Wednesday 3 January 2024

ಜನರಾಷ್ಟ್ರೋದಯ - ಕೇತಕೀವನ - ಡಿವಿಜಿ

ನಗುತಿಹರೆ ದೇವರ್ಕಳೀ ನಮ್ಮ ವಿಜಯದಲಿ?
ನಗು ಮೆಚ್ಚುಗೆಯಿನೊ, ಹಾಸ್ಯದಿನೊ ತಿಳಿವುದದೆಂತು? 
ವಿಗಡಿಪ್ಪುದುಂಟವರ್‍ ಧರೆಯ ಸಂಭ್ರಮಗಳಲಿ 
ಪ್ರಗತಿಯೊಳ್‍ ತಮ್ಮ ಮರೆತಿಹರೊ ಮಾನವರೆಂದು. 
ಅರಸಿಹೆವೆ ನಾಮ್‍ ಅವರನ್‍? ಒಲಿಸಿಕೊಳಲರಿತವರೆ? 
ಶರಣೆನುತೆ ಹೂ ಹಣ್ಣುಗಳ ನೀಡೆ ನಾಮ್‍ ಅವರು 
“ವರವಿದುವೆ ನಿಮಗೆ ಸರಿ"-ಎಂದು ಹಿಂದಿರುಗಿಸರೆ? 
ಪರಿಕಿಸರೆ ನಮ್ಮ ಭಕುತಿಗಳೊಳಗನೇನವರು? 
“ದುಡಿದಿಹಿರೆ ಸತ್ಯದೂಳಿಗದಿ ನೀಮ್‍?” -ಎನ್ನುವರು; 
“ಮಡಿಯಿಂದ, ಮತಿಯಿಂದ, ದುಡಿದಿಹಿರ ನೀಮ್‍?” -ಎನುತೆ, 
“ಪೊಡವಿಯಾಳ್ತನ ಶಿವನ ಗುಡಿಯೊಳರ್ಚನೆ” -ಎನುತೆ, 
“ಮುಡುಪೆಂತೊ ಹಸದವಂತೆಂದು” ಪೇಳುವರವರು. 
ನಿಸ್ಸ್ವಾರ್ಥ ಸತ್ತ್ವದ ವಿವೇಕಕವರೊಲವಿಂದೆ 
ಶಾಶ್ವತದ ಜನರಾಷ್ಟ್ರದಭ್ಯುದಯಪಥವಂತೆ.

************************************

ಜನರಾಷ್ಟ್ರೋದಯ  ಕೇತಕೀವನ-ಡಿವಿಜಿ
~~~~~~~~~~~~~~~
ಮಾನುಷ್ಯನ ವೈಜ್ಞಾನಿಕ ತಾಂತ್ರಿಕ ಆವಿಷ್ಕಾರಗಳಿಂದ ಭೂಮ್ಯಾಕಾಶವ್ಯೋಮಾದಿಗಳ ಸವಾಲನ್ನು ಸ್ವೀಕರಿಸಿ ವಿಜಯಧ್ವಜವನ್ನು ಹಿಡಿದೆತ್ತಿ ಮುನ್ನಡೆಸಾಧಿಸುವುದನ್ನು ಕಂಡು  ಕವಿ ಡಿವಿಜಿಯವರು  ಈ ಮನುಷ್ಯನ ಅಭ್ಯುದಯವನ್ನು ಕಂಡು ದೇವತೆಗಳು  ಕೌತುಕದಿಂದ  ನಗೆಮಿಂಚಿನಬೆಳಕನ್ನು ಮನುಷ್ಯನೆಡೆಗೆ ಹರಿಸುತ್ತಿರಬಹುದೇ ಎಂದು ಕಲ್ಪಿಸುತ್ತಾರೆ.

ನಮ್ಮ ವಿಜಯವನ್ನು ಕಂಡು ತ್ರಿಮೂರ್ತಿಗಳು ಹಾಗೂ ದೇವಲೋಕದ ದೇವತೆಗಳು   ಅಚ್ಚರಿಯಿಂದ ನಗುತ್ತಿರಬಹುದೇ!?  ನಗುತ್ತಿದ್ದರೆ, ಆ ನಗುವಿನ ಹಿಂದೆ ಕುಹಕದ ಅಣಕವಿರಬಹುದೇ? ಮೆಚ್ಚುಗೆಯ ಮಂದಹಾಸವಿರಬಹುದೇ?

   ಧರೆಯ ಸಂಭ್ರಮಗಳಲ್ಲಿ  ‌ಮನುಜನು ಸಾಹಸ ಪರಾಕ್ರಮಗಳನ್ನು ಮೆರೆಯುವುದುಂಟು. ತನ್ನ ವಿಜಿಗೀಷುಪ್ರವೃತ್ತಿಯ ನಡುವೆ ಮನುಷ್ಯನು ತಮ್ಮನ್ನು  ಮರೆತೇ ಬಿಟ್ಟಿರುವರೇನೋ ಎಂದು ದೇವತೆಗಳು ವಿಚಲಿತರಾದರೇ ಎಂಬುದು ಕವಿಯ ಜಿಜ್ಞಾಸೆ.

 ಈಶಾವಾಸ್ಯಮಿದಂ ಜಗತ್! ತೇನ ತ್ಯಕ್ತೇನ ಭುಂಜೀಥಾ|

ಭೂವ್ಯೋಮಮಂಡಲವೆಲ್ಲವೂ ಭಗವಂತನಿಂದಲೇ ವ್ಯಾಪಿಸಲ್ಪಟ್ಟಿದೆ. ಅಣುರೇಣುತೃಣಕಾಷ್ಠಗಳ ಕಣಕಣಕಣಗಳಲ್ಲೂ ಅಂತಶ್ಶಕ್ತಿಯಾಗಿ ಪರಮೇಶ್ವರನೇ ಉಸಿರಾಡುತ್ತಿದ್ದಾನೆ. ಅವನಿಲ್ಲದ ನೆಲೆಯಿಲ್ಲ. ಅವನು ಸೃಷ್ಟಿಸಿ ನೀಡಿದ ಹೂಹಣ್ಣು ಕಾಯಿ ಧಾನ್ಯಾದಿಗಳನ್ನು ಅವನಿಗೇ ಸಮರ್ಪಿಸಿ ಅನುಭವಿಸುತ್ತೇವೆ. ದೇವತೆಗಳ ಮೂಲಕ ದೇವನು ಸೃಷ್ಟಿಯ ಆಗುಹೋಗುಗಳ ಕಾರ್ಯಗಳನ್ನು ಮಾಡಿಸುತ್ತಿದ್ದಾನೆ.

    ಅಂತಹ ದೇವನನ್ನು ಹಾಗೂ ದೇವತೆಗಳನ್ನು  ಮನುಷ್ಯನು ಹುಡುಕಾಡುತ್ತಿರವನೇ!?  ಪರಮಾತ್ಮ ಹಾಗೂ ದೇವತೆಗಳ ಒಲವನ್ನು ಪಡೆಯಲು ಅರಿತುಕೊಂಡಿದ್ದಾರಾ!? 

    ನಾವು ಶರಣು ಎಂದು ಭಕ್ತಿಯಿಂದ ಹೂಹಣ್ಣುಗಳನ್ನು  ನೈವೇದ್ಯವಾಗಿ ನೀಡಿದರೆ,  ದೇವತೆಗಳು ಮಿಗಿಲಾದ ಸಂತೋಷದಿಂದ ಮಳಬೆಳೆಗಳನ್ನು ನೀಡುತ್ತಾರೆ. ಪರಮಾತ್ಮನು ಅನುಗ್ರಹಿಸುತ್ತಾನೆ. ಭಕ್ತನು ಭಗವಂತನೆಡೆಗೆ  ಮೂರುಹೆಜ್ಜೆಗಳನ್ನಿಟ್ಟರೆ ಭಗವಂತನು ಭಕ್ತನಡೆಡಗೆ ಆರು ಹೆಜ್ಜೆಗಳನಿಡುವನಂತೆ.  ಶಿಶುವಿನೆಡೆಗೆ ಅಮ್ಮನು ಓಡೋಡಿಬರುವಂತೆ  ಓಡಿಬರುವನಂತೆ.

    ನಮ್ಮ ಭಕ್ತಿಯ ಅಂತಸ್ಸತ್ತ್ವವನ್ನು   ಭಗವಂತನು ಪರೀಕ್ಷಿಸುತ್ತಲೇ ಇರುತ್ತಾನೆ.
"ನಿಜಕ್ಕೂ ನೀವು ಪರಮಸತ್ಯದ ಪಥದಲ್ಲಿ ನೀವು ದುಡಿಸಿಕೊಂಡಿರುವಿರೇ!?" ಎಂದು ದೇವತೆಗಳು ಪ್ರಶ್ನಿಸುತ್ತಲೇ ಇದ್ದಾರೆ.

"ನಿಜವಾದ ಆಂತರಂಗಿಕವಾಗಿ ಪರಿಶುದ್ಧರಾಗಿ,  ವಿವೇಕದಿಂದ ನೀವು ದುಡಿದಿದ್ದೀರಾ?" ಎಂದು ದೇವತೆಗಳು ಪ್ರಶ್ನಿಸುತ್ತಿದ್ದಾರೆ.

ಸರ್ವಶಕ್ತನಾದ ಜಗದೀಶನ ನ್ನು ಅಚಲ ಭಕ್ತಿಯಿಂದ ಪೂಜಿಸುವುದರಿಂದ ಭೂಮಂಡಲದ ಒಡೆತನ ಎಂಬುದನ್ನು  ಮನದಲ್ಲಿಟ್ಟುಕೊಳ್ಳಿ ಎಂದು ದೇವತೆಗಳು ನೆನಪಿಸುವರು. 

ದೈವಭಕ್ತಿಯ ಮುಡಿಪು ಪ್ರಸನ್ನತೆ ಪ್ರಸಾದಗಳ ದಾರಿ ಎಂದು ದೇವತೆಗಳು ನೆನಪಿಸುವರು.
ನಿಸ್ವಾರ್ಥ ಸತ್ತ್ವದ ವಿವೇಕದಿಂದ ಶಾಶ್ವತವಾದ ಜನರಾಷ್ಟ್ರದ ಅಭ್ಯುದಯಕ್ಕೆ  ರಾಜಪಥ ಎಂದೆನ್ನುತ್ತಾರೆ ಕವಿ ಗುಂಡಪ್ಪನವರು.
ಭಾವಗ್ರಹಣ:  ✒©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment