Monday 5 February 2024

ಜೋಗದ ಜಲಪಾತ - ನಿವೇದನ - ಡಿವಿಜಿ

ಗಿರಿ ಕಾನನಂಗಳೊಳ್‍ ಮುನಿ
ವರರಂ ಪರವಶರ ಗೈದ ಬೆಡಗೆಂತಹುದೆಂ ॥
ದರಿವೊಡೆ ತೆರಳ್ದು ಜೋಗಕೆ ।
ನಿರುಕಿಪುದಾ ನಿರ್ಝರ ಪ್ರಪಾತಾದ್ಭುತಮಂ ॥ ೧ ॥

ಪರದೈವಕ್ಕರ್ಘ್ಯಮನಾ ।
ದರದಿಂದಂ ಪ್ರಕೃತಿಯೀವ ತೆರನಿದೊ ಮೇಣೀ ॥
ಧರಣಿಯ ಸಂತಾಪವ ಪರಿ ।
ಹರಿಸಲ್‍ ವನದೇವಿ ಗೈವ ಸೇಕಮೊ ತಿಳಿಯೆಂ ॥ ೨ ॥

ಧೂರ್ಜಟಿ ಕಿರೀಟದಿಂದಾ ।
ಸ್ಫೂರ್ಜದ್ಗಂಗಾವರೋಹಮಾದ ಕ್ರಮಮಂ ॥
ಗರ್ಜಿತದಿಂ ಗಹನತೆಯಿಂ ।
ದೂರ್ಜಸ್ವತಿ ತೋರುತೀ ಶರಾವತಿಯಿಳಿವಳ್‍ ॥ ೩ ॥

ಒಂದೆಡೆ ವಕ್ರ ಶಿಲೋಚ್ಚಯ ।
ಮೊಂದೆಡೆ ವಿಸ್ತೃತ ಗಂಭೀರ ಭೀಕರ ಗರ್ತಂ ॥
ಸಂದಿರೆ ವಿಪಿನಾಂತರದೊಳ ।
ಮಂದ ಪ್ರಗತಿಯಿನುರುಳ್ವ ನದಿಯೇಂ ಸ್ಮಯಮೋ ॥ ೪ ॥

ಕ್ಷೀರಾಸೇಚನ ಧಾರೆಯಂತೆ ಸುರಿವಾ ನೀರ ಪ್ರವಾಹಂಗಳುಂ ।
ಸ್ಫಾರನ್ಮೌಕ್ತಿಕ ವೃಷ್ಟಿಯಂತೆ ಪೊಳೆವಾ ಬಿಂದು ಪ್ರವರ್ಷಂಗಳುಂ ॥
ಧಾರಾಭೃನ್ನಿ ಕರಂಬೊಲಾಡಿ ಸುಳಿವಾ ಫೇನ ಪ್ರತಾನಂಗಳುಂ ।
ತೋರುತ್ತಿರ್ಪುವದೊಂದು ಚಿತ್ರವ ಜನಕ್ಕಾ ಚೆಲ್ವನಾರ್‍ ಬಣ್ಣಿಪರ್‍ ॥ ೫ ॥

ಅತಿ ಗಾಂಭೀರ್ಯದಿ ಸಾರ್ವುದೇಂ ಮಗುಳೆ ನೀನೌದ್ಧತ್ಯದಿಂ ಪಾರ್ವುದೇಂ ।
ಲತೆಯಂತಾಡಿ ವಿಲಾಸದಿಂ ಸರಿವುದೇಂ ಶೈಲಾಗ್ರದಿಂ ಬೀಳ್ವುದೇಂ ॥
ಕ್ಷಿತಿಯೆಂದೇಳುತೆ ನಾಟ್ಯದಿಂ ನಲಿವುದೇಂ ಪಾತಾಳಮಂ ಸೇರ್ವವೋಲ್‍ ।
ಖತಿಗೊಂಡೋಡುವುದೇಂ ಶರಾವತಿಯಿದೇಂ ನಿನ್ನಾಯಮಂ ಬಲ್ಲರಾರ್‍ ॥ ೬ ॥

ಶಮಮಂ ಸೂಸುವೆ ಮತ್ತಂ ।
ರಮಣೀಯಾಕೃತಿಯನಾಂತು ಬಳುಕುವೆ ಮೇಣ್‍ ಸಂ ॥
ಭ್ರಮಿಸುತೆ ಘೋರಾವಟದೊಳ್‍ ।
ಗಮಿಸುವೆ ನಿನ್ನಯ ವಿಲೋಲ ಭಾವಮಿದೇನೌ ॥ ೭ ॥

ದಿವಸೇಶ್ವರಂಗೆ ನಲವಿಂ ।
ನವರತ್ನಚ್ಛವಿಯ ತೋರಿ ದರ್ಶದ 1 ನಿಶೆಯೊಳ್‍ ॥
ಧವಳಾಂಶುವಾಗಿ ತಾರಾ ।
ಧವನಂ ನೀನರಸಿ ಮೊರೆವುದೇಂ ಚಪಲತೆಯೋ ॥ ೮ ॥

ಇದು ಸೃಷ್ಟಿಯ ಹಾಸಮೊ ಮೇ ।
ಣಿದು ಧಾತ್ರಿಯ ಭಾಷ್ಪ ಸಲಿಲ ಧಾರೆಯೋ ನೋಳ್ಪ ॥
ರ್ಗಿದು ನವನವಮೆನಿಸುತೆ ತೋ ।
ರ್ಪುದದೊಂದಗ್ಗದ ಸರೌದ್ರ ಸಂಮೋಹನಮಂ ॥ ೯ ॥

ಮೈಸೂರು ಬಂಗಲೆ, ಜೋಗ
ಅಮಾವಾಸ್ಯೆ, ಕಾರ್ತಿಕ
೭ ನೆಯ ಡಿಸೆಂಬರ್‍ ೧೯೨೩.

No comments:

Post a Comment