Wednesday 10 January 2024

ಭಾಗ 5 - ಅಯೋಧ್ಯಾಕಾಂಡ (ವಿದ್ವಾನ್ ರಂಗನಾಥ ಶರ್ಮಾ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ ಕನ್ನಡಾನುವಾದ ಗ್ರಂಥಗಳಿಗೆ ಡಾ. ಡಿ.ವಿ. ಗುಂಡಪ್ಪನವರು ಬರೆದ ಮುನ್ನುಡಿಗಳು)

ಶ್ರೀ ಸೀತಾರಾಮರ ಕೃಪಾಬಲದಿಂದ ನಮ್ಮ ಸ್ನೇಹಿತರು ಸಂಕಲ್ಪಿಸಿದ ಶ್ರೀಮದ್ರಾಮಾಯಣ ಪ್ರಕಟನಕಾರ್ಯವು ಈವರೆಗೆ ಯಶಸ್ವಿಯಾಗಿ ನಡೆದುಕೊಂಡು ಬಂದಿದೆ:

1) ಮೊದಲು ಸುಂದರಕಾಂಡವು ಜನವರಿ ೧೯೬೫ರಲ್ಲಿ ಪ್ರಕಟವಾಯಿತು.

2) ಎರಡನೆಯದಾಗಿ ಬಾಲಕಾಂಡವು ಮಾರ್ಚಿ ೧೯೬೬ರಲ್ಲಿ ಪ್ರಕಟವಾಯಿತು.

3) ಅಯೋಧ್ಯಾಕಾಂಡದ ಪೂರ್ವಾರ್ಧ ಈಗ ಪ್ರಕಟವಾಗುತ್ತಿದೆ.

4) ಅಯೋಧ್ಯಾಕಾಂಡದ ಉತ್ತರಾರ್ಧ ಕೆಲವು ತಿಂಗಳೊಳಗಾಗಿ ಪ್ರಕಟವಾಗುವ ಭರವಸೆಯಿದೆ.

ರಾಮಾಯಣದ ಏಳು ಕಾಂಡಗಳಲ್ಲಿ ಯುದ್ಧಕಾಂಡವನ್ನು ಬಿಟ್ಟರೆ ಅಯೋಧ್ಯಾಕಾಂಡವೇ ಬಹಳ ದೊಡ್ಡದು. ಪುಸ್ತಕ ಬೇಕೆಂದು ಕೇಳುವವರು ಅವಸರಪಡಿಸುತ್ತಿರುವುದರಿಂದಲೂ ಕೈ ಹಿಡಿತದ ಸೌಕರ್ಯವನ್ನು ಯೋಚಿಸಿಯೂ ಈ ಕಾಂಡವನ್ನು ಎರಡು ಸಂಪುಟಗಳಾಗಿ ಪ್ರಕಟಗೊಳಿಸುವುದು ಉಚಿತವೆಂದು ತೋರಿತು.

ಪ್ರಕಟನಕಾರ್ಯ ಉಪಕ್ರಮವಾದಂದಿನಿಂದ ಈವರೆಗೆ ದೇಶದ ಆರ್ಥಿಕಸ್ಥಿತಿ ಮತ್ತಷ್ಟು ಕೆಟ್ಟಿದೆ. ಒಂದು ಕಡೆ ಕಾಗದದ ಬೆಲೆಯೂ ಮುದ್ರಣದ ವೆಚ್ಚವೂ ಹೆಚ್ಚಿ ಹಣದ ಜವಾಬ್ದಾರಿ ಪ್ರಕಾಶಕರಿಗೆ ಇಮ್ಮಡಿಯಾಗಿದೆ. ಇನ್ನೊಂದು ಕಡೆ ಗ್ರಾಹಕರ ಸ್ಥಿತಿಯೂ ದುರ್ಬಲವಾಗಿದೆ. ಆಹಾರವಸ್ತುಗಳ ಬೆಲೆಗಳು, ಇತರ ಜೀವನಸಾಮಾಗ್ರಿಯ ವೆಚ್ಚ–ಇವು ಒಂದಕ್ಕೆ ನಾಲ್ಕಾಗಿವೆ. ಹೀಗೆ ಉಭಯತ್ರ ಕಷ್ಟವಾಗಿದೆ.

ಆದರೂ, ದೇಹಜೀವನಕ್ಕೆ ಅನ್ನವಸ್ತ್ರಗಳು ಹೇಗೋ ಆತ್ಮದ ಜೀವನಕ್ಕೆ ರಾಮಾಯಣ ಭಾರತಗಳು ಹಾಗೆ ಅವಶ್ಯ ಸಾಮಾಗ್ರಿಗಳಾಗಿರುತ್ತವೆ. ಈ ನಂಬಿಕೆಯಿಂದ ಪ್ರಕಾಶಕರು ಮುಂದುವರಿಯುತ್ತಿದ್ದಾರೆ. ಅವರ ಉತ್ಸಾಹವನ್ನು ಸಫಲಗೊಳಿಸುವುದು ಮಹಾಜನರ ಮೇಲಿರುವ ಕರ್ತವ್ಯಭಾರ.

***********

ಅಯೋಧ್ಯಾಕಾಂಡವನ್ನು ಶ್ರೀಮದ್ರಾಮಾಯಣದ ಹೃದಯಾಂಗಣವೆನ್ನಬಹುದು. ಇಲ್ಲಿ ಶ್ರೀರಾಮನ ಯೌವರಾಜ್ಯಕ್ಕೆ ವಿಘ್ನ ಬಂದದ್ದು ಮೊದಲು ಶ್ರೀರಾಮನ ಅರಣ್ಯವಾಸದ ಪ್ರಾರಂಭದವರೆಗಿನ ಕಥೆಯಿರುತ್ತದೆ. ಈ ಕಥಾಭಾಗದಲ್ಲಿ ಹೃದಯವಿದ್ರಾವಕವಾದ ಘಟನೆಗಳು ನಾಲ್ಕಾರು ನಡೆಯುತ್ತವೆ. ಈ ಘಟನೆಗಳು ಶ್ರೀರಾಮನಿಗೂ ಸೀತಾದೇವಿಗೂ ಭರತಲಕ್ಷ್ಮಣರಿಗೂ ದಶರಥ ಕೌಸಲ್ಯೆ ಸುಮಿತ್ರೆಯರಿಗೂ ಸಹ ಒದಗಿದ ಧರ್ಮಪರೀಕ್ಷೆಗಳನ್ನು ನಮ್ಮ ಕಣ್ಣ ಮುಂದೆ ತರುತ್ತವೆ. ಗ್ರಂಥವನ್ನೋದುತ್ತ ಆಯಾ ಸಂದರ್ಭಪಾತ್ರಗಳಲ್ಲಿ ತನ್ಮಯರಾದರೆ ದುಃಖಾವೇಗದಿಂದ ಎದೆಯುಕ್ಕಿ ಕಣ್ಣೀರು ಬರುವುದನ್ನು ಯಾವ ಸಾಮಾನ್ಯ ಮನುಷ್ಯರೂ ತಡೆಯಲಾಗದು.

ವಾಲ್ಮೀಕಿಗಳ ಕಾವ್ಯವನ್ನು ನೋಡಹೊರಡುವವರಿಗೆ ಒಂದು ಎಚ್ಚರಿಕೆ ಅವಶ್ಯವಾಗಿದೆ. ವಾಲ್ಮೀಕಿಗಳು ಹೇಳುವುದು ಕಥೆಯನ್ನಲ್ಲ, ಕಾವ್ಯವನ್ನು. ಕಥೆಯ ಸಂಗತಿಗಳಿಗಿಂತ ಬೇರೆಯಾದ, ಅದಕ್ಕಿಂತ ಹೆಚ್ಚಿನ ಒಂದು ಸೂಕ್ಷ್ಮದ್ರವ್ಯ ಕಾವ್ಯದಲ್ಲಿರುತ್ತದೆ. ಅದನ್ನು ಒಟ್ಟಿನಲ್ಲಿ ರಸ ಎಂದು ಹೇಳಬಹುದು. ಇನ್ನೂ ವಿಶದಪಡಿಸಬೇಕಾದರೆ ಭಾವ ಎನ್ನಬಹುದು; ಭಾವಧ್ವನಿ ಎನ್ನಬಹುದು; ಇಂಗ್ಲೀಷಿನಲ್ಲಿ “Reading between the lines” ಎಂದು ಹೇಳುವುದುಂಟು ಧ್ವನಿತಾರ್ಥವನ್ನು. ಬರೆಹದ ಅಥವಾ ಅಚ್ಚಾದ ಪದಪಂಕ್ತಿಗಳಲ್ಲಿ ಇರುವುದಕ್ಕಿಂತ ಆ ಪಂಕ್ತಿಗಳ ಒಂದು ಸಾಲಿಗೂ ಇನ್ನೊಂದಕ್ಕೂ ನಡುವೆ ಹುದುಗಿಕೊಂಡಿರುತ್ತದೆ ಒಂದು ವಿಶೇಷ ಭಾವಭಕ್ತಿ. ಅದನ್ನು ನಾವು ಜಾಗರೂಕತೆಯಿಂದ ಕಂಡುಕೊಂಡು ಗ್ರಹಿಸಿದಾಗ ನಮ್ಮ ಕಾವ್ಯಪಾಠ ಸಾರ್ಥಕವಾಗುತ್ತದೆ.

ವಾಲ್ಮೀಕಿಗಳ ಬರವಣಿಗೆ ಮೇಲ್ನೋಟಕ್ಕೆ ಸುಲಭವೆನಿಸುತ್ತದೆ. ಅವರ ಮಾತುಗಳು ಸಾಮಾನ್ಯ ಬಳಕೆಯವು. ಅವನ ವಾಕ್ಯರಚನೆ ಸರಳವಾದದ್ದು. ಅದರ ಓಟ ಸುಂದರವಾದದ್ದು. ಹೀಗೆ ಕಷ್ಟ ಕೊಡದೆ ಲಲಿತವಾದ ಧಾಟಿಯಲ್ಲಿ ಓಡುತ್ತದೆ ಅವರ ಕಾವ್ಯ. ಆದದ್ದರಿಂದ ನಾವು ಮೇಲ್ಮೇಲೆ ಸುಲಭವಾದದ್ದನ್ನು ಮಾತ್ರ ಕಂಡು ತೃಪ್ತರಾಗಿ ಆಳವಾಗಿರುವುದನ್ನು ಮರೆಯುವ ಅಪಾಯವುಂಟು. ಈ ವಿಷಯದಲ್ಲಿ ನಾವು ಜಾಗರೂಕರಾಗಿರಬೇಕು. ಅಗ್ಗದ ಕಥೆ ಕಾದಂಬರಿಗಳನ್ನು ಓದುವ ಲಘುಮನೋಭಾವದಿಂದ ವಾಲ್ಮೀಕಿಗಳ ಕಾವ್ಯವನ್ನು ನೋಡತಕ್ಕದ್ದಲ್ಲ. ವಾಲ್ಮೀಕಿಗಳ ಮಾತಿನ ಅಕ್ಷರಸೌಂದರ್ಯದಲ್ಲಿ ಅರ್ಥದ ಆಳವಿದೆ. ನಾವು ಸುಂದರವಾದ ಮೇಲ್ಮುಖವನ್ನು ನೋಡಿ ಗಂಭೀರವಾದ ಅರ್ಥಸತ್ತ್ವವನ್ನು ಮರೆತರೆ ತೆಂಗಿನಕಾಯ ಹಸಿರುತೊಗಟೆಯ ಮೇಲ್ನುಣುಪಿಗೆ ಮನಸೋತು ಒಳಗಿನ ಕೊಬ್ಬರಿಯನ್ನು ಬಿಟ್ಟಂತೆ ಆಗುತ್ತದೆ.

ಅಯೋಧ್ಯಾಕಾಂಡದ ಪಟ್ಟಾಭಿಷೇಕವಿಘ್ನದ ಪ್ರಕರಣದಲ್ಲಿ (ಸರ್ಗ ೮, ೯) ಮಂಥರೆ–ಕೈಕೇಯಿಯರ ಸಂವಾದವು ನೋಡತಕ್ಕದ್ದಾಗಿದೆ. ವಾಲ್ಮೀಕಿಗಳು ಅಲ್ಲಿ ನಮ್ಮನ್ನು ಬಾಯಾರ ನಗಿಸುತ್ತಾರೆ. ಕೈಕೇಯಿಗೆ ಮಂಥರೆ ಮೊದಮೊದಲು ಇಷ್ಟಳಾಗಲಿಲ್ಲ. ಮಂಥರೆ ಕೈಕೇಯಿಯ ಸ್ವಾರ್ಥವನ್ನು ಕೆರಳಿಸುತ್ತಾಳೆ. ಆಗ ಹುಟ್ಟಿ ಹರಿಯುತ್ತದೆ ನೋಡಿ ಮಂಥರೆಯ ವಿಷಯದಲ್ಲಿ ಶ್ಲಾಘನೆ ತರಂಗತರಂಗವಾಗಿ ಕೈಕೇಯಿಯ ಬಾಯಿಂದ (ಪುಟ ೭೦-೭೩). ಅನಂತರ ದಾರುಣವಾದ ಪ್ರಸಂಗಗಳು: ದಶರಥ–ರಾಮರ ಮಾತುಕಥೆ, ಕೌಸಲ್ಯೆ–ಸುಮಿತ್ರೆಯರ ಶೋಕ ಸಾಂತ್ವನಗಳು, ಲಕ್ಷ್ಮಣನ ಆವೇಶ, ಶ್ರೀರಾಮನ ಸಮಚಿತ್ತತೆ, ಸೀತಾದೇವಿಯ ವೀರವ್ರತನಿಷ್ಠೆ–ಈ ವೀಚೀಪರಂಪರೆ.

ವಾಲ್ಮೀಕಿಗಳ ಭಾವಗರ್ಭಿತವಾದ ವಾಕ್ಪ್ರಕಾರಕ್ಕೆ ಒಂದು ಉದಾಹರಣೆ: ದಶರಥನು ರಾಮವನವಾಸದ ಪ್ರಸ್ತಾವವನ್ನು ಶ್ರೀರಾಮನಿಗೆ ತಿಳಿಸಬೇಕಾಗಿ ಬಂದಾಗ ಶ್ರೀರಾಮನನ್ನು ಕರೆಯಿಸಿಕೊಂಡ, ರಾಮಚಂದ್ರನು ತಂದೆಯ ದರ್ಶನ ಮಾಡಿದಾಗ ಏನಾಯಿತು? (ಪುಟ ೧೫೨-೩)

ರಾಮೇತ್ಯುಕ್ತ್ವಾಚ ವಚನಂ ಬಾಷ್ಪಪರ್ಯಾಕುಲೇಕ್ಷಣಃ ।

ಶಶಾಕ ನೃಪತಿರ್ದೀನೋ ನೇಕ್ಷಿತುಂ ನಾಭಿಭಾಷಿತುಮ್‍ ॥ (ಸ. ೧೮-ಶ್ಲೋ. ೩)

ದಶರಥನ ಬಾಯಿಂದ ‘ರಾಮ’ ಎಂಬ ಎರಡಕ್ಷರ ಮಾತ್ರ ಹೊರಟಿತು. ಹೆಚ್ಚು ಮಾತಿಗೆ ಗಂಟಲು ಕಟ್ಟಿತು. ಆಗ ಶ್ರೀರಾಮಮೂರ್ತಿ, ಸಂದರ್ಭವು ತನ್ನ ತಂದೆಗೆ ದುಃಖಕರವಾದದ್ದಿರಬೇಕೆಂದು ಊಹಿಸಿಕೊಂಡು ತನ್ನ ಮನಸ್ಸಿನಲ್ಲಿ ಹೇಗೆ ಹೇಗೋ ನೊಂದುಕೊಂಡ. ಇದನ್ನು ಗಮನಿಸಿ ನೋಡಬೇಕು. ಅದನ್ನು ವಿಸ್ತರಿಸಿ ಇಪ್ಪತ್ತು ಪುಟ ಬೇಕಾದರೂ ಬರೆಯಬಹುದು. ಇಂಥಾದ್ದು ವಾಲ್ಮೀಕಿಗಳ ಸಂದರ್ಭರಚನೆ ಮತ್ತು ನಿರೂಪಣಕೌಶಲ.

ಇನ್ನೊಂದು ಉದಾಹರಣೆ (ಪುಟ ೧೬೫):

ಲೋಕಕಾಂತಸ್ಯ ಕಾಂತತ್ವಾಚ್ಛೀತರಶ್ಮೇರಿವ ಕ್ಷಪಾ ॥ (ಸ. ೧೯–ಶ್ಲೋ. ೨೩)

ಶ್ರೀರಾಮನು ರಾಜ್ಯವನ್ನು ತೊರೆದುಹೋಗುವುದರಿಂದ ಆತನ ಕಾಂತಿ ಕುಂದುತ್ತದೆಯೇ? ಪ್ರಪಂಚಕ್ಕೆ ಇಂಪಾದ ಬೆಳದಿಂಗಳನ್ನು ಕೊಡುವ ಚಂದ್ರನು ಆಕಾಶದಲ್ಲಿ ಸೂರ್ಯನಿರುವಾಗ ಕಾಣಿಸಿಕೊಳ್ಳುತ್ತಾನೆ. ಆದರೆ ಸೂರ್ಯನು ಮುಳುಗಿ ಚಂದ್ರನನ್ನು ಕತ್ತಲೆ ಆವರಿಸಿದಾಗ ಚಂದ್ರನ ಕಾಂತಿ ತಗ್ಗುತ್ತದೆಯೆ? ಇಲ್ಲ; ತಗ್ಗುವುದು ಹೋಗಿ ಇನ್ನೂ ಹೆಚ್ಚಾಗುತ್ತದೆ.

ಇಂಥವು ವಾಲ್ಮೀಕಿಗಳ ವಾಕ್ಪ್ರಯೋಗಗಳು. ಓದುಗರು ಪದಪದದ ಮೇಲೂ, ಅಕ್ಷರಕ್ಷರದಮೇಲೂ ಒಂದೊಂದು ಕ್ಷಣ ನಿಂತು ಸ್ವಾರಸ್ಯವನ್ನುಂಡು ಮುಂದಕ್ಕೆ ಹೋಗಬೇಕು. ಗಬಗಬನೆ ನುಂಗಬಾರದು. ಸಾವಕಾಶವಾಗಿ ಚಪ್ಪರಿಸಿ ಸವಿಯಬೇಕು.

ನಮ್ಮ ವ್ಯಾಪಾರಗಳು ಫಲದೃಷ್ಟಿಯಿಂದ ಎರಡು ಬಗೆಯಾಗಿರುತ್ತವೆ: ಕೆಲವು ಸದ್ಯಃ ಫಲಿತಗಳು; ಕೆಲವು ಕಾಲಾಂತರಫಲದವು. ಬೆಳಗ್ಗೆ ಯಾರಾದರೂ ಬಂದು ಸಹಾಯ ಬೇಡುತ್ತಾರೆ. “ಸಂಜೆಗೆ ಬನ್ನಿ” ಎನ್ನುತ್ತೇವೆ. ವಾಗ್ದಾನ ಬೇರೆ; ವಸ್ತುದಾನ ಬೇರೆ. ಬೆಳಗ್ಗೆ ಅಡಿಗೆಯಾಗುತ್ತದೆ; ಮಧ್ಯಾಹ್ನ ಊಟ. ಪಾಕ ಬೇರೆ; ಭೋಜನ ಬೇರೆ. ಇವು ಕಾಲಾಂತರಫಲಿತ ವ್ಯಾಪಾರಗಳು. ಪಾಯಸವನ್ನು ನಾಲಗೆಯ ಮೇಲಿಡುತ್ತೇವೆ; ಆ ಕ್ಷಣವೇ ಅದರ ಸವಿಯನ್ನನುಭವಿಸುತ್ತೇವೆ. ಇದು ಸದ್ಯಃ ಫಲ. ಕಾರ್ಯಕ್ಕೂ ತತ್ಫಲಕ್ಕೂ ನಡುವೆ ಬಿಡುವಿಲ್ಲ. ಶ್ರೀಮತಿ ಸುಬ್ಬಲಕ್ಷ್ಮಮ್ಮನ ಹಾಡನ್ನು ಕೇಳುತ್ತೇವೆ; ಆ ಧ್ವನಿ ಕಿವಿ ಸೋಕಿದ ಒಡನೆಯೇ ಮೈಮರೆಯುತ್ತೇವೆ. ಒಂದು ಸುಂದರಾಕಾರವನ್ನು ಕಾಣುತ್ತೇವೆ; ಕಾಣುತ್ತಿದ್ದಂತೆಯೇ ಮೋಹಕ್ಕೋ ಉದ್ರೇಕಕ್ಕೋ ಸಿಕ್ಕಿಕೊಳ್ಳುತ್ತೇವೆ. ನಡೆದ ಘಟನೆಗಳು ಕಾರ್ಯಕಾರಣದೃಷ್ಟಿಯಿಂದ ಎರಡು; ಸ್ವಾನುಭವದಲ್ಲಿ ಏಕಮಾತ್ರ. ಬ್ರಹ್ಮಾನುಭವವೂ ಹಾಗೆಂದು ವೇದಾಂತಿಗಳು ಹೇಳುವುದುಂಟು. ಬ್ರಹ್ಮವನ್ನು ತಿಳಿದುಕೊಳ್ಳುವುದು ಬೇರೆ, ಅನುಭವಿಸುವುದು ಬೇರೆ ಅಲ್ಲ. ಎರಡೂ ಒಂದೇ. ತಿಳಿವಳಿಕೆಯೇ ಅನುಭವ; ಅನುಭವವೇ ತಿಳಿವಳಿಕೆ. ಕಾವ್ಯವ್ಯಾಸಂಗದಲ್ಲಂತೂ ಈ ಮಾತು ನಿಜ. ರಾಮಾಯಣವನ್ನು ಓದುವುದು ಬೇರೆ ಅಲ್ಲ, ಭಾವಪರವಶನಾಗುವುದು ಬೇರೆ ಅಲ್ಲ. ಓದೋಣವೇ ಭಾವಾನುಭವ. ಓದು ಎಂದರೆಯೇ “ಗಂಗಾತೀರ್ಥದಲ್ಲಿ ಓಲಾಡು, ಅಂತರಂಗವನ್ನು ಜಾಲಾಡು” –ಎಂದರ್ಥ. ಶ್ಲೋಕಕ್ಕೂ ಶೋಕಕ್ಕೂ ನಡುವೆ ಅಂತರವಿರದು–ಅವಧಾನವಿಟ್ಟು ಓದುವ ಸಹೃದಯನ ಪಾಲಿಗೆ.

ಅಂಥ ಜಾಗರೂಕರಾದ ಓದುಗರಿಗೆ ತೃಪ್ತಿ ಕೊಡುವಂಥಾದ್ದು ವಿದ್ವಾನ್‍ ಶ್ರೀರಂಗನಾಥಶರ್ಮರವರ ಕನ್ನಡ ಅನುವಾದ. ಅವರು ಮೂಲದ ಸ್ವಾರಸ್ಯವನ್ನು ಪೂರ್ತಿಯಾಗಿ ಹಿಡಿದು ಕನ್ನಡಕ್ಕೆ ಭಟ್ಟಿ ಇಳಿಸುವುದರಲ್ಲಿ ನಿಪುಣರಾಗಿದ್ದಾರೆ. ಅವರು ಎಷ್ಟು ಶ್ರಮಪಟ್ಟಿದ್ದಾರೆಂಬುದನ್ನು ನಾನು ಸ್ವತಃ ಕಂಡಿದ್ದೇನೆ. ಕನ್ನಡ ವಾಚಕರ ಪರವಾಗಿ ನನ್ನ ವಂದನೆಗಳನ್ನು ಅವರಲ್ಲರ್ಪಿಸುತ್ತೇನೆ. ಶ್ರೀಸೀತಾರಾಮರು ಅವರಲ್ಲಿ ಸರ್ವದಾ ಅನುಗ್ರಹಮಾಡಲಿ.

ನಮ್ಮ ವಿದ್ವಾಂಸರು ತಮ್ಮ ಅನುವಾದಕಾರ್ಯವನ್ನು ಕುರಿತು ಹೇಳುವಲ್ಲಿ ಕ್ಷಮೆ ಬೇಡುವ ಧ್ವನಿಯಿಂದ ನುಡಿದಿದ್ದಾರೆ. ಅದು ತೀರಾ ಅನವಶ್ಯವೆಂದು ನನಗನ್ನಿಸುತ್ತದೆ. ಪ್ರತಿಯೊಬ್ಬ ಪ್ರಾಮಾಣಿಕ ಲೇಖಕನಿಗೂ ಇಂಥಾ ಆತ್ಮವಿಶ್ವಾಸ ಶೈಥಿಲ್ಯ ತಪ್ಪಿದ್ದಲ್ಲ. ಕಾಳಿದಾಸನೇ–

ಆತ್ಮನ್ಯಪ್ರತ್ಯಯಂ ಚೇತಃ ॥

–ಎಂದಿದ್ದಾನಲ್ಲವೆ? ಒಂದಾನೊಂದು ಹೃದಯಭಾವವನ್ನೋ ಬುದ್ಧಿವಿಚಾರವನ್ನೋ ತಿಳಿಯಪಡಿಸ ಹೊರಟಾಗ ಲೇಖಕನಿಗೆ ಒಂದಲ್ಲ, ಎರಡು ಮೂರು ನಾಲ್ಕು ವಾಕ್ಪ್ರಕಾರಗಳು ಆ ಕ್ಷಣದಲ್ಲಿ ತೋರಿಬರುತ್ತವೆ. ವಿಮರ್ಶಿಸಿ ನೋಡಿದರೆ ಒಂದೊಂದು ವಾಕ್ಪ್ರಕಾರದಲ್ಲಿ ಒಂದೊಂದು ಬಗೆಯ ಗುಣ ಕಾಣಬರುತ್ತದೆ. ಆ ಘಳಿಗೆಯಲ್ಲಿ ಯಾವ ಒಂದು ವಾಕ್ಯರೀತಿ ಅವನ ಮನಸ್ಸಿಗೆ ಹೆಚ್ಚು ರುಚಿಸುತ್ತದೆಯೋ ಆ ವಾಗ್ರಚನೆಯನ್ನು ಅವನು ಬಳಸಿಕೊಳ್ಳುತ್ತಾನೆ. ಬಳಿಕ ಇನ್ನೊಂದು ವೇಳೆ ನೋಡಿದಾಗ ನಾನು ಕೈಬಿಟ್ಟಿದ್ದ ವಾಕ್ಪ್ರಯೋಗವೇ ಇನ್ನೂ ಸೊಗಸಿನದೆಂದು ಅವನ ಮನಸ್ಸಿಗೆ ತೋರಬಹುದು. ಈ ಬಗೆಯ ಅದೃಢತೆ ಲೇಖನಕರ್ಮದಲ್ಲಿ–ಎಲ್ಲ ಕಲಾಕರ್ಮದಲ್ಲಿಯೂ–ಅನಿವಾರ್ಯವಾದದ್ದು. ಇದು ಚೆನ್ನೆ, ಅದು ಚೆನ್ನೆ? ಇಂಥ ಸಂದೇಹ ಬಂದಾಗ ಲೇಖಕನಿಗೆ ವಾಚಕನ ಯೋಗ್ಯತೆಯೇ ಶರಣ–ಸ್ಥಾನ. ವಾಚಕನು ದಕ್ಷನೂ ಸಹಾನುಭೂತಿವಂತನೂ ಆಗಿದ್ದಲ್ಲಿ ಅವನು ಲೇಖಕನ ಆಶಯವನ್ನು ತಾನೇ ಗ್ರಹಿಸಿಯಾನು. ವಾಚಕನ ಸಹಕಾರದಿಂದ ಲೇಖಕನಲ್ಲಿ ಅನಿವಾರ್ಯವಾಗಿ ನಿಂತುಹೋದ ಲೋಪಗಳು ತಿದ್ದಿಕೆ ಪಡೆದು ಸರಿಯಾಗುತ್ತವೆ. ಆದದ್ದರಿಂದ ನಮ್ಮ ವಿದ್ವನ್ಮಿತ್ರರೂ ನಾನೂ ವಾಚಕರನ್ನು ಶರಣುಹೋಗೋಣ.

ಶ್ರೀರಂಗನಾಥಶರ್ಮರವರಲ್ಲಿ ನನಗೆ ಕಾಣುವ ಒಂದು ವಿಶೇಷ ಗುಣವೆಂದರೆ ಅವರ ಋಜ್ವರ್ಥಗ್ರಹಣ. ರಾಮಾಯಣ ವ್ಯಾಖ್ಯಾನಕರ್ತರೂ ಇತರ ಕಾವ್ಯ ವ್ಯಾಖ್ಯಾತರೂ ಎಷ್ಟೋ ವೇಳೆ ಅತಿಯುಕ್ತಿಗೆ ಹೋಗಿದ್ದಾರೆ. ಅಕ್ಷರವನ್ನು ಹಿಗ್ಗಾಮುಗ್ಗಾ ಎಳೆದಾಡಿ ಅಪೂರ್ವ ಸ್ವಾರಸ್ಯ, ವಿಚಿತ್ರ ರಹಸ್ಯಗಳನ್ನು ಹೊರಕ್ಕೆ ತರಲು ಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವಶ್ಯವಾದ ಶಬ್ದಪಾಂಡಿತ್ಯವೂ ತರ್ಕಚಮತ್ಕಾರವೂ ಮೂಲಗ್ರಂಥದ ಸರಳವೂ ಅಕೃತಕವೂ ಆದ ಭಾವವನ್ನು ಮುಳುಗಿಸಿ ಕೈಗೆ ದೊರೆಯದಂತೆ ಮಾಡುತ್ತವೆ. ಶರ್ಮಾ ಅವರ ವಿದ್ವತ್ತಿಗೆ ಇಂಥಾ ಕೃತಕ ವ್ಯಾಖ್ಯಾನ ಅಸಾಧ್ಯವಾದದ್ದಲ್ಲ. ಆದರೆ ಅವರ ಸ್ವಭಾವದ ಒಲವು ಋಜುತೆಯ ಕಡೆಗೆ. ಅವರು ಒಣ ವಿದ್ವಾಂಸರಲ್ಲ; ವಿದ್ವದ್ರಸಿಕರು, ಆರ್ದ್ರ–ಹೃದಯರು, ಆಳಬಲ್ಲವರು, ನಗಬಲ್ಲವರು ಕನಿಕರಿಸಬಲ್ಲವರು, ಮತ್ತೊಬ್ಬರ ಹೃದ್ಭಾವವನ್ನು ಊಹಿಸಿ ಅನುಭವಿಸಬಲ್ಲವರು. ಇಂಥವರು ಮಾಡಿದ ವಾಲ್ಮೀಕಿ ಕಾವ್ಯಾನುವಾದವು ಭಾವವೈಶದ್ಯದಿಂದಲೂ ರಸಪುಷ್ಟಿಯಿಂದಲೂ ಆದರಣೀಯವಾಗುವುದು ಸ್ವಾಭಾವಿಕವೇ ಆಗಿದೆ. ಇದು ನನ್ನ ನಂಬಿಕೆ.

***********

ಪ್ರಭಾ ಮುದ್ರಣಾಲಯದ ಶ್ರೀ ಡಿ.ಎಸ್‍. ಕೃಷ್ಣಾಚಾರ್ಯರವರು ಸ್ವಯಂ ವಿದ್ವಾಂಸರು, ಮಹಾವಿದ್ವತ್‍ ಕುಲಪ್ರಸೂತರು, ಸದಾಚಾರಶೀಲರು. ಇಷ್ಟನ್ನು ಹೇಳಿದ ಮೇಲೆ ಅವರು ಈ ಕಾರ್ಯವನ್ನು ಶ್ರದ್ಧಾಸಕ್ತಿಗಳಿಂದ ನಿರ್ವಹಿಸಿದ್ದಾರೆಂದು ಹೇಳುವುದು ಪುನರುಕ್ತಿಯಾದೀತು.(೧೯೬೭)

ಶ್ರೀರಾಮಚಂದ್ರನು ಮಿಥೆಲೆಯಿಂದ ಸೀತಾಸಮೇತನಾಗಿ ಅಯೋಧ್ಯೆಗೆ ಬಂದು, ಸುಖಸಂತೋಷಗಳಲ್ಲಿದ್ದ ದಿನಗಳಲ್ಲಿ ಪ್ರಾರಂಭಿಸುತ್ತದೆ ಅಯೋಧ್ಯಾಕಾಂಡದ ಕಥೆ.

ಜೀವತ್ಸು ತಾತಪಾದೇಷು ನೂತನೇ ದಾರಸಂಗ್ರಹೇ । 

ಮಾತೃಭಿಶ್ಚಿಂತ್ಯಮಾಽನಿನಾಂ ತೇ ಹಿ ನೋ ದಿವಸಾ ಗತಾಃ ॥ ಉತ್ತರರಾಮಚರಿತೆ, ೧.೧೯

ತಂದೆ ದಶರಥರಾಯನು ರಾಜ್ಯದ ಭಾರವನ್ನೂ ಕುಟುಂಬದ ಭಾರವನ್ನೂ ನಿರ್ವಹಿಸಿಕೊಂಡು ಮಕ್ಕಳಿಗೆ ನಿಶ್ಚಿಂತೆಯಾಗುವಂತೆ ಅನುಕೂಲಪಡಿಸಿದ್ದಾನೆ. ರಾಮಸಹೋದರರು ಪತ್ನಿಯರು ಹೊಸದಾಗಿ ಮನೆಗೆ ಬಂದಿದ್ದಾರೆ; ಆ ದಂಪತಿಗಳು ಯೌವನದಲ್ಲಿದ್ದಾರೆ; ಪ್ರಣಯಾಂಕುರ ಸಂಭ್ರಮದಲ್ಲಿದ್ದಾರೆ; ತಾಯಂದಿರು–ಕೌಸಲ್ಯೆ, ಸುಮಿತ್ರೆ, ಕೈಕೇಯಿ ಇವರು ಮೂವರೂ–ಆ ನವದಂಪತಿಗಳ ಸರಸಸಲ್ಲಾಪಗಳನ್ನು ನೋಡಿ ಹಿಗ್ಗುತ್ತ ಅವರ ಸಂತೋಷ ಇನ್ನೂ ಹೆಚ್ಚಲು ಏನೇನು ಮಾಡಬಹುದು–ಯಾವ ಯಾವ ಭಕ್ಷ್ಯಭೋಜ್ಯಗಳು, ಯಾವ ಯಾವ ವಸ್ತ್ರಾಲಂಕಾರಗಳು, ಎಂಥೆಂಥ ವಿನೋದಗಳು, ಎಂಥೆಂಥ ಆಟಪಾಟಗಳು ಇದ್ದರೆ ಆ ನವದಂಪತಿಗಳ ಮನಸ್ಸಿಗೆ ಮತ್ತೂ ಉಲ್ಲಾಸವುಂಟಾದೀತು–ಎಂದು ಯೋಚಿಸುತ್ತಿದ್ದಾರೆ. ಇದು ಸೀತಾರಾಮರು ಆಯೋಧ್ಯೆಗೆ ಬಂದ ಹೊಸತಿನಲ್ಲಿ ನಡಸುತ್ತಿದ್ದ ಜೀವನದ ಚಿತ್ರ. ಅವರ ಸಂತೋಷವೈಭವಗಳನ್ನು ಮತ್ತೂ ಅಭಿವೃದ್ಧಿಪಡಿಸಬೇಕೆಂಬ ದಶರಥನ ಆಲೋಚನೆಯೇ ಆ ಇದ್ದ ಸಂತೋಷಕ್ಕೂ ಕೊನೆಯನ್ನು ತಂದಿತು. ಪಟ್ಟಾಭಿಷೇಕದ ಆಲೋಚನೆ ಆವರೆಗೆ ಸಿದ್ಧವಾಗಿದ್ದ ಗೃಹಸೌಖ್ಯವನ್ನು ನುಂಗಿತು. ಇಂಥ ವಿಷಪರಿಪಾಕವು ಮನುಷ್ಯಸಂಕಲ್ಪದ ಚರಿತ್ರೆಯಲ್ಲಿ ಅಪರೂಪವೇನೂ ಅಲ್ಲ.

ಅಯೋಧ್ಯಾಕಾಂಡದಲ್ಲಿ ಹೀಗೆ ಎದೆಮುಟ್ಟುವ ಸಂಗತಿಗಳು ನಾಲ್ಕಾರು ಇವೆ. ಪಟ್ಟಾಭಿಷೇಕಕ್ಕಾದ ವಿಘ್ನ, ಮಂಥರೆ–ಕೈಕೇಯಿಯರ ಸಂವಾದಸರಣಿ, ದಶರಥ ಕೌಸಲ್ಯಾದಿಗಳೊಡನೆ ರಾಮಲಕ್ಷ್ಮಣಾದಿಗಳ ಮಾತುಕಥೆ, ವನವಾಸಕ್ಕೆ ಮಾಡಿದ ಸಿದ್ಧತೆ, ಬೀಳ್ಕೊಡುಗೆ, ಪುರಜನರ ಆಕ್ರೋಶಪ್ರಲಾಪಗಳು, ಅನಂತರ ಕಂಡ ನದೀಪರ್ವತ ವರ್ಣನೆಗಳು, ಋಷ್ಯಾಶ್ರಮ ಚಿತ್ರಗಳು, ಚಿತ್ರಕೂಟದ ಪರ್ಣಾಶಾಲೆ–ಹೀಗೆ ಬರುತ್ತವೆ ಹೃದಯವೇಧಕಗಳಾದ ಕಥಾಪ್ರಸಂಗಗಳು. ಅಯೋಧ್ಯಾಪುರವನ್ನು ಬಿಟ್ಟಂದಿನಿಂದ ದಂಡಕಾರಣ್ಯ ಪ್ರವೇಶದವರೆಗಿನ ಕಥಾವಾಹಿನಿ ಅಯೋಧ್ಯಾಕಾಂಡದ್ದು.

ಒಳ್ಳೆಯ ಕಾವ್ಯದಲ್ಲಿ ಸೊಗಸುಗಳು ನಾಲ್ಕಾರು ಸೇರಿರುತ್ತವೆ. ಕಥಾ ಸಂವಿಧಾನ, ಸಂಭಾಷಣೆ, ವರ್ಣನೆ, ಶಬ್ದಸೌಂದರ್ಯ, ಪದ್ಯದ ಧಾಟಿ–ಇವೆಲ್ಲ ಸ್ವಾರಸ್ಯಗಳೇ. ಈ ಅನೇಕ ಸ್ವಾರಸ್ಯಗಳ ಅನುಭಾವದಿಂದ ವಾಚಕನ ಮನಸ್ಸಿನಲ್ಲಿ ರಸೋದಯವಾಗುತ್ತದೆ. ಇಷ್ಟೂ ಕಾವ್ಯದಲ್ಲಿ ದೊರೆಯುವ ಇಷ್ಟಫಲಗಳಾದರೂ, ಮಹಾಕಾವ್ಯದಲ್ಲಿ ರಸಫಲಕ್ಕಿಂತ ಮೇಲಾದ ಪ್ರಯೋಜನ ಬೇರೆ ಒಂದು ದೊರೆಯುತ್ತದೆ. ಅದು ಮಹತ್ತ್ವದ ದರ್ಶನ. ಮಹಾಕಾವ್ಯದಿಂದ ನಮಗಾಗುವ ಮಹೋಪಕಾರವು ಮಹತ್ತ್ವ ಸಂದರ್ಶನ.

ಮನುಷ್ಯತ್ವದಲ್ಲಿರಬಹುದಾದ ದೊಡ್ಡತನವನ್ನು ಹೃದಯದ ಮೂಲಕ ನಮಗೆ ಅನುಭವಮಾಡಿಸುವುದು ಮಹಾಕಾವ್ಯದ ಕಾರ್ಯ. ಅದು ನಮ್ಮ ಕಣ್ಣ ಮುಂದೆ ತರುವ ನಾನಾ ಪಾತ್ರಸ್ಥರಲ್ಲಿ ನಾನಾ ತೆರದ ಮಹತ್ತ್ವಗಳನ್ನು ಹೊರಹೊಮ್ಮಿಸುತ್ತದೆ. ಸಾಮಾನ್ಯ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳುತ್ತಾರೆಂಬುದನ್ನು ನಾವು ನಮ್ಮ ಸುತ್ತ ಮುತ್ತಲಿನ ಪ್ರಪಂಚದಲ್ಲಿ ದಿನದಿನವೂ ನೋಡುತ್ತಿರುತ್ತೇವೆ. ಆದರೆ ಒಬ್ಬ ಮಹಾವ್ಯಕ್ತಿ, ಒಂದು ವಿಶೇಷಸಂದರ್ಭವೊದಗಿದಾಗ ಹೇಗೆ ನಡೆದುಕೊಂಡಾನು ಎಂಬುದನ್ನು ನಾವು ರಾಮಾಯಣ ಭಾರತಗಳಲ್ಲಿ ಕಾಣುತ್ತೇವೆ. ಅಂಥಾ ಮಹಾವ್ಯಕ್ತಿಚಿತ್ರಣವೇ ಮಹಾಕವಿಯ ಕೃತಿ. ಅವನ ಮುಖ್ಯ ರಚನೆ ಕೇವಲ ಭಾಷಾ ಚಮತ್ಕಾರದ್ದಲ್ಲ; ಸಣ್ಣ ಸಣ್ಣ ಭಾವವಿಲಾಸಗಳದ್ದಲ್ಲ; ಅಲಂಕಾರ ಚಿತ್ರಗಳದ್ದಲ್ಲ. ಅದು ಮಹಾವ್ಯಕ್ತಿ ನಿರ್ಮಾಣದ್ದು. ಮನುಷ್ಯಸ್ವಭಾವವನ್ನು ಪರೀಕ್ಷೆಮಾಡುವ ಒಂದು ವಿಶೇಷ ಸನ್ನಿವೇಶವನ್ನು ಕಲ್ಪಿಸಿ, ಅದರಲ್ಲಿ ಮಹಾವ್ಯಕ್ತಿಯನ್ನು ನಿಲ್ಲಿಸಿ, ಅಲ್ಲಿ ಅವನ ಅಥವಾ ಅವಳ ಪ್ರತಿವರ್ತನೆ ಹೇಗಿರುತ್ತದೆ-ಅಲ್ಲಿಯ ಪ್ರಶ್ನೆಗೆ ಅವನ ಪ್ರತ್ಯುತ್ತರವೇನು–ಎಂಬುದನ್ನು ತೋರಿಸುತ್ತಾನೆ ಮಹಾಕವಿ. ಈ ಸ್ವಭಾವಾಭಿವ್ಯಕ್ತಿಯೇ ಕಾವ್ಯವಾಚಕನ ಲಕ್ಷ್ಯದಲ್ಲಿರಬೇಕಾದ ಮುಖ್ಯ ವಿಷಯ. ಸಂದರ್ಭವು ಕೇಳುವ ಪ್ರಶ್ನೆಗೆ ಮನುಷ್ಯ ಕೊಡುವ ಉತ್ತರದಲ್ಲಿ ಅವನ ಶೀಲಸ್ವಭಾವಗಳು–ಅವನ ಚಾಲುಚಲನ್ನುಗಳು–ಹೊರಪಡುತ್ತವೆ. ಇದನ್ನು ಇಂಗ್ಲಿಷಿನಲ್ಲಿ “ಕ್ಯಾರಕ್ಟರ್‍ ಸ್ಟಡಿ” (Character Study) ಎನ್ನುತ್ತಾರೆ. ರಾಮಾಯಣದಲ್ಲಿಯಾಗಲಿ, ಮಹಾಭಾರತದಲ್ಲಿಯಾಗಲಿ, ಷೇಕ್ಸ್‍ಪಿಯರ್‍ ಕವಿಯ ನಾಟಕಗಳಲ್ಲಿಯಾಗಲಿ, ಡಿಕೆನ್ಸ್‍, ಜಾರ್ಜ್‍ ಎಲಿಯೆಟ್‍ ಮೊದಲಾದವರ ಕಾದಂಬರಿಗಳಲ್ಲಿಯಾಗಲಿ ಹೆಚ್ಚು ಪ್ರಶಸ್ತವಾದ ಲಕ್ಷಣ ಅಲ್ಲಲ್ಲಿಯ ಪಾತ್ರಾಭಿವ್ಯಕ್ತಿ–ಅಲ್ಲಲ್ಲಿ ಪ್ರಕಾಶಕ್ಕೆ ಬರುವ ಶೀಲಸ್ವಭಾವ ಲಕ್ಷಣಗಳು.

ಹೀಗೆ ಮಹಾಕಾವ್ಯವು ಮನುಷ್ಯಸ್ವಭಾವ ಸಂದರ್ಶನ ಶೋಧನೆಗಳಿಗೆ ಒಂದು ಸಮರ್ಥ ಸಾಧಕವಾಗುತ್ತದೆ.

ಶ್ರೀರಾಮಚಂದ್ರನು ರಾಜ್ಯತ್ಯಾಗಕ್ಕೆ ಮನಸ್ಸು ಮಾಡಿದ್ದಾನೆ. ದಶರಥ ಕೌಸಲ್ಯೆ ಮೊದಲಾದವರು ದುಃಖದಿಂದ ತುಂಬಿದ ಅರೆಮನಸ್ಸಿನಿಂದ ಆ ಅಗಲಿಕೆಗೆ ಸಿದ್ಧರಾಗುತ್ತಿದ್ದಾರೆ. ರಾಮನು ಪ್ರತಿಜ್ಞೆಯಿಂದ ಕದಲತಕ್ಕವನಲ್ಲವೆಂದು ಎಲ್ಲರಿಗೂ ತಿಳಿದಿದೆ. ಕಡೆಗೆ ದಶರಥರಾಯನು ಒಂದು ಸಣ್ಣ ಕೋರಿಕೆಯನ್ನು ತಿಳಿಸುತ್ತಾನೆ: “ಅಪ್ಪ, ನೀನು ದೃಢ ಪ್ರತಿಜ್ಞನು. ನಿನ್ನನ್ನು ಹಿಂತಿರುಗಿಸುವುದು ಯಾರಿಗೂ ಸಾಧ್ಯವಾಗದು. ಒಳ್ಳೆಯದು. ನಿನ್ನನ್ನು ನಾನು ತಡೆಯುವುದಿಲ್ಲ. ಆದರೆ ಒಂದು ಮಾತು: ನಿನ್ನ ಪ್ರಯಾಣವನ್ನು ಈ ಒಂದು ರಾತ್ರಿ ಮುಂದಕ್ಕೆ ತಳ್ಳು. ಈ ರಾತ್ರಿ ನೀನು ಇಲ್ಲಿದ್ದರೆ, ನಾನೂ ನಿನ್ನ ತಾಯಿಯೂ ಇನ್ನು ಕೊಂಚ ಹೊತ್ತಾದರೂ ನಿನ್ನೊಡನೆ ಇದ್ದಂತಾಗಿ, ನಮಗೆ ಕೊಂಚವಾದರೂ ನೆಮ್ಮದಿ ಬಂದೀತು. ಇಷ್ಟು ಮಾತ್ರಕ್ಕೆ ಒಪ್ಪಿಕೋ.”

ಇದು ದಶರಥರಾಯನ ಕೋರಿಕೆ. ಅದಕ್ಕೆ ಶ್ರೀರಾಮನು ಹೇಳಿದ ಪ್ರತ್ಯುತ್ತರವೇನು?

ಪ್ರಾಪ್ಸ್ಯಾಮಿ ಯಾನದ್ಯ ಗುಣಾನ್‍

ಕೋ ಮೇ ಶ್ವಸ್ತಾನ್‍ ಪ್ರದಾಸ್ಯತಿ ।

ಅಪಕ್ರಮಣಮೇವಾತಃ

ಸರ್ವಕಾಮೈರಹಂ ವೃಣೇ ॥ ಸ. ೩೪, ಶ್ಲೋ. ೪೦

“ತಂದೆಯೆ, ಈಗ ನನ್ನಲ್ಲಿ ಯಾವ ಗುಣಗಳಿವೆಯೋ–ಯಾವ ಸತ್ಯಶ್ರದ್ಧೆ, ಯಾವ ಪಿತೃಗೌರವನಿಷ್ಠೆ, ಯಾವ ತ್ಯಾಗಸಿದ್ಧತೆ ಇವು ಇವೆಯೋ–ಈ ಗುಣಗಳನ್ನು ನಾಳೆ ನನ್ನಲ್ಲಿ ಉಂಟುಮಾಡುವವರು ಯಾರು? ಬೆಳಗಾದಾಗ ನನ್ನ ಮನಸ್ಸು ಬುದ್ಧಿಗಳು ಬೇರೆಯಾಗಬಹುದು. ಈ ರಾತ್ರಿ ಮತ್ತಾರಾದರೂ ಬಂದು ನನಗೆ ಬೋಧನೆಮಾಡಿ ನನ್ನ ಮನಸ್ಸನ್ನು ತಿರುಗಿಸಬಹುದು. ಧರ್ಮಕ್ಕೆ ಅಂಥ ಅಪಾಯಗಳುಂಟು. ಮನುಷ್ಯ ಸ್ವಭಾವವು ಕ್ಷಣದಿಂದ ಕ್ಷಣಕ್ಕೆ ಬದಲಾಯಿಸಬಲ್ಲದ್ದು. ಯಾವ ಕ್ಷಣದಲ್ಲಿ ಮನಸ್ಸಿಗೆ ಧರ್ಮ ನಿಶ್ಚಯವಾಗುತ್ತದೆಯೋ ಆ ಕ್ಷಣವೇ ಅದನ್ನು ನೆರವೇರಿಸುವುದು ನಿರಪಾಯ ಮಾರ್ಗ. ಆದದ್ದರಿಂದ ಈ ಘಳಿಗೆಯಲ್ಲಿಯೇ ನಾನು ಇಲ್ಲಿಂದ ಹೊರಡಬೇಕಾದದ್ದು. ಅದು ಸರ್ವ ಪ್ರಕಾರಗಳಿಂದಲೂ ನನಗೆ ಇಷ್ಟವಾಗಿದೆ.”

ಇದು ಶ್ರೀರಾಮನ ಅಂತರಂಗದ ಅಭಿವ್ಯಕ್ತಿ.

ದಶರಥನು ಕೈಕೇಯಿಗೆ ವಾಗ್ದಾನ ಮಾಡಿದ್ದದ್ದು ನಿಜ. ಆದರೆ ಆ ವಾಗ್ದಾನದಲ್ಲಿ ನ್ಯಾಯದ ಬಲ ಇದ್ದದ್ದೆಷ್ಟು? ದಾನಮಾಡಿದಾಗ ಮಾಡಿದವನ ಮನಸ್ಸು ಹೇಗಿತ್ತು? ಅದು ಸಮಾಧಾನದಲ್ಲಿತ್ತೆ? ಅರ್ಹವಾಗಿತ್ತೆ? ಭಯಮೋಹಗಳಿಂದ ವಿಹ್ವಲವಾಗಿರಲಿಲ್ಲವೆ? ಆ ವಾಗ್ದಾನ ವಿವೇಕಪೂರ್ವಕವಾದದ್ದೆ? ಅಥವಾ ಆತುರದ್ದೆ? ವಿಚಾರಸಿದ್ಧವಲ್ಲದ ವಾಗ್ದಾನಕ್ಕೆ ಬೆಲೆ ಸಲ್ಲದು. ಎರಡನೆಯದಾಗಿ, ಅದರ ಅಕ್ಷರಾರ್ಥವನ್ನು ನೋಡಬೇಕೆ, ಅಥವಾ ತಾತ್ಪರ್ಯವನ್ನೆ? ದಶರಥನ ಮನಸ್ಸಿನಲ್ಲಿದ್ದ ಆಶಯವೆಂಥಾದ್ದು? ಜ್ಯೇಷ್ಠಪುತ್ರನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಬೇಕೆಂಬುದೆ? ಮೂರನೆಯದಾಗಿ, ಕೈಕೇಯಿ ಬೇಡಿದ ಬೇಡಿಕೆ ಕುಲಧರ್ಮ ದೇಶಧರ್ಮಗಳಿಗೆ ಸಮ್ಮತವಾಗಿದ್ದದ್ದೆ? ಆಕೆ ಏನು ಬೇಕೆಂದರೆ ಅದನ್ನು ಕೊಡುವುದು ಧರ್ಮವಾಗುತ್ತಿತ್ತೆ? “ಕೌಸಲ್ಯೆಯನ್ನು ಪರಿತ್ಯಾಗಮಾಡು” ಎಂದು ಆಕೆ ಕೇಳಿದ್ದಿದ್ದರೆ ಅದು ಊರ್ಜಿತವಾಗತಕ್ಕದ್ದಿತ್ತೆ?

ಈ ವಿಧವಾದ ತರ್ಕಯುಕ್ತಿಗಳು ಸಂಗತವಾಗುತ್ತವೆ–ಈ ಪ್ರಸಂಗದಲ್ಲಿ. ಆದರೆ ಅವು ರಾಮನಿಗೆ ಬೇಕಾಗಿರಲಿಲ್ಲ. ದಶರಥನ ವಾಗ್ದಾನದ ಯುಕ್ತಾಯುಕ್ತತೆಗಳನ್ನು ವಿಚಾರಿಸುವ ಆವಶ್ಯಕತೆ ರಾಮನಿಗೆ ಇರಲಿಲ್ಲ. ತಾನು ರಾಜ್ಯ ಪಡೆಯಬೇಕೆಂಬ ಇಚ್ಛೆ ಆತನಲ್ಲಿ ಕೊಂಚವಾದರೂ ಇದ್ದಿದ್ದರಲ್ಲವೆ ಆತನು ತಕರಾರಿನ ಕಾರಣಗಳನ್ನು ಹುಡುಕಬೇಕಾಗಿದ್ದದ್ದು? ಆತನಿಗೆ ಅಂಥ ಇಚ್ಛೆ ಸರ್ವಥಾ ಇರಲಿಲ್ಲ. ರಾಜ್ಯಕ್ಕಿಂತ ವನವಾಸವೇ ತನಗೆ ಇಷ್ಟವೆಂದು ಆತನು ಅಂತರಂಗದಲ್ಲಿ ಭಾವಿಸಿಕೊಂಡಿದ್ದನೋ ಎನ್ನಿಸುವಷ್ಟು ಮಟ್ಟಿನ ಸಿದ್ಧತೆಯಿಂದಲೂ ಉತ್ಸಾಹದಿಂದಲೂ ಶ್ರೀರಾಮನು ನಡೆದುಕೊಂಡ. ತ್ಯಾಗಸಿದ್ಧತೆಯೇ ಅಂದಿನ ಪ್ರಶ್ನೆಗೆ ಆತನ ಪ್ರತ್ಯುತ್ತರವಾಯಿತು.

ಮತ್ತೊಂದು ಉದಾಹರಣೆಯನ್ನು ನೋಡೋಣ: ಶ್ರೀರಾಮನು ಕಾಡಿನಲ್ಲಿದ್ದಾನೆ. ದಶರಥನು ಪುತ್ರವಿರಹದಿಂದ ದುಃಖಿತನಾಗಿ ತನ್ನ ರಾಣಿಯೊಡನೆ ಪ್ರಲಾಪಿಸುತ್ತಿದ್ದಾನೆ:

ಮನ್ಯೇ ಖಲು ಮಯಾ ಪೂರ್ವಂ

ವಿವತ್ಸಾ ಬಹವಃ ಕೃತಾಃ ।

ಪ್ರಾಣಿನೋ ಹಿಂಸಿತಾ ವಾಪಿ

ತಸ್ಮಾದಿದಮುಪಸ್ಥಿತಮ್‍ ॥  ಸ. ೩೯, ಶ್ಲೋ. ೪

“ನನಗೆ ಹೀಗೆ ತೋರುತ್ತದೆ. ಹಿಂದೆ ನಾನು ಯಾವಾಗಲೋ ಅನೇಕ ಮಂದಿ ತಂದೆತಾಯಿಯನ್ನು ಅವರವರ ಮಕ್ಕಳಿಂದ ಅಗಲಿಸಿರಬೇಕು; ಅಥವಾ ಪ್ರಾಣಿಹಿಂಸೆ ಮಾಡಿರಬೇಕು. ಆ ಪಾಪದ ಫಲವಾಗಿ ನನಗೆ ಈ ಸಂಕಟ ಒದಗಿದೆ.”

ಯದಾಚರತಿ ಕಲ್ಯಾಣಿ

ಶುಭಂ ವಾ ಯದಿವಾಽಶುಭಮ್‍ ।

ತದೇವ ಲಭತೇ ಭದ್ರೇ

ಕರ್ತಾ ಕರ್ಮಜಮಾತ್ಮನಃ ಸ. ೬೩, ಶ್ಲೋ. ೬

“ಎಲೌ ಕೌಸಲ್ಯೆ, ಮನುಷ್ಯನು ಶುಭವನ್ನಾಗಲಿ ಅಶುಭವನ್ನಾಗಲಿ ಯಾವುದನ್ನು ಮಾಡುತ್ತಾನೆಯೋ ಅದನ್ನೇ ಹಿಂದಕ್ಕೆ ಪಡೆಯುತ್ತಾನೆ.”

ಈ ತತ್ತ್ವಕ್ಕೆ ದೃಷ್ಟಾಂತವಾಗಿ ದಶರಥನು ತನ್ನ ಹಿಂದಿನ ಚರಿತ್ರೆಯೊಂದನ್ನು ಜ್ಞಾಪಕಕ್ಕೆ ತಂದುಕೊಳ್ಳುತ್ತಾನೆ. ಆತನು ಹಿಂದೆ ಎಂದೋ ಬೇಟೆಯಾಟಕ್ಕೆ ಹೋಗಿದ್ದಾಗ ರಾತ್ರಿಯಾಯಿತು. ಆ ಕತ್ತಲಿನಲ್ಲಿ ಅವನಿಗೆ ಒಂದು ಶಬ್ದ ಕೇಳಬಂತು. ಅದು ನೀರಾಡುತ್ತಿರುವ ಕಾಡಾನೆಯ ಶಬ್ದವೆಂದು ಆತನು ಭ್ರಾಂತಿಪಟ್ಟು ಆ ಕಡೆಗೆ ಬಾಣವನ್ನೆಸೆದ. ಆದರೆ ಆ ಬಾಣ ತಗುಲಿದ್ದು ಒಬ್ಬ ಋಷಿಪುತ್ರನಿಗೆ. ಅವನು ಸರಯೂನದಿಯಲ್ಲಿ ಪಾತ್ರೆಯನ್ನು ಮುಣುಗಿಸುತ್ತಿದ್ದ. ಹಾಗೆ ಹುಟ್ಟಿದ ಸದ್ದನ್ನು ದಶರಥನು ಮೃಗದ ಶಬ್ದವೆಂದು ಭ್ರಮಿಸಿ ಬಾಣಪ್ರಯೋಗಮಾಡಿದ. ಋಷಿಕುಮಾರನು ಪೆಟ್ಟು ತಗುಲಿ ಪ್ರಾಣಬಿಟ್ಟ. ಯೋಚಿಸಿದ್ದು ಒಂದು; ಆದದ್ದು ಇನ್ನೊಂದು.

ದಶರಥನು ಆತುರದ ಮನುಷ್ಯ–ದುಡುಕಿನ ಸ್ವಭಾವದವನು–ಎಂದು ಇದರಿಂದ ತೋರುತ್ತದೆ. ಅವನು ಕೈಕೇಯಿಗೆ ವರಕೊಟ್ಟದ್ದೂ ದುಡುಕಿಯೇ ತಾನೆ? ಹಿಂದು ಮುಂದು ನೋಡದೆ, ಬೇಡಿದ್ದನ್ನು ಕೊಡುತ್ತೇನೆಂದು ಹೇಳಿದನಲ್ಲದೆ? ವಾಗ್ದಾನಮಾಡುವಾಗ ವಸ್ತು ನಿಜವಾಗಿ ನನ್ನದೆ; ನನ್ನದಾದ ಮೇಲೆ ನಾನು ಸ್ವತಂತ್ರನು, ಮಿಕ್ಕದ್ದನ್ನು ಕೇಳಲಾಗದು–ಎಂದು ನಿಬಂಧನೆ ಮಾಡಿದನೆ? ಇಲ್ಲ. ಈ ಮುನ್ನಾಲೋಚನೆಯೇ ಇಲ್ಲ. ಆಮೇಲೆ ಕೈಕೇಯಿ ಬೇಡಿದಾಗ ಆ ಬೇಡಿಕೆ ಉಚಿತವೆ, ಅನುಚಿತವೆ ಎಂಬ ವಿಚಾರಕ್ಕೆ ಅವನು ಅವಕಾಶವನ್ನುಳಿಸಿಕೊಂಡಿದ್ದನೆ? ಅಂಥ ಯಾವ ಸಂಭವವನ್ನೂ ಆತನು ಆಲೋಚಿಸಲಿಲ್ಲ. ಮೋಹಿನಿ ಏನನ್ನೋ ಕೇಳಿದಳು; ಮುಗ್ಧನು “ಅದೇನಾದರೂ ನಿನ್ನದು” ಎಂದ. ದಶರಥನಿಗೆ ಯುದ್ಧಕಾಲದಲ್ಲಿ ಹೆಂಡತಿಯನ್ನು ಮೆಚ್ಚಿಕೊಳ್ಳುವ ಆತುರ; ಬೇಟೆಯ ಕಾಲದಲ್ಲಿ ಬುಟ್ಟಿ ತುಂಬಿಸಿಕೊಳ್ಳಬೇಕೆಂಬ ಆತುರ. ಬೇರೆ ಸದ್ಗುಣಗಳು ಸಾವಿರವಿದ್ದರೇನು? ಧೈರ್ಯದಿಂದಲೂ ಔದಾರ್ಯದಿಂದಲೂ ಮೆರೆದ ಆ ಮಹಾರಾಯನಲ್ಲಿ ದುಡುಕುಬುದ್ಧಿ ಒಂದು ದುರ್ಬಲತೆಯಾಯಿತು. ಪೂರ್ವಾಪರ ವಿಚಾರವಿಲ್ಲದೆ ನಡೆದ ನಡವಳಿಕೆ ಪ್ರಮಾದವಾದೀತು.


No comments:

Post a Comment