ಬಾಡಿ ಬೀಳಲಿ,
ಎನ್ನ ಕಣ್ಣ ತಣಿಸದಿನನು
ಎನ್ನ ನುಡಿಗೆ ಮಿಡಿಯದೆದೆಯು
Devanahalli Venkataramanaiah Gundappa, popularly known as DVG, was a Kannada writer and philosopher. He is best known for Manku Thimmana Kagga
ಬಾ, ತುಂಬು ಬಟ್ಟಲನು ; ಮಧು ಮಾಸದಗ್ನಿಯಲಿ
ಚಿಂತೆ ಬೆಸನೆಂಬ ಚಳಿಬೊಂತೆಯನು ಬಿಸುಡು ;
ನಮ್ಮಾಯುಸಿನ ಪಕ್ಕಿ ಪಾರುವ ದೂರವೇ ಕಿರಿದು;
ಅದು ರೆಕ್ಕೆಯೆತ್ತಿಹುದು ನೋಡು, ಮನ ಮಾಡು.
ಮಧು ಮಾಸದಗ್ನಿ = ಚಳಿಗಾಲದ ಥಂಡಿಯನ್ನು ದೂರ ಮಾಡುವ ವಸಂತ ಮಾಸದ ಬಿಸಿ.
ಬೆಸನ = ವ್ಯಸನ,
ಬೊಂತೆ = ಚಿಂದಿ ಬಟ್ಟೆಗಳಿಂದ ಹೊಲಿದ ಹಚ್ಚಡ.
ಪಾರುವ = ಹಾರುವ,
"ಬಾ, ಬಟ್ಟಲನ್ನು ತುಂಬು" - "ಕುಡಿ-ತಿನ್ನು-ಖುಷಿಯಾಗಿರು" ವಿಚಾರದ ಮತ್ತೊಂದು ಪದ್ಯ.
ಕಳೆದು ಹೋದುದಕ್ಕೆ ಚಿಂತಿಸ ಬೇಡ, ವ್ಯಸನ ಪಡಬೇಡ. ಇಂದಿನ ದಿನಕ್ಕಾಗಿ ಬದುಕು.
ಈಗ ಮಧು ಮಾಸ. ಈ ಮಾಸದಲ್ಲಿ ಇಡೀ ಪ್ರಕೃತಿಯೇ ಹಳೆಯದನ್ನು ಕಳಚಿ ನವ ನಾವೀನ್ಯತೆಯಿಂದ ಉಲ್ಲಾಸಗೊಳ್ಳುತ್ತದೆ.
ಹಳೆಯ ದಿನಗಳ ನೆನಪಾದ ಚಿಂತೆ, ವ್ಯಸನಗಳಿಂದ ಮಾಡಿದ ಹಚ್ಚಡವನ್ನು ಹೊದೆಯ ಬೇಡ.
ವಸಂತ ಮಾಸದ ಹಿತಕರವಾದ ಬಿಸಿಯಲ್ಲಿ ಆ ಹಚ್ಚಡವನ್ನು ಬಿಸುಟು ಬಿಡು.
ನಮ್ಮ ಬದುಕು ಬಹಳ ಚಿಕ್ಕದು.
ಆಯುಷ್ಯದ ಹಕ್ಕಿಯ ಕಲ್ಪನೆ ಸುಂದರ ಮತ್ತು ಅಮೋಘ.
ನಮ್ಮ ಆಯುಷ್ಯದ ಹಕ್ಕಿಯು ಹೆಚ್ಚು ಹಾರಲು ಸಮರ್ಥವಲ್ಲ.
ಅದು ಹಾರುವ ದೂರ ಬಹಳ ಚಿಕ್ಕದೇ.
ಅದು ಹಾರಲು ಆಗಲೇ ತನ್ನ ರೆಕ್ಕೆ ಬಿಚ್ಚಿ ಸಿದ್ಧವಾಗಿದೆ. ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ.
ಮನಸು ಮಾಡಿ ಬಟ್ಟಲನ್ನು ತುಂಬಿಸು.
ಕುಡಿದು ಈ ಜೀವನದಾಟವ ಆಡೋಣ.
ನಾಳೆಯು ನಮ್ಮದಲ್ಲ.
ಯೌವನದ ಪ್ರೇಮವು ಬೇಗ ಜಾರುತ್ತದೆ.
ಕಾಲವು ದುಃಖವಲ್ಲದೆ ಬೇರೇನೂ ಅಲ್ಲ.
ಕುಡಿ, ಹಾಡು, ಕುಣಿ.
ವಸಂತವು ಮತ್ತೆ ನಮ್ಮ ಬದುಕಿಗೆ ಎಂದು ಬರುವುದೆಂದು ತಿಳಿಯದು.
ಇದು ಈ ಪದ್ಯವು ಸಾರುವ ಉಮರನ ಸಿದ್ಧಾಂತದ ಸಾರ.
ಜಾನ್ ಗೇ ಎಂಬಾತನು ಉಮರನ ವಿಚಾರ ಧಾರೆಯನ್ನು ಹೋಲುವ ಎರಡು ಸಾಲುಗಳನ್ನು ತನ್ನ ಗೋರಿಯ ಮೇಲೆ ಕೆತ್ತಿಸಿ ಕೊಂಡದ್ದನ್ನು ಇಲ್ಲಿ ಉಲ್ಲೇಖಿಸಿದರೆ ತಪ್ಪಾಗಲಾರದು. ಆ ಸಾಲುಗಳು ಹೀಗಿವೆ ;
" Life is a jest, and all things show it.
I thought so once, and now I know it. "
" ಜೀವನವು ಒಂದು ತಮಾಷೆ, ಮತ್ತು ಎಲ್ಲ ಸಂಗತಿಗಳೂ ಅದನ್ನು ತೋರಿಸುತ್ತವೆ.
ನಾನೂ ಒಂದು ಕಾಲದಲ್ಲಿ ಹಾಗೇ ಭಾವಿಸಿದ್ದೆ, ಈಗದು ನನಗೆ ತಿಳಿದಿದೆ. "
ಇದು ಮೇಲ್ನೋಟಕ್ಕೆ ಜೀವನವನ್ನು ಹಗುರವಾಗಿ ತೆಗೆದುಕೊಂಡು;
ನಿನ್ನೆಯನ್ನು ಮರೆತು;
ನಾಳೆಯ ಚಿಂತೆಯಿಲ್ಲದೇ; ಇಂದು ಇರುವುದನ್ನು ಆನಂದಿಸೋಣ, ಎಂಬ ಭಾವದ ಪದ್ಯ.
ಬಟ್ಟಲು ಎಂದರೆ ಹೃದಯವೆಂದೂ, ಮಧು ಎಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದವೆಂದೂ, ಪ್ರಿಯತಮೆ ಎಂದರೆ ಬುದ್ಧಿಯೆಂದೂ ಉಮರನು ಬಳಸಿರುವ ಪ್ರತಿಮೆಗಳ ಹಿನ್ನಲೆಯಲ್ಲಿ ನೋಡಿದರೆ ;
" ನಮ್ಮ ಆಯುಸ್ಸು ಎಂಬ ಕಾಲದ ಹಕ್ಕಿಗೆ ಬಹಳ ಸಮಯವಿಲ್ಲ. ನಿನ್ನೆಯ ಚಿಂತೆ, ವ್ಯಸನಗಳಲ್ಲಿ ಕಾಲ ಹರಣ ಮಾಡುವುದು ಸಲ್ಲ.
ಆದ್ದರಿಂದ ಬೇಗ ನಿಶ್ಚಯ ಮಾಡಿ ಭಗವಂತನನ್ನು ಆರಾಧಿಸಿ, ಆ ಆನಂದವನ್ನು ಹೃದಯದಲ್ಲಿ ತುಂಬಿಕೊ."
ಎಂಬುದು ಕವಿ ಉಮರನು ಕೊಟ್ಟಿರುವ ಸಂದೇಶ.
ರವೀಂದ್ರ ಕುಮಾರ್ ಎಲ್ ವಿ
ಮೈಸೂರು
ಮಾಂದಳಿರ ಸವಿಯುಂಡು ಮೈ ಮರೆತ ಬುಲ್ಬುಲನು
ಚೆಲು ಗುಲಾಬಿಯ ನನೆಯನರಳಿಸಲ್ಕೆಂದು,
ನಗು ನಗುತೆ ಕುಣಿದಾಡಿ ಪಾಡುತಿಹನ್, ಆಲೈಸು :
ಕಳ್ಳು, ಚೆಂಗಳ್ಳು, ಸವಿಗಳ್ಳು ಕಳ್ಳಿನಂತೆ.
ಮಾಂದಳಿರು - ಮಾವಿನ ಚಿಗುರು.
ಬುಲ್ಬುಲ = ಬುಲ್ಬುಲ್ ( ನೈಟಿಂಗೇಲ್ ) - ಒಂದು ಹಾಡು ಹಕ್ಕಿ,
ನನೆ = ಮೊಗ್ಗು,
ಪಾಡು = ಹಾಡು,
ಕಳ್ಳು = ಮಧು, ಮದ್ಯ.
ವಸಂತನ ಆಗಮನವಾದಾಗ ಪ್ರಕೃತಿಯಲ್ಲಿ ಎಲ್ಲ ಗಿಡ ಮರಗಳು ಹೊಸ ಚಿಗುರಿನಿಂದ ನಳನಳಿಸುತ್ತವೆ.
ಮಾವಿನ ಚಿಗುರಿನ ಅಂದವೇ ಬೇರೆ. ಮಾವಿನ ಚಿಗುರು ಎಲೆಗಳು ನೇರವಾಗಿ ಹಸಿರು ಬಣ್ಣ ಹೊಂದುವುದಿಲ್ಲ. ಆರಂಭದಲ್ಲಿ ಅವು ಕೆಂಪು ಮಿಶ್ರಿತವಾಗಿದ್ದು ಕ್ರಮೇಣ ಗಿಣಿ ಹಸಿರಿಗೆ ತಿರುಗಿ ಕೊನೆಗೆ ಗಾಢ ಹಸಿರನ್ನು ಹೊಂದುತ್ತವೆ.
ಮಾವಿನೆಲೆಗಳು ಕೆಂಪು ಮಿಶ್ರಿತ ಬಣ್ಣದಿಂದ ಮಿರುಗುವಾಗ ಅವು ಬಹಳ ತೆಳುವಾಗಿದ್ದು ಗಾಳಿಯ ಸಣ್ಣ ಬೀಸುವಿಕೆಗೂ ಬಳುಕುತ್ತ ತಮ್ಮ ಸಿಹಿಯಾದ ಕಂಪಿನಿಂದ ಹಕ್ಕಿಗಳನ್ನು ಆಕರ್ಷಿಸುತ್ತವೆ.
ಹಾಗೆ ಮಾವಿನ ಚಿಗುರಿನ ಮೋಹಕ ಕೆಂಪಿಗೂ, ಅದರ ಮಧುರ ಕಂಪಿಗೂ ಮನಸೋತು ಬರುವ ಹಕ್ಕಿ ಬುಲ್ಬುಲ್ ಹಕ್ಕಿ.
ಹೀಗೆ ಮಾವಿನ ಚಿಗುರ ಕಂಪಿನ ಸವಿಯನ್ನು ಸವಿದ ಬುಲ್ ಬುಲ್ ಹಕ್ಕಿಯು, ಆ ಸವಿಗೆ ಮಾರು ಹೋಗಿ ಮೈ ಮರೆತು ಚಲುವಾದ ಗುಲಾಬಿಯ ಮೊಗ್ಗನ್ನು ಅರಳಿಸಲೆಂದು ನಗು ನಗುತ ಕುಣಿದಾಡಿ ಹಾಡುತಿದೆ.
ಬುಲ್ಬುಲ್ ಹಕ್ಕಿಗೂ ಗುಲಾಬಿಗೂ ಒಂದು ಆಶ್ಚರ್ಯಕರ ಸಂಬಂಧವಿದೆ.
ಪರ್ಷಿಯಾ ದೇಶದ ಜಾನಪದ ಕಥೆಯೊಂದರಂತೆ ನೈಟಿಂಗೇಲ್ ಅಥವಾ ಬುಲ್ಬುಲ್ ಹಕ್ಕಿಯು ಮೂಲತಃ ಬಹಳ ಚನ್ನಾಗಿಯೇನು ಹಾಡುತ್ತಿರಲಿಲ್ಲ ಹಾಗೂ ಎಲ್ಲ ಗುಲಾಬಿಗಳು ಬಿಳೀ ಬಣ್ಣದವಾಗಿದ್ದವು.
ಒಂದು ದಿನ ಬಿಳೀ ಗುಲಾಬಿಯನ್ನು ಕಂಡು ಬುಲ್ಬುಲ್ ಹಕ್ಕಿಯು ಗುಲಾಬಿಯ ಅಂದಕ್ಕೆ ಮನಸೋತು ಗುಲಾಬಿಯನ್ನು ಆಳವಾಗಿ ಪ್ರೀತಿಸತೊಡಗಿತು. ಆಗಲೇ ಚಮತ್ಕಾರವೆಂಬಂತೆ ಬುಲ್ಬುಲ್ ಮಧುರವಾಗಿ ಹಾಡಲಾರಂಭಿಸಿತು.
ಅಷ್ಟೇ ಅಲ್ಲ, ಬುಲ್ಬುಲ್ ಗುಲಾಬಿಗೆ ತನ್ನ ಪ್ರೇಮ ನಿವೇದನೆ ಮಾಡಲು ನಿರ್ಧರಿಸಿತು. ಆಗ ಹಾಡುತ್ತಾ ತನ್ನ ಶರೀರವನ್ನು ಗುಲಾಬಿಗೆ ಒತ್ತುವಾಗ, ಮುಳ್ಳೊ0ದು ಬುಲ್ಬುಲನ ಹೃದಯಕ್ಕೆ ಚುಚ್ಚಿ ಅದರ ರಕ್ತವು ಗುಲಾಬಿಯ ಮೇಲೆಲ್ಲಾ ಚಲ್ಲಿತು.
"ಗುಲಾಬಿಯು ಕೆಂಪಾಯಿತು."
ಬುಲ್ಬುಲನ ಪ್ರೇಮದ ಬಲಿದಾನದಿಂದ ಕೆಂಪು ಗುಲಾಬಿಯ ಸೃಷ್ಟಿಯಾಯಿತು.
