Thursday 9 November 2023

ಜಯಭಾರತೀ - ಕೇತಕೀವನ - ಡಿವಿಜಿ

ಜಯ ಭಾರತೀ ಜಯ ಜಯ ॥ 
ಶ್ರೀಮತೀ । ಜಯಭಾರತೀ ಜಯ ಜಯ ॥ 
ಹಿಮವಂತನೊಂದು ಕಡೆ-ಹನುಮಂತನೊಂದು ಕಡೆ । 
ಜಯದ ಗುರುತಿರಿಸಿರಲು-ಭಯವೇತಕೆಲೆ ತಾಯೆ ॥ 

ಜಯ ಭಾರತೀ ಜಯ ಜಯ ॥ 
ಜಗವೆಚ್ಚರುವ ಮುನ್ನ-ನಿಗಮ ಗೀತವ ಪಾಡಿ । 
ಅರಿವಿನೊಸಗೆಯನಿತ್ತ-ಗುರುವು ನೀನೆಲೆ ತಾಯೆ ॥ 
ಜಯ ಭಾರತೀ ಜಯ ಜಯ ॥ 

ಧರೆಯ ಜೋತಿಯ ಪರಕೆ-ಪರದ ಜೋತಿಯ ಧರೆಗೆ । 
ಬೆಳಗುವಗ್ಗಳಿಕೆ ನಿನ-ದೊಬ್ಬಳದೆ ಲೋಕದಲಿ ॥ 
ಜಯ ಭಾರತೀ ಜಯ ಜಯ ॥

1 comment:

  1. ಇಹಪರಗಳನ್ನು ಬೆಳಗುವವಳು ತಾಯಿ ಭಾರತಿ! ಭಾರತಾಂಬೆಯೆ ವಿಜಯಪಥದಲಿ ಮುನ್ನುಗ್ಗು. ಸಿರಿವಂತಿಕೆಗೆ ಹೆಸರಾದ ಮನವುಳ್ಳ ಮಕ್ಕಳ ತಾಯಿ ಭಾರತಂಬೆಯೇ ವಿಜಯಪಥದಲಿ ಮುನ್ನಡೆಯ ಹೆಜ್ಜೆಗಳನಿಡುತ ಮಕ್ಕಳನು ಮುನ್ನಡೆಸು!
    ಉತ್ತರದಿ ವಜ್ರಸದೃಶವಾದ ಹಿಮಾಲಯ ಪರ್ವತವು ನಿನ್ನನು ಸಂರಕ್ಷಿಸುತಿದೆ.
    ದಕ್ಖಣದಿ ಹನುಮಾದ್ರಿಯು ನಿನ್ನ ಮಕ್ಕಳನು ಅನುನಯದಿ ಕಾಪಾಡುತಿರ್ಪುದು.
    ಹನುಮನುದಿಸಿದ ನಾಡು ಕನ್ನಡದ ಬೀಡು ಸಂಸ್ಕೃತಿಯ ತವನಿಧಿಯು.
    ನಾಡಿನ ಉದ್ದಗಲಕ್ಕೆ ವಿಜಯದ ಹೆಗ್ಗುರುತುಗಳನ್ನು ಛಾಪಿಸಿರುವ ಜಯಭಾರತಿಯ ಮಕ್ಕಳಿಗೆ ಭಯದನೆರಳೇಕೆ?
    ನಿರ್ಭಿಡೆಯ ವಿಜಯಭಾರತಿಯ ಕಂದಮ್ಮಗಳಾದ ನಾವು ತಾಯಿನಡೆದ ವಿಜಯಪಥದ ಮಾಸದ ಹೆಜ್ಜೆಗಳಲಿ ಹೆಜ್ಜೆಗಳನಿಡುತ ಮುನ್ನಡೆ ಸಾಧಿಸೋಣ!
    ಜಗವೆಲ್ಲ ಅಜ್ಞಾನದ ಕತ್ತಲೆಯ ಕೋಣೆಯಲಿ ನಿದ್ರಿಸುತ್ತಿದ್ದಾಗ ತಾಯಿ ಭಾರತಿಯುವ ವೇದೋಪನಿಷತ್ತುಗಳ ‌ಮಂತ್ರಗಳ ದಿವ್ಯ ಘೋಷಣೆಯಿಂದ ಜಗತ್ತನ್ನು ಎಚ್ಚರಿಸಿದವಳು. ಕತ್ತಲಿನಿಂದ ಬೆಳಕಿನೆಡೆಗೆ ಮುನ್ನಡೆಯಲು ಕೈಬೀಸಿಕರೆದವಳು ಭಾರತಾಂಬೆ! 'ಸಾ ವಿದ್ಯಾ ಯಾ ವಿಮುಕ್ತಯೇ ' ಎಂಬ ಜ್ಞಾನಪತಾಕೆಯನ್ನು ಹಿಡಿದೆತ್ತಿ ಜಗದ ಜನರನ್ನು ಅರಿವಿನತ್ತ ಕರೆದೊಯದೊಯ್ದವಳು ತಾಯಿ ಭಾರತಿ! ಜಗದ್ಗುರುವೆನ್ನಿಸಿಕೊಂಡ ಭಾರತಾಂಬೆಗೆ ಜಯವಾಗಲಿ! ವಿಜಯವಾಗಲಿ! ಭಾರತೀಯರಿಗೆ ವಿಜಯದ ದಾರಿಯಿರಲಿ!
    ಭಾರತಂಬೆಯು ಬೆಳಗುವ ದೀವಿಗೆಗಳ ಬೆಳಕು ಅಲೌಕಿಕವಾದ ಪರವನ್ನು ಬೆಳಗುವುದಕ್ಕೆ ಕಾರಣವಾದುದು. ಇಹವು ಪರಕ್ಕೆ ಸೇತುವೆಯಾಗಲೆಂದು ಬಯಸುವ ಭಾರತಂಬೆಯು ಇಹಪರಗಳ ಶ್ರೇಯಸ್ಸಿನ ಮೂಲಕ ಜನ್ಮಸಾರ್ಥಕತೆಯ ಸಂದೇಶವನ್ನು ಸಾರುತ್ತಾಳೆ. ಜಗತ್ತನ್ನು ನಿಜದ ಬೆಳಕಿನ ದಾರಿಯಲ್ಲಿ ಮುನ್ನಡೆಸುವ ತಾಯಿ ಭಾರತಿಯ ವಿಜಯವು ಲೋಕದ ವಿಜಯಕ್ಕೆ ಕಾರಣವು! ತಾಯಿ ನಿನಗೆ ವಿಜಯವಾಗಲಿ! ತಾಯಿ ಜಯಭಾರತಿಯ ವಿಜಯದುಂದುಭಿಯ ನಿನಾದವು ಜಗತ್ತಲ್ಲಿ ಮಂಗಲಧ್ವನಿಯಾಗಿ ಅನುರಣಿಸಲಿ.

    ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

    ReplyDelete