Friday 22 December 2023

ಶ್ಯಾಮಸುಂದರಿ (ಸ್ಮೃತಿಚಿತ್ರ) - ಕೇತಕೀವನ - ಡಿವಿಜಿ

ಯಾರ ಮನೆ ಹೆಣ್ಣಿವಳು? ಯಾರುಣುವ ಹಣ್ಣು? 
ಏನು ನಗುವಗಲ ಮೊಗವೇನರಳುಗಣ್ಣು! 
ಬಿಳುಪಲ್ಲ ಮೈಬಣ್ಣ ಕೆಂಪಲ್ಲ, ಮಸುಕು, 

ತೆಳುಹೊಗೆಯ ನಸುಮಸಕು, ಇವಳಿಗದೆ ಸೊಬಗು! 
ನಗಲಿವಳ ತುಟಿನಡುವೆ ಪರಿವ ಬಿಳಿಹೊಳಪು 
ಮುಗಿಲೋಳಿ ನಡುವಣಿಂ ಸಸಿ ಸುರಿವ ಬೆಳಕು. 
ಮುಂಗುರುಳು ಪಣೆಯ ಮೇಲಲೆಯೆ ಸುಳಿ ಸುರುಳಿ 
ಕಂಗಳಿಂ ಪಾರುವುದು ಮಿನ್‍ ಮಿನುಗು ಹೊರಳಿ 
ನುಣ್ಗದಪು ನಗುವಿನಿಂದದಿರೆ ಮಾಣಿಕವು 
ಚೆಂಗುಲಾಬಿಯ ನೆರೆಯ ಪಸಿರೆಲೆಯ ಸುಳಿವು 
ಕುರಿಚು ಪೆರ್ಚುಗಳೆನಿಸದಿವಳೊಡಲ ನಿಲುವು 
ಹರುಷ ಮಿಗೆ ಲವಲವಿಕೆ ಪೆರ್ಚಿದವಯವವು 
ಒಡವೆಗಳ ಮೆರುಗಿಲ್ಲ ಉಡಿಗೆ ಜರುಬಿಲ್ಲ 
ಬೆಡಗು ಮೊಗದಲಿ, ಮಿಕ್ಕ ಮೈ ಲಕ್ಷ್ಯಕಿಲ್ಲ. 

ಆರಿವಳು? ಹೆಸರೇನೊ, ಕುಲವೇನೊ, ಎಂತೋ 
ಊರ ಬಾಯ್ಗಿವಳು ತುತ್ತಾಗದಿಹುದೆಂತೋ! 
ಮನೆಯೊಳ್ಳಿತಿದ್ದೀತು; ದನಿಯೊಳುಂಟು ನಯ. 
ತನು ಯವ್ವನದ ನಿಲಯ, ಮನಕಾಶೆಯುದಯ. 
ಚಿಂತೆಯಿಲ್ಲದ ಬದುಕು, ಸಂಭ್ರಮವಿಲಾಸ 
ಸಂತಸವ ನಿರುಕಿಪಾ ಭಾವಿ ವಿಶ್ವಾಸ 
ಆ ಮುಗ್ಧ ಮಧುರತೆಯ ನೆನಪೆ ಒಂದು ವರ 
ಶ್ಯಾಮಸುಂದರಿಯಿವಳನೊಲಿಸುವನೆ ಧೀರ 
ತರಳೆ, ತರಳಾಕ್ಷಿ, ತರಳತೆಯುಂಟೆ ಮನದಿ? 
ಇರಿಸಿದನು ತಡೆದು ನೀನೆಚ್ಚರಿರು ಜಗದಿ.

