Thursday 7 December 2023

ಬಾಳೊಂದು ಗೋಳು - ಕೇತಕೀವನ - ಡಿವಿಜಿ

ಮಗುಗಳಾಟದೆ ಮನಸು ಬೇಸರುವ ಮುನ್ನ 
ನಗುವಾತಿನಿಂದಲೆದೆ ವಿಕಸಿಸದ ಮುನ್ನ 
ಜಗದಿ ನಾನೊಬ್ಬಂಟಿಯೆಂದೆನಿಪ ಮುನ್ನ 
ಮುಗಿಯಲೀ ಬಾಳು ಮಿಗುವೊಡದು ಗೋಳು. 

ತುಂಬುಚಂದ್ರನ ನೋಟ ಬೇಡೆನಿಪ ಮುನ್ನ 
ಇಂಬನರಸುವ ಸಾಸ ಸಾಕೆನಿಪ ಮುನ್ನ 
ತುಂಬಿಹೂಗಳ ಲೀಲೆ ಬರಿದೆನಿಪ ಮುನ್ನ 
ಮುಗಿಯಲೀ ಬಾಳು ಮಿಗುವೊಡದು ಗೋಳು. 

ಗಾನ ಕವನಗಳ ರುಚಿ ಹಳಸಪ್ಪ ಮುನ್ನ 
ಜ್ಞಾನಶ್ರಮ ಚೇತನಕೆ ದಣಿವೆನಿಪ ಮುನ್ನ 
ಮಾನವತೆ ತಿರುಳಳಿದು ಸಪ್ಪೆಯಹ ಮುನ್ನ 
ಮುಗಿಯಲೀ ಬಾಳು ಮಿಗುವೊಡದು ಗೋಳು.

**************

"ಅನಾಯಾಸೇನ ಮರಣಂ ವಿನಾ ದೈನ್ಯೇನ ಜೀವನಂ" ಎಂದು ಬಯಸಿ, ಜೀವನವನ್ನು ಪ್ರೀತಿಸಿದ ಕವಿ ಡಿ.ವಿ. ಗುಂಡಪ್ಪನವರು ಇರುವ ನಾಲ್ಕು ದಿನದ ಬಾಳನ್ನು   ಎಲ್ಲರೊಡನೆ ಸಮರಸವಾಗಿ ಬೆರೆತು ಬಾಳುತ್ತ, ಮಾನವೀಯತೆಯಿಂದ ಧನ್ಯತೆಯಿಂದ ಬಾಳಬೇಕೆನ್ನುತ್ತಾರೆ. ಬಾಳನ್ನು ಗೋಳನ್ನಾಗಿ ಮಾಡಿಕೊಳ್ಳಬಾರದು.  
  ಮಕ್ಕಳಾಟವನ್ನು ಕಂಡು ಸಂತೋಷದಿಂದ ಮಕ್ಕಳೊಡನೆ ಮಕ್ಕಳಾಗಿ ನಗುತ್ತ ನಗಿಸುತ್ತಾ ಸರಸವಾಗಿ ಬಾಳಬೇಕು.  ಸರಸವಿನೋದದ ಮಾತುಗಳಿಂದ  ಹುಮ್ಮನಸ್ಸಿನಿಂದ ವಿಕಸಿಸುತ್ತಾ ಬಾಳಬೇಕು. ಜಗತ್ತಿನಲ್ಲಿ ನಾನು ಒಂಟಿಯಾದೆ ಎಂಬ ಬೇನೆ ಬೇಸರಗಳು ಅಪ್ಪಳಿಸದಂತೆ ಬಾಳಬೇಕು. 
 ಬೇನೆ ಬೇಸರ ಮನೋವೇದನೆಗಳಿಂದ ನರಳಾಡುವ ಒಂದು ಕ್ಷಣವೂ ಬಾರದಿರಲಿ.  ಬಾಳು ಗೋಳಾಗುವ ಮೊದಲೇ ನಗುನಗುತ್ತಲೇ ಧನ್ಯತೆಯಿಂದ ಜೀವನಪಯಣವನ್ನು ಮುಗಿಸಲು ಪ್ರಯತ್ನಿಸಬೇಕು.
   ಹುಣ್ಣಿಮೆಯ ಚಂದಿರನ ಹಾಲಿನಂತಹ ಬೆಳಕನ್ನು ಸವಿಯಲಾಗದಂತಹ ದೌರ್ಬಲ್ಯವು ಕಣ್ಣು ಹಾಗೂ ಮನಸ್ಸಿಗೆ ಬರಬಾರದು. ಎಲ್ಲರಿಗೂ ಒಳಿತನ್ನು ಬಯಸಿ ಸಹಕರಿಸಲು ಸಾಧ್ಯವಿಲ್ಲದ ಅಸಹಾಯಕ ಸ್ಥಿತಿ ಬರಬಾರದು.  ಹೂಗಳ ಮಕರಂದವನ್ನು ಹೀರಲು ಹೂಗಳ ಸುತ್ತ ಓಡಾಡುವ ದುಂಬಿಗಳ ಆಟವನ್ನು ಸವಿಯಲಾರದ ಹೀನ ಸ್ಥಿತಿ ಬರುವ ಮೊದಲೇ ನಮ್ಮ  ಬಾಳಲೀಲೆಗಳನ್ನು ಮುಗಿಸಿಕೊಳ್ಳಬೇಕು. 
ದೈಹಿಕ ಹಾಗೂ ಮಾನಸಿಕವಾಗಿ ಆರೋಗ್ಯವಂತರಾಗಿದ್ದು, ಎಲ್ಲರೊಡನೆ ಸಮರಸವಾಗಿ ಹೊಂದಿಕೊಂಡು ಬಾಳುತ್ತಿರಬೇಕು. ಈ ರೀತಿಯಲ್ಲಿ ಬಾಳಲು ಸಾಧ್ಯವಾಗದೆ, ಬಾಳು ಬರೀ ಗೋಳು ಎಂಬಂತಾಗ ಬಾರದು. ಅದರ ಮೊದಲೇ ನಮ್ಮ ಕರ್ತವ್ಯಗಳನ್ನು ಮುಗಿಸಿಕೊಳ್ಳಬೇಕು.
   ಕಿವಿಗಳು ಗಾನಕವನಗಳ ಸವಿಯನ್ನು ಆಸ್ವಾದಿಸುತ್ತಾ ಎಲ್ಲರೊಡನೆ  ಕಲೆತುಬಾಳುತ್ತಿರಬೇಕು. ಗಾನಕವನಗಳು ಹಳಸೆನ್ನುವ ದೀನಹೀನಸ್ಥಿತಿಯು ಬರಬಾರದು.ಅಂತಹ ಹೀನ ಸ್ಥಿತಿಯು ಬರುವ ಮೊದಲೇ ಧನ್ಯತೆಯಿಂದ ಬಾಳನ್ನು ಮುಗಿಸಿಕೊಳ್ಳಬೇಕು. ಅನಂತರ, ದಿನಗಳನ್ನು ಸವೆಸುತ್ತಿದ್ದರೆ ಅದು ಬಾಳಲ್ಲ, ಅದು  ಬಾಳೊಂದು ಗೋಳು. ಓದು ಬರಹ ಅಧ್ಯಯನಗಳು ಸಾಕು, ದಣಿವಾಗುತ್ತಿದೆ, ಓದು ಬರಹಗಳು ಆಯಾಸವನ್ನು ಹೆಚ್ಚಿಸುತ್ತದೆ, ಚೈತನ್ಯವನ್ನು ಕುಗ್ಗಿಸುತ್ತದೆ ಎಂಬ ಅನ್ನಿಸಿಕೆ ಮನಸಿಗೆ ಬರುವ ಮೊದಲೇ ನಮ್ಮ ಜೀವನದ ಕೆಲಸಗಳನ್ನು ಪೂರೈಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳು ಬಾಳೆಂಬುದು ಗೋಳಿನ ಗೋಳವಾಗುವುದು. ಮಾನವೀಯತೆಯಲ್ಲಿ ಸ್ವಾರಸ್ಯವಿಲ್ಲ ಎಂಬ ಭಾವನೆ ಮೂಡುವ ಮೊದಲೇ ಬಾಳದೀವಿಗೆಯ ನಿಜವಾದ ಬೆಳಕನ್ನು ಹರಡುವ ಕರ್ಮವನ್ನು ಮುಗಿಸಿಬಿಡಬೇಕು. ನಗುನಗುತ್ತಾ  ನಗಿಸುತ್ತಾ   ಸಮರಸವಾಗಿ ಹೊಂದಿಕೊಂಡು ಬಾಳುತ್ತಾ ಧನ್ಯತೆಯಿಂದ ಜೀವನವು ಕೊನೆಗೊಳ್ಳಬೇಕು. 
ಸಾಕಪ್ಪ ಸಾಕು ಬೇಡವೀ ಗೋಳು ಎಂದೆನ್ನುವ ದಿನಗಳು ಬಾಳಿನಲ್ಲಿ ಬರಬಾರದು ಎಂದು ಡಿವಿಜಿಯವರು ಬಯಸುತ್ತಾರೆ‌..  ಭಾವಾನುವಾದ: 
©ಕೊಕ್ಕಡ ವೆಂಕಟ್ರಮಣ ಭಟ್, ಮಂಡ್ಯ

No comments:

Post a Comment