ಯೌಷಧವು. ಮುಂದಿನದಿನಗಳನ್ನು ಬರಡುಬರಡೆಂದು ಬಡಬಡಿಸದೆ, 'ಮರುಭೂಮಿ' ಎಂದು ಚಿಂತೆಯ ಅಲೆಗಳ ಸುಳಿಗೆ ಸಿಲುಕದೆ, ಜೀವನಪಯಣದಲ್ಲಿ ಈಜಬೇಕಾಗಿದೆ. ಈಸಬೇಕು, ತನ್ಮೂಲಕ ಜೈಸಬೇಕು. ಮರುಭೂಮಿಯ ಪಯಣವನ್ನು ಸಹನೆಯಿಂದ ಎಚ್ಚರದಿಂದ  ಸಾಧಿಸಬೇಕು.

ಇನ್ನು ಈ ದೇಹಕ್ಕೆ ಮಧು ಮಹೋತ್ಸವದ ಪಾನವು ಸಾಕು. "ದೇವಾ,  ಎನಗಿನ್ನು ವಿರಾಮವು ಬೇಕು, ಬೆಳಕಿನದಾರಿಯಾದ ಒಳಮೌನವು ಬೇಕು" ಎಂದು ಕವಿವರ ಡಿವಿಜಿಯವರು ಪ್ರಾರ್ಥಿಸುತ್ತಾರೆ.
ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Monday 18 December 2023

ಸುಖವೆಲ್ಲಿ? - ಕೇತಕೀವನ - ಡಿವಿಜಿ

ತುಂಬುಸುಖವೆಲ್ಲಿಹುದು 
ತುಂಬಿಯೇ ನಿನಗೆ? 
ಸೂನದುದ್ಯಾನದೊಳೊ, 
ಜೇನುಗೂಡಿನೊಳೊ? 
ಅರಸುತಲೆವುದು ಸುಖವೊ, 
ಅರಲ ನೆಲೆ ಸುಖವೊ? 
ಪಾಡಿಪಾರ್ವುದು ಸುಖವೊ? 
ಕೂಡಿಡಲು ಸುಖವೊ 
ಬಳಸುತಿರುವುದೆ ಸುಖವೊ, 
ಗಳಿಸುವುದು ಸುಖವೊ? 
ಕಣಜ ಕಾಯ್ವುದು ಸುಖವೊ, 
ಉಣುವುದೇ ಸುಖವೊ? 
ಹಲ ಬಗೆಯ ಹೂ ಸುಖವೊ, 
ಬಲು ರಾಶಿ ಸುಖವೊ? 
ಅಧಿಕ ಸುಖವೆಲ್ಲಿಹುದು 
ಮಧುಕರನೆ ನಿನಗೆ?

***************

ಮಧುಕರನಂತೆ ಸುಖಕ್ಕಾಗಿ ಹಂಬಲಿಸಿ ಅಲೆದಾಡುವ ಜನರ ಮನಸ್ಸನ್ನು ಕವಿ ಗುಂಡಪ್ಪನವರಯ  ತುಂಬಿಯ ಪ್ರತಿಮೆಯದ್ವಾರಾ ಬಣ್ಣಿಸುತ್ತಾರೆ.

     ಹೂವಿಂದ ಹೂವಿಗೆ ಹಾರಾಡುವ ತುಂಬಿಯೇ,  ತುಂಬುಸುಖವೆಂಬುದು ಎಲ್ಲಿದೆ!? ಬಣ್ಣಗಳ ವೈವಿಧ್ಯಮಯವಾದ ಹೂಗಳನ್ನರಳಿಸಿಕೊಂಡ ಉದ್ಯಾನವನದಲ್ಲಿ ಪೂರ್ಣತೃಪ್ತಿಯನ್ನು ನೀಡುವ ಸುಖವಿದೆಯೇ! ಇದ್ದರೆ ನೀನು ಮತ್ತೆ ಮತ್ತೆ ಉದ್ಯಾನದಿಂದ ಉದ್ಯಾನಕ್ಕೆ ಹಾರಾಡುತ್ತಿರಲಿಲ್ಲ.
ಹೂಗಳ ಇನಿತಿನಿತು ಮಕರಂದವನ್ನುಂಡರೂ ತೃಪ್ತಿಯಾಗದೆ ಜೇನುಹುಟ್ಟಿಯ ಸುತ್ತ ರೋಲಂಬಗೊಡುವ ನಿನಗೆ ಜೇನುಹುಟ್ಟಿಯಲ್ಲಿ  ತುಂಬುಸುಖ ಲಭಿಸುವುದೇ! ಊಹೂಂ! 
ಇಲ್ಲ.

ಹೂವಿಂದ ಹೂವಿಗೆ, ಗಿಡದಿಂದ ಗಿಡಕ್ಕೆ ಹಾರಾಡುತ್ತಾ ಅಲೆದಾಡುತ್ತಾ ಸವಿ ಸುಖಕ್ಕಾಗಿ ಅಲೆದಾಡುವುದರಿಂದ ಸುಖವಿಲ್ಲ. ಅರಳಿರುವ ಹೂಗಳಾಸರೆಯು ಸುಖದ ನೆಲೆಯೇ!  ಹಾಗಿದ್ದರೆ ನೀನು ಹೀಗೆ ನಿತ್ಯ ನಿರಂತರ ಅಲೆದಾಡುತ್ತಿರಲಿಲ್ಲ.

ಹಾಡುತ್ತಾ ಹಾಡುತ್ತಾ ಸುತ್ತೆಲ್ಲಾ ಸುಳಿದಾಡುವುದೇ ಸುಖವೋ! 
ಜೇನುಹುಳದಂತೆ ಸಂಗ್ರಹಿಸಿ ಕೂಡಿಡುವುದರಲ್ಲಿ ಸುಖವಿದೆಯೇ! 
ಒದಗಿಬಂದುದನ್ನು ಸವಿಯುವುದೇ ಸುಖವೇ!?
ಗಳಿಸುವುದು ಸುಖವೋ!? .ಗಳಿಸಿದ್ದನ್ನು ಉಳಿಸುವುದಕ್ಕಾಗಿ ಹೆಣಗಾಡುವುದು ಸುಖವೋ!?   ಅಥವಾ  ಇಂದು ಇಂದಿಗೆ ನಾಳೆ ನಾಳೆಗೆ ಎಂಬಂತೆ  ಗಳಿಸಿದ್ದನ್ನು  ಭುಂಜಿಸುವುದೇ ಸುಖವೇ!?  ನಾನಾಬಗೆಯ ಹೂಗಳು ಸುಖದಾಗರವೇ!  ಹೂಗಳ ರಾಶಿಯ ದರ್ಶನವೇ ಸುಖವೋ?  ಮಧುವನ್ನು ಹೀರಬಯಸುವ ತುಂಬಿಯೇ, ಅಲೆದಾಟದಲ್ಲಿ ಎಲ್ಲಿ ಹೆಚ್ಚು ಸುಖವನ್ನು ಕಂಡಿರುವೆ!? 

ಪಾತರಗಿತ್ತಿಯು ಹೂವಿಂದ ಹೂವಿಗೆ ಹಾರಡುತ್ತಾ, ಹೂಗಳಲ್ಲಿರುವ ಮಕರಂದವನ್ನು ಹೀರಬಯಸಿದಂತೆ  ಮನುಷ್ಯನು ಹೊನ್ನು  ಹೆಣ್ಣು  ಮಣ್ಣುಗಳಲ್ಲಿ ಸುಖವಿದೆಯೆಂಬ ಭ್ರಮೆಯಿಂದ ಇವುಗಳ ಸುತ್ತ ಗಿರುಕಿಹೊಡೆಯುತ್ತಾ ಸುಖದ ಮರೀಚಿಕೆಯನ್ನು ಬೆಂಬತ್ತಿ, ಅಲೆದಾಡುತ್ತಲೇ ದಿನಮಾನಗಳನ್ನು  ಹೇಗೋ ಕಳೆಯುತ್ತಿದ್ದಾನೆ.
~~~~~~~~~~~~~~~~
ಸೂನ = ಹೂವು, 
ಅಲರು= ಹೂವು
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Sunday 17 December 2023

ರಂಗಸೆಟ್ಟಿ - ಕೇತಕೀವನ - ಡಿವಿಜಿ

ಪುರದ ಧನಿಕರಲಿ ಮೊದಲಿಗರವನ ಜನರು 
ಮರೆಯದಿರುವಂತೆಸಗಲೆಂದವನ ಸುತರು 
ಹೊಸ ಮಹಡಿಮನೆಯ ಕಟ್ಟಿಸಿ ಕಲಶವಿಟ್ಟು 
ಹಸನಾದ ಮನೆಸಾಲೆಗತ್ತಲೆಡೆಬಿಟ್ಟು 
ಕೆಂಪುಶೆಟ್ಟಿಯ ಬೀದಿಯೆಂದು ಹೆಸರಿಟ್ಟರ್‍ 
ಪೆಂಪಿನಿಂದದು ಬೆಳೆವುದೆಂದಾಸೆಪಟ್ಟರ್‍. 

ಹರದಾರಿಯುದ್ದವಿರ್ಕೆಲದಿ ಮನೆಮಠಗಳ್‍ 
ಅರವಟಿಗೆ ಸತ್ರಗಳು ಗುಡಿಗಳಂಗಳಗಳ್‍ 
ಬರುವ ಹೋಗುವ ಜನದ ತಂಡತಂಡಗಳು 
ತುರು ಕರುಗಳಾಳುಕಾಳುಗಳು ಬಂಡಿಗಳು 
ನಗುಗಳಾಟಗಳು ಮೆರೆತಗಳು ಮೇಳಗಳು 
ರಗಳೆಗಳು ಜಗಳಗಳು ಕೂಗುಗೋಳುಗಳು 
ಈ ಪರಿಯ ಜೀವಕಳೆಯಿಂದಲಾ ಬೀದಿ 
ಆ ಪುರಕೆ ತಿಲಕವಹುದೆಂದವರು ಬಗೆದರ್‍. 

ಇಂದು ನೋಡಾ ಮಹಡಿಮನೆಯತ್ತಲಿಲ್ಲ 
ಮಂದಿರದ ಸಾಲ್ಗಳಾ ಕೆಲದಿ ಬೆಳೆದಿಲ್ಲ. 
ಅಲ್ಲಿ ನರಜಂತುಗಳ ಹೆಜ್ಜೆಯೂರಿಲ್ಲ. 
ಫುಲ್ಲಸುಮದಿಂ ಬಳುಕುವುದ್ಯಾನವಿಲ್ಲ 
ಗೊಬ್ಬರದ ನಾತಗಳು ಕಸದ ರಾಶಿಗಳು 
ಉಬ್ಬಿಕೊಂಡಿಹುವಲ್ಲಿ ಹೊಲಸು ಹಾಳುಗಳು. 
ನೋಡಲ್ಲಿ ಲಾಲ್‍ಬಾಗಿಗನತಿದೂರದಲಿ 
ಬೀಡುಬಯಲಿನೊಳೊಂದು ಕಂಬ ನಿಂದಿಹುದು 
ನಾಚಿಕೆಯ ನೀಗಿ ತಾಳಿಹುದು ಪಾಳ್ಮೊಗವ 
ಸೂಚಿಸುತ ನರಯಶಃಕಾಮನೆಯ ಫಲವ 
ಅದರ ನೆತ್ತಿಯ ಶಿಲಾಶಾಸನವ ಪಠಿಸು 
ಹುದುಗಿಹುದು ಕೆಂಪುಶೆಟ್ಟಿಯ ಬೀದಿಕನಸು.

*********

ನಗರದಲ್ಲಿ ಹೆಸರಾದ ಧನಿಕರಲ್ಲಿ ರಂಗಸೆಟ್ಟಿಯಹೆಸರು ಮೊದಲ ಪಂಕ್ತಿಯದು. ಸೆಟ್ಟರ ಹೆಸರನ್ನು  ಜನರು ಮರೆಯದೆ ಮೆರೆಯ ಬೇಕೆಂಬ  ಹಂಬಲದಿಂದ ಸೆಟ್ಟಿಯ ಮಕ್ಕಳು  ಸೇರಿ  ಬಲುದೊಡ್ಡ ಮಹಡಿಮನೆಯನ್ನು ಕಟ್ಟಿಸಿದರು‌.  ಮನೆಗಾನಿಸಿದಂತೆ  ಕಲಶವೇರಿಸಿದ  ಪುಟ್ಟ ಗುಡಿಯನ್ನೂ ಕಟ್ಟಿಸಿದರು.  ಅರಮನೆಯಂತೆ ಕಂಗೊಳಿಸುವ ವಿಲಾಸೀ  ಬಂಗಲೆಯು  ನೋಡುಗರ ಕಣ್ಣುಕೋರೈಸುವಂತೆ  ತಲೆಎತ್ತಿತು.

 ಸೆಟ್ಟರ ಮನೆ ಅಕ್ಕಪಕ್ಕಗಳಲ್ಲಿ  ವಿಶಾಲವಾದ ಬೀದಿಗಳಾಗಿ ಸ್ಥಳಾವಕಾಶವನ್ನು  'ಕೆಂಪುಶೆಟ್ಟಿಯಬೀದಿ' ಎಂದು ಬೀದಿಗಳಿಗೆ ನಾಮಕರಣವಾಯಿತು.

ಆ ಬೀದಿಗಳು  ವ್ಯಾಪಾರಿಗಳ ಅಂಗಡಿಗಳಿಂದ ಕಿಕ್ಕಿರಿದು ತುಂಬಿ ಬೀದಿಯ ಹೆಸರಿನೊಂದಿಗೆ ಸೆಟ್ಟರ ಘನತೆ ಗೌರವಗಳಿಗೆ ಗರಿಮೂಡುವುದೆಂದು ಸೆಟ್ಟರ ಮಕ್ಕಳ ಚಿಂತನೆಯಿತ್ತು.

 (ಸೆಟ್ಟರಹೆಸರಿನೊಂದಿಗೆ ಬೀದಿಗಳು ಬೆಳೆಯುವುದರೊಡನೆ ತಮ್ಮ ಒಳಹಿತಾಸಕ್ತಿಯು ಕೈಗೂಡುವುದೆಂಬ ಲೆಕ್ಕಾಚಾರ ಸೆಟ್ಟರ ಮಕ್ಕಳಿಗುತ್ತು ಎಂದು ಹೇಳಬೇಕಿಲ್ಲ.)  

    ಸೆಟ್ಟರ ಮನೆಯ ಇಕ್ಕೆಲದ ಬೀದಿಗಳು ಸುಮಾರು ಎರಡುಮೂರು ಮೈಲುಗಳಷ್ಟು ವಿಸ್ತರಿಸಬಹುದಾದಷ್ಟು ವಿಶಾಲ. ಈ ಬೀದಿಗಳ ಉದ್ದಗಲಕ್ಕೂ ಮನೆಮಠಗಳು, ಅರವಟ್ಟಿಕೆಗಳು, ಗುಡಿಗುಂಡಾರಗಳು, ಧರ್ಮಛತ್ರಗಳಿಂದ ಕಿಕ್ಕಿರಿದು ತುಂಬಿ ಸದಾ ಕಾಲ ಜನರಿಂದ ಕಿಕ್ಕಿರಿದು ತಂದೆಯ ಹೆಸರು  ಅಜರಾಮರವಾಗುದು ಮಾತ್ರವಲ್ಲದೆ, ತಾವೂ ಅನಾಯಾಸವಾಗಿ ಹೆಸರು ಮತ್ತು ಗಳಿಕೆಯನ್ನು ಒಟ್ಟಿಗೆ ಸಂಪಾದಿಸಬಹುದೆಂದು ಲೆಕ್ಕಿಸಿದ್ದರು.

 ಜನಜಾನುವಾರು, ಆಳುಕಾಳುಗಳು, ಓಡಾಡುವ ಬಂಡಿಗಳಿಂದ ಜನರ ವ್ಯವಹಾರ, ವ್ಯಾಪಾರಾದಿಗಳಿಂದ ಬಿಡುವಿಲ್ಲದ ಜನಸಂದಣಿಯಿಂದ  ನಗು ಉಲ್ಲಾಸ, ಮೆರೆತಗಳಿಂದ ಗಜಿಬಿಜಿಯಾದ ಜನಜೀವನದ ನಡುವೆ ರಗಳೆಗಳು, ಒಳಜಗಳಗಳು, ಕೂಗುಗೋಳುಗಳಿಂದ  ಬೀದಿಗಳು ಎಂದೆಂದೂ ಜೀವಕಳೆಯಿಂದ ನಗರಕ್ಕೆ ತಿಲಕಪ್ರಾಯವಾಗಿ ಶೋಭಿಸುವುದೆಂದು ಸೆಟ್ಟಿಯ ಮಕ್ಕಳು ಕನಸುಕಾಣುತ್ತಿದ್ದರು.
 'ಹಗಲುಗನಸುಗಳು ನೆನಸಾಗುವುದು ಇರುಳಕನಸಿನಲ್ಲಿ' ಎಂಬ‌ ಮಾತಿದೆ. 

     ಇಂದು ನೋಡಿದರೆ, ಅಲ್ಲಿ ರಂಗಸೆಟ್ಟಿಯ ಮಹಡಿ ಮನೆಯಿತ್ತು ಎಂಬುದರ ಕುರುಹೂ ಕಾಣುತ್ತಿಲ್ಲ. ಮಂದಿರವಿರುವ ಬೀದಿಯೂ ಬೆಳೆಯಲಿಲ್ಲ. ಬಿಕೋ ಎನ್ನತ್ತಿದೆ. ಬಣ ಬಣವೆನ್ನುತ್ತಿದೆ. ಸೆಟ್ಟರ ಹೆಸರುಳ್ಳ  ಬೀದಿಯಲ್ಲಿ ನರಪಿಳ್ಳೆಗಳ ಸುಳಿವಿಲ್ಲ‌. ಸೆಟ್ಟರ ಹೆಸರಲ್ಲಿ ಕಂಗೊಳಿಸಬೇಕಾಗಿದ್ದ ಮಗಮಗಿಸುವ ಸುಮಸುಂದರ ಉದ್ಯಾನವನವು ಕನಸಲ್ಲೇ ಉಳಿಯಿತು. 

    ಬೀದಿಯ ಸುತ್ತಮುತ್ತೆಲ್ಲಾ ಕಸದರಾಶಿತಿಪ್ಪೆಗಳಿಂದ ಇಡುಕಿದೆ. ಜನರು ಮೂಗುಮುಚ್ಚಿಕೊಂಡು ಓಡಾಡಬೇಕಾದಂತಹ ಪರಿಸರವಾಗಿದೆ. ಎಲ್ಲೆಲ್ಲೂ ಹೊಲಸು ಸುರಿಯುತ್ತಿದೆ.

     ಲಾಲ್ ಬಾಗಿಗೆ ಸಮೀಪದಲ್ಲಿ  ಬಟ್ಟಬಯಲಿನಲ್ಲಿ ಒಂದು  ಕಲ್ಲುಕಂಬವು ದೂರಕ್ಕೆ ಗೋಚರಿಸುತ್ತದೆ.  ಸ್ವಾರ್ಥದ ಯಶೋಡಿಂಡಿಮದ ಕನಸಿನ ಧ್ವನಿಯ ಸಂಕೇತವೆಂಬಂತೆ ಆ ಕಂಬ ಮೂಕ ಸಾಕ್ಷಿಯಾಗಿ ಕೂಗಿ ಹೇಳುತಿದೆ. ಆ ಕಲ್ಲು ಕಂಬದ ಮೈಯಲ್ಲಿ 'ಕೆಂಪುಶೆಟ್ಟಿಯ ಬೀದಿ' ಎಂದು ಶಿಲಾಶಾಸನದಂತೆ ಬರೆದಿರುವುದಷ್ಟೇ ಕಾಣುತ್ತಿದೆ.  ಕೆಂಪುಸೆಟ್ಟಿಯ ಬೀದಿ ಎಂಬುದು ಕನಸಾಗಿಯೇ ಉಳಿಯಿತು. ಸ್ವಾರ್ಥಸಾಧನೆಯ ಹಗಲುಗನಸು  ನೆನಸಾಗಲಿಲ್ಲ.
ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Saturday 16 December 2023

ಹುಟ್ಟು ಹಕ್ಕು - ಕೇತಕೀವನ - ಡಿವಿಜಿ

ಹುಟ್ಟಿನಿಂದ ಬಂದ ಹಕ್ಕುಗಳಂತೆ! ಹುಚ್ಚರಿರ! 
ಸೃಷ್ಟಿಯಾ ದಾನಶಾಸನವೆಲ್ಲಿ, ಮರುಳರಿರ? 
ಕಟ್ಟುಕಥೆಗಳ ಕೇಳಿ ಕೆರಳದಿರಿ, ದುಡುಕದಿರಿ; 
ತೊಟ್ಟಿಲಿಂ ನಮಗೆ ಬಂದಿಹುವೆರಡೆ ಹಕ್ಕುಗಳು; 
ಹೊಟ್ಟೆಯಲಿ ಕೊರೆಯಾದೊಡತ್ತು ಕರೆವುದದೊಂದು, 
ಬಟ್ಟೆಯೊಳೆ ಹೇಸಿಕೆಯ ಮಾಡಿಕೊಳ್ಳುವುದೊಂದು. 
