ನಿನ್ನೊಡನೆ ನಡೆದು ನಾಲ್ಕಡಿಯನಿಡುವುದೆ ಸೊಗವು
ನಿನ್ನ ಬಳಿ ಕುಳಿತೆರಡು ನುಡಿಯ ನುಡಿವುದೆ ಸೊಗವು
ಅದನು ನೀನೊಲ್ಲೆನೆನಲು
ನಿನ್ನ ಸೆರಗಿನ ಗಾಳಿಯಲೆಗೆ ಸಿಗುವುದೆ ಸೊಗವು
ನಿನ್ನ ಕೊರಲುಲಿಯ ಮರೆಯಿಂದಾಲಿಪುದೆ ಸೊಗವು
ಇದನು ನೀನೊಲ್ಲದಿಹೆಯಾ?
ನಿನ್ನ ಚೆಂದುಟಿಯೆನ್ನ ತುಟಿಯ ಸೋಕಲು ಸೊಗವು
ನಿನ್ನ ಕಣ್ಣೆನ್ನ ಕಣ್ಣೊಡನೆ ಬೆರೆಯಲು ಸೊಗವು
ಅದನು ನೀನೊಲ್ಲೆನೆನಲು
ನೀನು ಸೋಕಿದುದ ನಾಂ ಸೋಕಿ ಸುಯ್ದುದೆ ಸೊಗಸು
ನೀನು ನಿಂತೆಡೆ ನಿಂತು ನಿನ್ನ ನೆನೆವುದೆ ಸೊಗವು
ಇದನು ನೀನೊಲ್ಲದಿಹೆಯಾ?
ನಿನ್ನ ಮನವೆನ್ನ ಮನದೊಡನೆ ಬೆರೆಯಲು ಸೊಗವು
ನಿನ್ನ ದನಿಯೆನ್ನ ದನಿಯೊಡನೆ ಪಾಡಲು ಸೊಗವು
ಅದನು ನೀನೊಲ್ಲೆನೆನಲು
ಮರೆಯಿಂದಲಿಣಿಕಿ ನಿನ್ನನು ಹೊಂಚುವುದೆ ಸೊಗವು
ಹೆರರು ನಿನ್ನನು ಹೊಗಳಲದನಾಲಿಪುದೆ ಸೊಗವು
ಇದನು ನೀನೊಲ್ಲದಿಹೆಯಾ?
ನೀನೆನ್ನ ರಾಣಿಯಾಗಾಳುತಿರುವುದೆ ಸೊಗವು
ನೀನೊರೆದ ನಲ್ವಾತಿನಂತೆ ನಡೆವುದೆ ಸೊಗವು
ಅದನು ನೀನೊಲ್ಲೆನೆನಲು
ನಿನ್ನ ಹೆಸರೊಳೆ ಸೊಗವು ನಿನ್ನ ಸೆಳೆಯೊಳೆ ಸೊಗವು
ನಿನ್ನ ಕನಸೊಳೆ ಸೊಗವು ನಿನ್ನ ನೆನಸೊಳೆ ಸೊಗವು
ಇದನು ನೀನೊಲ್ಲದಿಹೆಯಾ?
***********************
ತಾನು ಮೆಚ್ಚಿ ಪ್ರೇಮಿಸುತ್ತಿರುವ ಪ್ರೇಯಸಿಯ ಬಗೆಗೆ ಪ್ರಿಯಕರನ ನವಿರಾದ ಕನಸುಗಳು ಬಣ್ಣಿಸಲಸದಳವು!
ಮನದನ್ನೆಯಾದ ತನ್ನ ಇನಿಯಳೊಡನೆ ಕೈಕೈಹಿಡಿದು ಗುಣಗುಣಿಸುತ್ತಾ ನಾಲ್ಕುಹೆಜ್ಜೆಗಳನ್ನು ಮೆಲುಹೆಜ್ಜೆಗಳನ್ನಿಡುವುದೇ ಬಲುಸೊಗಸು.
ತನ್ನ ಪ್ರೇಯಸಿಯೊಡನೆ ಏಕಾಂತವಾಗಿ ಕುಳಿತು ನಗುನಗುತ್ತಾ ಒಂದೆರಡು ನುಡಿಗಳನ್ನು ನುಡಿಯುವುದರಲ್ಲಿ ಅದೇನೋ ಅನನ್ಯ ಆನಂದ. ಹುಸಿಮುನಿಸಿಂದ ತನ್ನ ನಲ್ಲೆಯು ಒಲ್ಲೆನೆಂದರೆ ಆಕೆಯ ಸೆರಗಿನ ಆಂಚಲವು ಬೀಸಿದಾಗ ಸುಳಿದಾಡುವ ತಂಗಾಳಿಯೇ ಪ್ರೇಮಪಿಪಾಸುವಿಗೆ ಸೊಗಸಿನ ಅನುಭವ.
ಪ್ರೇಯಸಿಯ ಮಾತುಗಳನ್ನು ಕದ್ದುಮುಚ್ಚಿ ಆಲಿಸುವುದರಲ್ಲಿ ಈತನಿಗೇನೋ ಅನೂಹ್ಯವಾದ ಆನಂದ! ಇದನ್ನಾಕೆ ಒಲ್ಲೆ ಎಂದರೂ ಮನದಲ್ಲಿ ಇದನ್ನೇ ಆಶಿಸುವಳೆಂಬ ಕನಸು.
ಚೆಂದುಳ್ಳಿ ಚೆಲುವೆಯೆಂಬ ಕನಸಿನರಾಣಿಯ ಕೆಂದುಟಿಯನ್ನು ತನ್ನ ತುಟಿಗಳು ಸೋಕುವುದೊಂದು ಸ್ವರ್ಗಸುಖವು.
ಮನದನ್ನೆಯ ಕಣ್ಣುಗಳ ಕನ್ನಡಿಯಲ್ಲಿ ತನ್ನ ಕಂಗಳು ಲೀನವಾಗುವುದು ಬಣ್ಣಿಸಲಾಗದ ಸೊಗಸು. ಅದೇನೋ ಬಲುನಾಚುಗೆಯಿಂದ 'ನಾನೊಲ್ಲೆ' ಎಂದು ಪ್ರೇಯಸಿಯು ನಿರಾಕರಣೆಯ ನಾಟಕವಾಡಿದರೆ ಅದೂ ಇನಿಯನಿಗೆ ಸೊಗಸೋ ಸೊಗಸು.
ಹುಸಿಮುನಿಸಿಂದ ಕುಡಿಗಣ್ಣ ನೋಟಬೀರುತ್ತಾ ದೂರಸರಿದರೆ, ಮನದನ್ನೆಯು ಸ್ಪರ್ಶಿಸಿದ ವಸ್ತುಗಳನ್ನು ಸ್ಪರ್ಶಿಸುತ್ತಾ ಅನನ್ಯ ಆನಂದದ ಕನಸುಕಾಣುವನು. ಪ್ರೇಯಸಿಯು ಎಲ್ಲೆಲ್ಲಿ ಓಡಾಡಿರುವಳೋ ಅಲ್ಲೆಲ್ಲ ಅವಳ ರೂಪವನ್ನೇ ಕಾಣುತ್ತಾ ಕನಸುಕಾಣುವುದರಲ್ಲೇ ಕನಸುಗಾರನಿಗೆ ಪ್ರೇಮಾನಂದ! ಪ್ರೇಯಸಿಯು ಇದನ್ನೇ ಹಂಬಲಿಸುತ್ತಾಳೆ ಎಂಬುದೂ ಸೊಗಸೇ!
ತನ್ನ ಚೆಂದುಳ್ಳಿ ಚೆಲುವೆಯ ಮನಸ್ಸು ತನ್ನೊಡನೆ ಬೆರೆಯುವ ಸೊಗಸಿನ ಚಿತ್ರವನ್ನೇ ಮನದಲ್ಲೆ ಮತ್ತೆ ಬರೆದುಕೊಳ್ಳುತ್ತಾನೆ.
ತಾವಿಬ್ಬರೂ ದನಿಗೆ ದನಿಸೇರಿಸಿ ಹಾಡುವಿದೊಂದು ಸೊಗಸು. ಅದನ್ನಾಕೆ ನಿರಾಕರಿಸಿದರೆ, ಮರೆಯಲ್ಲಿ ನಿಂತು ಆಕೆಯ ಸನಿಹಕ್ಕಾಗಿ ಹೊಂಚುಹಾಕುವುದರಲ್ಲೂ ಸೊಗಸೋ ಸೊಗಸು.
ತನ್ನ ಮನದನ್ನೆಯು ರಾಣಿಯಾಗಿ ಮೆರೆಯಬೇಕು. ತಾನವಳ ದಾಸನಾದರೆ, ಅದೂ ಸೊಗಸು. ಇದನ್ನು ಆಕೆಯು 'ಒಲ್ಲೆ' ಎಂದರೆ ಅವಳ ಹೆಸರನ್ನೇ ಗುಣುಗುಣಿಸುತ್ತಾ ಆಕೆಯನ್ನು ಧ್ಯಾನಿಸುವುದರಲ್ಲೂ ಸೊಗಸು. ತನ್ನ ಕನಸಿನರಾಣಿಯ ಬಗೆಗೆ ಕನಸುಗಳನ್ನು ಕಟ್ಟಿಕೊಳ್ಳುವುದರಲ್ಲೂ ಸೊಗಸು. ಕನಸು ನೆನಸುಗಳಲ್ಲೆಲ್ಲಾ ಪ್ರೇಯಸಿಯದೇ ಚಿತ್ರಗಳು. ಪ್ರೇಮಿಯಾದ ಪ್ರೇಯಸಿಯು ಒಲ್ಲೆ ಒಲ್ಲೆ ಎಂದು ಮೇಲ್ನೋಟಕ್ಕೆ ಉಲಿಯುತ್ತಿದ್ದರೂ ಆಕೆಯೂ ಇಂತಹ ಕನಸುಗಳಲ್ಲೇ ದಿನಗಳನ್ನು ವರ್ಷಗಳನ್ನಾಗಿ ಎಣಿಸುತ್ತಿರುವುದನ್ನು ಪ್ರಿಯತಮನು ಬಲ್ಲನು..
ಭಾವಾನುವಾದ: ©️ ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
ಗಾಯನ: ಶ್ರೀಮತಿ ಮಂಗಳ ನಾಡಿಗ
ಗಾಯನ: ಶ್ರೀಮತಿ ಮಂಗಳ ನಾಡಿಗ
To receive the posts on your personal email, pls subscribe to https://groups.google.com/g/todayskagga
No comments:
Post a Comment