**************************************************

ಕೆಲವರು ಹೆಣ್ಣಿನ ಸೌಂದರ್ಯವನ್ನು ಚರ್ಮದ ಬಣ್ಣದಿಂದ ಗುರುತಿಸಬಯಸುತ್ತಾರೆ. ಸೌಂದರ್ಯವಿರುವುದು ಬಣ್ಣದಲ್ಲಿ ಅಲ್ಲ. ಕವಿಯ ಕಣ್ಣಿಗೆ ಬಿದ್ದ ಚೆಲುವೆಯು ಕೆನೆಹಾಲಿನ ಬಿಳಿಬಣ್ಣದವಳಲ್ಲ. ನಸುಕೆಂಪುಬಣ್ಣದವಳೂ ಅಲ್ಲ. ಎಣ್ಣಗಪ್ಪಿನ ಮಸುಕುಬಣ್ಣದ ಚೆಲುವೆ.  ಕಪ್ಪು ಕತ್ತುರಿಯಲ್ತೆ. ಪರಿಮಳಿಸುವ ಗುಣಶೀಲಗಳು, ಮುಖಕ್ಕೆ ಬೆಳದಿಂಗಳು ಹರಿದಂತಹ ಅರಳುಗಣ್ಣಿನ ಚೆಲುನಗುವು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.

     ಬೊಗಸೆಗಣ್ಣಿನ ಈ ಕೃಷ್ಣ ಸುಂದರಿಯ ಮೊಗದಾವರೆಯು  ಅರಳುಗಣ್ಣುಗಳ ಚೆಲುನಗುವಿನಿಂದ  ನೋಡುಗರಿಗೆ ಯಾರಮನೆಯ ಚೆಲುವೆ ಈಕೆ ಎಂಬ ಅಚ್ಚರಿಯನ್ನುಂಟುಮಾಡುತ್ತದೆ. ಈಕೆಯನ್ನು ವಿರಿಸುವ ಅದೃಷ್ಟವಂತನಿಗೆ ಈಕೆ ಜಂಬುನೇರಳೆಯ ಹಣ್ಣು ಎಂದು ಕವಿ ಬಣ್ಣಿಸುತ್ತಾರೆ.

     ಚೆಲುವೆಯೆಂದೊಡೆ, ಇವಳೇನು ದಂತಧವಳದ ಮೈಯವಳಲ್ಲ. ಊಹೂಂ! ಕೆಂಬಣ್ಣದ ಸುಂದರಿಯೂ ಅಲ್ಲ. ಮಸುಕುಕಾದ  ಶ್ಯಾಮಲವರ್ಣದಿಂದ ಕಾಂತಿಯುತವಾಗಿ ಮಿನುಗುತ್ತಿದ್ದಾಳೆ.
ತಿಳಿಯಾದ ಹೊಗೆಯ ಬಣ್ಣದಂತಹ ತೆಳುಮೈಯವಳು‌. ಮಸುಕಾದ ಕೃಷ್ಣಕಾಂತಿಯು ಇವಳ ಮೈಸೊಬಗನ್ನು ಶೋಭಿಸುತ್ತಿದೆ. 

ಸ್ನಿಗ್ಧಸ್ವಭಾವದ ಈ ನವಕಾಂತಿಯ ತರುಣಿಯು  ಒಂದಿನಿತು ತುಟಿತೆರೆದು ಮಂದಹಾಸವನ್ನು ಬೀರುತ್ತಿದ್ದರೆ, ಬೆಳ್ನಗೆಯ ಬೆಳಕು ಹೊರಸೂಸುತ್ತದೆ.

ಮೋಡಗಳ ನಡುವೆ  ಚಂದ್ರಕಲೆಯಂತೆ ಶೋಭಿಸುತ್ತಾಳೆ. ಶ್ಯಾಮಸುಂದರಿಯು ‌ಮೋಡವಾದರೆ  ಅವಳ ನಗುವಿನಿಂದ ಒಂದಿನಿತು ಇಣುಕುವ ಬಿಳುಪಾದ ರದನಗಳ ಕಾಂತಿಯು ಚಂದ್ರಕಾಂತಿ!  ಕವಿಯು ಅದೆಂತಹ ಸುಂದರ ಚಿತ್ರವನ್ನು ಕಲ್ಪಿಸುತ್ತಾನೆ! 