ಮಿಕ್ಕೆಲ್ಲ ಹಕ್ಕುಗಳು ನರಯುಕ್ತಿ ಸೃಷ್ಟನೆಯೆ 
ದಕ್ಕಿಸುವುದವುಗಳನು ಪುರುಷಮತಿಜಾಗೃತಿಯೆ. 

ಪ್ರಕೃತಿಯಲಿ ದಯೆಯಿಲ್ಲ, ದಾಕ್ಷಿಣ್ಯಮಣಮಿಲ್ಲ 
ಸುಕೃತದುಷ್ಕೃತಗಳಾ ರಾಜ್ಯದಲಿ ದೇಹದವು 
ಹೊಟ್ಟೆಯದೆ ಕಟ್ಟಾಜ್ಞೆ :- “ಹಸಿಯೆ ಹಿಡಿ, ಬಡಿ, ತಿನ್ನು" 
ದಿಟ್ಟತನ ಬೇಡವೆಂಬನಿಗಿಲ್ಲಿ ನೆಲೆಯಿಲ್ಲ. 
ನೋಡಿರೀ ಜಗದ ಜಂತುಗಳು ಬದುಕುವ ನಯವ. 
ಜೇಡುಹುಳುವಿನ ನೀತಿ ಸೊಳ್ಳೆಗಳನಾರ್ಜಿಪುದೆ. 
ಹುಲ್ಲೆ ಸಾಧುವೆನುತ್ತೆ ಬಿಟ್ಟ ಹುಲಿ ಬದುಕುವುದೆ? 
ಕೊಲ್ಲಬೇಕಿಲಿಯ ಬೆಕ್ಕಂತು ಬೆಕ್ಕನು ನಾಯಿ. 
ಸಸಿಗುಣಿಸು ಕೊಳೆತ ಸಸಿ; ನರನುಣಿಸು ಕಳಿತ ಸಸಿ. 

ನಶಿಸುವನು ಜೀವಿಯಂಶವ ಮುಟ್ಟಲೊಲ್ಲದನು. 
ಜೀವಿ ಜೀವಿಗೆ ತುತ್ತು; ಜೀವಿ ಜೀವಿಗೆ ಮಿತ್ತು. 
ಈ ವಿಚಿತ್ರ ನ್ಯಾಯವೊಂದೆ ಸೃಷ್ಟಿಯ ಪಾಠ. 
ಅದಕಿಂತ ಮೇಲಾದ ಹುಟ್ಟುಹಕ್ಕುಂಟೇನು? 
ಉದರಭರಣನ್ಯಾಯಕಿಂತ ಪಿರಿದಿಹುದೇನು? 

ಇಹುದು ಕುಕ್ಷಿಯ ಜೊತೆಗೆ ಬೇರೊಂದು ಚೋದಕವು 
ಗಹನವಾಗಿಹುದಾತ್ಮಸತ್ತ್ವದಲಿ ತಾನಡಗಿ 
ಅದರ ಮಹಿಮೆಯೆ ಬಗೆಯೆ ನಮ್ಮೆಲ್ಲ ಮಾನವತೆ 
ಉದಯಿಸುವುವದರಿಂದೆ ನಮ್ಮೆಲ್ಲ ಧರ್ಮಗಳು, 
ನೀತಿಗಳು, ನಿಯಮಗಳು, ನಾಗರಿಕ ಸೂತ್ರಗಳು, 
ಜಾತಿ ಕುಲ ಗೃಹ ರಾಷ್ಟ್ರ ಜನಪದ ಸಮಾಜಗಳು. 
ಈ ಮನುಷ್ಯವಿವೇಕವಿಕಸನದ ಕಥೆಗೊಂದು 
ಸೀಮೆಗಡಿ ಗೊತ್ತಿಲ್ಲವದು ಪೂರ್ಣವಾಗಿಲ್ಲ. 
ಬೆಳೆಯಬೇಕಿನ್ನುಮೆಂತೆಂತೊ ಪೌರುಷಯುಕ್ತಿ 
ಅಳೆಯಬೇಕಿನ್ನೆನಿತೊ ಕಡಲುಗಳ ಆಳವನು 
ಮುಟ್ಟಬೇಕೆನಿತೆನಿತೊ ಬೆಟ್ಟಗಳ ತುದಿಗಳನು 
ಕಟ್ಟಬೇಕೆನಿತೆನಿತೊ ಯಂತ್ರಸಾಧನಗಳನು 
ಸಾಸಿರದ ಸೀಳ್ದಾರಿಗಳ ಪಿಡಿಯುತಲೆದಲೆದು 
ಆಸೆಯಿಂ ಘಾಸಿವಡುತಿಹುದೆ ಮನುಜನ ಹಕ್ಕು 
ಪುರುಷಚೇತನವಂತು ಪಾರುತಿರೆ ಬಾಳುವುದು 
ಅದೆ ಮಾನವನ ಹಕ್ಕು; ಆದೊಡಾ ಹಕ್ಕಿಗಿಹ 
ಎದುರಾಳು ಮಾನವನೆ-ಮಾನವನ ಮೃಗಶೇಷ. 
ಬೇರಿನಂಶವದಿನಿತು ಫಲದೊಳಗಮಿರುವಂತೆ 
ಸೇರಿಹುದು ಮನುಜನೊಳು ಮೃಗದ ಗುಣವನಿತಿನಿತು. 
ಪ್ರಕೃತಿಪಾದವೆ ಮೃಗತೆ, ಮಸ್ತಕವೆ ಮಾನವತೆ. 
ನಿಕೃತಿಯೊಮ್ಮೊಮ್ಮೆ ಪದದಿಂದ ಶಿರಕಾಗುವುದು. 
ಶಿರವು ಮುನ್ನಡೆಯೆನಲ್‍ ಚರಣ ಸರಿವುದುಮುಂಟು 
ಸ್ಥಿರದಿ ನಿಲುವುದುಮುಂಟು, ಪಿನ್‍ ತಿರುಗುವುದುಮುಂಟು. 
ಇಂತು ಶಿರಚರಣಗಳ ಹುರುಡು ಹೋರಾಟದಲಿ 
ಕಂತುಕವ ಪೋಲುವುದು ನರನ ಮಿಡಿಗಾಯ್‍ಪಾಡು. 
ಮಿಡಿಯ ಪಣ್ಣಾಗಿಸುವ ಶಾಖವನು ನಿರವಿಪೊಡೆ 
ಒಡಹುಟ್ಟಿ ಬಂದ ಮೃಗತೆಯನು ನರನಳಿಸುವೊಡೆ 
ಮನುಜಪದಗತಿಯ ಪೂರ್ಣತೆಯೆಡೆಗೆ ತಿರುಗಿಪೊಡೆ 
ಅನುವಾಗಿ ನಿಲಬೇಕು ಮತಿಯ ದಿಗ್ವಿಜಯಕ್ಕೆ. 

ತನ್ನೊಳಗಮಂತು ಪೊರಗಂ ಸತ್ತ್ವಗಳನರಸಿ 
ಉನ್ನತಿಗೆ ಯತ್ನಿಪ ಸ್ವಾತಂತ್ರ್ಯಮೇ ಹಕ್ಕು. 
ಅಲೆಯುತಿಹುದೆಲೆಯಂತೆ ಧರೆಯೊಳಿಂದಾ ಹಕ್ಕು 
ಹಲರದಕೆ ಹಗೆಗಳ್‍-ಅವಿಚಾರಿಗಳು, ಭೀರುಗಳು, 
ಉಪಯೋಗಿಸುವ ನೆವದೊಳಪಯೋಗಗೆಯ್ಯುವರು 
ಅಪರಿಷ್ಕೃತಾತುಮರು, ಗೂಢ ಮೃಗಚೇತನರು. 

ಹುಟ್ಟಿನಿಂ ಹಕ್ಕೆನದಿರ್‍ ಅದಕೆ ಹುಟ್ಟಾಸೆ ವಿಷ. 
ಸೃಷ್ಟಿಜಾಲವ ಕಳಚುವಾತ್ಮಸಾಧನೆ ಹಕ್ಕು 
ಹುಟ್ಟಿನಿಂ ಬಂದ ಹಕ್ಕೇನು, ಪಶುಗಳ ಹಕ್ಕು 
ಶಿಷ್ಟಧರ್ಮವಿವೇಕದಿಂದ ಪುರುಷರ ಹಕ್ಕು.

***********************

ಭಗವಂತನು ಯಾರಿಗೂ  ದಾನಶಾಸನವೆಂದು ನಿಯಮಿಸಿಲ್ಲ.  ಜನ್ಮಸಿದ್ಧಹಕ್ಕು ಎಂದು ಜನರು ಬಡಿದಾಡುತ್ತಾರೆ. ಇಂತಹ ಮಾತು ಮರುಳು‌ಮಾತು ಎನ್ನುತ್ತಾರೆ ಕವಿವರ ಡಿವಿ ಗುಂಡಪ್ಪನವರು.

ಹುಟ್ಟಿನಿಂದ ಯಾರೂ ಯಾವ ಹಕ್ಕನ್ನೂ ಪಡೆಯುವುದಿಲ್ಲ. ಈ ಜನ್ಮಜಾತ ಹಕ್ಕು ಎಂಬುದೇನಾದರೂ ಇದ್ದರೆ, ಅವೆಲ್ಲ ಕಟ್ಟುಕತೆ.  ಕಟ್ಟುಕತೆಗಳನ್ನು ಕೇಳಿ  ಸಂಯಮವನ್ನು ಕಳೆದುಕೊಳ್ಳಬಾರದು.
    
ಹುಟ್ಟುವಾಗಲೇ ನಾವು ಪಡೆದುಕೊಂಡು ಬಂದುದು ಎರಡೇ ಹಕ್ಕುಗಳಂತೆ. ಮೊದಲನೆಯದು ಹೊಟ್ಟೆ ಹಸಿದಾಗ ಅತ್ತು ಕರೆಯುವುದು. ಹಸಿವಿನ ತುತ್ತನ್ನು ಕೇಳಿಪಡೆಯುವುದು‌. ಎರಡನೆಯದು ಬಟ್ಟೆಯಲ್ಲೇ ಹೇಸಿಗೆಯನ್ನು  ಸುರಿಸುವುದು. ಉಣ್ಣುವುದು  ವಿಸರ್ಜಿಸುವುದೆರಡು ನಾವು ಹುಟ್ಟಿನಿಂದ ಪಡೆದ ಹಕ್ಕುಗಳು.

ಇವೆರಡನ್ನು ಹೊರತಾಗಿ ಇನ್ನುಳಿದವೆಲ್ಲವೂ ಮನುಷ್ಯರು ತಮ್ಮತಮ್ಮ ಸ್ವಾರ್ಥ ಸಾಧನೆಗಳಿಗಾಗಿ ಬಲವಂತವಾಗಿ ಸೃಷ್ಟಿಸಿದ ಹಕ್ಕುಗಳೆಂಬ ನಿರ್ಬಂಧಗಳು‌.
     
ಪ್ರಕೃತಿಯಲ್ಲಿ ದಯೆ ದಾಕ್ಷಿಣ್ಯಗಳಿಲ್ಲ. ಹಸಿವನ್ನು ಹಿಂಗಿಸಲು 'ಹಿಡಿ ಬಡಿ ತಿನ್ನು' ಎಂಬುದಷ್ಟೇ  ಪ್ರಕೃತಿಯ ರಾಜ್ಯದಲ್ಲಿ ಹೊಟ್ಟೆಯದೇ ಕಟ್ಟಪ್ಪಣೆ.   ಇದು ಶಕ್ತಿಪ್ರದರ್ಶನದ ಸಾಮ್ರಾಜ್ಯ. ದಿಟ್ಟತನವಿಲ್ಲದೆ ಇಲ್ಲಿ ಬಾಳುವೆಯಿಲ್ಲ. ಚಿಗರೆಗಳು ಸಾಧುವೆಂದು ಸೆಣಸಾಡಿ ತಿನ್ನದಿದ್ದರೆ ಹುಲಿಯು,  ಬದುಕುವುದುಂಟೇ! ಬೆಕ್ಕು ಇಲಿಯನ್ನು ಕೊಲ್ಲುವುದೇ ಅದಕ್ಕೆ ಆಹಾರಧರ್ಮ. ನಾಯಿಬೆಕ್ಕನ್ನು  ಬೆಂಬತ್ತುವುದೇ ಪಶುಧರ್ಮ. ಕೊಳೆತ ಸಸಿಗಳು ಜೀವಂತ ಸಸಿಗೆ ಆಹಾರ. ಮಾಗಿ ಬಾಗಿದ ಸಸ್ಯಗಳು ಮನುಷ್ಯನ ಆಹಾರ.
       ‌‌‌   
ಜೀವಿಗಳನ್ನು ಹಿಂಸಿಸದೆ ಮನುಷ್ಯನಿಗೆ ಬಾಳುವೆಯಿಲ್ಲ. ಜೀವಿಜೀವಿಗೆ ಹೊಟ್ಟೆಬಟ್ಟೆಗಳಿಗೆ ಆಧಾರ. ಜೀವಿ ಜೀವಿಗೆ ಮೃತ್ಯುವೆಂಬುದು ಪ್ರಕೃತಿಧರ್ಮ. ಇದು ವಿಚಿತ್ರವೆನ್ನಿಸಿದರೂ, ಇದುವೇ ಪ್ರಕೃತಿಯು ನಮಗೆ ಕಲಿಸುತ್ತಿರುವ ಪಾಠ. ಹಸಿವಹಿಂಗಿಸಲು ದುರ್ಬಲಜೀವಿಯು ಸಬಲಜೀವಿಗೆ ಆಹಾರವಾಗಲೇಬೇಕು. ಇದಕ್ಕಿಂತ ಮೇಲಾದ ಹಕ್ಕು ಎಂಬುದೇನಿದ್ದರೂ ಕಟ್ಟುಕತೆ. ಹಸಿವುಹಿಂಗಿಸುವುದಷ್ಟೇ ನ್ಯಾಯ! ಇದಕಿಂತ ಹಿರಿದಾದ ನ್ಯಾಯವೆಲ್ಲಿದೆ! 
          
ಹೊಟ್ಟೆಯ ಹಸಿವು ಹಿಂಗಿದ ಬಳಿಕ ಮಾನವೀಯತೆ ಎಂಬ ಗಹನವಾದ ತತ್ತ್ವವು ನಮ್ಮಲ್ಲಿ ಚೋದಕರಸವಾಗಿ ಹರಿಯುತ್ತಿದೆ. ಮಾನವೀಯತೆಯಿಂದ ಧರ್ಮಗಳು ಉದಯಿಸಿದವು. ನೀತಿ‌ನಿಯಮಗಳು,  ನಾಗರಿಕ ಸಂಸ್ಕೃತಿ, ಜಾತಿ,  ಕುಲ, ಮನೆ, ಕುಟುಂಬ, ಸಮಾಜ ರಾಷ್ಟ್ರಾದಿ ಭಾಬಂಧುರತೆಯ ವಿವೇಕವಿಕಸನವು ಕಥೆಯಂತೆ  ಸೀಮೆಯಿಲ್ಲದೆ ಜಗತ್ತಿನಲ್ಲಿ ಬೆಳೆಯಿತು.  ಇದರ ಬೆಳವಣಿಗೆಯು ಪೂರ್ಣಗೊಳ್ಳದು.
     
ಪೌರುಷವು ಇನ್ನಷ್ಟು ಬೆಳೆಯಬೇಕೆನ್ನುತ್ತಿದೆ ಮನುಷ್ಯನ‌ಮನಸ್ಸು. ಕಡಲಿನ ಆಳವನ್ನು ಆಳಬೇಕು, ಗಗನವನ್ನು ಕೈವಶಮಾಡಬೇಕೆಂಬ ಗುರಿಯೆಡೆಗೆ ಜಿಗಿಯುತ್ತಲೇ ಮುನ್ನಡೆಯುತ್ತಿದ್ದಾನೆ. ವಿಜ್ಞಾನ ತಂತ್ರಜ್ಞಾನಗಳ ದಾರಿಯಲ್ಲಿ ಸಾವಿರ ಸಾವಿರ ಕವಲುದಾರಿಗಳಲ್ಲಿ ಸಾಗುತ್ತಾ ಮನುಜಲೋಕವು ದುರಾಸೆಯಿಂದ ಮಾನವೀಯ ನೆಲೆಗಟ್ಟನ್ನು ಹಾಗೂ ಹಕ್ಕನ್ನು ಹತ್ತಿಕ್ಕಿ ಹತಾಶವಾಗುತ್ತಿರುವಂತೆ ಭಾಸವಾಗುತ್ತಿದೆ.
       
ಪೌರುಷವೇ ಬಾಳುವೆಯ ದಾರಿಯಾದಾಗ ಮನುಷ್ಯನಲ್ಲಿ ಪ್ರಕೃತಿಯ ಮೃಗೀಯ ನಡವಳಿಕೆಯು ಗಿಡದ ಬೇರಿಗೆ  ಪೋಷಕಾಂಶವು ಸೇರಿದಂತೆ ಸೇರಿಕೊಂಡಿತು. ಪ್ರಕೃತಿಯಲ್ಲಿ  ಮೃಗೀಯ ಭಾವವವು ಬೇರಿನಂತಾದರೆ, ಮಾನವೀಯತೆಯು ಮಸ್ತಕವು.
    
ಪಾದವು ಮೃಗದಂತೆ ಓಡಲೆಳಸುವುದು. ಓಡು ಓಡೆಂದು ಚೋದಿಸುವ ಕಾಲುಗಳ ಆಜ್ಞೆಯನ್ನು ವಿವೇಕವಿಲ್ಲದೆ ಪಾಲಿಸುವುದರಿಂದ ದಾರಿತಪ್ಪುವುದುಂಟು. ಅತ್ತಿತ್ತ ಚಲಿಸದೆ ನಿಲ್ಲವುದುಂಟು. ಕೆಲವೊಮ್ಮೆ ವಿರುದ್ಧದಿಕ್ಕಿಗೆ ತಿರುಗುವುದುಂಟು‌. ಒಟ್ಟಿನಲ್ಲಿ, ಮೃಗೀಯವಾದ ಪಾದಗಳು ಹಾಗೂ ವಿವೇಕದ ಮಸ್ತಕಗಳ ಪೈಪೋಟಿಯ ಓಟದಲ್ಲಿ  ಮನುಷ್ಯನು ಹಣ್ಣಗಾಯಿ ನೀರುಗಾಯಾಗುತ್ತಿದ್ದಾನೆ.
    
ಮಿಡಿಗಾಯಿಯನ್ನು ಹಣ್ಣಾಗಿಸಲು  ಶಾಖ ನೀಡುತ್ತಾನೆ. ಇದು ತರವೇ! ಶಿರ ಪ್ರಶ್ನಿಸುತ್ತದೆ. ಹುಟ್ಟಿನಿಂದ ಮೂಡಿಬಂದ ಮೃಗೀಯ ಸ್ವಭಾವವನ್ನು ಇನಿತಿನಿತೇ ಅಳಿಸಿಕೊಂಡು ಮಾನವೀಯತೆಯನ್ನು ಒಡಮೂಡಿಸಿಕೊಳ್ಳಬೇಕು. ಪೂರ್ಣತೆಯತ್ತ ಹೆಜ್ಜೆಗಳನ್ನಿಡಲು  ಮತಿಯ ದಿಗ್ವಿಜಯದತ್ತ ಅನುವಾಗಿ ಹೆಜ್ಜೆಗಳು ತಿರುಗಬೇಕು.

        ತನ್ನ ಒಳಹೊರಗೆಲ್ಲ ಸತ್ತ್ವ ಗುಣವನ್ನು ಬಯಸಿದವನಾಗಿ  ಪರಮ ಉನ್ನತಿಗೆ ಪ್ರಯತ್ನಿಸುವ ಮನುಷ್ಯನಿಗೆ ಸ್ವಾತಂತ್ರ್ಯವೇ   ಹಕ್ಕು.

ಇಂದಿನ ದಿನಮಾನಗಳಲ್ಲಿ ಹಕ್ಕಿನ ಪ್ರಶ್ನೆ ಸಾಗರದ ಅಲೆಯೋಪಾದಿಯಲ್ಲಿ  ಅಲೆದಾಡುತ್ತದೆ. ಅಲೆದಾಡುವವರಲ್ಲಿ ನಿಜವಾಗಿ ಹಲವರು ಈ ಹಕ್ಕಿಗೆ ಹಗೆಗಳು. ಹಲವರು ಅವಿಚಾರಿಗಳು. ಕೆಲವರು ಭೀರುಗಳು. ಹಕ್ಕುಚಲಾವಣೆಯ ಹೆಸರಲ್ಲಿ ದುರುಪಯೋಗ ಮಾಡುವರು. ಪಥಭ್ರಷ್ಟರಾಗುವರು. ಪರಿಷ್ಕಾರವಿಲ್ಲದ ಮೃಗಗಳಂತೆ ವರ್ತಿಸುವರು.

