Tuesday 12 March 2024

ಶೃಂಗಾರ ಮಂಗಳಂ - ಅರಿಕೆ - ಡಾ. ಡಿ.ವಿ. ಗುಂಡಪ್ಪ

ಶೃಂಗಾರ ಮಂಗಳಂ - ಅರಿಕೆ - ಡಾ. ಡಿ.ವಿ. ಗುಂಡಪ್ಪ

ಬಹುಕಾಲದಿಂದ ನನ್ನ ಮನಸ್ಸಿನಲ್ಲಿ ಮಿಡಿಯುತ್ತ ಉಳಿದುಕೊಂಡಿದ್ದ ಒಂದು ಪ್ರಶ್ನೆಗೆ ಸಮಾಧಾನವೆಂದು ನನ್ನ ಬುದ್ಧಿಗೆ ಈಚೀಚೆಗೆ ತೋರಿದ ಉತ್ತರವನ್ನು ಈ ಗ್ರಂಥದಲ್ಲಿ ರೂಪಗೊಳಿಸಿದ್ದಾಗಿದೆ. ಸಹೃದಯರು ಒಪ್ಪಿಸಿಕೊಳ್ಳಬೇಕೆಂದು ಬೇಡುತ್ತೇನೆ.

ಕೆಲವು ವರ್ಷಗಳಿಂದ ನಾನು ಅರೆಕುರುಡ; ಅರೆಯುಸಿರಿನವನು. ಈ ಅವಸ್ಥೆಯಲ್ಲಿ ನಿದ್ದೆಬಾರದಾಗ, ಆಯಾಸವಾದಾಗ, ತೋರಿಬಂದ ಭಾವನೆಗಳನ್ನು ಆಗ್ಗೆ ಒದಗಿಬಂದ ಮಾತಿನಲ್ಲಿ, ಆ ಸಮಯಕ್ಕೆ ಸಿಕ್ಕಿದ ಕಾಗದದ ಚೂರಿನಲ್ಲಿ, ಆಗ ಕೈಗೆ ದೊರೆತ ಲೇಖನಿಯಿಂದ ಗುರುತು ಮಾಡಿದ್ದಾಯಿತು. ಆದರೆ ಅವುಗಳನ್ನು ಒಂದು ಕ್ರಮದಲ್ಲಿ ಜೋಡಿಸಬೇಕೆಂದು ನೋಡಿದಾಗ ನಾನು ಗೀಚಿದ್ದ ಗೀಟುಗಳು ನನಗೆ ಅರ್ಥವಾಗದೆಹೋಯಿತು. ಈ ಕಷ್ಟಸ್ಥಿತಿಯಲ್ಲಿ ನನ್ನ ಗುರುತುಚೀಟಿಗಳ ಸಿಕ್ಕು ಬಿಡಿಸಿ ಓದಲಾಗುವಂತೆ ಮಾಡಿದವರು ನಾಲ್ವರೈವರು ಸ್ನೇಹಿತರು. ಅವರಲ್ಲಿ ನಾನು ಹೇಳಲೇಬೇಕೆಂದು ಗೊತ್ತುಮಾಡಿಕೊಂಡಿರುವ ಹೆಸರುಗಳು ಎರಡು : ಚಿ ॥ ಬಿ.ಎಸ್‍. ಸುಬ್ಬರಾಯರು. ಚಿ ॥ ಡಿ.ಆರ್‍. ವೆಂಕಟರಮಣನ್‍. ಈ ಸ್ನೇಹಿತರು ನನ್ನ ಕರಡುಗಳನ್ನು ಕೊಂಚಮಟ್ಟಿಗೆ ಅಳವಡಿಸಿಕೊಟ್ಟಮೇಲೆ ಬರವಣಿಗೆಯನ್ನೆಲ್ಲ ಆಮೂಲಾಗ್ರವಾಗಿ ಓದಿ ವಿರಳ ವಿರಳವಾಗಿ ನಕಲು ಬರೆದುಕೊಟ್ಟವರು ಚಿ ॥ ಎಸ್‍.ಆರ್‍. ರಾಮಸ್ವಾಮಿ. ಈತ ಅಂದವಾದ ನಕಲನ್ನು ತಯಾರುಮಾಡಿದ್ದಷ್ಟೇ ಅಲ್ಲ; ಬಿಡಿಬಿಡಿಯಾಗಿ ಬಿದ್ದಿದ್ದ ಪದ್ಯಗಳನ್ನು ಒಂದು ಸಮಂಜಸವಾದ ಕ್ರಮದಲ್ಲಿ ಜೋಡಿಸಿ, ಅರ್ಥ ಸುಲಭವಾಗುವಂತೆ ಅಣಿಮಾಡಿಕೊಟ್ಟಿದ್ದಾರೆ, ಮತ್ತು ಪ್ರಕರಣ ವಿಭಾಗಮಾಡಿ ಶೀರ್ಷಿಕೆಗಳನ್ನು ಬರೆದು ಸಾಂಗೋಪಾಂಗವಾಗಿ ಮುದ್ರಣಕ್ಕೆ ಸಿದ್ಧಪಡಿಸಿದ್ದಾರೆ. ಅಲ್ಲದೆ ಅರ್ಥಕೋಶವನ್ನೂ ಕರಂಡಗಳನ್ನು ಕುರಿತ ಅನುಬಂಧವನ್ನೂ ರಚಿಸಿಕೊಟ್ಟಿದ್ದಾರೆ. ಈ ಚಿರಂಜೀವಿಯ ಕೆಲಸವನ್ನು ಪೂರ್ತಿಯಾಗಿ ವಿವರಿಸುವುದು ಸಾಧ್ಯವಲ್ಲದ ಕೆಲಸ.

ಶ್ರೀ ಚಿದಂಬರಂ ಅವರ ಶ್ರದ್ಧೆ ಉತ್ಸಾಹ ಕಾರ್ಯಪಟುತ್ವಗಳನ್ನು ಈಗ ಕನ್ನಡ ದೇಶವೆಲ್ಲ ಬಲ್ಲದು.

ಈ ಗ್ರಂಥಕ್ಕೆ ಕೆಲವು ಚಿತ್ರಗಳನ್ನು ಬರೆದುಕೊಟ್ಟ ಕಲಾನಿಪುಣರು ಶ್ರೀ ಟಿ.ಕೆ. ರಾವ್‍ ಅವರನ್ನು ಮನಸಾರ ವಂದಿಸುತ್ತೇನೆ. ಇತರ ಚಿತ್ರಗಳನ್ನು ಒದಗಿಸಿಕೊಟ್ಟ ಸ್ನೇಹಿತರಿಗೂ ನನ್ನ ವಂದನೆ.

ಭಸ್ಮಕರಂಡದ ಚಿತ್ರಗಳಿಗಾಗಿ ಈ ಕೆಳಗಿನ ಮಹಾಶಯರಿಗೆ ನಾನು ಋಣಿಯಾಗಿದ್ದೇನೆ:

(1) Keats-Shelley Memorial Association, London, —ಈ ಸಂಸ್ಥೆಯ ಅಧಿಕಾರಿಗಳು;

(2) Keats-Shelley Memorial House, Rome —ಈ ಸಂಸ್ಥೆಯ ಅಧಿಕಾರಿಗಳು;

(3) ಲಂಡನ್ನಿನ Observer ವಾರಪತ್ರಿಕೆಯ ಸಂಪಾದಕರು, ಈ ಪತ್ರಿಕೆಯ ಫೆಬ್ರುವರಿ ೨೮, ೧೯೬೫ರ ಸಂಚಿಕೆಯಲ್ಲಿ Keats ಭಸ್ಮಕರಂಡವನ್ನು ಕುರಿತು Noel Machin ಅವರು ಸಚಿತ್ರ ಲೇಖನ ಬರೆದಿದ್ದಾರೆ.

ಈ ಸಂಸ್ಥೆಗಳ ಆದರಣೆ ಔದಾರ್ಯಗಳು ಸ್ಮರಣೀಯವಾಗಿವೆ. ಜಗದೀಶ್ವರನ ಕೃಪೆ ಈ ಎಲ್ಲ ಉಪಕಾರಿಗಳಿಗೂ ನಿರಂತರವಾಗಿ ಲಭಿಸಲಿ.

ಸರ್ವಂ ಶಿವಂ
ಬೆಂಗಳೂರು, ಅಕ್ಟೋಬರ್‍ ೧೯೭೦
ಡಿ.ವಿ.ಜಿ.

No comments:

Post a Comment