ಅಂದಿನಿಂದ ಬುಲ್ಬುಲ್ ಹಕ್ಕಿಗಳು ಮಧುರವಾಗಿ ಹಾಡುವುದನ್ನು ಕೇಳಿ ಕುಣಿಯುವುದನ್ನು ನೋಡಿ ಗುಲಾಬಿಯ ಮೊಗ್ಗುಗಳು ಸಂತೋಷದಿಂದ, ಅರ್ಪಣಾ ಭಾವದಿಂದ ಅರಳಿ ಬುಲ್ಬುಲಗಳ ಪ್ರೀತಿಗೆ ಸ್ಪಂದಿಸುವುದು ನಿರಂತರವಾಯಿತು.
ಈ ಸಂಬಂಧದ ಮತ್ತೊಂದು ಪ್ರಕೃತಿ ವೈಚಿತ್ರವೆಂದರೆ ಗುಲಾಬಿಗಳು ಅರಳುವ ವಸಂತ ಕಾಲದಲ್ಲಿ ಬುಲ್ಬುಲ್ ಹಕ್ಕಿಗಳು ಪರ್ಷಿಯಾಕ್ಕೆ ವಲಸೆ ಬರುತ್ತವೆ ಮತ್ತು ಗುಲಾಬಿಗಳನ್ನು ಕಂಡು, ಕುಣಿದು,
ಹಾಡಿ,
ನಲಿಸಿ,
ಅರಳಿಸಿ,
ಆನಂದಿಸಿ
ಗುಲಾಬಿಗಳ ಕಾಲ ಮುಗಿದಾಗ ಮರಳುತ್ತವೆ.
ಮಾವಿನ ಚಿಗುರಿನ ಕೆಂಪಿನ ಕಂಪನ್ನು ಉಂಡ ಬುಲ್ಬುಲನು ಮಧು ಅಥವಾ ಮದ್ಯವನ್ನು ಕುರಿತು ಹಾಡುತ್ತದೆ.
ಕಳ್ಳು - ಮದ್ಯ- ಮಧು
ಚೆಂಗಳ್ಳು - ಕೆಂಪು ಮದ್ಯ - ಕೆಂಪು ಮಧು
ಸವಿಗಳ್ಳು - ಸವಿಯಾದ ಮದ್ಯ - ಸವಿಯಾದ ಮಧು.
ಕಳ್ಳು - ಚೆಂಗಳ್ಳು - ಸವಿಗಳ್ಳು ಎನ್ನುತ್ತ ಪುನರಾವರ್ತನೆ ಮಾಡಿದರೆ ಅದು ಬುಲ್ಬುಲನ ಹಾಡಿನಂತಯೇ ಧ್ವನಿಸುತ್ತದೆ.
ಅಲ್ಲದೇ ಉಮರನು ಬಳಸಿರುವ ಪ್ರತಿಮೆಗಳಂತೆ ಮಧು ಎಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ.
ಆದ್ದರಿಂದ ಮಧುವನ್ನು ಕುರಿತು ಹಾಡುವುದು ದೇವರ ಕುರಿತು ಹಾಡುವಷ್ಟೇ ಮಹತ್ವದ್ದು, ದೇವರ ಉಪಾಸನೆಯ ಒಂದು ಭಾಗ ಎಂಬ ಉಮರನ ದೃಷ್ಟಿಕೋನವನ್ನೂ ಈ ಪದ್ಯದಲ್ಲಿ ಕಾಣಿಸಲಾಗಿದೆ.
ರವೀಂದ್ರ ಕುಮಾರ್ ಎಲ್ವಿ
ಮೈಸೂರು.
ಹೊಸವರುಷವೀಗ ಹಳೆಯಾಸೆಗಳ ಬಲಿಸುತಿದೆ :
ಜಾನಿಗಳ ಜೀವವೇಕಾಂತವೆಳಸುತಿದೆ:
ಕೊಳದ ತಡಿಯಲಿ ತಳಿರ ಮಲರ ಸೊಂಪಮರುತಿದೆ ;
ದ್ರಾಕ್ಷಿಯಲಿ ಮಾಣಿಕ್ಯರಸವು ಹೊಮ್ಮುತಿದೆ.
ಹೊಸವರುಷವೀಗ ಹಳೆಯಾಸೆಗಳ ಬಲಿಸುತಿದೆ :
ಬಲಿಸು = ಬಲಪಡಿಸು, ಧೃಢಪಡಿಸು, ನೆಲೆಗೊಳಿಸು, ಉತ್ತೇಜಿಸು, ಪ್ರಚೋದಿಸು.
ಈ ಸಾಲುಗಳು ವಸಂತದೊಂದಿಗೆ ಪ್ರಕೃತಿಯು ನಾವೀನ್ಯತೆಯನ್ನು ಪಡೆಯುವುದನ್ನು ಮಾನವನ ಯೋಚನೆ ಮತ್ತು ಭಾವನೆಗಳ ಜೊತೆ ತಳಕು ಹಾಕಲಾಗಿದೆ.
ಜಾನಿಗಳ ಜೀವವೇಕಾಂತವೆಳಸುತಿದೆ
ಜಾನ = ಧ್ಯಾನ, ಏಕಾಗ್ರ ಚಿತ್ತದಿಂದ ಚಿಂತನೆ ಮಾಡುವುದು.
ಜಾನಿ = ಧ್ಯಾನ ಮಾಡುವವ, ಯೋಗಿ, ಬುದ್ಧಿವಂತ, ಚಿಂತಕ.
ಪ್ರಕೃತಿಯ ನವ ಪಲ್ಲವವು ಯೋಗಿಗಳ ಮತ್ತು ಚಿಂತಕರ ಮನಸ್ಸನ್ನು ಏಕಾಂತದೆಡೆಗೆ ಸೆಳೆಯುತ್ತಿದೆ.
ಕೊಳದ ತಡಿಯಲಿ ತಳಿರ ಮಲರ ಸೊಂಪಮರುತಿದೆ ;
ತಡಿ = ತಟ, ತಳಿರು =ಚಿಗುರು,
ಮಲರು = ಹೂವು, ಸೊಂಪು = ಚೆಲ್ವಿಕೆ, ಸಮೃದ್ಧಿ, ಸಂತೋಷ.
ಅಮರು = ಆವರಿಸು, ಆಕ್ರಮಿಸು, ತುಂಬಿಕೊಳ್ಳು.
ಕೊಳದ ತಟದಲ್ಲಿ ಮರಗಳ ಚಿಗುರು ಮತ್ತು ಹೂವುಗಳ ಚೆಲ್ವಿಕೆ, ಚಲುವಿಕೆಯು ತುಂಬಿಕೊಳ್ಳುತ್ತಿದೆ.
ದ್ರಾಕ್ಷಿಯಲಿ ಮಾಣಿಕ್ಯರಸವು ಹೊಮ್ಮುತಿದೆ.
ದ್ರಾಕ್ಷಿಯು ಮಾಣಿಕ್ಯ ವರ್ಣದ ರಸದಿಂದ ಕೂಡಿದೆ.
ವಸಂತನ ಆಗಮನದೊಂದಿಗೆ ಹೊಸವರ್ಷ ಬಂದಿದೆ. ಬಂದಿದೆಯಷ್ಟೇ ಅಲ್ಲ ಅದು ಹಳೆಯ ಆಸೆಗಳನ್ನು ಇನ್ನಷ್ಟು ಬಲವಾಗಿಸುತ್ತಿದೆ. ಆ ಆಸೆಗಳ ಈಡೇರಿಕೆಗೆ ಮನಸ್ಸು ಧೃಡವಾಗುತ್ತಿದೆ. ಪ್ರಕೃತಿಯು ಮತ್ತದೇ ಆಸೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನ್ನ ಹೊಚ್ಚ ಹೊಸತನದ ಮೋಡಿಯಿಂದ ಮನಸ್ಸನ್ನು ಆಸೆಗಳ ಈಡೇರಿಕೆಗೆ ಪ್ರಚೋದಿಸುತ್ತಿದೆ, ಉತ್ತೇಜಿಸುತ್ತಿದೆ.
ಪ್ರಕೃತಿಯು ತನ್ನನ್ನು ತಾನೇ ನವೀಕರಿಸಿಕೊಂಡು ನಳನಳಿಸುವ ವಾತಾವರಣವು ಯೋಗಿಗಳನ್ನು, ಧ್ಯಾನಿಗಳನ್ನು ಧ್ಯಾನಾಸಕ್ತರನ್ನು, ಗಾಢವಾಗಿ ಆಲೋಚಿಸುವ ಚಿಂತಕರನ್ನು ಏಕಾಂತತೆಗೆ ಆಕರ್ಷಿಸುತ್ತಿದೆ.
ವಸಂತದಲ್ಲಿ ಪ್ರಕೃತಿಯು ಬಣ್ಣ ಬಣ್ಣದ ಚಿಗುರುಗಳನ್ನು, ಹೂವುಗಳನ್ನೂ ಅರಳಿಸಿ ಹೊಸ ಚಲುವನ್ನು ಸೃಷ್ಟಿಸುತ್ತಿದೆ. ಕೊಳದ ತಟದಲ್ಲಿ ನೀರ ಮೇಲೆ ಬೀಸುವ ತಂಗಾಳಿಯಲ್ಲಿ ಆ ಚಿಗುರುಗಳ, ಹೂವುಗಳ ನವಿರಾದ ಕಂಪು ವಾತಾವರಣವನ್ನು ತುಂಬಿಕೊಂಡು ವಿಹಾರಿಗಳ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ.
ತಳಿರು, ಮಲರು, ಸೊಂಪು ಅಮರು ಈ ನಾಲ್ಕು ಶಬ್ದಗಳಲ್ಲಿ ವಸಂತನ ಅಮೋಘ ಚಿತ್ರಣ.
ಇದೇ ಅಲ್ಲವೇ ಪೂಜ್ಯ ಡಿವಿಜಿಯವರ ಶಬ್ದಗಾರುಡಿ.
ದ್ರಾಕ್ಷಿಯಲ್ಲಿ ಮಾಣಿಕ್ಯ ಬಣ್ಣದ ರಸವು ಹೊಮ್ಮಿ ದ್ರಾಕ್ಷಿಯನ್ನು ನೋಡುವುದೇ ಸೊಗಸಾಗಿಸಿದೆ.
ಚಿಗುರು, ಹೂವುಗಳ ನಂತರ ಹಣ್ಣುಗಳು ರಸಭರಿತವಾಗಿ ತೊನೆಯುತ್ತಿವೆ. ಹಣ್ಣುಗಳು ಜೀವರಸದ ಸಂಕೇತ. ಪ್ರಕೃತಿಯಲ್ಲಿ ಜೀವರಸವು ತುಂಬಿ ಹಣ್ಣುಗಳೂ ತಮ್ಮ ತಮ್ಮ ಬಣ್ಣದೊಂದಿಗೆ ಜೀವಾಮೃತವನ್ನು ಕೊಡಲು ಸಿದ್ಧವಾಗಿವೆ.
ದ್ರಾಕ್ಷಿಯ ಮಾಣಿಕ್ಯ ರಸವು ಮಧುವಿಗೆ ಆಧಾರ. ಉಮರನ ಪ್ರತಿಮೆಗಳಲ್ಲಿ ಮಧುವೆಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ.
ವಸಂತನ ಆಗಮನದಿಂದ ಜೀವ ಸಂಕುಲವೆಲ್ಲವೂ ನಳನಳಿತ ಗೊಂಡು, ಆ ಭಗವಂತನ ಸೃಷ್ಟಿಯ ಭಾಗವಾದ ಮಾನವ ಜೀವಿಯನ್ನು ಸೃಷ್ಟಿಕರ್ತ ಭಗವಂತನ ಉಪಾಸನೆಗೆ ಉತ್ತೇಜಿಸುತ್ತಿದೆ, ಪ್ರಚೋದಿಸುತ್ತಿದೆ.
ಮರಗಿಡಗಳಲ್ಲಿ ಚಿಗುರು ನಳನಳಿಸುವುದು, ಹೂಗಳು ನಗುವುದು ಹಣ್ಣುಗಳು ಜೀವ ರಸ ತುಂಬಿ ಹೊಮ್ಮುವುದು ಪ್ರಕೃತಿಯ ನವೀಕರಣದ ವೈಭವನ್ನು ಸಾರುವುದನ್ನು ಈ ಪದ್ಯದಲ್ಲಿ ಅಮೋಘವಾಗಿ ಕಟ್ಟಿ ಕೊಡಲಾಗಿದೆ.
ರವೀಂದ್ರ ಕುಮಾರ್ ಎಲ್ವಿ.
ಮೈಸೂರು
ಕೋಳಿ ಕೂಗುವ ವೇಳೆ ಕಳ್ಳಗಂಡಿಯ ಮುಂದೆ
ಬೊಬ್ಬೆಯಿಡುವರು, ಕೇಳು, 'ತೆರೆ ಕದವನ್' ಎನುತೆ:
"ತೆರೆ ಕದವನ್ ; ಎಮಗಿಲ್ಲಿರಲು ಹೊತ್ತು ಬಹಳಿಲ್ಲ :
ತೆರಳಿದ ಬಳಿಕಿತ್ತ ಬರಲಿಕಳವಲ್ಲ.
ಕೋಳಿ ಕೂಗುವ ವೇಳೆ ಕಳ್ಳಗಂಡಿಯ ಮುಂದೆ
ನಸುಕು ಹರಿದು ಬೆಳಕು ಬರುವ ವೇಳೆಗೆ ಕಳ್ಳ ಗಂಡಿಯ ಮುಂದೆ,
ಬೊಬ್ಬೆಯಿಡುವರು, ಕೇಳು, 'ತೆರೆ ಕದವನ್' ಎನುತೆ:
'ತೆರೆ ಕದವನ್' - ಬಾಗಿಲನ್ನು ತೆಗೆ ಎಂದು ಕೂಗಾಡುತ್ತಿರುವರು,
ಎಮಗಿಲ್ಲಿರಲು ಹೊತ್ತು ಬಹಳಿಲ್ಲ :
ನಮಗೆ ಇಲ್ಲಿರಲು ಬಹಳ ಸಮಯವು ಇಲ್ಲ.
ತೆರಳಿದ ಬಳಿಕಿತ್ತ ಬರಲಿಕಳವಲ್ಲ.
ತೆರಳು = ಹೊರಡು, ಹೋಗು,
ಬಳಿಕಿತ್ತ = ಬಳಿಕ + ಇತ್ತ
ಬರಲಿಕಳವಲ್ಲ = ಬರಲಿಕ್ + ಅಳವಲ್ಲ. ಅಳವು = ಸಾಧ್ಯವಾದುದು.
ಇಲ್ಲಿಂದ ಹೊರಟ ಮೇಲೆ ಈ ಕಡೆಗೆ ಅಥವಾ ಇಲ್ಲಿಗೆ ಬರುವುದು ಸಾಧ್ಯವಾದುದಲ್ಲ, ಅಥವಾ ಸಾಧ್ಯವಿಲ್ಲ.
ಸೂರ್ಯೋದಯದ ವಸ್ತುವನ್ನೇ ಮುಂದುವರಿಸುತ್ತ ಕವಿ ಈ ಪದ್ಯದಲ್ಲಿ ನಾವು ಈ ಜಗತ್ತಿಗೆ ಬಂದುದರ ಮತ್ತು ನಮ್ಮ ಇಲ್ಲಿನ ಜೀವಿತ ಕಾಲದ ಬಗ್ಗೆ ಬರೆಯುತ್ತಿದ್ದಾನೆ.
ಇಲ್ಲಿಗೆ ಬಂದವರ ಅರಚಾಟ, ಕೂಗಾಟ, ಅಬ್ಬರ, ಆರ್ಭಟ, ಎಲ್ಲವೂ ಬಂದ ತಕ್ಷಣವೇ ಶುರುವಾಗುವುದು. ಕೋಳಿ ಕೂಗುವುದು ದಿನದ ಆರಂಭ.
ಈ ಜನರು ಸೇರಿ ಕೊಂಡು ಬೊಬ್ಬೆಯಿಡುವುದು ಸಹ ಇಲ್ಲಿಗೆ ಬಂದ ತಕ್ಷಣವೇ ಆರಂಭ.
ಈ ಬೊಬ್ಬಿಡುವಿಕೆ ಕಳ್ಳಂಗಡಿಯಲ್ಲೇ ಇರಬಹುದು, ಇಲ್ಲವೇ ಕಳ್ಳಗಂಡಿಯಲ್ಲಿ ಇರಬಹುದು ಇಲ್ಲವೇ ಕಳ್ಳಂಗಡಿಯ ಕಳ್ಳಗಂಡಿಯಲ್ಲಿಯೇ ಇರಬಹುದು.
ಎಲ್ಲೆಡೆಯೂ ಒಂದೇ ಕೂಗು - " -'ಅವಸರಿಸಿ' ನಮ್ಮನ್ನು ಅನುಸರಿಸಿ, ಆದರಿಸಿ. " - ಎಂದು. ಕಳ್ಳಂಗಡಿಯಲ್ಲಿಯೂ ಅವಸರ. ಕಳ್ಳಗಂಡಿಯಲ್ಲೂ ಬೇಗ ಬಾಗಿಲು ತೆಗೆಸುವ ಅವಸರ.
ಇಲ್ಲಿಗೆ ಬಂದವರ ಪ್ರಾಪಂಚಿಕ ಅವಸರಕ್ಕೆ ಕಾರಣ ; ಸಮಯ.
ನಮಗೆ ಇಲ್ಲಿ ಇರಲು ಬಹಳ ಸಮಯವಿಲ್ಲ ಎಂಬ ಅನಿಸಿಕೆ.
ಇದ್ದ ಸಮಯದಲ್ಲೇ ಮಧುಪಾನದ ಆನಂದವನ್ನೋ, ಜೀವನದ ಸವಿಯನ್ನೋ ಅನುಭವಿಸ ಬೇಕು. ಒಮ್ಮೆ ಇಲ್ಲಿಂದ ಹೊರಟ ಮೇಲೆ ಮತ್ತೆ ಇಲ್ಲಿಗೆ ಬರುವುದು ಸಾಧ್ಯವಿಲ್ಲ.
ಹಾಗಾಗಿ ಮಧುವಾಟಿಕೆಯಲ್ಲಿ ಬೇಗ ಬಾಗಿಲು ತೆರೆಸಲು ಬೊಬ್ಬಾಟ.
ಪ್ರಾಪಂಚಿಕವಾದ ಕಳ್ಳಂಗಡಿಯಲ್ಲಿ ಮಧುವನ್ನು ಸವಿದು ಆನಂದಿಸುವುದೇ ಆಗಲಿ,
ಇಲ್ಲವೇ ಸಾಧುಗಳ ಗೋಷ್ಠಿಯಲ್ಲೋ, ಭಕ್ತರ ಗುಂಪಿನಲ್ಲೋ ಸೇರಿ ಭಗವಂತನ ಉಪಾಸನೆಯ ಆನಂದವನ್ನು ಹೃದಯದಲ್ಲಿ ತುಂಬಿ ಕೊಳ್ಳುವುದೇ ಆಗಲಿ, ಮನುಷ್ಯರು ಅದಕ್ಕಾಗಿ ಅವಸರಿಸಿ ಕೂಗಾಡುವುದು ಸಾಮಾನ್ಯ ದೃಶ್ಯ.
"ಜೀವನವು ತುಂಬಾ ಚಿಕ್ಕದು. ಒಮ್ಮೆ ಸತ್ತರೆ, ಅಷ್ಟೇ - ಅಲ್ಲಿಗೇ ಮುಗಿಯಿತು. ಮತ್ತೆ ಹಿಂತಿರುಗಿ ಕಳ್ಳಂಗಡಿಗೇ ಆಗಲಿ ಈ ಪ್ರಪಂಚಕ್ಕೇ ಆಗಲಿ ಬರಲಾಗುವುದಿಲ್ಲ." - ಎಂಬ ಭಾವದಿಂದ ಹುಟ್ಟಿದ್ದು,- ಈ ಅವಸರ ಅಥವಾ ಅವಸರಿಸುವಿಕೆ.
ಜೊತೆಗೆ ಎಲ್ಲದೂ ಬೇರಾರಿಗೂ ಸಿಗುವ ಮುನ್ನ ತನಗೆ ಸಿಗಲಿ ಎಂಬ ಆಸೆ.
ಅದರಿಂದಾಗಿಯೇ ಬದುಕಿನ ಎಲ್ಲ ಹಂತದಲ್ಲೂ ಧಾವಂತ.
ರವೀಂದ್ರ ಕುಮಾರ್ ಎಲ್ವಿ
ಮೈಸೂರು.
ಕನಸೊಂದ ಮುಂಜಾವದಲಿ ಕಂಡೆನೇನೆಂಬೆನ್ ?
ಅರವಟಿಗೆಯಿಂದೆ ಸದ್ದೊಂದಾದುದಿಂತು :
" ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ
ನಿಮ್ಮೊಡಲಬಟ್ಟಲೊಳು ರಸವಿಮರ್ವ ಮುನ್ನ
ಕನಸೊಂದ ಮುಂಜಾವದಲಿ ಕಂಡೆನೇನೆಂಬೆನ್ ?
ಕಂಡೆನೇನೆಂಬೆನ್ = ಕಂಡೆನ್ + ಏನು + ಎಂಬೆನ್
ಎಂಬೆನ್ = ಹೇಳುವೆನು.
ಮುಂಜಾವಿನಲ್ಲಿ ಒಂದು ಕನಸನ್ನು ಕಂಡೆನು. ಏನು ಎಂದು ಹೇಳುವೆನು.
ಅರವಟಿಗೆಯಿಂದೆ ಸದ್ದೊಂದಾದುದಿಂತು :
ಅರವಟಿಗೆ = ಮಧುವಾಟಿಕೆ, ಹೆಂಡದಂಗಡಿ
ಸದ್ದೊಂದಾದುದಿಂತು = ಸದ್ದು + ಒಂದು + ಆದುದು + ಇಂತು.
ಮಧುವಾಟಿಕೆಯಿಂದ ಈ ರೀತಿಯ ಒಂದು ಸದ್ದು ಆಯಿತು, ಅಂದರೆ ಕೇಳಿಸಿತು.
" ಏಳಿರೆಲೆ ಮಕ್ಕಳಿರ, ಬಟ್ಟಲನು ತುಂಬಿಕೊಳಿ
ಎಲೆ ಮಕ್ಕಳಿರಾ ಎದ್ದೇಳಿ, ನಿಮ್ಮ ಬಟ್ಟಲನ್ನು ತುಂಬಿ ಕೊಳ್ಳಿರಿ.
ನಿಮ್ಮೊಡಲಬಟ್ಟಲೊಳು ರಸವಿಮರ್ವ ಮುನ್ನ
ರಸವಿಮರ್ವ = ರಸವ್ +ಇಮರ್, ಇಮರ್ = ಒಣಗು, ಇಮರ್ವ = ರಸವು + ಒಣಗುವ
ನಿಮ್ಮ ಒಡಲ ಬಟ್ಟಲಲ್ಲಿ ಇರುವ ರಸವು ಒಣಗಿ ಹೋಗುವುದಕ್ಕೆ ಮುಂಚೆ,
ಎಲೆ ಮಕ್ಕಳಿರಾ, ನಿಮ್ಮ ದೇಹದ ಬಟ್ಟಲಲ್ಲಿ ಇರುವ ರಸವು ಒಣಗಿ ಹೋಗುವ ಮುಂಚೆ ನಿಮ್ಮ ಬಟ್ಟಲನ್ನು ತುಂಬಿ ಕೊಳ್ಳಿ ಎಂಬುದಾಗಿ ಮಧುವಾಟಿಕೆಯಲ್ಲಿ ಹೇಳುತ್ತಿದ್ದ ಹಾಗೆ ಕವಿಯು ಒಂದು ದಿನ ಮುಂಜಾವಿನಲ್ಲಿ ಕನಸು ಕಂಡಿದ್ದನ್ನು ಈ ಪದ್ಯದಲ್ಲಿ ಹೇಳಿದ್ದಾನೆ.
ಮೇಲು ನೋಟಕ್ಕೆ ಇದು ಹೆಂಡದಂಗಡಿಯಲ್ಲಿ ಜನ ಹಿಂದಿನ ದಿನ ಸೇವಿಸಿದ ಮದ್ಯದ ಪರಿಣಾಮವಾಗಿ ದೇಹ ಒಣಗಿ ನೀರಡಿಕೆಯಾಗುವಾಗ ಬೆಳಿಗ್ಗೆ ಎದ್ದು ಮತ್ತೊಂದು ಸುತ್ತು ಮದ್ಯ ಸೇವನೆ ಮಾಡುವುದನ್ನು ಕವಿಯು ತನ್ನ ಕನಸಲ್ಲಿ ಕೇಳಿದಂತೆ ವಿವರಿಸಿದ್ದಾನೆ. ಅದೂ ತನ್ನ ಮುಂಜಾವಿನ ಕನಸಲ್ಲಿ. ಈ ಮುಂಜಾವಿನ ನಸು ಬೆಳಕಲ್ಲಿ ಯಾವುದೂ ಸರಿಯಾಗಿ ಕಾಣುವುದಿಲ್ಲ. ಆದರೆ ಮಾತನಾಡಿದ್ದು ಕೇಳುತ್ತದೆ. ಕವಿಗೂ ಹಾಗೆಯೇ ಆದ ವರ್ಣನೆ ಇದೆ.
ಉಮರನು ಬಳಸಿರುವ ಪ್ರತಿಮೆಗಳ ಹಿನ್ನಲೆಯಲ್ಲಿ ಈ ಪದ್ಯವನ್ನು ನೋಡುವುದಾದರೆ ಅರವಟಿಗೆ ಎನ್ನುವುದು ಒಂದು ಭಕ್ತರ ಗುಂಪು ಅಥವಾ ಸಾಧುಗಳ ಗೋಷ್ಠಿ. ಬಟ್ಟಲು ಎಂದರೆ ಹೃದಯ. ಮಧು ಎಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ
ಬೆಳಗಿನ ಜಾವದಲ್ಲಿ ಭಕ್ತರ ಗುಂಪೊಂದರಲ್ಲಿ ಕೇಳಿದ ಮಾತುಗಳು :- " ಎಲೆ ಮಕ್ಕಳಿರಾ ಏಳಿ, ನಿಮ್ಮ ಬಟ್ಟಲನ್ನು ಮಧುವಿನಿಂದ ತುಂಬಿ ಕೊಳ್ಳಿ. ಅಂದರೆ ನಿಮ್ಮ ಹೃದಯವನ್ನು ಭಗವಂತನ ಉಪಾಸನೆಯಿಂದ ಆಗುವ ಆನಂದದಿಂದ ತುಂಬಿಕೊಳ್ಳಿ.
ಈ ಕೆಲಸವನ್ನು ನಿಮ್ಮ ದೇಹದಲ್ಲಿರುವ ಹೃದಯದಲ್ಲಿ ತುಂಬಿರುವ ಭಗವಂತನ ಉಪಾಸನೆಯ ಆನಂದ ರಸವು ಒಣಗಿ ಹೋಗಿ ನಿಮ್ಮ ದೇಹವು ಶುಷ್ಕವಾಗುವ ಮುಂಚೆ ಹೃದಯದ ಬಟ್ಟಲನ್ನು ಮಧುವಿನಿಂದ ಮತ್ತೆ ತುಂಬಿ ಕೊಳ್ಳಿ ಎಂಬುದು ಅರವಟಿಗೆ ಸದ್ಧಭಿಪ್ರಾಯ. ಭಕ್ತರ ಗುಂಪಿನ ಆಶಯವಿದು.
ಭಗವಂತನ ಉಪಾಸನೆಯಿಂದ ಆಗುವ ಆನಂದವೊಂದು ಕಡೆ, ಮತ್ತೊಂದು ಕಡೆಯಲ್ಲಿ ಅಂತಹ ಸದೋಪಾಸನೆಯಿಂದ ಮಾಡಿದ ಸತ್ಕರ್ಮಗಳ ಫಲದ ಬಲವಿನ್ನೊಂದು ಕಡೆ.
ಇದು ನಮ್ಮ ಒಡಲನ್ನು ಅಂದರೆ ನಮ್ಮ ಇರುವಿಕೆಯನ್ನು ಕಾಯುತ್ತಿರುತ್ತದೆ.
ಮಾಡಿದ ಉಪಾಸನೆಯ ಆನಂದ ಮತ್ತು ಗಳಿಸಿದ ಸತ್ಕರ್ಮಗಳ ಪುಣ್ಯ ಬಲ ತೀರಿ ಹೋಗಿ ಒಡಲು ಒಣಗುವ ಮುನ್ನ ಅಂದರೆ ನಮ್ಮ ಇರುವಿಕೆ ಶುಷ್ಕವಾಗಿ ಅರ್ಥ ಕಳೆದು ಕೊಳ್ಳುವ ಮುನ್ನ ಮತ್ತೆ ಭಗವಂತನ ಉಪಾಸನೆಯಿಂದ ಹೃದಯದ ಬಟ್ಟಲನ್ನು ತುಂಬಿ ಕೊಳ್ಳಬೇಕು, ತುಂಬಿ ಕೊಳ್ಳಿ ಎಂಬುದು ಕವಿ ಉಮರನ ಈ ಪದ್ಯದ ಆಶಯ, ಹಾಗೂ ಆದೇಶ.
ರವೀಂದ್ರ ಕುಮಾರ್ ಎಲ್ವಿ.
ಮೈಸೂರು.
ಮೂಡಲತ್ತಣ ಬೇಡನದೊ ! ದುಡುಕಿ ಬಂದೀಗ,
ನೋಡು, ಸುಲ್ತಾನನರಮನೆಯ ಗೋಪುರಕೆ
ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ
ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ
ಮೂಡಲತ್ತಣ ಬೇಡನದೊ ! ದುಡುಕಿ ಬಂದೀಗ,
ಅತ್ತಣ - ಆ ಕಡೆಯಲ್ಲಿ, ಮೂಡಲ್ = ಮೂಡಿದ,
ಬೇಡನ್ = ಬೇಡರವನು ಬೇಟೆಗಾರನು.
ದುಡುಕಿ = ಅವಸರಿಸಿ,
ಪೂರ್ವದ ಆ ಕಡೆಯಲ್ಲಿ ಬೇಡರವನು ಅವಸರಿಸಿ ಬಂದು ಈಗ,
ನೋಡು, ಸುಲ್ತಾನನರಮನೆಯ ಗೋಪುರಕೆ
ಸುಲ್ತಾನರ ಅರಮನೆಯ ಗೋಪುರಕ್ಕೆ,
ಹೂಡಿಹನು ತನ್ನ ಹಗ್ಗದ ಕುಣಿಕೆಯನು ಬೀರಿ
ಹೂಡು = ಆರಂಭಿಸು, ಉಪಕ್ರಮಿಸು,
ಬೀರಿ = ಎಸೆದು.
ತನ್ನ ಹಗ್ಗದ ಕುಣಿಕೆಯನ್ನು ಎಸೆದು ಉಪಕ್ರಮಿಸುತ್ತಿದ್ದಾನೆ,
ನೋಡು ಬಾರೆಲೆ ಮುಗುದೆ, ನೀಡು ನಿನ್ನೊಲವ
ಓ ಮುಗ್ಧೆಯೇ, ನೀನದನ್ನು ನೋಡು ಬಾ, ಹಾಗೆಯೇ ನಿನ್ನ ಪ್ರೀತಿಯನ್ನು ಕೊಡುವವಳಾಗು.
ಪರ್ಸಿಯಾ ದೇಶದ ಮರಳುಗಾಡುಗಳಲ್ಲಿ ಸೂರ್ಯನನ್ನು ಪೂರ್ವ ದಿಕ್ಕಿನ ಬೇಟೆಗಾರನೆಂದು ಪರಿಗಣಿಸುತ್ತಾರೆ.
ಹಿಂದಿನ ಪದ್ಯದಲ್ಲಿ ಸೂರ್ಯೋದಯದ ವರ್ಣನೆಯನ್ನು ಮಾಡಿದ ಕವಿ ಈ ಪದ್ಯದಲ್ಲಿ ಸೂರ್ಯನು ತನ್ನ ಕಿರಣಗಳಿಂದ ಸಕಲ ಚರಾಚರಗಳನ್ನು ಅವರಿಸಿಕೊಳ್ಳುವುದನ್ನು ಬೇಡನೊಬ್ಬನು ತನ್ನ ಹಗ್ಗದ ಕುಣಿಕೆಯನ್ನು ಎಸೆಯುವುದಕ್ಕೆ ಹೋಲಿಸುತ್ತಿದ್ದಾನೆ.
ಹಾಗೆ ಆ ಮೂಡಣದ ಬೇಡರವನು ಎಸೆದ ಹಗ್ಗದ ಕುಣಿಕೆಯು ಸುಲ್ತಾನನ ಅರಮನೆಯ ಗೋಪುರವನ್ನು ಉಪಕ್ರಮಿಸಿರುವುದನ್ನು ನೋಡು ಬಾ, ಓ ಮುಗ್ದ ಹೆಣ್ಣೇ! ಎಂದು ಕವಿಯು ತನ್ನ ಪ್ರಿಯತಮೆಯನ್ನು ಆ ಬೆಳಗಿನ ಸೂರ್ಯೋದಯದ ದೃಶ್ಯವನ್ನು ನೋಡಲು ಕರೆಯುತ್ತಿದ್ದಾನೆ,
ಹಾಗೆಯೇ ಅವಳಲ್ಲಿ "ನೀಡು ನಿನ್ನೊಲವ " ಎಂದು ಪ್ರೇಮ ಭಿಕ್ಷೆಯನ್ನೂ ಕೇಳುತ್ತಿದ್ದಾನೆ.
ಪೂರ್ವದಿಕ್ಕಿನ ಬೇಡರವನಾದ ಸೂರ್ಯನು ಮೇಲೆ ಮೇಲೆ ಏರುತ್ತಾ ಅರಮನೆಯ ಗೋಪುರವನ್ನು ತನ್ನ ಕುಣಿಕೆಯಲ್ಲಿ ಹಿಡಿದಿದ್ದಾನೆ ಎಂದರೆ ಹೊತ್ತೇರಿದೆ.
ಓ ನನ್ನ ಮುಗ್ಧ ಹೆಣ್ಣೇ ನೀನು ಆ ದೃಶ್ಯವನ್ನು ನೋಡು ಬಾ.
ಈಗಲೇ ಹೊತ್ತಾಗಿದೆ. ಇನ್ನು ತಡ ಮಾಡದೇ ನಿನ್ನ ಪ್ರೀತಿಯನ್ನು ನನಗೆ ನೀಡು ಎಂದು ಪ್ರೇಮವನ್ನು ಕೋರುವ ಭಾವ, ಈ ಪದ್ಯದ್ದು.
ಇಲ್ಲಿಯೂ ಸಹ ಕವಿ ಉಮರನು ಪ್ರಿಯತಮೆಯನ್ನು ಓಲೈಸುವುದರ ಮೂಲಕ ಬುದ್ದಿಯನ್ನು ಪ್ರಚೋದಿಸಿ ಜೀವನವನ್ನು ಸುಂದರಗೊಳಿಸಲು ಒಲಿದು ಸಹಕರಿಸು ಎಂದು ಪ್ರಾರ್ಥಿಸುತ್ತಿದ್ದಾನೆ.
---**---
ರವೀಂದ್ರ ಕುಮಾರ್ ಎಲ್ ವಿ
ಮೈಸೂರು.
ಏಳೆನ್ನ ಮನದನ್ನೆ ! ನೋಡು, ಪೊಳ್ತರೆ ಬಂದು
ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸದು
ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು :
ನಿದ್ದೆ ಸಾಕಿನ್ನೀಗ, ಮುದ್ದಣುಗಿ ಬಾರ
ಏಳೆನ್ನ ಮನದನ್ನೆ ! ನೋಡು, ಪೊಳ್ತರೆ ಬಂದು
ಪೊಳ್ತರೆ - ನಸುಕು, ಮುಂಜಾವು
ಓ ನನ್ನ ಪ್ರಿಯತಮೆಯೇ ನೋಡು ನಸುಕು ಮೂಡಿ;
ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸದು
ನಿಶಿ = ರಾತ್ರಿ, ಕಪ್ಪಾದ ಸ್ವರೂಪ,
ಬೋಗುಣಿ - ತಳ ಚಿಕ್ಕದಾಗಿ ಬಾಯಿ ಅಗಲವಾಗಿರುವ ಪಾತ್ರೆ.
ಬುಗುರಿ = ತಿರುಗುವ ಒಂದು ಆಟಿಕೆ, ಹೊಂಬುಗುರಿ = ಹೊನ್ನಿನ ಬಣ್ಣದ ಬುಗುರಿ.
ರಾತ್ರಿಎಂಬ ಕಪ್ಪು ಬೋಗುಣಿಯ ಒಳಗೆ ಮುಂಜಾವಿನ ಹೊನ್ನಿನ ಬಣ್ಣದ ಬುಗುರಿಯನ್ನು ಎಸೆದು ;
ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು :
ಆ ಬೋಗುಣಿಯೊಳಗೆ ಅರಳುಗಳಂತೆ ಕಾಣುವ ಚಿಕ್ಕಿಗಳನ್ನು ( ತಾರೆಗಳು , ನಕ್ಷತ್ರಗಳು) ಎಲ್ಲೆಡೆಯೂ ಚೆಲ್ಲಾಡಿದ್ದಾನೆ.
ನಿದ್ದೆ ಸಾಕಿನ್ನೀಗ, ಮುದ್ದಣುಗಿ ಬಾರ
ಸಾಕಿನ್ನೀಗ = ಸಾಕು +ಇನ್ನು + ಈಗ
ಅಣುಗಿ = ಮಗಳು.
ಮುದ್ದಣಗಿ = ಮುದ್ದಿನ ಮಗಳು, ಮುದ್ದು = ಪ್ರೀತಿ, ಚೆಲುವು, ಚುಂಬನ.
ಪ್ರೀತಿ, ಚೆಲುವು, ಒಲವು ಎಂಬುದೇನಿದೆಯೋ ಎಷ್ಟಿದೆಯೋ ಅದೆಲ್ಲದರ ಮಗಳಾಗಿರುವ ನೀನು ಬಾ.
ಸೂರ್ಯೋದಯದ ಸುಂದರ ವರ್ಣನೆಯನ್ನು ಮಾಡುತ್ತಾ ಕವಿ ತನ್ನ ಪ್ರೇಯಸಿಯನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದಾನೆ.
ನಿಶೆ ಅಥವಾ ರ್ರಾತ್ರಿಯು ಒಂದು ಅರ್ಧ ಗೋಳಾಕಾರದ ಕಪ್ಪನೆಯ ಬೋಗುಣಿಯನ್ನು ಮುಚ್ಚಿದಂತೆ ಭೂಮಿಯನ್ನು ಆವರಿಸಿರುತ್ತದೆ.
ನಸುಕಿನ ಅಥವಾ ಮುಂಜಾವಿನ ಸೂರ್ಯ ಕಿರಣಗಳು ಆ ಬೋಗುಣಿಯೊಳಗೆ ಒಂದು ಹೊಂಬಣ್ಣದ ಬುಗುರಿಯನ್ನು ತಿರುಗಿಸಿ ಬಿಟ್ಟಂತೆ ಪ್ರವೇಶ ಮಾಡಿವೆ.
ಸೂರ್ಯನು ತಿರುಗುವ ಬುಗುರಿಯಿಂದ ಹೊಮ್ಮುವ ಹೊಂಬಣ್ಣದ ಕಿರಣಗಳನ್ನು ಬೋಗುಣಿಯೊಳಗೆ ಹರಡಿ, ಮಿಣಿ ಮಿಣಿ ಮಿಣುಕುತ್ತಿದ್ದ ನಕ್ಷತ್ರಗಳನ್ನು , ಹುರಿಯುವ ಬಾಣಲೆಯಿಂದ ಅರಳುಗಳು ಸಿಡಿದು ಚಲ್ಲಾಡುವಂತೆ ಚದುರಿಸುತ್ತಿದ್ದಾನೆ.
ಎಂತಹ ಮನ ಮೋಹಕ ದೃಶ್ಯವಿದು. ಓ ನನ್ನ ಮನದನ್ನೆಯೇ ನಿದ್ದೆಯು ಸಾಕೀಗ, ಎಚ್ಚರವಾಗು.
ಚೆಲುವು, ಒಲವು ಸೇರಿ ಹೆಣ್ಣಾಗಿ ಪಡೆದ ಮುದ್ದಿನ ಮಗಳು ನೀನು.
ಅಂತಹ ನನ್ನ ಪ್ರಿಯತಮೆಯೇ ಎದ್ದೇಳು ಎಂದು ರಸಿಕ ಕವಿಯು ತನ್ನ ಪ್ರೇಯಸಿಯನ್ನು ಎಚ್ಚರ ಗೊಳಿಸುತ್ತಿದ್ದಾನೆ.
ಉಮರನು ತನ್ನ ಪ್ರಿಯತಮೆಯನ್ನು ಎಬ್ಬಿಸುವಾಗ ಸುಂದರ ಮುಂಜಾವಿನ ವರ್ಣನೆಯನ್ನು ಮಾಡುತ್ತ ಅವಳಲ್ಲಿನ ಚೆಲುವು ಒಲವುಗಳ ಸಮ್ಮಿಳಿತವನ್ನೂ ವರ್ಣಿಸಿ ಅವಳನ್ನು ನಿದ್ದೆಯಿಂದೇಳಲು ಪ್ರಚೋದಿಸುತ್ತಿದ್ದಾನೆ.
ಕವಿ ಉಮರನು ಪ್ರತಿಮೆಗಳ ರಾಜ. ಅವನ ಈ ಕಾವ್ಯದಲ್ಲಿ ಪ್ರಿಯತಮೆಯನ್ನು ಬುದ್ಧಿಯ ಸಂಕೇತವಾಗಿ ಬಳಸಿದ್ದಾನೆ.
ಈ ಮೊದಲ ಪದ್ಯದಲ್ಲಿ, ರಾತ್ರಿಯ ತಾಮಸ ಗುಣದ ಪ್ರಭಾವಕ್ಕೆ ಒಳಗಾಗಿ ಜಡತ್ವವನ್ನು ಮೆರೆಯುತ್ತಿರುವ ಬುದ್ಧಿಯನ್ನು ಎಚ್ಚರಿಸಿ, ಜಾಗೃತ ಗೊಳಿಸಿ ನಮ್ಮ ಜೀವನವನ್ನು ಸತ್ಪಥಗೊಳಿಸಲು ಪ್ರಚೋದಿಸುತ್ತಿದ್ದಾನೆ, ದಾರ್ಶನಿಕ ಕವಿ ಉಮ್ಮರ್ ಖಯಾಮ್.
" ಧಿಯೋ ಯೋ ನಃ ಪ್ರಚೋದಯಾತ್ - ಒಂದು ಲೋಕೋತ್ತರ ಪ್ರಾರ್ಥನೆಯಲ್ತೆ.
ರವೀಂದ್ರ ಕುಮಾರ್ ಎಲ್ವೀ.
ಮೈಸೂರು