Friday 12 January 2024

ಭಾಗ 7 - ಅರಣ್ಯಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಮಹರ್ಷಿ ಶುಶ್ರೂಷಾಸಕ್ತಂ ತದ್ವೈರಿಧ್ವಂಸನೋದ್ಯತಮ್‍ ।
ಜಾನಕೀವಿರಹಾರ್ತಂ ಶ್ರೀರಾಮಂ ನೌಮಿ ಸಲಕ್ಷ್ಮಣಮ್‍ ॥

ಅಯೋಧ್ಯಾಕಾಂಡವನ್ನು ರಾಮಾಯಣಗ್ರಂಥದ ಹೃದಯಭಾಗವೆಂದು ವರ್ಣಿಸುವುದುಂಟಷ್ಟೆ? ಅದೇ ರೂಪಕವನ್ನು ಮುಂದುವರಿಸಬೇಕೆನ್ನಿಸಿದರೆ, ಅರಣ್ಯಕಾಂಡವನ್ನು ರಾಮಾಯಣಹೃದಯದ ಅಂತರಂಗವೆನ್ನುವುದು ಯುಕ್ತವಾಗುತ್ತದೆ. ಹೃದಯಚಕ್ರದ ಹೊರಗಿನ ಸುತ್ತುಕಟ್ಟು ಅಯೋಧ್ಯಾಕಾಂಡದ ಕಥೆ. ಆ ಚಕ್ರದ ನಡುವಣ ನಾಭಿಕುಂಭ ಅರಣ್ಯಕಾಂಡದ ಕಥೆ.

ಈ ಎರಡು ಕಾಂಡಗಳು ಹೃದಯಭೇದಕಗಳಾದವು. ಅಯೋಧ್ಯಾಕಾಂಡದಲ್ಲಿ ಶ್ರೀರಾಮಮೂರ್ತಿಯೊಬ್ಬನು ನಮ್ಮ ಹೃದಯವಿದ್ರಾವಣಕ್ಕೆ ಕಾರಣಭೂತನಾದರೆ, ಅರಣ್ಯಕಾಂಡದಲ್ಲಿ ರಾಮಸೀತೆಯರಿಬ್ಬರಿಗಾದ ಘಟನೆಗಳೂ ಎದೆಯನ್ನು ಬಿರಿಯಿಸುವಂಥವು. ಸೀತೆಗೆ ಬಂದ ವಿಪತ್ತು ಹೆಚ್ಚು ಸಂಕಟಕರವಾದದ್ದೆಂದು ಕೆಲವರಿಗನ್ನಿಸಬಹುದು. ನಾನು ಅಂಥವರಲ್ಲೊಬ್ಬ.

ಎರಡು ಕಾಂಡಗಳಲ್ಲಿಯೂ ಇಬ್ಬರ ಸತ್ತ್ವಪರೀಕ್ಷೆಯೂ ಆಗುತ್ತದೆ. ಅಯೋಧ್ಯಾಕಾಂಡದಲ್ಲಿ ಎದ್ದು ಕಾಣುವ ಸಂಗತಿ ಶ್ರೀರಾಮನ ಸತ್ಯಶ್ರದ್ಧೆ ಮತ್ತು ತ್ಯಾಗಸಿದ್ಧತೆ. ಸಹಜವಾಗಿ ತನಗೆ ಬರಬೇಕಾಗಿದ್ದ ರಾಜ್ಯವನ್ನು ಆತನು ಸತ್ಯದ ಕಾರಣದಿಂದ ಪರಿಗ್ರಹಿಸಲೊಲ್ಲದೆ ವನವಾಸಕ್ಕೆ ತೆರಳಿದ. ಈ ವಿರಕ್ತಿ ಮಹೋದಾರವಾದದ್ದು. ಅರಣ್ಯಕಾಂಡದಲ್ಲಿ ಎದ್ದು ಕಾಣುವ ಸಂಗತಿ ಸೀತೆಯ ವ್ರತಪರಿಪಾಲನೆ ಮತ್ತು ಕಷ್ಟಸಹಿಷ್ಣುತೆ. ಆಕೆ ಎದುರಿಸಬೇಕಾಗಿದ್ದ ಸನ್ನಿವೇಶ ರಾಮನಿಗಿದ್ದುದಕ್ಕಿಂತ ಹೆಚ್ಚು ದಾರುಣವಾದದ್ದು.

ಅಯೋಧ್ಯಾಕಾಂಡದ ಪ್ರಸಂಗವಿಲ್ಲದೆ ರಾಮಾಯಣದ ಕಥಾರಂಭವಿಲ್ಲ. ಅರಣ್ಯಕಾಂಡವಿಲ್ಲದಿದ್ದರೆ ಕಥೆ ಅಲ್ಲಿಗೇ ಕುಂಟುಬೀಳುತ್ತಿತ್ತು. ವನವಾಸಕ್ಕಾಗಿ ಹೊರಟ ಶ್ರಿರಾಮನು ಹದಿನಾಲ್ಕು ವರ್ಷಗಳ ಕಾಲ ನಾನಾ ನದೀಪರ್ವತಗಳನ್ನೂ ನಾನಾ ಅರಣ್ಯಪ್ರದೇಶಗಳನ್ನೂ ನೋಡಿಕೊಂಡು ಪ್ರವಾಸ ಸಂತೋಷಭರಿತನಾಗಿ ಅಯೋಧ್ಯೆಗೆ ಹಿಂದಿರುಗಬಹುದಾಗಿತ್ತು. ಅದು ದೇಶಾಟನೆಯ ವೃತ್ತಾಂತ (Travelogue) ಆಗುತ್ತಿತ್ತು. ಶ್ರೀರಾಮನನ್ನೂ ಸೀತಾಲಕ್ಷ್ಮಣರನ್ನೂ ಮಹಾದೇಶಸಂಚಾರಿಗಳೆಂದು (Great Travellers) ಲೋಕದಲ್ಲಿ ಪರಿಗಣಿಸಲಾಗುತ್ತಿತ್ತು. ಅವರನ್ನು ಮಹಾವೀರಪಂಕ್ತಿಯಲ್ಲಿ ಗಣಿಸಲು ಕಾರಣವಿರುತ್ತಿರಲಿಲ್ಲ. ರಾಮಾಯಣದ ಮುಖ್ಯವಿಷಯ ರಾವಣ ವಿನಾಶ, ಅಥವಾ ಧರ್ಮವಿರೋಧಿಯ ದಂಡನೆ. ಇದಕ್ಕೆ ಕಾರಣವೊದಗಿದ್ದು ರಾವಣನು ಮಾಡಿದ ಸೀತಾಪಹರಣದಿಂದ. ಆದದ್ದರಿಂದ ಕಥೆಯ ಬೀಜಾಂಕುರ ಅರಣ್ಯಕಾಂಡದಲ್ಲಿದೆಯೆಂದಾಗುತ್ತದೆ.

ಹೀಗೆ ವಸ್ತುಸಂಗತಿಯನ್ನೂ ತತ್ತ್ವವನ್ನೂ ಆಲೋಚಿಸಿ ನೋಡಿದರೆ, ಕಾವ್ಯಕ್ಕೆ ತಕ್ಕ ಹೆಸರು ಸೀತಾಯನವೆಂಬುದು ನ್ಯಾಯವಾಗುತ್ತದೆ. ಜಾನಕೀದೇವಿಗೆ ಆ ವಿಪತ್ತು ಬಾರದೆ ಹೋಗಿದ್ದಿದ್ದರೆ, ಅಥವಾ ಆಕೆಯಲ್ಲಿ ಅಂಥ ವ್ರತನಿಷ್ಠೆ ಇಲ್ಲದೆಹೋಗಿದ್ದಿದ್ದರೆ ರಾಮಕಥೆಯ ದಾರಿ ಬೇರೆಯಾಗಬೇಕಾಗಿತ್ತು. ಕಥೆಯ ಲೋಕೋತ್ತರರೂಪಕ್ಕೆ ವಸ್ತುವನ್ನೊದಗಿಸಿದವಳು ಸೀತಾದೇವಿ.

ಹೀಗೆ ಹೇಳಿದ್ದರಿಂದ ಶ್ರೀರಾಮನ ಮಹತ್ತ್ವಕ್ಕೇನೂ ಕುಂದಾಗಲಾರದು. ಆತನು ಮಹಾಧೀರನೆಂಬುದು ಕಥಾರಂಭದಲ್ಲಿಯೇ ನಮಗೆ ಪ್ರತ್ಯಕ್ಷವಾಗಿದೆ. ಆತನು ಹಾಗಾಗದೆ ಸೀತಾವಿರಹಾನಂತರದಲ್ಲಿ ಬೇರೆ ರೀತಿ ನಡೆದುಕೊಂಡಿದ್ದಿದ್ದರೆ ಕಥಾಸರಣಿ ರಾಮಸರಣಿಯಾಗುತ್ತಿರಲಿಲ್ಲ. ಶ್ರೀರಾಮನ ಏಕಪತ್ನೀವ್ರತ ಲೋಕಪೂಜ್ಯವಾದದ್ದು ಸರಿ. ಆದರೆ ಅದೊಂದರಿಂದಲೇ ರಾಮಾಯಣಕಥೆಗೆ ಅದರ ಸಮಗ್ರರೂಪ ಬರುವುದಾಗುತ್ತಿರಲಿಲ್ಲ. ಹೀಗೆ ರಾಮನ ಮಹಾವಿಜಯಕ್ಕೆ ಅವಕಾಶ ದೊರೆತದ್ದು ಸೀತಾದೇವಿಯ ತಪಸ್ವಿತೆಯಿಂದ. ಆ ತಪಸ್ವಿದಂಪತಿಗಳಲ್ಲಿ ಆಕೆಯ ಮಹತ್ತ್ವ ಹೆಚ್ಚಿನದೆಂದು ನನಗನ್ನಿಸುತ್ತದೆ.

ಶ್ರೀರಾಮನ ಮುಖ್ಯ ಗುಣಗಳು ಸತ್ಯಶ್ರದ್ಧೆ, ಭೋಗವಿರಕ್ತಿ. ಸೀತಾದೇವಿಯ ಮುಖ್ಯ ಗುಣಗಳು ವ್ರತನಿಷ್ಠೆ, ಆತ್ಮ ಸಂಯಮ.

ಸೀತೆಯ ಅಂತರಂಗಸ್ವರೂಪ ನಮಗೆ ಅರಣ್ಯಕಾಂಡದ ಪ್ರಾರಂಭದಲ್ಲಿಯೇ ಗೋಚರವಾಗುತ್ತದೆ. ಶ್ರೀರಾಮನು ದಂಡಕಾರಣ್ಯದಲ್ಲಿ ನಾನಾ ಋಷ್ಯಾಶ್ರಮಗಳ ಸಂದರ್ಶನ ಮಾಡಿ ಶರಭಂಗಮುನಿಯ ಆಶ್ರಮಕ್ಕೆ ಬಂದಾಗ ಅಲ್ಲಿ ನೆರೆದಿದ್ದ ಋಷಿಗಳು ಶ್ರೀರಾಮನಿಗೆ ತಮ್ಮ ಕಷ್ಟಗಳನ್ನು ಹೇಳಿಕೊಂಡು ರಾಕ್ಷಸಬಾಧೆಯಿಂದ ತಮ್ಮನ್ನು ಕಾಪಾಡಬೇಕೆಂದು ಬೇಡಿಕೊಂಡರಷ್ಟೆ? (ಸರ್ಗ ೬, ಪುಟಗಳು ೩೧-೩೬). ಶ್ರೀರಾಮನು ಅದನ್ನು ಲಾಲಿಸಿ ಭರವಸೆ ಕೊಟ್ಟ ಮಾತಿನ ವಿನಯ ಆತನ ಸ್ವಭಾವವನ್ನು ವ್ಯಕ್ತಪಡಿಸುತ್ತದೆ (ಪುಟ ೩೫):

ನೈವಮರ್ಹಥ ಮಾಂ ವಕ್ತುಂ
ಆಜ್ಞಪ್ತೋಽಹಂ ತಪಸ್ವಿನಾಮ್‍ ।
ಕೇವಲೇನಾತ್ಮಕಾರ್ಯೇಣ
ಪ್ರವೇಷ್ಟವ್ಯಂ ಮಯಾ ವನಮ್‍ ॥ ಸ. ೬, ಶ್ಲೋ. ೨೨

“ನಿಮ್ಮಿಂದ ನನಗೆ ಬರುವ ಮಾತು ಬೇಡಿಕೆಯಲ್ಲ; ಆಜ್ಞೆ. ನಾನು ಸ್ವಕರ್ತವ್ಯವಶನಾಗಿ ಕಾಡಿಗೆ ಬಂದಿದ್ದೇನೆ. ದುಷ್ಟದಂಡನೆ ನನಗೆ ಕರ್ತವ್ಯವಾಗಿಯೇ ಇದೆ.”

ಶ್ರೀರಾಮನು ಹೀಗೆ ದೀಕ್ಷೆ ಕೈಕೊಂಡಮೇಲೆ ಅದಕ್ಕಾಗಿ ಶಸ್ತ್ರಾಸ್ತ್ರಧಾರಣ ಮಾಡತಕ್ಕದ್ದು ಅವಶ್ಯವಾಯಿತು. ಅದರಂತೆ ಶರಭಂಗಾಶ್ರಮದಿಂದ ಮುಂದೆ ನಡೆದು ಸುತೀಕ್ಷ್ಣಾಶ್ರಮಕ್ಕೆ ಬಂದಾಗ, ಮುಂದಿನ ಪ್ರಯಾಣಕ್ಕೆ ಸಿದ್ಧತೆಯಾಗಿ ರಾಮನು ಧನುರ್ಬಾಣಗಳನ್ನು ಕೈಗೆ ತೆಗೆದುಕೊಂಡಾಗ ಸೀತಾದೇವಿ ಶಂಕಿತಳಾದಳು. ಕೈಯಲ್ಲಿ ಆಯುಧ ಹಿಡಿದವನು ಅದನ್ನು ಉಪಯೋಗಿಸದಿರುವುದು ಅಸಂಭವ; ಶಸ್ತ್ರಸಂಪತ್ತು ಕ್ರೌರ್ಯಕ್ಕೆ ಪ್ರೇರಕವಾಗುತ್ತದೆ; ಕ್ರೌರ್ಯವು ಪಾಪ; ಹೀಗೆ ಪಾಪಪ್ರಚೋದಕವಾದ ಶಸ್ತ್ರಾಸ್ತ್ರಗಳನ್ನು ತಪಸ್ವಿಗಳು ತ್ಯಜಿಸಬೇಕು–ಎಂದು ಆಕೆ ಶ್ರೀರಾಮನಿಗೆ ಉಪದೇಶ ಮಾಡಿ ಒಂದು ಪುರಾತನವಾದ ಆಖ್ಯಾಯಿಕೆಯನ್ನು ಉದಾಹರಿಸುತ್ತಾಳೆ (ಸರ್ಗ ೯, ಪು ೪೫). ಪಾಪಗಳಲ್ಲಿ ಮಹತ್ತಮವಾದವು ಮೂರು: (೧) ಅಸತ್ಯ, (೨) ಪರದಾರಾಭಿಗಮನ, (೩) ನಿಷ್ಕಾರಣವೈರ. ಇವುಗಳಲ್ಲಿ ಮೊದಲ ಎರಡಕ್ಕೂ ರಾಮನು ಅವಕಾಶಕೊಡತಕ್ಕವನಲ್ಲ. ಮೂರನೆಯ ಪಾಪ ಬಂದೀತೇನೋ ಎಂದು ಆಕೆಗೆ ಶಂಕೆ. ಆಕೆ ಹೇಳುತ್ತಾಳೆ (ಪುಟ ೪೬):

