Wednesday 10 January 2024

ಭಾಗ 6 - ಅಯೋಧ್ಯಾ ಕಾಂಡ - ಉತ್ತರಾರ್ಧ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ವಾಲ್ಮೀಕಿಪ್ರಪಂಚದಲ್ಲಿಯ ಮತ್ತೊಬ್ಬ ಆದರ್ಶ ವ್ಯಕ್ತಿಯೆಂದರೆ ಭರತ. ಭರತನ ತ್ಯಾಗ ದೊಡ್ಡದೋ ರಾಮನ ತ್ಯಾಗ ದೊಡ್ಡದೋ ನಿರ್ಧಾರ ಮಾಡುವುದು ಸುಲಭವಲ್ಲ. ವಾಲ್ಮೀಕಿ ಚಿತ್ರಿಸಿರುವ ಜಗತ್ತಿನಲ್ಲಿಯ ರಾಮ, ಸೀತೆ, ಲಕ್ಷ್ಮಣ, ಭರತ, ಆಂಜನೇಯ–ಈ ಐವರೂ ತ್ಯಾಗವೀರರು. ಅವರಲ್ಲಿ ಅತ್ಯುನ್ನತರಾರು? ನಾವು ಒಂದು ದೊಡ್ಡ ಕಾಡಿನಲ್ಲಿ ನಿಂತು ತಲೆಯೆತ್ತಿ ನೋಡಿದರೆ ವೃಕ್ಷಾಗ್ರಗಳು ಎಲ್ಲೆಲ್ಲೂ ಮುಗಿಲನ್ನು ಮುಟ್ಟುವಂತೆ ಕಾಣುತ್ತವೆ, ಅವುಗಳಲ್ಲಿ ಹೆಚ್ಚು ದೊಡ್ಡದು ಯಾವುದು? ಅವೆಲ್ಲವೂ ನಮಗಿಂತ ದೊಡ್ಡವೇ. ಒಂದು ಮಟ್ಟದವರೆಗೆ–ನಮ್ಮ ಕೈಗೆ ಎಟುಕುವಷ್ಟು ಎತ್ತರದವರೆಗೆ–ನಾವು ಬೇರೆ ವಸ್ತುವಿನ ಎತ್ತರವನ್ನು ಅಳೆಯಲಾಗುತ್ತದೆ. ಆ ಮಟ್ಟದಿಂದ ಮೇಲೆ ನಾಲ್ಕಾರು ಆಳುದ್ದಕ್ಕಿಂತ ಹೆಚ್ಚಾಗಿ ಮರವೋ ಬೆಟ್ಟವೋ ಬೆಳೆದಿದ್ದರೆ ಆ ಹೆಚ್ಚಿನ ಅಳತೆಯನ್ನು ಗೊತ್ತುಮಾಡುವುದು ನಮ್ಮ ಬರಿಯ ಕಣ್ಣುಗಳಿಗೆ ಶಕ್ಯವಾಗದು. ಮಹಾಪುರುಷರ ಸ್ವಭಾವದ ಔನ್ನತ್ಯವೂ ಹಾಗೆ ನಮ್ಮ ಅಳತೆಗೋಲಿನ ತಾರತಮ್ಯ ನಿರ್ಣಯಕ್ಕೆ ಸಿಕ್ಕಲಾರದು. ನಾವು ಆ ಎಲ್ಲ ಮೂರ್ತಿಗಳಿಗೂ ದೂರದಿಂದ ತಲೆಬಾಗಿ ಕೈಮುಗಿಯತಕ್ಕವರು.

ರಾಮನಿಗೆ ಕೋಸಲರಾಜ್ಯವು ಹಿಂದಿನ ಕುಲಸಂಪ್ರದಾಯದಿಂದ ತಾನಾಗಿ ಬರತಕ್ಕದ್ದಿತ್ತು. ದಶರಥನು ಆ ವಿಚಾರಕ್ಕೆ ಕೈಹಾಕದೆ ಇದ್ದಿದ್ದರೆ, –ಕೈಕೇಯಿಗೆ ಮಂಥರೆ ಹೇಳಿಕೊಡದೆ ಇದ್ದಿದ್ದರೆ, –ಆ ಆತುರ ವಾಗ್ದಾನದ ನಿಮಿತವಿಲ್ಲದೆಹೋಗಿದ್ದಿದ್ದರೆ, –ಕೋಸಲ ರಾಜ್ಯವು ಯಾರ ಪ್ರಯತ್ನವೂ ಇಲ್ಲದೆ, –ಯಾರ ಮಾತೂ ಬೇಕಿಲ್ಲದೆ, –ರಾಮನದಾಗುತ್ತಿತ್ತು. ಹೀಗೆ ದೇಶಸಂಪ್ರದಾಯದಿಂದ ತನ್ನದೇ ಆಗಿಬಂದಿದ್ದ ರಾಜ್ಯವನ್ನು ಸತ್ಯಪಾಲನೆಯ ನಿಯಮಕ್ಕೆ ತಾನಾಗಿ ತಲೆಬಾಗಿ ತ್ಯಾಗಮಾಡಿದವನು ರಾಮ.

ಭರತನಿಗಾದರೋ ರಾಜ್ಯವು ಎರಡುಸಾರಿ ಪ್ರದತ್ತವಾಗಿ ಬಂದಿತ್ತು, –ಮೊದಲು ತಾಯತಂದೆಯರ ಮಾತಿನಿಂದ; ಬಳಿಕ ರಾಮನ ಸ್ವಂತ ಮಾತಿನಿಂದ. ಹೀಗೆ ಪುನಃಪುನಃ ತನ್ನ ಪಾಲಿಗೆ ಬಂದದ್ದನ್ನು ಬಿಟ್ಟುಕೊಟ್ಟವನು ಭರತ. ಅಷ್ಟು ಮಾತ್ರವೇ ಅಲ್ಲ. ಶ್ರೀರಾಮನು ರಾಜ್ಯವನ್ನಂಗೀಕರಿಸದೆ ಅದನ್ನು ಭರತನೇ ಆಳತಕ್ಕದ್ದೆಂದು ಒತ್ತಾಯ ಪಡಿಸಿದಾಗ ಭರತನು ಸಿಂಹಾಸನವನ್ನೇರಿದನೆ? ಇಲ್ಲ. ಅವನು ರಾಮಪಾದುಕೆಯನ್ನು ರಾಮಲಾಂಛನವಾಗಿ ಗ್ರಹಿಸಿ, ಅದೇ ಪ್ರತ್ಯಕ್ಷ ರಾಮಮೂರ್ತಿ ಎಂಬಂತೆ ಅದನ್ನು ಗೌರವಿಸಿ, ಪೂಜಿಸಿ, ತನ್ನ ಆಡಳಿತವನ್ನು ಬೇರೊಬ್ಬ ಯಜಮಾನನಿಗೆ ಒಪ್ಪಿಸುವ ಕಾರಕೂನನಂತೆ ತನ್ನ ರಾಜ್ಯಕಾರ್ಯಗಳನ್ನು ರಾಮಪಾದುಕೆಗೆ ಒಪ್ಪಿಸಿ ರಾಜ್ಯನಿರ್ವಾಹಮಾಡಿದ. ಅದು ಲೋಕೋತ್ತರವಾದ ಕರ್ತವ್ಯನಿಷ್ಠೆಯ ಪ್ರಕರಣ.

ಯದಾ ಹಿ ಯತ್ಕಾರ್ಯಮುಪೈತಿ ಕಿಂಚಿತ್‍

ಉಪಾಯನಂ ಚೋವಹೃತಂ ಮಹಾರ್ಹಮ್‍ ।

ಸ ಪಾದುಕಾಭ್ಯಾಂ ಪ್ರಥಮಂ ನಿವೇದ್ಯ ಚಕಾರ ಪಶ್ಚಾದ್ಭರತೋ ಯಥಾವತ್‍ ॥ 

ರಾಜ್ಯದ ವೈಭವವನ್ನು ತೊರೆದು ರಾಜ್ಯದ ಭಾರವನ್ನು ಮಾತ್ರ ಹೊತ್ತವನು ಭರತ. ಅವನು ತಪಸ್ವಿ; ಆದರೆ ಕರ್ತವ್ಯನಿಷ್ಠನಾದ ತಪಸ್ವಿ. ಲೋಕವನ್ನೂ ಲೋಕವಿರಕ್ತಿಯನ್ನೂ ಸಮನ್ವಯಪಡಿಸಿಕೊಂಡಿದ್ದ ಮಹಾನುಭಾವ ಭರತ.

ಈಶಾವಾಸ್ಯೋಪನಿಷತ್ತಿನ–

“...ತೇನ ತ್ಯಕ್ತೇನ ಭುಂಜೀಥಾಃ... ।

ಕುರ್ವನ್ನೇವೇಹ ಕರ್ಮಾಣಿ ॥

ಜಿಜೀವಿಷೇಚ್ಭತಗ್ಂ ಸಮಾಃ ॥” 

ಈ ಉಪದೇಶವನ್ನು ಅನುಸರಿಸಿದವನು ಭರತ. ವೈರಾಗ್ಯ ಮತ್ತು ಇಹಜೀವನ–ಈ ಎರಡರ ಸಮರಸ ಸಮ್ಮೇಳನಾಭ್ಯಾಸವನ್ನು ತೋರಿಸಿದ್ದು ಭರತನ ಅಪೂರ್ವ ಮಾಹಾತ್ಮ್ಯೆ.

ಭರತನು ಶ್ರೀರಾಮಪಾದುಕೆಗಳನ್ನು ತಲೆಯಮೇಲೆ ಧರಿಸಿ ಅದರ ಕೀರ್ತಿಯನ್ನು ರಾಜ್ಯದಲ್ಲಿ ಘೋಷಿಸಿ, ಶ್ರೀರಾಮನ ಪುನರಾಗಮನದವರೆಗೂ ಯತಿಯಾಗಿ, ಕೃಶನಾಗಿ, ಭಕ್ತನಾಗಿ, ವಿನೀತನಾಗಿ, ಸತ್ಯಧರ್ಮನಿಷ್ಠನಾಗಿ ವ್ರತಪರಿಪೂರಣೆ ಮಾಡಿದ ಪ್ರಸಂಗಗಳ ವರ್ಣನೆ ಎಂಥವರಿಗಾದರೂ ಹೃದಯವನ್ನು ಕಲಕಿ ಕರಗಿಸಿ ಜೀವವನ್ನು ಜಾಲಾಡಿಸತಕ್ಕದ್ದಾಗಿದೆ.

೯೯ನೆಯ ಸರ್ಗದಿಂದ ೧೧೪ನೆಯ ಸರ್ಗದವರೆಗಿನ ಗ್ರಂಥವನ್ನು–ಕನ್ನಡ ಅನುವಾದವನ್ನೂ ಸಂಸ್ಕೃತ ಮೂಲವನ್ನೂ ಜೋಡಿಸಿಕೊಂಡು–ಒಂದು ಸಾರಿ ನೋಡಿದವರು ಮತ್ತೆ ಮತ್ತೆ ನೋಡಿಯಾರೆಂದು ನನಗೆ ನಂಬಿಕೆಯಿದೆ. ಅಲ್ಲಿಯ ಸನ್ನಿವೇಶಗಳೂ ಅಲ್ಲಲ್ಲಿಯ ಉಕ್ತಿ ಪ್ರತ್ಯುಕ್ತಿಗಳೂ ಅಷ್ಟು ಸುಂದರಗಳಾಗಿವೆ.

ಅಯೋಧ್ಯಾಕಾಂಡವು ಸೀತಾರಾಮರ ರಸಿಕಜೀವನ ಚಿತ್ರದಲ್ಲಿ ಪರಿಸಮಾಪ್ತವಾಗಿ ಮಂಗಳಕರವಾಗಿದೆ. ಅನಸೂಯೆಯು ಸೀತೆಯನ್ನು ಕುರಿತು ಹೇಳಿದಳಂತೆ: “ದೇವಿ, ರಾತ್ರಿಯು ರಮಣೀಯವಾಗಿದೆ. ಮೃಗಪಕ್ಷಿಗಳು ನಿದ್ದೆಹೋಗುವ ಹೊತ್ತು ಇದು. ಬೆಳದಿಂಗಳು ಹರ್ಷಪ್ರದವಾಗಿದೆ. ನೀನು ಶುಭಾಲಂಕಾರಗಳನ್ನು ಧರಿಸಿ ಶ್ರೀರಾಮನ ಬಳಿಯಲ್ಲಿರಲು ಮನಸ್ಸು ಮಾಡು.”

ಪುನಃ ಸೀತೆಯನ್ನು ನೋಡಿ ಹೀಗೆಂದಳು:

ಅಲಂಕುರು ಚ ತಾವತ್ತ್ವಂ

ಪ್ರತ್ಯಕ್ಷಂ ಮಮ ಮೈಥಿಲಿ ।

ಪ್ರೀತಿಂ ಜನಯ ಮೇ ವತ್ಸೇ

ದಿವ್ಯಾಲಂಕಾರಶೋಭಿತಾ ॥ 

ಶ್ರೀಸೀತಾರಾಮರ ಅನುಗ್ರಹದಿಂದ ವಾಚಕರು ಶ್ರೇಯೋಭಿವೃದ್ಧಿ ಪಡೆಯಲಿ. (೧೯೬೭)

No comments:

Post a Comment