Tuesday 9 January 2024

ಭಾಗ 4 - ಬಾಲಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)


ಪ್ರಕೃತಕ್ಕೆ ನಮ್ಮ ಮುಂದಿರುವ ರಾಮಾಯಣಭಾಗವನ್ನು ನೋಡೋಣ. ಬಾಲಕಾಂಡದ ಎಪ್ಪತ್ತೇಳು ಸರ್ಗಗಳಲ್ಲಿ ಮೊದಲ ನಾಲ್ಕು ವಾಲ್ಮೀಕಿಯವಲ್ಲ, ಶಿಷ್ಯರೊಬ್ಬರು ರಚಿಸಿ ಅಂಟಿಸಿದ್ದು–ಎಂದು ಕೆಲವರ ಊಹೆ. ಈ ಊಹೆ ಯುಕ್ತಿಯುಕ್ತವಾಗಿದೆಯೆಂದು ನನಗನ್ನಿಸುತ್ತದೆ. ಈ ನಾಲ್ಕು ಸ್ವರ್ಗಗಳು ಪೀಠಿಕೆಯಾಗಿವೆ, ಕಥಾಂಗವಾಗಿಲ್ಲ. ಕಥೆ ಪ್ರಾರಂಭವಾಗುವುದು ಐದನೆಯ ಸರ್ಗದಿಂದ:

ಸರ್ವಾ ಪೂರ್ವಮಿಯಂ ಯೇಷಾಮಾಸೀತ್ಕೃತ್ಸ್ನಾ ವಸುಂಧರಾ ॥

–ಹೀಗೆ. ಆದರೆ ಮೊದಲನೆಯ ನಾಲ್ಕು ಸರ್ಗಗಳನ್ನು ನಾನು ಬಿಡಲಾರೆ. ಅವುಗಳ ವಿಷಯ ಹೀಗಿದೆ: 

ಸರ್ಗ (೧) ನಾರದ–ವಾಲ್ಮೀಕಿ ಸಂವಾದ: ಸಮಗ್ರ ಕಥಾಸಂಕ್ಷೇಪ. 
ಸರ್ಗ (೨) ಬ್ರಹ್ಮನಿಂದ ವಸ್ತುಸಂದರ್ಶನಾನುಗ್ರಹ. 
ಸರ್ಗ (೩) ಕವಿಯ ಕಾವ್ಯವಸ್ತು ಸಾಕ್ಷಾತ್ಕಾರ. 
ಸರ್ಗ (೪) ಕೃತಿಪ್ರಚಾರವಿಧಾನ–ಕಾವ್ಯಗಾನ. 

ಈ ನಾಲ್ಕೂ ರಮಣೀಯಗಳು. 

ಗ್ರಂಥೋಪಕ್ರಮವೇ ಸೊಗಸು. ಮೊದಲ ವಾಕ್ಯವೇ ಭಾವೋನ್ನತಿಕಾರಕವಾಗಿದೆ:

ತಪಸ್ಸ್ವಾಧ್ಯಾಯನಿರತಂ ತಪಸ್ವೀ ವಾಗ್ವಿದಾಂ ವರಮ್‍ ॥ 

ತಪಸ್ಸು, ವೇದಾಧ್ಯಯನ, ವಿದ್ಯಾಪ್ರಭಾವ, ಮಹಾಪುರುಷಲಕ್ಷಣ ಸ್ಮರಣೆ–ಈ ಗಂಭೀರ ಪವಿತ್ರ ವಾತಾವರಣಕ್ಕೆ ಕವಿ ನಮ್ಮನ್ನು ಕಂಡೊಡನೆಯೇ ಕರೆದೊಯ್ದು ಮೈಮರೆಯಿಸುತ್ತಾನೆ. ತಾನು ನಾರದರಿಗೆ ಅರಿಕೆ ಮಾಡಿಕೊಂಡ ಕುತೂಹಲಾತಿಶಯವನ್ನು (“ಪರಂ ಕೌತೂಹಲಂ ಹಿ ಮೇ”) ಕವಿ ನಮ್ಮಲ್ಲಿ ಕೆರಳಿಸುತ್ತಾನೆ. ಆ ಕುತೂಹಲದ ಮೊದಲ ಆತುರ ತೀರುವಂತೆ ಸಮಗ್ರ ರಾಮವೃತ್ತಾಂತದ ಛಾಯಾರೇಖೆಯನ್ನು ತೋರಿಸುತ್ತಾನೆ. ಹೀಗೆ ಕೌತುಕದ ಜೊತೆಗೆ ನೆಮ್ಮದಿ ಸೇರಿ ನಮ್ಮ ಮನಸ್ಸು ಅವಧಾನ ಸಮರ್ಥವಾಗುತ್ತದೆ. 

ಎರಡನೆಯ ಸರ್ಗದಲ್ಲಿ ಕವಿಯ ಮನಸ್ಸು ಹೇಗೆ ಕೆರಳಿ ಕಾವೇರಿತೆಂಬುದರ ಕಥೆ ಇದೆ. ಕವಿಯ ಅಂತರಂಗಾವೇಶದ ಕಥೆ ಕುತುಕವನ್ನುಂಟುಮಾಡತಕ್ಕದೇ ಸರಿ. ಆದರೆ ಇಲ್ಲಿ ಮಾತ್ರ ನನ್ನದೊಂದು ತಕರಾರಿದೆ. ಬೇಡನನ್ನು ಕುರಿತು ಕವಿ ನುಡಿದನೆಂದು ಹೇಳಿರುವ ಶಾಪವಾಕ್ಯ ವಾಲ್ಮೀಕಿಯ ಶೈಲಿಯಲ್ಲಿಲ್ಲ: 

ಮಾ ನಿಷಾದ ಪ್ರತಿಷ್ಠಾಂ ತ್ವಮ್‍ ಅಗಮಃ ಶಾಶ್ವತೀಃ ಸಮಾಃ । 
ಯತ್ಕ್ರೌಂಚಮಿಥುನಾದೇಕಮ್‍ ಅವಧೀಃ ಕಾಮಮೋಹಿತಮ್‍ ॥ (ಬಾಲಕಾಂಡ: ೨–೧೫) 

