Saturday 13 January 2024

ಭಾಗ 8 - ಕಿಷ್ಕಿಂಧಾಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಸೀತಾನ್ವೇಷಪರಿಶ್ರಾಂತಂ
ಪಂಪಾಕ್ಷೇತ್ರಪ್ರಸಾದಿತಂ ।
ಹನೂಮತ್ಸಾಂತ್ವಿತಂ ಧ್ಯಾಯೇತ್‍
ಪ್ರಾಪ್ತಸುಗ್ರೀವಸೌಹೃದಮ್‍ ॥

ಕಿಷ್ಕಿಂಧಾಕಾಂಡ ಶ್ರೀಮದ್ರಾಮಾಯಣದ ಕಂಠಭಾಗ. ಅದರ ಶಿರೋಭಾಗವು ಯುದ್ಧಕಾಂಡ. ಅದು ರಾವಣಹನನರೂಪವಾದ ಶ್ರೀರಾಮ ವಿಜಯದ ಕಥೆ. ಅದರ ಭುಜಪರ್ಯಂತದ ಭಾಗ ಅರಣ್ಯಕಾಂಡ. ರಾವಣನ ಅಪರಾಧವಾದ ಸೀತಾಪಹರಣ ಪ್ರಕರಣಕ್ಕೆ ಅಲ್ಲಿಯವರೆಗೆ ಸನ್ನಿವೇಶಸಿದ್ಧತೆಯಾಯಿತು. ಆದರೆ ಸೀತಾಪಹಾರಕನಾರು? ಅವನೆಲ್ಲಿಯವನು? ಅವನೆಂಥವನು?–ಇದು ತಿಳಿಯದೆ ಶ್ರೀರಾಮಚಂದ್ರನ ಕಾರ್ಯ ಮುಂದಕ್ಕೆ ಸಾಗಲಾರದು. ಈ ಅವಶ್ಯಾಂಶಗಳನ್ನು ಒದಗಿಸುವುದು ಕಿಷ್ಕಿಂಧಾಕಾಂಡ.

ಕಿಷ್ಕಿಂಧಾ ಎಂದರೆ ಕನ್ನಡದಲ್ಲಿ “ಇಕ್ಕಟ್ಟಾದದ್ದು” ಎಂಬ ರೂಢಿಯ ಅರ್ಥವಿದೆ. ಬಹುಶಃ ಈ ಮಾತು ಸಂಸ್ಕೃತದ “ಕಿಷ್ಕು” ಎಂಬುದರಿಂದ ಬಂದಿರಬಹುದು. ಕಿಷ್ಕು ಎಂದರೆ ಗೇಣು. ಅಥವಾ ಚೋಟು. ಸಣ್ಣ ಪ್ರದೇಶ ಎಂದು ತಾತ್ಪರ್ಯ.

ಈ ಕಾಂಡದಲ್ಲಿ ಕಾವ್ಯಧಾರೆ ಎಂದಿನಂತೆ ಮನೋಹರವಾಗಿ ಹರಿಯುತ್ತದೆ. ಇದರಲ್ಲಿಯ ದೃಶ್ಯಗಳು ರಮಣೀಯವಾಗಿ ಸನ್ನಿವೇಶಗಳು ಕುತೂಹಲಕಾರಿಗಳಾಗಿವೆ. ಜಟಾಯು ಸಂಪಾತಿಗಳಿಗೆ ಸಂಭಂಧಪಟ್ಟ ಕಥಾಭಾಗ ಅತ್ಯಂತ ಸುಂದರವಾದದ್ದು. ಪಂಪಾಪ್ರದೇಶದ ವರ್ಣನೆ ಪ್ರಕೃತಿ ಸೌಭಾಗ್ಯವನ್ನು ಅನುಭವಕ್ಕೆ ತಂದುಕೊಡುತ್ತದೆ. ಕೇಶಿರಾಜನು

..... ಶಬ್ದದಿ– ।
ನಾವಾವಿಂದ್ರಿಯದ ವಿಷಯಮಂ ಶ್ರೋತದೊಳು– ।
ದ್ಭಾವಿಪ....

ಎಂದು ಹೇಳಿ ವಾಕ್ಕಿನ ಸಾಮರ್ಥ್ಯವನ್ನು ನಿರೂಪಿಸಿದ್ದಾನೆ. ಕಣ್ಣಿನೆದುರಿಗೆ ಇಲ್ಲದ್ದನ್ನು ಕಣ್ಣು ಸ್ವಯಂ ಅನುಭವಿಸುವಂತೆ ಮಾಡಬಲ್ಲದ್ದು ಕವಿಯ ವಾಕ್ಪ್ರಭಾವ. ಇದಕ್ಕೆ ದೃಷ್ಟಾಂತ ಶ್ರೀಮದ್ರಾಮಾಯಣದಲ್ಲಿ ಹೇರಳವಾಗಿ ದೊರೆಯುತ್ತದೆ. ಕಿಷ್ಕಂಧಾ ಕಾಂಡದಲ್ಲಿ ಅಂಥ ವರ್ಣನೆಗೆ ಅವಕಾಶ ಅಪಾರವಾಗಿ ದೊರೆಯಿತು ವಾಲ್ಮೀಕಿ ಮಹರ್ಷಿಗಳಿಗೆ. ಕಥಾಸನ್ನಿವೇಶದ ಕಲ್ಪನೆಯಲ್ಲಿಯೂ ಪಾತ್ರಾಭಿವ್ಯಕ್ತಿಯಲ್ಲಿಯೂ ಮಹಾಕವಿಯ ನೈಪುಣಿ ಎದ್ದು ಕಾಣುತ್ತದೆ.

ಕಾವ್ಯ ವ್ಯಾಸಂಗದ ಮೂಲಸೂತ್ರಗಳು

ಶ್ರೀಮದ್ರಾಮಾಯಣದಂಥ ಕಾವ್ಯವನ್ನು ಅನುಭವಿಸಬೇಕಾದರೆ ವಾಚಕನು ಸಮಾಹಿತಚಿತ್ತನಾಗಿ, ಅವಧಾನವುಳ್ಳವನಾಗಿ ವ್ಯಾಸಂಗ ಮಾಡಬೇಕು. ಅವಸರವಸರವಾಗಿ ಸರ್ಗ ಮುಗಿಸಬೇಕೆಂಬ ಆತುರದಲ್ಲಿರುವವನಿಗೆ ಕಾವ್ಯರಸ ದೊರೆಯಲಾರದು. ವಾಚಕನು ಸರ್ವದಾ ಮನಸ್ಸಿನಲ್ಲಿ ಧರಿಸಿರಬೇಕಾದ ಕೆಲವು ಮೂಲಸೂತ್ರಗಳನ್ನು ನಾನು ಪದೇ ಪದೇ ಅರಿಕೆಮಾಡಿದ್ದೇನೆ. ಈಗ ಅದನ್ನು ಮತ್ತೊಮ್ಮೆ ಜ್ಞಾಪಕಕ್ಕೆ ತರಬಹುದೆಂದು ತೋರುತ್ತದೆ.

1) ಕಾವ್ಯದೃಷ್ಟಿ: ಶ್ರೀಮದ್ರಾಮಾಯಣವು ಕಾವ್ಯ. ಮಹಾಕಾವ್ಯ. ಅದು ಬರಿಯ ಕಥೆಯಲ್ಲ, ಚರಿತ್ರೆಯ ಪುಸ್ತಕವಲ್ಲ, ಶಾಸ್ತ್ರಗ್ರಂಥವೂ ಅಲ್ಲ. ಕಾವ್ಯವನ್ನೋದುವ ಮನಸ್ಸಿನಿಂದ ಅದನ್ನು ಓದುಬೇಕು.

2) ಜೀವಸಂಸ್ಕಾರ: ಕಾವ್ಯದಲ್ಲಿ ಕಥೆಯುಂಟೆಂಬುದು ನಿಜ. ಆದರೆ ಕಾವ್ಯದ ಕಥೆ ಬರಿಯ ಕಥೆಯಲ್ಲ. ಮಹಾಕಾವ್ಯದ ಕಥೆ ಮನೋರಂಜಕ ಮಾತ್ರವಲ್ಲ. ಮಹಾಕಾವ್ಯದಲ್ಲಿ ಕಥೆಯು ಜೀವಸ್ಪರ್ಶಿಯಾದ ರಸನಾಳಿಕೆಗಳಲ್ಲಿ ಹರಿದುಬರುತ್ತದೆ. ಇಲ್ಲಿ ಮುಖ್ಯವಾದದ್ದು ಕಥೆಯ ಘಟನೆಗಿಂತ ಅದರಲ್ಲಡಗಿರುವ ರಸದ್ರವ್ಯ. ರಸಸಾಮಾಗ್ರಿಯಲ್ಲಿ ವಿನೋದಕ್ಕಿಂತ ಸಂಸ್ಕಾರಕಾರಕವಾದ ಗುಣ ಮುಖ್ಯ.

3) ಆತ್ಮಾರ್ಪಣಬುದ್ಧಿ: ರಸ ಮುಖ್ಯ, ಜೀವಸಂಸ್ಕಾರ ಮುಖ್ಯ–ಎಂದು ಹೇಳಿದ ಮೇಲೆ ಮಹಾಕಾವ್ಯವ್ಯಾಸಂಗ ಒಂದು ಮಹಾ ಅನುಷ್ಠಾನವೆಂದು ಸಿದ್ಧವಾಗುತ್ತದೆ. ಅನುಷ್ಠಾನಕ್ಕೆ ಅವಶ್ಯವಾದದ್ದು ಆತ್ಮಾರ್ಪಣಬುದ್ಧಿ: ಎಂದರೆ, ವಾಚಕನು ತನ್ನ ಸ್ವಂತ ಪ್ರಜ್ಞೆ, ತನ್ನ ಸ್ವಂತ ಪಾಂಡಿತ್ಯ, ಸ್ವಂತ ಚಾಲಾಕುತನ–ಇವನ್ನು ವರ್ಜಿಸಬೇಕು. ಈ ಅಹಂಕಾರವರ್ಜನೆಯಿಲ್ಲದಿದ್ದರೆ ಶರಣಾಗತಭಾವವಿಲ್ಲ. ಶರಣಾಗತಭಾವವಿಲ್ಲದಿದ್ದರೆ ವಾಚಾಕನು ಗ್ರಂಥವನ್ನು ಅನುಭವಿಸಲಾರ. ಈ ಮಾತು ಎಲ್ಲ ಕಲಾಭ್ಯಾಸಕ್ಕೂ, ಎಲ್ಲ ಆತ್ಮೋಪಾಸನೆಗೂ ಅನ್ವಯಿಸುವುದಾಗಿದೆ. ಒಂದಾನೊಂದು ಮಹಾವಿಷಯದ ಪೂರ್ಣಜ್ಞಾನ ನಮಗೆ ಉಂಟಾಗಬೇಕಾದರೆ ನಾವು ಆ ವಸ್ತುವಿನಲ್ಲಿ ಸೇರಿಕೊಳ್ಳಬೇಕು, ನಾವು ಆ ವಸ್ತುವಾಗಬೇಕು. ಇದೆ ತಲ್ಲೀನತೆ. ಈ ತಲ್ಲೀನತೆಯುಂಟಾಗುವುದು ಸ್ವಾಹಂಕಾರ ವರ್ಜನೆಯಿಂದ, ಸ್ವತಾವಿಸ್ಮೃತಿಯಿಂದ. ಸ್ವತಾವಿಸ್ಮೃತಿಯನ್ನುಂಟುಮಾಡುವ ಶಕ್ತಿ ಮಾಹಾಕಾವ್ಯದಲ್ಲಿಯೇ ಇರುತ್ತದೆ. ಆದರೆ ಅದರೊಡನೆ ಸಹಕರಿಸುವ ಯೋಗ್ಯತೆ ವಾಚಕನಲ್ಲಿರಬೇಕು.

4) ಯಥಾರ್ಥಗ್ರಹಣ: ಮೂರನೆಯ ಸೂತ್ರದಿಂದಲೇ ಸಿದ್ಧವಾಗುತ್ತದೆ ಮತ್ತೊಂದು ಸೂತ್ರ. ವಾಚಕನು ಕವಿಯ ವಾಕ್ಕನ್ನು ಯಥಾರ್ಥಬುದ್ಧಿಯಿಂದ ಗ್ರಹಿಸಬೇಕು. ಕಾವ್ಯವ್ಯಾಸಂಗಕಾಲದಲ್ಲಿ, ಆ ವ್ಯಾಸಂಗದ ಮಟ್ಟಿಗೆ, ಅವನು ತನ್ನ ಅಪನಂಬಿಕೆಗಳನ್ನೂ ಶಂಕೆಗಳನ್ನೂ ಬದಿಗಿರಿಸಬೇಕು. ಎಳೆಯ ಮಕ್ಕಳು ಅಜ್ಜಿ ಹೇಳುವ ಕಥೆಯನ್ನು ಅಕ್ಷರಕ್ಷರವೂ ಯಥಾರ್ಥವೆಂದು ಗ್ರಹಿಸಿ ಹೂಂಗುಟ್ಟುವಂತೆ ನಾವು ವಾಲ್ಮೀಕಿಯ ಸನ್ನಿಧಿಯಲ್ಲಿ ನಡೆದುಕೊಳ್ಳಬೇಕು. ಶ್ರದ್ಧೆ ವಿಶ್ವಾಸಗಳಿಲ್ಲದಿದ್ದರೆ ಕಾವ್ಯದ ಕಾವ್ಯಾಂಶ ಹಾರಿ ಹೋಗುತ್ತದೆ. ಬೆಂಕಿಯಮೇಲಿನ ಕಾವಲಿಯಲ್ಲಿ ಹಾಕಿದ ಹೂವಿನ ಸುವಾಸನೆಯಂತೆ.

5) ಪ್ರವಾಹಾರ್ಥದೋರಣೆ: ಕಾವ್ಯಪದಗಳ ಧೋರಣೆಯ ಅರ್ಥವನ್ನು ದೃಷ್ಟಿಯಲ್ಲಿರಿಸಿಕೊಳ್ಳಬೇಕು. ಪದಪದವನ್ನೂ ಅಕ್ಷರಕ್ಷರವನ್ನೂ ವಿಂಗಡಿಸಿ ನೋಡಬಾರದು. ಕಮಲದ ಹೂವಿನಲ್ಲಿ ಸಾವಿರ ರೇಕು ಇರುತ್ತದೆ. ಒಂದೊಂದು ರೇಕಿಗೂ ಏನು ಅರ್ಥ? ಏನು ತಾತ್ಪರ್ಯ?–ಎಂದು ಬಿಡಿಸಿ ನೋಡಿದರೆ ಹೂವಿನ ಸಮಗ್ರಸ್ವಾರಸ್ಯ ಹೋಯಿತು; ಪ್ರತ್ಯೇಕಾಂಶದಲ್ಲಿ ಸೌಂದರ್ಯವಿಲ್ಲ. ಮಹಾಕವಿಯ ವಾಗ್ಧೋರಣೆಯೇ ಒಂದು ಸೊಗಸು. ಆದರೆ ಮಳೆಗಾಲದಲ್ಲಿ ನದಿಯಲ್ಲಿ ಬಂದ ಮಹಾಪ್ರವಾಹದಂತಿರುತ್ತವೆ. ಅದರ ಒಟ್ಟನ್ನು ನೋಡಿ ಅದರ ಸೊಗಸನ್ನು ನಾವು ಅನುಭವಿಸಬೇಕು.

ಈಗ ಒಂದೆರಡು ಪ್ರಶ್ನೆಗಳ ವಿಚಾರ.

ಅಸಂಗತ ತರ್ಕ

ಕೆಲವು ವರ್ಷಗಳ ಕೆಳಗೆ ಒಬ್ಬ ಸ್ನೇಹಿತರಿಗೂ ನನಗೂ ನಡೆದ ಒಂದು ಚರ್ಚೆಯ ಭಾಗವನ್ನು ಇಲ್ಲಿ ಉದಾಹರಿಸುತ್ತೇನೆ. ಪ್ರ: ರಾಮನೂ ಆಂಜನೇಯನೂ ಮಾತನಾಡಿದರಂತಲ್ಲ. ಅದು ಯಾವ ಭಾಷೆಯಲ್ಲಿ?

ಉ: ಕನ್ನಡದಲ್ಲಿ.

ಪ್ರ: ನೀವು ಹಾಗೆ ಹೇಳಲು ಏನು ಆಧಾರ?

ಉ: ರಾಮಾಯಣ ಗ್ರಂಥವೇ ಆಧಾರ. ಅದರಲ್ಲಿ ಹೇಳಿದೆ, ರಾಮ ಆಂಜನೇಯರು ಸೇರಿದುದು ಕಿಷ್ಕಿಂಧೆಯಲ್ಲಿ ಎಂದು. ಕಿಷ್ಕಿಂಧೆಯಿರುವುದು ಕನ್ನಡ ದೇಶದಲ್ಲಿ. ಆದದ್ದರಿಂದ ಅವರು ಕನ್ನಡದಲ್ಲಿಯೇ ಮಾತನಾಡಿರಬೇಕು.

ಪ್ರ: ಹಾಗಾದರೆ ರಾಮನಿಗೆ ಕನ್ನಡ ಬರುತ್ತಿತ್ತು ಎನ್ನುತ್ತೀರಾ?

ಉ: ಹಾಗೆನ್ನುತ್ತೇನೆ.

ಪ್ರ: ಅಲ್ಲ ಸ್ವಾಮಿ, ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ. ಅಲ್ಲಿ ಕನ್ನಡ ಇತ್ತೆ?

ಉ: ಅಯೋಧ್ಯೆಯಲ್ಲಿ ಕನ್ನಡ ಇಲ್ಲದಿದ್ದರೂ ರಾಮನು ಕನ್ನಡ ಕಲಿತುಕೊಂಡಿರಬೇಕು. ನಿಮ್ಮ ಅಭಿಪ್ರಾಯವೇನು?

ಪ್ರ: ರಾಮನಿಗೆ ಸಂಸ್ಕೃತ ಬರುತ್ತಿತ್ತೆಂದು ಊಹಿಸುವುದು ಯುಕ್ತವಾಗಿದೆ. ಅವರಿಬ್ಬರೂ ಸಂಸ್ಕೃತದಲ್ಲಿಯೇ ಮಾತನಾಡಿದರೆಂದು ಹೇಳುವುದಾದರೆ ಆಂಜನೇಯನಿಗೆ ಸಂಸ್ಕೃತ ಬರುತ್ತಿತ್ತೆಂದು ಹೇಳಬೇಕಾಗುತ್ತದಲ್ಲ?

ಉ: ಹಾಗೆಯೇ ಹೇಳೋಣ. ಆಂಜನೇಯನಿಗೆ ಸಂಸ್ಕೃತ ಬರುತಿತ್ತೆನ್ನಲು ನಾನು ಯಾವಾಗಲೂ ಸಿದ್ಧನಾಗಿದ್ದೇನೆ!

ಪ್ರ: ಏನು ಸ್ವಾಮಿ, ಇದು ಹೇಗೆ ಹೊಂದಾವಣೆಯಾಗುತ್ತದೆ? ರಾಮನಿಗೆ ಸಂಸ್ಕೃತ ಬರುತ್ತಿರಬಹುದು. ಆಂಜನೇಯ ಶುದ್ಧ ಕಪಿ. ಅದಕ್ಕೆ ಸಂಸ್ಕೃತ ಬರೋಣವೆಂದರೇನು?

ಉ: ಸ್ವಾಮಿ, ನೀವು ಆಂಜನೇಯನು ಸಮುದ್ರ ಹಾರಿದ ಕಪಿ ಎಂಬುದನ್ನು ಮರೆತು ಬಿಟ್ಟಿದ್ದೀರಿ. ನಿಮ್ಮಂಥವರ ದೃಷ್ಟಿ ಒಂದು. ಬೇರೆ ಇನ್ನೊಂದು ದೃಷ್ಟಿಯುಂಟು. ರಾಮನೂ ಹನುಮಂತನೂ ದೈವಾಂಶದಿಂದುಂಟಾದವರು. ಅವರಿಗೆ ಭಾಷೆ ಕಲಿತು ಕೊಳ್ಳುವುದು ಅಸಾಧ್ಯವೆ? ಅವರಿಬ್ಬರೂ ಸಂಸ್ಕೃತ ಕನ್ನಡ ಮಾತ್ರವೇ ಅಲ್ಲ, ಹಿಂದಿ ಇಂಗ್ಲಿಷುಗಳನ್ನೂ ಕಲಿತುಕೊಳ್ಳುವ ಶಕ್ತಿಯಿದ್ದವರು. ತಮಿಳು, ತೆಲುಗು, ಮರಾಠಿ, ಗುಜರಾತಿಗಳನ್ನೂ ಕಲಿತುಕೊಳ್ಳಬಲ್ಲವರು.

ಪ್ರ: ಹಾಗದರೆ ಏನು ನಿಷ್ಕರ್ಷೆ?

ಉ: ನಿಷ್ಕರ್ಷೆ ಇಷ್ಟು: ಅವರಿಬ್ಬರೂ ತಮಗಿಬ್ಬರಿಗೂ ಬರುತ್ತಿದ್ದ ಯಾವುದೋ ಭಾಷೆಯಲ್ಲಿ ಮಾತನಾಡಿದರು. ಇಲ್ಲಿ ನಮಗೆ ಮುಖ್ಯವಾದದ್ದು ಅವರು ಯಾವ ಭಾಷೆಯಲ್ಲಿ ಮಾತನಾಡಿದರೆಂಬುದಲ್ಲ; ಏನನ್ನು ಮಾತನಾಡಿದರೆಂಬುದು. ಅವರು ಪರಸ್ಪರ ತಿಳಿಸಬೇಕಾಗಿದ್ದ ಸಂಗತಿ ಯಾವುದು? ಅದನ್ನು ಯಾವ ಮರ್ಯಾದೆಯಿಂದ, ಎಂಥ ನವುರಿನಿಂದ ತಿಳಿಸಿದರು?–ಇದು ನಮಗೆ ಮುಖ್ಯ. ಭಾಷೆಯ ಪ್ರಶ್ನೆ ಇಲ್ಲಿ ಸಂಪೂರ್ಣವಾಗಿ ಅಸಂಗತ.

ರಸಭಂಗ

ಈಗ ವ್ಯಾಸಂಗಿಗಳಲ್ಲಿ ಒಂದು ಬಿನ್ನಹ ಮಾಡಬೇಕಾಗಿದೆ: ಕಾವ್ಯೋಪಾಸನೆಯ ನಡುವೆ ಇಂಥ ತರ್ಕಗಳನೆತ್ತಬಾರದೆಂಬುದು. ನಮ್ಮ ವ್ಯಾಖ್ಯಾನಕರ್ತರೇ ಈ ನಿಯಮವನ್ನು ಉಲ್ಲಂಘಿಸಿ ರಸಭಂಗಕ್ಕೆ ಅವಕಾಶಮಾಡಿದ್ದಾರೆ. ಹೀಗೆ ತರ್ಕದಿಂದ ರಸಭಂಗಮಾಡುವುದು ಕವಿಯ ಅಪರಾಧವೆಂದು ನಾನೆಣಿಸಿದ್ದೇನೆ.

ಕಾವ್ಯವು ಮನುಷ್ಯ ಜೀವನದ ರಸಸನ್ನಿವೇಶದರ್ಶನ. ಮಹಾಕಾವ್ಯವು ಒಂದು ಮಹಾ ಜೀವನದ ಒಂದು ಮಹಾರಸಸನ್ನಿವೇಶದ ದರ್ಶನ. ಶಕುಂತಲೆ ಋಷ್ಯಾಶ್ರಮದಿಂದ ಗಂಡನ ಮನೆಗ ಹೋಗುವ ಸಂದರ್ಭದಲ್ಲಿ ಕಣ್ವರು ಆಶ್ರಮದ ಗಿಡಬಳ್ಳಿಗಳು ಆಕೆಗೆ ಅನುಜ್ಞೆಕೊಡಬೇಕೆಂದು ಬೇಡಿದರಂತೆ. ಗಿಡಬಳ್ಳಿಗಳು ದುಃಖಿಸುವುದೆಂದರೇನು? ಅನುಜ್ಞೆ ಕೊಡುವುದೆಂದರೇನು? ಯಕ್ಷನು ಮೇಘವನ್ನು ದೂತನಾಗೆಂದು ಹೇಳುವುದೆಂದರೇನು? ಮೇಘಕ್ಕೆ ಹೃದಯಭಾವಗಳುಂಟೆ? ಇಂಥ ಪ್ರಶ್ನೆಗಳನ್ನು ಚರ್ಚಿಸುವವರು ಅಕೌಂಟೆನ್ಸಿ ಪರೀಕ್ಷೆಗೆ ಹೋಗಬೇಕು, ಕಾವ್ಯವ್ಯಾಸಂಗಕ್ಕಲ್ಲ. ಅಚೇತನದಲ್ಲಿ ಚೈತನ್ಯವನ್ನು ಆರೋಪಿಸಿ ಅದು ಸಚೇತನವಾಗಿದ್ದಿದ್ದರೆ ಹೇಗೆ ನಡೆದಿದ್ದಿರಬಹುದೋ ಹಾಗೆ ನಡೆಯಿತೆಂದು ಭಾವಿಸಿಕೊಳ್ಳುವುದು ಕವಿಪ್ರಪಂಚಕ್ಕೆ ಸಹಜವಾದ ರೀತಿ.

ಕಪಿಲೋಕಸೃಷ್ಟಿ ಏಕೆ?

ಇದಕ್ಕಿಂತ ಹೆಚ್ಚು ಕಚಕುಳಿಯಿಡುವ ಪ್ರಶ್ನೆ ಬೇರೆ ಇದೆ. ವಾಲ್ಮೀಕಿಗಳು ತಮ್ಮ ಪ್ರಪಂಚದೊಳಕ್ಕೆ ಕಪಿಲೋಕವನ್ನು ಏಕೆ ತಂದುಕೊಂಡರು? ಆ ಕಡೆ ಅಯೋಧ್ಯೆಯಲ್ಲಿಯೂ ಮಿಥಿಲೆಯಲ್ಲಿಯೂ ಮನುಷ್ಯಲೋಕ. ಅದು ಸಹಜವಾದದ್ದು. ನಾವೆಲ್ಲ ಅದನ್ನು ಒಪ್ಪಿಕೊಳ್ಳುತ್ತೇವೆ. ಇತ್ತಕಡೆ ದಂಡಕಾರಣ್ಯದಲ್ಲಿಯೂ ಲಂಕೆಯಲ್ಲಿಯೂ ರಾಕ್ಷಸಲೋಕ. ರಾಕ್ಷಸರೆಂಬ ಪ್ರಾಣಿವರ್ಗವಿದ್ದದ್ದನ್ನು ವೇದದಲ್ಲಿ ಹೇಳಿದೆ. ಮತ್ತು ಗುಣದಲ್ಲಿ ರಾಕ್ಷಸರನ್ನು ಹೋಲುವಂಥ ಮನುಷ್ಯಜಾತಿ ಇರುವುದನ್ನು ನಾವು ಕಣ್ಣಾರ ಕಾಣುತ್ತಿದ್ದೇವೆ. ಆದದ್ದರಿಂದ ರಾಕ್ಷಸಲೋಕವನ್ನು ಒಪ್ಪಿಕೊಳ್ಳೋಣ. ಆದರೆ ಮನುಷ್ಯರಿಗೂ ರಾಕ್ಷಸರಿಗೂ ನಡುವಣ ವಾನರಲೋಕ ಮಿಕ್ಕೆರಡು ಲೋಕಗಳ ವ್ಯಾಪಾರಗಳನ್ನೂ ಪ್ರವೇಶಿಸಿ ಅವಾಂತರ ಮಾಡಿದ್ದು ಎಲ್ಲಿಯ ಯೋಜನೆ! ವ್ಯಾಸರ ಕಲ್ಪನೆಯಲ್ಲಿ ಇಂಥಾದ್ದಿಲ್ಲ. ಈ ವಿಲಕ್ಷಣ ಲೋಕವನ್ನು ವಾಲ್ಮೀಕಿಗಳು ಏಕೆ ಸೃಷ್ಟಿಮಾಡಿದರು? ಕಪಿಗಳೆಲ್ಲಿಯಾದರೂ ಮನಷ್ಯರ ಸಂತೋಷದಲ್ಲಿಯಾಗಲಿ ದುಃಖದಲ್ಲಿಯಾಗಲಿ ಪಾಲುದಾರರಾಗುವುದುಂಟೆ? ವಾನರನು ನರನೊಡನೆ ಸುಖದುಃಖ ಸಹಭಾಗಿಯಾದದ್ದುಂಟೆಂಬುದನ್ನು ನಾವು ಒಪ್ಪಿದ ಮೇಲೆ ನರಭಾಷೆಯನ್ನು ವಾನರನು ಕಲಿತನೆಂಬುದು ಅಸಾಧ್ಯದ ಮಾತಾಗಲಾರದು. ಆದರೆ ಮನುಷ್ಯರ ನೀತಿನಿಯಮಗಳನ್ನೂ ಉತ್ಸಾಹ ವಿಷಾದಗಳನ್ನೂ ಅನುಭವಿಸಿ ನಡೆದುಕೊಂಡ ವಾನರರು ಆಂಜನೇಯ ಸುಗ್ರೀವಾದಿಗಳು. ಇದು ಚೋದ್ಯದ ಸಂಗತಿ.

ಇಲ್ಲಿ ಉತ್ತರ ಕೊಡಲು ನಮಗೆ ಸಹಾಯಮಾಡುವ ಶಕ್ತಿ ಉಹಾಪೋಹನವೊಂದೇ, ಗ್ರಂಥ ಪ್ರಮಾಣವೇನೂ ಕಾಣುವುದಿಲ್ಲ. ವಾಲ್ಮೀಕಿಗಳು ಸ್ವೋಪಜ್ಞತೆಯಿಂದ ಮಾಡಿದ ಸೃಷ್ಟಿ ಕಪಿರಾಜ್ಯ. ಭಾರತ ಕಥೆಯಲ್ಲಿ ವ್ಯಾಸರು ನಾಗಲೋಕವನ್ನೂ ಪ್ರಮೀಳಾಲೋಕವನ್ನೂ ತಮ್ಮ ಪ್ರಪಂಚದೊಳಕ್ಕೆ ತಂದಿದ್ದಾರೆ. ಆ ಲೋಕಗಳ ಕ್ಷಣವುಳ್ಳ ಜನಾಂಗಗಳು ವಾಸ್ತವವಾಗಿ ಉಂಟೆಂದು ಚಾರಿತ್ರಿಕರೂ ವಂಶತತ್ವವಿಜ್ಞಾನಿಗಳೂ ಹೇಳುತ್ತಾರೆ. ಆದರೆ ಕಪಿಜನಾಂಗವು ವಾಸ್ತವಿಕವೆಂಬುದಕ್ಕೆ ಅಂಥ ಸಮರ್ಥನೆಯೇನೂ ಕಾಣುವುದಿಲ್ಲ. ವಾಲಿಸುಗ್ರೀವರ ಲೋಕವು ಸಂಪೂರ್ಣವಾಗಿ ವಾಲ್ಮೀಕಿಗಳ ನಿರ್ಮಾಣವೆಂದು ತೋರುತ್ತದೆ. ಕಿಷ್ಕಿಂದೆಯು ವಾಲ್ಮೀಕಿಗಳ ಖಯಾಲಿಯಿಂದ (Fancy) ಉತ್ಪನ್ನವಾದದ್ದು. ಮನುಷ್ಯಲೋಕವನ್ನು ಕೊಂಚ ಹೇಳನಮಾಡಬೇಕೆಂದು ವಾಲ್ಮೀಕಿಗಳಿಗೆ ಅನ್ನಿಸಿರಬೇಕು. ನಮ್ಮ ಕಾಲದಲ್ಲಿ ಸಮಾಜಶ್ರೇಷ್ಠರೆನಿಸಿಕೊಂಡವರಲ್ಲಿ ನಾಯಿಮರಿಯನ್ನು ಸಾಕುವ ಫ್ಯಾಷನ್‍ ಬೆಳೆದಿದೆಯಷ್ಟೆ? ನಾಯಿಗೆ ಇದೆಷ್ಟು ದೊಡ್ಡತನವೆಂದು ಅವರನ್ನು ಕೇಳಿದರೆ ಅವರು ಹೇಳುತ್ತಾರೆ: “ಮನುಷ್ಯನಿಗಿಂತ ಶ್ರೇಷ್ಠವಾದ ಪ್ರಾಣಿ ನಾಯಿ; ನಾಯಿ ಸತ್ಯಸಂಧವಾದದ್ದು; ನಾಯಿಯಲ್ಲಿರುವ ಕೃತಜ್ಞತೆಯ ಗುಣ ಮನುಷ್ಯನಲ್ಲೆಲ್ಲಿದೆ?” –ಎಂದು. ಹೀಗೆ ಒಂದು ದೃಷ್ಟಿಯಿಂದ ನಾಯಿ ಉತ್ತಮ ಜಂತುವೆಂದು ಹೇಗೆ ಒಪ್ಪಿಕೊಳ್ಳಲಾಗುತ್ತದೋ ಹಾಗೆಯೇ ಇನ್ನೊಂದು ದೃಷ್ಟಿಯಿಂದ ಕಪಿಯು ಮನುಷ್ಯನಿಗಿಂತ ಉತ್ತಮವಾದದ್ದೆಂದು ಕಿಷ್ಕಿಂಧಾಕಾಂಡದ ಕಥೆಯಿಂದ ತೋರುತ್ತದೆ.

ಯಾಂತಿ ನ್ಯಾಯಪ್ರವೃತ್ತಸ್ಯ
ತಿರ್ಯಂಚೋಽಪಿ ಸಹಾಯತಾಮ್‍ ।
ಅಪಂಥಾನಂ ತು ಗಚ್ಛಂತಂ
ಸೋದರೋಽಪಿ ವಿಮುಂಚತಿ ॥

ನ್ಯಾಯಕ್ಕೆ ತಿರ್ಯಗ್ಜಂತುಗಳೂ ಸಹಾಯಮಾಡುತ್ತವೆ. ಉದಾಹರಣೆ, ಕಿಷ್ಕಿಂಧೆಯ ಕಪಿಗಳು. ದುರ್ಮಾರ್ಗಿಯಾದವನನ್ನು ಒಡಹುಟ್ಟಿದವನೂ ತೊರೆದುಬಿಡುತ್ತಾನೆ. ಉದಾಹರಣೆ, ವಿಭೀಷಣ.

