Wednesday 20 December 2023

ಮುಂದೆ ನೋಡು [ರಾಬರ್ಟ್‍ ಬ್ರೌನಿಂಗ್‍ ಕವಿಯ “ಪ್ರಾಸ್ಪೈಸ್‍" (Prospice) ಎಂಬ ಕವಿತೆಯ ಛಾಯೆ] - ಕೇತಕೀವನ - ಡಿವಿಜಿ

೧ 
ಮೃತ್ಯುಭಯವೇನ್‍?-ಎನ್ನ ಕಂಠದಲಿ ಕಫದೆಳೆತ; 
ಮೋರೆಯಲಿ ಕುಳಿರು; 
ಪಯಣ ಕೊನೆಯೆನಿಸುತಿದೆ; ಬಿರುಗಾಳಿಗಳ ಹೊಡೆತ; 
ಪೂರ ಕಾರಿರುಳು. 

೨ 
ಹಗೆಯೆನಿಪನೆಡೆಯಿದವನಿಲ್ಲಿಯೇ ನಿಂದಿಹನು 
ಘೋರ ರೂಪಿಂದೆ 
ಆದೊಡಂ ಬರಲೆಬೇಕಿತ್ತ ಬಲುಹುಳ್ಳವನು 
ಧೀರಗತಿಯಿಂದೆ. 

೩ 
ಪಯಣ ಮುಗಿದೀ ಶಿಖರ ಸೇರ್ದಂದು ಕಳಚುವುದು 
ಎಲ್ಲ ತಡೆಗಡುವು. 
ಇನ್ನುಮತ್ತಲ್‍ ಪೋರಿ ಸಾಧಿಸುವುದಿರಬಹುದು 
ಗೆಲುವಿನಾತೊಡವು 

೪ 
ಪೋರುವನೆ ನಾನೆಂದುಮ್‍. ಇನ್ನೊಂದಿಹುದು ಪೋರ್ಕೆ 
ಕಡೆಯದುಚ್ಚದುದು. 
ಸಾವೆನ್ನ ಕಣ್‍ಕಟ್ಟಿ “ನುಸುಳು ನೀನ್‍" ಎನ್ನುವೊಡೆ 
ಎನಗೆ ಮೆಚ್ಚದದು. 

೫ 
ಆಗದದು; ನಾನೆಲ್ಲವನುಮನುಭವಿಸಬೇಕು 
ಹಿರಿ ಧೀರರವೊಲು 
ಪೊತ್ತು ಭಾರವ, ಜೀವನದ ಋಣವ ತೆರಬೇಕು 
ನೋವು ಚಳಿಯಿರುಳು. 

೬ 
ಧೀರಂಗೆ ತಿರುಗೀತು ನೀಚವುಚ್ಚಕೆ ಘಳಿಲೆ 
ಕಾರಿರುಳು ಮುಗಿದು. 
ಸೃಷ್ಟಿ ಭೂತಗಳೊರಳೆ ಪೈಶಾಚಗಳ ರಗಳೆ 
ಕಳೆವುದಳಿಯುವುದು. 

೭ 
ಅಂದೆನ್ನ ನೋವೆನ್ನ ಮಾರ್ಪಟ್ಟು ಶಾಂತಿಯಾಗುವುದು, 
ಬೆಳಕು ಬೆಳಗುವುದು 
ನಿನ್ನ ನಾನ್‍ ಓ ಜೀವ ಜೀವನವೆ ತಬ್ಬಿಕೊಳಲಹುದು, 
ಉಳಿದುದೀಶನದು

*********************************************
ಕವಿ ರಾಬರ್ಟ್ ಬ್ರೌನ್ ಅವರು ಜೀವನದ ಏರಿಳಿತಗಳನ್ನು ಧನಾತ್ಮಕವಾಗಿ ಸ್ವೀಕರಿಸಿದವರು‌. ತಂದೆಯೊಡನೆ ವಿರೋಧ    ಕಟ್ಟಿಕೊಂಡು  1846ರಲ್ಲಿ ರಾಬರ್ಟ್ ಅವರು ತಾನು ಪ್ರೀತಿಸಿದ ಎಲಿಝಬೆತ್ ಅವರನ್ನು ಮದುವೆಯಾದರು. ಪ್ರೀತಿಸಿ ಮದುವೆಯಾದ ಹೆಂಡತಿ1861ರಲ್ಲಿ ಗತಿಸಿದಳು. ಅನಿರೀಕ್ಷಿತವಾಗಿ ಬಂದ ಈ ಕಹಿಯನ್ನೂ ಕವಿಯು ದಿಟ್ಟತನದಿಂದ ಎದುರಿಸಿದರು. ಸ್ಥಿತಪ್ರಜ್ಞನಾಗಿ  ಸೆಟೆದು ನಿಂತು ಸಾವನ್ನು  ಕಂಡು ಹಿಂದೋಡಬೇಡ ಎಂದು ತನಗೆ ತಾನೇ ಸಮಾಧಾನವನ್ನು ಹೇಳುತ್ತಾ 'ಸಾವೆಂಬುದು ಮಹಾನವಮಿ' ಎಂಬಂತೆ ಅಂಜಲಿಲ್ಲ,ಅಳುಕಲಿಲ್ಲ.  ಸಾವು ಮತ್ತು ನೋವನ್ನು ಪರಿಪೂರ್ಣವಾಗಿ ಪಯಣದ ದಾರಿ ಎಂದು ಸ್ವಾಗತಿಸಿ ಮುನ್ನಡೆದರು. ರಾಬರ್ಟ್ ಬ್ರೌನ್ ಅವರ ಈ ಕವನವು 'ಹಿಂದೆನೋಡಬೇಡ ಮುಂದೆ ನೋಡು' ಎಂದು ಸಂದೇಶಿಸುತ್ತದೆ. ಮೃತ್ಯುವಿಗೆ ಹೆದರದಿರು ಎನ್ನುವುದು ಕವನದ ಆಶಯ.

         ಮರಣದಿಂದ ಬೆದರದೆ, ಮರಣವನ್ನು ನಿಂದಿಸದೆ, ಮರಣವೆನ್ನುವುದು ಜೀವನವೆಂಬ ಪರ್ವತಾರೋಹಣವೆಂದು ಬಗೆಯುತ್ತಾರೆ. ಪಯಣದಲ್ಲಿ ತೊಡಕುಗಳುಂಟು, ತಿಣುಕುಗಳುಂಟು, ಏಣುಕೊಳ್ಳ ಕೊನ್ನಾರಗಳಿವೆ. ಮುಗ್ಗರಿಸುವ ಕೊರಕಲು ಸನ್ನಿವೇಶಗಳೂ ಇವೆ ಎಂಬುದನ್ನು ಬಲ್ಲ ಕವಿಯು, ಮಡದಿಯ ಸಾವನ್ನು ಕಂಡು ಕಂಗೆಡದೆ ಬರಲಿರುವ ತನ್ನ ಮರಣವನ್ನೂ ಎಂಟೆದೆಯಿಂದ ಸ್ವಾಗತಿಸಲು ಸಿದ್ಧರಿದ್ದಾರೆ.

   ಡಿ ವಿ ಗುಂಡಪ್ಪನವರ ಕನ್ನಡದ ಅನುವಾದದ ಕಡೆಗೆ ಗಮನಹರಿಸೋಣ
 ಮರಣದಿಂದ ಭಯವೇ? ಪ್ರೀತಿಸಿ ಮದುವೆಯಾದ ಮಡದಿಯ ಸಾವು ಅಪಾರವಾದ ವೇದನೆಯ ಯಾತನೆಯನ್ನು ಉಂಟುಮಾಡಿದೆ. ಸಾವಿಗಾಗಿ ಹೆದರದೆ, ಕುಗ್ಗದೆ,   ಮೃತ್ಯುವಿನಿಂದ ಭಯವೇ?  ಪಯಣದ ದಾರಿಯಲ್ಲಿ ವಾತಾವರಣದ ಏರಿಳಿತದ ವೈಪರೀತ್ಯದಿಂದ ಆರೋಗ್ಯ ಏರುಪೇರಾಗಿದೆ. ಗಂಟಲು ಕಫದ ಸೆಳೆತದಿಂದ ನರಕ ಯಾತನೆ. ಮೂಳೆಕೊರೆಯುವ ಚಳಿಯಿಂದ ಮೋರೆಯ ಚರ್ಮವು ನಲುಗುತ್ತಿದೆ. ಒಲವಿನ‌ಮಡದಿಯ ಪಯಣವು ಕೊನೆಗೊಂಡ ಹಂತದಲ್ಲಿ ನನ್ನ  ಪರ್ವತಯಾನದ ಕೊನೆಯ ಹಂತವು ಸಮೀಪಿಸುವಂತಿದೆ. ಬಿರುಗಾಳಿಯ ಹೊಡೆತ ಅಪ್ಪಳಿಸುತ್ತಿದೆ. ಮುಂದಿನ ದಾರಿಯೆಲ್ಲವೂ ಗಾಢಾಂಧಕಾರದ ಕಗ್ಗತ್ತಲೆಯ ದಾರಿ.  ಆದರೇನು ಇಟ್ಟಹೆಜ್ಜೆಗಳನ್ನು ಮುಂದಿಡುವುದು ವೀರ ಸೈನಿಕನ ನಡೆ. ಮುಂದೆ ನೋಡುತ್ತಾ ನಡೆಯುವುದು ಕಾಲನ ನಿರ್ದೇಶ.
 ಹಗೆ ಎನಿಪನ ಎಡೆ ಇದು ಇಲ್ಲಿಯೇ ನಿಂದಿಹನು.

