Sunday 7 January 2024

* ಭಾಗ 3 - ವೇದವು ಕಾವ್ಯವಲ್ಲವೆ? * (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಕಾವ್ಯಲಕ್ಷಣಗಳು ವೇದದಲ್ಲಿ ಯಥೇಷ್ಟವಾಗಿವೆ. ಚಿತ್ತಾಕರ್ಷಕವಾದ ವಾಗ್ಗುಂಫನ, ವರ್ಣನಾವೈಖರಿ, ಛಂದೋಧಾಟಿ. ಇವೆಲ್ಲಕ್ಕಿಂತ ಹೆಚ್ಚಾಗಿ ಮನುಷ್ಯ ಹೃದಯದ ಆರ್ತಸ್ವರ–ಇವು ವೇದದ ಸಂಹಿತಾಧ್ಯಾಯಗಳಲ್ಲಿರುವಂತೆ ಯಾವ ಕಾವ್ಯದಲ್ಲಿಯೂ ಇರಲಾರದೆಂದು ಹೇಳಬಹುದು. ಆದರೂ ವೇದವು ಕಾವ್ಯವಾಗದು. ಏಕೆಂದರೆ ಕಾವ್ಯದಲ್ಲಿ ಕೇಂದ್ರಸ್ಥಾನ ಮನುಷ್ಯನದು, ವೇದದಲ್ಲಿ ಕೇಂದ್ರಸ್ಥಾನ ದೇವತೆಯದು. ಸಮಸ್ತಜಗತ್ತಿಗೂ ಯಾವ ರಹಸ್ಯ ಚೈತನ್ಯವು ನಿಯಾಮಕವೋ, ಹಾಗೆಯೇ ಪರಿಪಾಲಕವೋ, –ಯಾವುದರ ನಿಗ್ರಹಾನುಗ್ರಹ ಶಕ್ತಿಗಳು ಮನುಷ್ಯಜೀವನವನ್ನು ಆಗಿಸುತ್ತವೆಯೋ, ಹೋಗಿಸುತ್ತವೆಯೋ, –ಆ ಸರ್ವಶಕ್ತಿಸ್ವರೂಪನಾದ ಈಶ್ವರನೇ ವೇದದಲ್ಲಿ ಕಥಾನಾಯಕ. ಮನುಷ್ಯನು ಅಲ್ಲಿ ಶರಣಾಗತನಾದ ಉಪಜೀವಿ. “ಹೇ ಇಂದ್ರ, ನನಗೆ ಮಳೆ ಬೆಳೆಗಳನ್ನು ಕೊಡು; ಹೇ ಅಗ್ನಿ, ನನ್ನ ಮನೆಮಂದಿಯನ್ನು ಕಾಪಾಡು; ಹೇ ವರುಣ, ನನ್ನ ಪಾಪಗಳನ್ನು ಕ್ಷಮಿಸು; ಹೇ ರುದ್ರ, ನನ್ನಲ್ಲಿ ಕೋಪಮಾಡಬೇಡ, ನನ್ನ ಶತ್ರುಗಳಲ್ಲಿ ಕೋಪ ತೋರು” –ಈ ಪ್ರಕಾರ ಬೇಡುವವನು ಮನುಷ್ಯ. ಅವನ ಆ ಬೇಡಿಕೆಯ ಸಮಯದಲ್ಲಿ ಅವನು ನಾನಾ ದೇವತೆಗಳ ಮಹಿಮೆಗಳನ್ನು ಬಗೆಬಗೆಯಾಗಿ ಬಣ್ಣಿಸುತ್ತಾನೆ. ಹೀಗೆ ವೇದದಲ್ಲಿ ಮನುಷ್ಯನ ಆವೇಗಾಕಾಂಕ್ಷೆಗಳು ನಿಮಿತ್ತ, ಭಗವತ್ಪ್ರಸಾದವು ಉದ್ದೇಶ. ವೇದದಲ್ಲಿ ದೈವವು ಮುಖ್ಯ, ಮನುಷ್ಯನು ಪ್ರಾಸಂಗಿಕ. ಕಾವ್ಯದಲ್ಲಾದರೋ ಮನುಷ್ಯನು ಮುಖ್ಯ, ದೈವವು ಪ್ರಾಸಂಗಿಕ. ಹೀಗೆ ವೇದವೂ ಕಾವ್ಯವೂ ಪರಸ್ಪರ ಪರಿಪೂರಕಗಳು. 