ಇಂಥ ಅಭಿಪ್ರಾಯವೂ ವಾಲ್ಮೀಕಿಗಳ ಮನಸ್ಸಿನಲ್ಲಿತ್ತೆಂದೂ ಅನ್ನಿಸುತ್ತದೆ. ಮನುಷ್ಯ ಜಾತಿಯವರು ತಾವು ಮಾತ್ರವೇ ಧರ್ಮಜ್ಞರು, ನ್ಯಾಯಾನ್ಯಾಯ ವಿವೇಕಿಗಳು–ಎಂದು ಜಂಬಪಟ್ಟುಕೊಳ್ಳಬೇಕಾಗಿಲ್ಲ. ಧರ್ಮವಿವೇಕವೂ ನ್ಯಾಯದೃಷ್ಟಿಯೂ ಮನುಷ್ಯರಿಗಿಂತ ಕೆಳಗಿನವರೆನಿಸಿಕೊಂಡಿರುವ ಕಪಿಗಳಲ್ಲಿಯೂ ಇರುತ್ತದಂತೆ. ಕಪಿಗಳ ನ್ಯಾಯತತ್ಪರತೆಯ ಸೂಚನೆ ರಾಮಾಂಜನೇಯರ ಪ್ರಥಮ ಸಮಾಗಮದಲ್ಲಿಯೇ ದೊರೆಯುತ್ತದೆ:

ಸುಗ್ರಿವೋ ನಾಮ ಧರ್ಮಾತ್ಮಾ
ಕಶ್ಚಿದ್ವಾನರಯೂಥಪಃ ॥ ಸರ್ಗ ೩, ಶ್ಲೋಕ ೨೦

ಇಂಥ ವಾಕ್ಯಗಳು ಪದೇ ಪದೇ ಬರುತ್ತದೆ. ಕಿಷ್ಕಿಂಧೆಯಲ್ಲಿ ಮನುಷ್ಯ ಸಮಾಜದಲ್ಲಿರುವಂತೆ ಮಾನಮರ್ಯಾದೆಗಳ ತಿಳಿವಳಿಕೆಯೂ ಸಭ್ಯ ನೀತಿಯ ಪರಿಜ್ಞಾನವೂ ಇತ್ತೆಂದು ಸ್ಪಷ್ಟವಾಗುತ್ತದೆ.

ಕವಿಯು ಇಂಥ ಮನುಷ್ಯರಾಜ್ಯ ಮತ್ತೊಂದನ್ನು ಕಲ್ಪನೆಮಾಡುವುದು ಕಷ್ಟವಾಗಿರಲಿಲ್ಲ. ದಶರಥನ ಕಾಲದಲ್ಲಿ ನಾನಾ ರಾಜ್ಯಗಳೂ ರಾಜಾಧಿರಾಜರುಗಳೂ ಬೇರೆ ಎಷ್ಟೋ ಇದ್ದರು. ಸೀತಾಸ್ವಯಂವರ ಕಾಲದಲ್ಲಿ ಮಿಥಿಲಾಪಟ್ಟಣದಲ್ಲಿ ಎಷ್ಟೋ ಮಂದಿ ರಾಜರುಗಳು ಅಹಮಹಮಿಕೆಯಿಂದ ನೆರೆದಿದ್ದರು. ಅಂಥ ಇನ್ನೊಬ್ಬ ರಾಜನನ್ನೂ ವಾಲ್ಮೀಕಿಗಳು ಸುಲಭವಾಗಿ ಕಟ್ಟಬಹುದಾಗಿತ್ತು. ಹಾಗಿಲ್ಲದೆ ಕಪಿರಾಜ್ಯವನ್ನು ಸೃಷ್ಟಿಮಾಡಿದ್ದು ವಾಲ್ಮೀಕಿಗಳ ಒಂದು ವಿಶೇಷ ಮನಃಪ್ರವೃತ್ತಿಯೆಂದು, ಅಥವಾ ಒಂದು ವಿಶೇಷ ಮನೋಲೀಲೆ ಎಂದು ಬಾವಿಸಬೇಕಾಗುತ್ತದೆ. ಮನುಷ್ಯ–ರಾಕ್ಷಸರ ನಡುವೆ ಒಂದು ವಿನೋದವನ್ನು ಕಲ್ಪಿಸುವುದು ಅವರ ತಾತ್ಪರ್ಯವಾಗಿದ್ದಿರಬಹುದು.

ಅಯೋಧ್ಯೆಯ ಕಥೆ ಹೃದಯಭೇದಕವಾದದ್ದು. ಲಂಕೆಯದಂತೂ ಭಯಂಕರವಾದದ್ದು. ಎರಡರ ನಡುವೆ ಕೊಂಚ ಮನಸ್ಸಿನ ಉದ್ವೇಗವನ್ನು ಇಳಿಸುವ ಒಂದು ರಚನೆ ಯುಕ್ತವೆಂದು ವಾಲ್ಮೀಕಿಗಳಿಗನ್ನಿಸಿರಬೇಕು. ಶ್ರೀರಾಮ ಕೂಡ ಹಾಸ್ಯಪ್ರಿಯನೆಂದು ಅಲ್ಲಲ್ಲಿ ಕಾಣಬರುತ್ತದೆ. ವಾಲ್ಮೀಕಿಗಳು ಒಂದು ಉಗ್ರವಾದ ಹಠವನ್ನು ತೊಟ್ಟು ಹುಬ್ಬು ಬಿಗಿದು ಔಡುಕಚ್ಚಿ ಕುಳಿತಿದ್ದವರೆಂದು ನನಗನ್ನಿಸುವುದಿಲ್ಲ. ಅವರು ಸೌಮ್ಯವುಳ್ಳವರು ಸರಳರು ವಿನೋದಪ್ರಿಯರು. ತಾವು ನಕ್ಕು ಇತರರನ್ನು ನಗಿಸುವುದರಲ್ಲಿ ಸಂತೋಷಪಡುವವರು. ವಿನೋದಕ್ಕಾಗಿ ಒಂದು ಮನೋಲೀಲೆಯಿಂದ ಅವರು ಕಪಿರಾಜ್ಯವನ್ನು ನಿರ್ಮಿಸಿರಬೇಕೆಂದು ನನಗನ್ನಿಸುತ್ತದೆ. ಇದಕ್ಕೆ ಇತರ ನಿದರ್ಶನಗಳೂ ಇವೆ. ಸುಂದರಕಾಂಡದಲ್ಲಿ ಆಂಜನೇಯನು ಕೃತಕೃತ್ಯನಾಗಿ ಹಿಂದಿರುಗಿದ ವಾರ್ತೆಯಿಂದ ಹರ್ಷಾವೇಶದಲ್ಲಿದ್ದ ಕಪಿಗಳು ಮಧುವನವನ್ನು ಧ್ವಂಸಮಾಡಿದ ವರ್ಣನೆಯನ್ನು ನೋಡಬಹುದು (ಸರ್ಗ ೬೨). ಹೀಗೆ ವಾಲ್ಮೀಕಿಗಳ ಮನಸ್ಸು ಮನುಷ್ಯಗರ್ವಭಂಗ, ಕಿಂಚಿದುಪಹಾಸ–ಈ ಎರಡು ಉದ್ದೇಶಗಳನ್ನೊಳಗೊಂಡು ಕಲ್ಪಿಸಿದ್ದು ಕಪಿರಾಜ್ಯ.

ಚರಿತ್ರೆಯಲ್ಲ

ಮೊದಲೇ ವಿಜ್ಞಾಪಿಸಿದ್ದೇನೆ. ಮಹಾಕಾವ್ಯವ್ಯಾಸಂಗಿಯು ಕಥಾಘಟನೆಗಳ ಸಾಧ್ಯಾಸಾಧ್ಯತೆಯ ವಿಷಯದಲ್ಲಿ ಉದಿಸುವ ಸಂದೇಹಗಳನ್ನೂ ಶಂಕೆಗಳನ್ನೂ ಬದಿಗಿರಿಸಬೇಕೆಂದು. ಕಾವ್ಯವು ಚರಿತ್ರೆ (History) ಅಲ್ಲ. ಕಾವ್ಯವು ಮುಖ್ಯವಾಗಿ ಅಂತರಂಗ ಪ್ರಪಂಚವನ್ನು ಕುರಿತದ್ದು, ಚರಿತ್ರೆಯು ಮುಖ್ಯವಾಗಿ ಬಹಿರಂಗಪ್ರಪಂಚವನ್ನು ಕುರಿತದ್ದು. ಚರಿತ್ರೆಗೆ ಬೇಕಾದದ್ದು ಸಾಮಾನ್ಯವಾದ ಮನುಷ್ಯಲೋಕ; ಮತ್ತು ಸಾಮಾನ್ಯ ಲೋಕದಲ್ಲಿ ಒಪ್ಪಿಕೆಗೆ ಬರುವ ರುಜುವಾತುಗಳು: ದಾಖಲೆಗಳು, ತಾರೀಖುಗಳು, ಕೈಫಿಯತ್ತುಗಳು, ಇತ್ಯಾದಿ. ಅಂತರಂಗಲೋಕದಲ್ಲಾದರೋ ಮುಖ್ಯವಾದವು ಅನುಭವಗಳು. ಕಪಿ ಹೇಗೆ ಸಂತೋಷಪಟ್ಟಿತು, ಅದರ ಸಂತೋಷವನ್ನು ಅದು ಹೇಗೆ ವ್ಯಕ್ತಪಡಿಸಿತು, ಅದನ್ನು ನೋಡಿದಾಗ ನೋಡಿದವರ ಮನಸ್ಸಿಗೆ ಏನನ್ನಿಸಿತು–ಹೀಗೆ. ಆದದ್ದರಿಂದ ಯಾರು ಮಹಾಕಾವ್ಯವು ಚಾರಿತ್ರಿಕವಾಗಿಲ್ಲವೆಂದು ಬೊಬ್ಬೆಯಿಡುತ್ತಾರೋ ಅವರು ಮಲ್ಲಿಗೆ ಹೂವಿನ ರಾಶಿಯಲ್ಲಿ ಗೊಬ್ಬರದ ಗುಣವಿಲ್ಲವೆಂದು ಕೊರಗುವವರು.

ಆಕಾರ ವಿಕಾರಗಳಿಗಿಂತ ಅಂತರಂಗಭಾವ ಮುಖ್ಯವೆಂದು ಸೂಚಿಸುವುದೂ ವಾಲ್ಮೀಕಿಗಳ ಆಶಯವಿದ್ದಿರಬಹುದು.

ಗುಣಾಃ ಪೂಜಾಸ್ಥಾನಂ ಗುಣಿಷು
ನ ಚ ಲಿಂಗಂ ನ ಚ ವಯಃ ॥

ಕಾವ್ಯವೆಂದರೆ ಜೀವನದರ್ಶನ; ಈ ದರ್ಶನದಲ್ಲಿ ಉಂಟಾಗುವ ರಸಸನ್ನಿವೇಶಗಳ ಅನುಭವ. ಮಹಾಕಾವ್ಯವೆಂದರೆ ಮಹಾಜೀವನದರ್ಶನ; ಮಹಾಜೀವನದಲ್ಲಿ ಕಾಣಲಾಗುವ ರಸಗಳ ಅನುಭವ. ಸೀತಾ ರಾಮ ಭರತ ಲಕ್ಷ್ಮಣಾದಿಗಳ ಮಹಾ ಪರೀಕ್ಷೆಗಳ ದರ್ಶನದಿಂದಲೂ ಆ ಪರೀಕ್ಷೆಗಳಿಗೆ ಅವರು ಪ್ರತ್ಯುತ್ತರರೂಪವಾಗಿ ತೋರಿಸುವ ಮಹಾಚರ್ಯೆಗಳಿಂದಲೂ ಹೊರಹೊಮ್ಮುವ ಮಹಾರಸಗಳ ಅನುಭವ.

ರಸವೆಂದರೇನು?

ರಸವೆಂಬುದು ನಮಗೆ ಇಷ್ಟವಾದ ಹೃದಯಾನುಭವವನ್ನು ಮಾಡಿಸಿಕೊಡಬಲ್ಲ ದ್ರವ್ಯವಿಶೇಷ. ನಾವು ಒಂದಾನೊಂದು ಸಂದರ್ಭವನ್ನು ಕಂಡಾಗ ಅಥವಾ ಕೇಳಿದಾಗ ನಮ್ಮ ಅಂತರಂಗದಲ್ಲಿ “ಅಯ್ಯೊ!” ಎಂದಾಗಲಿ, “ಆಹಾ!” ಎಂದಾಗಲಿ, “ಹೊಹೊ!” ಎಂದಾಗಲಿ, “ಭೇಷ್‍!” ಎಂದಾಗಲಿ ಎನ್ನುವಂತೆ ಮಾಡಿಸುವ ಸಂಗತಿ ಯಾವುದೋ ಅದು ರಸಮೂಲ. ಆ ವಿಶೇಷಗುಣ ಆ ಸಂದರ್ಭದಲ್ಲಿರುವುದರಿಂದಲೇ ನಮ್ಮ ಅಂತರಂಗದಲ್ಲಿ ಒಂದು ಚಲನೆಯುಂಟಾಗಿ, ಒಂದು ಜೀವನಪರಾಮರ್ಶೆ ಪ್ರಚೋದಿತವಾಗುತ್ತದೆ. ಅದೇ ರಸಾನುಭವ. ಎಲ್ಲಿ ಹೀಗೆ ಅಂತರಂಗವನ್ನು ಚುಚ್ಚುವ ಅಥವಾ ಕಲಕುವ ಅಥವಾ ಕೆಣಕುವ ಪ್ರೇರಣೆಯಿಲ್ಲವೋ ಅಲ್ಲಿ ರಸವಿಲ್ಲ.

ರಸವೆಂಬುದು ಬರಿಯ ಶಬ್ದಚಮತ್ಕಾರವಲ್ಲ. ಶಬ್ದಬಾಹುಳ್ಯವೂ ಅಲ್ಲ. ಅಥವಾ ವಾಕ್ಯರಚನೆಯ ವಿಶೇಷವೂ ಅಲ್ಲ. ಅದು ಹೃದಯಸ್ಪರ್ಶನಶಕ್ತಿಯುಳ್ಳ ದ್ರವ್ಯ. ಆ ದ್ರವ್ಯದ ಮೂಲಸ್ಥಾನ ಒಂದು ಮಾನುಷಸನ್ನಿವೇಶದಲ್ಲಿರುತ್ತದೆ. ಕವಿ ಆ ಸನ್ನಿವೇಶದ ಕಡೆಗೆ ನಮ್ಮ ದೃಷ್ಟಿಯನ್ನು ತಿರುಗಿಸುತ್ತಾನೆ. ಇದೇ ಅವನಿಂದ ನಮಗಾಗುವ ಉಪಕಾರ.

ಪಾತ್ರಾಭಿವ್ಯಕ್ತಿ

ಮಹಾಕಾವ್ಯದ ಮುಖ್ಯಸ್ವಾರಸ್ಯವಿರುವುದು ಅದರ ಪಾತ್ರಾಭಿವ್ಯಕ್ತಿಯಲ್ಲಿ (character development). ಅದರ ಚಾರಿತ್ರಿಕ (Historical) ಘಟನೆಯಲ್ಲಲ್ಲ; ಅದರ ವರ್ಣನೆಗಳಲ್ಲಲ್ಲ; ಶಬ್ದಚಮತ್ಕಾರದಲ್ಲೂ ವಾಗ್ಧಾಟಿಯಲ್ಲೂ ಅಲ್ಲ; ಅದರ ಮುಖ್ಯಪಾತ್ರಗಳ ಸ್ವಭಾವವಿಕಾಸದಲ್ಲಿ.

ಒಂದಾನೊಂದು ವಿಶೇಷ ಸಂದರ್ಭದಲ್ಲಿ ಒಬ್ಬ ಮಹಾಪುರುಷನ ಮನಸ್ಸು ಅದಕ್ಕೆ ಹೇಗೆ ಪ್ರತಿಹೇಳುತ್ತದೆ? ಇದು ವ್ಯಾಸಂಗಕ್ಕೆ ತಕ್ಕ ವಿಷಯ. ಹವಾಮಾನ ಶಾಲೆಯಲ್ಲಿ (Meteorological Observatory) ಒಂದು ಎತ್ತರವಾದ ಶಿಖರದಮೇಲೆ ಒಂದು ಹುಂಜದ ಆಕಾರದ (Weathercock) ಯಂತ್ರವನ್ನಿರಿಸಿರುತ್ತಾರೆ. ಆ ಯಂತ್ರವು ಸಾಮಾನ್ಯವಾಗಿ ಯಾವಾಗಲೂ ಸುತ್ತುತ್ತಿರುತ್ತದೆ–ಗಾಳಿ ಯಾವ ದಿಕ್ಕಿಗೆ ಬೀಸುತ್ತದೆಯೋ ಆ ಕಡೆಗೆ ಎಷ್ಟು ವೇಗದಿಂದ ಬೀಸುತ್ತದೆಯೋ ಅಷ್ಟು ರಭಸದಿಂದ; ಗಿರಗಿರನೆಯೋ ಮೆಲ್ಲಮೆಲ್ಲಗೋ ಸುತ್ತುತ್ತದೆ. ಆ ಹವಾಹುಂಜದ ಗತಿವೇಗಗಳಿಂದ ವಾಯು ಚಲನೆಯ ಗತಿವೇಗಗಳನ್ನು ಗೊತ್ತು ಮಾಡಲಾಗುತ್ತದೆ. ಮಹಾಕಾವ್ಯವು ಇಂಥ ಹವಾಹುಂಜಗಳ ಪ್ರದರ್ಶನಶಾಲೆ. ಕಷ್ಟ ಬಂದಾಗ, ಸಂಕಟ ಬಂದಾಗ, ಭಯ ಬಂದಾಗ, ಸತ್ತ್ವಪರೀಕ್ಷೆ ಬಂದಾಗ. ಜಯ ಬಂದಾಗ, ಸೋಲು ಬಂದಾಗ, ಯಾವ ಯಾವ ಕಥಾ ಪಾತ್ರ ವ್ಯಕ್ತಿ ಹೇಗೆ ಹೇಗೆ ಪ್ರತಿವರ್ತನೆ ತೋರುತ್ತದೆ? ಇದು ನಮ್ಮ ಗಮನದಲ್ಲಿರಬೇಕಾದ ಸಂಗತಿ.

ಕಾವ್ಯ–ಸತ್ಯ ಸಂಬಂಧ

ಕಾವ್ಯಕ್ಕೂ ಸತ್ಯಕ್ಕೂ ಏನು ಸಂಬಂಧ? ಇದನ್ನು ವಿಚಾರಮಾಡೋಣ. ಲೋಕ ವ್ಯವಹಾರದಲ್ಲಿ ಸತ್ಯವನ್ನು ಎರಡು ಪ್ರಕಾರಗಳಲ್ಲಿ ಕಾಣುತ್ತೇವೆ:

ಒಂದು ಬಹಿಷ್ಪ್ರಮಾಣದ್ದು: ತಾರೀಖು, ಗಂಟೆ, ಚಹರೆಯ ಪಟ್ಟಿ, ಅಳತೆ, ರುಜುವಾತು, ಸಾಕ್ಷ್ಯಗಳ ಕೈಫಿಯತ್ತು–ಇಂಥವುಗಳಿಂದ ಗೊತ್ತಾಗತಕ್ಕ ಸತ್ಯ. ಕೋರ್ಟುಗಳಲ್ಲಿ ನ್ಯಾಯನಿರ್ಣಯಕ್ಕೆ ಆಧಾರವಾದದ್ದು ಇಂಥ ಸತ್ಯ. ಕಳ್ಳತನದ ಆಪಾದನೆ ಹೊತ್ತಿರುವ ಮನುಷ್ಯನು ಕಳ್ಳ ಹೌದೊ, ಅಲ್ಲವೊ? ಆಪಾದಿತರು ಹೇಳಿದ ದಿನ ಆ ಹೊತ್ತಿನಲ್ಲಿ ಆ ಸ್ಥಳದಲ್ಲಿ ಅದೇ ಪದಾರ್ಥವನ್ನು ಅವನು ಕಳುವು ಮಾಡಿದ್ದು ರುಜುವಾತಾಗದೆ ಹೋದಲ್ಲಿ ಅವನು ಕಳ್ಳನಲ್ಲ. ಪಕ್ಕದ ಮನೆಯವರೂ ಹಿತ್ತಲುಕಡೆಯವರೂ ಅವನು ಕಳ್ಳತನ ನಡಸಿದ್ದನ್ನು ಸಾವಿರಸಲ ಕಂಡಿರಬಹುದು. ಆದರೂ ಅವನು ಸತ್ಯವಂತ. ಇದು ಒಂಬು ಬಗೆಯ ಸತ್ಯ. ನಮ್ಮ ಚರಿತ್ರೆಯ ಪುಸ್ತಕಗಳನ್ನು ಬರೆಯುವವರಿಗೆ ಬೇಕಾದದ್ದು ಈ ಸತ್ಯ. ಇದನ್ನು ವಾಸ್ತವಿಕ ಸತ್ಯವೆಂದು ಕರೆಯೋಣ.

ಎರಡನೆಯದು ಕಾಲ್ಪನಿಕ ಸತ್ಯ, ಇದು ಕವಿಕರ್ಮದ್ದು. ಹರಿಶ್ಚಂದ್ರ ಕಥೆ ವಾಸ್ತವಿಕವೋ ಅಲ್ಲವೊ. ಅದು ಕಾಲ್ಪನಿಕವೆಂದೇ ಇಟ್ಟುಕೊಳ್ಳೊಣ. ಆದರೆ ಅದರಲ್ಲಿ ನಕ್ಷತ್ರಿಕನು ಹರಿಶ್ಚಂದ್ರನನ್ನು ಹಿಂಸೆಮಾಡಿದ್ದಾಗಲಿ, ಚಂದ್ರಮತಿಯು ಮಗ ರೋಹಿತಾಶ್ವನ ಶವವನ್ನು ಹೊತ್ತು ಸ್ಮಶಾನಕ್ಕೆ ಬಂದದ್ದಾಗಲಿ ನಾಟಕಶಾಲೆಯಲ್ಲಿ ಕಣ್ಣ ಮುಂದೆ ಬಂದಾಗ ಕಣ್ಣೀರು ಬಿಡದವರು ಯಾರು? ದೃಶ್ಯ ಸಂಪೂರ್ಣ ಸತ್ಯವೆಂದು ಅನುಭವವಾದದ್ದರಿಂದಲೇ ಅಲ್ಲವೇ ಕಣ್ಣೀರು ಉಕ್ಕಿದ್ದು? ಹೀಗೆ ಕಾಲ್ಪನಿಕ ಸತ್ಯವು ಅಂತರಂಗದಲ್ಲಿ ರುಜುವಾತಿಗೆ ಬಂದರೆ ಅದು ಕಾವ್ಯದ ಸತ್ಯವಾಗುತ್ತದೆ.

ಕಾವ್ಯದಲ್ಲಿ ನಮಗೆ ಬೇಕಾದದ್ದು ವಾಸ್ತವಿಕ ಸತ್ಯವಲ್ಲ; ಪ್ರತ್ಯಕ್ಷ ಸತ್ಯವಲ್ಲ; ಆಂತರಂಗಿಕ ಸತ್ಯ, ಊಹನಲ್ಲಭ್ಯ ಸತ್ಯ. ಇದನ್ನೇ ಇಂಗ್ಲಿಷಿನಲ್ಲಿ “Verisimilitude of truth” ಎನ್ನುತ್ತಾರೆ. ಅದು ಸತ್ಯದ ಸಾದೃಶ್ಯ, ಸತ್ಯೌಪಮ್ಯ, ಸತ್ಯಪ್ರತೀತಿ.

ಇಂಥ ಸತ್ಯಪ್ರತೀತಿ ಕಾವ್ಯದಲ್ಲಿರದೆಹೋದರೆ ಅದು ಮನುಷ್ಯರಮೇಲೆ ಪ್ರಭಾವಶಾಲಿಯಾಗಲಾರದು. ಕಾವ್ಯದ ಬಲವೇ ಆ ಅಂತರ್ದೃಷ್ಟವಾದ ಸತ್ಯ. ಕಾವ್ಯಾಭ್ಯಾಸಿಗೆ ಬೇಕಾದದ್ದು ಇಂಥ ಅಂತರ್ದೃಷ್ಟಿ. ಅದರ ಒಂದು ರೂಪವೇ ಪ್ರತಿಭೆ. ಫೋಟೋ ಗ್ರಾಫ್‍ ಯಂತ್ರವು ವಸ್ತುವಿನ ಬಾಹ್ಯಾಕಾರವನ್ನು ಹೇಗೆ ಹಿಡಿಯಬಲ್ಲದೋ ಹಾಗೆ ಪ್ರತಿಭೆಯು ಒಂದು ಸಂದರ್ಭದ ಆಂತರ್ಯವನ್ನು ಗ್ರಹಿಸಬಲ್ಲದ್ದು.

ಒಂದು ವಿವಾದ

ಈಗ ಒಂದು ಪ್ರಸಿದ್ಧ ತಕರಾರಿನ ವಿಚಾರಕ್ಕೆ ಹೋಗೋಣ. ಅದು ಅನಿವಾರ್ಯವಾದ ತಕರಾರೆಂದು ನನಗನ್ನಿಸುವುದಿಲ್ಲ. ಪೌರಾಣಿಕರೂ ಹರಿಕಥಾಕಾರರೂ ಬೆಳಸಿದ ತಕರಾರು ಇದೆಂದು ನನಗನ್ನಿಸುತ್ತದೆ. ಶ್ರೀರಾಮನು ವಾಲಿಯನ್ನು ಕೊಂದದ್ದು ನೀತಿಯೇ? ಮೊದಲನೆಯದಾಗಿ, ರಾಮನು ಆ ಯುದ್ಧಕ್ಕೆ ಸಂಬಂಧಪಟ್ಟವನಲ್ಲ. ಎರಡನೆಯದಾಗಿ, ತಾನು ಅದರಲ್ಲಿ ಭಾಗವಹಿಸತಕ್ಕದ್ದೆಂಬುದನ್ನು ವಾಲಿಗೆ ತಿಳಿಯಪಡಿಸಿರಲಿಲ್ಲ. ಮೂರನೆಯದಾಗಿ, ವಾಲಿ ಬೇರೆ ಕಡೆ ಮುಖ ತಿರುಗಿಸಿದ್ದಾಗ ಅವನನ್ನು ಹೊಡೆದದ್ದು ಸರಿಯೆ? ಈ ಮೂರು ಸಂದರ್ಭಗಳೂ ಇನ್ನೂ ಎಷ್ಟೋ ಆ ಸಂದರ್ಭಗಳೂ ರಾಮನ ಮಹಾಪುರುಷತ್ವಕ್ಕೆ ಹಾನಿ ತರುತ್ತದೆ. ಆ ಹಾನಿಗಳಿಂದ ರಾಮನನ್ನು ರಕ್ಷಿಸಿ ಪಾರುಮಾಡಬೇಕೆಂಬುದು ನಮ್ಮ ಪೌರಾಣಿಕ ಕಥಕರುಗಳ ಮಹೋದ್ದೇಶ. ಕೆಲಮಂದಿ ವ್ಯಾಖ್ಯಾನಕಾರರುಗಳು ಈ ಮಹಾ ಪ್ರಯತ್ನಕ್ಕೆ ಸೇರಿದ್ದಾರೆ.

ಆದರೆ ರಾಮನಮೇಲೆ ಹೊರಿಸಬಹುದಾದ ಆಕ್ಷೇಪಣೆಗಳನ್ನು ವಾಲಿಯೇ ಹೊರಿಸಿದ್ದಾನೆ. ಅದಕ್ಕೆ ಹೇಳಬಹುದಾದ ಪ್ರತ್ಯುತ್ತರಗಳನ್ನು ರಾಮನೇ ಹೇಳಿದ್ದಾನೆ. ಈ ಸಮಾಧಾನವನ್ನು ವಾಲಿಯೂ ಅವನ ಸಂಬಂಧಿಗಳೂ ಅಂಗೀಕರಿಸಿದ್ದಾರೆ (ಸರ್ಗ ೧೮). ವಾಲಿಯೇ ರಾಮನಲ್ಲಿ ದೋಷವಿಲ್ಲವೆಂದು ಒಪ್ಪಿಕೊಂಡ ಮೇಲೆ ತಕರಾರು ಬೆಳಸುವುದಕ್ಕೆ ನಾವು ಯಾರು? ಈ ವಿಚಾರವನ್ನು ಇನ್ನೊಂದು ದೃಷ್ಟಿಯಿಂದ ನೋಡಬಹುದಾಗಿದೆ. ಪ್ರಶ್ನೆ ಕೇಳುವವರು ರಾಮನ ಮಹಾಪುರುಷತ್ವದ ದೃಷ್ಟಿಯಿಂದ ತಾನೆ ಹಾಗೆ ಕೇಳುವುದು? ಸಾಮಾನ್ಯ ಮನುಷ್ಯರು ಹಾಗೆ ನಡೆದುಕೊಂಡಿದ್ದಿದ್ದರೆ ಪ್ರಶ್ನೆಯೇಳುತ್ತಿರಲಿಲ್ಲ. ಅದು ಮನುಷ್ಯನಿಗೆ ಸ್ವಾಭಾವಿಕವಾದದ್ದೆಂದು ಉಪೇಕ್ಷೆ ಮಾಡಬಹುದಾಗಿತ್ತು. ಆದರೆ ರಾಮನು ಸಾಮಾನ್ಯ ಮನುಷ್ಯನಲ್ಲ; ಮಹಾಪುರುಷ, ಧೀರೋದಾತ್ತ. ಅಂಥವನು ಹೀಗೆ ಮಾಡಬಹುದೆ?

ಶ್ರೀರಾಮಚಂದ್ರನನ್ನು ಎರಡು ಬೇರೆ ಬೇರೆ ಪ್ರಸ್ಥಾನಗಳಿಂದ ನೋಡುವುದು ಪೂರ್ವದಿಂದ ಬಂದಿರುವ ವಾಡಿಕೆ;

1) ರಾಮನು ಮನುಷ್ಯತ್ವದಿಂದ ದೇವತ್ವಕ್ಕೆ ಹತ್ತಿದವನು. ತನ್ನ ಪ್ರಯತ್ನದಿಂದ ದೇವಸಮಾನತ್ವವನ್ನು ಸಂಪಾದಿಸಿದವನು.

2) ರಾಮನು ದೇವತ್ವದಿಂದ ಮನುಷ್ಯತ್ವಕ್ಕೆ ಇಳಿದವನು. ಮನುಷ್ಯತ್ವದ ಉಪಾಧಿಗಳನ್ನು ಮೀರಿದವನು. ಸಾಕ್ಷಾತ್‍ ಮಹಾವಿಷ್ಣು.

ಈ ಎರಡು ದೃಷ್ಟಿಗಳಲ್ಲಿ ಎರಡನೆಯ ದೃಷ್ಟಿಗೆ, ಎಂದರೆ ಸಾಕ್ಷಾತ್‍ ವಿಷ್ಣು ಎಂಬ ಅಭಿಪ್ರಾಯಕ್ಕೆ ವಾಲಿವಧೋಪಾಯಸಮರ್ಥನೆಯು ಕೊಂಚ ಕಷ್ಟವಾಗುತ್ತದೆ. ಆ ಕಷ್ಟದಿಂದ ರಾಮನನ್ನು ಪಾರುಮಾಡುವುದಕ್ಕಾಗಿ ಕೋರ್ಟಿನಲ್ಲಿ ಲಾಯರುಗಳು ವಾದಿಸುವಂತೆ ಪಾಯಿಂಟ್‍ ಒಂದು. ಪಾಯಿಂಟ್‍ ಎರಡು–ಎಂದು ಪ್ರತಿವಾದ ಹೇಳಿ ಚಮತ್ಕಾರ ವಿಜೃಂಭಣೆ ಮಾಡಬೇಕಾಗುತ್ತದೆ.

ಆದರೆ ರಾಮನು ಮೊದಮೊದಲು ಮನುಷ್ಯನಾಗಿದ್ದವನು ಎಂಬ ಕಕ್ಷಿಯವರಿಗೆ ವಾಲಿ ವಧಪ್ರಕರಣದಲ್ಲಿ ಅಸಂಗತವೇನೂ ಕಾಣುವುದಿಲ್ಲ. ಎಲ್ಲ ಸಾಮಾನ್ಯ ಮನುಷ್ಯರೂ ಎಂಥ ವಿವೇಕದಿಂದಲೂ ಎಂಥ ಉಪಾಯದಿಂದಲೂ ನಡೆದುಕೊಳ್ಳುತ್ತಿದ್ದರೋ ಅದರಂತೆಯೇ ರಾಮನು ನಡೆದ. ಸಂದರ್ಭದ ವಿವರಾಂಶಗಳನ್ನು ಮೊದಲು ಜ್ಞಾಪಕಕ್ಕೆ ತಂದು ಕೊಳ್ಳೋಣ.

ವಾಲಿವಧೆಯ ಪೌರ್ವಾಪರ್ಯ

ಆಂಜನೇಯಸ್ವಾಮಿ ಶ್ರೀರಾಮನಿಗೆ ಸುಗ್ರೀವನ ಪರಿಚಯವನ್ನು ಮಾಡಿಕೊಡುವ ಸಂದರ್ಭದಲ್ಲಿ ಹೇಳಿದ್ದು ಹೀಗೆ:

ಸ ಹಿ ರಾಜ್ಯಾತ್‍ ಪರಿಭ್ರಷ್ಟಃ
ಕೃತವೈರಶ್ಚ ವಾಲಿನಾ ।
ಹೃತದಾರೋ ವನೇ ತ್ಯಕ್ತಃ
ಭ್ರಾತ್ರಾ ವಿನಿಕೃತೋ ಭೃಶಮ್‍ ॥ ಸರ್ಗ ೪, ಶ್ಲೋಕ ೨೭

ಕರಿಷ್ಯಾತಿ ಸ ಸಾಹಾಯ್ಯಂ
ಯುವಯೋರ್ಭಾಸ್ಕರಾತ್ಮಜಃ ।
ಸುಗ್ರೀವಃ ಸಹ ಚಾಸ್ಮಾಭಿಃ
ಸೀತಾಯಾಃ ಪರಿಮಾರ್ಗಣೇ ॥ ಸರ್ಗ ೪, ಶ್ಲೋಕ ೨೮

ಶ್ರೀರಾಮನ ಸಮಸ್ತ ವರ್ತನೆಗೂ ತಳಹದಿ ಇಲ್ಲಿದೆ. ರಾಮನ ಮುಖ್ಯೋದ್ದೇಶ ಸೀತಾನ್ವೇಷಣ.

1) ಅದು ಆತನಿಗಿದ್ದ ಪ್ರಪ್ರಥಮ ಕರ್ತವ್ಯ.

2) ಅದಕ್ಕೆ ಆಗ ಬೇಕಾಗಿದ್ದ ಪ್ರಪ್ರಥಮ ಸಾಧನ ಸಮರ್ಥರಾದವರ ಸಹಾಯ.

3) ಅಂಥ ಸಹಾಯವನ್ನು ಕೊಡಲು ಪ್ರಪ್ರಥಮವಾಗಿ ಸಿದ್ಧನಾಗಿ ಬಂದವನು ಸುಗ್ರೀವ. ಆದದ್ದರಿಂದ ಸುಗ್ರೀವನನ್ನು ತೃಪ್ತಿಪಡಿಸುವುದು ಶ್ರೀರಾಮನಿಗೆ ಸ್ವಕರ್ತವ್ಯದ ಪ್ರಪ್ರಥಮಾಂಗವಾಯಿತು.

ರಾಮನು ಹೇಳಿದ ಉತ್ತರ:

ವಾಲಿನಂ ತಂ ವಧಿಷ್ಯಾಮಿ
ತವ ಭಾರ್ಯಾಪಹಾರಿಣಮ್‍ ॥ ಸರ್ಗ ೫, ಶ್ಲೋಕ ೨೭

ಹೀಗೆಂದು ಭಾಷೆಕೊಟ್ಟ. ಇದು ಅಗ್ನಿಸಾಕ್ಷಿಕವಾಗಿ ನಡೆಯಿತು. ಅವರು ಕೈಯಮೇಲೆ ಕೈಹಾಕಿ ಪ್ರಮಾಣ ಮಾಡಿಕೊಟ್ಟರು. ಈ ಒಪ್ಪಂದವೇ ರಾಮನ ಚರ್ಯೆಗೆ ಅಡಿಗಲ್ಲು.

ರಾಮನು ವಾಲಿಯ ಸಾಹಾಯ್ಯವನ್ನೇ ಪಡೆದುಕೊಳ್ಳಬಹುದಾಗಿತ್ತಲ್ಲ? ವಾಲಿಯು ತಾನು ರಾವಣನಿಗಿಂತ ಮಹಾಪರಾಕ್ರಮಿಯೆಂದೂ ಸೀತೆಯನ್ನು ತಾನೇ ತಂದು ಒಪ್ಪಿಸಬಲ್ಲೆನೆಂದೂ ಹೇಳಿದನಲ್ಲ? ಅಂಥವನನ್ನು ಬಿಟ್ಟು ರಾಮನು ಈ ದುರ್ಬಲನಾದ ಸುಗ್ರೀವನನ್ನೇ ಏಕೆ ಹಿಡಿಯಬೇಕಾಗಿತ್ತು? ಇದಕ್ಕೆ ಪ್ರತ್ಯುತ್ತರವಾದ ಮೂರು ಸಂಗತಿಗಳು ರಾಮನ ಮನಸ್ಸಿನಲ್ಲಿದ್ದಿರಬೇಕು:

1) ವಾಲಿ ಸಮರ್ಥನೇನೋ ಹೌದು. ಸೀತೆಯನ್ನು ಹುಡುಕಿ ತರುವ ಶಕ್ತಿ ಅವನಲ್ಲುಂಟು. ಆದರೆ ತನ್ನ ಶಕ್ತಿಯನ್ನು ಬೇರೆ ರೀತಿ ತಿರುಗಿಸುವ ಪ್ರವೃತ್ತಿಯೂ ಅವನಲ್ಲುಂಟು. ರಾವಣನು ಶಾಪಭೀತನಾಗಿ ಸೀತೆಯನ್ನು ಮುಟ್ಟುವ ಗೋಜಿಗೆ ಹೋಗಲಿಲ್ಲ. ವಾಲಿಗೆ ಅಂಥ ಭೀತಿಯೇನೂ ಇರಲಿಲ್ಲ.

2) ವಾಲಿಯಲ್ಲಿ ಚಾಪಲ್ಯವಿದ್ದದ್ದು ರುಜುವಾತಿಗೆ ಬಂದಿತ್ತು.

3) ಎಲ್ಲಕ್ಕಿಂತ ಮುಖ್ಯವಾಗಿ ಸುಗ್ರೀವನಿಗೆ ಆಗಲೇ ಮಾತು ಕೊಟ್ಟಿದ್ದಾಗಿತ್ತು. ಅವರ ಸ್ನೇಹ ಅಗ್ನಿ ಸಾಕ್ಷಿಕವಾದದ್ದು:

ಮರ್ಯಾದಾ ಬಧ್ಯತಾಂ ಧ್ರುವಾ ॥ ಸರ್ಗ ೫, ಶ್ಲೋಕ ೧೨

ಉಪಾಯವು ಗೌಣ

ಹೀಗೆ ಶ್ರೀರಾಮನು ತನ್ನ ಮಾತಿನಿಂದಲೇ ತನ್ನ ನಡವಳಿಕೆಯಿಂದಲೇ ಕಟ್ಟಿಗೊಳಪಟ್ಟಿದ್ದನು. ವಾಲಿವಧೆ ಹೀಗೆ ಅನಿವಾರ್ಯ ಕರ್ತವ್ಯವಾಯಿತು. ಇದಾದಮೇಲೆ ಉಪಾಯದ ವಿಚಾರ. ಉದ್ದೇಶವು ಮುಖ್ಯಪ್ರಶ್ನೆಯಾದ ಮೇಲೆ ಉಪಾಯವು ಗೌಣಪ್ರಶ್ನೆಯಾಗುತ್ತದೆ. ಉದ್ದೇಶವು ಅನಿವಾರ್ಯ; ಉಪಾಯವು ಐಚ್ಛಿಕ. ವಾಲಿಯ ಬಲಾಬಲಗಳನ್ನು ನಿರ್ಣಯಿಸುವುದೂ ತನ್ನ ಅನುಕೂಲಪ್ರತಿಕೂಲಗಳನ್ನು ನಿರ್ಣಯಿಸಿಕೊಳ್ಳುವುದೂ ರಾಮನ ಕರ್ತವ್ಯವಾಯಿತು. ಇಲ್ಲಿ ಸಂಗತವಾಗತಕ್ಕದ್ದು ಬೇರೊಬ್ಬರು ಮಾಡಿಟ್ಟ ನಿಯಮವಲ್ಲ; ತನ್ನ ಸ್ವಂತ ವಿವೇಚನೆ, ತನ್ನ ಸ್ವಂತ ನಯಚಿಂತನೆ, ಜಯಸಿದ್ಧಿಗೆ ಯಾವುದು ದಾರಿಯೋ, ಎಂಥ ಪ್ರಯತ್ನದಿಂದ ಬಲವ್ಯಯ ಕಡಮೆಯಾಗಿ ಲಾಭಸಂಪಾದನೆ ಹೆಚ್ಚೋ, ಎಂಥ ಉಪಾಯದಲ್ಲಿ ನಷ್ಟಭಯ ಕಡಮೆಯೋ, ಆದಾಯಸಂಭವ ಹೆಚ್ಚೋ ಅದನ್ನು ಆಲೋಚಿಸಬೇಕಾದದ್ದು ಕಾರ್ಯಮಾರ್ಗ. ಈ ವಿಚಾರ ನೀತಿತತ್ತ್ವದ್ದಲ್ಲ, ಕಾರ್ಯನಯದ್ದು. ಇದನ್ನು ಶ್ರೀರಾಮನು ಅನುಸರಿಸಿದ. ತನಗೆ ಶ್ರಮ ಕಡಮೆಯಾಗಬೇಕು. ಫಲ ಪೂರ್ಣವಾಬೇಕು. ಆಶಾಭಂಗದ ಸಂಭವ ಕಡಿಮೆಯಾಗಬೇಕು. ಉದ್ದೇಶಸಾಧನೆಯ ಸಂಭವ ಹೆಚ್ಚಾಗಬೇಕು. ಇದು ಲೋಕದಲ್ಲಿ ಎಲ್ಲ ಸಜ್ಜನರೂ ಸಂಭಾವಿತರೂ ಅಂಗೀಕರಿಸಿರುವ ಮಾರ್ಗ. ಇದನ್ನು ರಾಮನು ಅನುಸರಿಸಿದ.

ಆದದ್ದರಿಂದ ವಾಲಿವಧಪ್ರಕರಣದಲ್ಲಿ ಹೆಚ್ಚಿನ ತತ್ತ್ವಪ್ರಸಕ್ತಿಯೇನೂ ಇಲ್ಲ. ದೈವಾಂಶಪುರುಷನು ಸಾಮಾನ್ಯಪುರುಷನಂತೆ ನಡೆಯಬಹುದೆ?–ಎಂಬುದು ಒಂದು ಅತಿವಾದಿ ಪಕ್ಷದ ಪ್ರಶ್ನೆ. ನಮ್ಮ ಉತ್ತರ ಅವನು ಹಾಗೆ ನಡೆಯಬಹುದು ಮಾತ್ರವಲ್ಲ, ನಡೆಯಬೇಕು–ಎಂದು. ಶ್ರೀರಾಮನು ಸಾಮಾನ್ಯಪುರುಷರಂತೆಯೇ ಹಸಿದ; ಅವರಂತೆಯೇ ಊಟಮಾಡಿದ; ಅವರಂತೆಯೇ ನಕ್ಕ; ಅವರಂತೆಯೇ ಅತ್ತ. ಸಾಮಾನ್ಯ ಮನುಷ್ಯನು ತನ್ನ ಪ್ರಿಯೆಗಾಗಿ ಹಾತೊರೆಯುವಂತೆ ಅವನೂ ಹಾತೊರೆದ. ಅವನು ನೂರರಲ್ಲಿ ತೊಂಬತ್ತೊಂಬತ್ತು ಕಡೆ ಸಾಮಾನ್ಯನಂತೆ ನಡೆದದ್ದರಿಂದಲೇ ಅವನನ್ನು ಮಿಕ್ಕ ಒಂದು ವಿಷಯದಲ್ಲಿ ಅವನು ತಮಗಿಂತ ಉತ್ಕೃಷ್ಟೆನೆಂದು ಕಂಡುಕೊಂಡು ಅವನನ್ನು ಅನುಕರಣೀಯನೆಂದು ಅಂಗೀಕರಿಸಿದರು. ಅವನು ಮನುಷ್ಯತ್ವದಿಂದ ದೈವತ್ವಕ್ಕೆ ಹತ್ತಿದವನು.

ಅನೃತಾತ್ಸತ್ಯಮುಪೈಮಿ ।
ಮಾನುಷಾದ್ದೈವ್ಯಮುಪೈಮಿ ॥ -ತೈತ್ತಿರೀಯ ಬ್ರಾಹ್ಮಣ

ಸೀತಾರಾಮವೃತ್ತಾಂತದ ಕ್ಷೀರಪಾನದ ನಡುವೆ ವಾನರಪ್ರಕರಣವು ದ್ರಾಕ್ಷಿಯ ಕಾಳಿನಂತೆ–ಹುಳ್ಳಹುಳ್ಳಗೆ ಆದರೂ ಮಧುರದೊಡನೆ ಬೆರೆತುಕೊಳ್ಳುವ ಹುಳಿಯಾಗಿಯೂ ಮುಖ್ಯರಸ ಮಧುರವನ್ನು ಪ್ರಗುಣಿತಪಡಿಸಿ ತೋರಿಸುವುದಾಗಿಯೂ ಯಶಸ್ವಿಯಾಗಿದೆ.

