Saturday 6 January 2024

ಭಾಗ 2 - ಗ್ರಂಥ ಸ್ವರೂಪ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಈಗ ಗ್ರಂಥದ ಸ್ವರೂಪವನ್ನು ಕುರಿತ ಕೊಂಚ ವಿಚಾರಮಾಡೋಣ, ರಾಮಾಯಣವು ಗ್ರಂಥಗಳಲ್ಲಿ ಕಾವ್ಯವೆಂಬ ಸಾಹಿತ್ಯಜಾತಿಗೆ ಸೇರಿದ್ದೆಂಬ ಅಭಿಪ್ರಾಯವು ಅದರ ರಚನೆಯ ದಿನದಿಂದ ಲೋಕಾಂಗೀಕೃತವಾಗಿ ಬಂದಿದೆ.

ರಾಮಾಯಣವು ಶಾಸ್ತ್ರಗ್ರಂಥವಲ್ಲ; ಚರಿತ್ರೆಯಲ್ಲ. ಅದು ಕಾವ್ಯ; ಆದರೆ ಶಾಸ್ತ್ರ–ಚರಿತ್ರೆಗಳೆರಡನ್ನೂ ಒಳಕೊಂಡಿರುವ ಕಾವ್ಯ; ಶಾಸ್ತ್ರವನ್ನು ತೊರೆದ ಕಾವ್ಯವಲ್ಲ, ಚರಿತ್ರೆಯ ಆಧಾರವಿಲ್ಲದ ಕಾವ್ಯವಲ್ಲ, ಕಟ್ಟುಕಥೆಯಲ್ಲ. ಅದು ವಾಸ್ತವಿಕ ಸಂಗತಿಗಳನ್ನು ಅಸ್ಥಿಪಂಜರವಾಗಿರಿಸಿಕೊಂಡು ದೃಢಾಂಗವಾಗಿ ಪುಷ್ಟವಾಗಿರುವ ಕಾವ್ಯ.

ಕಾವ್ಯವೆಂದರೆ ಏನು? ಮನುಷ್ಯನ ಹೃದಯದಲ್ಲಿ ಅವನಿಗೆ ಇಷ್ಟವೆನಿಸುವ ಅನುಭವವನ್ನು ಉಂಟುಮಾಡಿಸಬಲ್ಲ. ವಾಕ್ಯಸಮುದಾಯವೇ ಕಾವ್ಯ. ಎದೆಯನ್ನು ತಳಮಳಗೊಳಿಸುವುದು ಕಾವ್ಯವೆಂಬ ವಾಙ್ನಿರ್ಮಾಣದ ಲಕ್ಷಣ. ಅದನ್ನು ಕೇಳಿದಾಗ ನಮ್ಮ ಒಳಗಡೆ ಏನೋ ಒಂದು ಆಗಬೇಕು. ಮನಸ್ಸಿನೊಳಗೆ ಆಹಾ! ಎನ್ನಿಸಬೇಕು. ಹೀಗೆ ಒಂದು ಕನಿಕರದ, ಅಥವಾ ಅಚ್ಚರಿಯ, ಅಥವಾ ರೋಷದ, ಅಥವಾ ಸಂತೋಷಾತಿಶಯದ ಕೂಗು ಎದೆಯೊಳಗಿಂದ ಹೊರಡುವಂತೆ ಮಾಡುವ ಅನುಭವ ಯಾವುದೋ ಅದೇ ರಸ. ಅಂಥ ರಸವು ನಮ್ಮ ಅಂತರಂಗದಲ್ಲಿ ಒಸರುವಂತೆ ಮಾಡಬಲ್ಲ ವಾಕ್ಪ್ರಬಂಧ ಯಾವುದೋ ಅದು ಕಾವ್ಯ.

ನಮ್ಮ ಪೂರ್ವಿಕರು ಕಾವ್ಯರಹಸ್ಯವನ್ನು ಕುರಿತು ತುಂಬಾ ಜಿಜ್ಞಾಸೆ ನಡಸಿದ್ದಾರೆ. ವಾಕ್ಕಿನ ರೀತಿಯಿಂದ ಕಾವ್ಯವೆಂದು ಕೆಲವರು, ಅಲಂಕಾರದಿಂದ ಕಾವ್ಯವೆಂದು ಕೆಲವರು, ಧ್ವನಿಯಿಂದ ಕಾವ್ಯವೆಂದು ಕೆಲವರು, ವಕ್ರೋಕ್ತಿಯಿಂದ ಕಾವ್ಯವೆಂದು ಕೆಲವರು, ರಮಣೀಯಾರ್ಥದಿಂದ ಕಾವ್ಯವೆಂದು ಕೆಲವರು ವಾದಿಸಿದ್ದಾರೆ. ಆ ಎಲ್ಲ ವಾದಗಳೂ ಅಬದ್ಧಗಳೇನಲ್ಲ; ಆದರೆ ಏಕದೇಶೀಯಗಳು, ಆದದ್ದರಿಂದ ಅಪೂರ್ಣಗಳು. ರಸವೆಂಬುದೇ ಕಾವ್ಯಸಾರವೆಂಬ ಮತವು ಲೋಕಜನಾಂಗೀಕೃತವಾಗಿದೆ. ಕಾವ್ಯವೆಂಬ ಮಾನುಷಸಂಪತ್ತು ಸರ್ವಲೋಕ ಸಾಮಾನ್ಯವಾದದ್ದು. ಅದು ಸಂಸ್ಕೃತಭಾಷೆಯೊಂದರ ವಿಶೇಷಸ್ವತ್ತೇನೂ ಅಲ್ಲ. ಸೃಷ್ಟಿಯಲ್ಲಿ ಮನುಷ್ಯನ ಪ್ರಥಮ ಜನನ ಎಂದು ಆಯಿತೋ, ಎಲ್ಲಿ ಆಯಿತೋ, ಅದರೊಡನೆಯೇ ಅಂದು, ಅಲ್ಲಿ ಕಾವ್ಯ ಜನನವೂ ಆಯಿತು. ಮನುಷ್ಯ ಎಂದರೆ ಮನಸ್ಸು; ಮನಸ್ಸು ಎಂದರೆ ಚಿಂತೆ ಸಂತಸಗಳು; ಚಿಂತೆ ಸಂತಸಗಳು ಮಾತಾಗಿ ಉಕ್ಕಿಹರಿದದ್ದೇ ಕಾವ್ಯ. ಮನುಷ್ಯ, ಮನಸ್ಸು, ಮಾತು–ಈ ಮೂರೂ ಅಂಟಿಕೊಂಡೇ ಇರತಕ್ಕವಾದದ್ದರಿಂದ ಲೋಕದಲ್ಲಿ ಎಲ್ಲೆಲ್ಲೋ ಮನುಷ್ಯ ಎಷ್ಟು ಹಳಬನೋ ಕಾವ್ಯವೂ ಅಷ್ಟು ಹಳೆಯದು. ಪ್ರಪಂಚದ ಎಲ್ಲ ಜನಾಂಗಗಳೂ, ಎಲ್ಲ ಭಾಷೆಗಳೂ ತಮ್ಮ ತಮ್ಮ ವಿದ್ಯಾಸಂಸ್ಕಾರಮಟ್ಟಕ್ಕೆ ತಕ್ಕಂತೆ ಕಾವ್ಯ ಸಾಹಿತ್ಯವನ್ನು ಸಂಪಾದಿಸಿಕೊಂಡಿರುತ್ತವೆ. ಅಂಥ ಎಲ್ಲ ಸಾಹಿತ್ಯಗಳಲ್ಲಿಯೂ ಕಂಡು ಬರುವ ಸರ್ವಸಾಮಾನ್ಯವಾದ ಕಾವ್ಯ ಲಕ್ಷಣವು ಮುಖ್ಯವಾಗಿ “ರಸ.” ರಸವೆಂದರೆ ಬೇಕೆನಿಸುವ ರುಚಿ (“ರುಚಿ ಆಸ್ವಾದನಸ್ನೇಹನಯೋಃ” =ಸವಿಯಬೇಕೆನಿಸುವುದು, ಇಷ್ಟವೆನಿಸುವುದು). ಅದೇ ಪಾಕದ ಷಡ್ರಸಗಳು. ಅದೇ ಸಂಗೀತದ ನಾದರಸ. ಅದೇ ಪ್ರಣಯಿಗಳ ಸರಸ. ಅದೇ ಕ್ರೂರಿಗಳಲ್ಲಿಲ್ಲದ, ಧರ್ಮಿಷ್ಠರಲ್ಲಿರುವ ದಯಾರಸ.

ಜನರೂಢಿಯಲ್ಲಿ “ರಸ” ಶಬ್ದವು ಹೇಗೆ ವಸ್ತುಸಾರವಾಚಕವೋ ವೇದದಲ್ಲಿಯೂ ಹಾಗೆಯೇ:

ರಸೋ ವೈ ಸಃ ।
ರಸಗ್ಗ್ಂ ಹ್ಯೇವಾಯಂ ಲಬ್ಧ್ವಾಽಽ ನನ್ದೀ ಭವತಿ
(ತೈತ್ತೀರೀಯೋಪನಿಷತ್ತು: ೨–೭)

ಪರಮಾತ್ಮನೇ “ರಸ.” ಆದದ್ದರಿಂದಲೇ ರಸಾನುಭವದಿಂದ ಆನಂದವಾಗುತ್ತದೆ. ಯಾವುದು ಆನಂದ ಕೊಡಬಲ್ಲದೋ ಅದು ರಸ.

ವಾಲ್ಮೀಕಿ ತನ್ನ ಕಾವ್ಯದ ಮೇಲ್ಮೆಯನ್ನು ಸೂಚಿಸಿರುವುದು “ರಸ” ಶಬ್ದದಿಂದ:
 
ರಸೈಃ ಶೃಂಗಾರಕರುಣಹಾಸ್ಯರೌದ್ರಭಯಾನಕೈಃ ।
ವೀರಾದಿಭಿಶ್ಚ ಸಂಯುಕ್ತಂ ಕಾವ್ಯಮೇತದಗಾಯತಾಮ್‍ ॥
(ಬಾಲಕಾಂಡ: ೪–೯)

ಅಲಂಕಾರ, ಧ್ವನಿ, ವಕ್ರೋಕ್ತಿ ಮೊದಲಾದವುಗಳು ರಸೋತ್ಪಾದನೆಗೆ ಉಪಾಯ–ಉಪಕರಣಗಳು.

ಭೋಜನರಸ ನಾಲಗೆಗೆ ಹೇಗೋ, ಗಾನರಸ ಕಿವಿಗೆ ಹೇಗೋ ರೂಪ-ಲಾವಣ್ಯರಸ ಕಣ್ಣಿಗೆ ಹೇಗೋ ಕಾವ್ಯಕಲಾರಸ ಮನಸ್ಸಿಗೆ ಹಾಗೆ ಆಪ್ಯಾಯನಕಾರಿ. ಆದರೆ ಕಾವ್ಯರಸದಲ್ಲಿ ಒಂದು ವಿಶೇಷವುಂಟು: ಅದು ಮನಸ್ಸನ್ನು ಆಪ್ಯಾಯನಗೊಳಿಸುವುದರ ಜೊತೆಗೆ ಜೀವನವನ್ನೂ ಪರಿಷ್ಕಾರಗೊಳಿಸುತ್ತದೆ. ದೇಹದ ಪಂಚೇಂದ್ರಿಯಗಳಿಗೆ ಲಭ್ಯಗಳಾದ ಶಬ್ದಸ್ಪರ್ಶರೂಪರುಚಿಗಂಧಾದಿ ರಸಗಳು ತತ್ತದಿಂದ್ರಿಯಮಾತ್ರಗ್ರಾಹ್ಯಗಳಾಗಿ ಸಕಲೇಂದ್ರಿಯ ಕೇಂದ್ರವಾದ ಮನಸ್ಸಿಗೆ ರಂಜಕಗಳಾಗುತ್ತವೆ. ಕಾವ್ಯಕಲಾರಸವಾದರೋ ಪಂಚೇಂದ್ರಿಯಪರಿಣಾಮಕ್ಷೇತ್ರವಾದ ಮನಸ್ಸಿಗೆ ರಂಜನೆ ಮಾಡುವುದಲ್ಲದೆ ಅಲ್ಲಿಂದ ಜೀವಕ್ಕೂ ವ್ಯಾಪಿಸಿ ಜೀವಸ್ವಭಾವದ ಮೇಲೆ ಪರಿಣಾಮಮಾಡಬಲ್ಲದ್ದಾಗುತ್ತದೆ. ಹೀಗೆ ಕಾವ್ಯಕ್ರಿಯೆ ಎರಡು ಘಟ್ಟಗಳಲ್ಲಿ ನಡೆಯಬಹುದಾಗಿದೆ:

1) ಮನೋರಂಜನೆ
2) ಜೀವೋತ್ಕರ್ಷ.

ಯಾವ ಕಾವ್ಯವು ಮೊದಲನೆಯ ಕ್ರಿಯೆಯಿಂದ ಮುಗಿಯದೆ ಎರಡನೆಯ ಕ್ರಿಯೆಗೂ ತೊಡಗುತ್ತದೆಯೋ ಅದು ಮಹಾಕಾವ್ಯವಾಗುತ್ತದೆ. ಅದರಲ್ಲಿ ಮನೋರಂಜನೆಯ ಜೊತೆಗೆ ಜೀವವ್ಯಾಪನೆ ಎಷ್ಟೆಷ್ಟು ಹೆಚ್ಛಾಗಿರುತ್ತದೆಯೋ ಅಷ್ಟಷ್ಟು ಅದು ಮಹಾ ಕಾವ್ಯ. ಕಾವ್ಯದ ಮಹತ್ತ್ವವು ಅದರ ಜೀವೋದ್ದಾರ ಸಾಮರ್ಥ್ಯದಿಂದ ಬರತಕ್ಕದ್ದು. ಅಂಥಾ ಸಾಮರ್ಥ್ಯದ ಅತಿಶಯವು ಶ್ರಿಮದ್ರಾಮಾಯಣದ ಮಹಿಮೆ.

ಜೀವೋದ್ಧಾರವೆಂದರೆ ನೀತಿಪ್ರಭಾವ. ಆದರೆ ಕಾವ್ಯದ ನೀತಿಪ್ರಭಾವವು ಪ್ರತ್ಯಕ್ಷ ಬೋಧನೆಯಿಂದಲ್ಲ, ಅಪ್ರತ್ಯಕ್ಷ ಹೃದಯಪರಿವರ್ತನೆಯಿಂದ. ಇದು ಕಾವ್ಯದ ವಿಶೇಷ ಶಕ್ತಿ. ಪ್ರತ್ಯಕ್ಷೋಪದೇಶವು ನೀತಿಶಾಸ್ತ್ರದ ಕಾರ್ಯ. ಶ್ರೀಮದ್ರಾಮಾಯಣ ನಮಗೆ ಹಾಗೆ ಉಪದೇಶಮಾಡಹೊರಟಿಲ್ಲ; ಅದು ನಮಗೆ ಕಥೆ ಹೇಳುತ್ತದೆ. ಆ ಮನೋಹರವಾದ ಕಥೆಯನ್ನು ಕೇಳಿ ಅದರ ಸಂಗತಿಗಳನ್ನು ನಮ್ಮ ನಮ್ಮ ಅಂತರಂಗದಲ್ಲಿ ಅನುಭವಿಸಿದಾಗ ಸದಸದ್ವಿವೇಕವನ್ನು ನಮಗೆ ನಾವಾಗಿ ಮಾಡಿಕೊಳ್ಳುವಂತಾಗುತ್ತದೆ. “ರಾಮನನ್ನು ಪೂಜಿಸಿರಿ” “ಸೀತೆಯನ್ನು ಸೇವಿಸಿರಿ”, “ಲಕ್ಷ್ಮಣನನ್ನು ಅನುಕರಿಸಿರಿ”, “ಆಂಜನೇಯನನ್ನು ಅವಲಂಬಿಸಿರಿ” –ಎಂದು ವಾಲ್ಮೀಕಿಗಳು ನಮಗೆ ಸ್ಪಷ್ಟಬೋಧನೆ ಮಾಡಿಲ್ಲ. ಆದರೆ ವಾಲ್ಮೀಕಿಗಳ ಅಖ್ಯಾನವನ್ನು ನಾವು ಕೇಳಿದಾಗ ತತ್ಕಥಾನಾಯಕರು ಎಂಥ ಮಹಾನುಭಾವರು, ಎಷ್ಟು ಅನುಕರಣಾರ್ಹರು–ಎಂದು ನಮನಮಗೇ ಅನ್ನಿಸುತ್ತದೆ. ಈ ಅಂತಃಕರಣದ ಸ್ವತಃಪ್ರವರ್ತಿತ ಸದ್ಭಾವಪ್ರವಾಹವೇ ಮಹಾಕಾವ್ಯದ ಪರಮೋಪಕಾರ. “ಸತ್ಯಂ ವದ”, “ಧರ್ಮಂ ಚರ” – ಎಂದು ಸ್ಫುಟವಚನದಿಂದ ವಿಧಿಸುವುದು ವೇದ. ಅದು ಪ್ರಭುವಿನಂತೆ ಆಜ್ಞೆ ಮಾಡಬಲ್ಲದ್ದು. ಕಾವ್ಯದ ದಾರಿ ಆಜ್ಞೆಯದಲ್ಲ, ಅನುನಯದ್ದು. ರಾಮನ ಸತ್ಯಶ್ರದ್ಧೆ ಎಷ್ಟು ಚೆನ್ನ! ಸೀತೆಯ ಪತಿನಿಷ್ಠೆ ಎಷ್ಟು ಚೆನ್ನ! ಎಂದು ಯಾರ ಪ್ರೇರಣೆಯೂ ಇಲ್ಲದೆ ನಮ್ಮಷ್ಟಕ್ಕೆ ನಾವೇ ಹೇಳಿಕೊಳ್ಳುವಂತೆ ಮಾಡುತ್ತದೆ ವಾಲ್ಮೀಕಿಯ ಕಾವ್ಯ. ಆದದ್ದರಿಂದಲೇ ಕಾವ್ಯವು ಪ್ರೇಯಸಿಯ ಮಾತಿನಂತೆ ಅಪ್ರಯತ್ನ ಪಟುವಾದ ಹಿತೋಕ್ತಿಯೆಂದು ಪೂರ್ವಿಕವಾಕ್ಯ:

ಕಾಂತಾಸಂಮಿತತಯೋಪದೇಶಯುಜೇ ॥ (ಕಾವ್ಯಪ್ರಕಾಶ: ೧–೨)

ರಾಮಾಯಣವು ಶಾಸ್ತ್ರವಲ್ಲ, ಚರಿತ್ರೆಯೂ ಅಲ್ಲ–ಎಂದು ಮೇಲೆ ಹೇಳಿದೆ. ಈ ವಿಷಯವ್ಯವಚ್ಛೇದನೆಯೂ ಮುಖ್ಯವಾದದ್ದು. ಪ್ರಕೃತದಲ್ಲಿ ಶಾಸ್ತ್ರವೆಂದರೆ ವಿಶೇಷವಗಿ

1) ಧರ್ಮಶಾಸ್ತ್ರ–ಮನುಸ್ಮೃತಿ ಮೊದಲಾದವು.
2) ತತ್ತ್ವಶಾಸ್ತ್ರ–ಸಾಂಖ್ಯ ವೇದಾಂತಾದಿಗಳು,
3) ಭೌತಶಾಸ್ತ್ರ–ಖಗೋಳವಿಜ್ಞಾನ, ವೈದ್ಯವಿಜ್ಞಾನ, ಫಿಸಿಕ್ಸ್‍, ಕೆಮಿಸ್ಟ್ರಿ, ಬಯಾಲಜಿ–ಇಂಥವು.

