Sunday 7 January 2024

ಶ್ರೀರಾಮಚಂದ್ರನ ಆದರ್ಶ - (ಅಯೋಧ್ಯಾಕಾಂಡ, ಯೌವರಾಜ್ಯಪ್ರಸಂಗ ಸರ್ಗ ೧, ಶ್ಲೋಕ ೧೦–೩೦)

ಸ ತು ನಿತ್ಯಂ ಪ್ರಶಾಂತಾತ್ಮಾ ಮೃದುಪೂರ್ವಂ ಚ ಭಾಷತೇ । 

ಆತನು ಯಾವಾಗಲೂ ಶಾಂತಸ್ವಭಾವದವನು. ಸಂಭಾಷಣೆಯನ್ನು ತಾನೇ ಮೊದಲು ಮಾಡುತ್ತಾನೆ, ಮತ್ತು ಮೃದುವಾಗಿ ಮಾತನಾಡುತ್ತಾನೆ.

ಉಚ್ಯಮಾನೋಷಿ ಪರುಷಂ ನೋತ್ತರಂ ಪ್ರತಿಪದ್ಯತೇ ॥  

ಬಿರುಸಾಗಿ ಮಾತನಾಡಿದವರಿಗೆ ಮರು ಬಿರುಸನ್ನು ನುಡಿಯುವುದಿಲ್ಲ.  

ಕಥಂಚಿದುಪಕಾರೇಣ ಕೃತೇನೈಕೇನ ತುಷ್ಯತಿ । 

ಎಂದೋ ತನಗೆ ಮಾಡಿದ್ದ ಯಾವುದೋ ಒಂದು ಉಪಕಾರವನ್ನು ಯಾವಾಗಲೂ ನೆನಸಿಕೊಂಡು ಸಂತೋಷಪಡುತ್ತಾನೆ.  

ನ ಸ್ಮರತ್ಯಪಕಾರಾಣಾಂ ಶತಮಪ್ಯಾತ್ಮವತ್ತಯಾ ॥

ನೂರು ಅಪಕಾರಗಳು ತನಗಾಗಿದ್ದರೂ ಅದನ್ನು ನೆನೆಯುವುದೇ ಇಲ್ಲ; ಅದಕ್ಕೆ ಕಾರಣ ತನ್ನಲ್ಲಿ ತನಗಿರುವ ನಂಬಿಕೆ (ಧೈರ್ಯ).  

ದೀನಾನುಕಂಪೀ ಧರ್ಮಜ್ಞೋ ನಿತ್ಯಂ ಪ್ರಗ್ರಹವಾನ್‍ ಶುಚಿಃ । 

ಆತನು ದೀನರಲ್ಲಿ ಸಹಾನುಭೂತಿಯುಳ್ಳವನು; ಧರ್ಮ ತಿಳಿದವನು; ತನ್ನ ಮೇಲೆ ತನಗೇ ಹಿಡಿತವಿರಿಸಿಕೊಂಡವನು; ಶುಚಿಯುಳ್ಳವನು.  

ಕುಲೋಚಿತ ಮತಿಃ ಕ್ಷಾತ್ರಂ ಧರ್ಮಂ ಸ್ವಂ ಬಹುಮನ್ಯತೇ ॥

ಕುಲಕ್ಕೆ ತಕ್ಕ ಬುದ್ಧಿ ಸಂಪತ್ತುಳ್ಳವನು; ತನ್ನ ಕ್ಷತ್ರಿಯ ಧರ್ಮವನ್ನು ಆತನು ಅದು ದೊಡ್ಡದೆಂದು ಗೌರವಿಸುತ್ತಾನೆ.  

ಕಲ್ಯಾಣಾಭಿಜನಃ ಸಾಧುರದೀನಃ ಸತ್ಯವಾಗ್ರುಜುಃ । 

ಶುಭಗುಣಗಳಿಗೆ ಆಕರಪ್ರಾಯನು, ಸಾಧು, ಧೀರನು, ಸತ್ಯಭಾಷಿ, ಸರಳನು.  

ವೃದ್ಧೈರಭೀವಿನೀತಶ್ಚ ದ್ವಿಜೈಃ ಧರ್ಮಾರ್ಥದರ್ಶಿಭಿಃ  ॥

ಧರ್ಮಾರ್ಥಗಳನ್ನು ಬಲ್ಲ ಬ್ರಾಹ್ಮಣರಿಂದಲೂ ವೃದ್ಧರಿಂದಲೂ ನಡವಳಿಕೆ ಕಲಿತವನು.  

ಧರ್ಮಾರ್ಥಕಾಮ ತತ್ವಜ್ಞಃ ಸ್ಮೃತಿಮಾನ್‍ ಪ್ರತಿಭಾನವಾನ್‍ ।

ಧರ್ಮ ಅರ್ಥ ಕಾಮಗಳೆಂಬ ಪುರುಷಾರ್ಥಗಳ ತತ್ತ್ವವನ್ನರಿತವನು; ಸ್ಮೃತಿಶಕ್ತಿ ಪ್ರತಿಭಾಶಕ್ತಿ ಸಂಪನ್ನನು.  

ಲೌಕಿಕೇ ಸಮಯಾಚಾರೇ ಕೃತಕಲ್ಪೋ ವಿಶಾರದಃ  ॥

ಲೋಕನೀತಿಗಳಲ್ಲಿಯೂ ಸಮಾಜದ ಸಂಕೇತ ಸಂಪ್ರದಾಯಗಳಲ್ಲಿಯೂ ಮರ್ಮವರಿತು ನಡೆಯುವವನು.  

ದೃಢಭಕ್ತಿಃ ಸ್ಥಿರಪ್ರಜ್ಞೋ ನಾಸದ್‍ಗ್ರಾಹೀ ನ ದುರ್ವಚಾಃ ।

ನಿಶ್ಚಲವಾದ ಭಗವದ್ಭಕ್ತಿಯುಳ್ಳವನು; ಸ್ಥಿರವಾದ ವಿವೇಕ ವಿಜ್ಞಾನಗಳುಳ್ಳವನು; ಕೆಟ್ಟದ್ದನ್ನೊಪ್ಪದವನು; ಕೆಟ್ಟದ್ದನ್ನು ನುಡಿಯದವನು.  

ನಿಸ್ತಂದ್ರಿರಪ್ರಮತ್ತಶ್ಚ ಸ್ವದೋಷ ಪರದೋಷವಿತ್‍  ॥

ಸೋಮಾರಿತನವಿಲ್ಲದವನು; ಮೈಮರೆಯದವನು; ತನ್ನಲ್ಲಿರುವ ದೋಷಗಳನ್ನೂ ಇತರರ ದೋಷಗಳನ್ನೂ ಕಂಡುಕೊಂಡಿರುವವನು.  

ಶಾಸ್ತ್ರಜ್ಞಶ್ಚ ಕೃತಜ್ಞಶ್ಚ ಪುರುಷಾಂತರ ಕೋವಿದಃ ।

ಶಾಸ್ತ್ರ ನಿಪುಣನು; ಕೃತ್ಯಾಕೃತ್ಯವಿವೇಕಿ; ಇತರರ ಅಂತರಂಗವನ್ನು ಊಹಿಸಿ ಕಂಡವನು.  
ದಂಡಿಸುವುದರಲ್ಲಿಯೂ ಅನುಗ್ರಹಿಸುವುದರಲ್ಲಿಯೂ ನ್ಯಾಯವನ್ನು ನಡಸಲು ಶಕ್ತನು.  

ಯಃ ಪ್ರಗ್ರಹಾನುಗ್ರಹಯೋರ್ಯಥಾನ್ಯಾಯಂ ವಿಚಕ್ಷಣಃ ॥ 2.1.16 ॥

ಆದಾಯದ ಕೆಲಸಗಳಲ್ಲಿ ಉಪಾಯಶಾಲಿ; ವ್ಯಯವಿಚಾರವನ್ನು ನೋಡಿಕೊಳ್ಳುವುದರಲ್ಲಿ ಜಾಗರೂಕನು.

ಸತ್ಸಂಗ್ಧಹಪ್ರಗ್ರಹಣೇ ಸ್ಥಾನವಿನ್ನಿಗ್ರಹಸ್ಯ ಚ ।

ಜನರನ್ನು ಸಂಪಾದಿಸಿಕೊಳ್ಳುವುದರಲ್ಲಿಯೂ ಹದ್ದಿನಲ್ಲಿರಿಸುವುದರಲ್ಲಿಯೂ ತುಳಿದು ಹಾಕುವುದರಲ್ಲಿಯೂ ಅದದಕ್ಕೆ ತಕ್ಕ ಸ್ಥಾನ ಕಾಲ ಸಂದರ್ಭಗಳನ್ನರಿತವನು.

ಆಯಕರ್ಮಣ್ಯುಪಾಯಜ್ಞಃ ಸಂದೃಷ್ಟ ವ್ಯಯಕರ್ಮವಿತ್‍ ॥

ಆದಾಯದ ಕೆಲಸಗಳಲ್ಲಿ ಉಪಾಯಶಾಲಿ; ವ್ಯಯವಿಚಾರವನ್ನು ನೋಡಿಕೊಳ್ಳುವುದರಲ್ಲಿ ಜಾಗರೂಕನು.  

ಶ್ರೈಷ್ಠ್ಯಂ ಶಾಸ್ತ್ರಸಮೂಹೇಷು ಪ್ರಾಪ್ತೋ ವ್ಯಾಮಿಶ್ರಕೇಷು ಚ ।

ಶಾಸ್ತ್ರಜ್ಞ ಸಭೆಯಲ್ಲಿಯೂ ಪಂಡಿತ ಪಾಮರರು ಕಲೆತುಕೊಂಡಿರುವಲ್ಲಿಯೂ ಶ್ರೇಷ್ಠತೆ ಪಡೆದಿರುವವನು.  

ಅರ್ಧಧರ್ಮೌಚ ಸಂಗೃಹ್ಯ ಸುಖತಂತ್ರೋನ ಚಾಲಸಃ ॥

ಅರ್ಥ (ಧನ) ವನ್ನೂ ಧರ್ಮವನ್ನೂ ಶೇಖರ ಮಾಡಿ, ಸುಖಪಡುವುದರಲ್ಲಿ ಆಲಸ್ಯವಿಲ್ಲದೆ, ದಕ್ಷನಾಗಿರುವವನು.  

ಅನಸೂಯೋ ಜಿತಕ್ರೋಧೋ ನ ದೃಪ್ತೋ ನ ಚ ಮತ್ಸರೀ ।

ಹೊಟ್ಟೆಕಿಚ್ಚಿಲ್ಲದವನು; ಕೋಪವನ್ನು ಗೆದ್ದವನು; ಗರ್ವವಿಲ್ಲದವನು; ಕರುಬದವನು.  

ನ ಚಾವಮನ್ತಾ ಭೂತಾನಾಂ ನ ಚ ಕಾಲವಶಾನುಗುಃ ॥ 

ಯಾವ ಪ್ರಾಣಿಯನ್ನೂ ಅವಮಾನ ಪಡಿಸದವನು; ಧರ್ಮತತ್ತ್ವವನ್ನೂ ತನ್ನ ಪ್ರತಿಜ್ಞೆಯನ್ನೂ ಮರೆತು ಆಯಾ ಕ್ಷಣಕ್ಕೆ ಸರಿಯೆನಿಸಿದಂತೆ ನಡೆಯುವವನಲ್ಲ.  

No comments:

Post a Comment