Sunday 3 December 2023

ನಳಿನಿಗೆ - ಕೇತಕೀವನ - ಡಿವಿಜಿ

ನವನೀತ ನಾನಲ್ಲ 
ಧವಳಾಂಗವೆನಗಿಲ್ಲ 
ಎನ್ನ ನೀಂ ಮೆಚ್ಚುವೆಯ?
-ಎನ್ನದಿರು, ನಳಿನಿ. 

ರವಿಯ ತಾಪದಿ ಜೀವ 
ತವಿಸುತಿರೆ ಬೇಕಿಹುದು 
ಕಣ್ಣಿರಿವ ಝಳವಲ್ಲ, 
ತಣ್ಣನೆಯ ನೆರಳು. 

ದಿನಮಧ್ಯದುಮ್ಮಳದಿ 
ವನದ ಛಾಯೆಯ ತೆರದಿ 
ಕೋಮಲದ ನಿನ್ನೊಡಲ 
ಶಾಮಲತೆಯೆನಗೆ 

ನೀಲನಭದವೊಲು ಮುಖ 
ಲೋಲನಯನವೆ ತಾರೆ 
ತಿಳಿನಗುವೆ ಚಂದ್ರಕಳೆ 
ಚೆಲುವುಂಟೆ ಬೇರೆ? 

ತಿಳಿಗೊಳದಿ ಸುಳಿಸುಳಿದು 
ಹೊಳೆಹೊಳೆವ ಮೀನವೊಲು 
ಸುಳಿವ ನಿನ್ನಾ ಕಣ್ಣು 
ಬೆಳಕೆನ್ನ ಬಾಳ್ಗೆ. 

ಬಿಳಿದೊವಲು ಹೆಚ್ಚೇನು 
ಜಳದ ಚವಿ ಕುಂದೇನು 
ಚೊಕ್ಕಟವೆ ಮೆಯ್ಸೊಬಗು 
ಅಕ್ಕರೆಯೆ ಬೆಡಗು. 

ಮನಸಿನಿನಿರಸವೆಲ್ಲ 
ತನುವೊಳುಕ್ಕುತ ಪರಿಯೆ 
ಕಾದ ಹೊನ್ನಿನ ಮೆರುಗು 
ಮೈದೊವಲ ಬೆರಗು. 

ತುಂಬುಕೆನ್ನೆಯ ನುಣ್ಬು 
ಇಂಬಾದ ನಗುಬೆಳ್ಬು 
ಕಣ್ಣಾಲಿ ಕರಿತಳ್ಪು 
ನಿನ್ನ ಮೆಯ್ಯೊಳ್ಪು. 

ನಿಲದಲೆವ ಮುಂಗುರುಳು 
ವಲಯಿತದ ಕರಿಹೆರಳು 
ಇಂದುಫಲಕದ ನೊಸಲು 
ಸುಂದರದ ಹೊನಲು. 

ಕರಿಣಿ ಪೀವರಗಾತ್ರ ತರಳ 
ವಿದ್ಯುನ್ನೇತ್ರ ನಗುವು 
ತುಂಬಿದ ವದನ 
ಸೊಗಕದುವೆ ಸದನ.

*****************

ಮನಮೆಚ್ಚಿದೆಡೆ ತನ್ನ ಕಣ್ಣಿಗೆ ಪ್ರೇಯಸಿಯು ಪ್ರೇಮಿಗೆ ಸುಂದರವಾಗಿಯೇ ಕಾಣುತ್ತಾಳೆ. ಶರೀರವು ಕರಿಣಿಯಂತಿದ್ದರೂ ಅದರಲ್ಲೂ ಸೊಗಸನ್ನೇ ಅರಸುತ್ತಾನೆ.  ಪ್ರೀತಿ ಪ್ರೇಮಕ್ಕೆ ನೀಳಕಾಯದ ತನ್ವಂಗಿಯಾಗ ಬೇಕೆಂಬುದಿಲ್ಲ. ನೀಳವೇಣಿಯ ಶ್ಯಾಮಲತನುವಿನ ಕರಿಣಿಯೂ ಪ್ರೇಮಿಗೆ ಚೆಲುವೆಯಾಗಿಯೇ ಕಾಣುತ್ತಾಳೆ ಎಂಬುದನ್ನು  ಡಿವಿಜಿಯವರು ನಳಿನಿ ಕವನದಲ್ಲಿ ಸೊಗಸಾಗಿ ನಿರೂಪಿಸುತ್ತಾರೆ.

ತಾನು ಮೆಚ್ಚಿದ  ಕೃಷ್ಣವರ್ಣದ ಪ್ರೇಯಸಿಯು ತನ್ನ ಪ್ರೇಮನಿವೇದನೆಯನ್ನು ಎಲ್ಲಿ ನಿರಾಕರಿಸುವಳೋ ಎಂಬ ಸಂಶಯದ ಹುಳು ಮನಸನ್ನು ಹೊಕ್ಕು ಕೊರೆಯುತ್ತಿದೆ.  ಮನದಲ್ಲೇ ಪ್ರೇಯಸಿಗೆ ಓಲೆಬರೆದಂತೆ ನಿವೇದಿಸಿಕೊಳ್ಳುತ್ತಾನೆ.

" ನಳಿನಾಂಗಿ, ಕೆನೆಬೆಣ್ಣೆಯಂತಹ ಸೊಗಸಾದ ದೇಹಕಾಂತಿಯ ಬಿಳಿಬಣ್ಣದವಳಲ್ಲ, ಮಸಿಬಣ್ಣದ ನನ್ನನ್ನು  ಮೆಚ್ಚುವೆಯಾ!?" ಎಂದು ಸಂಶಯದಿಂದ ಪ್ರಶ್ನಿಸದಿರು.
ಸೂರ್ಯನ ಬೆಂಕಿಬಿಸಿಲಿನ‌ ಕಾವಿನಿಂದ ನೊಂದು ಬೆಂದವನಿಗೆ, ಕಣ್ಣುಕೋರೈಸುವ ಬೆಳಕಿನಝಳವು ಬೇಡ, ತಣ್ಣನೆಯ ನೆರಳಿನಾಸರೆಯಷ್ಟೇ ಸಾಕು. ಸುಡುಬಿಸಿಲ ನಡುಹಗಲಿನಲ್ಲಿ ಬಸವಳಿದಿದ್ದೇನೆ.
ವನರಾಜಿಯ ನೆರಳಲ್ಲಿ ಮರವನ್ನು ಬಳಸಿದ ಕೋಮಲವಾದ ಲತೆಯಂತಿರುವೆ ನೀನು. ನಿನ್ನೊಡಲ ಪ್ರೀತಿಯೇ ಎನಗೆ ತಣ್ಣೆಳಲ ಆಸರೆ.

ನಿನ್ನ  ಈ ವದನಾರವಿಂದವು ಇರುಳಿನ‌ ನೀಲಿಮೆಯ ಆಕಾಶದಂತೆ ಶಾಂತವಾದುದು. ನೀಲಾಕಾಶದಂತಹ ನಿನ್ನ ಮುದ್ದುಮೊಗದಲ್ಲಿ ನಯನಗಳೇ ಮಿಂಚುತ್ತಿರುವ ತಾರೆಗಳು.  ನಿನ್ನ ಚೆಲುನಗೆಯೇ  ಚಂದಿರನ ಕಳೆ! ಇದಕ್ಕಿಂತ ಚೆಲುವೆಲ್ಲಿದೆ!?

ತಿಳಿಯಾದ ಕೊಳದಲ್ಲಿ  ಸುಳಿಸುಳಿಯುತ್ತಾ ಓಡಾಡುವ ಮೀನುಗಳಂತೆ ಈ ನಿನ್ನ ಚಂಚಲ ನೋಟದ ಕಂಗಳು ಸೌಂದರ್ಯದ ಜೀವಾಳ. ಈ ನಿನ್ನ ಕಣ್ಣ ಬೆಳಕಿನದೂಲವೇ  ನನ್ನ ಬಾಳ ಬೆಳಕಾಗಿ ಬೆಳಗುವುದು.

ಕೆಲವರು ಬಿಳಿದೊಗಲಿನಲ್ಲೇ ಸೌಂದರ್ಯವನ್ನು ಅರಸುವರು. ಬಿಳಿಯ ಬಣ್ಣವದರಿಂದಲೇ ಮೈಸೊಗಸೆನ್ನುವುದು  ಭ್ರಮೆ.  ಶ್ಯಾಮಲ ವರ್ಣದ ಮುಗಿಲ ಬಣ್ಣದ ಕುಂದೇನು? 
ನಿರ್ಮಲವಾದ ಮೈಸೊಬಗೇ ಬೆಡಗಿನಖನಿಯು.
ಮನಸಿನ ಪ್ರೇಮರಸವು   ಶರೀರವನ್ನು ಆವರಿಸಿದಾಗ ಪುಟವಿಟ್ಟ ಬಂಗಾರದಂತೆ  ಬೆರಗಾಗುವಂತಹ ಚೆಲುವು ತುಂಬಿತುಳುಕುತ್ತದೆ.

ತುಂಬುಕೆನ್ನೆಯ ಬೊಗಸೆ ಕಂಗಳ ನಿನ್ನ ನುಣುಪಾದ ಮುಖದಲ್ಲಿ  ಚೆಲುನಗೆಯ ತಣಿವು ಹಾಗೂ ಕಣ್ಣಾಲಿಗಳ ಕಪ್ಪು  ಇವು ನಿನ್ನ ಮೈಯ ಚೆಲುವಿಗೆ ಸರಿಸಾಟಿಯಾಗಿ ಸುಂದರವಾಗಿ ಮಿನುಗುತ್ತಿರುವೆ.
ನಿನ್ನ ಹಣೆಯ ಪಾರ್ಶ್ವಗಳಲ್ಲಿ ಮುಂಗುರುಳುಗಳು  ತರಂಗಿಣಿಯ ಅಲೆಗಳಂತೆ ಮಂದವಾಗಿ ಹಾರಾಡುತ್ತಿವೆ. ಕೃಷ್ಣವರ್ಣದ ನೀಳವಾದ ಹೆರಳು ನಿನ್ನನ್ನು ಸುತ್ತುಬಳಸಿ ನಿನ್ನ ಚೆಲುವನ್ನು ಹೆಚ್ಚಿಸುತ್ತಿದೆ. ಚಂದಿರನಂತಹ ಹಣೆ ನಿನ್ನನ್ನು ಸೌಂದರ್ಯದ ಹೊನಲನ್ನಾಗಿಸಿದೆ.
ಮಂದಗಮನೆಯಾದ ಕರಿಣಿಯಂತೆ ತುಂಬಿತೊನೆಯುವ ದೇಹಸೌಂದರ್ಯವು ನಿನ್ನ ವಿದ್ಯುಲ್ಲತೆಯಂತಹ ಚಂಚಲ ನೋಟದಿಂದ  ಎನಗೆ ಕಣ್ಣು ಮನಸ್ಸುಗಳಿಗೆ ಹಬ್ಬ!  ತುಂಬುಮೊಗದಾವರೆಯಲ್ಲಿ ಮಿನುಗುವ ಚೆಲುನಗುವು, ಸುಖಸಗ್ಗವನ್ನು ಧರೆಗಿಳಿಸಿದೆ.
ಭಾವಾನುವಾದ: 
©ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
ದನಿ ನೀಡಿದವರು,: ಶ್ರೀಮತಿ ಮಂಗಳಾ ನಾಡಿಗ್

No comments:

Post a Comment