ಅಗ್ನಿಸಂಯೋಗವದ್ಧೇತುಃ
ಶಸ್ತ್ರಸಂಯೋಗ ಉಚ್ಯತೇ ।
ಸ್ನೇಹಾಚ್ಚ ಬಹುಮಾನಾಚ್ಚ
ಸ್ಮಾರಯೇ ತ್ವಾಂ ನ ಶಿಕ್ಷಯೇ ॥ ಸ. ೯, ಶ್ಲೋಕಗಳು ೨೩, ೨೪

“ನಾನು ನಿಮಗೆ ಬೋಧನೆ ಮಾಡುತ್ತಿಲ್ಲ. ನೀವು ತಿಳಿದಿರುವುದನ್ನೇ ಜ್ಞಾಪಕಕ್ಕೆ ತರುತ್ತಿದ್ದೇನೆ. ಶಸ್ತ್ರಸಹವಾಸವು ಅಗ್ನಿಯ ಸಹವಾಸದಂತೆ.”

ಸ್ತ್ರೀಚಾಪಲಾದೇತದುದಾಹೃತಂ ಮೇ
ಧರ್ಮಂ ಚ ವಕ್ತುಂ ತವ ಕಸ್ಸಮರ್ಥಃ ।
ವಿಚಾರ್ಯ ಬುದ್ಧ್ಯಾತು ಸಹಾನುಜೇನ
ಯದ್ರೋಚತೇ ತತ್‍ ಕುರು ಮಾ ಚಿರೇಣ ॥ ಸ. ೯, ಶ್ಲೋ. ೩೩

ಇದು ಸೀತೆಯ ಮಾತಿನ ಮರ್ಯಾದೆ. ಆಕೆಯ ಮನಸ್ಸು ಎಷ್ಟು ಕೋಮಲವಾದದ್ದು, ಮತ್ತು ಎಷ್ಟು ಶುಚಿಯಾದದ್ದು–ಎಂಬುದು ಈ ವಾಕ್ಯಗಳಿಂದ ಧ್ವನಿತವಾಗಿದೆ. ಶುಚಿತೆ, ಸರಳತೆ, ಕೋಮಲತೆ–ಇವುಗಳ ಜೊತೆಗೆ ನಿಷ್ಠೆ, ಉದಾತ್ತಚಿಂತನೆ–ಇವು ಸೀತೆಯ ನೈಜ ಗುಣಗಳು. ಈ ಗುಣಗಳನ್ನು ನಾವು ನೆನಪಿನಲ್ಲಿರಿಸಿಕೊಂಡು ಮುಂದಿನ ಕಥೆಯನ್ನು ನೋಡಬೇಕು.

ಶ್ರೀರಾಮನು ಸುತೀಕ್ಷ್ಣಾಶ್ರಮದಿಂದ ಅಗಸ್ತ್ಯಾಶ್ರಮಕ್ಕೆ ಹೊರಡುವ ವೇಳೆಯಲ್ಲಿ ನುಡಿದ ಒಂದು ಮಾತು ಈಗ ಕ್ರಿಸ್ತಶಕ ೧೯೬೮ರಲ್ಲಿ ನಾವು ಗಮನಿಸತಕ್ಕದಾಗಿದೆ (ಪುಟ ೪೨):

ಅಮಾರ್ಗೇಣಾಗತಾಂ ಲಕ್ಷ್ಮೀಂ
ಪ್ರಾಪ್ಯೇವಾನ್ವಯವರ್ಜಿತಃ ॥

“ಕುಲಗೇಡಿಯಾದವನಿಗೆ ಅನ್ಯಾಯಮಾರ್ಗದಲ್ಲಿ ಸಂಪತ್ತು ಬಂದರೆ ಅವನ ದರ್ಪಾಹಂಕಾರಗಳನ್ನು ಸಹಿಸುವುದು ಲೋಕಕ್ಕೆ ಹೇಗೆ ಕಷ್ಟವಾಗುವುದೋ ಹಾಗೆ ಸಹಿಸಲಶಕ್ಯವಾಗುವಂತೆ ಮಧ್ಯಾಹ್ನಕ್ಕೆ ಬರುತ್ತಿರುವ ಸೂರ್ಯನ ತಾಪ.”

ಲಂಚಕೋರರೂ ಕಳ್ಳಪೇಟೆಯವರೂ ಭುಜತಟ್ಟಿಕೊಳ್ಳಲಿ!

ಮುಂದೆ ಶ್ರೀರಾಮನು ಅಗಸ್ತ್ಯಾಶ್ರಮಕ್ಕೆ ಬಂದಾಗ ಅಲ್ಲಿ ನಡೆಯುವ ಮಾತುಕಥೆಗಳು ರಮಣೀಯವಾಗಿವೆ.

ಅಗಸ್ತ್ಯರು ಉಪದೇಶಿಸಿದಂತೆ ಶ್ರೀರಾಮನು ಪಂಚವಟಿಯಲ್ಲಿ ನೆಲಸಿದ್ದಾಗ ನಡೆಯುತ್ತವೆ ಮುಖ್ಯ ಘಟನೆಗಳು. ಶೂರ್ಪಣಖಿ ರಾಮನನ್ನು ಕಂಡು ಮೋಹಿತಳಾಗಿ ಆತನಲ್ಲಿಗೆ ಬಂದು “ಭವ ಮೇ ಭರ್ತಾ” ಎಂದು ಯಾಚಿಸುತ್ತಾಳೆ. ರಾಮನು ಆಕೆಯ ಇಷ್ಟವನ್ನು ನಿರಾಕರಿಸುವಾಗ ಪರಿಹಾಸಚೇಷ್ಟೆಯ ಮಾತನಾಡುತ್ತಾನೆ (ಪುಟ ೧೧೧):

ಅನುಜಸ್ತ್ವೇಷ ಮೇ ಭ್ರಾತಾ
ಶೀಲವಾನ್‍ ಪ್ರಿಯದರ್ಶನಃ ।
ಶ್ರೀಮಾನ್‍ ಅಕೃತದಾರಶ್ಚ
ಲಕ್ಷ್ಮಣೋ ನಾಮ ವೀರ್ಯವಾನ್‍ ॥ ಸ. ೧೮, ಶ್ಲೋ. ೩

ಇಲ್ಲಿಯ “ಅಕೃತದಾರಃ” ಎಂಬ ಮಾತಿಗೆ ಕೆಲಮಂದಿ ವ್ಯಾಖ್ಯಾನಕಾರರು ಯುಕ್ತಿಯಿಂದ ಅರ್ಥಹೇಳಲು ವಿಪರೀತ ಶ್ರಮಪಟ್ಟಿದ್ದಾರೆ. ಮಾತಿನ ಸ್ವಾಭಾವಿಕವಾದ ಅರ್ಥ “ಮದುವೆಯಾಗದವನು” ಎಂದು. ಲಕ್ಷ್ಮಣನಿಗೆ ಮದುವೆಯಾಗಿತ್ತಲ್ಲ?–ಎಂಬುದು ಅವರ ಕಷ್ಟ! ರಾಮನು ಚೇಷ್ಟೆ ಮಾಡುತ್ತಿದ್ದನೆಂಬುದು ವ್ಯಾಖ್ಯಾನಕಾರರ ಮನಸ್ಸಿಗೆ ಬರಲಿಲ್ಲ. ಅಥವಾ ರಾಮನು ಚೇಷ್ಟೆಮಾಡಬಾರದೆಂಬುದು ಅವರ ಉದ್ದೇಶ. ಅಥವಾ, ಹಾಸ್ಯಕ್ಕಾಗಿ ಕೂಡ ಒಂದು ಅಸತ್ಯ ಅವನ ಬಾಯಿಂದ ಬಾರದೆಂಬುದು ಅವರ ತಾತ್ಪರ್ಯ. ಬೇರೆ ಸಂದರ್ಭದಲ್ಲಿ–ವಾಲಿಯ ಪ್ರಕರಣದಲ್ಲಿ–

