Sunday 26 November 2023

ಉಮರನ ಒಸಗೆ - 04 - ಕೋಳಿ ಕೂಗುವ ವೇಳೆ ಕಳ್ಳಗಂಡಿಯ ಮುಂದೆ

ಕೋಳಿ ಕೂಗುವ ವೇಳೆ ಕಳ್ಳಗಂಡಿಯ ಮುಂದೆ

ಬೊಬ್ಬೆಯಿಡುವರು, ಕೇಳು, 'ತೆರೆ ಕದವನ್' ಎನುತೆ:

"ತೆರೆ ಕದವನ್ ; ಎಮಗಿಲ್ಲಿರಲು ಹೊತ್ತು ಬಹಳಿಲ್ಲ :

ತೆರಳಿದ ಬಳಿಕಿತ್ತ ಬರಲಿಕಳವಲ್ಲ.


ಕೋಳಿ ಕೂಗುವ ವೇಳೆ ಕಳ್ಳಗಂಡಿಯ ಮುಂದೆ

ನಸುಕು ಹರಿದು ಬೆಳಕು ಬರುವ ವೇಳೆಗೆ ಕಳ್ಳ ಗಂಡಿಯ ಮುಂದೆ,

ಬೊಬ್ಬೆಯಿಡುವರು, ಕೇಳು, 'ತೆರೆ ಕದವನ್' ಎನುತೆ:

'ತೆರೆ ಕದವನ್' - ಬಾಗಿಲನ್ನು ತೆಗೆ ಎಂದು  ಕೂಗಾಡುತ್ತಿರುವರು,

 ಎಮಗಿಲ್ಲಿರಲು ಹೊತ್ತು ಬಹಳಿಲ್ಲ :

ನಮಗೆ ಇಲ್ಲಿರಲು ಬಹಳ  ಸಮಯವು ಇಲ್ಲ.

ತೆರಳಿದ ಬಳಿಕಿತ್ತ ಬರಲಿಕಳವಲ್ಲ.

ತೆರಳು = ಹೊರಡು, ಹೋಗು,

ಬಳಿಕಿತ್ತ = ಬಳಿಕ + ಇತ್ತ

ಬರಲಿಕಳವಲ್ಲ = ಬರಲಿಕ್ + ಅಳವಲ್ಲ. ಅಳವು = ಸಾಧ್ಯವಾದುದು.

ಇಲ್ಲಿಂದ ಹೊರಟ ಮೇಲೆ ಈ ಕಡೆಗೆ ಅಥವಾ ಇಲ್ಲಿಗೆ ಬರುವುದು ಸಾಧ್ಯವಾದುದಲ್ಲ, ಅಥವಾ  ಸಾಧ್ಯವಿಲ್ಲ.

ಸೂರ್ಯೋದಯದ ವಸ್ತುವನ್ನೇ ಮುಂದುವರಿಸುತ್ತ ಕವಿ ಈ ಪದ್ಯದಲ್ಲಿ ನಾವು ಈ ಜಗತ್ತಿಗೆ ಬಂದುದರ ಮತ್ತು ನಮ್ಮ ಇಲ್ಲಿನ  ಜೀವಿತ ಕಾಲದ ಬಗ್ಗೆ ಬರೆಯುತ್ತಿದ್ದಾನೆ.

ಇಲ್ಲಿಗೆ ಬಂದವರ ಅರಚಾಟ, ಕೂಗಾಟ, ಅಬ್ಬರ, ಆರ್ಭಟ, ಎಲ್ಲವೂ ಬಂದ ತಕ್ಷಣವೇ ಶುರುವಾಗುವುದು. ಕೋಳಿ ಕೂಗುವುದು ದಿನದ ಆರಂಭ.

ಈ ಜನರು ಸೇರಿ ಕೊಂಡು ಬೊಬ್ಬೆಯಿಡುವುದು ಸಹ ಇಲ್ಲಿಗೆ ಬಂದ ತಕ್ಷಣವೇ ಆರಂಭ.

ಈ ಬೊಬ್ಬಿಡುವಿಕೆ ಕಳ್ಳಂಗಡಿಯಲ್ಲೇ ಇರಬಹುದು, ಇಲ್ಲವೇ ಕಳ್ಳಗಂಡಿಯಲ್ಲಿ ಇರಬಹುದು ಇಲ್ಲವೇ ಕಳ್ಳಂಗಡಿಯ ಕಳ್ಳಗಂಡಿಯಲ್ಲಿಯೇ  ಇರಬಹುದು.

