Monday, 27 November 2023

ಚೆಲುವಿದ್ದರೇನು? - ಕೇತಕೀವನ - ಡಿವಿಜಿ

ಚೆಂಬೊನ್ನ ಮೈಮಿನುಗು 
ಕಂಬುಕಂಠದ ಸೊಬಗು 
ತುಂಬುನಗುವಿನ ಬೆಡಗು 
ಕಲೆತಿದ್ದರೇನು? 
ಒಲವಿಗೊಲವನು ಕೊಡದ 
ಚೆಲುವಿದ್ದರೇನು? 

ಧರೆಯ ಕೊರಗನು ಕೇಳಿ 
ಕರಗದಿಹ ಕಲ್ಲೆದೆಯ 
ಸುರರ ಮನೆಯಲಿ 
ಸುಧೆಯ ಕಲಶವಿದ್ದೇನು? 
ಒಲವಿಗೊಲವನು ಕೊಡದ 
ಚೆಲುವೆಯಿದ್ದೇನು? 

ಜಗದೆಲ್ಲ ಸವಿಗಳನು 
ಮುಗಿಲಿಗಾನಿಪ ಮರದಿ 
ಕಣ್ಗಿದ್ದು ಬಾಯ್ಗಿರದ 
ಫಲ ಮೆರೆದರೇನು? 
ಒಲವಿಗೊಲವನು ಕೊಡದ 
ಚೆಲುವಿರಲದೇನು? 

ಸ್ವರಭಾವಕನುವಾದ 
ಮರುದನಿಯ ಮಿಡಿವೆದೆಯ 
ಸರಸಿಯಿರದಿರೆ ಗಾನ- 
ಕಲೆಯಿಂದಲೇನು? 
ಒಲವಿಗೊಲವನು ಕೊಡದ 
ಚೆಲುವಿಂದಲೇನು? 

ಉಕ್ಕುವನುರಾಗವನು 
ಅಕ್ಕರೆಯಿನೊಪ್ಪಿಕೊಳೆ 
ತಕ್ಕಳನು ಕಾಣದನ 
ನಲುಮೆಯಿಂದೇನು? 
ಒಲವಿಗೊಲವನು ಕೊಡದ 
ಚೆಲುವಿನಿಂದೇನು?

ಅನ್ಯಾಯಕಾರಿ ವಿಧಿ
ನಿನ್ನ ಕಲ್ಲಾಗಿಸಿರ-
ಲೆನ್ನೊಳೊಲುಮೆಯ 
ಚಿಲುಮೆ ತುಳುಕುತಿದ್ದೇನು?
ಒಲವಿಗೊಲವನು ಕೊಡದ
ಚೆಲುವಿದ್ದೊಡೇನು?

*********************

ಮೆಚ್ಚಿ ಪ್ರೇಮನಿವೇದನೆನ್ನು  ಮುಂದಿಟ್ಟು, ಚೆಲುವೆಯ ಸಕಾರಾತ್ಮಕ ಸ್ಪಂದನದ ಸೂಚನೆಯನ್ನು ಕಾಣದೆ ಸದಾ ಆಕೆಯದೇ ಧ್ಯಾನದಲ್ಲಿ   ಮುಳುಗಿರುತ್ತ, ತೊಳಲಾಡುತ್ತಿರುವ  ಪ್ರೇಮಿಯು, "ಪ್ರೇಮನಿವೇದನೆಯ ಕರೆಗೆ  ಓಗೊಡದಿದ್ದರೆ, ಈ ಚೆಲುವಿದ್ದರೇನು?" ಎಂದು  ಪ್ರಶ್ನಿಸುತ್ತಾನೆ.
 ಆಹಾ! ಹೊಂಬಣ್ಣದಿಂದ ಥಳಥಳಿಸುತ್ತಾ ನೋಡುಗರ ಕಂಗಳ ಬೆಳಕನ್ನು ಹೆಚ್ಚಿಸುವ ಮೈಕಾಂತಿಯವಳು ನೀನು!  ಶಂಖದಂತಹ ಕೊರಳಿನಿಂದ ಶೋಭಿಸುವವಳು. ಗುಳಿಬಿದ್ದ ಕೆನ್ನೆಗಳಲ್ಲಿ ಮೂಡುವ ಚೆಲುನಗುವಿನ ಬೆಡಗುಳ್ಳವಳು. ಆದರೇನು ಒಲವಿನ‌ ಕರೆಗೆ ಸ್ಪಂದನವಿಲ್ಲದ ಈ ರೂಪರಾಶಿಗೆ ಬೆಲೆಯೆಲ್ಲಿ?
 
ಇಂದ್ರನು ಭೂಮಿಗೆ ಮಳೆಸುರಿಸುವನಂತೆ. ಕಾದು ಬೆಂಡಾದ ಈ ಧರಣಿಯ ಕೊರಗಿನ ಕರೆಗೆ ಓಗೊಡದ ಪಾಶಾಣಹೃದಯದ  ಸ್ವರ್ಗದಲ್ಲಿ‌ ಅಮೃತಕಲಶವಿದ್ದರೇನು ಪ್ರಯೋಜನ?  ದಾಹಕ್ಕೆ ಮಳೆಸುರಿಯದ ಮೇಲೆ  ಅಮೃತವಾದರೂ ಏಕೆ?
 
ಒಲವಿನ ಕರೆಗೆ ಸಾಮೀಪ್ಯದ ಮರುದನಿ ನೀಡದ ಚೆಲುವೆಯಿದ್ದರೇನು!? ಚೆಲುವಿಗರ್ಥವಿಲ್ಲವೇ! 
ಜಗತ್ತಿನ ಎಲ್ಲಾ ರೀತಿಯ ಸವಿರುಚಿಯನ್ನು  ಅದೃಶ್ಯವಾಗಿ  ಮುಗಿಲಿಗೆ ನೀಡುವ ಮರದಲ್ಲಿ,  ಕಂಗೊಳಿಸುವ ಮನೋಹರವಾದ ಹಣ್ಣುಗಳಿದ್ದೂ, ಕೈಗೆಟುಕದ  ಗಗನಫಲವಾದರೆ ಅದರಿಂದೇನು ಪ್ರಯೋಜನ!?
   
ನಿನಗಾಗಿ ಹಂಬಲಿಸುತ್ತಾ ಬಳಲಿ ಬೆಂಡಾಗಿರುವ ನನ್ನ ಪ್ರೇಮನಿವೇದನೆಗೆ ಸ್ಪಂದಿಸದೆ  ಮೌನವಾದರೆ, ಈ ನಿನ್ನ ರೂಪರಾಶಿಗೆ ಸಾರ್ಥಕತೆಯಿದೆಯೇ!? 
 
ಸ್ವರಭಾವಕ್ಕನುವಾದ  ಮರುದನಿನೀಡುವ  ಸಹೃದಯತೆಯ ಮಿಡಿತವಿಲ್ಲದಲ್ಲಿ ಹಾಡುವ ಗಾಯನಕ್ಕೆ ಬೆಲೆಯಿಲ್ಲದಾಗುತ್ತದೆ ಎಂಬುದನ್ನು  ಮರೆಯದಿರು.

ಉಕ್ಕೇರುತ್ತಿರುವ ಅನುರಾಗವನ್ನು  ಅಕ್ಕರೆಯಿಂದ ಬಾಚಿ ತಬ್ಬಿಕೊಳ್ಳಲು ತಕ್ಕವಳನ್ನು  ಕಾಣದಿದ್ದ ಮೇಲೆ  ನಲುಮೆ ಒಲುಮೆಗಳಿಗೆ ಅರ್ಥವೆಲ್ಲಿದೆ!?  ಒಲವಿಗೆ ಒಲವಿನ ಸವಿಯನ್ನುಣ್ಣಿಸುವವಳಿಲ್ಲದ ಒಲವಿಗರ್ಥವಿಲ್ಲದಾಗುವುದಲ್ತೆ!  ವಿಧಿಯು ಅನ್ಯಾಯಕಾರಿ! ವಿಧಿಯು ನಿನ್ನನ್ನು ಶಿಲಾಮೂರ್ತಿಯಾಗಿಸಿದ್ದರೆ ನಿನ್ನಲ್ಲಿ ಒಲುಮೆಯ ಚಿಲುಮೆ ಪುಟಿದೇಳುತ್ತಿರಲಿಲ್ಲ. ಒಲವಿಗೆ ಅನುರಾಗದ ಝಣತ್ಕಾರದ ಪೂರಕವಾದ ಸ್ಪಂದನದ ಹೃದಯವಿಲ್ಲದ ಮೇಲೆ  ಈ ಚೆಲುವಿಕೆಗೆ ಅರ್ಥವಿಲ್ಲದಾಯಿತು. ಒಲವು - ಚೆಲುವುಗಳು ನಿರರ್ಥಕವಾದವು! 
ಭಾವಾನುವಾದ : © ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
ಗಾಯನ: ಶ್ರೀಮತಿ ಮಂಗಳ ನಾಡಿಗ

No comments:

Post a Comment