ವಿವಾಹಕಾಲೇ ರತಿಸಂಪ್ರಯೋಗೇ
ಪ್ರಾಣಾತ್ಯಯೇ ಸರ್ವಧನಾಪಹಾರೇ ।
ವಿಪ್ರಸ್ಯ ಚಾರ್ಥೇ ಹ್ಯನೃತಂ ವದೇತ
ಪಂಚಾನೃತಾನ್ಯಾಹುರಪಾತಕಾನಿ ॥

–ಎಂಬ ಪುರಾತನೋಕ್ತಿಯಿಂದ ಐದು ಅಸತ್ಯಗಳನ್ನು ಸಮರ್ಥನೆ ಮಾಡಿದ ಮಹನೀಯರಿಗೆ ಆ ಪರಿಹಾಸವಾಕ್ಯದ ಆರನೆಯ ಅನೃತ ಅಸಹನೀಯವಾದದ್ದು ಚೋದ್ಯವಾಗಿದೆ. ಪಾಪವಲ್ಲದ ಅನೃತಗಳು ಎಷ್ಟೋ ಇವೆ. ಅಷ್ಟೇ ಅಲ್ಲ; ಅವು ಧರ್ಮಸಾಧಕಗಳೇ ಆಗುತ್ತವೆ. ಇದಕ್ಕೆ ದೃಷ್ಟಾಂತಗಳನ್ನು ಶ್ರೀಕೃಷ್ಣನು ಅರ್ಜುನನಿಗೆ ತೋರಿಸಿದ್ದಾನೆ. ಯಾವ ಮಾತು ಭೂತಹಿತಸಾಧಕವೋ ಅದು ಸತ್ಯ. ಯಾವ ಮಾತು ಮತ್ತೊಬ್ಬರಿಗೆ ಅನ್ಯಾಯಕಾರಿಯೋ ಹಿಂಸಾಕರವೋ ಅದು ಅಸತ್ಯ. ಈ ಮೂಲತತ್ತ್ವವನ್ನು ದೃಷ್ಟಿಯಲ್ಲಿರಿಸಿಕೊಂಡು ನೋಡಿದರೆ ಮೇಲಣ ಪರಿಹಾಸೋಕ್ತಿಯಲ್ಲಿ ದೋಷವೇನೂ ತೋರದು.

ವಾಲ್ಮೀಕಿಗಳಾದರೋ ಪರಿಹಸನಶೀಲರೆಂದು ಹತ್ತಾರು ಕಡೆ ಶ್ರೀಮದ್‍ ರಾಮಾಯಣದಲ್ಲಿ ಕಂಡುಬರುತ್ತದೆ. ನಕ್ಕವರಿಗೆ ಸ್ವರ್ಗವಿಲ್ಲವೇನು?

ಸ್ವರ್ಗಾಯತಿಂ ನ ಪರಿಹಾಸಕಥಾ ರುಣದ್ಧಿ ॥

ಈ ಸಂದರ್ಭವೊಂದರಲ್ಲೇ ಅಲ್ಲ; ಇಂಥ ಅನೇಕ ಕಾವ್ಯಸಂದರ್ಭಗಳಲ್ಲಿ ನಮ್ಮ ಟೀಕಾಕಾರರು ಹಾಸ್ಯಾನುಭವಕ್ಕೆ ಅಸಮರ್ಥರಾಗಿ ನೀರಸವ್ಯಾಖ್ಯಾನಗಳನ್ನು ಮಾಡಿದ್ದಾರೆ.

ಶ್ರೀರಾಮನಿಂದ ಶೂರ್ಪಣಖಿಗೆ ಆದ ಪ್ರತೀಕಾರವನ್ನು ನೋಡಿ ನಗುವವರು ಆಕೆ ಶ್ರೀಕೃಷ್ಣನಲ್ಲಿ ಹಾಗೆ ಪ್ರಣಯಭಿಕ್ಷೆ ಬೇಡಿದ್ದಿದ್ದರೆ ಏನಾಗುತ್ತಿತ್ತೆಂಬುದನ್ನು ಊಹನತರ್ಕವಿಷಯ ಮಾಡಿಕೊಳ್ಳಬಹುದು. ಕುಬ್ಜೆ ಎಂಬುವಳು ಕುರೂಪಿ. ಶೂರ್ಪಣಖಿಯು ಕುರೂಪಿಯಾಗಿದ್ದರೂ ಕಾಮರೂಪಿ: ರಮಣೀಯ ರೂಪವನ್ನು ತನ್ನ ಇಚ್ಛೆಯಂತೆ ತಾಳಬಲ್ಲವಳು. ತನ್ನನ್ನು ಬೇಡಬಂದ ಕುಬ್ಜೆಗೆ ಕೃಷ್ಣನು ರೂಪಸೌಂದರ್ಯವನ್ನು ಅನುಗ್ರಹಿಸಿ ಅವಳ ಇಷ್ಟವನ್ನು ಪೂರ್ತಿಮಾಡಿದನು:

ಏಷ್ಯಾಮಿ ತೇ ಗೃಹಂ ಸುಭ್ರೂಃ
ಪುಂಸಾಮಾಧಿವಿಕರ್ಶನಮ್‍ ।
ಸಾಧಿತಾಥೋಽಗೃಹಾಣಾಂ ನಃ
ಪಾಂಥಾನಾಂ ತ್ವಂ ಪರಾಯಣಮ್ ॥ ಭಾಗವತ ದಶಮಸ್ಕಂಧ: ಸ. ೪೨, ಶ್ಲೋ. ೧೨

ಶೂರ್ಪಣಖಾ ಪ್ರಕರಣದ ಫಲಿತಾಂಶವೇ ರಾವಣನ ವಿರೋಧೋತ್ಪತ್ತಿ.

ಮುಂದಿನ ಕಥೆಯಾದ ಮಾರೀಚ ಪ್ರಕರಣದಲ್ಲಿ ವಾಲ್ಮೀಕಿಗಳ ನಿರ್ಮಾಣ ಪ್ರತಿಭೆ ಮುಗಿಲು ಮುಟ್ಟುತ್ತದೆ. ಮಾರೀಚ ಕಥಾ ಸಂವಿಧಾನ ಅತ್ಯಂಟ ಕುತುಕವುಳ್ಳದ್ದು. ರಾವಣನ ಅನುಸಂಧಾನದೊಳಕ್ಕೆ ಮಾರೀಚನಂಥ ವ್ಯಕ್ತಿಯನ್ನು ತಂದಿರುವುದೇ ಒಂದು ದೊಡ್ಡ ಕಲ್ಪನೆ. ಕಥೆಯ ಮುಖ್ಯಧಾರೆಗೆ ಇದು ತೀರಾ ಅನಿವಾರ್ಯವಾದದ್ದೇನೂ ಅಲ್ಲ. ಬೇರೆ ಯಾವ ನೆವದಿಂದಲಾದರೂ–ಸ್ನಾನದ ನೆವದಿಂದ, ಪಾಕದ ನೆವದಿಂದ, ಪೂಜೆಯ ನೆವದಿಂದ–ಸೀತೆ ಏಕಾಕಿಯಾಗಿರುವಂತೆ ಕಥಾರಚನೆಯಾಗಬಹುದಿತ್ತು. ಈ ಸಂದರ್ಭದಲ್ಲಿ ಮಾರೀಚನ ಪ್ರವೇಶವು ಸ್ವಾರಸ್ಯಪರಿಪೋಷಕವಾಗಿದೆ.

