ಆನಂದನಿಧಿ ನೀನು
ಆಕಾಂಕ್ಷೆ ನಾನು
ಅಮೃತವರ್ಷಿಣಿ ನೀನು
ಆಳುಬೀಡು ನಾನು
ನೀನೊರ್ವಳಿಲ್ಲದೆನಗೇನಿರ್ದೊಡೇನು?
ನೀನಿರ್ದೊಡೆನಗೆ ಮತ್ತೇನಿರದೊಡೇನು?
ಸಿರಿಯ ಕಮಲವೆ ನೀನು
ತಿರಿದುಂಬಿ ನಾನು
ಶಶಿಯ ತಿಂಗಳು ನೀನು
ನಿಶಿಮಬ್ಬು ನಾನು
ನಿನ್ನ ಮಧುವಿಂದೆನ್ನ ಹಸಿವು ತೊಲಗುವುದು
ನಿನ್ನ ಕಿರಣದಿನೆನ್ನ ಕುರುಡು ಕಳೆಯುವುದು.
ಸುಳಿವ ಗಾಳಿಯು ನೀನು
ಬಳುಕುವೆಲೆ ನಾನು
ತಿಳಿಹೊಳೆಯ ನೆರೆ ನೀನು
ಕೆಲದ ಹೊಲ ನಾನು
ನಯದಿಂದ ನೀಂ ಸಾರಿ ಬರಲೆನ್ನ ಬಾಳು,
ದಯೆ ತೊರೆದು ನೀನೋಡಲೆನಗೆಲ್ಲ ಪಾಳು.
ವಿಧಿಯ ಲೇಖನಿ ನೀನು
ಬರವ ಹಣೆ ನಾನು
ಅಧಿಕಾರವತಿ ನೀನು
ಅಡಿಯಾಳು ನಾನು
ನಿನ್ನ ತಿಳಿನಗುವೆನ್ನ ಕಣ್ಗಳಿಗೆ ಬೆಳಕು
ನಿನ್ನೊಲಿದ ನುಡಿಯೆನ್ನ ಜೀವಕಿಹ ಬದುಕು.
ಆತ್ಮದೈವವು ನೀನು
ಅರ್ಚಕನು ನಾನು
ಐಶ್ವರ್ಯವತಿ ನೀನು
ಆಶ್ರಿತನು ನಾನು
ಕೊರಗಿ ನಾನಿರೆ ನಿನಗೆ ಸಫಲತೆಯದೆಂತು?
ತೊರೆದು ನೀನಿರಲೆನಗೆ ಪೂರ್ಣತೆಯದೆಂತು?
ನಾನುನಾನೆಂದು ಬಡಬಡಿಸುವ ತುಂಬದ ಬಿಂದಿಗೆಯಾದ 'ನಾನು' ನಿಜವಾದ ಅದೃಷ್ಟವಾದ ಸಿರಿದೇವಿಯ ಮಹಿಮೆಯನ್ನು ಅರಿತು, ಪೂರ್ಣತೆಯತ್ತ ನಡೆಯಲು ಈ ಕವನವು ಪ್ರೇರಣೆ ನೀಡುತ್ತದೆ.
ReplyDeleteಸಿರಿದೇವಿಯು ಆನಂದದ ತವನಿಧಿ. ಆದರೆ, ಆನಂದವನ್ನರಸುವ 'ನಾನು' ಸುಖಭೋಗಗಳನ್ನರಸುತ್ತಾ ಅಮೃತದ ಮಳೆಯ ಸವಿಯನ್ನರಿಯದೆ, ಬೇಕುಬೇಕೆಂಬ ದೀನನಂತೆ ವರ್ತಿಸುತ್ತಿದ್ದೇನೆ.
ಆಳುವದೊರೆಯ ಬೀಡಿನವರಾಗಬೇಕಿರುವ 'ನಾನು' ಊಳಿಗದ ಆಳಿನಂತೆ ಸಿರಿಗಾಗಿ ಹಂಬಲಿಸುತ್ತಿರುವೆನು.
ತಾಯೀ! ಸಿರಿಯರಸನ ಒಡತಿಯಾದ ನಿನ್ನ ಕೃಪಾಕಟಾಕ್ಷವಿಲ್ಲದೆ ಏನಿದ್ದರೆ ಫಲವೇನು!?
ಸಿರಿಸರೋವರದಲ್ಲಿ ರಾರಾಜಿಸುವ ಕಮಲ ನೀನು. ನಿನ್ನೊಡಲಿನ ಮಕರಂದವನ್ನು ಹೀರಲು ತಿರಿತಿರಿದುಣ್ಣಬಯಸುವ ತುಂಬಿ 'ನಾನು'!
ಹುಣ್ಣಿಮೆಯ ಚಂದಿರನತುಂಬುಬೆಳಕು ನೀನು! ಅಜ್ಞಾನಕೊಳೆದುಂಬಿದ 'ನಾನು' ಮಬ್ಬಗತ್ತಲೆಯ ದಾಹವೆ ನಾನು!
ತಾಯೀ! ಕರೆಕರೆದು ನೀನು ಪಸರಿಸುವ ಮಕರಂದವು ಎನ್ನ ಹಸಿವನ್ನು ಹಿಂಗಿಸಬೇಕಿತ್ತು! ಆದರೆ, 'ನಾನು' ನಾನೆಂಬ ಅಹಮಿನ ಕಾರಣದಿಂದ ಎನಗೆ ಸಂತೃಪ್ತಿಯಿಲ್ಲ. ನಿನ್ನ ಕೃಪಾಕಟಾಕ್ಷದಿಂದ ನನ್ನೊಳಗೆ ತುಂಬಿರುವ ಮಬ್ಬುಗತ್ತಲೆಯು ತೊಲಗಿ ಹೊಂಬೆಳಕು ಬೆಳಗಬೇಕು!
ಸುಳಿಯುವ ಮಂದಾನಿಲ ನೀನಾದರೆ, ಬಳುಕುತ್ತಾ ಬಾಗುತ್ತಿರುವ ಪರ್ಣವು ನಾನು!
ಅರಿವಿನ ತೀರಕ್ಕೆ ಕೊಂಡೊಯ್ಯುವ ತಿಳಿಹೊಳೆಯನೆರೆ ನೀನಾದರೆ, ಫಸಲನ್ನು ಬೆಳೆಯಬೇಕಾದ ಹೊಲದಮಣ್ಣು ನಾನು! .
ತಾಯಿ! ಅಕ್ಕರೆ ವಾತ್ಸಲ್ಯದಿಂದ ನೀನು ನನ್ನೆಡೆಗೆ ಬಂದು ಕೈಹಿಡಿದು ಮುನ್ನಡೆಸಿದರೆ ನನ್ನದು ಬಾಳುವ ಬಾಳಾಗುತ್ತದೆ! ನಿನ್ನ ದಯವಿಲ್ಲದಿದ್ದರೆ, ನಾನುನಾನೆಂಬ ಈ ನಿನ್ನ ಕಂದನು ಪೂರ್ಣತೆಯತ್ತ ಮುನ್ನಡೆಯಲು ಸಾಧ್ಯವೇ!? ನಿನ್ನ ವಾತ್ಸಲ್ಯವಿಲ್ಲದೆಡೆ ನಾನೆಡವಿ ಬೀಳುವುದು ನಿಶ್ಚಿತವು!
ನನ್ನ ಜೀವನದ ಸೌಭಾಗ್ಯದ ವಿಧಿಯನ್ನು ಬರೆವವಳು ನೀನು! ನನ್ನ ಹಣೆಯಲ್ಲಿ ಅದೃಶ್ಯವಾಗಿ ನನ್ನ ಏಳುಬೀಳುಗಳನ್ನು ಬರೆಯುವ ಅಧಿಕಾರಿಯು ನೀನೇ! ನಿನ್ನ ಸೇವೆಯನ್ನು ಮಾಡುವ ಊಳಿಗದ ಆಳು ನಾನು! ನಿನ್ನ ಪ್ರೀತಿಯ ನುಡಿಗಳು ನನ್ನ ಜೀವಚೈತನ್ಯಕ್ಕೆ ಪ್ರೇರಣೆ. ಅಮ್ಮಾ! ನನ್ನ ಬದುಕಿನ ದಾರಿಯಲಿ ಮುನ್ನಡೆಸು
ಎನ್ನೊಳಗಿನ ಆತ್ಮಶಕ್ತಿಯು ನೀನು!
ಶಕ್ತಿದೇವತೆಯ ಉಪಾಸಕನಾದ ಭಕ್ತನು ನಾನು!
ಐಸಿರಿದೇವತೆಯು ನೀನು! ನಿನ್ನ ಆಸರೆಯಿಲ್ಲದೆ ನಾನೆಂತು ಬಾಳುವೆನು? ನಾನು ಕೊರಗುವುದನ್ನು ತಾಯಿ ನೀನು ಬಯಸುವುದಿಲ್ಲ!
ನಿನ್ನನ್ನು ಬಿಟ್ಟು ನನಗೆ ಪೂರ್ಣತೆಯತ್ತ ತೊದಲುಹೆಜ್ಜೆಗಳನ್ನಿಡಲು ಸಾಧ್ಯವಿಲ್ಲ! ಅಮ್ಮಾ ನೀನು
ನಾರಾಯಣನ ಸಿರಿದೇವಿಯಲ್ಲವೇ!
ನನ್ನ ತಪ್ಪುಹೆಜ್ಜೆಗಳನ್ನು ಮನ್ನಿಸಿ ಸರಿದಾರಿಯಲಿ ಮುನ್ನಡೆಸಿ ಜೀವನದ ಧನ್ಯತೆಗೆ ಕಾರಣಳಾಗು ಎಂದು ಕಂದನ ಪ್ರಾರ್ಥನೆಯು!
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