ಚರಿತ್ರೆಯೆಂದರೆ ಇಂಗ್ಲಿಷಿನ (History): ದೇಶವೃತ್ತಾಂತ, ವ್ಯಕ್ತಿ ಮನುಷ್ಯನ ಜೀವನವೃತ್ತಾಂತ, ಸರಕಾರದ ವರದಿಗಳು, ವೃತ್ತಪತ್ರಿಕೆಗಳ ವರದಿಗಳು ಇಂಥವು. ಶಾಸ್ತ್ರಚರಿತ್ರೆಗಳ ಕಾರ್ಯಕ್ಷೇತ್ರವು ಬುದ್ಧಿ. ಕಾವ್ಯದ ಕಾರ್ಯಕ್ಷೇತ್ರವು ಹೃದಯ. ಇದು ಮೊದಲನೆಯ ಭೇದ. ಎರಡನೆಯದಾಗಿ, ಶಾಸ್ತ್ರ–ಚರಿತ್ರೆಗಳು ಬಹಿಷ್ಪ್ರಮಾಣಗಳನ್ನು ಅವಲಂಬಿಸಿಕೊಂಡಿರುತ್ತವೆ. ವಿಜ್ಞಾನಶಾಸ್ತ್ರಗಳು ತೂಕ, ಗಾತ್ರ, ಕಾರ್ಯಕಾರಣಸಂಬಂಧ, ಪ್ರಯೋಗಫಲಿತಾಂಶ ಮೊದಲಾದ ಪರೀಕ್ಷೆಗಳಿಗೆ ಅಧೀನವಾಗಿವೆ. ಚರಿತ್ರೆಯು ಕೋರ್ಟಿನಂತೆ ತಿಥಿ, ತಾರೀಖು. ಘಳಿಗೆ, ಸ್ಥಲ, ಸಾಕ್ಷ್ಯ, ದಾಖಲೆ–ಇಂಥ ಹೊರ ರುಜುವಾತುಗಳನ್ನು ಅಪೇಕ್ಷಿಸುತ್ತದೆ. ಕಾವ್ಯಕ್ಕೆ ಬೇಕಾದದ್ದು ಬಹಿರಂಗಪ್ರಮಾಣವಲ್ಲ, ಅಂತರಂಗ ಪ್ರಮಾಣ.

ರಾಮಾಯಣವು ಚರಿತ್ರೆಯಲ್ಲ, ಆದರೆ ಚರಿತ್ರಾತ್ಮಕವಾದ ಕಾವ್ಯ. ಒಂದೇ ವಾಸ್ತವಿಕ ಘಟನೆಯನ್ನು ಬಹಿರಾಕಾರದ ದೃಷ್ಟಿಯಿಂದ ನೋಡಿದರೆ ಅದು ಚರಿತ್ರೆ–ಕೇವಲ ಚರಿತ್ರೆ, History ; ಅದನ್ನು ಅದರ ಹೃದಯಪರಿಣಾಮದ ದೃಷ್ಟಿಯಿಂದ ನೋಡಿದರೆ ಅದು ಕಾವ್ಯ–ಕಲ್ಪಿತಕಥನಕಾವ್ಯಕ್ಕಿಂತ ಹೆಚ್ಚಿನ ಪ್ರಭಾವವುಳ್ಳ ಕಾವ್ಯ. ರಾಮಾಯಣವು ಚರಿತ್ರೆಯನ್ನು ಅಂತರ್ಗತಮಾಡಿಕೊಂಡಿರುವ ಕಾವ್ಯವಾದದ್ದರಿಂದಲೇ ಅದು ವಾಸ್ತವಿಕಪ್ರಮಾಣವೆಂಬಂತೆ ಜನಾಂಗೀಕಾರವನ್ನು ಸಂಪಾದಿಸಿಕೊಂಡಿದೆ. ನಮಗೆ ಅದು ಚಾರಿತ್ರಿಕಸಾಮಾಗ್ರಿ ಹೌದು; ಅದಕ್ಕಿಂತ ಹೆಚ್ಚಾಗಿ ಅದು ಹೃದಯಸಂಸ್ಕಾರಸಾಮಾಗ್ರಿ. ಅದು ದೇಶಸಾಮಾಗ್ರಿ ಹೌದು; ಅದಕ್ಕಿಂತ ಹೆಚ್ಚಾಗಿ ಅದು ಜನತಾಂತರಾತ್ಮ ಚರಿತ್ರೆ.

ಕಾವ್ಯವ್ಯಾಸಂಗಿಯ ಗಮನದಲ್ಲಿರಬೇಕಾದ ಎರಡು ತತ್ತ್ವಸೂತ್ರಗಳಿಗೆ ಇಲ್ಲಿ ತಕ್ಕ ಅವಕಾಶ ಕಾಣುತ್ತದೆ:

1) ಕಥಾವಿವರಗಳಲ್ಲಿ ಬಂದ ಸಂಶಯಗಳನ್ನು ಉದ್ದೇಶಪೂರ್ವಕವಾಗಿ ಅನಿರ್ಣಯದಲ್ಲಿ (ಅಮಾನತ್ತಿನಲ್ಲಿ) ಇರಿಸಿರಬೇಕು (“Willing suspension of disbelief”)
2) ಪದವಾಕ್ಯಗಳಿಗೆ ಅರ್ಥಮಾಡುವಲ್ಲಿ ಲಕ್ಷ್ಯರ್ಥ ಮುಖ್ಯ; ಶಬ್ದಾರ್ಥ ಅಷ್ಟು ಮುಖ್ಯವಲ್ಲ.