ಮಾರೀಚನು ಹುಟ್ಟಿನಿಂದ ರಾಕ್ಷಸ. ಆದರೆ ಸ್ವಭಾವದಿಂದ ಅಷ್ಟು ಕೆಟ್ಟವನಲ್ಲ. ವಿಭೀಷಣನಂತೆ ಅವನು. ಅಬರಿಬ್ಬರೂ ರಾವಣನ ಆಲೋಚನೆ ಅಧರ್ಮವಾದದ್ದೆಂದು ಬುದ್ಧಿ ಹೇಳಿದವರು. ಮಾರೀಚನ ಉಪದೇಶ ಹೀಗಿತ್ತು (ಪು ೨೨೭):

ತ್ವದ್ವಿಧಃ ಕಾಮವೃತ್ತೋ ಹಿ
ದುಶ್ಶೀಲಃ ಪಾಪಮಂತ್ರಿತಃ ।
ಆತ್ಮಾನಂ ಸ್ವಜನಂ ರಾಷ್ಟ್ರಂ
ಸ ರಾಜೌ ಹಂತಿ ದುರ್ಮತಿಃ ॥ ಸ. ೩೭, ಶ್ಲೋ. ೭

ಆದರೆ ಮಾರೀಚನ ಧರ್ಮನಿಷ್ಠೆ ವಿಭೀಷಣನದರಷ್ಟು ದೃಢವಾದದ್ದಲ್ಲ. ಮಾರೀಚನು ಪೂರ್ವದಲ್ಲಿ ವಿಶ್ವಾಮಿತ್ರಾಶ್ರಮದಲ್ಲಿ ಬಾಲಕ ರಾಮನ ಬಾಣದ ರುಚಿ ಕಂಡಿದ್ದವನು. ಅವನ ಮನಸ್ಸಿನಲ್ಲಿ ರಾಮನನ್ನು ಕುರಿತು ಭಯ ಇದ್ದಿರಬೇಕು. ಅದರ ಜೊತೆಗೆ ಕೊಂಚ ಈರ್ಷ್ಯೆಯೂ ಇದ್ದಿರಬಹುದು. ಅವನು ರಾವಣನ ಬಲಾತ್ಕಾರಕ್ಕೂ ದಾಕ್ಷಿಣ್ಯಕ್ಕೂ ಒಳಪಟ್ಟು ವಿಧೇಯನಾದ. ಅವನು ಮಾಯಾಮೃಗವಾಗಿ ಸುಳಿದಾಡಿ ಸೀತೆಯನ್ನೂ ರಾಮನನ್ನೂ ಸಹ ಮೋಹಗೊಳಿಸಿದ್ದರ ವರ್ಣನೆ ಶ್ರೀಮದ್ರಾಮಾಯಣದ ಅತ್ಯಂತ ಸುಂದರ ಪ್ರಕರಣಗಳಲ್ಲಿ ಒಂದಾಗಿ ಗಣ್ಯವಾಗಬೇಕಾದದ್ದು (ಪುಟ ೨೫೫–೬):

ರೂಪ್ಯೈರ್ಬಿಂದುಶತೈಶ್ಚಿತ್ರಃ ಭೂತ್ವಾ ಸ ಪ್ರಿಯದರ್ಶನಃ ।
ವಿಟಪೀನಾಂ ಕಿಸಲಯಾನ್‍ ಭಂಕ್ತ್ವಾದನ್‍ ವಿಚಚಾರ ಹ ॥
ಪುನರ್ಗತ್ವಾ ನಿವೃತ್ತಶ್ವ ವಿಚಚಾರ ಮೃಗೋತ್ತಮಃ ।
ಗತ್ವಾ ಮುಹೊರ್ತಂ ತ್ವರಯಾ ಪುನಃ ಪ್ರತಿನಿವರ್ತತೇ ॥
ವಿಕ್ರೀಡಂಶ್ವ ಕ್ವಚಿದ್ಭೂಮೌ ಪುನರೇವ ನಿಷೀದತಿ ।
ಆಶ್ರಮದ್ವಾರಮಾಗಮ್ಯ ಮೃಗಯೂಥಾನಿ ಗಚ್ಛತಿ ॥ ಸ. ೪೨, ಶ್ಲೋಕಗಳು ೨೨, ೨೫, ೨೬

“ಮಾರೀಚವೇಷ”, “ರಾವಣಸಂನ್ಯಾಸ” –ಇವು ಸಾಮಾನ್ಯ ಜನದ ಬಳಕೆಯ ಮಾತಿನಲ್ಲಿ ಬದುಕಿರುವ ಪದಗಳು: ಮಹಾಭಾರತದ ಶಕುನಿಮಾವ, ಮೈಸೂರು ಚರಿತ್ರೆಯ ಮೀರ್‍ ಸಾದಕ್‍–ಎಂಬ ಹೆಸರುಗಳ ಹಾಗೆ. ಕೃತ್ರಿಮ, ವಂಚನೆ, ಮೋಸ, ಠಕ್ಕು ಕಂಡ ಕಡೆ ಮಾರೀಚನ ಸ್ಮರಣೆ ಬರುತ್ತದೆ.

ಆ ಹೆಸರಿನಲ್ಲಿ ಒಂದು ಚೋದ್ಯ ಕಾಣುತ್ತದೆ. “ಮಾರೀಚಿ” ಎಂದರೆ ಸೂರ್ಯಕಿರಣ. ಸೂರ್ಯಕಿರಣವು ಮರುಭೂಮಿಯ ಮರಳಿನ ಹರವನ್ನು ಮುಟ್ಟಿದಾಗ ದೂರದಿಂದ ನೋಡುವವರಿಗೆ ಅಲ್ಲಿ ಒಂದು ಕೆರೆಯೋ ನದಿಯೋ ಇರುವಂತೆ ಭಾಸವಾಗುತ್ತದೆ. ಇದೇ ಬಿಸಿಲ್ಗುದುರೆ ಅಥವಾ ಮರೀಚಿಕೆ ಅಥವಾ ಮೃಗತೃಷ್ಣೆ. ಇದು ಬರಿಯ ಭ್ರಮೆ ಅಥವಾ ಭ್ರಾಂತಿ. ಆದದ್ದರಿಂದ “ಮಾರೀಚ” ಶಬ್ದಕ್ಕೆ ಭ್ರಾಂತಿಕಾರಕವಾದದ್ದು, ಮಾಯಾರೂಪದ್ದು–ಎಂದು ಅರ್ಥ. ಮರೀಚಿಕಾ ಎಂಬ ಅರ್ಥವನ್ನೇ ವಾಲ್ಮೀಕಿಗಳು ಉದ್ದೇಶದಲ್ಲಿರಿಸಿಕೊಂಡು ಮಾರೀಚ ಪಾತ್ರವನ್ನು ರಚಿಸಿದರೋ ಹೇಗೋ.

ಅದ್ವೈತ ವೇದಾಂತದಲ್ಲಿ ಮಾಯೆ ಎಂಬುದಕ್ಕೆ ಮರೀಚಿಕೆ ಅಥವಾ ಮೃಗತೃಷ್ಣೆ ಒಂದು ಪ್ರಸಿದ್ಧ ದೃಷ್ಟಾಂತ

ಮೃಗತೃಷ್ಣಾಂಭಸಿ ಸ್ನಾತಃ
ಖಪುಷ್ಪಕೃತಶೇಖರಃ ।
ಏಷ ವಂಧ್ಯಾಸುತೋ ಯಾತಿ
ಶಶಶೃಂಗಧನುರ್ಧರಃ ॥

“ಈ ಬಂಜೆಯ ಮಗನು ಮರಳ್ಗಾಡಿನ ಬಿಸಿಲ್ಗುದುರೆಯ ನೀರಿನಲ್ಲಿ ಸ್ನಾನ ಮಾಡಿ, ಗಗನಕುಸುಮದಿಂದ ಅಲಂಕೃತನಾಗಿ, ಮೊಲದ ಕೊಂಬಿನ ಬಿಲ್ಲುಬಾಣಗಳನ್ನು ಹಿಡಿದು ಬರುತ್ತಿದ್ದಾನೆ.”

ಇದರಲ್ಲಿ ಎಲ್ಲವೂ ಕಾಲ್ಪನಿಕ ಪದಾರ್ಥಗಳು; ವಾಸ್ತವಿಕಗಳಲ್ಲ. ಬರಿಯ ತೋರಿಕೆಗಳು, ಗಟ್ಟಿ ತಿರುಳಲ್ಲ. ಜಗತ್ತೂ ಹಾಗೆ ಒಂದು ಬಗೆಯ ತೋರಿಕೆ ಅಥವಾ ಭ್ರಾಂತಿ ಪರಂಪರೆಯೆಂದು ಭಾವ.

ಮಾರೀಚವಧೆಯ ಕಾಲದಲ್ಲಿಯೇ ಪಂಚವಟಿಯ ಮತ್ತೊಂದು ಪ್ರದೇಶದಲ್ಲಿ ರಾಮನ ಪರ್ಣಶಾಲೆಯಲ್ಲಿ ರಾವಣನಿಂದ ಸೀತಾಪಹಾರವಾಯಿತು. ಆಗ ಸೀತಾರಾವಣರಿಗೆ ನಡೆದ ವಾಗ್ವಾದದ ರೀತಿ ಗಮನವಿರಿಸಿ ಓದಬೇಕಾದದ್ದು (ಸರ್ಗಗಳು ೪೭, ೪೮).

ಶ್ರೀರಾಮನು ತನ್ನ ಆಶ್ರಮಕ್ಕೆ ಹಿಂದಿರುಗಿ ಸೀತಾದೇವಿಯನ್ನು ಕಾಣದೆ ಕಳವಳಗೊಂಡು ಲಕ್ಷ್ಮಣನನ್ನು ಆಕ್ಷೇಪಿಸಿದ ಸಂದರ್ಭ ನಮ್ಮ ದೃಷ್ಟಿಯಲ್ಲಿರಬೇಕಾದದ್ದು. ಆಗ ಲಕ್ಷ್ಮಣನಿಗಾದ ಉಭಯಸಂಕಟದ ಸ್ಮರಣೆ ಅನೇಕ ಮಂದಿಗೆ ಅವರವರ ಜೀವಿತಸಂದರ್ಭಗಳಲ್ಲಿ ಬಂದಿವೆ. ಲಕ್ಷ್ಮಣನಿಗೆ ಒಂದು ಕಡೆ ಅತ್ತಿಗೆಯ ಮುನಿಸು, ಇನ್ನೊಂದು ಕಡೆ ಅಣ್ಣನ ಮುಳಿಸು. ಆತ ಯಾರ ಮಾತಿನಂತೆ ನಡೆಯಬೇಕಾಗಿತ್ತು? ಆ ಇಬ್ಬರೆ ವಾದಗಳೂ ಅವರವರ ದೃಷ್ಟಿಗಳಿಂದ ಯುಕ್ತಗಳಾಗಿಯೇ ಇವೆ. ಅವರ ಉದ್ವೇಗದಲ್ಲಿ, ಅವನ ದೃಷ್ಟಿಯೂ ಒಂದಿರಬಹುದೆಂದು ಅವರಿಬ್ಬರಿಗೂ ತೋರದೆಹೋಯಿತು. ಧರ್ಮಸೇವಕನಾದವನು ಹೀಗೆ ಉಭಯ ಪಕ್ಷದ ನಿಷ್ಠುರಕ್ಕೆ ಸಿಕ್ಕುವುದು ಎಷ್ಟೋ ವೇಳೆ ಅನಿವಾರ್ಯವಾಗುತ್ತದೆ. ಧರ್ಮೈಕದೃಷ್ಟಿಯುಳ್ಳವನು ಪೂಜ್ಯರಾದ ಇಬ್ಬರ ಮಾತನ್ನೂ ಬದಿಗಿರಿಸಿ ತನಗೆ ಯುಕ್ತವೆನಿಸಿದ ದಾರಿಯನ್ನೇ ಹಿಡಿಯಬೇಕಾಗುತ್ತದೆ. ಇಬ್ಬರು ಪೂಜ್ಯರಿಗೂ ತಲೆಬಾಗಿ ಹಾಗೆಯೇ ಅವರನ್ನು ಎದುರಿಸಿ ತನ್ನ ಮನಸ್ಸಾಕ್ಷಿಯಂತೆ ನಡೆದದ್ದು ಲಕ್ಷ್ಮಣನ ಮಹಾಗುಣ. ಆತನ ಸ್ವಾತಂತ್ರ್ಯವೂ ಧೈರ್ಯಸ್ಥೈರ್ಯಗಳೂ ಧರ್ಮನಿಷ್ಠೆಯುಳ್ಳವರಿಗೆ ಸರ್ವದಾ ನೆನಪಿನಲ್ಲಿರಬೇಕಾದದ್ದು.

ಅಲ್ಲಿಂದ ಮುಂದಕ್ಕೆ ಸೀತಾನ್ವೇಷಣೆಯ ಕಥೆ. ಆ ಪ್ರಕರಣದಲ್ಲಿ ರಾಮಲಕ್ಷ್ಮಣರು ಅರಣ್ಯದಲ್ಲಿ ಕಂಡ ಪ್ರಕೃತಿಸೌಂದರ್ಯಗಳನ್ನು ವಾಲ್ಮೀಕಿಗಳು ಮನೋಹರವಾದ ಶ್ಲೋಕಗಳಲ್ಲಿ ಚಿತ್ರಿಸಿದ್ದಾರೆ. ರಾಮಲಕ್ಷ್ಮಣರು ಕರ್ನಾಟಕ ದೇಶದ ಪಂಪಾಸರೋವರದ ಬಳಿ ಬಂದು ಸೇರಿದುದರ ಕಥನದೊಡನೆ ಅರಣ್ಯಕಾಂಡ ಸಮಾಪ್ತವಾಗುತ್ತದೆ.

ವಿದ್ವಾನ್‍ ಶ್ರೀ ಎನ್‍. ರಂಗನಾಥಶರ್ಮಾರವರು ಈ ರಸವತ್ತಾದ ಅರಣ್ಯಕಾಂಡವನ್ನು ತಮಗೆ ಸಹಜವಾಗಿ ಬಂದಿರುವ ಸರಳ ಸುಂದರ ಶೈಲಿಯಲ್ಲಿ ಅನುವಾದ ಮಾಡಿದ್ದಾರೆ. ಅನೇಕ ವ್ಯಾಖ್ಯಾನಗಳನ್ನು ಶೋಧಿಸಿ ರಸಪುಷ್ಟಿಗೆ ಅನುಕೂಲವಾಗುವ ಅರ್ಥವನ್ನು ಹಿಡಿದಿದ್ದಾರೆ. ಅನುವಾದವನ್ನು ನಾನು ಅಲ್ಲಲ್ಲಿ ಓದಿಸಿ ಕೇಳಿ ಮೆಚ್ಚಿಕೊಂಡಿದ್ದೇನೆ. ಕನ್ನಡ ಮಹಾಜನಗಳು ಇದನ್ನು ಕೃತಜ್ಞತೆಯಿಂದ ಸ್ವೀಕರಿಸುವರೆಂದು ನಂಬಿದ್ದೇನೆ.

ಒಟ್ಟಿನಲ್ಲಿ ಅರಣ್ಯಕಾಂಡವು ಕರುಣಪ್ರಧಾನವಾದ ಪ್ರಕರಣ. ಇತರ ರಸಗಳು ಅಲ್ಲಿಲ್ಲವೆಂದಲ್ಲ; ವೀರಾದ್ಭುತ ಶೃಂಗಾರಗಳು ಅಷ್ಟಿಷ್ಟು ಇವೆ.

ಕರುಣವು ಇತರ ಕಾಂಡಗಳಲ್ಲಿ ಇಲ್ಲವೆಂದೂ ಅಲ್ಲ. ಅಯೋಧ್ಯಾಕಾಂಡದಲ್ಲಿಯೂ ಉತ್ತರಕಾಂಡದಲ್ಲಿಯೂ ಕರುಣವು ಹೊಳೆಹೊಳೆಯಾಗಿ ಹರಿಯುತ್ತದೆ. ಆದರೆ ಅರಣ್ಯಕಾಂಡದಲ್ಲಿ ಕರುಣದ ಹೊಳೆಯಲ್ಲಿ ನೆರೆ ಬಂದಿದೆ.

ಕರುಣವೆಂದರೆ ಏನು? ಇನ್ನೊಬ್ಬರ ಕಷ್ಟವನ್ನು ನಾವು ಕಂಡಾಗ “ಅಯ್ಯೋ ಪಾಪ!” ಎನ್ನುವಂತೆ ಮಾಡುವ ಗುಣ. ಅದೇ ಕನಿಕರ.

ಕರುಣಪ್ರೇರಣೆಯಲ್ಲಿ ಎರಡು ಅಂತರಂಗಪ್ರವೃತ್ತಿಗಳು ಮಿಳಿತವಾಗಿರುತ್ತವೆ. ಅವೆರಡೂ ಪ್ರತಿಯೊಬ್ಬ ಮನುಷ್ಯನಲ್ಲಿಯೂ ನೈಜವಾಗಿರುವ ಪ್ರವೃತ್ತಿಗಳೇ. ಒಂದು ಸಹಾನುಭವದ್ದು; ಇನ್ನೊಂದು ನ್ಯಾಯವಿಚಾರದ್ದು.

ಒಂದಾನೊಂದು ಸನ್ನಿವೇಶದಲ್ಲಿ ನಮಗೆ ಸುಖವೋ ದುಃಖವೋ ಆದಾಗ ಆ ಅಥವಾ ಅಂಥ ಸನ್ನಿವೇಶದಲ್ಲಿ ಸುಖವೋ ದುಃಖವೋ ಆಗುತ್ತದೆಂದು ಭಾವಿಸಿಕೊಳ್ಳುತ್ತೇವೆ. ಈ ಸ್ವಾನುಭವಪರಾವರ್ತನೆಯೇ ಎಲ್ಲ ಲೋಕಬಾಂಧವ್ಯಕ್ಕೂ ತಳಹದಿ. ನಮ್ಮ ಮೈ ನೋಯಿಸಿದ್ದು ಇತರರನ್ನೂ ನೋಯಿಸುತ್ತದೆ. ನಮ್ಮ ಬಾಯಿಗೆ ಸಿಹಿಯಾದದ್ದು ಇನ್ನೊಬ್ಬರ ಬಾಯಿಗೂ ಸವಿಯಾಗುತ್ತದೆ. ನಮ್ಮ ಬೆನ್ನು ಸವರಿಕೊಂಡು ಇನ್ನೊಬ್ಬರ ಬೆನ್ನು ತಡುವುತ್ತೇವೆ, ನಮ್ಮ ಮೈ ಚಿವುಟಿಕೊಂಡು ಇನ್ನೊಬ್ಬರ ಮೈ ಚಿವುಟಹೊರಡುತ್ತೇವೆ. ಈ ಸ್ವಾನುಭವಪರಾವರ್ತನೆಯೆ ನಮ್ಮ ಲೋಕಪರಿಜ್ಞಾನದಲ್ಲಿ ಪ್ರಥಮ ಭಾಗ. ಅದರ ಪ್ರತಿಚ್ಛಾಯೆಯಾದ ಪರಾನುಭವಸ್ವಯಮಂಗೀಕಾರವೇ ಎರಡನೆಯ ಭಾಗ. ಇನ್ನೊಬ್ಬರು ನೋವುಪಡುತ್ತಿರುವಾಗ ನಾವು ಅವರೊಡನೆ ಕೂಡಿ ನೋವುಪಡುತ್ತೇವೆ. ಅನ್ಯರ ದುಃಖವನ್ನು ನಮ್ಮದು ಮಾಡಿಕೊಳ್ಳುತ್ತೇವೆ. ಅನ್ಯರ ಸಂತೋಷ, ವ್ಯಸನಗಳಲ್ಲಿ ನಾವು ಭಾಗಿಗಳಾಗುತ್ತೇವೆ. ಇದೇ ಸಹಾನುಭೂತಿ. ಅದೇ ಅನುಕಂಪೆ, ದಯೆ, ಕನಿಕರ, ಸ್ವಾನುಭವದ ಮೂಲಕ ಅನ್ಯಾನುಭವದ ಅರಿವು. ಅನ್ಯಮನೋಭಾವದ ಅರಿವಾದ ಮೇಲೆ ಅನ್ಯರೊಡನೆ ಅನುಭವಸಹಭಾಗಿತೆ. ಇದು ಆತ್ಮೌಪಮ್ಯವರ್ತನೆಯ ಮೂಲ. ಆತ್ಮೌಪಮ್ಯವೇ ಲೋಕಸಂಗ್ರಹನೀತಿಯ ಆಂತರ್ಯ.

ಆತ್ಮೌಪಮ್ಯೇನ ಸರ್ವತ್ರ
ಸಮಂ ಪಶ್ಯತಿ ಯೋಽರ್ಜುನ ।
ಸುಖಂ ವಾ ಯದಿ ವಾ ದುಃಖಂ
ಸ ಯೋಗೀ ಪರಮೋ ಮತಃ ॥ ಭಗವದ್ಗೀತೆ: ಅ.೬, ಶ್ಲೋ, ೩೨

ಅನುಭೂತಿಯೂ ಅನುಕಂಪೆಯೂ ಹೃದಯದ ಕಾರ್ಯ. ಅದರ ಜೊತೆಗೆ ಸೇರತಕ್ಕದ್ದು ಬುದ್ಧಿಯ ಕಾರ್ಯವಾದ ಯುಕ್ತಾಯುಕ್ತವಿವೇಚನೆ. ಯಾವ ಸಂದರ್ಭದಲ್ಲಿ ಕರುಣವು ಯುಕ್ತವಾಗುತ್ತದೆ? ಅದು ಎಷ್ಟರಮಟ್ಟಿಗೆ?–ಇದು ನ್ಯಾಯವಿಚಾರ. ಕರುಣವು ನ್ಯಾಯಸಮ್ಮತವಾಗಬೇಕು. ನ್ಯಾಯವು ಪಾತ್ರಾಪಾತ್ರ ವಿವೇಕದಿಂದ ಬರುತ್ತದೆ. ಹಸಿವು ಎಲ್ಲರಿಗೂ ಕಷ್ಟವೇ. ಆದರೆ ಮೂರು ವರ್ಷದ ಮಗು, ಮುವ್ವತ್ತು ವರ್ಷದ ಬಲಿಷ್ಠ–ಈ ಇಬ್ಬರಲ್ಲಿ ಯಾರ ಕಷ್ಟ ಹೆಚ್ಚಿನದು? ಸಹಿಸುವ ಸಾಮರ್ಥ್ಯ ಯಾರಿಗೆ ಕಡಮೆಯೋ ಅವರಿಗೆ ಹೆಚ್ಚು ಕನಿಕರ ಸಲ್ಲುತ್ತದೆ. ಅಡವಿಯ ಅಲೆದಾಟ ಎಲ್ಲರಿಗೂ ಆಯಾಸವೇ. ಆದರೆ ಅರಮನೆಯ ಅಭ್ಯಾಸವಿರುವವರಿಗೆ ಆಯಾಸ ಹೆಚ್ಚು. ಹೀಗೆ ಪ್ರಸಕ್ತ ಮನುಷ್ಯನ ಬಲಾಬಲಗಳಿಂದ ಅವನಿಗಿರುವ ಆವಶ್ಯಕತೆಯನ್ನನುಸರಿಸಿ ಕರುಣವನ್ನು ಹಂಚುತ್ತೇವೆ.

ಸೀತಾದೇವಿಯ ವಿಷಯದಲ್ಲಿ ಕರುಣೋತ್ಪಾದಕಗಳಾದ ಸಂಗತಿಗಳು ಅನೇಕವಿವೆ. ಹೆಂಗಸು, ಅಬಲೆ, ಆಕೆಗೆ ಕನಿಕರ ಸಲ್ಲಬೇಕಾದದ್ದು–ಎಂಬುದು ಸರ್ವಸಾಮಾನ್ಯವಾದ ಮಾತು. ಅದನ್ನು ಬದಿಗಿರಿಸಿ ಮಿಕ್ಕ ಸಂಗತಿಗಳನ್ನು ನೋಡೋಣ.

ಆಕೆ ಮಹಾರಾಜನ ಮಗಳು; ಮಹಾರಾಜನ ಸೊಸೆ. ಕಷ್ಟನಿಷ್ಠುರಗಳನ್ನರಿಯದವಳು. ಅಂಥವಳಿಗೆ ಈ ಪಾಡು ಬರಬಹುದೆ?

ಆಕೆ ತಪಸ್ವಿನಿ: ಸತ್ಯ, ಇಂದ್ರಿಯಶೌಚ, ಅಹಿಂಸೆ–ಈ ಮೂರು ವ್ರತಗಳನ್ನು ಹಿಡಿದಿದ್ದವಳು. ಅಂಥವಳಿಗೆ ಕಷ್ಟವೆ?

ಅದೂ ಒಬ್ಬ ದುರಾತ್ಮನ ಕೈಯಿಂದ ಕಷ್ಟವೆ?

ಆ ಕಷ್ಟವಾದರೂ ಎಂಥಾದ್ದು? ಆಕೆಯ ಆಜನ್ಮ ವ್ರತಕ್ಕೆ ಭಂಗದ ಭಯ ಬರಬಹುದೆ? ಶಿವಶಿವ ಎನ್ನುತ್ತದೆ ಮನಸ್ಸು. ಶ್ರೀರಾಮನ ಆರ್ತಪ್ರಲಾಪಗಳಲ್ಲಿ ನಾವೂ ಸೇರಿಸಿಕೊಳ್ಳುತ್ತೇವೆ.

ಎಲ್ಲ ಕರುಣಪ್ರಸಂಗಗಳಲ್ಲಿಯೂ ಒಂದು ನ್ಯಾಯಾಪೇಕ್ಷೆಯ ಅಂಕುರ ಸೇರಿಕೊಂಡಿರುತ್ತದೆ–ಎಂದು ಮೇಲೆ ಹೇಳಿದೆ. ಶ್ರೀರಾಮನಲ್ಲಿ ಅಂಥ ನ್ಯಾಯಾಕಾಂಕ್ಷೆ ತುಂಬಿತ್ತು. ಆತನು ಸ್ವಭಾವದಿಂದ ಸರಸಿ, ಪ್ರಕೃತಿಯ ಸೌಮ್ಯಸೌಂದರ್ಯಗಳಲ್ಲಿ ಲೀನವಾದ ಮನಸ್ಸುಳ್ಳವನು. ಅಂಥವನ ಮನಸ್ಸು ಹೇಗಿತ್ತೆಂಬುದನ್ನು ವಾಲ್ಮೀಕಿಗಳು ಮನೋಹರವಾದ ವಾಗ್ವರ್ಣಗಳಿಂದ ಚಿತ್ರಿಸಿದ್ದಾರೆ.

ತತೋ ಮಹದ್ವರ್ತ್ಮ ಸುದೂರಸಂಕ್ರಮಃ
ಕ್ರಮೇಣ ಗತ್ವಾ ಪ್ರತಿಕೂಲಧನ್ವನಮ್‍ ।
ದದರ್ಶ ಪಂಪಾಂ ಶುಭದರ್ಶಕಾನನಾಮ್‍
ಅನೇಕ ನಾನಾವಿಧಪಕ್ಷಿಜಾಲಕಾಮ್‍ ॥ ಸ. ೭೫, ಶ್ಲೋ ೩೦

ಕರುಣದಲ್ಲಿ ಅನ್ಯಕಷ್ಟಸಹಾನುಭವ, ಅನ್ಯಾರ್ಥಕ ನ್ಯಾಯಚಿಂತನೆ–ಇವು ಅಂತರ್ಗತವಾಗಿರುತ್ತವೆಂದು ಹೇಳಿದ. ಆ ಕಾರಣದಿಂದಲೇ ಕರುಣವು ಶೋಕವಾಗುತ್ತದೆ. “ಅಯ್ಯೋ! ಸೀತಮ್ಮನಿಗೆ ಹೀಗಾಯಿತೆ? ಎಂಥ ಅನ್ಯಾಯ! ಎಂಥ ಘೋರ!” ಎಂದು ನಾವು ಅನುತಾಪಪಡುತ್ತೇವೆ. ಈ ಶೋಕದಲ್ಲಿ ಬಂದು ಮಾನವೀಯತೆಯ ಉತ್ಕೃಷ್ಟ ಭಾವ ಅಡಗಿದೆ. ಆದದ್ದರಿಂದಲೇ ಅದು ಹೃದ್ಯವಾಗಿ ರಸವೆನಿಸಿಕೊಳ್ಳುತ್ತದೆ. ನಾವು ಇಂಥ ಪ್ರಸಂಗವನ್ನು ಮತ್ತೆ ಮತ್ತೆ ಕುತೂಹಲದಿಂದ ನೋಡುತ್ತೇವೆ. ಹೀಗೆ ಕಾವ್ಯದ ಶೋಕರಸವು ಜೀವಶೋಧಕವಾಗುತ್ತದೆ. ಬಹುಶಃ ಇದನ್ನು ನೆನೆದೇ ಅರಿಸ್ಟಾಟಲ್‍ ತಾತ್ತ್ವಿಕನು ಕಾವ್ಯದಲ್ಲಿಯ ಶೋಕರಸವನ್ನು (Tragedy) ಅಂತರಂಗವಿರೇಚಕ (Catharsis) ಎಂದು–ಜೀವಮಲಶೋಧಕ–ಎಂದು ಕರೆದಿದ್ದಾನೆ. ಸೀತೆಯನ್ನು ನೆನೆದು ನಾವು ಕನಿಕರಪಟ್ಟಷ್ಟೂ ಅದು ನಮ್ಮ ಹೃದಯಕ್ಕೆ ಪಾವಕವಾಗುತ್ತದೆ. (೧೯೬೮)


No comments:

Post a Comment