ಎರಡು ಅನುಕರಣೀಯ ಗುಣಗಳು

ಕಿಷ್ಕಿಂಧಾಕಾಂಡದಲ್ಲಿ ಮನೋಹರಗಳಾದ ಪ್ರಕರಣಗಳು ಹತ್ತಾರಿವೆ. ಒಂದು ಪ್ರಕರಣವನ್ನು ಕುರಿತು ಒಂದು ಮಾತನ್ನು ವಿಶೇಷವಾಗಿ ಹೇಳಬಯಸುತ್ತೇನೆ. ಅದು ರಾಮ-ಹನುಮಂತರ ಪ್ರಥಮಪರಿಚಯ ಕಥೆ. ಆಂಜನೇಯಸ್ವಾಮಿಯು ಮಾತನಾಡಿದ ರೀತಿಯನ್ನು ಶ್ರೀರಾಮನು ಪ್ರಶಂಸೆ ಮಾಡಿರುವುದರಲ್ಲಿ ಎರಡು ಅಂಶಗಳು ನಮ್ಮ ದೃಷ್ಟಿಯಲ್ಲಿರಬೇಕಾದದ್ದು.

ಮೊದಲನೆಯದು ಆಂಜನೇಯನ ವಾಕ್ಯರೀತಿಯ ಔಚಿತ್ಯ:

ಅವಿಸ್ತರಮಸಂದಿಗ್ಧಂ
ಅವಿಲಂಬಿತಮದ್ರುತಮ್‍ ॥ ಸರ್ಗ೩, ಶ್ಲೋಕ ೩೧

ವಿಷಯವನ್ನು ಬೆಳಸಿಲ್ಲ. ಆದರೆ ಸಂಶಯಕ್ಕೆ ಅವಕಾಶ ಬಿಟ್ಟಿಲ್ಲ. ಮಾತುಗಳ ಉಚ್ಚಾರಣೆ ಬಹು ಸಾವಕಾಶವಲ್ಲ, ಬಹು ವೇಗವೂ ಅಲ್ಲ.

ಇದನ್ನು ನಮ್ಮ ಜನ ಗಮನವಿಟ್ಟು ನೋಡಬೇಕಾದದ್ದು. ನಮ್ಮಲ್ಲಿ ಕನ್ನಡದಲ್ಲಿ ಮಾತನಾಡುವವರು ಸಾಮಾನ್ಯವಾಗಿ ಮಾತಿನ ಕಡೆಯ ಅಕ್ಷರವನ್ನು, ಅದರಲ್ಲಿಯೂ ಕ್ರಿಯಾಪದದ ಕಡೆಯ ಅಕ್ಷರವನ್ನು, ನುಂಗಿಬಿಡುತ್ತಾರೆ.

ಪ್ರಶ್ನೆ: ಶಾಲೆಗೆ ಹೋಗಿದ್ದೆಯೋ?

ಉತ್ತರ: ಹೋ...

ಪ್ರಶ್ನೆ: ಆ?

ಉತ್ತರ: ಹೋಗಿ....

“ದ್ದೆ” ಎಂಬುದು ಹೊರಡುವುದೇ ಇಲ್ಲ.

ಒಂದೊಂದು ಅಕ್ಷರಕ್ಕೂ ಸಲ್ಲಬೇಕಾದ ಬೆಲೆಯುಂಟು. ಆಂಜನೇಯ ಸ್ವಾಮಿ ಹಾಗೆ ಒಂದೊಂದು ಅಕ್ಷರಕ್ಕೂ ಅದಕ್ಕೆ ತಕ್ಕ ಬೆಲೆ ಸಲ್ಲಿಸಿದವನಂತೆ. ಅಕ್ಷರಲೋಪ ಸ್ವರ ಲೋಪಗಳಿರಲಿಲ್ಲ.

ಇದು ರಾಮನಿಗೆ ಮೆಚ್ಚಿಕೆಯಾದ ಮೊದಲನೆಯ ಗುಣ.

ಎರಡನೆಯ ಗುಣ ಆಂಜನೇಯನ ವಿನಯಪೂರ್ವಕವಾದ ನಯ:

ಏವಂ ಗುಣಗಣೈರ್ಯುಕ್ತಾಃ
ಯಸ್ಯ ಸ್ಯುಃ ಕಾರ್ಯಸಾಧಕಾಃ ।
ತಸ್ಯ ಸಿಧ್ಯಂತಿ ಸರ್ವಾರ್ಥಾಃ
ದೂತವಾಕ್ಯಪ್ರಚೋದಿತಾಃ ॥ ಸರ್ಗ ೩, ಶ್ಲೋಕ ೩೫

ಇಂಡಿಯ ದೇಶದ ಪರವಾಗಿ ಹೊರದೇಶಗಳಿಗೆ ರಾಯಭಾರಿಗಳನ್ನು ನಿಯಮಿಸಿ ಕಳುಹಿಸುವ ಅಧಿಕಾರಸ್ಥರು ಈ ಪ್ರಕರಣವನ್ನು ನಾಲ್ಕಾರು ಬಾರಿ ಮನನಮಾಡಿದರೆ ಒಳ್ಳೆಯದೆನ್ನಿಸುತ್ತದೆ. ಆಂಜನೇಯನು ಉಪಾಯಜ್ಞ. ಬಿಕ್ಷುವೇಷವನ್ನು ಧರಿಸಿ ಕಾಣಿಸಿಕೊಂಡ. ಕಾರ್ಯ ಸಿದ್ಧಿಯಾದ ಬಳಿಕ ಭಿಕ್ಷುರೂಪವನ್ನು ಬಿಟ್ಟು ಮತ್ತೆ ವಾನರನಾದ. ವೀರಸತ್ಯವಾದಿಗಳು ಈ ಸಂಗತಿಯನ್ನು ಮನನ ಮಾಡಬೇಕು. ಸತ್ಯವನ್ನು ಬಿಡಬಾರದು. ಆದರೆ ಸತ್ಯವೆಂಬ ಹೆಸರಿನಿಂದ ಕಾರ್ಯೋಪಾಯವನ್ನು ಮರೆಯಬಾರದು. ಸತ್ಯಕ್ಕೆ ವಿರೋಧವಲ್ಲದ ಉಪಾಯಕ್ಕೆ ಧಾರ್ಮಿಕ ಜೀವನದಲ್ಲಿ ಒಂದು ಸ್ಥಾನ ಅವಶ್ಯವಾಗುಂಟು. ಸತ್ಯಸಹಕಾರಿಯಾದ ಉಪಾಯವನ್ನು ಇಂಗ್ಲಿಷಿನಲ್ಲಿ ‘ಟ್ಯಾಕ್ಟ್‍’ (Tact) ಎಂದು ಕರೆಯುತ್ತಾರೆ. ಈ ನಯೋಪಾಯವಿವೇಕವಲ್ಲದಿದ್ದರೆ ವ್ಯವಹಾರದಲ್ಲಿ ಸತ್ಯಸಾಧನೆ ದುರ್ಲಭವಾದೀತು.

ಇದು ಕಿಷ್ಕಿಂಧಾಕಾಂಡದಲ್ಲಿ ಬಹು ಸುಂದರವಾದ ಪ್ರಕರಣ.

**********

ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮರವರು ಮಾಡಿರುವ ಕನ್ನಡ ಅನುವಾದವನ್ನು ನಾನು ಅಲ್ಲಲ್ಲಿ ಓದಿಸಿ ಕೇಳಿ ಆನಂದಿತನಾಗಿದ್ದೇನೆ. ಅವರು ನಾಲ್ಕಾರು ವ್ಯಾಖ್ಯಾನಗಳನ್ನು ಪರಿಶೀಲನೆ ಮಾಡಿ ಅರ್ಥನಿಷ್ಕರ್ಷೆ ಮಾಡಿದ್ದಾರೆ. ಅಂಥ ಸಂದರ್ಭಗಳಲ್ಲಿ ಒಂದೆರಡನ್ನು ಕುರಿತು ನಾವಿಬ್ಬರೂ ಅಭಿಪ್ರಾಯವಿನಿಮಯ ಮಾಡಿಕೊಂಡಿದ್ದೇವೆ. ನಾನು ವ್ಯಾಖ್ಯಾನಕಾರರಿಗೆ ಶರಣುಹೊಗುವವನಲ್ಲ. ಹೀಗೆ ನಾನು ವಿಜ್ಞಾಪನೆಮಾಡಿದ್ದನ್ನು ಶರ್ಮಾರವರು ಔದ್ಧತ್ಯವೆಂದು ಭಾವಿಸಲಿಲ್ಲ. ಅದು ನನ್ನ ಸುಯೋಗ. ಶರ್ಮಾರವರು ಸ್ವತಂತ್ರ ವಿಮರ್ಶಕರು; ಅನುವಾದದ ಕಾರ್ಯದಲ್ಲಿ ಶಬ್ದಕ್ಕಿಂತ ಅರ್ಥಪುಷ್ಠಿ, ರಸಪುಷ್ಟಿ ಹೆಚ್ಚಿನದೆಂದು ನಂಬಿದವರು. ಆದದ್ದರಿಂದ ಅವರ ಅನುವಾದವು ಸರ್ವರಿಗೂ ಉಪಾದೇಯವಾಗಿದೆ. ಇಂಥ ಒಳ್ಳೆಯ ಕನ್ನಡ ವಚನಸಾಹಿತ್ಯವನ್ನು ಅವರು ನಮ್ಮ ವಾಚಕರಿಗೆ ಒದಗಿಸಿಕೊಟ್ಟಿರುವುದಕ್ಕಾಗಿ ಅವರನ್ನು ನಾನು ಅಭಿನಂದಿಸುತ್ತೇನೆ.

ಶ್ರೀಮಾನ್‍ ಡಿ. ಸಿ. ಅನಂತರಾಮಯ್ಯನವರೂ ಅವರ ಸ್ನೇಹಿತರೂ ಈ ಪವಿತ್ರವೂ ಮಂಗಳಕರವೂ ಆದ ಕಾರ್ಯದಲ್ಲಿ ಉತ್ಸಾಹಗುಂದದೆ ಪೂರ್ಣಶ್ರದ್ಧೆಯಿಂದ ದುಡಿದಿದ್ದಾರೆ. ಅವರು ಪಟ್ಟಿರುವ ಶ್ರಮವು ಮಹಾಜನರ ಕೃಪೆಯಿಂದ ಸಾರ್ಥಕವಾದೀತೆಂದು ನಾನು ನಂಬಿಕೊಂಡಿದ್ದೇನೆ.

ಯುದ್ಧಕಾಂಡದ ಅನುವಾದವೂ ಅನಂತರ ಉತ್ತರಕಾಂಡದ ಅನುವಾದವೂ ಶ್ರೀರಾಮ ಚಂದ್ರಪ್ರಭುವಿನ ಕೃಪೆಯಿಂದ ಬೇಗನೆ ವಾಚಕರಿಗೆ ದೊರೆಯುವಂತಾಗಲಿ ಎಂದು ಹಾರೈಸುತ್ತೇನೆ.

ಹನುಮತ್ಸಮವೇತಾಯ
ಹರೀಶಾಭೀಷ್ಟದಾಯಿನೇ ।
ವಾಲಿಪ್ರಮಥನಾಯಾಸ್ತು
ಮಹಾಧೀರಾಯ ಮಂಗಲಮ್‍ ॥ (ಪಾರಾಯಣ ಶ್ಲೋಕ)

(೧೯೬೯)

No comments:

Post a Comment