ಏರುಹಾದಿಯ ದೀರ್ಘಪ್ರಯಾಣದಲ್ಲಿ   ಹಗೆಯಂತೆ ಮೃತ್ಯುದೇವನು ಇಲ್ಲೇ ಎಲ್ಲೋ ಘೋರ ರೂಪದಿಂದ ಸುಳಿದಾಡುತ್ತಿದ್ದಾನೆ‌. 

ತನ್ನಲ್ಲಿ ಬಲವಾದ ನಂಬುಗೆಯುಳ್ಳವನು   ಧೀರಗತಿಯಿಂದ ಮುಂದೆ ಬರಲೇ ಬೇಕು. ಅದು ಅನಿವಾರ್ಯ.  ಬಲುಹುಳ್ಳವನು ಆರಂಭಿಸಿದ ಪಯಣದ ದಾರಿಯಲ್ಲಿ ಮುಂದೆ ನೋಡುತ್ತಾ ದಿಟ್ಟಹೆಜ್ಜೆಗಳನ್ನು ಉನ್ನತ ಏರಿನತ್ತ ಇಡುವುದೇ ಕರ್ತವ್ಯ. ಸತ್ತವರಿಗಾಗಿ ಕಣ್ಣೀರಿಡುತ್ತಾ ಮೂಲೆಸೇರುವಂತಿಲ್ಲ. ಆದರೆ ಗತಿಸಿದಂತವರು ನಡೆದ ದಾರಿಯಲ್ಲಿ ನಡೆದು ಅವರ ಒಲವಿಗೆ ಸಾರ್ಥಕತೆಯನ್ನು ಮೂಡಿಸಬೇಕು.

     ಶಿಖರದತ್ತ ಪಯಣವು ಸಾಗಬೇಕಿದೆ.  ಏಣು, ಕಮರಿ, ಕೊಳ್ಳಕೊನ್ನಾರಗಳ ದಾರಿಯನ್ನು ಕ್ರಮಿಸುತ್ತಾ ಶಿಖರದ ತುದಿಯನ್ನೇರಿದಾಗ  ಎಲ್ಲಾ ತಡೆಗಳು ಕಳಚಿಕೊಳ್ಳುವುದು.  

ಶಿಖರವನ್ನೇರಿದಷ್ಟಕ್ಕೆ ಪಯಣ ಮುಗಿಯುವುದಿಲ್ಲ. ನನಗಿಂತ ಮೊದಲೇ ಅಲ್ಲಿ ಸೇರಿದವರ ಜೊತೆಗೂಡಿ ಇನ್ನೂ ಸಾಧಿಸಲು ಉಳಿದಿದೆ. ಕವಿಯು, ಅಲ್ಲಿ ಸಾಧಿಸುವ ಮೂಲಕ ಗೆಲುವಿನ ಆಭೂಷಣವನ್ನು ತೊಡಬಯಸುತ್ತಾನೆ ಕವಿಯು ಹತಾಶನಲ್ಲ. ಆಶಾಭಾವನೆಯಿಂದ  ಮುನ್ನುಗ್ಗಲು ಬಯಸುತ್ತಾನೆ. ಧೀರತನದಿಂದ ಬಲವಂತನಾಗಿ ಮುನ್ನಡೆಯನ್ನು ಬಯಸುತ್ತಾನೆ.

      ನಾನು ಸಾವಿಗಾಗಿ ಹೆದರುವವನಲ್ಲ. ನಿರಂತರವಾಗಿ ಬಾಳುವೆಗಾಗಿ ಹೋರಾಡುವವನು. ಹೋರಾಟದ ಇನ್ನೊಂದು ಮಜಲು ಇದೆ. ಈ ಕಡೆಯ ಹೋರಾಟವೇ ಅತ್ಯುನ್ನತವಾದುದು. ಈ ಹೋರಾಟದಲ್ಲಿ ಸಾವೆಂಬುದು ನನ್ನೊಡನೆ ಕಣ್ಣುಮುಚ್ಚಾಲೆಯಾಡಿ ಸಾವಿನಿಂದ ತಪ್ಪಿಸಿಕೊಳ್ಳಲು ಅವಕಾಶ ನೀಡಿದರೆ, ನನಗದು ಮೆಚ್ಚುಗೆಯ ವಿಷಯವಲ್ಲ,  ವಿಷಾದವಾದೀತು! 

        ಊಹೂಂ! ಆಗದು, ನಾನು  ಅನುಭವಗಳಿಂದ  ತಪ್ಪಿಸಿಕೊಳ್ಳುವವನಲ್ಲ. ನಾನು ಸುದೀರ್ಘಪಯಣದ ನೋವು ನುರಿತ ಯಾತನೆಗಳೆಲ್ಲವನ್ನೂ ಮಹಾಪ್ರಸಾದವೆಂದು ಅನುಭವಿಸಬೇಕು. ವೀರಸೈನಿಕನಂತೆ, ಎಂಟೆದೆಯ ಪರ್ವತಾರೋಹಿಯಂತೆ ಅನುಭವಿಸಬೇಕು.
 ಋಣಭಾರವನ್ನು ಹೊತ್ತುಕೊಂಡು ಮುನ್ನಡೆಯಬೇಕು. ಮೈಕೊರೆಯುತ್ತಿರುವ ಈ ಕಾರುರುಳ ಪಯಣದಲ್ಲಿ ಋಣಭಾರವನ್ನು ಹಗುರಗೊಳಿಸುವುದು ಅನಿವಾರ್ಯ. 

     ಧೀರನಾದವನು  ಪಾತಾಳದಿಂದ ಔನ್ನತ್ಯದ ಪರಮತುದಿಯನ್ನು ಕತ್ತಲೆಯು ಕಳೆದು, ಶುಭಗಳಿಗೆಯಲ್ಲಿ ಜಯಿಸಬಲ್ಲನು.

ಧೀರತನದಿಂದ ಹೋರುವುದು ಅನಿವಾರ್ಯ.  ಸಾಹಸಿಯಾದವನು ದಾರಿಯಲ್ಲಿ ಎದುರಾಗುವ ಭೂತ,ಪಿಶಾಚಿಗಳ ರಗಳೆಗಳನ್ನು ಗೆದ್ದು  ವಿಜಯದ ದಾರಿಯಲ್ಲಿ ಮುನ್ನಡೆಯುತ್ತಾನೆ.

       ನಾನು ಸಾಹಸದ ದಾರಿಯ ಪಯಣವನ್ನು ಯಶಸ್ವಿಯಾಗಿ ಪೂರೈಸಿಕೊಂಡು ಬರುವೆನು.  ನಿನ್ನೊಡನೆ ಸೇರುವೆನು. ಆಗ ನನಗೆ ಸಮಾಧಾನವಾಗುವುದು. ಆಗ ನನಗೆ ಶಾಂತಿಯು ದೊರಕುವುದು. ಆಗ ಬೆಳಕಾಗುವುದು. ಅಲ್ಲಿಯ ವರೆಗೆ  ಕತ್ತಲೆಯ ದಾರಿಯಲ್ಲೇ ಬರಬೇಕಾಗಿದೆ. ಬೆಳಕಾದ ಮೇಲೆ ನಾನು ನಿನ್ನೊಡನೆ ಸೇರಿದವನಾಗಿ ನಾವು ಬೆಳಗುತ್ತಿರುತ್ತೇವೆ. ಅಲ್ಲಿ ನೀನು ನನ್ನ ಬರುವಿಕೆಗಾಗಿ ಕಾಯುತ್ತಿರುವುದನ್ನು ಬಲ್ಲೆ.   ನನ್ನ ಜೀವದ ಜೀವಾಳವಾದ ನಿನ್ನನ್ನು ನಾನು, ನನ್ನನ್ನು ನೀನು  ಗಾಢವಾಗಿ ಆಲಂಗಿಸಿಕೊಂಡು ನಮ್ಮ ಪ್ರೀತಿಯನ್ನು ಅಮರವಾಗಿಸೋಣ. ಇದಕ್ಕಿಂತ ಹೆಚ್ಚಿನ ವಿಚಾರಗಳು ಪರಮಪ್ರಭುವಿನ ಇಚ್ಛೆಗೆ ಸೇರಿದುದು.
ಭಾವಾನುವಾದ : ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment