Saturday 16 December 2023

ಹುಟ್ಟು ಹಕ್ಕು - ಕೇತಕೀವನ - ಡಿವಿಜಿ

ಹುಟ್ಟಿನಿಂದ ಬಂದ ಹಕ್ಕುಗಳಂತೆ! ಹುಚ್ಚರಿರ! 
ಸೃಷ್ಟಿಯಾ ದಾನಶಾಸನವೆಲ್ಲಿ, ಮರುಳರಿರ? 
ಕಟ್ಟುಕಥೆಗಳ ಕೇಳಿ ಕೆರಳದಿರಿ, ದುಡುಕದಿರಿ; 
ತೊಟ್ಟಿಲಿಂ ನಮಗೆ ಬಂದಿಹುವೆರಡೆ ಹಕ್ಕುಗಳು; 
ಹೊಟ್ಟೆಯಲಿ ಕೊರೆಯಾದೊಡತ್ತು ಕರೆವುದದೊಂದು, 
ಬಟ್ಟೆಯೊಳೆ ಹೇಸಿಕೆಯ ಮಾಡಿಕೊಳ್ಳುವುದೊಂದು. 
ಮಿಕ್ಕೆಲ್ಲ ಹಕ್ಕುಗಳು ನರಯುಕ್ತಿ ಸೃಷ್ಟನೆಯೆ 
ದಕ್ಕಿಸುವುದವುಗಳನು ಪುರುಷಮತಿಜಾಗೃತಿಯೆ. 

ಪ್ರಕೃತಿಯಲಿ ದಯೆಯಿಲ್ಲ, ದಾಕ್ಷಿಣ್ಯಮಣಮಿಲ್ಲ 
ಸುಕೃತದುಷ್ಕೃತಗಳಾ ರಾಜ್ಯದಲಿ ದೇಹದವು 
ಹೊಟ್ಟೆಯದೆ ಕಟ್ಟಾಜ್ಞೆ :- “ಹಸಿಯೆ ಹಿಡಿ, ಬಡಿ, ತಿನ್ನು" 
ದಿಟ್ಟತನ ಬೇಡವೆಂಬನಿಗಿಲ್ಲಿ ನೆಲೆಯಿಲ್ಲ. 
ನೋಡಿರೀ ಜಗದ ಜಂತುಗಳು ಬದುಕುವ ನಯವ. 
ಜೇಡುಹುಳುವಿನ ನೀತಿ ಸೊಳ್ಳೆಗಳನಾರ್ಜಿಪುದೆ. 
ಹುಲ್ಲೆ ಸಾಧುವೆನುತ್ತೆ ಬಿಟ್ಟ ಹುಲಿ ಬದುಕುವುದೆ? 
ಕೊಲ್ಲಬೇಕಿಲಿಯ ಬೆಕ್ಕಂತು ಬೆಕ್ಕನು ನಾಯಿ. 
ಸಸಿಗುಣಿಸು ಕೊಳೆತ ಸಸಿ; ನರನುಣಿಸು ಕಳಿತ ಸಸಿ. 

ನಶಿಸುವನು ಜೀವಿಯಂಶವ ಮುಟ್ಟಲೊಲ್ಲದನು. 
ಜೀವಿ ಜೀವಿಗೆ ತುತ್ತು; ಜೀವಿ ಜೀವಿಗೆ ಮಿತ್ತು. 
ಈ ವಿಚಿತ್ರ ನ್ಯಾಯವೊಂದೆ ಸೃಷ್ಟಿಯ ಪಾಠ. 
ಅದಕಿಂತ ಮೇಲಾದ ಹುಟ್ಟುಹಕ್ಕುಂಟೇನು? 
ಉದರಭರಣನ್ಯಾಯಕಿಂತ ಪಿರಿದಿಹುದೇನು? 

ಇಹುದು ಕುಕ್ಷಿಯ ಜೊತೆಗೆ ಬೇರೊಂದು ಚೋದಕವು 
ಗಹನವಾಗಿಹುದಾತ್ಮಸತ್ತ್ವದಲಿ ತಾನಡಗಿ 
ಅದರ ಮಹಿಮೆಯೆ ಬಗೆಯೆ ನಮ್ಮೆಲ್ಲ ಮಾನವತೆ 
ಉದಯಿಸುವುವದರಿಂದೆ ನಮ್ಮೆಲ್ಲ ಧರ್ಮಗಳು, 
ನೀತಿಗಳು, ನಿಯಮಗಳು, ನಾಗರಿಕ ಸೂತ್ರಗಳು, 
ಜಾತಿ ಕುಲ ಗೃಹ ರಾಷ್ಟ್ರ ಜನಪದ ಸಮಾಜಗಳು. 
ಈ ಮನುಷ್ಯವಿವೇಕವಿಕಸನದ ಕಥೆಗೊಂದು 
ಸೀಮೆಗಡಿ ಗೊತ್ತಿಲ್ಲವದು ಪೂರ್ಣವಾಗಿಲ್ಲ. 
ಬೆಳೆಯಬೇಕಿನ್ನುಮೆಂತೆಂತೊ ಪೌರುಷಯುಕ್ತಿ 
ಅಳೆಯಬೇಕಿನ್ನೆನಿತೊ ಕಡಲುಗಳ ಆಳವನು 
ಮುಟ್ಟಬೇಕೆನಿತೆನಿತೊ ಬೆಟ್ಟಗಳ ತುದಿಗಳನು 
ಕಟ್ಟಬೇಕೆನಿತೆನಿತೊ ಯಂತ್ರಸಾಧನಗಳನು 
ಸಾಸಿರದ ಸೀಳ್ದಾರಿಗಳ ಪಿಡಿಯುತಲೆದಲೆದು 
ಆಸೆಯಿಂ ಘಾಸಿವಡುತಿಹುದೆ ಮನುಜನ ಹಕ್ಕು 
ಪುರುಷಚೇತನವಂತು ಪಾರುತಿರೆ ಬಾಳುವುದು 
ಅದೆ ಮಾನವನ ಹಕ್ಕು; ಆದೊಡಾ ಹಕ್ಕಿಗಿಹ 
ಎದುರಾಳು ಮಾನವನೆ-ಮಾನವನ ಮೃಗಶೇಷ. 
ಬೇರಿನಂಶವದಿನಿತು ಫಲದೊಳಗಮಿರುವಂತೆ 
ಸೇರಿಹುದು ಮನುಜನೊಳು ಮೃಗದ ಗುಣವನಿತಿನಿತು. 
ಪ್ರಕೃತಿಪಾದವೆ ಮೃಗತೆ, ಮಸ್ತಕವೆ ಮಾನವತೆ. 
ನಿಕೃತಿಯೊಮ್ಮೊಮ್ಮೆ ಪದದಿಂದ ಶಿರಕಾಗುವುದು. 
ಶಿರವು ಮುನ್ನಡೆಯೆನಲ್‍ ಚರಣ ಸರಿವುದುಮುಂಟು 
ಸ್ಥಿರದಿ ನಿಲುವುದುಮುಂಟು, ಪಿನ್‍ ತಿರುಗುವುದುಮುಂಟು. 
ಇಂತು ಶಿರಚರಣಗಳ ಹುರುಡು ಹೋರಾಟದಲಿ 
ಕಂತುಕವ ಪೋಲುವುದು ನರನ ಮಿಡಿಗಾಯ್‍ಪಾಡು. 
ಮಿಡಿಯ ಪಣ್ಣಾಗಿಸುವ ಶಾಖವನು ನಿರವಿಪೊಡೆ 
ಒಡಹುಟ್ಟಿ ಬಂದ ಮೃಗತೆಯನು ನರನಳಿಸುವೊಡೆ 
ಮನುಜಪದಗತಿಯ ಪೂರ್ಣತೆಯೆಡೆಗೆ ತಿರುಗಿಪೊಡೆ 
ಅನುವಾಗಿ ನಿಲಬೇಕು ಮತಿಯ ದಿಗ್ವಿಜಯಕ್ಕೆ. 

ತನ್ನೊಳಗಮಂತು ಪೊರಗಂ ಸತ್ತ್ವಗಳನರಸಿ 
ಉನ್ನತಿಗೆ ಯತ್ನಿಪ ಸ್ವಾತಂತ್ರ್ಯಮೇ ಹಕ್ಕು. 
ಅಲೆಯುತಿಹುದೆಲೆಯಂತೆ ಧರೆಯೊಳಿಂದಾ ಹಕ್ಕು 
ಹಲರದಕೆ ಹಗೆಗಳ್‍-ಅವಿಚಾರಿಗಳು, ಭೀರುಗಳು, 
ಉಪಯೋಗಿಸುವ ನೆವದೊಳಪಯೋಗಗೆಯ್ಯುವರು 
ಅಪರಿಷ್ಕೃತಾತುಮರು, ಗೂಢ ಮೃಗಚೇತನರು. 

ಹುಟ್ಟಿನಿಂ ಹಕ್ಕೆನದಿರ್‍ ಅದಕೆ ಹುಟ್ಟಾಸೆ ವಿಷ. 
ಸೃಷ್ಟಿಜಾಲವ ಕಳಚುವಾತ್ಮಸಾಧನೆ ಹಕ್ಕು 
ಹುಟ್ಟಿನಿಂ ಬಂದ ಹಕ್ಕೇನು, ಪಶುಗಳ ಹಕ್ಕು 
ಶಿಷ್ಟಧರ್ಮವಿವೇಕದಿಂದ ಪುರುಷರ ಹಕ್ಕು.

***********************

ಭಗವಂತನು ಯಾರಿಗೂ  ದಾನಶಾಸನವೆಂದು ನಿಯಮಿಸಿಲ್ಲ.  ಜನ್ಮಸಿದ್ಧಹಕ್ಕು ಎಂದು ಜನರು ಬಡಿದಾಡುತ್ತಾರೆ. ಇಂತಹ ಮಾತು ಮರುಳು‌ಮಾತು ಎನ್ನುತ್ತಾರೆ ಕವಿವರ ಡಿವಿ ಗುಂಡಪ್ಪನವರು.

ಹುಟ್ಟಿನಿಂದ ಯಾರೂ ಯಾವ ಹಕ್ಕನ್ನೂ ಪಡೆಯುವುದಿಲ್ಲ. ಈ ಜನ್ಮಜಾತ ಹಕ್ಕು ಎಂಬುದೇನಾದರೂ ಇದ್ದರೆ, ಅವೆಲ್ಲ ಕಟ್ಟುಕತೆ.  ಕಟ್ಟುಕತೆಗಳನ್ನು ಕೇಳಿ  ಸಂಯಮವನ್ನು ಕಳೆದುಕೊಳ್ಳಬಾರದು.
    
ಹುಟ್ಟುವಾಗಲೇ ನಾವು ಪಡೆದುಕೊಂಡು ಬಂದುದು ಎರಡೇ ಹಕ್ಕುಗಳಂತೆ. ಮೊದಲನೆಯದು ಹೊಟ್ಟೆ ಹಸಿದಾಗ ಅತ್ತು ಕರೆಯುವುದು. ಹಸಿವಿನ ತುತ್ತನ್ನು ಕೇಳಿಪಡೆಯುವುದು‌. ಎರಡನೆಯದು ಬಟ್ಟೆಯಲ್ಲೇ ಹೇಸಿಗೆಯನ್ನು  ಸುರಿಸುವುದು. ಉಣ್ಣುವುದು  ವಿಸರ್ಜಿಸುವುದೆರಡು ನಾವು ಹುಟ್ಟಿನಿಂದ ಪಡೆದ ಹಕ್ಕುಗಳು.

ಇವೆರಡನ್ನು ಹೊರತಾಗಿ ಇನ್ನುಳಿದವೆಲ್ಲವೂ ಮನುಷ್ಯರು ತಮ್ಮತಮ್ಮ ಸ್ವಾರ್ಥ ಸಾಧನೆಗಳಿಗಾಗಿ ಬಲವಂತವಾಗಿ ಸೃಷ್ಟಿಸಿದ ಹಕ್ಕುಗಳೆಂಬ ನಿರ್ಬಂಧಗಳು‌.
     
ಪ್ರಕೃತಿಯಲ್ಲಿ ದಯೆ ದಾಕ್ಷಿಣ್ಯಗಳಿಲ್ಲ. ಹಸಿವನ್ನು ಹಿಂಗಿಸಲು 'ಹಿಡಿ ಬಡಿ ತಿನ್ನು' ಎಂಬುದಷ್ಟೇ  ಪ್ರಕೃತಿಯ ರಾಜ್ಯದಲ್ಲಿ ಹೊಟ್ಟೆಯದೇ ಕಟ್ಟಪ್ಪಣೆ.   ಇದು ಶಕ್ತಿಪ್ರದರ್ಶನದ ಸಾಮ್ರಾಜ್ಯ. ದಿಟ್ಟತನವಿಲ್ಲದೆ ಇಲ್ಲಿ ಬಾಳುವೆಯಿಲ್ಲ. ಚಿಗರೆಗಳು ಸಾಧುವೆಂದು ಸೆಣಸಾಡಿ ತಿನ್ನದಿದ್ದರೆ ಹುಲಿಯು,  ಬದುಕುವುದುಂಟೇ! ಬೆಕ್ಕು ಇಲಿಯನ್ನು ಕೊಲ್ಲುವುದೇ ಅದಕ್ಕೆ ಆಹಾರಧರ್ಮ. ನಾಯಿಬೆಕ್ಕನ್ನು  ಬೆಂಬತ್ತುವುದೇ ಪಶುಧರ್ಮ. ಕೊಳೆತ ಸಸಿಗಳು ಜೀವಂತ ಸಸಿಗೆ ಆಹಾರ. ಮಾಗಿ ಬಾಗಿದ ಸಸ್ಯಗಳು ಮನುಷ್ಯನ ಆಹಾರ.
       ‌‌‌   
ಜೀವಿಗಳನ್ನು ಹಿಂಸಿಸದೆ ಮನುಷ್ಯನಿಗೆ ಬಾಳುವೆಯಿಲ್ಲ. ಜೀವಿಜೀವಿಗೆ ಹೊಟ್ಟೆಬಟ್ಟೆಗಳಿಗೆ ಆಧಾರ. ಜೀವಿ ಜೀವಿಗೆ ಮೃತ್ಯುವೆಂಬುದು ಪ್ರಕೃತಿಧರ್ಮ. ಇದು ವಿಚಿತ್ರವೆನ್ನಿಸಿದರೂ, ಇದುವೇ ಪ್ರಕೃತಿಯು ನಮಗೆ ಕಲಿಸುತ್ತಿರುವ ಪಾಠ. ಹಸಿವಹಿಂಗಿಸಲು ದುರ್ಬಲಜೀವಿಯು ಸಬಲಜೀವಿಗೆ ಆಹಾರವಾಗಲೇಬೇಕು. ಇದಕ್ಕಿಂತ ಮೇಲಾದ ಹಕ್ಕು ಎಂಬುದೇನಿದ್ದರೂ ಕಟ್ಟುಕತೆ. ಹಸಿವುಹಿಂಗಿಸುವುದಷ್ಟೇ ನ್ಯಾಯ! ಇದಕಿಂತ ಹಿರಿದಾದ ನ್ಯಾಯವೆಲ್ಲಿದೆ! 
          
ಹೊಟ್ಟೆಯ ಹಸಿವು ಹಿಂಗಿದ ಬಳಿಕ ಮಾನವೀಯತೆ ಎಂಬ ಗಹನವಾದ ತತ್ತ್ವವು ನಮ್ಮಲ್ಲಿ ಚೋದಕರಸವಾಗಿ ಹರಿಯುತ್ತಿದೆ. ಮಾನವೀಯತೆಯಿಂದ ಧರ್ಮಗಳು ಉದಯಿಸಿದವು. ನೀತಿ‌ನಿಯಮಗಳು,  ನಾಗರಿಕ ಸಂಸ್ಕೃತಿ, ಜಾತಿ,  ಕುಲ, ಮನೆ, ಕುಟುಂಬ, ಸಮಾಜ ರಾಷ್ಟ್ರಾದಿ ಭಾಬಂಧುರತೆಯ ವಿವೇಕವಿಕಸನವು ಕಥೆಯಂತೆ  ಸೀಮೆಯಿಲ್ಲದೆ ಜಗತ್ತಿನಲ್ಲಿ ಬೆಳೆಯಿತು.  ಇದರ ಬೆಳವಣಿಗೆಯು ಪೂರ್ಣಗೊಳ್ಳದು.
     
ಪೌರುಷವು ಇನ್ನಷ್ಟು ಬೆಳೆಯಬೇಕೆನ್ನುತ್ತಿದೆ ಮನುಷ್ಯನ‌ಮನಸ್ಸು. ಕಡಲಿನ ಆಳವನ್ನು ಆಳಬೇಕು, ಗಗನವನ್ನು ಕೈವಶಮಾಡಬೇಕೆಂಬ ಗುರಿಯೆಡೆಗೆ ಜಿಗಿಯುತ್ತಲೇ ಮುನ್ನಡೆಯುತ್ತಿದ್ದಾನೆ. ವಿಜ್ಞಾನ ತಂತ್ರಜ್ಞಾನಗಳ ದಾರಿಯಲ್ಲಿ ಸಾವಿರ ಸಾವಿರ ಕವಲುದಾರಿಗಳಲ್ಲಿ ಸಾಗುತ್ತಾ ಮನುಜಲೋಕವು ದುರಾಸೆಯಿಂದ ಮಾನವೀಯ ನೆಲೆಗಟ್ಟನ್ನು ಹಾಗೂ ಹಕ್ಕನ್ನು ಹತ್ತಿಕ್ಕಿ ಹತಾಶವಾಗುತ್ತಿರುವಂತೆ ಭಾಸವಾಗುತ್ತಿದೆ.
       
ಪೌರುಷವೇ ಬಾಳುವೆಯ ದಾರಿಯಾದಾಗ ಮನುಷ್ಯನಲ್ಲಿ ಪ್ರಕೃತಿಯ ಮೃಗೀಯ ನಡವಳಿಕೆಯು ಗಿಡದ ಬೇರಿಗೆ  ಪೋಷಕಾಂಶವು ಸೇರಿದಂತೆ ಸೇರಿಕೊಂಡಿತು. ಪ್ರಕೃತಿಯಲ್ಲಿ  ಮೃಗೀಯ ಭಾವವವು ಬೇರಿನಂತಾದರೆ, ಮಾನವೀಯತೆಯು ಮಸ್ತಕವು.
    
ಪಾದವು ಮೃಗದಂತೆ ಓಡಲೆಳಸುವುದು. ಓಡು ಓಡೆಂದು ಚೋದಿಸುವ ಕಾಲುಗಳ ಆಜ್ಞೆಯನ್ನು ವಿವೇಕವಿಲ್ಲದೆ ಪಾಲಿಸುವುದರಿಂದ ದಾರಿತಪ್ಪುವುದುಂಟು. ಅತ್ತಿತ್ತ ಚಲಿಸದೆ ನಿಲ್ಲವುದುಂಟು. ಕೆಲವೊಮ್ಮೆ ವಿರುದ್ಧದಿಕ್ಕಿಗೆ ತಿರುಗುವುದುಂಟು‌. ಒಟ್ಟಿನಲ್ಲಿ, ಮೃಗೀಯವಾದ ಪಾದಗಳು ಹಾಗೂ ವಿವೇಕದ ಮಸ್ತಕಗಳ ಪೈಪೋಟಿಯ ಓಟದಲ್ಲಿ  ಮನುಷ್ಯನು ಹಣ್ಣಗಾಯಿ ನೀರುಗಾಯಾಗುತ್ತಿದ್ದಾನೆ.
    
ಮಿಡಿಗಾಯಿಯನ್ನು ಹಣ್ಣಾಗಿಸಲು  ಶಾಖ ನೀಡುತ್ತಾನೆ. ಇದು ತರವೇ! ಶಿರ ಪ್ರಶ್ನಿಸುತ್ತದೆ. ಹುಟ್ಟಿನಿಂದ ಮೂಡಿಬಂದ ಮೃಗೀಯ ಸ್ವಭಾವವನ್ನು ಇನಿತಿನಿತೇ ಅಳಿಸಿಕೊಂಡು ಮಾನವೀಯತೆಯನ್ನು ಒಡಮೂಡಿಸಿಕೊಳ್ಳಬೇಕು. ಪೂರ್ಣತೆಯತ್ತ ಹೆಜ್ಜೆಗಳನ್ನಿಡಲು  ಮತಿಯ ದಿಗ್ವಿಜಯದತ್ತ ಅನುವಾಗಿ ಹೆಜ್ಜೆಗಳು ತಿರುಗಬೇಕು.

        ತನ್ನ ಒಳಹೊರಗೆಲ್ಲ ಸತ್ತ್ವ ಗುಣವನ್ನು ಬಯಸಿದವನಾಗಿ  ಪರಮ ಉನ್ನತಿಗೆ ಪ್ರಯತ್ನಿಸುವ ಮನುಷ್ಯನಿಗೆ ಸ್ವಾತಂತ್ರ್ಯವೇ   ಹಕ್ಕು.

ಇಂದಿನ ದಿನಮಾನಗಳಲ್ಲಿ ಹಕ್ಕಿನ ಪ್ರಶ್ನೆ ಸಾಗರದ ಅಲೆಯೋಪಾದಿಯಲ್ಲಿ  ಅಲೆದಾಡುತ್ತದೆ. ಅಲೆದಾಡುವವರಲ್ಲಿ ನಿಜವಾಗಿ ಹಲವರು ಈ ಹಕ್ಕಿಗೆ ಹಗೆಗಳು. ಹಲವರು ಅವಿಚಾರಿಗಳು. ಕೆಲವರು ಭೀರುಗಳು. ಹಕ್ಕುಚಲಾವಣೆಯ ಹೆಸರಲ್ಲಿ ದುರುಪಯೋಗ ಮಾಡುವರು. ಪಥಭ್ರಷ್ಟರಾಗುವರು. ಪರಿಷ್ಕಾರವಿಲ್ಲದ ಮೃಗಗಳಂತೆ ವರ್ತಿಸುವರು.

        ಹುಟ್ಟುತ್ತಲೇ ಹಕ್ಕುಹಕ್ಕು ಎಂದು ಬಡಬಡಿಸಬೇಡ. ಹುಟ್ಟಾಸೆಯೆಂಬುದು ವಿಷ. ಆತ್ಮಸಾಧನೆಯ ಹಕ್ಕು ಸೃಷ್ಟಿಜಾಲವನ್ನು  ಕಳಚುವುದು. ಮುಕ್ತಿ ಸಾಮ್ರಾಜ್ಯವನ್ನು ಒದಗಿಸುವುದು. ಹುಟ್ಟಿನಿಂದ ಪಡೆದು ಬಂದುದು ಪಾಶವೀಕರ್ಮ. ಪಶುಗಳಂತಹ ವರ್ತನೆ. ವಿವೇಕದ ದಾರಿಯಲ್ಲಿ ಶಿಷ್ಟಧರ್ಮವನ್ನು ಪಾಲಿಸುವುದು  ಪುರುಷನ ಹಕ್ಕು.
ಭಾವಾನುವಾದ: ©ಕೊಕ್ಕಡ ವೆಂಕಟ್ರಮಣ ಭಟ್.ಮಂಡ್ಯ

No comments:

Post a Comment