ರತಿಭಂಗದ ದೃಶ್ಯದಿಂದ ಸಹೃದಯರಲ್ಲಿ ಮರುಕ ಹುಟ್ಟುವುದು ಸ್ವಾಭಾವಿಕ. ಎಳೆ ಮಕ್ಕಳು ಆಟವಾಡಿಕೊಂಡು ನಲಿಯುತ್ತಿರುವಾಗ ಯಾರಾದರೂ ಬಂದು ಅವಕ್ಕೆ ಏಟು ಕೊಟ್ಟರೆ ಎಂಥವರಿಗೂ ರೋಷವೇರುತ್ತದೆ. ಸನ್ನಿವೇಶ ಹೀಗೆ ಯುಕ್ತವೇ. ಆದರೆ ದಂಪತಿಪಕ್ಷಿಗಳಲ್ಲಿ ಒಂದನ್ನು ಮಾತ್ರ ಕೊಂದದ್ದು ಅಪರಾಧವೆ? “ಏಕಮವಧೀಃ” ಎರಡನ್ನೂ ಒಟ್ಟಿಗೆ ಕೊಂದುಹಾಕಿದ್ದಿದ್ದರೆ ದುಃಖವಾಗುತ್ತಿರಲಿಲ್ಲವೆ? 

“ಪ್ರತಿಷ್ಠಾಂ ಶಾಶ್ವತೀಃ ಸಮಾಃ ಮಾ ಆಗಮಃ” 
“ನೀನು ಲೋಕದಲ್ಲಿ ನೆಲೆಯನ್ನು ಶಾಶ್ವತವಾಗಿ ಪಡೆಯದವನಾಗು” 

ಇದೆಂಥ ಶಾಪ? ನಿರಪರಾಧಿಗಳಾದ ಜನಕ್ಕೆ ಮಾತ್ರ ಲೋಕವೇನು ಶಾಶ್ವತವೆ? “ನೀನು ಶಾಶ್ವತವಾಗಿ ಬದುಕಬೇಡ” –ಎಂಬುದರಲ್ಲಿ ಉದ್ವೇಗವುಂಟೆ? “ಶಾಶ್ವತವಾದ ಬದುಕು ನನಗೂ ಬೇಡ, ಸ್ವಾಮಿ. ಇನ್ನೈವತ್ತು ವರ್ಷಸಾಕು” ಎಂದು ಬೇಡನೆಂದಿದ್ದರೆ ಅದಕ್ಕೆ ವಾಲ್ಮೀಕಿಯ ಉತ್ತರವೇನು? 

ಇದು ಕೃತಕವಾದ ಶ್ಲೋಕ–ಎರಡರ್ಥಗಳು ಸಾಧ್ಯವಾಗಬೇಕೆಂಬ ಉದ್ದೇಶದಿಂದ ತಯಾರಾದದ್ದು. ನಿಷಾದನನ್ನು ಶಪಿಸುವುದು ಮೊದಲಿನ ಅರ್ಥ. ಇನ್ನೊಂದರ್ಥ ಹೀಗೆ: “ಎಲೋ ಕ್ರೂರಿಯಾದ ರಾವಣ, ನೀನು ಮಹಾಲಕ್ಷ್ಮೀ ವಿಷ್ಣುಸ್ವರೂಪವಾದ ಸೀತಾರಾಮ ದಂಪತಿಗಳಲ್ಲಿ ಒಬ್ಬರನ್ನು ಅಪಹರಿಸಿದೆ. ಆ ಕಾರಣದಿಂದ ಬೇಗ ಮೃತ್ಯುವಶನಾಗು.” ಹೀಗೆ ವ್ಯಾಜಾಂತರದಿಂದ ವಸ್ತುನಿರ್ದೇಶ ಮಾಡುವುದು ಕವಿಯ ಆಶಯವೆಂದು ವ್ಯಾಖ್ಯಾನಕಾರರು ವಾದಿಸಿದ್ದಾರೆ. ಕಾವ್ಯಾರಂಭದಲ್ಲಿ– 

ಆಶೀರ್ನಮಸ್ಕ್ರಿಯಾ ವಸ್ತುನಿರ್ದೇಶೋ ವಾ ॥ (ದಂಡಿ, ಕಾವ್ಯಾದರ್ಶ) 

–ಎಂದು ಸೂತ್ರವಿರುವುದು ದಿಟ. ಆದರೆ ಅದು ವಾಲ್ಮೀಕಿಯ ಕಾಲದಿಂದೀಚಿನದು. ವಾಲ್ಮೀಕಿ ಅದಕ್ಕೆ ಕಟ್ಟುಬಿದ್ದಿದ್ದನೆಂದು ನಾನು ನಂಬಲಾರೆ. ವಾಲ್ಮೀಕಿಯು ಶ್ಲೇಷಕವಿಯೆನ್ನಲು ಇನ್ನೊಂದುದಾಹರಣೆಯಿಲ್ಲ. ವ್ಯಾಕರಣ ಚಮತ್ಕಾರಪ್ರಯಾಸದಿಂದ ಕಲ್ಪಿಸಿದ ಅರ್ಥವು ಪ್ರತಿವಾದಿಗೆ ಬಾಯಿ ಮುಚ್ಚಿಸಬಹುದು; ಸರ್ಕಸ್ಸಿನ ಅಂಗಂಗಾವಿನ್ಯಾಸಸಚಿತ್ರದಂತೆ ಬೆರಗು ಮಾಡಬಹುದು; ಆದರೆ ಅಂತರಂಗದಲ್ಲಿ ಸಮಾಧಾನವನ್ನು ನೆಲಗೊಳಿಸಲಾರದು. ಈ ಒಂದು ಶ್ಲೋಕವನ್ನು ವಿನಾಯಿಸಿದರೆ ಬಾಲಕಾಂಡದ ಎರಡನೆಯ ಸರ್ಗವು ಕವಿಯ ಸಹೃದಯತೆಗೆ ದೃಷ್ಟಾಂತವನ್ನು ಕೊಡಬಲ್ಲದ್ದಾಗಿದೆ.

ಮೂರನೆಯ ಸರ್ಗವು ಕವಿ ಮಾಡಿಕೊಂಡ ಮನಶ್ಶುದ್ಧಿ ಮನಸ್ಸಿದ್ಧತೆಗಳನ್ನು ತಿಳಿಸುತ್ತದೆ. ಸತ್ಕಾವ್ಯರಚನೆ ಎಂಥ ಅಂತರಂಗಸಂಪತ್ತನ್ನಪೇಕ್ಷಿಸುತ್ತದೆ, ಅದು ಎಷ್ಟು ಪ್ರತ್ಯುತ್ತರ ಗೌರವವುಳ್ಳ ಪ್ರಯತ್ನ, ಅದು ಎಂಥ ತಪಶ್ಚರ್ಯ–ಎಂಬುದನ್ನು ಇಲ್ಲಿ ಕಾಣಬಹುದು. 

ನಾಲ್ಕನೆಯ ಸರ್ಗವು ಅತ್ಯಂತ ರಮಣೀಯವಾದದ್ದು. ಕುಶಲವರು ಹಾಡಿದ್ದು, ಋಷಿಗಳು ಮೆಚ್ಚಿ ಇನಾಂ ಕೊಟ್ಟದ್ದು ಇಲ್ಲಿಯ ವಿಷಯ. ವಾಲ್ಮೀಕಿಯ ಹಸನಚ್ಛಾಯೆ ಇಲ್ಲಿ ಕಾಣುತ್ತದೆ. 

ಹೀಗೆ ಶಿಷ್ಯಕಲ್ಪಿತಗಳೆಂದು ಊಹಿಸಲಾಗುವ ನಾಲ್ಕು ಸರ್ಗಗಳೂ, ಸುಂದರವಾಗಿ ಸ್ಥಾನೋಚಿತವಾಗಿವೆ. ಅವತಾರದ ಅದ್ಭುತ ಸನ್ನಿವೇಶ ಬಾಲಕಾಂಡದಲ್ಲಿಯ ಕಥೆ ಮೂರು ಪ್ರಕರಣಗಳುಳ್ಳದ್ದು: 

(೧) ಶ್ರೀ ರಾಮಾದಿಜನನ, (೨) ವಿದ್ಯಾರ್ಜನೆ, (೩) ವಿವಾಹ. 

ರಾಮಾದಿಗಳ ಅವತಾರಸಂದರ್ಭದಲ್ಲಿ ಕೆಲವು ಅದ್ಭುತಘಟನೆಗಳ ಪ್ರಸ್ತಾಪವಿದೆ: ಋಷ್ಯಶೃಂಗರು ಬಂದು ಮಾಡಿಸಿದ ಯಜ್ಞ, ಯಜ್ಞಪುರುಷನು ಕೊಟ್ಟ ಪಾಯಸ- ಇವು ಮುಖ್ಯವಾದವು. ದೈವಾಂಶಸಂಭೂತನಾದ ಮಹಾಪುರುಷನ ಜನನವು ಸಾಮಾನ್ಯ ಜನರ ಜನನದಂತಲ್ಲ, ಗರ್ಭಕ್ಕೆ ಹಿಂದಿನಿಂದಲೇ ಕೆಲವು ಮಹತ್ತ್ವದ ಲಕ್ಷಣಗಳು ಅವನಿಗೆ ಸೇರಿಕೊಂಡು ಬಂದಿರುತ್ತವೆ–ಎಂಬ ನಂಬಿಕೆ ಎಲ್ಲ ದೇಶಗಳಲ್ಲೂ ಸಾಮಾನ್ಯವಾಗಿದ್ದದ್ದೆಂದು ತೋರುತ್ತದೆ. ಪುರಾತನ ಗ್ರೀಕರ ಪುರಾಣಗಳಲ್ಲಿ ಅದು ಕಾಣಬರುತ್ತದೆ. ಮಹಾಪುರುಷನ ಜನ್ಮಸಮಯದಲ್ಲಿ ಆಕಾಶವಾಣಿ ಮೊಳಗುತ್ತದೆ; ನಕ್ಷತ್ರ ಗ್ರಹಗಳು ಸೂಚನೆ ಕೊಡುತ್ತವೆ; ಹುಟ್ಟಲಿರುವವನ ವಿಷಯದಲ್ಲಿ ಭಯಭಕ್ತಿಗಳಿಂದ ನಡೆದುಕೊಳ್ಳತಕ್ಕದ್ದೆಂದು ದೈವವು ಜನವನ್ನು ಹೇಗೆಹೇಗೋ ಎಚ್ಚರಿಸುತ್ತದೆ. ವಿಶೇಷಾಕಾರದ ಸಿದ್ಧತೆ ನಡೆಯುತ್ತದೆ. ಮಹಾಮಹಿಮರು ಅದರಲ್ಲಿ ಸೇರಿರುತ್ತಾರೆ. ಋಷ್ಯಶೃಂಗನು ಹಾಗೆ ರಾಮಾವತಾರಕ್ಕೆ ಸಂಬಂಧಪಟ್ಟ ಮಹಿಮವಂತ. 

ದಿವ್ಯಪಾಯಸದ ಪ್ರಸಕ್ತಿಯೂ ಅಂಥಾದ್ದೇ. ಮಹಾಪುರುಷನು ಮನುಷ್ಯಬೀಜಫಲಿತನಲ್ಲ. ಕೌಸಲ್ಯೆ ಸುಮಿತ್ರೆ ಕೈಕೇಯಿಯರಂತೆ ಕುಂತಿ ಮಾದ್ರಿಯರೂ ದಿವ್ಯಪ್ರಸಾದದಿಂದ ಗರ್ಭವತಿಯರಾದರೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಬಹುದು. 

ಇಂಥಾ ಅದ್ಭುತಗಳು ವಾಸ್ತವಿಕಗಳೆ?–ಎಂದು ಕೇಳತಕ್ಕದ್ದಲ್ಲ. ನಾವು ಓದುತ್ತಿರುವುದು ಕಾವ್ಯವನ್ನ, ಕೋರ್ಟು ಕೈಫಿಯತ್ತನಲ್ಲ. ಕಾವ್ಯದ ಮುಖ್ಯವಸ್ತುವನ್ನು ನಾವು ಗೌರವಗಂಭೀರ ಬುದ್ಧಿಯಿಂದ ನೋಡಬೇಕೆಂಬುದು ಕವಿಯ ಆಶಯ. ಅಂಥಾ ಬುದ್ಧಿಯನ್ನು ನಮ್ಮಲ್ಲಿ ಉತ್ಪಾದನೆ ಮಾಡುವುದಕ್ಕಾಗಿ ಅವನು ಅದ್ಭುತಘಟನೆಗಳ ವಾತಾವರಣವನ್ನು ನಿರ್ಮಿಸುತ್ತಾನೆ. 

ಋಷ್ಯಶೃಂಗೋಪಾಖ್ಯಾನವು ಒಂದು ಹಳೆಯ ನಂಬಿಕೆಯನ್ನು ತೋರಿಸುತ್ತದೆ. ತಪಸ್ವಿ ಇರುವಲ್ಲಿ ಸಮೃದ್ಧಿ; ವ್ರತಶೀಲನಿರುವಲ್ಲಿ ಜನಕ್ಷೇಮ. 

ಇನ್ನೊಂದು ಹಳೆಯ ನಂಬಿಕೆ; ಗಣಿಕಾವೃತ್ತಿ ತ್ರೇತಾಯುಗದಲ್ಲಿಯೇ ಒಂದು ನಿಯತವಾದ ಕುಲವೃತ್ತಿಯಾಗಿತ್ತು. ಸಮಾಜವು ಆ ವೃತ್ತಿಯ ಅವಶ್ಯಕತೆಯನ್ನು ಅಂಗೀಕರಿಸಿತ್ತು. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಆಗಿನ ಜನ ಮಾಡಲಿಲ್ಲ. ಊರಿಗೊಂದು ಕೆರೆ, ಕಾಮಿಗೊಂದು ಶೃಂಗಾರಪೇಟೆ, ಕೊಳ್ಳುವವರಿಗೆ ಒಂದು ಗೊತ್ತಾದ ಪೇಟೆಯಿಲ್ಲದಿದ್ದರೆ ಅವರು ಮನೆಮನೆಯೂ ಅಂಗಡಿ ಎಂದು ತಿಳಿದಾರು. ಇದು ಇಂದಿನ ನವನಾಗರೀಕ ಸುಧಾರಕರು ಆಲೋಚಿಸಬೇಕಾದ ವಿಷಯ.

ಶ್ರೀರಾಮನ ವಿದ್ಯಾವಿಕಾಸಕ್ಕಾಗಿ ವಿಶ್ವಾಮಿತ್ರನನ್ನು ಕರೆತಂದದ್ದು ವಾಲ್ಮೀಕಿಯ ಸಂಧಾನಕೌಶಲದ ಒಂದು ಶಿಖರಾಗ್ರ. ಮಹಾಪುರುಷನನ್ನು ಮಹಾಕಾರ್ಯಕ್ಕೆ ಸಿದ್ಧಪಡಿಸಲು ಮಹಾಪುರುಷನೇ ಬೇಕು. ವಿಶಾಮಿತ್ರನು ಅಸಾಧಾರಣಪುರುಷ. ಕ್ಷತ್ರಿಯನಾಗಿದ್ದು ಬ್ರಹ್ಮತ್ವವನ್ನು ಸಂಪಾದಿಸಿಕೊಂಡವನು; ಮನುಷ್ಯ ಸ್ವಭಾವದ ಆಳವನ್ನೂ ತುದಿಯನ್ನೂ ಕಂಡಿದ್ದವನು; ಲೋಕಮೋಹಗಳಲ್ಲಿ ಪಾಡುಪಟ್ಟು ಪಾರಾಗಿದ್ದವನು; ಸಾಹಸ ಮಾಡಿ ಸೋತು ಎದೆಗುಂದದೆ ಮತ್ತೆ ಮತ್ತೆ ಪ್ರಯತ್ನ ಮಾಡಿ ಕೃತಾರ್ಥನಾದವನು; ಪರಾಕ್ರಮಿ, ಶರಣಾಗತರಕ್ಷಕ. ಇಂಥವನಲ್ಲವೆ ಜೀವನ ಮಾರ್ಗದಲ್ಲೊದಗುವ ಅಪಾಯಗಳನ್ನು ಕುರಿತು ಎಚ್ಚರಿಕೆ ಕೊಡಬಲ್ಲವನು–ಭಯ ಬಿಡಿಸಿ ಉತ್ಸಾಹ ತುಂಬಬಲ್ಲವನು? ಆತನಿಂದ ಶ್ರೀರಾಮನಿಗಾದ ಪ್ರಯೋಜನಗಳು ಐದು ತೆರದವು: 

1) ಅಸ್ತ್ರಶಸ್ತ್ರೋಪದೇಶ, 
2) ರಾಕ್ಷಸ ಪರಿಚಯ, 
3) ಪೂರ್ವೇತಿಹಾಸಶ್ರವಣ, 
4) ಮನಃಪ್ರಸನ್ನತಾ ಸಾಧಕವಾದ ನಾನಾದೇಶಸಂಚಾರ, 
5) ಸಾನುರೂಪ ವಿವಾಹ. 

ಶ್ರೀರಾಮನಿಗೆ ವಿಶ್ವಾಮಿತ್ರನು ಹೇಳಿದ ಆಖ್ಯಾಯಿಕೆಗಳಲ್ಲಿ ಮುಖ್ಯವಾದ ಅಂಶಗಳು ತನ್ನ ಜೀವಿತಕಥೆ, ರಾಮಪೂರ್ವಿಕಕಥೆ, ಷಣ್ಮುಖಕಥೆ, ಭಗೀರಥಕಥೆ, ಅಹಲ್ಯಾಕಥೆ. ಇವುಗಳಲ್ಲಿ ಕೆಲವು ದೇಶಚರಿತ್ರೆಯ ಅಂಶಗಳು, ಕೆಲವು ಎಷ್ಟೋ ಹಿಂದಿನಿಂದ ಬಂದಿದ್ದ ಐತಿಹ್ಯಗಳು. ಅಹಲ್ಯೋಪಾಖ್ಯಾನವು ವೇದದಿಂದ ಬಂದಿದ್ದದ್ದು. 

ಗೌರಾವಸ್ಕನ್ದಿನ್ನಹಲ್ಯಾಯೈ ಜಾರ । 
ಕೌಶಿಕಬ್ರಾಹ್ಮಣ ಗೌತಮಬ್ರುವಾಣ ॥ (ತೈತ್ತಿರೀಯಾರಣ್ಯಕ: ೧–೧೨) 

ದೇವೇಂದ್ರನು ಮಹಾತೇಜಸ್ವಿ, ಆದರೆ ವಿಷಯಲಂಪಟ. ಅವನನ್ನು ಬಿಟ್ಟು ಬಾಳಲಾಗದು; ನಂಬಿ ಮೈಮರೆತಿರಬಾರದು. ಭೂಲೋಕದಲ್ಲಿ ಯಾರಾದರೂ ಯಜ್ಞ ಮಾಡುತ್ತಾರೆ, ತಪಸ್ಸು ಮಾಡುತ್ತಾರೆ–ಎಂದರೆ, ಅವರು ಯಾವ ವರ ಸಂಪಾದಿಸಿ ತನಗೆ ಏನು ಊನ ತಂದಾರೋ ಎಂದು ಇಂದ್ರನಿಗೆ ಭಯ. ಕೂಡಲೆ ಅವನು ವಿಘ್ನ ತರುತ್ತಾನೆ. ವಿಶ್ವಾಮಿತ್ರನ ತಪಸ್ಸನ್ನು ಕೆಡಿಸಲು ರಂಭೆಯನ್ನು ಸಂಕಲ್ಪಿಸಿ ಯಜ್ಞಾಶ್ವವನ್ನು ದಿಗ್ವಿಜಯಕ್ಕೆ ಕಳುಹಿಸಿದಾಗ, ಇಂದ್ರನು ಆ ಅಶ್ವವನ್ನು ಕದ್ದು ಪಾತಾಳದಲ್ಲಿ ಬಚ್ಚಿಟ್ಟು, ಸಗರಪುತ್ರರ ವಿನಾಶಕ್ಕೆ ಕಾರಣನಾದ. ಇಂಥ ಕಥೆಗಳು ಶ್ರೀರಾಮನಿಗೆ ಬುದ್ಧಿವಿಚಾರ ಪ್ರಚೋದಕವಾಗಿದ್ದಿರಬೇಕು. 

ಶ್ರೀರಾಮಚಂದ್ರನಿಗೆ ಬೇಕಾಗಿದ್ದದ್ದು ಪುಸ್ತಕಪಾಠವಲ್ಲ, ಲೋಕಪರಿಜ್ಞಾನ, ಯುಕ್ತಾಯುಕ್ತ ವಿವೇಚನಾಭ್ಯಾಸ, ಧರ್ಮಸೂಕ್ಷ್ಮಗ್ರಹಣಕುಶಲತೆ, ಆತ್ಮವಿಶ್ವಾಸ, ಸ್ವಕರ್ತವ್ಯ ಗೌರವ. ಈ ಗುಣಗಳನ್ನು ಅವನಲ್ಲಿ ಕೃಷಿಮಾಡಿ ಬೆಳಸಲು ವಿಶ್ವಾಮಿತ್ರನು ಹೇಳಿದ ಉಪಾಖ್ಯಾನಗಳು ಸಾಧಕವಾದವು. ಮಹರ್ಷಿಯ ಸಹವಾಸದಲ್ಲಿ ಮಾಡಿದ ದೇಶಸಂಚಾರದಿಂದ ಬಾಲಕನಾದ ಶ್ರೀರಾಮನ ದೇಹಪಾಟವವೂ ಧನುರ್ದಕ್ಷತೆಯೂ ಮನೋವಿಕಾಸವೂ ಬುದ್ಧಿ ಜಾಗರ್ಯವೂ ಬೆಳೆದವು. ಆತನು ಹಾಗೆ ಪ್ರಬುದ್ಧಜೀವನಭಾರನಿರ್ವಾಹಕ್ಕೆ ಅರ್ಹನಾದನೆಂಬ ನಂಭಿಕೆ ವಿಶ್ವಾಮಿತ್ರನಲ್ಲುದಿಸಿತು. ಆ ವೇಳೆಗೆ ಮಿಥಿಲಾ ನಗರದಲ್ಲಿ ಜನಕರಾಜನು ಮಗಳಿಗಾಗಿ ವರಾನ್ವೇಷಕ್ಕೆ ಸಜ್ಜು ಮಾಡಿಕೊಂಡಿದ್ದ. ಸಕಾಲದಲ್ಲಿ ದಶರಥ ಜನಕ ಬಾಂಧವ್ಯದ ಅನ್ಯೋನ್ಯಾರ್ಹತೆಯನ್ನು ಕಂಡುಕೊಂಡದ್ದು ವಿಶ್ವಾಮಿತ್ರನ ಭವಿಷ್ಯದ್ದೃಷ್ಟಿ. ಆ ಮಹರ್ಷಿಯ ರಂಭಾ ಮೇನಕಾ ಪ್ರಸಂಗಗಳನ್ನು ನೆನೆಸಿಕೊಳ್ಳುವವರು ಶ್ರೀ ಸೀತಾರಾಮವಿವಾಹ ಸಂಧಾನಿಯೂ ಆತನೇ ಎಂಬುದನ್ನು ಮರೆಯಬಾರದು. ಹಾಗೆಯೇ ವಿಶ್ವಾಮಿತ್ರಸಂಧಾನದಿಂದ ಯಾವ ಅಹಲ್ಯೆಗೆ ಶ್ರೀರಾಮಸಂದರ್ಶನಮಹಿಮೆಯಿಂದ ಶಾಪವಿಮೋಚನೆಯಾಯಿತೋ ಆಕೆಯ–ಆ ಗೌತಮಪತ್ನಿಯ–ಮಗ ಶತಾನಂದನೇ ಜನಕಪುರೋಹಿತನೂ ಶ್ರೀ ಸೀತಾಕಲ್ಯಾಣದಲ್ಲಿ ಶಾಸ್ತ್ರಕಾರ್ಯಪ್ರವರ್ತಕನೂ ಆದನೆಂಬುದನ್ನೂ ಮರೆಯಬಾರದು. ಹೀಗೆ ಎಲ್ಲಕ್ಕೂ ಶುಭ್ರದಲ್ಲಿ ಪರಿಸಮಾಪ್ತಿ. 

ಪರಶುರಾಮನು ಕ್ರಾಂತಿಪುರುಷ (Revolutionary) ಲೋಕದಲ್ಲಿ ಒಂದು ಅನ್ಯಾಯ ಪ್ರಬಲಿಸಿದಾಗ ಎಲ್ಲೋ, ಯಾರ ಮನಸ್ಸಿನಲ್ಲೋ, ಒಂದು ಪ್ರತಿಭಟನೆಯ ವೀರಾವೇಶವೇಳುತ್ತದೆ. ಅದು ಕ್ರಾಂತಿ. ಅದು ಮನುಷ್ಯ ಸ್ವಭಾವದಲ್ಲಿರುವ ಸತ್ತ್ವಗುಣದ ಉದ್ರೇಕ, –ಆದರೆ ರಜೋಮಿಶ್ರಿತವಾದ ಉದ್ರೇಕ. ಕ್ರಾಂತಿಕಾರನ ರೋಷದಲ್ಲಿ ದಯೆ ದಾಕ್ಷಿಣ್ಯಗಳಿಗೆಡೆಯಿಲ್ಲ, ಸಾವಧಾನವಾದ ಯುಕ್ತಾಯುಕ್ತ ವಿವೇಚನೆಗೂ ಎಡೆಯಿಲ್ಲ; ಎಲ್ಲವೂ ಹಠ–ವಿಚಾರನಿಗ್ರಹಿಯಾದ ಹಠ. ಇಂಥ ಹಠೋದ್ವೇಗಕ್ಕೂ ಮನುಷ್ಯಚರಿತ್ರೆಯಲ್ಲಿ ಸ್ಥಲವುಂಟು, ಏಕೆಂದರೆ ಮನುಷ್ಯ ಸ್ವಭಾವದಲ್ಲಿ ಅನ್ಯಾಯಾವಕಾಶವುಂಟು. ಅನ್ಯಾಯವು ಅತ್ಯುತ್ಕಟವಾದಾಗ ನ್ಯಾಯತತ್ಪರವಾದ ಕ್ರಾಂತಿಯೇ ಅದಕ್ಕೆ ತಕ್ಕ ಪ್ರತೀಕಾರವಾಗುತ್ತದೆ. ರೋಗ ಎಂಥಾದ್ದೋ ಔಷಧ ಅಂಥಾದ್ದು. ಶೀತಕ್ಕೆ ಶುಂಠಿ, ಸನ್ನಿಪಾತಕ್ಕೆ ಜ್ವರಕುಠಾರ. ಕ್ರಾಂತಿಗೆ ಕಾರಣ ಹುಟ್ಟದಿರುವುದು ಸಮಾಜಕ್ಷೇಮದ ಮೊದಲನೆಯ ಲಕ್ಷಣ. ಕ್ರಾಂತಿ ಹುಟ್ಟಿದ ಮೇಲೆ ಅದನ್ನು ಕೂಡಿದಷ್ಟು ಬೇಗ ಶಮನ ಮಾಡುವುದು ಎರಡನೆಯ ಕ್ಷೇಮಲಕ್ಷಣ. ಪರಶುರಾಮನ ಕ್ರಾಂತಿಯ ಕಾರ್ಯ ಮುಗಿದಿತ್ತು, ಆ ಕ್ರೋಧದ ಜ್ವಾಲೆ ಮಾತ್ರ ಇಳಿದಿರಲಿಲ್ಲ. ನೃಸಿಂಹಸ್ವಾಮಿ ಮಾಡಬೇಕಾಗಿದ್ದ ಕೆಲಸ ಮುಗಿದಮೇಲೂ ಆ ಕೋಪದ ಬೆಂಕಿ ಉರಿಯುತ್ತಿರಲಿಲ್ಲವೆ? ಅಡಿಗೆಯಾಗಿ ಪಾತ್ರೆಯನ್ನಿಳಿಸಿದಮೇಲೂ ಒಲೆಯಲ್ಲಿ ಕೆಂಡವಾರದೆ ಇರುತ್ತದಲ್ಲವೆ? ಪರಶುರಾಮನ ಕೋಪದ ಬಿಸಿಯಿಳಿದಲ್ಲದೆ ಲೋಕಕ್ಕೆ ನೆಮ್ಮದಿಬಾರದು. ಮನೆಯಲ್ಲಿ ಒಲೆ ಉರಿಯಬೇಕಾದದ್ದು ದಿನದ ಇಪ್ಪತ್ತುನಾಲ್ಕು ಘಂಟೆಗಳಲ್ಲಿ ಒಂದೆರಡರ್ಧಘಂಟೆಗಳ ಕಾಲ ಮಾತ್ರ. ಸಮಾಜಕ್ಕೆ ಕ್ರಾಂತಿ ಬೇಕಾಗಬಹುದಾದದ್ದು ಒಂದು ಯುಗದಲ್ಲಿ ಒಂದೆರಡು ದಿನವಿರಬಹುದು. ಮಿಕ್ಕ ದಿವಸ ಬೇಕಾದದ್ದು ಸಮಾಧಾನ–ಸುವ್ಯವಸ್ಥೆಯ ಶಾಂತಿ. ಅದನ್ನು ನೆಲೆಗೊಳಿಸಬಲ್ಲವನು ದಶರಥರಾಮನು. 

ಕಾಲಾಗ್ನಿ ಸದೃಶಃ ಕ್ರೋಧೇ ಕ್ಷಮಯಾ ಪೃಥಿವೀಸಮಃ ॥ 

ಆಪಾತವಿರುದ್ಧಗಳಾದ ಗುಣಗಳನ್ನು ಲೋಕಕ್ಷೇಮಸಾಧನೆಯಲ್ಲಿ ಸಮರಸಕ್ಕೆ ತರಬಲ್ಲ ಧರ್ಮಸೂಕ್ಷ್ಮಸಮರ್ಥನು ಬೇಕಾಗಿದ್ದ ಕಾಲದಲ್ಲಿ ಅಂಥ ಮಹೋಪಕಾರಿ ಶ್ರೀರಾಮರೂಪದಲ್ಲಿ ಸಿದ್ಧನಾಗಿದ್ದನೆಂದು ಸೂಚಿಸಿ ಬಾಲಕಾಂಡವು ಸಮಾಪ್ತವಾಗುತ್ತದೆ. 

ಬಾಲಕಾಂಡವು ಶ್ರೀರಾಮನ ಸ್ವಭಾವಪರಿಪಾಕವಿಧಾನದ ನಿರೂಪಣೆ. 

ಅದರ ಬೇರೆ ಬೇರೆ ಪ್ರಕರಣಗಳು ಸಮಂಜಸವಾಗಿ ಹೊಂದಿಕೊಂಡು, ಕಥಾಧಾರೆಯನ್ನು ಮನೋಹರವಾಗುವಂತೆ ಹರಿಯಿಸಿ, ಅಯೋಧ್ಯಾಕಾಂಡದಲ್ಲಿ ಶ್ರೀರಾಮನನ್ನು ಹಠಾತ್ತಾಗಿ ಎದುರಿಸಿದ ಕಠೋರಪ್ರಶ್ನೆಗೆ ಆತನು ಹೇಗೆ ಸಿದ್ಧಪಟ್ಟಿದ್ದನೆಂಬುದನ್ನು ತೋರಿಸುತ್ತದೆ. 

ವಿಶ್ವಾಮಿತ್ರಾಂತರಂಗಾಯ ಮಿಥಿಲಾನಗರೀಪತೇಃ । 
ಭಾಗ್ಯಾನಾಂ ಪರಿಪಾಕಾಯ ಭವ್ಯರೂಪಾಯ ಮಂಗಲಮ್‍ ॥ 

ಯಾವ ಸರಸಾಗ್ರವಾದ ಲೇಖನಿ ಸುಂದರಕಾಂಡವನ್ನು ಕನ್ನಡಜನಕ್ಕೆ ಎರಡು ವರ್ಷಗಳ ಹಿಂದೆ ಒದಗಿಸಿತೋ ಅದೇ ಕೃತಕೃತ್ಯಲೇಖನಿ ಈಗ ಬಾಲಕಾಂಡವನ್ನು ಬರೆದು ಕೊಟ್ಟಿರುವ ಸಂಗತಿ ಸಮಸ್ತರಿಗೂ ಸಂತೋಷಪ್ರದವಾಗುತ್ತದೆಯೆಂದು ನಾನು ನಂಬಿಕೊಂಡಿದ್ದೇನೆ. ರಾಮಾಯಣವನ್ನು ಭಾಷಾಂತರ ಮಾಡುವುದು ಸುಲಭದ ಕೆಲಸವಲ್ಲ. ಮೂಲಗ್ರಂಥದ ಪಾಠಾಂತರಗಳಲ್ಲಿ ಉತ್ತಮವಾವುದೆಂಬುದನ್ನು ನಿಶ್ಚಯಮಾಡುವುದು ಮೊದಲನೆಯ ಕಷ್ಟ. ಆರಿಸಿಕೊಂಡ ಪಾಠಕ್ಕೆ ನಾನಾ ವ್ಯಾಖ್ಯಾನಗಳು ನಾನಾವಿಧವಾಗಿ ಅರ್ಥ ಹೇಳುವಾಗ ಯಾವುದು ಗ್ರಾಹ್ಯವೆಂಬುದು ಎರಡನೆಯ ಕಷ್ಟ. ಇದೂ ಆದ ಮೇಲೆ ಅದಕ್ಕೆ ತಕ್ಕ ಕನ್ನಡ ಶಬ್ದ–ಸಾಮಾಗ್ರಿಯನ್ನೂ ವಾಕ್ಯಶೈಲಿಯನ್ನೂ ಅಳವಡಿಸಿಕೊಳ್ಳುವುದು ಬಲುದೊಡ್ಡ ಕಷ್ಟ. ಮಾತಿಗೆ ಪ್ರತಿಮಾತನ್ನಿಡುವುದು ಭಾವಾನುವಾದವಲ್ಲ. ಸಂಸ್ಕೃತ ಬಲ್ಲವರಿಗೆ ಸಂಸ್ಕೃತ ಮೂಲದಿಂದ ಎಂಥ ಸರಳತೆಯ, ಎಂಥ ಪದಮಾಧುರ್ಯದ, ಯಾವ ಸನ್ನಿವೇಶಚಿತ್ರದ, ಯಾವ ಗಂಭೀರಾರ್ಥದ ಅನುಭವವಾಗುತ್ತದೆಯೋ ತತ್ಸದೃಶವಾದ ಅನುಭವವು ಕನ್ನಡಿಗರಾದ ಓದುಗರಿಗೆ ಅಷ್ಟು ಸುಲಭವಾಗಿ ಆಗಬೇಕೆಂಬುದಲ್ಲವೆ ಉದ್ದೇಶ? ಇದು ಬಹುವಾಗಿ ಬುದ್ಧಿಪರಿಶ್ರಮವನ್ನಪೇಕ್ಷಿಸುತ್ತದೆ; ರಸವಿವೇಕವನ್ನಪೇಕ್ಷಿಸುತ್ತದೆ. ಕಾವ್ಯವನ್ನು ಕಾವ್ಯವಾಗಿ ಪರಿವರ್ತಿಸುವುದಲ್ಲವೆ ನಮಗೆ ಬೇಕಾದದ್ದು? ವಿದ್ವಾನ್‍ ರಂಗನಾಥಶರ್ಮರವರು ಸುಮಾರು ಆರು ವ್ಯಾಖ್ಯಾನಗಳನ್ನು ಪರಿಶೀಲಿಸಿ, ಅಲ್ಲಿ ದೊರೆತದ್ದನ್ನು ಸ್ವತಂತ್ರವಿಮರ್ಶೆಯಿಂದ ನೋಡಿ, ಅರ್ಥ ನಿಷ್ಕರ್ಷೆಮಾಡಿದ್ದಾರೆ. ಎಷ್ಟೋ ಸಾರಿ ತಮಗೆ ಶಂಕೆ ಉಳಿದುಕೊಂಡಾಗ ನನ್ನೊಡನೆಯೂ ಇತರ ಮಿತ್ರರೊಡನೆಯೂ ವಿಚಾರ ನಡೆಸಿದ್ದಾರೆ. ಹೀಗೆ ಪ್ರಯಾಸಸಿದ್ಧವಾದದ್ದು ಈ ಗ್ರಂಥದಲ್ಲಿರುವ ಭಾಷಾನುವಾದ. ಶ್ರೀರಂಗನಾಥ ಶರ್ಮರವರ ಕನ್ನಡ ಬರಿಯ ತರ್ಜುಮೆಯದಲ್ಲ, ಸ್ವತಂತ್ರ ಪ್ರಸನ್ನವಾದದ್ದು. ಕನ್ನಡದಲ್ಲಿ ವ್ಯಾಕರಣದ ಕಡೆ ಹೆಚ್ಚು ಗಮನವಿಟ್ಟರೆ ವಾಕ್ಯವು ಪೆಡಸಾಗುತ್ತದೆ; ಸುಲಭತೆಯ ಕಡೆ ನೋಡಿದರೆ ವಾಕ್ಯವು ದುರ್ಬಲವಾಗುತ್ತದೆ. ಪಾಂಡಿತ್ಯದ ಅತಿಯೂ ಪಾಮರತೆಯ ಅತಿಯೂ ಇಲ್ಲದಂತೆ ಬರೆಯುವುದು ಕನ್ನಡದಲ್ಲಿ ಬಲುಕಷ್ಟ. ನಾಲ್ಕು ಬಗೆಯ ವಾಕ್ಯರಚನೆ ಸಾಧ್ಯವಾಗಿರುವಾಗ ಅದರಲ್ಲಿ ಯಾವುದು ರಸಪೋಷಕವೆಂದು ಶ್ರೀ ರಂಗನಾಥಶರ್ಮರವರು ಹುಡುಕಿ ತಿಳಿದಿದ್ದಾರೆ. ಅವರ ವಾಕ್ಪ್ರವಾಹದಲ್ಲಿ ಸಹಜತೆ, ಲಾಲಿತ್ಯ, ವೈಶದ್ಯ, ಗಾಂಭೀರ್ಯ, ಓಜಸ್ಸು–ಈ ಗುಣಗಳು ಪ್ರಕಾಶಮಾನವಾಗಿದೆ. ಅವರ ಮುಖ್ಯದೃಷ್ಟಿ ರಸಪುಷ್ಟಿಯ ಕಡೆ. ಮಾತುಮಾತೂ ಅದಕ್ಕೆ ಸಹಾಯವಾಗಿದೆ. ಒಳ್ಳೆಯ ಕನ್ನಡ ಹೇಗಿರುತ್ತದೆಂದು ಕೇಳುವವರಿಗೆ ಇದು ನಾನು ತೋರಿಸುವ ಮಾದರಿ. ಶ್ರೀರಂಗನಾಥಶರ್ಮರವರು ತಮ್ಮ ಭಗವದನುಗೃಹೀತವಾದ ಲೇಖನಿಯಿಂದ ಶ್ರೀಮದ್ರಾಮಾಯಣದ ಉಳಿದ ಐದು ಕಾಂಡಗಳನ್ನು ಕನ್ನಡಿಗರಿಗೆ ದೊರಕಿಸಿ ಯಶಸ್ವಿಯಾಗುವಂತೆ ಭಗವಾನ್‍ವಾಲ್ಮೀಕಿ ಮಹರ್ಷಿಗಳು ಆಶೀರ್ವದಿಸಬೇಕೆಂದು ಬೇಡುತ್ತೇನೆ. 

ಈ ವಾಲ್ಮೀಕಿಸೇವಾಪ್ರಯತ್ನದಲ್ಲಿ ನನಗೆ ಅವಕಾಶ ಕೊಡಿಸಿದವರು ಮುಖ್ಯವಾಗಿ ನನ್ನ ಮಿತ್ರರಾದ ಇಂಜಿನೀಯರ್‍ ಶ್ರೀ ಡಿ.ಸಿ. ಅನಂತರಾಮಯ್ಯನವರು. ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಕಟ್ಟಡದ ಸಂಬಂಧದಲ್ಲಿ ನನಗೆ ಉಪಕಾರಿಗಳಾಗಿ ನನ್ನ ಕೃತಜ್ಞತೆಯನ್ನು ಸಂಪಾದಿಸಿಕೊಂಡು ಇತರ ಕಾರಣಗಳಿಂದಲೂ ಇಷ್ಟರಾಗಿದ್ದಾರೆ. ಶ್ರೀರಾಮಮಂದಿರದ ಇತರ ಕಾರ್ಯಕರ್ತರುಗಳಾದ ಶ್ರೀ ಎಚ್‍.ಎಸ್‍. ಕೃಷ್ಣಸ್ವಾಮಿ, ಶ್ರೀ ಎಸ್‍.ಎನ್‍. ಮೂರ್ತಿ ಮೊದಲಾದ ಮಿತ್ರರು ನನ್ನನ್ನು ಪ್ರೋತ್ಸಾಹಿಸಿದ್ದಾರೆ. ಸಮಗ್ರ ರಾಮಾಯಣವನ್ನೂ ಇದೇ ರೀತಿ ಪ್ರಕಾಶಪಡಿಸುವ ಭಾಗ್ಯವನ್ನು ಶ್ರೀ ಸೀತಾರಾಮಪ್ರಭುವು ಈ ಸನ್ಮಿತ್ರರಿಗೆ ಅನುಗ್ರಹಿಸಲೆಂದು ಪ್ರಾರ್ಥಿಸುತ್ತೇನೆ. 

ಜಗನ್ಮಂಗಲಕಾರಕವಾದ ವಾಲ್ಮೀಕಿಪ್ರಸಾದವು ವಿಸ್ತರಿಸಿ ಸಂವರ್ಧಿಸಲಿ. ಸರ್ವಂ ಶಿವಂ.

 ಶ್ರೀಮದ್ಧರ್ಮಾತ್ಮಸಂಸಕ್ತಲೋಕಚಾರಿತ್ರದರ್ಶನಃ । 
ರಾಜತಾಂ ಸತತಂ ಸ್ವಚ್ಛೋ ವಾಲ್ಮೀಕೇಃ ಕಾವ್ಯದರ್ಪಣಃ ॥ (೧೯೬೬)

No comments:

Post a Comment