ರಾವಣನಿಗೆ ತಲೆ ಹತ್ತು ಇದ್ದದ್ದು ನಿಜವೆ? ಅವನ ಫೋಟೋಗ್ರಾಫ್‍ (ಛಾಯಾ ಪ್ರತಿಬಿಂಬ) ತೋರಿಸಿದರೆ ನಂಬಿಯೇವು–ಎನ್ನಲಾಗದು. ರಾಮಾಯಣದ ಮಟ್ಟಿಗೆ ರಾವಣನಿಗೆ ಹತ್ತು ತಲೆಯಿದ್ದದ್ದನ್ನು ನಂಬಬೇಕು. ಕಾವ್ಯದಲ್ಲಿ ಮುಖ್ಯವಾದದ್ದು ಬಹಿರಂಗಸಂಗತಿಯಲ್ಲ, ಅಂತರಂಗಸಂಗತಿ. ಬಹಿರಂಗವು ಸಂಕೇತ ಮಾತ್ರ. ರಾವಣನು ಮಹಾ ಬಲಿಷ್ಠ, ಅತಿಶಯ ಪರಾಕ್ರಮಿ–ಎಂದು ತಿಳಿಸುವುದು ಕವಿಯ ತಾತ್ಪರ್ಯ. ಅದನ್ನು ಸೂಚಿಸಲು ದಶಶಿರಸ್ಸಿನ ಉಪಾಯ. ಇಲ್ಲಿ ಹತ್ತು ಎಂದರೆ ಒಂಭತ್ತು–ಮತ್ತು–ಒಂದು ಎಂದಾಗಲಿ, ಹನ್ನೊಂದು–ಮೈನಸ್‍–ಒಂದು ಎಂದಾಗಲಿ ಸಿದ್ಧಾಂತವಲ್ಲ. ಒಬ್ಬ ಸಾಮಾನ್ಯ ಮನುಷ್ಯನ ಶಕ್ತಿಯನ್ನು ನಾಲ್ಮಡಿ, ಆರ್ಮಡಿ ಮಾಡಿದರೆ ಎಷ್ಟಾಗಬಹುದೋ ಅಷ್ಟು ಶಕ್ತಿಯನ್ನು ರಾವಣನೊಬ್ಬನೇ ಪಡೆದಿದ್ದನೆಂದು ಗ್ರಹಿಸಬೇಕಾದದ್ದು. ಹೀಗೆ ಹೊರ ವರ್ಣನೆಯ ಒಳತಾತ್ಪರ್ಯವನ್ನು ಗ್ರಹಿಸದಿದ್ದರೆ ದಶಕಂಠತ್ತ್ವ, ಕಪಿಯ ಸಂಭಾಷಣೆ, ಸಮುದ್ರ ಲಂಘನ–ಇಂಥಾ ಬಹಿರ್ಘಟನೆಗಳ ಅಸಾಮಂಜಸ್ಯವೇ ದೊಡ್ಡದಾಗಿ, ಕಾವ್ಯದ ಅಂತರಂಗಾನುಭವವು ನಮಗೆ ದುರ್ಲಭವಾಗುತ್ತದೆ. ಮಹಾಕಾವ್ಯದ ಬಳಿ ಹೋಗುವವರು ತಾಯ ಬಳಿ ಹೋಗುವ ಎಳೆಮಕ್ಕಳಂತೆ ಮನಸ್ಸು ಮಾಡಿಕೊಂಡು ಹೋಗಬೇಕು. ಅಂಥ ಅಕೃತ್ರಿಮ, ಅಂಥ ಸರಳತೆ, ಅಂಥ ಅವಿಶಂಕೆ, ಅಂಥ ಅವಿತರ್ಕ, ಅಂಥ ಸಿದ್ಧ ವಿಶ್ವಾಸ–ಇವು ಇಲ್ಲದವರಿಗೆ ಕಾವ್ಯಮಾತೆ ಒಲಿಯಳು.

ಶಬ್ದಾರ್ಥಗ್ರಹಣದಲ್ಲಿಯೂ ಹಾಗೆಯೇ ಕವಿಯ ತಾತ್ಪರ್ಯವನ್ನು ಮೊದಲು ಗುರಿಯಲ್ಲಿರಿಸಿಕೊಂಡು ಬಳಿಕ ಅದಕ್ಕೆ ವಾಕ್ಯವನ್ನು ಅನ್ವಯಿಸಬೇಕು. ಆ ಗುರಿಯನ್ನು ಮರೆತ ಯುಕ್ತಿಚಮತ್ಕಾರಗಳ ವ್ಯಾಖ್ಯಾನಗಳು ರಸಾಭಾಸಕ್ಕೆ ಕಾರಣವಾಗುತ್ತವೆ. ಕವಿ ಕಥೆ ಹೇಳುವ ಉತ್ಸಾಹಾವೇಶದಲ್ಲಿ ಮಾತುಗಳನ್ನು ರಾಶಿರಾಶಿಯಾಗಿ ಸುರಿಯುತ್ತಾನೆ. ಒಂದೊಂದು ಮಾತನ್ನೂ ತೂಕ ಮಾಡಿ ಬಣ್ಣ ನೋಡಿ ಪ್ರಯೋಗಿಸಲು ಅವನಿಗೆ ವ್ಯವಧಾನವಿಲ್ಲ. ಅವನು ಬಿಡುವು ತೆಗೆದುಕೊಂಡರೆ ಕಾವು ಆರಿಹೋದೀತು. ವೇಗ ಧೋರಣೆಗಳು ಕವಿ ಕರ್ಮದಲ್ಲಿ ಅನಿವಾರ್ಯ ಮಾತ್ರವೆ ಅಲ್ಲ, ಅಪೇಕ್ಷಣೀಯವೂ ಆಗುತ್ತದೆ. ಅದರ ರಭಸದಲ್ಲಿ ನಾವು ಅಕ್ಷರಕ್ಷರವನ್ನೂ ಬೇರೆ ಬೇರೆ ಕಿತ್ತು ಕೆದಕಿ ನೋಡತಕ್ಕದ್ದಲ್ಲ. ಎಷ್ಟೋ ಮಂದಿ ವ್ಯಾಕ್ಯಾನಕಾರರಲ್ಲಿರುವ ದೋಷ ಇದು. ಚಮತ್ಕಾರ ಅತಿಯಾದರೆ ರಸಾಸ್ವಾದನೆ ತಪ್ಪಿಹೋಗುತ್ತದೆ. ವ್ಯಾಖ್ಯಾನದಿಂದ ರಸಪೋಷಣೆಯಾಗಬೇಕೇ ಹೊರತು ರಸಭಂಗವಾಗಬಾರದು. ತಾರ್ಕಿಕನು ಕವಿಯ ಮೇಲೆ ಕೈ ಮಾಡಬಾರದು.

ಶ್ರೀಮದ್ರಾಮಾಯಣವು ಕಾವ್ಯಮಾತ್ರವಲ್ಲ, –ಆದಿಕಾವ್ಯ. ಅದರ ಆದಿತ್ತ್ವವು ಕಾಲಮಾನಮಾತ್ರದ್ದಲ್ಲ, ಗುಣಾಧಿಕ್ಯದಿಂದಲೂ ಸಿದ್ಧವಾದದ್ದು. ಪ್ರಪಂಚದ ಸಾಹಿತ್ಯ ಚರಿತ್ರೆಯಲ್ಲಿ ಇದು ಒಂದು ಅಚ್ಚರಿಯ ಸಂಗತಿ. ಪ್ರಪಂಚದಲ್ಲಿ ನಮಗೆ ದೊರೆತಿರುವ ಮೊಟ್ಟಮೊದಲನೆಯ ಕಾವ್ಯವೇ ಕಾವ್ಯದ ಸಲ್ಲಕ್ಷಣಗಳಿಗೆ ಆದರ್ಶವೂ ಆಗಿದೆ. ಪ್ರಪಂಚದ ಇತರ ವಸ್ತುಗಳ ಚರಿತ್ರೆಯಲ್ಲಿ ಪ್ರಥಮ ಕೃತಿಗೂ ಆಮೇಲಿನದಕ್ಕೂ ನಡುವೆ ಒಂದು ಪರಿಷ್ಕಾರಕ್ರಮ ಕಂಡುಬರುತ್ತದೆ. ಮೊದಮೊದಲಿನ ಕೃತಿ ಒರಟಾಗಿ ಪೆಡಸಾಗಿರುತ್ತದೆ; ಆಮೇಲಿನದರಲ್ಲಿ ನಯನಾಜೂಕುಗಳು ಕಾಣುತ್ತವೆ. ಕೃತಿಕಾರನ ಕುಶಲತೆ ದಿನೇ ದಿನೇ ಉತ್ತಮವಾಗುತ್ತದೆ. ಇಂಗ್ಲಿಷ್‍ ಸಾಹಿತ್ಯದ ಚರಿತ್ರೆಯಲ್ಲಿ ಇದು ಕಾಣಬರುತ್ತದೆ. ಜಾನ್ಸನ್ನಿನ ಕಾಲದ (೧೬೪೯-೧೭೦೩) ವಚನಶೈಲಿಯನ್ನು ಮೊನ್ನೆ ತಾನೇ ತೀರಿಕೊಂಡ ಸಾಮರ್ಸಟ್‍ ಮಾಮ್‍ ಕಾಲದ ಶೈಲಿಯೊಡನೆ ಹೋಲಿಸಿ ನೋಡಬಹುದು. ಬರ್ನ್ಸ್‍ ಕವಿಯ ಹಿಂದಣ ದಿನಗಳ ಜನಗೀತೆಗಳನ್ನು ಟೆನ್ನಿಸನ್ನನ ಪದ್ಯಗಳೊಡನೆ ಹೋಲಿಸಿ ನೋಡಬಹುದು. ಅಲ್ಲಿ ಒಂದು (Evolution) ಎವೊಲ್ಯೂಷನ್‍ ಎಂಬ ಪರಿಷ್ಕರಾನು ಕ್ರಮ ಕಾಣಬರುತ್ತದೆ. ಸಂಸ್ಕೃತದಲ್ಲಿ ಹಾಗಾಗಿಲ್ಲವೆ? ಮೊದಮೊದಲಿನದು ಪ್ರಾಕೃತವಾಗಿದ್ದು ಕಾಲಾನಂತರ ಬಂದದ್ದರಲ್ಲಲ್ಲವೆ ಉತ್ತಮದಶೆ ತೋರಬೇಕಾದದ್ದು? ಸಂಸ್ಕೃತದಲ್ಲಿ ಹಾಗಾಗದೆ ಪ್ರಪ್ರಥಮಸೃಷ್ಟಿಯೇ ಸರ್ವೋತ್ಕೃಷ್ಟಸೃಷ್ಟಿಯಾಯಿತೆ? ಇಲ್ಲಿ ಒಂದು ವಿಶೇಷಸಂದರ್ಭವಿದೆ, ಗಮನಿಸಬೇಕು.

ಇತರ ಭಾಷೆಗಳಲ್ಲಿ ಜನಪದಸಾಹಿತ್ಯ ಯಾವ ಕೆಲಸ ಮಾಡಿತ್ತೋ ಅದನ್ನು ಸಂಸ್ಕೃತದಲ್ಲಿ ವೇದವಾಙ್ಮಯ ಮಾಡಿತ್ತು. ಇಂಗ್ಲಿಷಿನಲ್ಲಿ ಜನ ಸಾಮಾನ್ಯದ ವಾಕ್ಚತುರರು ಹಾಡು ಕಟ್ಟಿ, ಲಾವಣಿ ಹೆಣೆದು, ಗಾದೆ ಜೋಡಿಸಿ ಭಾಷೆಯನ್ನು ಪಳಗಿಸಿದರು. ಹಾಗೆ ಕುದುರಿದ್ದ ಮೂಲದ್ರವ್ಯವನ್ನು ಆ ತರುವಾಯ ಬಂದ ಸಾಹಿತ್ಯಕರ್ತರು ಉಪಯೋಗಿಸಿಕೊಂಡು ತಮ್ಮ ನಯದ ಕೆಲಸವನ್ನು ಮುಂದುವರಿಸಿದರು. ಸಂಸ್ಕೃತದಲ್ಲಾದರೋ ಭಾಷೆಯನ್ನು ಪಳಗಿಸುವ ಕೆಲಸ ವೈದಿಕ ಋಷಿಗಳಿಂದ ನಡೆದಿತ್ತು. ಜನದ ಮನೋಬುದ್ಧಿಗಳನ್ನು ಸಂಸ್ಕರಿಸುವ ಕಾರ್ಯವನ್ನೂ ಅವರು ನಡೆಸಿದ್ದರು. ವಾಲ್ಮೀಕಿಗಳ ಕೈಗೆ ಸಿದ್ಧವಾಗಿ ವೇದದ ಅನುಷ್ಟುಭ್‍, ತ್ರಿಷ್ಟುಭ್‍ ಮೊದಲಾದ ಛಂದೋಬಂಧಗಳು ಲಭ್ಯವಾಗಿದ್ದವು. ದಶರಥನ ಆಸ್ಥಾನದಲ್ಲಿ ವಂದಿಮಾಗಧರೂ ಗಾಯಕರೂ ಇದ್ದರು. ಋಷ್ಯಶೃಂಗ ಪ್ರಕರಣದಲ್ಲಿ ಗಣಿಕೆಯರ ಪ್ರಶಂಸೆಯೇ ಉಂಟಲ್ಲ! ಅವರು ಹಾಡಲಿಲ್ಲವೇ? ಆ ಕಲಕ್ಕೆ ಗೇಯಕೃತಿಗಳಿದ್ದಿರಬೇಕು. ಅದೆಲ್ಲ ವಾಲ್ಮೀಕಿಗೆ ಮೂಲಸಾಮಾಗ್ರಿಯಾಯಿತು. ಹಾಗೆಯೇ ಒಂದು ಸುಸಂಸ್ಕೃತ ಜನಸಮಾಜವೂ ವಾಲ್ಮೀಕಿಯ ಕಾವ್ಯವನ್ನು ಆದರಿಸಲು ಸಿದ್ಧವಾಗಿತ್ತು. ಆ ಕಾಲಕ್ಕೆ ಹಿಂದೆ ಆಗದೆ, ಇನ್ನೂ ಆಗಲು ಉಳಿದಿದ್ದ ಸಾಹಿತ್ಯ ರಚನೆಯೆಂದರೆ ಒಂದು ಸಮಗ್ರ ಕಾವ್ಯ. ಹಾಡಿನ ರೂಪದ, ಗಾದೆಗಳ ರೂಪದ, ಪ್ರಾಸ್ತಾವಿಕ ಸಾಮತಿಗಳ ರೂಪದ ಖಂಡಕಾವ್ಯಗಳು, ಅಥವಾ ಕಾವ್ಯಖಂಡಗಳು ವಾಲ್ಮೀಕಿ ಪೂರ್ವದಲ್ಲಿ ಇದ್ದಿರಬೇಕು. ಪೂರ್ಣರೂಪದ ಕಾವ್ಯ ಆಗಿರಲಿಲ್ಲ. ಹಾಗೆ ಸಿದ್ಧವಾಗಿ ಬಂದಿದ್ದ ಭಾಷಾಸಾಮಾಗ್ರಿಯಿಂದ ಸರ್ವಾಂಗಪರಿಪೂರ್ಣವೂ ಸರ್ವಾಂಗಸುಂದರವೂ ಆದ ಒಂದು ಸಮಗ್ರಕಾವ್ಯವನ್ನು ಪ್ರಥಮವಾಗಿ ನಿರ್ಮಿಸಿದ ಯಶಸ್ಸು ವಾಲ್ಮೀಕಿಯದು.

No comments:

Post a Comment