        ಹುಟ್ಟುತ್ತಲೇ ಹಕ್ಕುಹಕ್ಕು ಎಂದು ಬಡಬಡಿಸಬೇಡ. ಹುಟ್ಟಾಸೆಯೆಂಬುದು ವಿಷ. ಆತ್ಮಸಾಧನೆಯ ಹಕ್ಕು ಸೃಷ್ಟಿಜಾಲವನ್ನು  ಕಳಚುವುದು. ಮುಕ್ತಿ ಸಾಮ್ರಾಜ್ಯವನ್ನು ಒದಗಿಸುವುದು. ಹುಟ್ಟಿನಿಂದ ಪಡೆದು ಬಂದುದು ಪಾಶವೀಕರ್ಮ. ಪಶುಗಳಂತಹ ವರ್ತನೆ. ವಿವೇಕದ ದಾರಿಯಲ್ಲಿ ಶಿಷ್ಟಧರ್ಮವನ್ನು ಪಾಲಿಸುವುದು  ಪುರುಷನ ಹಕ್ಕು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣ ಭಟ್.ಮಂಡ್ಯ

Friday 15 December 2023

ಕವಿಸಾಕ್ಷ್ಯ - ಕೇತಕೀವನ - ಡಿವಿಜಿ

ಪರಿಪರಿಯ ಸೃಷ್ಟಿರುಚಿ 
ತರುಣಿಯಂಗದೊಳಂತೆ 
ಅದನರಿತೆನಿಂದು, 
ಅನುಭವದೆ ಕವಿಯ 
ನುಡಿ ಮನಕೆ ದಿಟವಾಯ್ತೀಗ 
ಅದನರಿತೆನಿಂದು 

ಮೃಗನಯನ ಲಾವಣ್ಯ 
ಸೊಗಸೆಂದ ವಾಲ್ಮೀಕಿ 
ಅದನರಿತೆನಿಂದು. 
ವಿದ್ಯುಲ್ಲತಾ ತನುವೆ 
ಹೃದ್ಯವೆಂದಂ ವ್ಯಾಸ 
ಅದನರಿತೆನಿಂದು. 

ಕಮಲ ಸುಕುಮಾರತೆಯೆ 
ಕಮನೀಯ ಭಾಸಂಗೆ 
ಅದನರಿತೆನಿಂದು. 
ಶಶಿರುಚಿಯ ಬೆಳ್ನಗುವೆ 
ರಸ ಕಾಳಿದಾಸಂಗೆ 
ಅದನರಿತೆನಿಂದು. 

ಚಂಪಕದ ನಾಸಿಕವೆ 
ಸೊಂಪೆಂದ ಭವಭೂತಿ 
ಅದನರಿತೆನಿಂದು. 
ತೂಣೀರವೆದೆಯಿರಿಯೆ 
ಘ್ರಾಣವೆಂದನು ಬಾಣ 
ಅದನರಿತೆನಿಂದು. 

ಮಾಂದಳಿರ ಚೆಂದುಟಿಯೆ 
ಚೆಂದವೆಂದನು ಮಾಘ 
ಅದನರಿತೆನಿಂದು. 
ಕುಂದರದನವೆ ವದನ 
ಬಂಧುರತೆ ಬಿಲ್ಹಣಗೆ
ಅದನರಿತೆನಿಂದು. 

ಚೆಂಗುಲಾಬಿಯ ಕೆನ್ನೆ 
ಸಿಂಗಾರ ವುಮರನಿಗೆ 
ಅದನರಿತೆನಿಂದು. 
ಕಾರಿರುಳ ತಾರೆಕಣ್‍ 
ಸ್ವಾರಸ್ಯ ಹಾಫಿಸಿಗೆ 
ಅದನರಿತೆನಿಂದು 

ಕಂಬುಕಂಠವೆ ರೂಪ- 
ಕಿಂಬೆಂಬನು ಮುರಾರಿ 
ಅದನರಿತೆನಿಂದು. 
ಬಳ್ಳಿ ಮೈ ಬಳುಕಿಂದೆ 
ಉಲ್ಲಾಸ ಭಾರವಿಗೆ 
ಅದನರಿತೆನಿಂದು 

ಇಭದ ಮೈ ತುಂಬು ನಡೆ 
ಸೊಬಗೆನುವ ಜಯದೇವ 
ಅದನರಿತೆನಿಂದು 
ಕಾರುಮೋಡದ ತುರುಬು 
ಚಾರು ಗದುಗಿನ ಕವಿಗೆ 
ಅದನರಿತೆನಿಂದು 

ನಯನ ಮೀನವೊಲಾಡೆ 
ಪ್ರಿಯವದು ಷಡಕ್ಷರಿಗೆ 
ಅದನರಿತೆನಿಂದು. 
ಪಿಕದ ಕಲರವದ ದನಿ 
ಸುಖದ ಲಕ್ಷ್ಮೀಶಂಗೆ 
ಅದನರಿತೆನಿಂದು. 

ದುಂಬಿವೊಲು ಮುಂಗುರುಳು 
ಯಿಂಬಂತೆ ಹರಿಹರಗೆ 
ಅದನರಿತೆನಿಂದು. 
ಇಂದುಪ್ರಸನ್ನತೆಯೆ 
ಸುಂದರತೆ ಪಂಪಂಗೆ 
ಅದನರಿತೆನಿಂದು. 

ಕವಿವಚನ ಸತ್ಯಕೀ 
ಯುವತಿ ಸಾಕ್ಷಿಣಿಯೆಂಬರ್‍ 
ಅದನರಿತೆನಿಂದು. 
ಸೃಷ್ಟಿಯುತ್ಕೃಷ್ಟಗಳ 
ದೃಷ್ಟಾಂತವೀ ರೂಪು 
ಅದನರಿತೆನಿಂದು.

Thursday 14 December 2023

ರಸಿಕ ರೋಗಿ (ನಡೆದ ಸಂಗತಿ) - ಕೇತಕೀವನ - ಡಿವಿಜಿ

 ಗುರು ಪುರೋಹಿತರವನ ಶಯ್ಯೆ ಬಳಿ ಸೇರಿದರು, 
ಮರಣದಾಗಮನ ಚಿಹ್ನೆಗಳ ನೆರೆ ನೋಡಿದರು; 
ಚರಮಸಾಂತ್ವನ ವಚನಕದು ಸಮಯವೆಂದು 
ಒರೆದರೊಲಿದಾ ರಸಿಕ ರೋಗಿಗವರಿಂತು :- 

“ಮರುಗದಿರಿ, ಕೊರಗದಿರಿ, ಹರಿಯನೇ ನೆನೆಯುತಿರಿ; 
ಕರೆಯುತಿಹರವನವರು ನಿಮ್ಮನವನಡಿಗೆ; 
ಕರುಣಾಳುವವನು, ದುರಿತವ ಹರಿಯಿಪವನು ಹರಿ; 
ದೊರೆವುದವನಡಿದಾವರೆಯ ಸೊದೆಯು ನಿಮಗೆ. 

ಎಷ್ಟು ದಿನ ಬದುಕಿದೊಡಮ್‍ ಇಳೆ ಕಷ್ಟಭೂಯಿಷ್ಠ, 
ಇಷ್ಟ ಸುಖಗಳ ಪಟ್ಟಿಹಿರಿ ನೀಂ ಯಥೇಷ್ಟ 
ಇನ್ನು ಮುಂದಿನ ಗತಿಗೆ ಸಿದ್ಧವಾಗುವುದುಚಿತ, 
ಪುಣ್ಯವಂತರೆ, ನಿಮಗೆ ನಿಸದ ವಿಷ್ಣುಪದ. 

ನೀಮೆಲ್ಲ ತೆರದೊಳಂ ಚೆನ್ನಾಗಿ ಬಾಳಿದಿರಿ; 
ಪ್ರೇಮಪ್ರಸಿದ್ಧಿ ಸಿರಿಗಳನೆಲ್ಲ ಭುಜಿಸಿದಿರಿ; 
ಅರಸನೋಲಗದಿ ಮೇಲ್‍ಚತುರತೆಯ ತೋರಿದಿರಿ; 
ಪರಮಾಪ್ತ ಮಂತ್ರಿಪದವಿಯನು ನಿರ್ವಹಿಸಿದಿರಿ. 
ಬಲು ತೆರದ ಲೋಕೋಪಕಾರಂಗಳನೊಡರ್ಚಿ, 
ಬಲು ಜನದ ಮೆಚ್ಚುಮನ್ನಣೆಗಳಿಂ ನೀಂ ಪೆರ್ಚಿ 
ಬಹು ಸೊಗವ ಕಂಡಿಹಿರಿ, ಬಹು ಭೋಗವುಂಡಿಹಿರಿ, 
ಇಹುದೆ ನೀಂ ಸವಿಯದಿಹ ಮಧುಕಣವದೊಂದಿಲ್ಲಿ? 
ಇನ್ನೇನು ನಿಮಗೆ ಬೇಕೆನಿಪುದೀ ಜಗದಲ್ಲಿ? 
ಇನ್ನಾವ ಸೌಖ್ಯ ನೀಮುಣಲು ಮಿಕ್ಕಿಹುದಿಲ್ಲಿ? 
ಶ್ರೀಪತಿ ದಯಾಮಯಂ ನಾರಾಯಣಂ ನಿಮ್ಮನ್‍ 
ಆಪತ್ತಿನಿಂ ಪಾರುಗೆಯ್ದು ಕರೆದೊಯ್ಯುವನ್‍ 
ನಿತ್ಯನಿರ್ಮಲ ಸುಖಕೆ, ವೈಕುಂಠ ವೈಭವಕೆ 
ಅತ್ಯಂತ ವಾತ್ಸಲ್ಯದಿಂ ತನ್ನ ಸನ್ನಿಧಿಗೆ. 
ಅವನನೇ ನಂಬಿ ನೀಮವನೆ ಸಂರಕ್ಷಕನು, 
ಅವನ ಕೃಪೆಯನೆ ನಂಬಿ-"

 -ಇಷ್ಟರ್ಧ ವಾಕ್ಯವನು 
ಆಡಿದಾ ಸಖರವರು ಮುಂಬರಿವ ಮುನ್ನವನು 
ನೋಡಿ ಬಿರುಗಣ್ಣಿನಿಂದಾಗ್ರಹದೆ ಕೆಂಪಾಗಿ 
ನುಡಿದನೀ ಪಡಿ ನುಡಿಯನ್‍ ಆತುರದೆ ಬಿರುಸಾಗಿ :- 

“ಬಿಡಿ ಬಿಡಿರಿ; ಸಾಕಿನ್ನು ನಿಮ್ಮ ಕತೆಗಳ ಕಂತೆ! 
ಕಡು ದಯಾಮಯನಂತೆ! ಅವನದತಿ ಕೃಪೆಯಂತೆ!! 
ಇನಿತೆನಗೆ ಸೊಗವಿತ್ತ ಲೋಕವನು ಜರೆಯಲೇ? 
ಎನಿತೆನಿತೊ ಎನಗೆ ದಯೆಗೆಯ್ದುದನೆ ತೊರೆಯಲೇ? 
ಆಗದದು! ಹಾ ಆಗದಿಳೆಯೆ ನಾಂ ಬಿಡಲಾರೆ 
ಭೋಗ ಸಾಕಾಯ್ತಿನ್ನು ಕೇಡದೆಂದೆನಲಾರೆ. 
ಕನಿಕರಂ ನಿಮ್ಮ ನಾರಾಯಣನೊಳಿರ್ದಲ್ಲಿ, 
ಎನಗವಂ ಪರಮೋಪಕೃತಿಯನೆಸಗುವೊಡಿಲ್ಲಿ, 
ಈಯೆನ್ನ ಪಳಕೆಯೊಡಲೊಳಗೆನ್ನನಿರಬಿಡಲಿ, 
ಪ್ರೀಯರಾದೀಯೆನ್ನವರ ಸನಿಹವೆನಗಿರಲಿ, 
ಅನುಭವಸಹಸ್ರ ತುಂಬಿರುವುದೀ ತನುಘಟದಿ, 
ಅನುರಾಗಸಂಸ್ಮೃತಿಯ ಮಧುವಿಗೀ ತನುವೆ ನಿಧಿ. 
ಆಹಾಹ! ಏನೇನನುಣಿಸಿತೆನಗೀ ದೇಹ! 
ಸ್ನೇಹಗಳ ಮೋಹಗಳ ಮಾಧುರ್ಯಕಿದು ಗೇಹ! 
ಆ ಸುಖಸ್ಮರಣೆಯೊಳೆ ರಮಿಪುದೆನ್ನ ಸ್ವಾಂತ. 
ಗುರುಜನರೆ, ಕೇಳಿರೀ ಹೃದಯಸತ್ಯದ ನುಡಿಯ. 
ಅರಿತಿಹಿರ ನೀವೆನ್ನ ಜೀವಸಂಸ್ಕೃತಿವಿಧಿಯ? 
ಎನಗರೋಚಕಮೇನುಮಾಗಿಲ್ಲ ಧರೆಯ ಸೊದೆ 
ದಣಿದಿಲ್ಲವೆನ್ನ ಕರಣಗಳೇನುಮೀ ರಸದೆ. 

ಪರಿಯುತಿದೆ ಜೀವೋಷ್ಣವಿನ್ನುಮೀ ನರಗಳಲಿ, 
ಮೆರೆಯುತಿದೆ ಮನವಿನ್ನುಮೆನಿತೊ ಸುಖರಥಗಳಲಿ. 
ವೈಕುಂಠಭೋಗವೆನಗಿಂತ ಶುದ್ಧರಿಗಿರಲಿ; 
ಸಾಕೆನಗೆ ಭೂಭೋಗವದು ಕುಂದದಿರಲಿ. 
ಇದಕಿಂತ ಅಲ್ಲೇನು? ಎನ್ನ ಪ್ರೇಮಿಗಳಿಲ್ಲಿ 
ಇದಿರೊಳಿವರಿರುವಂದು ವೈಕುಂಠವಿಲ್ಲಿ. 

ಓ ಅವಳೆ, ಬಾ ಇತ್ತ, ತಡಹೆನ್ನ ತಲೆಮೊಗವ 
ಹಾ ಇವಳೆ, ಬೀಸೆನ್ನ ಮೇಲೆ ನಿನ್ನಾ ಸೆರಗ 
ಹೋ, ರತ್ನ, ಹಾ ಎನ್ನ ಮುದ್ದುಗಿಣಿ ಬಾರಿಲ್ಲಿ, 
ತೋರು ಮತ್ತೊಮ್ಮೆ ನೀಂ ನಗುಮೊಗವನೆನಗಿಲ್ಲಿ." 

ಇಂತವನದಾರಾರನೋ ನೆನೆದು ಕೂಗುತ್ತೆ 
ಚಿಂತೆಸಂತಸದ ಬೆರಕೆಯ ಮೊಗದಿ ತೋರುತ್ತೆ 
ಉಸಿರಿಳಿದು ಬಸವಳಿದು ಕಣ್ಣ ಮುಚ್ಚಿದನು, 
ಹಸಿವ ಮುಳಿದತ್ತು ನಿದ್ರಿಪವೊಲೊರಗಿದನು.

**********

ಕೊನೆಯುಸಿರೆಳೆಯಲು ಇನ್ನೇನು ಕೆಲವು ಕ್ಷಣಗಳನ್ನು ಎಣಿಸುತ್ತಿರುವ ರೋಗಿ.  'ಸಾಂಸಾರಿಕ ವ್ಯಾಮೋಹವನ್ನು ಬಿಟ್ಟು ತೆರಳಲಾರೆ' ಎಂಬ ರಸಿಕ ರೋಗಿಯ  ಮಮಕಾರದ ಅಂಟನ್ನು ಡಿವಿಜಿಯವರು ಸುಂದರವಾಗಿ ಬಣ್ಣಿಸಿದ್ದಾರೆ.

 ರೋಗಿಯು ಆಸ್ಪತ್ರೆಯಲ್ಲಿ ಹಾಸಿಗೆಯಲ್ಲಿದ್ದಾನೆ. ಹಾಸಿಗೆಯ ಸುತ್ತ ಸೇರಿದ ಮಕ್ಕಳು ಬಂಧುಗಳು, ಗುರುಹಿರಿಯರು, ಪುರೋಹಿತರಾದಿಯಾಗಿ ಸೇರಿದವರು ಮರಣದ ಕ್ಷಣಗಳ‌ ನಿರೀಕ್ಷೆಯಲ್ಲಿದ್ದಾರೆ.
ಇನ್ನೇನು ಕೆಲವು ಕ್ಷಣಗಳಲ್ಲಿ  ಪ್ರಾಣಪಕ್ಷಿ ಹಾರುವುದು. ಆದ್ದರಿಂದ  ರಸಿಕನಾಗಿ ಬಾಳಿದ ಈ ಮಹನೀಯರಿಗೆ ಚರಮಸಾಂತ್ವನದ ನುಡಿಗಳನ್ನು   ನುಡಿಯಲು ಇದೇ ಸರಿಯಾದ ಸಮಯವೆಂದು ಸಮಾಧಾನಿಸಲು ಆರಂಭಿಸುತ್ತಾರೆ.

" ಚಿಂತೆ ಮಾಡಬೇಡಿ, ಕೊರಗಬೇಡಿ, ಶ್ರೀ ಹರಿಯನ್ನು ಧ್ಯಾನಿಸುತ್ತಾ ಇರಿ. ಕರುಣಾಳುವಾದ ನಾರಾಯಣನು ನಿಮ್ಮನ್ನು ತನ್ನ ಬಳಿಗೆ ಕರೆದೊಯ್ಯಲು ನಿಮ್ಮನ್ನು ಕರೆಯುತ್ತಿದ್ದಾನೆ. ನಿಮ್ಮ ಎಲ್ಲಾ ಪಾಪಗಳನ್ನು, ಸಂಕಟಗಳನ್ನು ಅವನು ನಿವಾರಿಸುವನು. ಅವನ ಚರಣಕಮಲಗಳ ಅಮೃತಸವಿಯನ್ನು ಅವನು  ನಿಮಗೆ ಕರುಣಿಸುವನು," ಎಂದರು.

ಮುಂದುವರಿದು ಹೇಳಿದರು," ಈ ಮರ್ತ್ಯಲೋಕದಲ್ಲಿ ಎಷ್ಟುದಿನ ಬಾಳಿದರೂ ಇಲ್ಲಿ ಕಷ್ಟಪರಂಪರೆಗಳು. ನೀವು ಇಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳಿಂದ ಸುಖವನ್ನು ಅನುಭವಿಸಿದ್ದೀರಿ. ಇನ್ನು ಈ ಭೂಮಿಯ ಋಣ ನಿಮಗೆ ಮುಗಿಯುತ್ತಿದೆ. ಮುಂದಿನ ಗತಿಗೆ ನೀವು ಮಾನಸಿಕವಾಗಿ ಸಿದ್ಧರಾಗುವುದು ಲೇಸು" ಎಂದರು. "ಪುಣ್ಯವಂತರು ನೀವು. ನಿಮಗೆ ವಿಷ್ಣು ಸಾಯುಜ್ಯವು ಖಚಿತ ನೀವು ಹೆಂಡತಿ ಮಕ್ಕಳು, ಸಾಂಸಾರಿಕ ಪ್ರೀತಿ ಪ್ರೇಮ ವನ್ನು ಪಡೆದಿದ್ದೀರಿ. ಸುಖ ಸೌಭಾಗ್ಯಗಳನ್ನು ಅನುಭವಿಸಿದ್ದೀರಿ. ಸಮಾಜದಲ್ಲಿ ಒಳ್ಳೆಯ ಹೆಸರು ಕೀರ್ತಿಗಳನ್ನೂ ಸಂಪಾದಿಸಿದ್ದೀರಿ ಕೊರತೆಯಿಲ್ಲದೆ ಎಲ್ಲಾ ರೀತಿಯ ಸಿರಿಸೌಭಾಗ್ಯಗಳನ್ನೂ ಅನಭವಿಸಿದ ಪುಣ್ಯಶಾಲಿಗಳು ನೀವು " ಎಂದು ಸಾಂತ್ವನ‌ ಮಾತುಗಳನ್ನಾಡಿದರು. 

   "ರಾಜವೈಭೋಗದ ಆಡಳಿತದಲ್ಲಿ ನಿಮ್ಮ ಚಾತುರ್ಯದಿಂದ ಅರಸರ ಒಲವನ್ನು ಸಂಪಾದಿಸಿದವರು ನೀವು. ಅರಸರ ನರ್ಮಸಚಿವರಾಗಿ  ಮಂತ್ರಿಪದವನ್ನು ಸಮರ್ಥವಾಗಿ ನಿರ್ಹಿಸಿದವರು. 
ತಾವು ಲೋಕದ ಜನತೆಯ ಹಿತವನ್ನು ಬಯಸಿ ಲೋಕೋಪಕಾರಿಗಳಾಗಿ ಬಾಳಿದಿರಿ. ಸಾಮಾಜಿಕ ಪುರೋಭಿವೃದ್ಧಿಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಜನಮನ್ನಣೆಯನ್ನು ಪಡೆದ ಸಾರ್ಥಕ ಜೀವನವು ನಿಮ್ಮದು! ಐಹಿಕ ಜೀವನದಲ್ಲಿ ಬಲುಬಗೆಯ ಸುಖವನ್ನು ಅನುಭವಿಸಿದವರು ನೀವು. ಭೋಗಭಾಗ್ಯಗಳನ್ನು ತಾವು ಮೊಗೆಮೊಗೆದು ಉಂಡಿರುವಿರಿ! ಮಧುಮಹೋತ್ಸವದ ಎಲ್ಲಾ ಸವಿಮಾಧುರ್ಯಗಳನ್ನು ತಾವು ಉಂಡಿರುವಿರಿ‌. ನೀವು ಸವಿಯದ ಜೇನಹನಿಗಳಿಲ್ಲ.
ಈ ಜಗತ್ತಿನಲ್ಲಿ ನೀವು ಸವಿಯದ ಸವಿ ಬಾಕಿ ಯಾವುದೂ ಇದ್ದಂತಿಲ್ಲ. ನಿಮ್ಮಂತಹ ಭಾಗ್ಯವಂತರಿಗೆ ಇನ್ನೇನು ಬೇಕು!? 

     ಪರಮದಯಾಳುವಾದ ಶ್ರೀಮನ್ನಾರಾಯಣನು ನಿಮ್ಮನ್ನು ಈ   ಹುಟ್ಟುಸಾವುಗಳ ಸಂಕಟಗಳಿಂದ ಪಾರುಮಾಡಿ ತನ್ನೆಡೆಗೆ ಬೇಗನೇ ಕರೆದುಕೊಳ್ಳುವನು. ಅವನ ಸನ್ನಿಧಿಯಲ್ಲಿ ನಿತ್ಯ ನಿರ್ಮಲ ಸುಖ. ಅವನ ಸನ್ನಿಧಿಯು ನಿತ್ಯವೈಭವದ ವೈಕುಂಠ. ಶ್ರೀವಿಷ್ಣುವು ನಿಮ್ಮ ಮೇಲಣ ವಾತ್ಸಲ್ಯದಿಂದ, ತನ್ನ ಸನ್ನಿಧಿಗೆ  ಅಕ್ಕರೆಯಿಂದ ಕರೆಸಿಕೊಳ್ಳುವನು. ಅವನನ್ನೇ ನಂಬಿ. ಅವನ ಅನುಗ್ರಹವೇ ನಿಮ್ಮನ್ನು ಕಾಪಾಡುವುದು. ಅವನೇ ನಿಮ್ಮನ್ನು ಸಂರಕ್ಷಿಸುವವನು." ಎಂದು ಮುಂತಾಗಿ ಗುರುಗಳೂ ಪುರೋಹಿತರೂ, ಹಿತೈಷಿಗಳೆಲ್ಲರೂ ಮರಣೋನ್ಮುಖಿಯಾದ  ರಸಿಕ ರೋಗಿಗೆ ಅಂತಿಮ ಸಾಂತ್ವನ ವಚನಗಳನ್ನು ನುಡಿದರು.

    ಸುತ್ತಲಿದ್ದವರು ನುಡಿಯುತ್ತಿದ್ದ ಸಾಂತ್ವನ ವಚನಗಳು ‌ಮುಂದುವರಿಯುವುದನ್ನು ಮೆಚ್ಚದ ರೋಗಿಯು ಬಿಡುಗಣ್ಣನೋಟದಿಂದ  ಕೆಕ್ಕರಿಸಿ ನೋಡುತ್ತಾ, ಅವರೆಲ್ಲರ ಹಿತವಚನಗಳಿಗೆ ಪ್ರತಿಯಾಗಿ ಕೋಪದಿಂದಲೇ ಇಂತೆಂದು ಉತ್ತರಿಸಿದನು, "ಸಾಕು! ಸಾಕಿನ್ನು ಮುಂದುವರಿಸದಿರಿ ನಿಮ್ಮ ಕಂತೆ ಪುರಾಣಗಳನ್ನು! ಆ ದೇವನು ನಾರಾಯಣನಂತೆ! ಪರಮದಯಾಳುವಂತೆ! ಅವನದೇ ಅತಿಯಾದ ಕೃಪೆಯಂತೆ!  ಇಂತೆಲ್ಲ  ಸುಖ ಸೌಭಾಗ್ಯವನ್ನು ಕರುಣಿಸಿದ ಈ ಸೊಗಸಿನ ಇಹಲೋಕದ ಬಾಳುವೆಯನ್ನು ಜರೆಯಲಾದೀತೇ! ಈ ಲೋಕದ ಜನತೆಯ ಉಪಕಾರವನ್ನು ಮರೆತು ಕಾಣದ ಆ ವೈಕುಂಠಕ್ಕೆ ದಿಡೀರೆಂದು ಹೋಗುವುದುಂಟೇ! ಜನರು ಮೆಚ್ಚುವರೇ?  ಏನೇನೋ ಭೋಗಭಾಗ್ಯಗಳನ್ನು ಅನುಗ್ರಹಿಸಿದ  ಈ ಲೋಕಸಹವಾಸವನ್ನು ತೊರೆಯುವುದು ಸಾಧ್ಯವೇ! ಆಗದು! ಈ ಭೂಮಿಯನ್ನು ಬಿಡಲಾರೆ! ಭೋಗ ಸಾಕಾಯಿತು ಎಂದೆನ್ನಲಾರೆ! ಭೋಗವದು ಕೇಡು ಎಂದೆನ್ನಲಾರೆ" ಎಂದೆನ್ನುತ್ತಾ ಮರಣವನ್ನು ನಿರಾಕರಿಸುತ್ತಾ ಮುಂದುವರಿದು, ಈ ರಸಿಕ ರೋಗಿಯು, " ಈ ನಿಮ್ಮ ನಾರಾಯಣನಿಗೆ ನನ್ನಲ್ಲಿ ಕನಿಕರವಿದ್ದರೆ, ನನ್ನನ್ನು ಈ ನನ್ನ ಹಳೆಯ ಒಡಲಿನಲ್ಲೇ ವಾಸವಿರಲು ಅನುಗ್ರಹವನ್ನು ನೀಡಲಿ. ನನಗೆ ಪ್ರಿಯರಾದ ಹೆಂಡತಿ ಮಕ್ಕಳು, ಸಂಸಾರ, ರಾಜಭೋಗದ ಈ ಜನರ ಸನಿಹವಾಸವೇ ನನಗಿರಲಿ. ಈ ನನ್ನ ದೇಹವೆಂಬ ಮಡಿಕೆಯಲ್ಲಿ ಸಾವಿರಸಾವಿರ ಅನುಭವಗಳ ರಸಪಾಕವಿದೆ, ಸವಿಯಿದೆ. ಈ ಸವಿಯನ್ನು ಬಿಟ್ಟು ನಿಸ್ಸಾರವಾದ ಆ ವೈಕುಂಠದ ಒಂಟಿತನವೆನಗೆ ಬೇಕಿಲ್ಲ.
ಪ್ರೀತಿ ಪ್ರೇಮಗಳ ಮಧುಭಾಂಡವಾದ ಈ ತನುಘಟವನ್ನು  ನಾನೆಂತು ತೊರೆದೇನು!  ಆಹಾ! ಅದೆಂತೆಂತಹ ಸುಗ್ರಾಸ ಉಣಿಸನ್ನು ಈ ಮಡಿಕೆಯೆನಗೆ ಬಡಿಸಿತು! ಸ್ನೇಹ ಮೋಹಗಳ ಮಧುಪಾಕವನ್ನು ಈ ಮನೆಯೆನಗೆ ಉಣ್ಣಿಸಿದೆ.

ನನ್ನ ಮನಸ್ಸು  ಇಂತಹ ಸುಖದ ಕ್ಷಣಗಳನ್ನು ಸ್ಮರಿಸುತ್ತಾ ಆ ಸವಿಯನ್ನು  ಆಸ್ವಾದಿಸುತ್ತಲೇ ಇರಬಯಸುತ್ತದೆ.

ನನ್ನ ಹಿತವನ್ನು ಬಯಸುವ ಗುರುಹಿರಿಯರೇ,  ನನ್ನ ಮನದಾಳದ ಸತ್ಯವನ್ನು ಕೇಳಿ!  ನನ್ನ  ಸಾಂಸಾರಿಕ ಜೀವಸಂಬಂಧಗಳ  ಸಂಸ್ಕೃತಿಯ ಒಲವನ್ನು ಅರಿತಲ್ಲವೇನೋ! 
ಈ ಲೋಕಜೀವನದ ಜೀವಾಮೃತವು ನನಗೆ  ಬೇಸರವೆನಿಸಿಲ್ಲ. ಸಂಸಾರವು ಸಾರಹೀನವೆಂದೆನಿಸಿಲ್ಲ. ನನ್ನ ಇಂದ್ರಿಯಗಳು ಪಟುವಾಗಿವೆ. ಕರಣಗಳು ದಣಿದಿಲ್ಲ. ರಸವನ್ನು ಆಸ್ವಾದಿಸುತ್ತಿರುವಾಗಲೇ 'ತೊಲಗಿಲ್ಲಿಂದ' ಎಂದು ತಳ್ಳುವುದು ಸರಿಯಲ್ಲ.

ಈ ನನ್ನ ನರನಾಡಿಗಳಲ್ಲಿ  ಜೀವಧಾತುಗಳು ಚೈತನ್ಯಪೂರ್ಣವಾಗಿ ನಳನಳಿಸುತ್ತಾ ಹರಿಯುತ್ತಿವೆ.
ನನ್ನ ಮನಸ್ಸು ಸುಖಸೌಭಾಗ್ಯದ ಹೊಂದೇರುಗಳನ್ನೇರಿ ಪಯಣಿಸುವುದನ್ನೇ ಇನ್ನೂ ಆಶಿಸುತ್ತದೆ.
 ಕಣ್ಣುಗಳಿಗೆ ಕಾಣದ ಆ ವೈಕುಂಠದ ಭೋಗ ಭಾಗ್ಯಗಳನ್ನು  ವೈರಾಗ್ಯವನ್ನು ಹೊಂದಿದವರು ಅನುಭವಿಸಲಿ. ಮನ ಇಂದ್ರಿಯಗಳು ಸಂಸಾರವನ್ನು ಬಿಡದೆ, ನಾನೆಂತು ವೈಕುಂಠಕೆ ಪೋಗಲಿ!? 
ಭೂಮಿಯ ಭಾಗ್ಯದ ಭೋಗವು ಎನಗಿನ್ನೂ ಎರವಲ್ಲ.  ನನಗೆ ಭೂಮಿಯ ಭೋಗವು ಕುಂದದಿರಲಿ ಎಂದು ಪ್ರಾರ್ಥಿಸುತ್ತೇನೆ. ನನ್ನನ್ನು ಪ್ರೀತಿಸುವ ಪ್ರೇಮಿಗಳು ನನ್ನ ಸುತ್ತಮುತ್ತ ಇರುವ ಈ ಭೂಮಿಯೇ ನನಗೆ ವೈಕುಂಠ. ಆದ್ದರಿಂದ  ಆ ನಾರಾಯಣನ ವೈಕುಂಠ  ನನಗೆ ಬೇಕಿಲ್ಲ." ಎಂದೆನ್ನುತ್ತಾ, ತನ್ನನ್ನು ಪ್ರೀತಿಸುವವರೆಂಬ ಕನ್ನೆಯರನ್ನು " ಓ ಅವಳೇ  ಇತ್ತ ಬಾ! ಓ ಇವಳೇ ಇಲ್ಲಿ ಬಾ! ನನ್ನ ಮುಖವನ್ನು  ಹಿಡಿದುಕೋ!  ಮನದನ್ನೇ, ಬಾ ಸೆರಗಿಂದ ಬೀಸಿ ದೇಹದ ಉಷ್ಣವನ್ನು ಸರಿಸು" ಎಂದೆನ್ನುತ್ತಾ " "ರತ್ನಾ! ‌ನನ್ನ ಮುದ್ದುಗಿಣೀ ಬಳಿ ಬಾ! ನಿನ್ನ ಮುದ್ದುಮೊಗವನ್ನು  ಮತ್ತೆ ಮತ್ತೆ ನೋಡಬಯಸುವೆನು" ಎಂದು ಮತ್ತೆ ಮತ್ತೆ , ಹತ್ತಾರು ಮನದನ್ನೆಯರನ್ನು ನೆನಪಿಸುತ್ತಾ, ಕೂಗಿ ಕರೆಯುತ್ತಾ, ಮುಖದಲ್ಲಿ  ಚಿಂತೆ ಹಾಗೂ ಸಂತೋಷಗಳನ್ನು ತೋರಗೊಡುತ್ತಾ, ಜೀವನದಲ್ಲಿ ಆಶಾಭಾವವನ್ನೇ ತೋರುತ್ತಾ ದೇಹವು ಸಾಕೆನಿಸುತ್ತಾ ಇಂದ್ರಿಯಗಳು ಜಡವಾದವು,  ಉಸಿರು ನಿಂತಿತು. ಕಣ್ಣಾಲಿಗಳು ಮುಚ್ಚಿದವು. ಹಸಿದ ದೇಹವು ಹಸಿವು ಹಿಂಗಿಸಿಕೊಳ್ಳದೆ ಅಳುತ್ತಾ ನಿದ್ರಿಸಿದಂತೆ ರಸಿಕ ರೋಗಿಯು ಕೊನೆಯುಸಿರೆಳೆದನು.
ಭಾವಾನುವಾದ: 
©✒ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ

Wednesday 13 December 2023

ಎಳೆಯರ ಮುದುಕ (ಒಂದು ಕಥೆ) - ಕೇತಕೀವನ - ಡಿವಿಜಿ

ಮನೆಯೊಳೊಂದು ಮನೆಯ ಕಟ್ಟಹೊರಟರೆಳೆಯರು; 
ಅನುವಿನಿಂದ ಗೋಡೆಯಿರಿಸಬಂದ ಮುದುಕನು. 
ಕುಡಿಕೆ ಪುಟಿಕೆಗಳನು ರಾಶಿಯಿಟ್ಟರೆಳೆಯರು; 
ಅಡಿಗೆಗವನು ಜೋಡಿಸಿಡಲು ಬರುವ ಮುದುಕನು. 
ಕಡಲೆಪುರಿಯ ಭಕ್ಷ್ಯಗಳನು ಮಾಳ್ಪರೆಳೆಯರು; 
ಬಡಿಸಿರಿ, ಹಸಿವೆನುತಲೆಲೆಯ ತರುವ ಮುದುಕನು. 
ಬೊಂಬೆ ಮದುವೆ; ಹಸೆಯ ಹಾಸಿರೆನುವರೆಳೆಯರು; 
ತುಂಬ ಬಾಗಿನಗಳ ತನ್ನಿರೆನುವ ಮುದುಕನು. 
ಮಾಡಲಿಲ್ಲ, ತಿಂಡಿ; ಹೋಗಿರೆನುವರೆಳೆಯರು; 
ಹಾಡೆ ಸುಬ್ಬಿ, ಕುಣಿಯೆ ವೆಂಕಿ, ಎನುವ ಮುದುಕನು. 
ತಿಂಡಿ ಕೊಟ್ಟರಾಗ ಹಾಡು ಎನುವರೆಳೆಯರು; 
ಕಂಡಸಕ್ರೆ ಕೈಲಿ ತೋರಿ ಬಿಗಿವ ಮುದುಕನು. 
ಸುಬ್ಬಿ ಕೊನೆಗೆ ಹಾಡೆ ಸುಬ್ಬನಣಕುಗೈದನು; 
ಉಬ್ಬಿಯುಬ್ಬಿ ನಕ್ಕರೆಲ್ಲ, ನಕ್ಕ ಮುದುಕನು. 
ಮುನಿದು ಸುಬ್ಬಿಯಳಲು ಸುಬ್ಬ ಓಡಲೆದ್ದನು; 
ಮುನಿಯನವನ ಹಿಡಿಯ ಹೊರಟು ಜಾರಿಬಿದ್ದನು. 
ಅಳುವು ನಗುವು ಮುಳಿಸು ಸೆಣಸು-ಆಯಿತಬ್ಬರ; 
ಎಳೆಯರಾಟ ಮೊದಲು, ಕಡೆಗೆ ಭಾರತಸ್ವರ. 
ಮುಗುಳುನಗೆಯ ತಳೆದು ಮುದುಕನಾಗ ಸಕ್ರೆಯ 
ತೆಗೆದು ಹಂಚಿ ಪೇಳ್ದ ಭೀಮ ಬಕರ ಸುದ್ದಿಯ. 
ಕೇಳಿ ನಗುತ ಬಾಲರೆಲ್ಲ ಚದರಿ ನಡೆದರು; 
ಬಾಳು ಇಷ್ಟೆಯೆಂದು ಮುದುಕ ಚಿಟಿಕೆ ಹೊಡೆದನು. 
ಬಾಲಲೀಲೆಯಲ್ಲಿ ಪಾಲುಗೊಂಡ ಮುದುಕನ 
ಹೋಲು ಭವದಿ ಸಖನೆ ಮುಕುತಿಗದುವೆ ಸಾಧನ. 

ಪುತ್ತಳಿಯಾಟವ ಜೀವಿತ- । 
ಕರ್ತವ್ಯಮೆನುತ್ತೆ ಘಾಸಿಪಡುವಂ ಬಾಲಂ ॥ 
ನಿತ್ಯದ ಸಂಸೃತಿ ಬೊಂಬೆಯ । 
ಬಿತ್ತರಮೆಂದರಿತು ನಟಿಸಿ ನಲಿವಂ ಜಾಣಂ ॥

**********

ಎಳೆಯ ಮಕ್ಕಳು ಮನೆಯಲ್ಲಿ ಮನೆಕಟ್ಟುವ ಆಟವಾಡುತ್ತಿದ್ದರು‌. ಮಕ್ಕಳ ಮನೆಕಟ್ಟುವ ಆಟದಲ್ಲಿ ಮುದುಕನು ಗೋಡೆಕಟ್ಟುವ ಸಹಾಯಕನಾಗಿ ಸೇರಿಕೊಂಡನು. ಮಕ್ಕಳು ಮಡಿಕೆ ಕುಡಿಕೆಗಳನ್ನು  ರಾಶಿಪೇರಿಸಿದರು. ಮಕ್ಕಳು ಅವರಿಗೆ ತೋಚಿದಂತೆ ರಾಶಿಗೂಡಿದ್ದ ಮಡಿಕೆಗಳನ್ನು,  ಅಜ್ಜಯ್ಯನು ಬಂದು ಅಡುಗೆಗೆ ಬೇಕಾದಂತೆ ನೇರ್ಪುಗೊಳಿಸಲು   ಜೋಡಿಸಿಡಬಯಸಿದನು.

ಮಕ್ಕಳು ಕಡಲೆಪುರಿಗಳನ್ನು  ಭಕ್ಷ್ಯಗಳೆಂದು ಅಣಿಗೊಳಿಸತ್ತಿದ್ದರು.

ಮುದುಕನು, " ಹಸಿವು ಹಸಿವು, ಬಡಿಸಿ" ಎಂದೆನ್ನುತ್ತಾ ಬಾಳೆ ಎಲೆ ಹಾಸಿದನು.
"ಬೊಂಬೆಮನೆಯಿದು.  ಹಸೆಯ ಹಾಸಿ " ಎಂದೆನ್ನುತ್ತಾರೆ ಮಕ್ಕಳು.

"ಸುಮಂಗಲಿಯರಿಗಾಗಿ ತುಂಬಾ ಬಾಗಿನಗಳನ್ನು ಸಜ್ಜುಗೊಳಿಸಿ" ಎಂದೆನ್ನುವನು ಮುದುಕನು.
"ತಿಂಡಿ-ತೀರ್ಥ  ಊಟಕೂಟವಿಲ್ಲ,  ಹೋಗಿ ಹೋಗಿ" ಎಂದರು ಮಕ್ಕಳು.

ಮುದುಕನು, " ಹಾಡೆ ಸುಬ್ಬಿ ಕುಣಿಯೊ ವೆಂಕಿ" ಎಂದು ಮಕ್ಕಳನ್ನು ಹುರಿದುಂಬಿಸಿದನು‌.
" ತಿಂಡಿಕೊಟ್ಟರೆ ಮಾತ್ರ ಹಾಡು" ಎಂಬುದು ಮಕ್ಕಳ ಸವಾಲು‌.
 
ಘಾಟಿ ಮುದುಕನು ಅಂಗೈಯಲ್ಲಿ ಕಲ್ಲುಸಕ್ಕರೆಯ ಖಂಡವನ್ನು ತೋರಿಸಿದಂತೆ ಮಾಡಿ ಕೈಮುಚ್ಚಿದನು.
ಸುಬ್ಬಿ ಕುಣಿದಳು. ಸುಬ್ಬನು ಅಣಕಿಸಿದನು. ಎಲ್ಲರೂ ಒಟ್ಟಾಗಿ ನಗತೊಡಗಿದರು. ಮುದುಕನೂ ಪಕಪಕ‌ನಕ್ಕನು.  ಅಣಕಿಸಿದ ಸುಬ್ಬನ ಬಗೆಗೆ ಕೋಪಕ್ಕಿಂತ ಎಲ್ಲರೂ ನನ್ನ ಕುಣಿತವನ್ನು ಹಾಸ್ಯಮಾಡಿದರೆಂದು ಅವಮಾನಿತಳಾಗಿ  ಸುಬ್ಬಿಯುಕೋಪಿಸುತ್ತಾ ಅಳತೊಡಗಿದಳು. ಅಷ್ಟರಲ್ಲಿ ಸುಬ್ಬ ಎದ್ದು ಓಡಬಯಸಿದನು. ಓಡುತ್ತಿದ್ದ ಸುಬ್ಬನನ್ನು ಮುನಿಯನು ಹಿಡಿಯಲೆಂದು ಬೆಂಬತ್ತಿದನು. ಓಡುವ ರಭಸಕ್ಕೆ  ಮುನಿಯನು ಕಾಲುಜಾರಿಬಿದ್ದನು.
ನಗು ಅಳು, ಮುನಿಸು ಸೆಣಸಾಟಗಳಿಂದ ಗಜಿಬಿಜಿಯಾಯಿತು.

ಮೊದಲು ಎಳೆಯರಾಟ. ಮುಂದೆ  ದೇಶದುದ್ದಗಲಕ್ಕೆ 'ಮಹಾಭಾರತ'ದ ರಣತೂರ್ಯದ  ಕೋಲಾಹಲ! 
ಘಾಟಿಸ್ವಭಾವದ ಮುದುಕನು ಮುಗುಳು ನಗುತ್ತಾ  ಸಕ್ಕರೆಯನ್ನು  ಮಕ್ಕಳಿಗೆ ಹಂಚಿ, ಬಕರ ಸುದ್ದಿಯನ್ನು ಹೇಳಿದನು. ಯಾರು ಬಕರಗಳೆಂಬುದನ್ನು ಅರಿಯದ ಎಳೆಯ ಮಕ್ಕಳು ಮುಗ್ಧವಾಗಿ ನಗುತ್ತಾ ಚದರಿದರು. 'ಬಾಳು ಎಂದರೆ ಇಷ್ಟೆ' ಎಂದು ಮುದುಕನು ಚಿಟಿಕೆ ಹೊಡೆದನು. ಮಕ್ಕಳಾಟದಲ್ಲಿ  ಮುದುಕನಂತೆ ಸಮರಸವಾಗಿ ಹೊಂದಿಕೊಂಡು ಬಾಳಬೇಕು. ಇದು ಮುಕ್ತಿಸಾಧನ ಎನ್ನುತ್ತಾರೆ ಡಿವಿಜಿ.
 
  ಗೊಂಬೆಯಾಟವು  ಜೀವನದ ಕರ್ತವ್ಯದತ್ತ ಬೊಟ್ಟುಮಾಡುತ್ತದೆ. ನಿತ್ಯದ ಸಂಸೃತಿ ಬೊಂಬೆಯಾಟದ ಸೂತ್ರದಂತೆ ನಡೆಯುತ್ತದೆ. ಜಾಣನಾದವನು ಸೂತ್ರಧಾರನ ಕೈಚಳಕಕ್ಕೆ ತಕ್ಕಂತೆ  ಕುಣಿಯುತ್ತಾನೆ.

ಕಾಲನ ಲೀಲೆಯನ್ನು ಮಕ್ಕಳ ಮನೆಕಟ್ಟುವಾಟದ ಪ್ರತಿಮೆಯೊಂದಿಗೆ ಕವಿವರ ಡಿ ವಿ ಗುಂಡಪ್ಪನವರು ಸುಂದರವಾದ ಚಿತ್ರಣವನ್ನು ರೂಪಿಸಿದ್ದಾರೆ. ಕಾಲನೇ ಸಾವಿಲ್ಲದ ಘಾಟಿ ಮುದುಕ. ಲೋಕದ ಜನರೆಲ್ಲ ಮಕ್ಕಳು. ಸಂಸಾರವೇ, ಮಕ್ಕಳು ಕಟ್ಟುತ್ತಿರುವ ಆಟದ ಮನೆ.   ಮುದುಕನು ಅಂಗೈಯೊಳಗೆ ಇರಿಸಿಕೊಂಡು ಕಣ್ಣುಮುಚ್ಚಾಲೆಯಾಡಿಸುವ ಕಂಡಸಕ್ಕರೆಯು ಸುಖ ಸಂತೋಷ ಫಲನಿರೀಕ್ಷೆಯ ನಿರೀಕ್ಷೆಗಳು. ಮಕ್ಕಳಾಟವು ಮುಂದೆ 'ಮಹಾಭಾರತ' ದ ಕೋಲಾಹಲಕ್ಕೆ ಮುನ್ನುಡಿ.
ಭಾವಾನುವಾದ: ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ



To receive the posts on your personal email, pls subscribe to https://groups.google.com/g/todayskagga

Tuesday 12 December 2023

ಪರವೆಯಿಲ್ಲ - ಕೇತಕೀವನ - ಡಿವಿಜಿ

ಪರವೆಯಿಲ್ಲ-ನಿನಗೆ 
ಕೊರತೆಯಿಲ್ಲ. 
ಏನಾದೊಡೇನು! 
ಏಂ ಪೋದೊಡೇನು! 
ಬಿಡಲಿ ಬಾನ್‍ ಕೊಳ್ಳಿಗಳ; 
ಸಿಡಿ ಸಿಡಿಲು ಮಳೆ ಬರಲಿ; 
ಬಿರುಗಾಳಿ ಬೊಬ್ಬಿಡಲಿ 
ಪರವೆಯಿಲ್ಲ. 
ಧರಣಿ ತಲೆಕೆಳಗಾಗಿ ತಿರುತಿರುಗಲಿ 
ಅಂತಾದೊಡೇನು; 
ಎಂತಾದೊಡೇನು; 

ಇಂದೇನು ಕೊನೆಯಲ್ಲ, 
ಮುಂದೇನೊ ಗೊತ್ತಿಲ್ಲ, 
ಕಾಲಕೇನಳಿವಿಲ್ಲ, 
ಪರವೆಯಿಲ್ಲ. 
ಬಾಳು ಪಳೆ ಪಾಳ್‍ಬಾವಿ ಮತ್ತೇನುಮಲ್ಲ 
ಎಂತಾದೊಡೇನು? 
ಎಂತಿರದೊಡೇನು? 

ಮೆಟ್ಟಲನು ಕಟ್ಟಿಲ್ಲ; 
ದಿಟ್ಟಿಸಲು ಬೆಳಕಿಲ್ಲ; 
ಆಳವರಿತವರಿಲ್ಲ, 
ಪರವೆಯಿಲ್ಲ. 
ಮೇಲಕೆಳೆದಾದರಿಪೆವೆನಲಾರುಮಿಲ್ಲ. 
ಅಂತಿದ್ದೊಡೇನು? 
ಎಂತಿದ್ದೊಡೇನು? 

ತಂಬೆಲರು ಬೀಸುತಿರೆ 
ತುಂಬಿ ಜೇನ್‍ ಸೋರುತಿರೆ 
ತುಂಬೆಹೂ ಬಿರಿಯುತಿರೆ 
ಪರವೆಯಿಲ್ಲ. 
ತುಂಬುಣಿಸದೆಂದೆಣಿಸಿ ದಿನಕಳೆಯಲಹುದು.
ಆಗದಿರಲೇನು? 
ಹೋಗದಿರಲೇನು? 

ಗಳಿಗಳಿಗೆ ಹಾರುವುದು 
ಕೊಳದ ಜಲ ಬತ್ತುವುದು 
ಮಣಲು ಕಣ ಜಾರುವುದು 
ಪರವೆಯಿಲ್ಲ. 
ನಿಲದೆಲ್ಲ ನಡೆಯುವುದು 
ನಮ್ಮನಾಶಿಸದೆ. 
ಅಂತಿರಲದೇನು? 
ಎಂತಿರಲದೇನು? 

ಅಳುವುದೇತಕೊ, ಮಗುವೆ, 
ಅಳುಕುವುದದೇತಕೆಲೊ? 
ಉಳಿಯದೊಂದುಂ ಜಗದಿ; 
ಪರವೆಯಿಲ್ಲ. 
ಕಳೆದುಪೋಪುದು ಕಷ್ಟಸುಖದವೊಲದೆಂದೋ 
ವೋದೊಡೇನು?-ಎಂತು 
ಆದೊಡೇನು?
 
ಆದುದಾಗಲಿ; ಏನು? 
ಪೋದುದಾದರು ಏನು? 
ಬರುವುದೆಲ್ಲಾ ಬರಲಿ 
ಪರವೆಯಿಲ್ಲ. 
ಗಿರಿಯ ಪೋಲ್ವೆದೆಯೊಂದು ನಿನಗಿರಲಿ ಸಾಕು; 
ಪರವೆಯಿಲ್ಲ-ನಿನಗೆ 
ಕೊರತೆಯಿಲ್ಲ.

****************

'ಪರವೆ' 'ಪರಿವೆ' ಎಂದರೆ ಅರಿವು, ತಿಳಿವಳಿಕೆ, ಜ್ಞಾನ ಎಂದು ಅರ್ಥ. 
ಪರವೆಯಿಲ್ಲ ಎಂದರೆ ಅರಿವಿಲ್ಲ ಎಂದಾಯಿತು‌. 'ಪರವಾಗಿಲ್ಲ' ಎಂದರೆ ಕಡೆಗಣಿಸು, ನಿರ್ಲಕ್ಷಿಸು, ಮನಸ್ಸಿಗೆ ಹಚ್ಚಿಕೊಂಡು ಹೆದರಬೇಡ, ಎಂಬಿತ್ಯಾದಿ ಅರ್ಥ. ಮೊದಲನೆಯದಾಗಿ ಅಮೃತಪುತ್ರನಾಗಿ ಜನಿಸಿದ  ಮನುಷ್ಯನಿಗೆ ತಾನು ಯಾರು ಎಂಬುದರ ನಿಜವಾದ ಅರಿವಿಲ್ಲದೇ ದಿನಮಾನಗಳನ್ನು ಕಳೆಯುತ್ತಾನೆ. ಎರಡನೆಯದಾಗಿ ಜೀವನದ ಮುಂದಿನ ಕ್ಷಣಗಳಲ್ಲಿ ಏನಾಗುವುದೆಂಬ ಅರಿವು ಮಾನವನಿಗಿಲ್ಲ. ಈ ಕಾರಣಗಳಿಂದ  ಅಸೀಮಚೈತನ್ಯದ ಗಣಿಯಾದ ಮನುಷ್ಯನು ಕ್ಷಣಕ್ಷಣಕ್ಕೂ ಭಯ, ಆತಂಕ, ತಳಮಳಗಳಿಂದ ಕಂಗೆಡುತ್ತಾನೆ. ದಿಕ್ಕುತೋಚದೆ ಕೈಚೆಲ್ಲಿ ಮೂಲೆಸೇರುವ ಹಂತಕ್ಕಿಳಿಯುತ್ತಾನೆ‌. ಇಂತಹ ಸನ್ನಿವೇಶದ ಶಿಶುಗಳಾಗಿ ಅಳುತ್ತಿರುವವರನ್ನು ಕುರಿತು ಡಿವಿ ಗುಂಡಪ್ಪನವರು  ಏನಾದರೂ ಆಗಲಿ, ನಿನಗೆ ಕೊರತೆಯಿಲ್ಲ‌.  ನೀನು ಸತ್ತ್ವ ಶೀಲನು. ಆದರೆ ನಿನ್ನನ್ನು ನೀನು ಅರಿಯದೆ ಆತಂಕಕ್ಕೊಳಗಾಗಿರುವೆ‌. 

ಏನಾದರೂ ಪರವಾಗಿಲ್ಲ. ನಿನ್ನೊಳಗಿನ ಶಕ್ತಿಗೆ ಕೊರತೆಯಿಲ್ಲ. ಬಾನಿಂದಬೆಂಕಿಯ ಕೊಳ್ಳಿಗಳುದುರಿದರೂ ನಿನ್ನ ಚೈತನ್ಯವನ್ನು ಅವು ಅಳಿಸಲಾಗದು. ಸಿಡಿಲಪ್ಪಳಿಸಲಿ,  ವಿನಾಶಕಾರಿ ಪ್ರಳಯದ ಜಡಿಮಳೆ ಲೋಕವನ್ನೇ ಕೊಚ್ಚಿಕೊಂಡುಹೋದರೂ ನಿನ್ನ ಒಳಗಿನ ಶಕ್ತಿಯನ್ನದು ಎಳೆದೊಯ್ಯಲು ಸಾಧ್ಯವಿಲ್ಲ. ಪ್ರಳಯದ ಸುಂಟರಗಾಳಿ ಚರಾಚರಗಳನ್ನು  ತರಗೆಲೆಯಂತೆ ಗಿರಗಿರನೆ ಹಾರಾಡಿಸಿದರೂ ಪರವಾಗಿಲ್ಲ,  ಧರಣಿಯೇ ಅಡಿಮೇಲಾಗಿ ಗಿರ್ರನೆ ತಿರುಗಿದರೂ,  ಅಚ್ಚರಿಯಿಲ್ಲ! 
ಬ್ರಹ್ಮಾಂಡದ  ನಡವಳಿಕೆಯಲ್ಲಿ ಇದು ಸಹಜ!  ಇದು ಇಂದು ಮೊದಲಲ್ಲ. ಕೊನೆಯೂ ಅಲ್ಲ.  ಮುಂದಿನ ಕ್ಷಣಗಳಲ್ಲಿ ಏನೇನು ನಡೆಯುವುದೋ ಬಲ್ಲವರಿಲ್ಲ. ಆದ್ದರಿಂದ  ಎಲ್ಲವನ್ನೂ ಎದುರಿಸಲು ಸಿದ್ಧನಾಗಿರಬೇಕು.  ಕಾಲನ ನಿಯತಿಯನ್ನು  ಅರಿತವರಿಲ್ಲ.  ಕಾಲಕೆ ಅಳಿವಿಲ್ಲ. ಕಾಲವು ಚಕ್ರದಂತೆ ಮುಂದುಮುಂದಕೆ ಚಲಿಸುತ್ತಲೇ ಇರುತ್ತದೆ. 

ಬಾಳೆಂಬುದು ಬಳಕೆಗಿಲ್ಲದ ಪಾಳುಬಾವಿಯಲ್ಲ.   ಬಾಳ್ವೆಯಲ್ಲಿ ಹಳೆನೀರು ಕಾಲಿಯಾಗುತ್ತದೆ. ಹೊಚ್ಚಹೊಸನೀರು ತುಂಬಿಕೊಳ್ಳುತ್ತಲೇ ಇರುತ್ತದೆ. ಬಾಳುವೆಯ ದಿನಗಳಲ್ಲಿ ಏನಾದರಾಗಲಿ,   ಹೇಗಾದರಾಗಲಿ!  ಹೀಗೆಯೇ ಇರಬೇಕೆಂದು ನಿಯಮಿಸಲು ನಾವ್ಯಾರು!? ಅದು ಕಾಲನ ಗೊತ್ತುವಳಿ, ವಿಧಿಯ ನಿರ್ಧಾರ! 

   ಸುತ್ತಮುತ್ತೆಲ್ಲ ತಂಪಾದ ಸುಳಿಗಾಳಿ ಬೀಸುತ್ತಿದ್ದರೆ ಅದರ ತಂಪನ್ನು ಸವಿಯೋಣ. ದುಂಬಿಗಳು  ಗುಂಯಿಗುಡುತ್ತಾ ಹಾರಾಡುತ್ತಿರುವಲ್ಲಿ ಜೇನಿನ‌ಹನಿಗಳು ಸೋರುತ್ತಿರುವುದರ ಭಾಗ್ಯವನ್ನು ಸದುಪಯೋಗ ಪಡೆದುಕೊಳ್ಳುದು. ಹೂಗಳಲ್ಲಿ ತುಂಬಿರುವ ಜೇನನ್ನು ಅರಸಿ ಶಿವನ ಅನುಗ್ರಹವನ್ನು ಸದುಪಯೋಗ ಪಡಿಸಿಕೊಳ್ಳುತ್ತದೆ. ಸುತ್ತೆಲ್ಲಾ ತುಂಬೆ ಹೂ ಅರಳಿರುವುದನ್ನು ಕಂಡು  ಶಿವಮಹಿಮೆ ಅಪಾರವಾದುದು ಎಂಬುದನ್ನು ಅರಿತುಕೊಳ್ಳಬೇಕು.

ಮುಳುಗುವವನಿಗೆ ಹುಲ್ಲುಕಡ್ಡಿ ಕಂಡರೂ, ಅದು  ಅವನನ್ನುಳಿಸುವ ಸಂಜೀವಿನಿಯಾಗಬಲ್ಲದು.
ಏನೇ ಆಗಲಿ, ಏನೇ ಹೋಗಲಿ, ಪರವಾಗಿಲ್ಲ.
 
ಅಜೇಯವಾದ ನಿನ್ನನ್ನು ನೀನು ಅರಿತುಕೊಂಡು, ಬಂದದ್ದೆಲ್ಲಾ ಬರಲಿ ಎಂದು ಎದುರಿಸಬೇಕು‌. 
ಗಳಿಗೆಗಳು ಹಾರುತ್ತಿರಲಿ, ಕೊಳದ ಜಲವು ಬತ್ತಿಹೋದರೆ ಬತ್ತಲಿ,  ಮರಳಿನಕಣಗಳು ಕಾಣಲಿ, ಪರವೆಯಿಲ್ಲ. ಜಗತ್ತಿನ  ಆಗುಹೋಗುಗಳು ಯಾರನ್ನೂ ಕೇಳುವುದೂ ಇಲ್ಲ. ಯಾರಿಗೂ ಹುಟ್ಟುಸಾವಿನ ಒಸಗೆಯನು ತಿಳಿಸುವ ಅಂಚೆಯ ಅಣ್ಣನಾಗುವುದೂ ಇಲ್ಲ.  ಹಾಗಿದ್ದರೇನು! ಹೇಗಿದ್ದರೇನು! ಅದರ ಅರಿವು ನಮಗಿಲ್ಲ. ನಮ್ಮ ಅರಿವನ್ನು ಉಳ್ಳವರಾಗೋಣ‌.

   ಏನೋ ಕಳೆದುಹೋಯಿತು ಎಂದು ಮಗುವಿನಂತೆ ಅಳುವುದು ಲಕ್ಷಣವಲ್ಲ. ಮಗುವಿನಂತೆ ಅಳಬಾರದು. ಮಗು ಅಸಹಾಯಕ. ಆದರೆ ನಾವು ಅಸಹಾಯಕರಲ್ಲ.  ಅಂಜಕೆ, ಅಳುಕುವಿಕೆ ಸಲ್ಲದು.  ಕಷ್ಟಸುಖಗಳು ಮೋಡದಂತೆ ಬರುತ್ತವೆ. ಹಿಂದಕ್ಕೆ ಸರಿಯುತ್ತವೆ.

 ಸುಖವೂ ಶಾಶ್ವತವಲ್ಲ. ದುಃಖವೂ ಶಾಶ್ವತವಲ್ಲ.  ಏನದಾರೂ ಆಗಲಿ. ಪರವಾಗಿಲ್ಲ.
ಆಗಿದ್ದೆಲ್ಲಾ ಒಳಿತೇ ಆಯಿತು .ಬಂದದ್ದೆಲ್ಲಾ ಬರಲಿ!  ಪರಿವೆಯೇ ಬೇಡ. ಗಿರಿಬೆಟ್ಟದಂತಹ ಅಚಲಗುಣ ನಿನಗಿರಲಿ. ನಿನ್ನೊಳಗಿನ  ಅಸೀಮವಾದ ಸತ್ತ್ವಶಕ್ತಿಯು ನಿನ್ನನ್ನು ಕಾಪಾಡುತ್ತಾನೆ. ನಿನಗೆ ಕೊರತೆಯಿಲ್ಲ. ಕೊರತೆ ಇಲ್ಲ ಎಂಬುದನ್ನು ಅರಿತುಕೊಂಡು ಹೆಜ್ಜೆಗಳನ್ನು ಮುಂದಿಡೋಣ. 
ಭಾವಾನವಾದ: ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

Sunday 10 December 2023

ವಿಧಿಯ ಸ್ವಯಂವರ - ಕೇತಕೀವನ - ಡಿವಿಜಿ

ಸತ್ತೆನೆಂದೆನಬೇಡ
ಸೋತೆನೆಂದೆನಬೇಡ
ಮುತ್ತುತಿದೆ ವಿಧಿಯ ಪಡೆಯೆಂದಳಲ ಬೇಡ
ಸತ್ತ್ವನಿನ್ನೊಳಗಹುದ
ವೆರ್ತವೆನ್ನಿಸಬೇಡ
ಚಿತ್ತವನು ವಜ್ರವಾಗಿಸಿ ನಿಲ್ಲು ಸಖನೆ

ಬಾಳೊಂದು ಕಾಳಗವು
ಬೀಳದೆದೆ ನಿನ್ನಸ್ತ್ರ
ತಾಳುಮೆಯ ತುಂಬಿ ನಿಲುವುದೆ ನಿನ್ನ ವಿಜಯ
ಸೋಲು ಗೆಲುವುಗಳನೀ
ಕಾಲಮಿತಿಯಿಲ್ಲದೀ
ಕೋಲಾಹಲದಿ ಗಣಿಪ ದಿನಮೆಂದು ಸಖನೆ

ಅದಿರದಿರು ಬೆದರದಿರು!
ಎದೆಯನುಕ್ಕಾಗಿಸಿರು
ಬಿದಿಯಬ್ಬರವ ಕೇಳಿ ನಡುಗಿ ಹದುಗದಿರು
ಬದುಕಿ ನೀ ಕದನದಲಿ
ಹದಗೆಡದೆ ಗುರಿಬಿಡದೆ
ಮುದಗೊಂಡು ಹೋರ್ವವಗೆ ಬಿದಿಯೊಲವು ಸಖನೆ

******************

ವಿಧಿಯ ನಿಯತಿಯನ್ನು ಬಲ್ಲವರಿಲ್ಲ‌‌. ವಿಧಿಯು ನಿಯತಿಗನುಸಾರವಾಗಿ ಆವರಿಸುತ್ತದೆ. ವಿಧಿಯ ಆವರಣದಿಂದ ದೂರವಿರಲಾದೀತೆ!? ಇಲ್ಲ.  

ವಿಧಿಯು ವಧುವಿನಂತೆ ಅಥವಾ ವಧುವಿನ ರೂಪದಲ್ಲಿ ಬರಬಹುದು. ವಿಧಿಯನಿಯತಿಯಂತೆ ನಾನರೀತಿಯ ಅಗ್ನಿಪರೀಕ್ಷೆಗಳು ಧುತ್ತೆಂದು ಅವತರಿಸುತ್ತವೆ.  ಸಮಸ್ಯೆಗಳ ಸುರಿಮಳೆಯನ್ನೇ ಎದುರಿಸುವ ಸನ್ನಿವೇಶಗಳು ಬರುತ್ತವೆ. ವಿಧಿಯು ಈರೀತಿ ನಾನಾ ಪ್ರಕಾರಗಳಿಂದ ಬಂದು ಆವರಿಸಿದಾಗ, ಸತ್ತೆನೆಂದು ಕಂಗೆಡದಿರು. ಸೋತೆನೆಂದು ಮನೋದೌರ್ಬಲ್ಯಕ್ಕೆ ಒಳಗಾಗಬಾರದು. ವಿಧಿಯೆಂಬ ಶತ್ರುವಿನ‌ಸೈನ್ಯವೇ ಸುತ್ತುವರಿದು  ಬಲಿತೆಗೆದುಕೊಳ್ಳುತ್ತಿದೆ ಎಂದು ಋಣಾತ್ಮಕವಾಗಿ ಚಿಂತೆಯ ಚಿತೆಯನ್ನು ರಚಿಸಿಕೊಳ್ಳಬಾರದು. ವಿಧಿಯೇ ವಧುವಾಗಿ ಬಂದು ನಿನ್ನೊಳಗಿನ ಸತ್ತ್ವವನ್ನು ಹುರಿಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರಬಹುದು. ಗುಣತ್ರಯಗಳಲ್ಲಿ ಶ್ರೇಷ್ಠವಾದ ಗುಣ ಸತ್ತ್ವ ಗುಣ.  ಸತ್ತ್ವಗುಣಶೀಲರಾದ ಮಹಾಪುರುಷರೆಲ್ಲರೂ ನಾನಾರೀತಿಯ ಅಗ್ನಿದಿವ್ಯಗಳನ್ನೆದುರಿಸಿ ವಿಧಿಯ ವರಮಾಲಿಕೆಯನ್ನು  ಸಮಚಿತ್ತದಿಂದ ಸ್ವೀಕರಿಸಿ ವಿಜಯಮಾಲಿಕೆಯನ್ನಾಗಿಸಿಕೊಂಡರು. ಪ್ರತಿಯೊಬ್ಬ ಮಾನವನಲ್ಲೂ ಮೂಲತಃ ಸತ್ತ್ವ ಗುಣವೇ ಇರುವುದು. ಸತ್ತ್ವಗುಣದೊಡನೆ, ರಾಜಸ ಹಾಗೂ ತಾಮಸಗುಣಗಳು ಸೇರಿಕೊಳ್ಳುತ್ತವೆ. ವಿಧಿಯಾಟದಲ್ಲಿ ಮಾನಸಿಕವಾಗಿ ಕುಗ್ಗಿದರೆ ತಾಮಸದೆಡಗೆ ಜಾರುವ ಅಪಾಯ.  ಒಳಗಿರುವ ಅಮಿತಶಕ್ತಿಯನ್ನು ತಾನು ತಿಳಿದುಕೊಂಡವನಾಗಿ,  'ಬಾಳು ಗೋಳು' ಎಂದು ಹಳಿಯದೆ ಚಿತ್ತವನು ವಜ್ರವಾಗಿಸಿಕೊಳ್ಳುವುದು ಅನಿವಾರ್ಯ. ವಿಧಿಯ ಆದೇಶದಂತೆ  ಆಪತ್ತುಗಳು ಬಂದು ಮುತ್ತಿಟ್ಟಾಗ  ಸಮಚಿತ್ತದಿಂದ ಇರಬೇಕು.  ಮನಸ್ಸನ್ನು ಕಲ್ಲಾಗಿಸಬೇಕು. 'ಸಹನೆ ವಜ್ರದ ಕವಚವು ನಿನಗೆ'  ಎಂದು ಡಿವಿಜಿಯವರು ಮಂಕುತಿಮ್ಮನ ಕಗ್ಗದಲ್ಲಿ ಸೂಚಿಸುತ್ತಾರೆ. ವಜ್ರವು ತನ್ನನ್ನು ರಕ್ಷಿಸುವುದಾದರೆ, ಶತ್ರುಗಳನ್ನು ಚಿಂದಿಚೂರನ್ನಾಗಿಸಬಲ್ಲುದು.

      ಬಾಳುವೆಯು ಹೂಗಳ ಪಕಳೆಗಳ ಹಾಸುಗೆಯಲ್ಲ.  ನಿರಂತರ ಕಾಳಗದ ರಣರಂಗ. ಹೇಡಿಯಾಗದ ಎಂಟೆದೆಯ ದಿಟ್ಟತನವೇ ಅಸ್ತ್ರಶಸ್ತ್ರ!  ಸಹನೆ, ತಾಳ್ಮೆ, ಸಂಯಮ, ವಿವೇಕವೆಂಬ ಚೈತನ್ಯವನ್ನು ಮನದೊಳಗೆ   ತುಂಬಿಕೊಂಡು ಹೋರಾಡುವವನು  ಬಾಳ ಕಾಳಗದಲ್ಲಿ ವಿಜಯಿಯಾಗುತ್ತಾನೆ.
ಕೋಲಾಹಲಗಳಿಂದ ತುಂಬಿದ ಈ ಬದುಕಿನ ರಣರಂಗದಲ್ಲಿ ಸೋಲುಗೆಲುವುಗಳೇ  ಬೆರಳೆಣಿಕೆಯ ದಿನಗಳು.  ಜೀವನವನ್ನು ಪ್ರೀತಿಸುವ ಡಿವಿಜಿಯವರು  ಬಾಳನ್ನು ಗೋಳೆಂದು ಹೀಗಳೆಯುವವನನ್ನೂ 'ಸಖನೇ' ಎಂದು ಅನುನಯದಿಂದ ಸಮಾಧಾನಪಡಿಸುತ್ತಾರೆ.

    ವಿಧಿಯ ಕಟುಪರೀಕ್ಷೆಗಳನ್ನು ಕಂಡು  ಭಯಭೀತಿಯ ಹಳ್ಳಕ್ಕೆ ತನ್ನನ್ನು ತಾನೇ ಕೆಡವಿಕೊಳ್ಳಬಾರದು. ಮನಸ್ಸು  ಬೆದರಿದರೆ  ಅದುರುತ್ತಾರೆ. ಜೀವನದ ಧನಾತ್ಮಕ ಪಥದಿಂದ  ಅಪಾಯದ ದಾರಿಯೆಡೆಗೆ ಜಾರುವ ಸಾಧ್ಯತೆ ಇದೆ. ಮನಸ್ಸನ್ನು ಉಕ್ಕಾಗಿಸಬೇಕಂತೆ. ಮನಸ್ಸು ಸಮಚಿತ್ತದಿಂದಿರಬೇಕು. ಸ್ಥಿತಪ್ರಜ್ಞನಾಗಿರಬೇಕು. ಸುಂಟರಗಾಳಿಯಂತೆ ಅಬ್ಬರಿಸಿಬರುವ ವಿಧಿಯ ಕರೆಯನ್ನು ಕೇಳಿ  ಹೇಡಿಯಾಗಬಾರದು‌. ನಡುಗಿ ತನ್ನ ಸತ್ತ್ವವನ್ನು ಮರೆತು ಬಾಗಬಾರದು. ಸೋತೆನೆಂದು ಬಾಗಿದವನು  ವಿಧಿವಧುವಿನ ಮಾಲಿಕೆಯನ್ನು ನಿರಾಕರಿಸಿದಂತಾಗುತ್ತದೆ. ಇಂತಹವನನ್ನು ವಿಧಿಯು ವರಿಸುವುದಿಲ್ಲ. ಅವನು ಬಾಳರಣರಂಗದಲ್ಲಿ ಸೋಲನ್ನು ಉಣ್ಣುವುದು ಅನಿವಾರ್ಯ. ಬದುಕಿನ ಕದನದಲ್ಲಿ, ಆಗುಹೋಗುಗಳಿಗೆ ಹದಗೆಡದೆ, ಗುರಿಬಿಡದೆ ಆತ್ಮವಿಶ್ವಾಸದಿಂದ  ನಗುನಗುತ್ತಾ ಹೋರಾಡುವವನನ್ನು ವಿಧಿಯು ವಧುವಿನಂತೆ ವಿಜಯಮಾಲಿಕೆಯನ್ನು ತೊಡಿಸಿ ವರಿಸುತ್ತಾಳೆ. 
 ಆತ್ಮವಿಶ್ವಾಸದಿಂದ ಎಡರುತೊಡರುಗಳನ್ನು  ಧನಾತ್ಮಕವಾಗಿ ಸ್ವೀಕರಿಸಿಕೊಂಡು ದಿಟ್ಟತನದಿಂದ ಬಾಳುವವನ್ನು ವಿಧಿಯು ವಿಜಯಲಕ್ಷ್ಮಿಯಾಗಿ ಬಂದು ವರಿಸುತ್ತಾಳೆ.
ಭಾವಾನುವಾದ: 
©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

************

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ, 
ಬತ್ತಿತೆನ್ನೊಳು ಸತ್ವದೂಟೆಯೆನಬೇಡ, 
ಮೃತ್ಯುವೆನ್ನುವುದೊಂದು ತೆರೆಯಿಳಿತ ; ತೆರೆಯೇರು 
ಮತ್ತೆ ತೋರ್ಪುದು ನಾಳೆ -ಮಂಕುತಿಮ್ಮ

ಬದುಕೊಂದು ಕದನವೆಂದಂಜಿ ಬಿಟ್ಟೋಡುವನು
ಬಿದಿಯ ಬಾಯಿಗೆ ಕವಳವಾಗದುಳಿಯುವನೆ?
ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು ನೀ-  
ನೆದುರು ನಿಲೆ ಬಿದಿಯೊಲಿವ – ಮಂಕುತಿಮ್ಮ

ಸೂತ್ರ - ಕೇತಕೀವನ - ಡಿವಿಜಿ


Thursday 7 December 2023

ಬಾಳೊಂದು ಗೋಳು - ಕೇತಕೀವನ - ಡಿವಿಜಿ

ಮಗುಗಳಾಟದೆ ಮನಸು ಬೇಸರುವ ಮುನ್ನ 
ನಗುವಾತಿನಿಂದಲೆದೆ ವಿಕಸಿಸದ ಮುನ್ನ 
ಜಗದಿ ನಾನೊಬ್ಬಂಟಿಯೆಂದೆನಿಪ ಮುನ್ನ 
ಮುಗಿಯಲೀ ಬಾಳು ಮಿಗುವೊಡದು ಗೋಳು. 

ತುಂಬುಚಂದ್ರನ ನೋಟ ಬೇಡೆನಿಪ ಮುನ್ನ 
ಇಂಬನರಸುವ ಸಾಸ ಸಾಕೆನಿಪ ಮುನ್ನ 
ತುಂಬಿಹೂಗಳ ಲೀಲೆ ಬರಿದೆನಿಪ ಮುನ್ನ 
ಮುಗಿಯಲೀ ಬಾಳು ಮಿಗುವೊಡದು ಗೋಳು. 

ಗಾನ ಕವನಗಳ ರುಚಿ ಹಳಸಪ್ಪ ಮುನ್ನ 
ಜ್ಞಾನಶ್ರಮ ಚೇತನಕೆ ದಣಿವೆನಿಪ ಮುನ್ನ 
ಮಾನವತೆ ತಿರುಳಳಿದು ಸಪ್ಪೆಯಹ ಮುನ್ನ 
ಮುಗಿಯಲೀ ಬಾಳು ಮಿಗುವೊಡದು ಗೋಳು.

**************

"ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ" ಎಂದು ಬಯಸಿ, ಜೀವನವನ್ನು ಪ್ರೀತಿಸಿದ ಕವಿ ಡಿ.ವಿ. ಗುಂಡಪ್ಪನವರು ಇರುವ ನಾಲ್ಕು ದಿನದ ಬಾಳನ್ನು   ಎಲ್ಲರೊಡನೆ ಸಮರಸವಾಗಿ ಬೆರೆತು ಬಾಳುತ್ತ, ಮಾನವೀಯತೆಯಿಂದ ಧನ್ಯತೆಯಿಂದ ಬಾಳಬೇಕೆನ್ನುತ್ತಾರೆ. ಬಾಳನ್ನು ಗೋಳನ್ನಾಗಿ ಮಾಡಿಕೊಳ್ಳಬಾರದು.  
  ಮಕ್ಕಳಾಟವನ್ನು ಕಂಡು ಸಂತೋಷದಿಂದ ಮಕ್ಕಳೊಡನೆ ಮಕ್ಕಳಾಗಿ ನಗುತ್ತ ನಗಿಸುತ್ತಾ ಸರಸವಾಗಿ ಬಾಳಬೇಕು.  ಸರಸವಿನೋದದ ಮಾತುಗಳಿಂದ  ಹುಮ್ಮನಸ್ಸಿನಿಂದ ವಿಕಸಿಸುತ್ತಾ ಬಾಳಬೇಕು. ಜಗತ್ತಿನಲ್ಲಿ ನಾನು ಒಂಟಿಯಾದೆ ಎಂಬ ಬೇನೆ ಬೇಸರಗಳು ಅಪ್ಪಳಿಸದಂತೆ ಬಾಳಬೇಕು. 
 ಬೇನೆ ಬೇಸರ ಮನೋವೇದನೆಗಳಿಂದ ನರಳಾಡುವ ಒಂದು ಕ್ಷಣವೂ ಬಾರದಿರಲಿ.  ಬಾಳು ಗೋಳಾಗುವ ಮೊದಲೇ ನಗುನಗುತ್ತಲೇ ಧನ್ಯತೆಯಿಂದ ಜೀವನಪಯಣವನ್ನು ಮುಗಿಸಲು ಪ್ರಯತ್ನಿಸಬೇಕು.
   ಹುಣ್ಣಿಮೆಯ ಚಂದಿರನ ಹಾಲಿನಂತಹ ಬೆಳಕನ್ನು ಸವಿಯಲಾಗದಂತಹ ದೌರ್ಬಲ್ಯವು ಕಣ್ಣು ಹಾಗೂ ಮನಸ್ಸಿಗೆ ಬರಬಾರದು. ಎಲ್ಲರಿಗೂ ಒಳಿತನ್ನು ಬಯಸಿ ಸಹಕರಿಸಲು ಸಾಧ್ಯವಿಲ್ಲದ ಅಸಹಾಯಕ ಸ್ಥಿತಿ ಬರಬಾರದು.  ಹೂಗಳ ಮಕರಂದವನ್ನು ಹೀರಲು ಹೂಗಳ ಸುತ್ತ ಓಡಾಡುವ ದುಂಬಿಗಳ ಆಟವನ್ನು ಸವಿಯಲಾರದ ಹೀನ ಸ್ಥಿತಿ ಬರುವ ಮೊದಲೇ ನಮ್ಮ  ಬಾಳಲೀಲೆಗಳನ್ನು ಮುಗಿಸಿಕೊಳ್ಳಬೇಕು. 
ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿದ್ದು, ಎಲ್ಲರೊಡನೆ ಸಮರಸವಾಗಿ ಹೊಂದಿಕೊಂಡು ಬಾಳುತ್ತಿರಬೇಕು. ಈ ರೀತಿಯಲ್ಲಿ ಬಾಳಲು ಸಾಧ್ಯವಾಗದೆ, ಬಾಳು ಬರೀ ಗೋಳು ಎಂಬಂತಾಗ ಬಾರದು. ಅದರ ಮೊದಲೇ ನಮ್ಮ ಕರ್ತವ್ಯಗಳನ್ನು ಮುಗಿಸಿಕೊಳ್ಳಬೇಕು.
   ಕಿವಿಗಳು ಗಾನಕವನಗಳ ಸವಿಯನ್ನು ಆಸ್ವಾದಿಸುತ್ತಾ ಎಲ್ಲರೊಡನೆ  ಕಲೆತುಬಾಳುತ್ತಿರಬೇಕು. ಗಾನಕವನಗಳು ಹಳಸೆನ್ನುವ ದೀನಹೀನಸ್ಥಿತಿಯು ಬರಬಾರದು.ಅಂತಹ ಹೀನ ಸ್ಥಿತಿಯು ಬರುವ ಮೊದಲೇ ಧನ್ಯತೆಯಿಂದ ಬಾಳನ್ನು ಮುಗಿಸಿಕೊಳ್ಳಬೇಕು. ಅನಂತರ, ದಿನಗಳನ್ನು ಸವೆಸುತ್ತಿದ್ದರೆ ಅದು ಬಾಳಲ್ಲ, ಅದು  ಬಾಳೊಂದು ಗೋಳು. ಓದು ಬರಹ ಅಧ್ಯಯನಗಳು ಸಾಕು, ದಣಿವಾಗುತ್ತಿದೆ, ಓದು ಬರಹಗಳು ಆಯಾಸವನ್ನು ಹೆಚ್ಚಿಸುತ್ತದೆ, ಚೈತನ್ಯವನ್ನು ಕುಗ್ಗಿಸುತ್ತದೆ ಎಂಬ ಅನ್ನಿಸಿಕೆ ಮನಸಿಗೆ ಬರುವ ಮೊದಲೇ ನಮ್ಮ ಜೀವನದ ಕೆಲಸಗಳನ್ನು ಪೂರೈಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳು ಬಾಳೆಂಬುದು ಗೋಳಿನ ಗೋಳವಾಗುವುದು. ಮಾನವೀಯತೆಯಲ್ಲಿ ಸ್ವಾರಸ್ಯವಿಲ್ಲ ಎಂಬ ಭಾವನೆ ಮೂಡುವ ಮೊದಲೇ ಬಾಳದೀವಿಗೆಯ ನಿಜವಾದ ಬೆಳಕನ್ನು ಹರಡುವ ಕರ್ಮವನ್ನು ಮುಗಿಸಿಬಿಡಬೇಕು. ನಗುನಗುತ್ತಾ  ನಗಿಸುತ್ತಾ   ಸಮರಸವಾಗಿ ಹೊಂದಿಕೊಂಡು ಬಾಳುತ್ತಾ ಧನ್ಯತೆಯಿಂದ ಜೀವನವು ಕೊನೆಗೊಳ್ಳಬೇಕು. 
ಸಾಕಪ್ಪ ಸಾಕು ಬೇಡವೀ ಗೋಳು ಎಂದೆನ್ನುವ ದಿನಗಳು ಬಾಳಿನಲ್ಲಿ ಬರಬಾರದು ಎಂದು ಡಿವಿಜಿಯವರು ಬಯಸುತ್ತಾರೆ‌..  ಭಾವಾನುವಾದ: 
©ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ

Wednesday 6 December 2023

ಬಡವ - ಕೇತಕೀವನ - ಡಿವಿಜಿ

ಮೂಡುವಿಂದುವ ನೋಡಲೆವೆಯರಳದವ ಬಡವ 
ಹಾಡಿನಿಂಪಿಂದ ಕಿವಿಯಗಲದವ ಬಡವ 
ಆಡುವೆಳೆಯರ ಕೂಡಲಾಡದೆದೆಯವ ಬಡವ 
ಕಾಡ ಹಸಿರಿರೆ ತಣಿಯಲಾರದವ ಬಡವ 

ಆಗಸದ ಬೆರಗಿಂದೆ ಮೈ ಮರೆಯದವ ಬಡವ 
ಲೋಗರಾಯಸದಾಳವರಿಯದವ ಬಡವ 
ರಾಗರಸಗಳ ಹತಿಗೆ ಸೋಲದಾತನು ಬಡವ 
ರಾಗಿಯೊಳಗಮೃತವನು ಕಾಣದವ ಬಡವ 

ಧರೆಯ ಬದುಕಿನೊಳಿನಿತು ಪಾಲೊಲ್ಲದವ ಬಡವ 
ನರಗಣದ ಋಣದೆಳೆತವೆಣಿಸದವ ಬಡವ 
ಕರುಣವಾರ್ತೆಯ ಕೇಳಿ ಕರಗದಾತನೆ ಬಡವ 
ಕರಣಸಂಕೋಚಗಳನಾಂತವನೆ ಬಡವ 

ಕವಿಯ ಜಗದಲಿ ದಿಟವ ಕಾಣದಾತನೆ ಕುರುಡ 
ಸವಿಯನೀ ಬಾಳ್ಕೆಳೆಯೊಳರಸದನೆ ಹೆಳವ 
ಭವದ ಸಂತೆಯೊಳಾತ್ಮದುಲಿಯ ಮರೆವನೆ ಕಿವುಡ 
ವಿವಿಧದೀ ಕರಣಮಾಂದ್ಯಗಳಿಂದೆ ಬಡವ. 

ಅರುಮೆಯೆಳೆತವೆ ಸೃಪ್ಟಿಮರುಮವೆನದವ ಬಡವ 
ದುರಿತವಂತರಿಗಾಗಿ ಮರುಗದವ ಬಡವ 
ಸಿರಿಯ ಹೊರಗರಸಿ ತನ್ನೊಳು ಕಾಣದವ ಬಡವ 
ಸರಸತೆಯನುಳಿದು ಬಾಳ್ವವನೆ ಕಡು ಬಡವ

**********
ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಗನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ - ಮರುಳ ಮುನಿಯ || (೫೫೪)

Tuesday 5 December 2023

ಒಂದು ಪತ್ರಪ್ರಸಂಗ - ಕೇತಕೀವನ - ಡಿವಿಜಿ

I. ಕವಿ ಬೆನಕನಿಗೆ

ಗೆಳೆಯ,

ಅನ್ನ ಹಳಸುವುದುಂಟು; 
ಹಣ್ಣು ಕೊಳೆಯುವುದುಂಟು; 
ಕನ್ನೆ ಮುದಿಯಹುದುಂಟು; 
ಕೆಳೆಗೆ ಕುಂದುಂಟೆ? 
ಹೂವು ಬಾಡುವುದುಂಟು; 
ಮಾವು ಹುಳಿಯುವುದುಂಟು; 
ದೈವ ಮುಳಿವುದುಮುಂಟು; 
ಕೆಳಗೆ ಕುಂದುಂಟೆ? 

ಏನೊ ಹವ್ಯಾಸದಲಿ, 
ಏನೊ ಹಂಗರಣದಲಿ, 
ಏನೊ ಬೇಸರದಲ್ಲಿ, 
ಏನೊ ಬಳಲಿಕೆಯಲ್ಲಿ 
ಮರೆತುದುಂಟು, 
ಬರೆಯದಿದ್ದುದುಂಟು. 

ಎನಿತು ದಿನವಂತಿಹುದು- 
ನೆನಪೆನಿತು ನಿದ್ರಿಪುದು? 
ಎಚ್ಚರದೆ ನೆನಪು- 
ಚುಚ್ಚದೇ ಮನವ? 
ಇಂದೆನಗೆ ಹಾಗಾಯ್ತು, 
ಚೆಂದ ಮನಕಾಯ್ತು. 

ಹಳೆಯ ದಫ್ತರಗಳೊಳದೇನನೋ ಹುಡುಕುತಿರೆ, 
ಹೊಳೆಯಿತೊಂದೋಲೆ ನೀಂ ಬರೆದಿದ್ದುದೆನಗೆ 
ಏನೊಲವು ಬರಹವದು, ಏನು ಆ ನಲುಮೆ! 
ಆನಂದವುಕ್ಕಿಪಾಳದ ತಿಳಿಯ ಚಿಲುಮೆ! 

ನೆನಪುಕ್ಕಿತಾಗ, 
ಮನವಳುಕಿತಾಗ, 
ಅಳುಕು ಮರುನಿಮಿಷದಲಿ 
ಇಳಿದು ಮರೆಯಾಯ್ತು. 
ಭರವಸೆಯು ತಲೆದೋರಿ 
ಹರುಷ ತುಂಬಾಯ್ತು. 

ಹರುಷದಾ ಲೆಕ್ಕಣಿಕೆ 
ಕೆಳೆಯ ದೌತಿಯಲಿ 
ಮುಳುಮುಳುಗಿ ಭರದಿಂದ 
ಬರೆಯಿಸಿಹುದಿದನು- 
ಸರಸಪತ್ರವೊ ಎನಿಪ ತರ
ಗು ಪತ್ರೆಯನು. 

ಮನ್ನಿಸೈ ನೀನಿದನು ಕವಿದೃಷ್ಟಿಯಿಡುತ, 
ಕನ್ನಡದ ಕವಿ ಬೆನಕ, ರಸಕವಳವೆನುತ 

ಬೆಂಗಳೂರು,೪ ಸೆಪ್ಟಂಬರ್‍ ೧೯೪೧ 

II. ಪ್ರಿಯ ಡಿ.ವಿ.ಜಿ. ಯವರಲ್ಲಿ 

ಉನ್ನತಾದ್ರಿ ಶೃಂಗಶಿಲೆಗೆ 
ಲ್ಲಿ ನೋಡು! ಇಳೆಗೆ 
ಪಾವಕವನು ತಂದ ವೀರ 
ಪ್ರಮಿಥೀಯಸ್‍ನಿವನು ಧೀರ 
ನವೆಯುತಿಹನು ಸೆರೆಯಲಿ 
ಪ್ರೀತಿಯಿವನ ಪೊರೆಯಲಿ. 
ಗರುಡನಂಥ ಮಹಾಚಿಂತೆ 
ಎದೆಯ ತಿನ್ನುತಿರಲು, ನಿಂತೆ 
ಗೊಮ್ಮಟನಂತಳುಕದೆ, 
ಶೋಕ ತುಂಬಿ ತುಳುಕದೆ. 
ಅನ್ನ, -ವಾಯುದೇವನುಸಿರು. 
ವರುಣ ತಂದ ಮಳೆಯೆ ನೀರು. 

ಬನ್ನ ಬಡುವ ಕುವರನನ್ನು 
ಹಗಲಿರುಳೂ ಕಟ್ಟಿಕೊಂಡು 
ಬಗೆಗಾಣದ ಬಯಲಿನಲ್ಲಿ 
ಶೂನ್ಯದಾ ಶ್ಮಶಾನದಲ್ಲಿ 
ಸುತ್ತುತಿಹಳು ಬೊಗರೆಯಂತೆ 
ಬೆದರಿ ನೋಡಿ ಚಿಗರೆಯಂತೆ; 
ಕಣ್ಣು ಬಿಡುವ ತಾರೆಗಳಿಗೆ 
ಕರುಣೆಪಡುವ ಗ್ರಹಂಗಳಿಗೆ 
ಮೊರೆಯಿಡುವಳು ಧಾರುಣಿ, 
ಆ ತ್ರಿಲೋಕತಾರಿಣಿ! 

ಇಂತು ತೊಳಲ್ವ ಪ್ರಮಥಗಾವ 
ಸುಖವು ಕೇಳು? ಆವ ಕಾವ? 
ಇಳೆಯ ತೋರ್ವ ಚೆಲುವ ಬಣ್ಣ 
ತಂಪುವಡಿಸುತಿಹುದು ಕಣ್ಣ. 
ಮಿಂಚಿನಂತೆ ಗುಪ್ತ ಸುಪ್ತ- 
ಭೂಮಿ ವ್ಯೋಮಗಳಲಿ ವ್ಯಾಪ್ತ- 
ವಾದೊಲವಿನ ಭರವಸೆ 
ಮುಗ್ಗಿದೆದೆಯ ತುಂಬಿಸೆ 
ಲೋಕಕೆ ಸುಖ-ಸ್ವಾತಂತ್ರ್ಯ, 
ನಾಡಿಗೆ ಸುಖ-ಸ್ವಾತಂತ್ರ್ಯ, 
ವೈಷಮ್ಯಕೆ ಪಾರತಂತ್ರ್ಯ, 
ಬರುವ ದಿವ್ಯ ಸಂಜ್ಞೆಯಿರೆ 
ನೆಲ ಮುಗಿಲದ ಸಾರುತಿರೆ 
ಹೃದಯವದಕೆ ಹಿಗ್ಗುತಿರೆ, - 
ಸ್ವರ್ಣಯುಗದ ಕಹಳೆಯೂದಿ 
ದ್ವೇಷದೂಷಣೆಗಳ ಬೂದಿ 
ದಿಕ್ಕು ದಿಕ್ಕಿನಲ್ಲಿ ಚೆಲ್ಲಿ 
ಪ್ರೇಮವು ಹೊಂದೇರಿನಲ್ಲಿ 
ಬರುವ ತನಕ-ಯಾವ ಸುಖ? 
ಪೂರ್ವಸಂಜ್ಞೆಯೊಂದೆ ಸುಖ, 
ಇಂದಿದೇ ವಿಮೋಚನೆ. 
ಇದಕೆ ಬೇಡ ಯೋಚನೆ. 

ನಮ್ಮ ಪ್ರಮಥರಲ್ಲಿ ಪ್ರಥಮ 
ಗಣ ನಿನ್ನದು. ನಿನ್ನ ತಮ್ಮ- 
ನಾಗಿ ಬೆಳೆದೆ ಕೇಳೊ! ಅಣ್ಣ! 
ನಿನ್ನಾತುಮನೊಲುಮೆಗಣ್ಣ 
ಬೆಳಕಿನಲ್ಲಿ. ನಿನ್ನ ಹರಕೆ 
ಕಾಯಲೆಂಬುದೊಂದೆ ಅರಿಕೆ. 
ಕೆಳೆಯಂಬುವ ಮಹಾಮಂತ್ರ- 
ವಿರೆ ಸ್ವತಂತ್ರ, ಸರ್ವತಂತ್ರ 
ಎದೆಬೀಣೆಯ ನುಡಿಯಿಸೆ 
ಮನದ ಕೊಂಬ ಹಿಡಿಯಿಸೆ, 
ಅದರ ನಾದದಲ್ಲಿ ಕೂಡಿ 
ಬೆಳೆಯಿತೆಮ್ಮ ಗಣವು ಹಾಡಿ.

ನಾನಾಡಿದ ತೊದಲುಮಾತು 
ಇರಲಿ ನಿನ್ನ ಮನದಿ ಹೂತು. 
ನಾನಾಡಿದುದೆಲ್ಲ ತೊದಲು, 
ನನ್ನ ಸುತ್ತಲಿಹುದು ಹುದುಲು. 
ತಾರೆಯೆಂತು ದಿಗ್ವಲಯದಿ 
ಮಿನುಗಿತಂತು ಮಮ ನಿಲಯದಿ 
ನಿನ್ನ ನಚ್ಚಿನೋಲೆಯೂ 
ಮತ್ತೆ ಮೇಲೆ ಮೇಲೆಯೂ 
ಸೆರೆಯಾಳನು ಮುಕ್ತಿಯ ಚೆಲು 
ಗನಸೆಲ್ಲಿಯು ಮುತ್ತಿದವೊಲು 
ನಿನ್ನ ನೇಹದಾಳದಲ್ಲಿ 
ಮುಳುಗಿ ಪಡೆದ ಸವಿಯದಿಲ್ಲಿ 
ಉಕ್ಕೇರಿತು. ಆದರೇನು? 
ಸುತ್ತಲಿರುವ ಹುದುಲಿಗೇನು? 
ಕೆಸರನೆಲ್ಲ ಬದಿಗೆ ಸರಿಸಿ 
ಒಂದು ನಿಮಿಷವೆಲ್ಲ ಮರೆಸಿ 
ನಿನ್ನ ಪ್ರೀತಿಸರಸೆಯಲ್ಲಿ 
ಜೀವಹಂಸ ನೆಗೆದಿತಿಲ್ಲಿ! 
ನೆಗೆದು ನಭಕೆ ಹಾರಿತು, 
ಇಳಿದು ಬಳಿಗೆ ಸಾರಿತು. 
ನಿನ್ನ ಕ್ಷಮೆಯ ಹೊಂದಿತು. 
ಓಲೆಯಿದನು ತಂದಿತು! 

೧೪ ಸೆಪ್ಟೆಂಬರ್‍ ೧೯೪೧ - ಬೆನಕ

**************************

ಅನ್ನ ಹಳಸಿ ಕೆಡಬಹುದು. ಹಣ್ಣುಗಳು  ಕಾಲವಶದಿಂದ ಕೊಳೆತು ಹೊಲಸಾಗುವುದೂ ಇದೆ. ಸುಂದರಿಯಾದ ಕನ್ಯೆಯು ಕಾಲವಶದಿಂದ  ಮುದಿಯಾಗಿ  ತೊಗಲು ಬಿದ್ದವಳಾಗಿ ಜನರಿಂದ ದೂರವಾಗುವ ಸಾಧ್ಯತೆ ಇದೆ. ಗೆಳೆಯಾ!  ಅಪ್ಪಟ ಗೆಳೆತನದಲ್ಲಿ  ಕುಂದುಕೊರತೆಗಳಿಗೆ ಅವಕಾಶವಿಲ್ಲ.
ಹೂವು ಬಾಡೀತು. ಮಾವು ಹುಳಿಯಾಗುವುದೂ ಇದೆ. ಕೆಲವೊಮ್ಮೆ ದೈವವೂ ಮುನಿಸಬಹುದು.
ಆದರೆ ಗೆಳೆತನಕ್ಕೆ ಕುಂದಾಗದು. ಪ್ರಕೃತಿಯೇ ಏರುಪೇರಾದರೂ ನಿಜವಾದ ಗೆಳೆತನಕ್ಕೆ ಯಾವುದೇ ರೀತಿಯ ಊನವಾಗದು.

    ಯಾವದೋ ಒತ್ತಡದಿಂದ ಮರೆತಿರುವುದು ಇದ್ದಿರಬಹುದು. ಹವ್ಯಾಸಗಳ ಒತ್ತಡ, ಯಾವದೋ ಹಗರಣ, ಯಾವದೋ ಬಳಲಿಕೆ, ಬೇಸರಗಳಿಂದ ‌ಮರೆತಿರಬಹುದು. ಓಲೆ ಬರೆಯಲು ಮರೆತಿರಬಹುದು.
ಒಂದೊಮ್ಮೆ ಮರೆತೆನೆಂದರೆ ಮರೆವು ಶಾಶ್ವತವಲ್ಲ. ನಿದ್ದೆಗೊಂಡವನು ಎಚ್ಚರವಾಗಲೇ ಬೇಕಲ್ಲವೇ? ಎಚ್ಚರವಾದಾಗ ನೆನಪುಗಳು ಮನಸ್ಸನ್ನು ಕಾಡುತ್ತವೆ.

    ಕೆಲವು  ದಿನಗಳ ಹಿಂದೆ ನೀನು ನನಗೊಂದು ಓಲೆಯನ್ನು ಬರೆದುದು ನೆನಪಾಯಿತು. ಒಲವುತುಂಬಿದ ಓಲೆಯದು. ಆ ಓಲೆಯ ಬರಹದಲ್ಲಿ ಅನುಪಮ ನಲುಮೆಯದು ಸೂಸುವುದು! ಆನಂದವನ್ನೇ ಚಿಮ್ಮಿಸುವ ಚಿಲುಮೆಯದು! 

   ಆ ನಲುಮೆಯ ಪತ್ರವನು ಮತ್ತೆ ಕಂಡಾಗ ನೆನಪುಗಳು ಕಾಡುತ್ತಾ ಸಕಾಲದಲ್ಲಿ ಸ್ಪಂದಿಸದುರುವ ಬಗೆಗೆ ಒಳಗೊಳಗೇ ಅಳುಕಿದೆನು. ಗೆಳೆತನದಲ್ಲಿ ಅಳುಕಿಗೆ ಅವಕಾಶವಿಲ್ಲ ಎಂದಯ ಮುಕ್ಷಣದಲ್ಲಿ   ಸುಧಾರಿಸಿಕೊಂಡೆ. ಗೆಳೆಯಾ, ಭರವಸೆಯಿಂದ ಹರುಷವಾಯಿತು ಮನಕೆ.

  ಹರ್ಷಗೊಂಡ ಮನಸ್ಸು ಕೈಗೆ ಲೆಕ್ಕಣಿಕೆಯನ್ನು ಹಿಡಿಸಿತು. ಗೆಳೆಯಾ, ನಾನಲ್ಲ ನಿನ್ನ ಗೆಳೆತನವೇ ಈ ಮಾರೋಲೆಯನ್ನು ಬರೆಯಿಸಿತು. ಮಸಿಕುಡಿಕೆಯೊಳಗೆ ಮುಳುಮುಳುಗಿ  ಲಗುಬಗೆಯಿಂದ ಈ ಸರಸಪತ್ರವನ್ನು ಗೆಳೆತನವೇ ಬರೆಯಿಸಿತು.

ಈ ಒಣಹಾಳೆಗಳಿಗೆ ಗೆಳೆತನದ ಒಲವಿನ ಪತ್ರವೇ ಜೀವಚೈತನ್ಯವನ್ನು ಮೂಡಿಸಿದೆ.
ಕವಿವರ ಕನ್ನಡದ ಬೆನಕ!  ಕವಿದೃಷ್ಟಿಯುಳ್ಳವನು ನೀನು. ರಸಗವಳವೆಂದು  ಸ್ವೀಕರಿಸಿ ಎನ್ನ ಮರೆಗುಳಿತನವನ್ನು  ಮನ್ನಿಸುವುದು!

****

ಪ್ರಮೀತಿಯಸ್ ಎಂಬುದು ಗ್ರೀಕ್ ದೇವತೆಯೊಬ್ಬನ ಹೆಸರು. ಜೆಯಾಸನು ಮಾನವರ ಬಳಕೆಯ ಬೆಂಕಿಯನ್ನು ಕಿತ್ತುಕೊಂಡನಂತೆ. ಪ್ರಮೀತಿಯಸನು  ಗೆಳೆಯನಿಗಾಗಿ ಬೆಂಕಿಯನ್ನು ಜಿಯಾಸನ ಹಿಡಿತದಿಂದ ಕದ್ದು  ತಂದು ಭೂಮಿಗೆ ತಂದು ಗೆಳೆಯನ ಬಂಧನವನ್ನು ಬಿಡಿಸಿದವನು ಎಂಬ ದಂತಕತೆಯೊಂದು ಹೇಳುತ್ತದೆ. ಪ್ರಮೀತಿಯಸನು ಮಾಡಿದ ಅಪರಾಧಕ್ಕಾಗಿ ಅವನನ್ನು ಪರ್ವತದ ಕೋಡುಗಲ್ಲಿಗೆ ಸರಪಣಿಗಳಿಂದ ಬಿಗಿದು ರಣಹದ್ದಿನಿಂದ ಅವನ ಯಕೃತ್ತಿನ ಮಾಂಸವನ್ನು ಕಿತ್ತು ಕಿತ್ತು ತಿನ್ನುವ ಶಿಕ್ಷೆ ವಿಧಿಸಲಾಯಿತು.  ಅವನ ಯಕೃತ್ತು ಮತ್ತಮತ್ತೆ ಬೆಳೆಯುತ್ತಿತ್ತು ಎಂದು ಕತೆಯ ಉಲ್ಲೇಖ.
'ಕವಿ ಬೆನಕನಿಗೆ' ಹೆಸರಲ್ಲಿ ಬರೆದ  ಓಲೆಗೆ  ಹತ್ತು ದಿನಗಳ ಅನಂತರ ಗೆಳೆಯನ ಮಾರೋಲೆ. ( ಮಾರುತ್ತರದ ಓಲೆ) 

ಎತ್ತರವಾದ ಗಿರಿಶಿಖರದ  ಕೋಡುಗಲ್ಲಿಗೆ ಗೆಳೆಯನಿಗಾಗಿ ಜೀವವನ್ನು  ಪಣವಿಟ್ಟ ಪ್ರಮೀತಿಯಸನ್ನು ಸರಪಣಿಯಿಂದ ಬಿಗಿದರು. ಈ ಭೂಮಿಯನ್ನು ಪಾವನಗೊಳಿಸುವ ಬೆಂಕಿಯನ್ನು  ತಂದ ಪ್ರಮೀಥಿಯಸ್ ಧೀರನು. ಈ ನನ್ನ ಗೆಳೆಯನು ಸೆರೆಯಲ್ಲಿ ನವೆಯುತ್ತಿದ್ದಾನೆ. ಗೆಳೆಯನ ಪ್ರೀತಿಯು ಪ್ರೀತಿಯನ್ನೂ ಗೆಲ್ಲಿಸಲಿ. ಗೆಲುವು  ನಮ್ಮ ಗೆಳೆತನವನ್ನೂ ಗೆಲ್ಲಿಸಲಿ. ಪ್ರಮೀಥಿಯಸ್ಸನ ಎದೆಬಗೆಯುತ್ತಿದ್ದ ಗರುಡನಂತೆ ಮಹಾಚಿಂತೆಯು  ಎದೆಯ ಕೊರೆಯುತ್ತಿದೆ. ಆದರೂ, ಅಂಜದೆ ಅಳುಕದೆ, ನಿಶ್ಚಲವಾಗಿ ನಿಂತ ಗೊಮ್ಮಟನಂತೆ ಅಚಲವಾಗಿ ನಿಂತೆ. ವಾಯುವೇ ಅನ್ನ. ಸುರಿವ‌ಮಳೆಯೇ ನೀರು. ಸಂಕಟಗಳನ್ನು ಎದುರಿಸುವ ಕುಮಾರನನ್ನು ಕಟ್ಟಿಕೊಂಡು ಹಗಲಿರುಳೂ  ಮುಂದುಗಾಣದ ಬಯಲಲ್ಲಿ ಶೂನ್ಯ ಮಸಣದಲ್ಲಿ‌ ಎಂಬಂತೆ ಗುರಿಯಿಲ್ಲದ ಬುಗುರಿಯಂತೆ,  ಬೆದರಿದ ಚಿಗರೆಯಂತೆ ಪಿಳಿಪಿಳಿ ಕಣ್ಣುಬಿಡುತ್ತದ್ದೇನೆ.

ಕಣ್ಣುಬಿಡುವ ತಾರೆಗಳಿಗಳಲ್ಲಿ, ಕರುಣೆ ಪಡುವ ಗ್ರಹಗಳಿಗಳಲ್ಲಿ  ಲೋಕಸಂರಕ್ಷಕಳಾದ ಧಾರಿಣಿಯೇ ಅಸಹಾಯಕಳೋ ಎಂಬಂತೆ ಮೊರೆಯಿಡುತ್ತಿದ್ದಾಳೆ.

ಈ ರೀತಿಯಲ್ಲಿ ತೊಳಲಾಡುತ್ತಿರುವ ಶಿವಭಕ್ತ ಪ್ರಮಥನಂತಹ ಗೆಳೆಯನಿಗೆಲ್ಲಿಯ ಸುಖ!? ಗೆಳೆಯನನ್ನು ಹಾಗೂ  ಗೆಳೆತನವನ್ನು ಕಾಪಾಡುವವರು ಯಾರು!?  ಗೆಳೆತನವೇ ಈ ವಸುಂಧರೆಯ ಚೆಲುವನ್ನು ಸಿರಿಸಂಪದವನ್ನು ತೆರೆದು ತೋರಿಸುವುದು. ಈ ಕಣ್ಣುಗಳಿಗೆ ತಂಪನ್ನು ನೀಡುವ ಗೆಳೆತನವು ಅಂತರಂಗದ ಕಣ್ಣುಗಳನ್ನು ತೆರೆಸಲು ಕಾರಣ‌.

ಬಾನಲ್ಲಿ ಮೂಡುವ ಮಿಂಚಿನೊಳಗೆ ಅಮೋಘವಾದ ವಿದ್ಯುತ್ಸಂಚಾರದ ಶಕ್ತಿ ಅಡಗಿರುತ್ತದೆ. ಹಾಗೆಯೇ,  ದಿಗಂತವನ್ನು ಮೀರಿ ವಿಸ್ತರಿಸುವ ಗೆಳೆತನವು  ಒಲವಿನ ಆಕರ್ಷಣೆಯ ಶಕ್ತಿಯಿಂದ ಮುದುಡಿದ ಎದೆಯಲ್ಲಿ ಭರವಸೆಯ ಜೀವಸಂಚಲನವನ್ನುಂಟುಮಾಡುತ್ತದೆ. ಮುಗ್ಗಿದೆದೆಯಲ್ಲಿ ಒಲವನ್ನು ತುಂಬಿಸುವದರಿಂದ ಲೋಕದಲ್ಲಿ ಸುಖ ಸ್ವಾತಂತ್ರ್ಯ ! ನಾಡಿನಲ್ಲಿ  ಸುಖ ಸ್ವಾತಂತ್ರ್ಯವನ್ನು  ಮೂಡಿಸಲು ಗೆಳೆತನವು ಕಾರಣವಾಗಬಲ್ಲದು‌. 

ಪರಸ್ಪರ ವೈಷಮ್ಯವಿಲ್ಲಿ   ಸ್ವಾತಂತ್ರ್ಯಕ್ಕೆ  ಅವಕಾಶವಿಲ್ಲ. ಪಾರತಂತ್ರ್ಯವೇ ಗತಿ! 
ಗೆಳೆಯನ ಆಗಮನದ ದಿವ್ಯ ಸೂಚನೆ ಸಿಕ್ಕರೆ, ಹೃದಯವೇ ಆಗಸದಂತೆ ಹಿಗ್ಗಿ ಮುಗಿಲೆತ್ತರ ಗೆಳೆಯನ ಆಗಮನದ ಸಂತಸವನ್ನು  ಬಿತ್ತರಿಸುತ್ತ ಹಿಗ್ಗಿ ಹೀರೇಕಾಯಾಗುತ್ತಾನೆ.

 ಸುವರ್ಣಯುಗ ಕೂಡಿಬಂತೆಂದು  ಕಹಳೆಯೂದುವವನು, ನೀನೆ ಗೆಳೆಯ!  ಗೆಳೆಯನಿರುವಲ್ಲಿ ದ್ವೇಷ ಅಸೂಯೆಗಳು ಬೂದಿಯಾಗಿ  ದಿಗ್ದಿಗಂತಗಳಾಚೆ ಚೆಲ್ಲುತ್ತೆ. ಪ್ರೇಮದೋಲೆಯು ಹೊನ್ನಿನ ತೇರೇರಿಲಿ ಬರುವುದನ್ನೇ ಎದುರು ನೋಡಯತ್ತಾನೆ. ಯಾವಾಗ ಓಲೆ ಕೈಗಾನಿಸುವುದೋ ಎಂದು ಗೋಣೆತ್ತಿ ನೋಡುತ್ತಾ  ಸವೆಯುತ್ತಾನೆ. ಗೆಳೆಯನ ಓಲೆಯ ಸುಳಿವೊಂದು ಸಿಕ್ಕಿದರೆ ಅದೂ ಕೂಡ ಒಳ್ಳೆಯ  ಸೂಚಿಸಿದರೂ ಅದೇ ಒಂದುರೀತಿಯ ಸುಖದ ಸಗ್ಗ.    ಗೆಳೆಯಾ, ನಮ್ಮ ಗಣಪ್ರವರರಲ್ಲಿ ನೀನೇ ಗಣಪತಿಯಂತೆ ಪ್ರಥಮವಂದ್ಯ ಪ್ರಮಥನಾಯಕ ಬೆನಕದೇವ! ಗೆಳೆಯಾ ನಾನಿನ್ನ ತಮ್ಮನಾಗಿ ಬೆಳೆದೆ. ನಿನ್ನ ಆತ್ಮೀಯ ಒಲವಿನ ಬೆಳಕಿನಲ್ಲಿ ನಾನು ಬೆಳೆದೆನು ಬೆಳಗುತ್ತಿರುವೆನು. ಅಣ್ಣಾ! ನಿನ್ನ ಹರಕೆಯು ನಿನ್ನ‌ ಆತ್ಮದೊಲವಿನ‌ ಬೆಳಕಲ್ಲಿ ಬೆಳಗಿ ನಿನ್ನನ್ನು ಕಾಪಾಡಲಿ ಎಂದು ಎಂಬುದೇ ನನ್ನ ಅರಿಕೆ.
ಗೆಳೆತನವು ಮಹಾಮಂತ್ರ. ಗೆಳೆತನದ ಮಹಾಮಂತ್ರವು ಸಿದ್ಧಿಸಿದರೆ ಸರ್ವರೂ ಸ್ವತಂತ್ರರು. ಹೃದಯವೆಂಬ ವೀಣೆಯನ್ನು  ಭಾವವೆಂಬ ತಂತಿಯಿಂದ‌ ಮಿಡಿದಾಗ ಅದರ ದಿವ್ಯ ನಾದದಲ್ಲಿ ಬೆನಕನ ಗಣಗಳಾದ ನಾವು ಒಂದುಗೂಡಿ ತಾಳ ಹಾಕುತ್ತ ಕುಣಿಯುತ್ತೇವೆ.

ಗೆಳೆಯ, ನಾನಾಡಿದ ಮಾತುಗಳು ಬರಿಯ ತೊದಲುನುಡಿಗಳು ನಿನ್ನ‌ಮನದೊಳಗೆ ಹುದುಗಿ ನಿಂತಿರಲಿ.
ನನ್ನ ಸುತ್ತಮುತ್ತ ಕೆಸರಿನಂತಹ  ಬೇನೆಬೇಸರಗಳು ಆವರಿಸಿವೆ. ಕತ್ತಲಿನ ಆಕಾಶದಲ್ಲಿ ಮಿನುಗುಮಿಂಚಿನ ತಾರೆಯೊಂದು  ಹೊಳೆದಂತೆ  ನನ್ನ ಮನೆಯಲ್ಲಿ ನಿನ್ನ ನೆಚ್ಚಿನ ಓಲೆಯನ್ನು ಕಂಡೆನು. ಸೆರೆಯಾಳು  ಸೆರೆಯಿಂದ ಬಿಡುಗಡೆ ಕಂಡಂತೆ ಈ ನಿನ್ನ ಮೆಚ್ಚಿನೋಲೆಯು ನನ್ನನ್ನು ಬೇನೆ ಬೇಸರಗಳ ಬಂಧನದಿಂದ ಮುಕ್ತಿ ನೀಡಿತು‌. ಸೆರೆಯಾಳಿಗೆ ಕನಸಲ್ಲಿ ಬಿಡಗಡೆಯಾದಂತೆ ನನಗೆ ನಿನ್ನ ಪತ್ರವು ಬೇನೆಬೇಸರಗಳಿಂದ ಒಂದಿನಿತು ಮುಕ್ತವಾದಂತೆ ಹಾಯೆನ್ನಿಸಿತು. ಗೆಳೆಯಾ, ನಿನ್ನ ಗೆಳೆತನದಲ್ಲಿ ಮುಳುಗೆದ್ದ  ಮೀಹದಿಂದ  ಆನಂದದ ಸವಿ ಉಕ್ಕೇರಿತು. ಸುತ್ತಮುತ್ತ ಚೆಲ್ಲಿರುವ ರಾಡಿ ಕೊಚ್ಚೆಕೆಸರಲ್ಲೂ 
ಕೆಸರನೆಲ್ಲ ಒಂದೇ ನಿಮಿಷದಲ್ಲಿ  ಹೊರಚೆಲ್ಲಿದಂತೆ  ಬೇನೆ ಬೇಸರಗಳು ದೂರಸರಿದವು. ದುಗುಡವೆಲ್ಲವನು ನಿನ್ನ ಓಲೆ ಮರೆಯಿಸಿತು‌.

ಗೆಳೆಯಾ! ನಿನ್ನ ಪ್ರೀತಿಯ ಕೊಳದಲ್ಲಿ ಜೀವಹಂಸವನ್ನು ಆಗಸಸರಸಿಯಲಿ ತೇಲಿಬಿಟ್ಟೆ. ಈ ಜೀವಹಂಸವು ಸರಸಿಯಿಂದ  ನಭದೆತ್ತರಕ್ಕೆ ಜಿಗಿಯಿತು. ನಭದಿಂದ ಮೆದುವಾಗಿ ಇಳಿದು ನನ್ನ  ಬಳಿಗೆ ಮಂದಹಾಸ ಬೀರುತ್ತಾ ಬಂತು!  ನಿನ್ನ ಕ್ಷಮೆಯ ಭಾರವನ್ನು ಹೊತ್ತುಕೊಂಡೇ ಒಲವಿನ ಓಲೆ ಎನ್ನ ಬಳಿಸಾರಿತು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣವಭಟ್ ಮಂಡ್ಯ

Sunday 3 December 2023

ನಳಿನಿಗೆ - ಕೇತಕೀವನ - ಡಿವಿಜಿ

ನವನೀತ ನಾನಲ್ಲ 
ಧವಳಾಂಗವೆನಗಿಲ್ಲ 
ಎನ್ನ ನೀಂ ಮೆಚ್ಚುವೆಯ?
-ಎನ್ನದಿರು, ನಳಿನಿ. 

ರವಿಯ ತಾಪದಿ ಜೀವ 
ತವಿಸುತಿರೆ ಬೇಕಿಹುದು 
ಕಣ್ಣಿರಿವ ಝಳವಲ್ಲ, 
ತಣ್ಣನೆಯ ನೆರಳು. 

ದಿನಮಧ್ಯದುಮ್ಮಳದಿ 
ವನದ ಛಾಯೆಯ ತೆರದಿ 
ಕೋಮಲದ ನಿನ್ನೊಡಲ 
ಶಾಮಲತೆಯೆನಗೆ 

ನೀಲನಭದವೊಲು ಮುಖ 
ಲೋಲನಯನವೆ ತಾರೆ 
ತಿಳಿನಗುವೆ ಚಂದ್ರಕಳೆ 
ಚೆಲುವುಂಟೆ ಬೇರೆ? 

ತಿಳಿಗೊಳದಿ ಸುಳಿಸುಳಿದು 
ಹೊಳೆಹೊಳೆವ ಮೀನವೊಲು 
ಸುಳಿವ ನಿನ್ನಾ ಕಣ್ಣು 
ಬೆಳಕೆನ್ನ ಬಾಳ್ಗೆ. 

ಬಿಳಿದೊವಲು ಹೆಚ್ಚೇನು 
ಜಳದ ಚವಿ ಕುಂದೇನು 
ಚೊಕ್ಕಟವೆ ಮೆಯ್ಸೊಬಗು 
ಅಕ್ಕರೆಯೆ ಬೆಡಗು. 

ಮನಸಿನಿನಿರಸವೆಲ್ಲ 
ತನುವೊಳುಕ್ಕುತ ಪರಿಯೆ 
ಕಾದ ಹೊನ್ನಿನ ಮೆರುಗು 
ಮೈದೊವಲ ಬೆರಗು. 

ತುಂಬುಕೆನ್ನೆಯ ನುಣ್ಬು 
ಇಂಬಾದ ನಗುಬೆಳ್ಬು 
ಕಣ್ಣಾಲಿ ಕರಿತಳ್ಪು 
ನಿನ್ನ ಮೆಯ್ಯೊಳ್ಪು. 

ನಿಲದಲೆವ ಮುಂಗುರುಳು 
ವಲಯಿತದ ಕರಿಹೆರಳು 
ಇಂದುಫಲಕದ ನೊಸಲು 
ಸುಂದರದ ಹೊನಲು. 

ಕರಿಣಿ ಪೀವರಗಾತ್ರ ತರಳ 
ವಿದ್ಯುನ್ನೇತ್ರ ನಗುವು 
ತುಂಬಿದ ವದನ 
ಸೊಗಕದುವೆ ಸದನ.

*****************

ಮನಮೆಚ್ಚಿದೆಡೆ ತನ್ನ ಕಣ್ಣಿಗೆ ಪ್ರೇಯಸಿಯು ಪ್ರೇಮಿಗೆ ಸುಂದರವಾಗಿಯೇ ಕಾಣುತ್ತಾಳೆ. ಶರೀರವು ಕರಿಣಿಯಂತಿದ್ದರೂ ಅದರಲ್ಲೂ ಸೊಗಸನ್ನೇ ಅರಸುತ್ತಾನೆ.  ಪ್ರೀತಿ ಪ್ರೇಮಕ್ಕೆ ನೀಳಕಾಯದ ತನ್ವಂಗಿಯಾಗ ಬೇಕೆಂಬುದಿಲ್ಲ. ನೀಳವೇಣಿಯ ಶ್ಯಾಮಲತನುವಿನ ಕರಿಣಿಯೂ ಪ್ರೇಮಿಗೆ ಚೆಲುವೆಯಾಗಿಯೇ ಕಾಣುತ್ತಾಳೆ ಎಂಬುದನ್ನು  ಡಿವಿಜಿಯವರು ನಳಿನಿ ಕವನದಲ್ಲಿ ಸೊಗಸಾಗಿ ನಿರೂಪಿಸುತ್ತಾರೆ.

ತಾನು ಮೆಚ್ಚಿದ  ಕೃಷ್ಣವರ್ಣದ ಪ್ರೇಯಸಿಯು ತನ್ನ ಪ್ರೇಮನಿವೇದನೆಯನ್ನು ಎಲ್ಲಿ ನಿರಾಕರಿಸುವಳೋ ಎಂಬ ಸಂಶಯದ ಹುಳು ಮನಸನ್ನು ಹೊಕ್ಕು ಕೊರೆಯುತ್ತಿದೆ.  ಮನದಲ್ಲೇ ಪ್ರೇಯಸಿಗೆ ಓಲೆಬರೆದಂತೆ ನಿವೇದಿಸಿಕೊಳ್ಳುತ್ತಾನೆ.

" ನಳಿನಾಂಗಿ, ಕೆನೆಬೆಣ್ಣೆಯಂತಹ ಸೊಗಸಾದ ದೇಹಕಾಂತಿಯ ಬಿಳಿಬಣ್ಣದವಳಲ್ಲ, ಮಸಿಬಣ್ಣದ ನನ್ನನ್ನು  ಮೆಚ್ಚುವೆಯಾ!?" ಎಂದು ಸಂಶಯದಿಂದ ಪ್ರಶ್ನಿಸದಿರು.
ಸೂರ್ಯನ ಬೆಂಕಿಬಿಸಿಲಿನ‌ ಕಾವಿನಿಂದ ನೊಂದು ಬೆಂದವನಿಗೆ, ಕಣ್ಣುಕೋರೈಸುವ ಬೆಳಕಿನಝಳವು ಬೇಡ, ತಣ್ಣನೆಯ ನೆರಳಿನಾಸರೆಯಷ್ಟೇ ಸಾಕು. ಸುಡುಬಿಸಿಲ ನಡುಹಗಲಿನಲ್ಲಿ ಬಸವಳಿದಿದ್ದೇನೆ.
ವನರಾಜಿಯ ನೆರಳಲ್ಲಿ ಮರವನ್ನು ಬಳಸಿದ ಕೋಮಲವಾದ ಲತೆಯಂತಿರುವೆ ನೀನು. ನಿನ್ನೊಡಲ ಪ್ರೀತಿಯೇ ಎನಗೆ ತಣ್ಣೆಳಲ ಆಸರೆ.

ನಿನ್ನ  ಈ ವದನಾರವಿಂದವು ಇರುಳಿನ‌ ನೀಲಿಮೆಯ ಆಕಾಶದಂತೆ ಶಾಂತವಾದುದು. ನೀಲಾಕಾಶದಂತಹ ನಿನ್ನ ಮುದ್ದುಮೊಗದಲ್ಲಿ ನಯನಗಳೇ ಮಿಂಚುತ್ತಿರುವ ತಾರೆಗಳು.  ನಿನ್ನ ಚೆಲುನಗೆಯೇ  ಚಂದಿರನ ಕಳೆ! ಇದಕ್ಕಿಂತ ಚೆಲುವೆಲ್ಲಿದೆ!?

ತಿಳಿಯಾದ ಕೊಳದಲ್ಲಿ  ಸುಳಿಸುಳಿಯುತ್ತಾ ಓಡಾಡುವ ಮೀನುಗಳಂತೆ ಈ ನಿನ್ನ ಚಂಚಲ ನೋಟದ ಕಂಗಳು ಸೌಂದರ್ಯದ ಜೀವಾಳ. ಈ ನಿನ್ನ ಕಣ್ಣ ಬೆಳಕಿನದೂಲವೇ  ನನ್ನ ಬಾಳ ಬೆಳಕಾಗಿ ಬೆಳಗುವುದು.

ಕೆಲವರು ಬಿಳಿದೊಗಲಿನಲ್ಲೇ ಸೌಂದರ್ಯವನ್ನು ಅರಸುವರು. ಬಿಳಿಯ ಬಣ್ಣವದರಿಂದಲೇ ಮೈಸೊಗಸೆನ್ನುವುದು  ಭ್ರಮೆ.  ಶ್ಯಾಮಲ ವರ್ಣದ ಮುಗಿಲ ಬಣ್ಣದ ಕುಂದೇನು? 
ನಿರ್ಮಲವಾದ ಮೈಸೊಬಗೇ ಬೆಡಗಿನಖನಿಯು.
ಮನಸಿನ ಪ್ರೇಮರಸವು   ಶರೀರವನ್ನು ಆವರಿಸಿದಾಗ ಪುಟವಿಟ್ಟ ಬಂಗಾರದಂತೆ  ಬೆರಗಾಗುವಂತಹ ಚೆಲುವು ತುಂಬಿತುಳುಕುತ್ತದೆ.

ತುಂಬುಕೆನ್ನೆಯ ಬೊಗಸೆ ಕಂಗಳ ನಿನ್ನ ನುಣುಪಾದ ಮುಖದಲ್ಲಿ  ಚೆಲುನಗೆಯ ತಣಿವು ಹಾಗೂ ಕಣ್ಣಾಲಿಗಳ ಕಪ್ಪು  ಇವು ನಿನ್ನ ಮೈಯ ಚೆಲುವಿಗೆ ಸರಿಸಾಟಿಯಾಗಿ ಸುಂದರವಾಗಿ ಮಿನುಗುತ್ತಿರುವೆ.
ನಿನ್ನ ಹಣೆಯ ಪಾರ್ಶ್ವಗಳಲ್ಲಿ ಮುಂಗುರುಳುಗಳು  ತರಂಗಿಣಿಯ ಅಲೆಗಳಂತೆ ಮಂದವಾಗಿ ಹಾರಾಡುತ್ತಿವೆ. ಕೃಷ್ಣವರ್ಣದ ನೀಳವಾದ ಹೆರಳು ನಿನ್ನನ್ನು ಸುತ್ತುಬಳಸಿ ನಿನ್ನ ಚೆಲುವನ್ನು ಹೆಚ್ಚಿಸುತ್ತಿದೆ. ಚಂದಿರನಂತಹ ಹಣೆ ನಿನ್ನನ್ನು ಸೌಂದರ್ಯದ ಹೊನಲನ್ನಾಗಿಸಿದೆ.
ಮಂದಗಮನೆಯಾದ ಕರಿಣಿಯಂತೆ ತುಂಬಿತೊನೆಯುವ ದೇಹಸೌಂದರ್ಯವು ನಿನ್ನ ವಿದ್ಯುಲ್ಲತೆಯಂತಹ ಚಂಚಲ ನೋಟದಿಂದ  ಎನಗೆ ಕಣ್ಣು ಮನಸ್ಸುಗಳಿಗೆ ಹಬ್ಬ!  ತುಂಬುಮೊಗದಾವರೆಯಲ್ಲಿ ಮಿನುಗುವ ಚೆಲುನಗುವು, ಸುಖಸಗ್ಗವನ್ನು ಧರೆಗಿಳಿಸಿದೆ.
ಭಾವಾನುವಾದ: 
©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
ದನಿ ನೀಡಿದವರು,: ಶ್ರೀಮತಿ ಮಂಗಳಾ ನಾಡಿಗ್