ಇತಿಹಾಸಪುರಾಣಾಭ್ಯಾಂ ವೇದಂ ಸಮುಪಬೃಂಹಯೇತ್‍ ।
ಬಿಭೇತ್ಯಲ್ಪಶ್ರುತಾದ್ವೇದೋ ಮಾಮಯಂ ಪ್ರಹರೇದಿತಿ ॥ 
(ಮಹಾಭಾರತ, ಆದಿಪರ್ವ: ೧–೨೭೩) 

ಇತಿಹಾಸಾದಿ ಮಾನುಷಸಾಹಿತ್ಯವ್ಯಾಸಂಗದಿಂದ ವೇದವಿದ್ಯೆಗೆ ಪುಷ್ಟಿ ಬರುತ್ತದೆ. ಕಾವ್ಯಾನುಭವವಿಲ್ಲದವನು ತನ್ನನ್ನು ಹೊಡೆದಾನೆಂದು ವೇದಕ್ಕೆ ಹೆದರಿಕೆಯಂತೆ! ಎಂದರೆ, ವೇದದ ಅರ್ಥವನ್ನು ಸರಿಯಾಗಿಯೂ ಸಮಗ್ರವಾಗಿಯೂ ತಿಳಿಯಬೇಕೆನ್ನುವವನು ಲೋಕಪರಿಜ್ಞಾನವನ್ನು ಸಂಪಾದಿಸಿಕೊಂಡಿರಬೇಕು. ಲೋಕಾನುಭವಕ್ಕೂ ಲೋಕಪರಿಜ್ಞಾನಕ್ಕೂ ಸಾಧನವು ಸತ್ಕಾವ್ಯ. ಯಾರು ಶ್ರೀಮದ್ರಾಮಾಯಣವ್ಯಾಸಂಗದಿಂದ ಲೋಕಜೀವನದ ಮರ್ಮಗಳನ್ನು ಕಂಡಿರುತ್ತಾನೋ ಅವನಿಗೆ ವೇದಾರ್ಥವು ಸುಲಭ ಲಭ್ಯವಾಗುತ್ತದೆ. 

* ಎರಡು ದೃಷ್ಟಿಗಳು *

ಶ್ರೀಮದ್ರಾಮಾಯಣದ ವಿಷಯದಲ್ಲಿ ಎರಡು ದೃಷ್ಟಿಗಳು ಸಾಧ್ಯವಾಗಿವೆ. 

ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ । 
ವೇದಃ ಪ್ರಾಚೇತಸಾದಾಸೀತ್‍ ಸಾಕ್ಷಾದ್ರಾಮಾಯಣಾತ್ಮನಾ ॥ 

1. ಮಹಾವಿಷ್ಣುವು ಶ್ರೀರಾಮನಾಗಿ ಮನುಷ್ಯರೂಪದಲ್ಲಿ ಅವತರಿಸಿದನು; ತದನುಸಾರವಾಗಿ ವೇದವು ರಾಮಾಯಣ ರೂಪದಲ್ಲಿ ಅವತರಿಸಿತು. 
2. ಶ್ರೀರಾಮನು ಮನುಷ್ಯನಾಗಿ ಹುಟ್ಟಿ ಮಹಾವಿಷ್ಣು ಪದವಿಗೆ ಏರಿದನು; ತದನುಸಾರವಾಗಿ ವಾಲ್ಮೀಕಿಪ್ರಣೀತ ರಾಮಾಯಣವು ವೇದಪ್ರಾಯವಾಯಿತು. 

ಮೊದಲನೆಯದು ಅನುಗ್ರಹಾಪೇಕ್ಷೆಯ ದೃಷ್ಟಿ; ಎರಡನೆಯದು ಅರ್ಹತಾ ಸಂಪಾದನೆಯ ದೃಷ್ಟಿ.

ಇವೆರಡೂ ಬೇರೆಬೇರೆ ದೃಷ್ಟಿಗಳು, ಆದರೆ ಪರಸ್ಪರ ವಿರೋಧಿಗಳಲ್ಲ. ಹಾಲೂ ತುಪ್ಪವೂ ಬೇರೆಬೇರೆ, ಆದರೆ ವಿರೋಧಿಗಳಲ್ಲ. ಹಲಸೂ ಜೇನೂ ಬೇರೆಬೇರೆ, ಆದರೆ ವೈರಿಗಳಲ್ಲ. ಎರಡೂ ಒಟ್ಟಿಗೆ ಇರಲಾಗುತ್ತದೆ. 

ಮೊದಲನೆಯ ದೃಷ್ಟಿಯಲ್ಲಿ ಪ್ರಸಾದನಿರೀಕ್ಷೆ ಮುಖ್ಯಾಶಯ. ಶ್ರೀರಾಮನು ಭಗವಂತನ ಪ್ರತ್ಯಕ್ಷಮೂರ್ತಿ. ಆತನು ಕೃಪಾಳು, ಆತನನ್ನು ಆಶ್ರಯಿಸಿದವನಿಗೆ ಇಷ್ಟಾರ್ಥಲಾಭವು ಸ್ವತಸ್ಸಿದ್ಧ. ಆದದ್ದರಿಂದ ರಾಮಭಕ್ತಿಯು ಪರಮಶ್ರೇಯಸ್ಸಾಧಕ. ಅಲ್ಲಿ ಮತ್ತೆ ವಿಚಾರಣೆಗಳಿಗೆಡೆಯಿಲ್ಲ. ದೃಢವಾದ ಶ್ರದ್ಧೆಯೇ ಕರ್ತವ್ಯ.

ಎರಡನೆಯ ದೃಷ್ಟಿಯಲ್ಲಿ ಪ್ರಯತ್ನದಾರ್ಢ್ಯವು ಮುಖ್ಯಾಶಯ. ಶ್ರೀರಾಮನು ಮಾನುಷಸತ್ವಕ್ಕೆ ಆದರ್ಶಮೂರ್ತಿ. ಭಗವದವತಾರವಾದರೂ ಮನುಷ್ಯಬೋಧೆಗಾಗಿ ಆದ ಅವತಾರ, ಮನುಷ್ಯನು ಹೇಗೆ ಆತ್ಮಸಂಯಮದಿಂದ ಆತ್ಮಪರೀಕ್ಷಣದಿಂದ, ಆತ್ಮಶಿಕ್ಷಣದಿಂದ, ಆತ್ಮಪ್ರಯತ್ನದಿಂದ, ಆತ್ಮಶೌರ್ಯದಿಂದ ಲೋಕಜೀವನದ ಕಷ್ಟಪರೀಕ್ಷೆಗಳಿಂದ ಪಾರಾಗಿ ಪರಮಪದವಿಗೇರಬಹುದು–ಎಂಬುದಕ್ಕೆ ನಿದರ್ಶನ ರಾಮಚರಿತೆ. ರಾಮನು ಮನುಷ್ಯನಿಗೆ ಅನುಕರಣೀಯನಾದ ಧರ್ಮಗುರು, “ಉದ್ಧರೇದಾತ್ಮನಾತ್ಮಾನಂ” –ಎಂಬ ಗೀತೋಕ್ತಿಗೆ ನಿದರ್ಶನಮೂರ್ತಿ. 

ಈ ಎರಡು ದೃಷ್ಟಿಗಳಲ್ಲಿ ಯಾವುದು ತಪ್ಪು? ಯಾವುದೂ ತಪ್ಪಲ್ಲ. ಯಾವುದು ಸರಿ? ಎರಡೂ ಸರಿ. ದೈವವು ಗುರುವಾಗಲಾರದೆ? ಗುರುವು ದೈವವಾಗಬಾರದೆ? 

ಯಸ್ಯ ದೇವೇ ಪರಾ ಭಕ್ತಿರ್ಯಥಾ ದೇವೇ ತಥಾ ಗುರೌ ॥ (ಶ್ವೇತಾಶ್ವತರೋಪನಿಷತ್ತು: ೬–೨೩) 

ಭಕ್ತನ ಅಂತರಂಗಪ್ರವೃತ್ತಿಯಂತೆ, ಅವನಿಗೆ ಪ್ರಾತಃಕಾಲದಲ್ಲಿ ಪ್ರತ್ಯಕ್ಷದೈವವಾಗಿದ್ದ ಶ್ರೀರಾಮನು ಮಧ್ಯಾಹ್ನ ಒಂದು ಧರ್ಮಸಂಕಟದಲ್ಲಿ ನಡವಳಿಕೆಗೆ ಗುರುವಾಗಬಹುದು; ರಾತ್ರಿ ಏಕಾಂತಧ್ಯಾನದಲ್ಲಿ ಪರಬ್ರಹ್ಮಪ್ರತೀಕವಾಗಬಹುದು. 

ರಮನ್ತೇ ಯೋಗಿನೋಽನನ್ತೇ ನಿತ್ಯಾನನ್ದೇ ಚಿದಾತ್ಮನಿ । 
ಇತಿರಾಮಪದೇನಾಸೌ ಪರಂಬ್ರಹ್ಮಾಭಿಧೀಯತೇ ॥ (ರಾಮಪೂರ್ವತಾಪಿನ್ಯುಪನಿಷತ್ತು) 

“ರಾಮ” ಶಬ್ದವು ಮೊದಲು ಪರಬ್ರಹ್ಮವಾಚಕವಾಗಿತ್ತೆಂದೇ ನನ್ನ ನಂಬಿಕೆ. ಅದನ್ನು ದಶರಥನ ಕಾಲಕ್ಕೆ ಹಿಂದೆಯೇ ಮನುಷ್ಯನ ಹೆಸರಾಗಿ ಬಳಸುತ್ತಿದ್ದಿರಬೇಕು. ಜಮದಗ್ನಿಯ ಮಗನಾದ ಪರಶುರಾಮನು ರಘುರಾಮನಿಗಿಂತ ಪುರಾತನನು. ರಾಮ ಎಂಬ ಹೆಸರಿನವರು ಬೇರೆಯವರೂ ಹಿಂದೆ ಇದ್ದಿರಬಹುದು.

ರಾಮಃ ಕ್ರಾತುಜಾತೇಯೋ ವೈಯಾಘ್ರಪದ್ಯಃ (ಜೈಮಿನೀಯೋಪನಿಷತ್ತು) 

ವಾಲ್ಮೀಕಿಯು ನಾರದನಿಂದ ತಿಳಿಯಬಯಸಿದ್ದು ಮನುಷ್ಯವಿಷಯವನ್ನು: 

ಮಹರ್ಷೇ ತ್ವಂ ಸಮರ್ಥೋಽಸಿ ಜ್ಞಾತುಮೇವಂವಿಧಂ ನರಮ್‍ ॥ (ಬಾಲಕಾಂಡ: ೧–೫) 

ನಾರದನು ಹೇಳಿದ್ದು ಮನುಷ್ಯವಿಷಯವನ್ನು: 

ತೈರ್ಯುಕ್ತಃ ಶ್ರೂಯತಾಂ ನರಃ ॥ (ಬಾಲಕಾಂಡ:೧–೭) 

ಶ್ರೀರಾಮಚಂದ್ರನು ತನ್ನನ್ನು ತಾನು ಮನುಷ್ಯನೆಂದೇ ತಿಳಿದುಕೊಂಡಿದ್ದ: 

ಆತ್ಮಾನಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಮ್‍ ॥ (ಯುದ್ಧಕಾಂಡ:೧೨೦–೧೦) 

ಇಂಥಾ ಶ್ರೀರಾಮನನ್ನು ಸಾಕ್ಷಾದ್ವಿಷ್ಣುವೆಂದು ಭಾವಿಸಿ ಸ್ತುತಿಸಿದವರು ಬ್ರಹ್ಮಾದಿ ದೇವತೆಗಳು.

ಮನುಷ್ಯರಿಗೆ ಸ್ವಾಭಾವಿಕವಾಗಿ ತಗಲುವ ಮನೋವೇಧೆ ವಿಕಾರಗಳನ್ನು ತಾನು ಪಟ್ಟವನೆಂದು ಶ್ರೀರಾಮನು ಸ್ವತಃ ಹೇಳಿಕೊಂಡದ್ದು ಆತನನ್ನು ನಮಗೆ ಸಮೀಪಗೊಳಿಸಿ ಆತನು ನಮಗೆ ಅಷ್ಟಿಷ್ಟಾದರೂ ಅನುಕರಣಸಾಧ್ಯನೆಂದು ತೋರಿಸುತ್ತದೆ.

No comments:

Post a Comment