ಎಲ್ಲೆಡೆಯೂ ಒಂದೇ ಕೂಗು - " -'ಅವಸರಿಸಿ' ನಮ್ಮನ್ನು ಅನುಸರಿಸಿ, ಆದರಿಸಿ. " - ಎಂದು. ಕಳ್ಳಂಗಡಿಯಲ್ಲಿಯೂ ಅವಸರ. ಕಳ್ಳಗಂಡಿಯಲ್ಲೂ ಬೇಗ ಬಾಗಿಲು ತೆಗೆಸುವ ಅವಸರ.

ಇಲ್ಲಿಗೆ ಬಂದವರ ಪ್ರಾಪಂಚಿಕ ಅವಸರಕ್ಕೆ ಕಾರಣ ; ಸಮಯ.

ನಮಗೆ ಇಲ್ಲಿ ಇರಲು ಬಹಳ ಸಮಯವಿಲ್ಲ ಎಂಬ ಅನಿಸಿಕೆ.

ಇದ್ದ ಸಮಯದಲ್ಲೇ ಮಧುಪಾನದ ಆನಂದವನ್ನೋ, ಜೀವನದ ಸವಿಯನ್ನೋ ಅನುಭವಿಸ ಬೇಕು. ಒಮ್ಮೆ ಇಲ್ಲಿಂದ ಹೊರಟ  ಮೇಲೆ ಮತ್ತೆ ಇಲ್ಲಿಗೆ ಬರುವುದು ಸಾಧ್ಯವಿಲ್ಲ.

ಹಾಗಾಗಿ ಮಧುವಾಟಿಕೆಯಲ್ಲಿ ಬೇಗ ಬಾಗಿಲು ತೆರೆಸಲು ಬೊಬ್ಬಾಟ.

ಪ್ರಾಪಂಚಿಕವಾದ ಕಳ್ಳಂಗಡಿಯಲ್ಲಿ ಮಧುವನ್ನು ಸವಿದು ಆನಂದಿಸುವುದೇ ಆಗಲಿ,

ಇಲ್ಲವೇ ಸಾಧುಗಳ ಗೋಷ್ಠಿಯಲ್ಲೋ, ಭಕ್ತರ ಗುಂಪಿನಲ್ಲೋ ಸೇರಿ ಭಗವಂತನ ಉಪಾಸನೆಯ ಆನಂದವನ್ನು ಹೃದಯದಲ್ಲಿ ತುಂಬಿ ಕೊಳ್ಳುವುದೇ ಆಗಲಿ, ಮನುಷ್ಯರು ಅದಕ್ಕಾಗಿ ಅವಸರಿಸಿ ಕೂಗಾಡುವುದು ಸಾಮಾನ್ಯ ದೃಶ್ಯ.

 "ಜೀವನವು ತುಂಬಾ ಚಿಕ್ಕದು. ಒಮ್ಮೆ ಸತ್ತರೆ, ಅಷ್ಟೇ - ಅಲ್ಲಿಗೇ ಮುಗಿಯಿತು. ಮತ್ತೆ ಹಿಂತಿರುಗಿ ಕಳ್ಳಂಗಡಿಗೇ ಆಗಲಿ ಈ ಪ್ರಪಂಚಕ್ಕೇ ಆಗಲಿ  ಬರಲಾಗುವುದಿಲ್ಲ." - ಎಂಬ ಭಾವದಿಂದ ಹುಟ್ಟಿದ್ದು,- ಈ ಅವಸರ ಅಥವಾ ಅವಸರಿಸುವಿಕೆ.

ಜೊತೆಗೆ ಎಲ್ಲದೂ ಬೇರಾರಿಗೂ ಸಿಗುವ ಮುನ್ನ ತನಗೆ ಸಿಗಲಿ ಎಂಬ ಆಸೆ.

ಅದರಿಂದಾಗಿಯೇ ಬದುಕಿನ ಎಲ್ಲ ಹಂತದಲ್ಲೂ ಧಾವಂತ.

ರವೀಂದ್ರ ಕುಮಾರ್ ಎಲ್ವಿ

ಮೈಸೂರು.

No comments:

Post a Comment