      ಹಣೆಯ ಅತ್ತಿತ್ತ  ಸುರುಳಿ ಸುರುಳಿಯಾಗಿ ಹಾರಾಡುವ  ಮುಂಗುರುಳಿನ ಕುಣಿತವು ಸಾಗರದ ಅಲೆಗಳಂತೆ   ಕಂಗೊಳಿಸುತ್ತಿದೆ. ಚಂಚಲವಾದ ಕಂಗಳ ನೋಟವು  ‌ಮಿನುಗುತ್ತಾ ನೋಡುಗರ ಕಂಗಳಿಗೆ ಹಬ್ಬವಾಗುತ್ತಾಳೆ.

      ಈ ಶ್ಯಾಮಸುಂದರಿಯ ನುಣ್ಣನೆಯ ಕೆನ್ನೆಗಳಲ್ಲಿ‌ತುಂಬಿಹೊರಸೂಸುವ ನಗುವು ಮಾಣಿಕ್ಯವು ಮಿನುಗುತ್ತಿರುವಂತೆ ಭಾಸವಾಗುತ್ತಿದೆ. 

    ಈಕೆಯ ಮೊಗವು ಚೆಂಗುಲಾಬಿಯಾದರೆ ಶರೀರವು ಹಸಿರೆಲೆಗಳಿಂತೆ ಶೋಭಿಸುತ್ತಾಳೆ. ಸಸ್ಯಶ್ಯಾಮಲೆಯಾಗಿ ಶೋಭಿಸುವ  ಈ ಸೌಂದರ್ಯಲಕ್ಷ್ಮಿಯು,  ಹೆಚ್ಚು ಎತ್ತರದನಿಲುವಲ್ಲ, ಹಾಗೂ ಕುಳ್ಳಿಯೂ ಅಲ್ಲದ ಸುಂದರ ನಿಲುವಿನ ತನುಗಾತ್ರದವಳು.

ತಾರುಣ್ಯದ ತೊನೆಯುವ ತನುವಿಗೆ ಇವಳ ನಿಲುವಿನಭಂಗಿಯೇ  ಆಭೂಷಣದಂತಿದೆ.
ನೋಡುಗರ ಕಣ್ಣು ಮನಸುಗಳ ಲವಲವಿಕೆ ಹರ್ಷತರಂಗಗಳನ್ನು ಬಡಿದೆಬ್ಬಿಸುವ ಸುಮಕೋಮಲವಾದ ಅಂಗಾಂಗಗಳಿಂದ    ಕನಸಿನ ಕನ್ಯೆಯಂತೆ ಶೋಭಿಸುತ್ತಿದ್ದಾಳೆ.
        
ಸಹಜವಾದ ಸೌಂದರ್ಯವುಳ್ಳ ಕನ್ನೆಗೆ  ಕಟ್ಟಿಕೊಂಡ ಆಭರಣಗಳು ಬೇಡ.  ಈ ಕೃಷ್ಣವೇಣಿಯು  ಸೌಂದರ್ಯವರ್ಧಕಗಳಾಗಿ ಅಲಂಕರಣಗಳನ್ನು ಮೈಮೇಲೆ ಪೇರಿಸಿದವಳಲ್ಲ.  ಒಡವೆಗಳ ಮೆರುಗಿಗೆ ಮನಸೋತವಳಲ್ಲ. ಉಡುಗೆ ತೊಡುಗೆಗಳಲ್ಲಿ ಆಡಂಬರದ ಭೋಗವಿಲಾಸಗಳ ಪ್ರದರ್ಶನವಿಲ್ಲ‌. ನಿರಾಭರಣ ಸುಂದರಿ‌.

 ಮುಖದಲ್ಲಿ ತಾವರೆಯಂತಹ ಬೆಡಗಿನ ಕಾಂತಿಯಿದೆ.  ನಗುಮೊಗದ ಅರವಿಂದದಂತಹ ಶೋಭೆ. ಇಂತಹ ಸೌಂದರ್ಯದ ಖನಿಯಾಗಿರುವಲ್ಲಿ, ದೇಹದ ಬಣ್ಣ ಕರಿ ಮೋಡದಂತಿದ್ದರೇನು! ಬೆಳ್ಮುಗಿಲಂತಿದ್ದರೇನು! ಬಣ್ಣವು ಗಣನೆಗಿಲ್ಲ. ಗುಣವೇ ಬಣ್ಣ! 

    ಈ ಶ್ಯಾಮಲೆಯ  ಸೌಂದರ್ಯವನ್ನು ಕಂಡ ಕಣ್ಣುಗಳು, ಯಾರಿವಳು?   ಹೆಸರೇನೋ? ಯಾರ ಮನೆಯವಳೋ!  ತನ್ನ ಮನೆತುಂಬುವವಳಾಗ ಬಹುದೇ  ಎಂದು ಹತ್ತಾರು ಕನಸಿನ ಪ್ರಶ್ನೆಗಳಿಗೆ ಆಹಾರವಾಗುತ್ತಾಳೆ..
    
 ಸುಸಂಸ್ಕೃತವಾದ ಸ್ನಿಗ್ಧ ಸ್ವಭಾವವನ್ನು ಕಂಡಾಗ, ಒಳ್ಳೆಯ ಮನೆತನದಲ್ಲಿ ಹುಟ್ಟುದವಳೆಂದು ಅವಳ ನಯವಿನಯಗಳೇ  ಮಾತಾಡುತ್ತವೆ. ತೊನೆದಾಡುವ ತುಂಬುಯೌವನದ ಸ್ನಿಗ್ಧ ಸೌಂದರ್ಯಕ್ಕೆ ಆಹಾರವಾಗುವ ನೋಟಗಳು ಇವಳೆನ್ನ ಮನದನ್ನೆಯಾಗಲಾರಳೇ ಎಂದು ಹಗಲುಕನಸು ಕಾಣುತ್ತಾರೆ. ಇವಳೆನ್ನ ರಾಣಿಯಾದರೆ, ನಿಶ್ಚಿಂತೆಯ ಬದುಕು,  ಸಂಭ್ರಮದ ವಿಲಾಸದ ಅಲೆಗಳು!  ಸಂತಸದ ಕಡಲುಕ್ಕಿಸುವ ಭಾವೀ ವಿಶ್ವಾಸ! 

ಇಂತು ಕಂಡ  ಕೃಷ್ಣವೇಣಿಯಾದ ಸುಂದರಿಯ ಮಧುರ ನೆನಪುಗಳೇ  ನವಚೈತನ್ಯಲಹರಿಗೆ ಕಾರಣವು! ಮಧುರ ನೆನಪುಗಳೇ ವರವು!

ಶ್ಯಾಮಲವರ್ಣದ ಈ ಸುಂದರಿಯನ್ನು ವರಿಸುವವನೇ ಧೀರ ಭಾಗ್ಯವಂತ!  ಚಂಚಲವಾದ  ಮೀನಾಕ್ಷಿಯೇ ಮನಸಲ್ಲಿ ಚಾಂಚಲ್ಯವು ಇಲ್ಲವಷ್ಟೆ!  ನೋಟದಲ್ಲಿರುವ ಚಾಂಚಲ್ಯವು ಮನದೊಳಗೆ ಇಳಿಯದಿರಲಿ. ನೀನು ಎಚ್ಚರವಾಗಿರು ಎಂಬ ನಿಶಾನೆಯಾಗಿ ಪರಮಾತ್ಮನು  ನಿನ್ನನ್ನು ಶ್ಯಾಮಲೆಯಾಗಿ ಸೃಷ್ಟಿಸಿರಬೇಕು
ಭಾವಾನುವಾದ : ©✒ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment