Wednesday 6 December 2023

ಬಡವ - ಕೇತಕೀವನ - ಡಿವಿಜಿ

ಮೂಡುವಿಂದುವ ನೋಡಲೆವೆಯರಳದವ ಬಡವ 
ಹಾಡಿನಿಂಪಿಂದ ಕಿವಿಯಗಲದವ ಬಡವ 
ಆಡುವೆಳೆಯರ ಕೂಡಲಾಡದೆದೆಯವ ಬಡವ 
ಕಾಡ ಹಸಿರಿರೆ ತಣಿಯಲಾರದವ ಬಡವ 

ಆಗಸದ ಬೆರಗಿಂದೆ ಮೈ ಮರೆಯದವ ಬಡವ 
ಲೋಗರಾಯಸದಾಳವರಿಯದವ ಬಡವ 
ರಾಗರಸಗಳ ಹತಿಗೆ ಸೋಲದಾತನು ಬಡವ 
ರಾಗಿಯೊಳಗಮೃತವನು ಕಾಣದವ ಬಡವ 

ಧರೆಯ ಬದುಕಿನೊಳಿನಿತು ಪಾಲೊಲ್ಲದವ ಬಡವ 
ನರಗಣದ ಋಣದೆಳೆತವೆಣಿಸದವ ಬಡವ 
ಕರುಣವಾರ್ತೆಯ ಕೇಳಿ ಕರಗದಾತನೆ ಬಡವ 
ಕರಣಸಂಕೋಚಗಳನಾಂತವನೆ ಬಡವ 

ಕವಿಯ ಜಗದಲಿ ದಿಟವ ಕಾಣದಾತನೆ ಕುರುಡ 
ಸವಿಯನೀ ಬಾಳ್ಕೆಳೆಯೊಳರಸದನೆ ಹೆಳವ 
ಭವದ ಸಂತೆಯೊಳಾತ್ಮದುಲಿಯ ಮರೆವನೆ ಕಿವುಡ 
ವಿವಿಧದೀ ಕರಣಮಾಂದ್ಯಗಳಿಂದೆ ಬಡವ. 

ಅರುಮೆಯೆಳೆತವೆ ಸೃಪ್ಟಿಮರುಮವೆನದವ ಬಡವ 
ದುರಿತವಂತರಿಗಾಗಿ ಮರುಗದವ ಬಡವ 
ಸಿರಿಯ ಹೊರಗರಸಿ ತನ್ನೊಳು ಕಾಣದವ ಬಡವ 
ಸರಸತೆಯನುಳಿದು ಬಾಳ್ವವನೆ ಕಡು ಬಡವ

**********
ಬಡವನಾರ್? ಮಡದಿಯೊಲವಿನ ಸವಿಯನರಿಯದವನು |
ಹುಡುಗರಾಟದಿ ಬೆರೆತು ನಗಲರಿಯದವನು ||
ಉಡುರಾಗನೋಲಗದಿ ಕುಳಿತು ಮೈಮರೆಯದವನು |
ಬಡಮನಸೆ ಬಡತನವೊ - ಮರುಳ ಮುನಿಯ || (೫೫೪)

1 comment:

  1. ಲೌಕಿಕ ಜಂಜಡಗಳಲ್ಲಿ‌ ಮುಳುಗಿದ
    ಜನಸಾಮಾನ್ಯರಿಗೆ ತಮ್ಮ ನಿತ್ಯಜೀವನದ ಬಯಕೆ ಹಂಬಲಗಳನ್ನು ಪೂರೈಸಿಕೊಳ್ಳಲು‌ ಧನ - ಕನಕ, ಆಸ್ತಿ ಅಧಿಕಾರಾದಿಗಳು ಪೂರಕವಾಗುತ್ತವೆ. ಹಣವೇ ಜನರನ್ನು ಆಳುತ್ತಿದೆ ಎಂಬ ಭ್ರಮೆಯನ್ನುಂಟು ಮಾಡುತ್ತಿದೆ. ಈ ಕಾರಣದಿಂದ ಹಣವಿಲ್ಲದವನು ಹೆಣಕ್ಕಿಂತ ಕಡೆಯೋ ಎಂಬ ಗುಮಾನಿಗೆ ಕಾರಣವಾಗುತ್ತಿದೆ.
    ಲೋಕದ ಈ ವೈಪರೀತ್ಯವನ್ನು ಕಂಡು ಕವಿ ಡಿವಿಜಿಯವರ ಮನದಲ್ಲಿ ಮೂಡಿದ ಕವನ ಬಡವ ಯಾರು!
    ಪ್ರಕೃತಿಯ ಸೊಬಗನ್ನು ಸಹಜವಾಗಿ ಕಂಡು ಸಂತಸಪಡುತ ಅನುಭವಿಸುವವನು ಶ್ರೀಮಂತವಾದ ಮನಸ್ಸುಳ್ಳವನು. ಕತ್ತಲೆಯ ಸಮಯದಲ್ಲಿ ತುಂಬುತಿಂಗಳ‌ನ್ನು ಪಸರಿಸುತ್ತಾ ಮೂಡುತ್ತಿರುವ ಹುಣ್ಣಿಮೆಯ ಚಂದಿರನ ಕೌಮುದಿಯ ಸೊಬಗನ್ನು ಕಂಡು ಆಸ್ವಾದಿಸಲಾರದ ಮನುಷ್ಯನು ಬಡವ! ಅವನ ಕಣ್ಣು ಮನಸ್ಸು ಇಂದ್ರಿಯಗಳು ಸೌಭಾಗ್ಯವಂಚಿತವಾಗಿ ದುರ್ಬಲವಾಗಿವೆ.
    ಇಂಪಾದ ಸಂಗೀತದ ಪಲುಕುಗಳು ಕಿವಿಗೆ ಬಿದ್ದರೂ, ಅದರ ಸೊಗಸನ್ನು ಆಸ್ವಾದಿಸಲರಿಯದವನು ಬಡವನು‌. ಹಣವಿಲ್ಲದವನಾದರೂ ಸಂಗೀತವನ್ನು ಆಸ್ವಾದಿಸುವ ರಸಿಕನು ಬಡವನಲ್ಲ. ಬಂದುದನ್ನು ಬಂದಂತೆ ಒಪ್ಪಿಕೊಂಡು ಸ್ವೀಕರಿಸುವ ರಸಿಕನು ಸಿರಿವಂತನು‌.
    ಸರಿಸಮಾನರ ಜೊತೆಗೂಡಿ ಆಟವಾಡುವ ಎಳೆಯರನ್ನು ಪ್ರೋತ್ಸಾಹಿಸುತ್ತ, ಅವರ ಜೊತೆಗೂಡಿ ಸಂತೋಷಗೊಳಿಸುತ್ತಾ ಸಂತಸವನ್ನು ಆಸ್ವಾದಿಸಲಾರದವನು ಹಣವುಳ್ಳವನಾದರೂ, ಅವನು ಶ್ರೀ ಮಂತನಲ್ಲ, ಅವನು ಬಡವ! ಪ್ರಕೃತಿಯ ಜೀವಜೀವಾಳವಾದ ವನರಾಜಿಯ ಸೊಬಗನ್ನು ಕಂಡು ಮೆಚ್ಚಿ ಆಸ್ವಾದಿಸಲಾಗದವನು ಸಿರಿವಂತನಲ್ಲ. ಅಂತಹವನು ಜೀವನದಲ್ಲಿ ಸೃಷ್ಟಿಸೌಭಾಗ್ಯವನ್ನು ಆಸ್ವಾದಿಸುವುದರಲ್ಲಿ ಸೋತುಹೋದ ಬಡವನು.
    ಆಗಸವೆಂಬು ಹತ್ತುಹಲವು ವೈಚಿತ್ರ್ಯಗಳ ತವರು! ಆಕಾಶದ ನೀಲಿಮೆಯಲ್ಲಿ ಚಂದ್ರ ತಾರೆಯರ ಚೆಲುವು ಹಾಗೂ ಮೌನಸಂದೇಶಗಳನ್ನು ಕಾಣದವನು ದೃಷ್ಟಿವಂಚಿತನಾದ ಬಡವನು! ಚಂದಿರನ ಚಂದ್ರಿಕೆಯು ಮನದ ತಮಸ್ಸನ್ನೋಡಿಸಿ ಸಂತಸದ ಭೂಭಾಗ್ಯವನ್ನು ತೆರೆಯುವ ಸಂದೇಶದ ರಾಯಸವಾಗಿ ಲೋಕದೆಲ್ಲೆಡೆ ಪಸರಿಸುವುದು. ಈ ರಾಯಸವನ್ನು ಓದಲಾರದ, ಅರಿಯಲಾರದವನು ಬಡವನು‌. ಜೀವನವೇ ಸಂಗೀತ. ಜೀವನಸಂಗೀತದ ರಾಗರಸಗಳ ಏರುಪೇರಿನ ಹೊಡೆತಗಳಿಗೆ ಈಡಾಗದವರಿಲ್ಲ‌. ಜನರೊಡನೆ ಬೆರೆಯುವವರಿಗೆ ಇದು ಸಹಜ ಜೀವರಸ! ಜನಸ್ಪಂದನವಿಲ್ಲದೆ ದ್ವೀಪದಂತಿರುವವನು ಬಡವನು. ರಾಗಿ ಎಂದರೆ ಅನುರಕ್ತನು. ಜನರೊಡನೆ ಸಮರಸವಾಗಿ ಬಾಳುವವನು ಜನರ ಪ್ರೀತಿವಾತ್ಸಲ್ಯ ಮಮತೆ ಅಕ್ಕರೆಗಳ ಅಮೃತವನ್ನು ಸವಿಯುತ್ತಾನೆ. ಅಮೃತವನ್ನು ಹಂಚುತ್ತಾನೆ. ರಾಗಿಯು ಅನುರಾಗಿಯು. 'ರಾಗಿ' ಎಂಬ ಧಾನ್ಯವನ್ನೂ ಬಲ್ಲೆವು‌. ರಾಮಧಾನ್ಯ ಚರಿತೆಯಲ್ಲಿ ಕನಕದಾಸರು ರಾಗಿಯ ಮಹಿಮೆಯನ್ನು ವಿಷದೀಕರಿಸಿದರು. ರಾಗಿಯು ಬಡವರ ಆಹಾರಧಾನ್ಯವೆಂದು ಹೀಗಳೆಯುವವರು ಒಂದು ಕಾಲದಲ್ಲಿ ಕೆಲವರು, ಇದ್ದಿರಬಹುದು. ರಾಗಿಯು ಶ್ರೀ ರಾಮಚಂದ್ರನು ಆದರಿಸಿದ ಸಿರಿಧಾನ್ಯವೆಂದು ಕನಕದಾಸರು ರಾಗಿಯನ್ನು ವಂದಿಸಿದರು. ರಾಮನು ಮೆಚ್ಚಿದ ರಾಗಿಯೇ ಸಿರಿಧಾನ್ಯವೆಂದಮೇಲೆ ಬಡವನಾರು! ಸಿರಿವಂತನಾರು? ರಾಗಿಯನು ಉಂಬವನು ನೀರೋಗಿ! ಆರೋಗ್ಯದ ಮೂಲವಾದ ರಾಗಿಯನ್ನುಂಡವನು ಬಡವನಲ್ಲ. ರಾಗಿಯಲ್ಲಿ ಅಮೃತವನ್ನು ಕಾಣದವನೇ ಬಡವ!
    ಸಮಾಜಜೀವಿಯಾದ ಮನುಷ್ಯನು ಬದುಕಿನಲ್ಲಿ ಯಾರಿಗೂ ಏನನ್ನೂ ಒಳಿತನ್ನು ಉಂಟುಮಾಡದ ಮನುಷ್ಯನು ಅದೆಷ್ಟು ಕೋಟಿಯ ಒಡೆಯನಾಗಿದ್ದರೂ ಅವನು ಸಿರಿವಂತನಲ್ಲ. ಅಂತಹವನು ಬಡವನೇ! ಜನರ ಕಷ್ಟಸುಖಗಳಲ್ಲಿ ಪಾಲನ್ನು ಒಲ್ಲದವನು ಬಡವನು. ಮರ್ತ್ಯ ಲೋಕದಲ್ಲಿ ಮನುಷ್ಯನಾಗಿ ಬರುವಾಗ ಪಂಚ ಋಣಗಳ ಹೊರೆಯನ್ನು ಹೊತ್ತುಕೊಂಡು ಬರುತ್ತಾನೆ. ದೇವ ಋಣ, ಮಾತೃ ಋಣ, ಪಿತೃಋಣ, ಗುರು ಋಣ, ಸಮಾಜ ಋಣಗಳೆಂಬ ಈ ಋಣಗಳ ಸೆಳೆತವನ್ನು ಗಣಿಸದೆ ನಿರ್ಲಕ್ಷಿಸುವವನು ಬಡವನು. ಇಂತಹ ಬಡವನು ಹೊರೆಯ ಭಾರವನ್ನು ಹೆಚ್ಚಿಸಿಕೊಂಡು ಇನ್ನಷ್ಟು ಬನ್ನವನು ಪಡುವ ಬಡವನಾಗುತ್ತಲೇ ಮುನ್ನಡೆಯಬೇಕಾಗುವುದೆಂಬುದನ್ನು ಅರ್ಥಮಾಡಿಕೊಳ್ಳಲಾರದ ಬಡವನಾಗುತ್ತಾನೆ.
    ಸುತ್ತ ಮುತ್ತಲಿನವರ ಕಷ್ಟಕಾರ್ಪಣ್ಯಗಳ ನೋವು ನರಳುವಿಕೆಗಳಿಗೆ ಮನಕರಗದವನು ಬಡವ! ಅಂತಃಕರಣವೆನ್ನುವ ಮನಸ್ಸು, ಬುದ್ಧಿ, ವಿವೇಕಗಳು ಸಂಕುಚಿತವಾದ ಮನುಷ್ಯರು ಬಡವರು.
    ಕವಿಯಾದವನು ಕೇವಲ ಕಲ್ಪನೆಯ ಲೋಕದಲ್ಲಿ ವಿಹರಿಸುತ್ತಾ ಲೋಕದ ಸುಖದುಃಖಗಳ ವಾಸ್ತವವನ್ನು ಮರೆತರೆ ಅಂತಹವರು ಬಡವರು. ವಾಸ್ತವವನ್ನು ಅರಿಯುವ ಮನಸ್ಸಿಲ್ಲದವನು ಕುರುಡನೇ ಸರಿ. ಕವಿಯು ಲೋಕದ ವಾಸ್ತವದೆಡೆಗೆ ಸ್ಪಂದಿಸಿದರೆ, ಆಗ ಅಂತಹ ಕವಿಯು ಉಳಿಯುವ ಸಿರಿವಂತ ಕವಿಯಾಗುತ್ತಾನೆ. ಲೋಕದ ಜನತೆಯ ಬಾಳ್ಕೆಯ ಸವಿಯನ್ನು ಸವಿದವನು ಸಿರಿವಂತನು. ಬದುಕಿನ ಸಂತೆಯಲ್ಲಿ ತನ್ನ ಆತ್ಮದ ಪಿಸುದನಿಯ ಕರೆಯನ್ನು ಕಡೆಗಣಿಸುವವನು ಕಿವಿಯಿದ್ದವನಾಗಿದ್ದರೂ ಕಿವುಡನು. ಬುದ್ಧಿ ಇದ್ದರೂ ಬರಡನು, ಕಣ್ಣಿದ್ದೂ ಕುರುಡನು, ಸಿರಿಯಿದ್ದೂ ಬಡವನು.
    ಜ್ಞಾನೇಂದ್ರಿಯ, ಕರ್ಮೇಂದ್ರಿಯ , ಕರಣೇಂದ್ರಿಯಗಳು ಸಮರ್ಥವಾಗಿದ್ದರೂ ಅವುಗಳನ್ನು ಸದುಪಯೋಗಿಸಲಾರದವನು ಬಡವನಾಗುತ್ತಾನೆ‌.
    'ಪ್ರೀತಿ ವಾತ್ಸಲ್ಯ ಮಮತೆಗಳ ಸೆಳೆತವೇ ಸೃಷ್ಟಿಯ ಮರ್ಮ' ಎಂಬುದನ್ನು ಅರಿಯದವನು ಬಡವನು. ಕಷ್ಟಕಾರ್ಪಣ್ಯಗಳ ವೇದನೆಯಿಂದ ನರಳುತ್ತಿರುವವರ ನೋವಿಗೆ ಸ್ಪಂದಿಸದ ಪಾಷಾಣಹೃದಯದ ನಿಷ್ಕರುಣಿಯು ಬಡವನು. ಭೌತಿಕವಾದ ಸುಖಭೋಗಭಾಗ್ಯಗಳನ್ನು ಖರೀದಿಸಲು ಮಾನದಂಡವಾದ ಧನಕನಕಗಳನ್ನು ಮಾತ್ರ ಕಾಣುವ ಕಣ್ಣು ಮಂದಗಣ್ಣು! ಅಂತಹವನು ಸಿರಿವಂತನಲ್ಲ. ಅಂತಹವರು ಇದ್ದೂ ಇಲ್ಲದ ಬಡವರು. 'ಸಿರಿಯು ತನ್ನೊಳಗಿದೆ ಹೊರಗಲ್ಲ' ಎಂಬುದನ್ನು ಕಂಡುಕೊಂಡು ಲೋಕದ ಆಗುಹೋಗುಗಳಿಗೆ ಸ್ಪಂದಿಸುವ ಕರುಣಾಳುವು ಸಿರಿವಂತನು!
    ಸರಸ ಜೀವಿಯಾಗದೆ ಸ್ವಾರ್ಥದಿಂದ ಸವೆಯುವವನು ಬಡವನು!
    ಭಾವಾನುವಾದ:
    ©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

    ReplyDelete