Tuesday 19 December 2023

ಐವತ್ತೊಂದು - ಕೇತಕೀವನ - ಡಿವಿಜಿ

ಪುರುಷಾಯುವಿನೊಳರ್ಧವಿಂದೆನಗೆ ಮುಗಿದಿಹುದು 
ಕರಡು ಮರದವೊಲೆನ್ನ ಬಾಳಿಂದಿನಿಂದಹುದು 
ಇನ್ನು ಹೊಸ ಚಿಗುರಿರದು, ಹೂವಿರದು, ಹಣ್ಣಿರದು 
ತಣ್ಣೆಳಲ ಹರವಿರದು, ತೊಗಟಿನಲಿ ಹಸಿರಿರದು; 
ಬರಿದಾಗಿ ನಿಂದಿಹುದು ಧರೆಗೊಂದು ಹೊರೆಯಾಗಿ 
ವರುಷಗಳ ಲೆಕ್ಕದಿಂದಲೆ ಗಣನೆಗೀಡಾಗಿ. 

ಮರದವೊಲು ಎಂದೆನೇನ್‍? ಎನ್ನಿಂದೆ ಮರ ಮೇಲು 
ಕೊರಗು ಹಂಗುಗಳುಳಿದುದದರ ಮೌನದ ಬಾಳು 
ಬಿಸಿಲು ಮಳೆಗಾಳಿಗಳ ಬಿರುಬಿಂಗೆ ಬೆದರದದು 
ಹೊಸ ಬಯಕೆ ಹಳೆಕೊರತೆಗಳನೆಣಿಸಿ ಕದಲದದು. 
ಆ ನಿರ್ವಿಕಾರತೆಯ ಗುಣವ ನಾಂ ಕಲಿತಿಹೆನೆ, 
ದೀನತೆಯ ತೋರದಾ ಸ್ಥೈರ್ಯವನು ಗಳಿಸಿಹೆನೆ? 
ಅಂತು ನಾಂ ಚಾಪಲದ ಭೂತದಿಂ ದೂರದಲಿ 
ಅಂತಸ್ಸಮಾಧಾನದಿಂದಿರ್ದೊಡದುವೆ ಸರಿ. 

ಸ್ಮೃತಿಯೊಂದೆ ಇನ್ನೆನಗೆ ಮಿಕ್ಕಿರುವ ಜೀವನಿಧಿ 
ಕತೆಕಗ್ಗಗಳನದರಿನೆತ್ತಿ ಮೆಲಕುವುದೆ ಗತಿ. 
ಇನ್ನು ಹೊಸ ಸಾಹಸದ ಚಿಂತೆಗಳ್ಗೆ ನಮೋ 
ಇನ್ನು ಹೊಸ ಸಾಧನೆಯ ಚಪಲಗಳ್ಗೆ ನಮೋ 
ಹಿಂದೆಂದೊ ಗೈದುದನೆ ಅಂದಿನೊಳ್ಳಿತನೆ, 
ಹಿಂದಿನಾ ಹಿರಿಮೆಯನೆ ಅಂದಿನೆಸಕವನೆ 
ನೆನೆನೆನೆದು ಬಣ್ಣಿಸುತ ರಂಗುರಂಗಿನಲಿ 
ಜನುಮ ಬರಿದಾಗಲಿಲ್ಲೆಂದು ನಟಿಸುತಲಿ 
ಕೇಳ್ವವರ ಬೇಸರವ ಮರೆತು ಬಡಬಡಿಸಿ 
ಬಾಳ್ವೆಗದರಿಂ ಸಮಾಧಾನವನು ಗಳಿಸಿ 
ಸೈಸಬೇಕಿನ್ನುಳಿದ ಬರಡುದಿನಗನಳನು 
ನೀಸಬೇಕಿನ್ನು ಮರುಭೂಮಿ ಪಯಣವನು 
ಸಾಕಿನ್ನು ದೇವ ಎನಗಿಹದ ಮಧುಪಾನ, 
ಬೇಕಿನ್ನು ವಿಶ್ರಾಂತಿ, ಬೇಕೆನೆಗೆ ಮೌನ.

****************

ಅನುಭವಗಳ  ರಸಪಾಕವಾದ ಡಿವಿಜಿಯವರು ಐವತ್ತು ಸಂವತ್ಸರಗಳನ್ನು ಕಳೆದು ಐವತ್ತೊಂದಕ್ಕೆ ಪಾದಾರ್ಪಣೆ ಮಾಡುವ ಸಂದರ್ಭದಲ್ಲಿ ಮೂಡಿದ ಭಾವಲಹರಿಯ ಪಲ್ಲವ ಐವತ್ತೊಂದು ಎಂಬ ಕವನ.

ಮನುಷ್ಯನ ಜೀವಿತಾವಧಿ ಸುಮಾರು ನೂರು ಸಂವತ್ಸರ ಎಂಬುದು ಜನಬಳಕೆಯ ಮಾತು. ಮನುಷ್ಯನು ನೂರು ವರ್ಷ ಬಾಳುವುದಾದರೆ ಅರ್ಧಾಯುಷ್ಯವು ತನಗಿಂದು ಸಂದಿತು ಎಂದು ಡಿವಿಜಿಯವರು‌ ನೆನಪಿಸಿಕೊಂಡು ಹಂಚಿಕೊಳ್ಳುತ್ತಾರೆ‌.

ಮನುಷ್ಯನು ತುಂಬು ಯೌವನದವರೆಗೆ ದೈಹಿಕವಾಗಿ ಬೆಳವಣಿಗೆಯಲ್ಲಿರುತ್ತಾನೆ. ಅರ್ಧಾಯುಷ್ಯ ಕಳೆದ ಮೇಲೆ ದೈಹಿಕವಾಗಿ ಬೆಳವಣಿಗೆಯಿಲ್ಲ. ಮುಂದಿನ ದಿನಗಳಲ್ಲಿ ದೈಹಿಕವಾಗಿ  ಹಿಂಗುವ ಕುಗ್ಗುವ ದಾರಿ. ಈ ಕಾರಣದಿಂದ  ಐವತ್ತರ ಅನಂತರ ಮುಂದಿನ  ದಿನಗಳು ಕೊರಡುಮರದಂತೆ  ಎಂದು ಬಣ್ಣಿಸಿದರು.

 ಮುಂದಿನ ದಿನಗಳಲ್ಲಿ  ನವನವೀನವಾದ ಚಿಗುರುವ ಸ್ವಭಾವಗಳಿರದು. ಹೂಗಳಂತೆ ಸಮಾಜಕ್ಕೆ ಪರಿಮಳಿಸುವ ಕಾಣಿಕೆಗಳನ್ನು ಕೊಡಲಾಗದು. ಮಾಗಿದ ಫಲಗಳನ್ನು  ನೀಡಲಾಗದು. ಮರವೇ ಬರಿದಾಗಿರುವುದರಿಂದ ಬಳಿ ಸುಳಿದಾಡುವವರಿಗೆ ನೆರಳು ನೀಡಲೂ ಸಾಧ್ಯವಾಗದು. ಮರದ ತೊಗಟೆಯು ಬಿರುಸಾಗಿ ಸಾರಹೀನವಾಗಿ ಹಸಿರೆಲೆಗಳು ಕಾಣಲಾರವು. ನಿಸ್ಸಾರವಾದ ಕೊರಡುಮರವು ಭೂಮಿಗೆ ಭಾರವೋ ಎಂಬಂತೆ ಇರುತ್ತದೆ. ಮನುಷ್ಯನು ದೈಹಿಕವಾಗಿ ಕುಗ್ಗುವತ್ತ ಸರಿಯುತ್ತಾನೆ, ಮಾನಸಿಕವಾಗಿಯೂ ಕುಗ್ಗುವ ಸಂದರ್ಭಗಳು ಬರುತ್ತವೆ. ತನಗೆ ಎಷ್ಟು ವರ್ಷಗಳಾದವು ಎಂದು ಗಣಿಸುತ್ತಲೇ ಇರುವವರು ದಿನೇ ದಿನೇ ಕುಗ್ಗುತ್ತಾ   ಮೂಲೆಸೇರುತ್ತಾರೆ.

ಮರದಂತೆ ಜೀವಂತ ಕೊರಡಾಗುತ್ತಾರೆ ಎಂಬುದು ಸರಿಯಾಗದು.  ಮನುಷ್ಯನ ಬರಡುಜೀವನವನ್ನು ಮರದೊಡನೆ ಹೋಲಿಸುವುದೂ ಸರಿಯಾಗದು. ಮನುಷ್ಯನಿಗಿಂತ ಮರಗಳೇ ಮೇಲು. ಮರಗಳು ಕೊರಗುವುದಿಲ್ಲ.  ಹಂಗಿನಾಳಾಗುವುದಿಲ್ಲ. ವಟವಟವೆಂದು ಯಾರನ್ನೂ ನಿಂದಿಸದೆ, ನಿಂದಿಸಿಕೊಳ್ಳದೆ ಮೌನವಾಗಿ ದಿನಗಳನ್ನು  ಕಳೆಯುತ್ತದೆ.  ಪ್ರಕೃತಿಯ ಬದಲಾವಣೆಗೆ ತಕ್ಕಂತೆ ಹೊಂದಿಕೊಂಡು ಬಾಳುತ್ತವೆ. ಬಿಸಿಲಿಗೆ ಬೇಸರವಿಲ್ಲ. ಮಳೆಗಾಳಿಗಳ ಹೊಡೆತಕ್ಕೆ  ಬೆದರುವುದಿಲ್ಲ. ಹಳೆಯ ಕೊರತೆಗಳನ್ನು ನೆನಪಿಸಿಕೊಳ್ಳುವುದಿಲ್ಲ.ಭಾವೀ ಭವಿಷ್ಯದ ದಿನಗಳ ಬಗೆಗೆ ಕನಸುಕಾಣುವುದಿಲ್ಲ. ಕೊರಡುಮರವು ನಿಶ್ಚಲವಾಗಿರುತ್ತದೆ.

ತರುವು ಕಲಿಸುವ ನಿರ್ವಿಕಾರಗುಣವನ್ನು ಮನುಷ್ಯನು ಐವತ್ತು ಉರುಳಿದರೂ ಕಲಿತಿರುವುದಿಲ್ಲ‌.
ದೈನ್ಯತೆಯನ್ನು ತಿರೆದು ಸ್ಥಿರತೆಯನ್ನು ಸಾಧಿಸಿರುವವರು ಎಷ್ಟು ಮಂದಿ ಇದ್ದಾರೆ!  ವಿರಳಾತಿವಿರಳರು!  ಪಂಚಭೂತಗಳಿಂದೆದ್ದು ಬಂದ ಈ ದೇಹವು ಪ್ರಾಪಂಚಿಕ ಆಕರ್ಷಣೆಯ ಚಪಲತೆಯಿಂದ ಹೊರಬಂದು, ಆಂತರಿಕ ಸಮಾಧಾನವನ್ನು  ಕಂಡು ಮೌನದ ಅರಮನೆಯನ್ನು ಹೊಕ್ಕರೆ ಅದುವೇ ನಿಜವಾದ ಅನುಭವ. ಅಂತಹವನು ಅನುಭಾವಿ! .

ಐವತ್ತರ ಅನಂತರದ ಬಾಳುವೆಯು ಹಳೆಯ  ಹೊನ್ನು ಇಲ್ಲವೇ ಹಳವಂಡಗಳ ನೆನಪುಗಳ ಸುರುಳಿ ಬಿಚ್ಚಿಕೊಳ್ಳುವುದರಲ್ಲೇ ಸವೆಯುವುದೇ!? ಕಂತೆ ಕಗ್ಗಗಳನ್ನು ಬಿಚ್ಚುವುದು, ಹೊಸೆಯುವುದರಲ್ಲೇ   ಜೀವನಿಧಿಯನ್ನು ಅರಸುವುದು ತರವಲ್ಲ.

ಮುಂದಿನ ದಿನಗಳು ಹೊಸಸಾಹಸದ ದಿನಗಳಲ್ಲ. ಚಿಂತೆಗಳ ಕಂತೆಗಳನ್ನು ದೂರಚೆಲ್ಲಬೇಕು. ಒಳಿತಿನ ಚಿಂತನೆಯ ದಾರಿಯಲಿ ಹೆಜ್ಜೆಗಳನ್ನಿಡಬೇಕು.

ಹಿಂದಿನ ದಿನಗಳ ಒಳಿತಿನವಿಚಾರಗಳನ್ನು ಸ್ಮರಿಸಿಕೊಂಡು ಸಮಾಧಾನದಿಂದ ಮುಂದಿನ ಹೆಜ್ಜೆಗಳತ್ತ ಮನಸ್ಸಿಡಬೇಕು. ಜೀವನದಲ್ಲಿ ಘಟಿಸಿದ ಬಣ್ಣಬಣ್ಣಗಳ ದಿನಗಳನ್ನು ನೆನಪಿಸಿಕೊಳ್ಳಬೇಕು. ಒದಗಿದ ಭುವನದ ಭಾಗ್ಯದ ದಿನಗಳನ್ನು  ರಂಗುರಂಗಾಗಿ ಬಣ್ಣಿಸುತ್ತಾ, ಜೀವನವು ಬರಡಲ್ಲ, ಜೀವನವೊಂದು ಒಸಗೆ ಎಂದು ಕಿರಿಯರೊಡನೆ ಬೆರೆಯುತ್ತಾ ನಗುನಗುತ್ತಾ ನಗಿಸುತ್ತಾ ಜೀವನ ನಾಟಕದ ಅನುಕರಣೀಯ ಅನುಭವೀ ನಟನಾಗಿ ಬಾಳಬೇಕು.

ಕೇಳುತ್ತಿರುವವರ ಬೇಸರವನ್ನು ಕಂಡು ತಾನೂ ಬೇಸರಗೊಳ್ಳಬಾರದು. ಬಡಬಡಿಸುವವರನ್ನು ಸಮಾಧಾನಪಡಿಸುತ್ತಾ  ತಾನು ಸಮಾಧಾನವನ್ನು ಹೊಂದಬೇಕು. ಹಿಂದಿನ ದಿನಗಳು ಹೊನ್ನು ಎಂದು ಭಾವಿಸಿಕೊಂಡು, ಸಹಿಸಿಕೊಳ್ಳಬೇಕು. ಸಹನೆಯೇ  ದಿವ್ಯೌಷಧವು. ಮುಂದಿನದಿನಗಳನ್ನು ಬರಡುಬರಡೆಂದು ಬಡಬಡಿಸದೆ, 'ಮರುಭೂಮಿ' ಎಂದು ಚಿಂತೆಯ ಅಲೆಗಳ ಸುಳಿಗೆ ಸಿಲುಕದೆ, ಜೀವನಪಯಣದಲ್ಲಿ ಈಜಬೇಕಾಗಿದೆ. ಈಸಬೇಕು, ತನ್ಮೂಲಕ ಜೈಸಬೇಕು. ಮರುಭೂಮಿಯ ಪಯಣವನ್ನು ಸಹನೆಯಿಂದ ಎಚ್ಚರದಿಂದ  ಸಾಧಿಸಬೇಕು.

ಇನ್ನು ಈ ದೇಹಕ್ಕೆ ಮಧು ಮಹೋತ್ಸವದ ಪಾನವು ಸಾಕು. "ದೇವಾ,  ಎನಗಿನ್ನು ವಿರಾಮವು ಬೇಕು, ಬೆಳಕಿನದಾರಿಯಾದ ಒಳಮೌನವು ಬೇಕು" ಎಂದು ಕವಿವರ ಡಿವಿಜಿಯವರು ಪ್ರಾರ್ಥಿಸುತ್ತಾರೆ.
ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment