Tuesday, 28 November 2023

ಉಮರನ ಒಸಗೆ - 05 - ಹೊಸವರುಷವೀಗ ಹಳೆಯಾಸೆಗಳ ಬಲಿಸುತಿದೆ

ಹೊಸವರುಷವೀಗ ಹಳೆಯಾಸೆಗಳ ಬಲಿಸುತಿದೆ :

ಜಾನಿಗಳ ಜೀವವೇಕಾಂತವೆಳಸುತಿದೆ:

ಕೊಳದ ತಡಿಯಲಿ ತಳಿರ ಮಲರ ಸೊಂಪಮರುತಿದೆ ;

ದ್ರಾಕ್ಷಿಯಲಿ ಮಾಣಿಕ್ಯರಸವು ಹೊಮ್ಮುತಿದೆ.


ಹೊಸವರುಷವೀಗ ಹಳೆಯಾಸೆಗಳ ಬಲಿಸುತಿದೆ :

ಬಲಿಸು  = ಬಲಪಡಿಸು, ಧೃಢಪಡಿಸು, ನೆಲೆಗೊಳಿಸು, ಉತ್ತೇಜಿಸು, ಪ್ರಚೋದಿಸು.

ಈ ಸಾಲುಗಳು ವಸಂತದೊಂದಿಗೆ ಪ್ರಕೃತಿಯು ನಾವೀನ್ಯತೆಯನ್ನು ಪಡೆಯುವುದನ್ನು ಮಾನವನ ಯೋಚನೆ ಮತ್ತು ಭಾವನೆಗಳ ಜೊತೆ ತಳಕು ಹಾಕಲಾಗಿದೆ.

ಜಾನಿಗಳ ಜೀವವೇಕಾಂತವೆಳಸುತಿದೆ

ಜಾನ = ಧ್ಯಾನ, ಏಕಾಗ್ರ ಚಿತ್ತದಿಂದ ಚಿಂತನೆ ಮಾಡುವುದು.

ಜಾನಿ  = ಧ್ಯಾನ ಮಾಡುವವ, ಯೋಗಿ, ಬುದ್ಧಿವಂತ, ಚಿಂತಕ.

ಪ್ರಕೃತಿಯ ನವ ಪಲ್ಲವವು ಯೋಗಿಗಳ ಮತ್ತು ಚಿಂತಕರ ಮನಸ್ಸನ್ನು ಏಕಾಂತದೆಡೆಗೆ ಸೆಳೆಯುತ್ತಿದೆ.

ಕೊಳದ ತಡಿಯಲಿ ತಳಿರ ಮಲರ ಸೊಂಪಮರುತಿದೆ ;

ತಡಿ = ತಟ, ತಳಿರು =ಚಿಗುರು,

ಮಲರು = ಹೂವು, ಸೊಂಪು = ಚೆಲ್ವಿಕೆ, ಸಮೃದ್ಧಿ, ಸಂತೋಷ.

ಅಮರು = ಆವರಿಸು, ಆಕ್ರಮಿಸು, ತುಂಬಿಕೊಳ್ಳು.

ಕೊಳದ ತಟದಲ್ಲಿ ಮರಗಳ ಚಿಗುರು ಮತ್ತು ಹೂವುಗಳ ಚೆಲ್ವಿಕೆ, ಚಲುವಿಕೆಯು ತುಂಬಿಕೊಳ್ಳುತ್ತಿದೆ.

ದ್ರಾಕ್ಷಿಯಲಿ ಮಾಣಿಕ್ಯರಸವು ಹೊಮ್ಮುತಿದೆ.

ದ್ರಾಕ್ಷಿಯು ಮಾಣಿಕ್ಯ ವರ್ಣದ ರಸದಿಂದ ಕೂಡಿದೆ.

ವಸಂತನ ಆಗಮನದೊಂದಿಗೆ ಹೊಸವರ್ಷ ಬಂದಿದೆ. ಬಂದಿದೆಯಷ್ಟೇ ಅಲ್ಲ ಅದು ಹಳೆಯ ಆಸೆಗಳನ್ನು ಇನ್ನಷ್ಟು ಬಲವಾಗಿಸುತ್ತಿದೆ. ಆ ಆಸೆಗಳ ಈಡೇರಿಕೆಗೆ ಮನಸ್ಸು ಧೃಡವಾಗುತ್ತಿದೆ.  ಪ್ರಕೃತಿಯು ಮತ್ತದೇ ಆಸೆಗಳನ್ನು ಮನಸ್ಸಿನಲ್ಲಿ ನೆಲೆಗೊಳಿಸಿ ತನ್ನ ಹೊಚ್ಚ ಹೊಸತನದ ಮೋಡಿಯಿಂದ ಮನಸ್ಸನ್ನು ಆಸೆಗಳ ಈಡೇರಿಕೆಗೆ ಪ್ರಚೋದಿಸುತ್ತಿದೆ, ಉತ್ತೇಜಿಸುತ್ತಿದೆ.

ಪ್ರಕೃತಿಯು ತನ್ನನ್ನು ತಾನೇ ನವೀಕರಿಸಿಕೊಂಡು ನಳನಳಿಸುವ ವಾತಾವರಣವು ಯೋಗಿಗಳನ್ನು, ಧ್ಯಾನಿಗಳನ್ನು  ಧ್ಯಾನಾಸಕ್ತರನ್ನು, ಗಾಢವಾಗಿ ಆಲೋಚಿಸುವ ಚಿಂತಕರನ್ನು ಏಕಾಂತತೆಗೆ ಆಕರ್ಷಿಸುತ್ತಿದೆ.

ವಸಂತದಲ್ಲಿ ಪ್ರಕೃತಿಯು ಬಣ್ಣ ಬಣ್ಣದ ಚಿಗುರುಗಳನ್ನು, ಹೂವುಗಳನ್ನೂ ಅರಳಿಸಿ ಹೊಸ ಚಲುವನ್ನು ಸೃಷ್ಟಿಸುತ್ತಿದೆ. ಕೊಳದ ತಟದಲ್ಲಿ ನೀರ ಮೇಲೆ ಬೀಸುವ ತಂಗಾಳಿಯಲ್ಲಿ  ಆ ಚಿಗುರುಗಳ, ಹೂವುಗಳ ನವಿರಾದ ಕಂಪು ವಾತಾವರಣವನ್ನು ತುಂಬಿಕೊಂಡು ವಿಹಾರಿಗಳ ಮನಸ್ಸನ್ನು ಉಲ್ಲಸಿತಗೊಳಿಸುತ್ತದೆ.

ತಳಿರು, ಮಲರು, ಸೊಂಪು ಅಮರು ಈ ನಾಲ್ಕು ಶಬ್ದಗಳಲ್ಲಿ ವಸಂತನ ಅಮೋಘ ಚಿತ್ರಣ.

ಇದೇ ಅಲ್ಲವೇ ಪೂಜ್ಯ ಡಿವಿಜಿಯವರ ಶಬ್ದಗಾರುಡಿ.

ದ್ರಾಕ್ಷಿಯಲ್ಲಿ ಮಾಣಿಕ್ಯ ಬಣ್ಣದ ರಸವು ಹೊಮ್ಮಿ ದ್ರಾಕ್ಷಿಯನ್ನು ನೋಡುವುದೇ ಸೊಗಸಾಗಿಸಿದೆ.

ಚಿಗುರು, ಹೂವುಗಳ ನಂತರ ಹಣ್ಣುಗಳು ರಸಭರಿತವಾಗಿ ತೊನೆಯುತ್ತಿವೆ. ಹಣ್ಣುಗಳು ಜೀವರಸದ ಸಂಕೇತ. ಪ್ರಕೃತಿಯಲ್ಲಿ ಜೀವರಸವು ತುಂಬಿ ಹಣ್ಣುಗಳೂ ತಮ್ಮ ತಮ್ಮ ಬಣ್ಣದೊಂದಿಗೆ ಜೀವಾಮೃತವನ್ನು ಕೊಡಲು ಸಿದ್ಧವಾಗಿವೆ.

ದ್ರಾಕ್ಷಿಯ ಮಾಣಿಕ್ಯ ರಸವು ಮಧುವಿಗೆ ಆಧಾರ. ಉಮರನ ಪ್ರತಿಮೆಗಳಲ್ಲಿ ಮಧುವೆಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ.

ವಸಂತನ ಆಗಮನದಿಂದ ಜೀವ ಸಂಕುಲವೆಲ್ಲವೂ ನಳನಳಿತ ಗೊಂಡು, ಆ ಭಗವಂತನ ಸೃಷ್ಟಿಯ ಭಾಗವಾದ ಮಾನವ ಜೀವಿಯನ್ನು ಸೃಷ್ಟಿಕರ್ತ ಭಗವಂತನ ಉಪಾಸನೆಗೆ ಉತ್ತೇಜಿಸುತ್ತಿದೆ, ಪ್ರಚೋದಿಸುತ್ತಿದೆ.

ಮರಗಿಡಗಳಲ್ಲಿ ಚಿಗುರು ನಳನಳಿಸುವುದು, ಹೂಗಳು ನಗುವುದು ಹಣ್ಣುಗಳು ಜೀವ ರಸ ತುಂಬಿ ಹೊಮ್ಮುವುದು ಪ್ರಕೃತಿಯ ನವೀಕರಣದ ವೈಭವನ್ನು ಸಾರುವುದನ್ನು ಈ ಪದ್ಯದಲ್ಲಿ ಅಮೋಘವಾಗಿ ಕಟ್ಟಿ ಕೊಡಲಾಗಿದೆ.

ರವೀಂದ್ರ ಕುಮಾರ್ ಎಲ್ವಿ.

ಮೈಸೂರು

No comments:

Post a Comment