Thursday, 30 November 2023

ಅನಂಗೀಕೃತನ ಶಾಪ - ಕೇತಕೀವನ - ಡಿವಿಜಿ

ಎನ್ನ ಕೈಗೆ ದೊರೆಯದರಲು
ಬಾಡಿ ಬೀಳಲಿ,
ಎನ್ನ ಕಣ್ಣ ತಣಿಸದಿನನು 
ಕಾಡ ಸೇರಲಿ. 

ಎನ್ನ ಬಾಯ್ಗೆ ಬಾರದ ಪಣ್‍ 
ಬೂದಿಯಾಗಲಿ, 
ಎನ್ನ ಮೆಯ್ಯ ಸೋಕದ ಹೊನ್‍ 
ಸೀದುಹೋಗಲಿ. 

ಎನ್ನನುರಿಸಿ ಕುಣಿವ ಕಿಚ್ಚು 
ತಣ್ಣಗಾಗಲಿ, 
ಎನ್ನನಿರಿವ ಮುಳ್ಳುಚುಚ್ಚು 
ನುಣ್ಣಗಾಗಲಿ. 

ಎನ್ನನಣಕಿಪೊಲಪು ಕುಲುಕು 
ಮಂಗನಾಗಲಿ, 
ಎನ್ನ ಕೆಣಕುವೆಲ್ಲ ಥಳುಕು 
ತಂಗಳಾಗಲಿ. 

ಎನ್ನನೊಲ್ಲದಿರುವ ಗರುವ 
ಅಣಗಿಹೋಗಲಿ, 
ಎನ್ನ ಮರುಳನೆನಿಪ ನಗುವು 
ಒಣಗಿಹೋಗಲಿ. 

ಎನ್ನ ಸಾರದಿರುವ ಸೊಬಗು 
ಸೊನ್ನೆಯಾಗಲಿ, 
ಎನ್ನ ಸೇರದಿರುವ ಬೆಡಗು 
ಮಣ್ಣಿಗಾಗಲಿ.

ಎನ್ನ ನುಡಿಗೆ ಮಿಡಿಯದೆದೆಯು 
ಊದಿಹೋಗಲಿ, 
ಎನ್ನ ಮಿಡಿತಕುಲಿಯದುಸಿರು 
ಸೇದಿಹೋಗಲಿ. 

ಎನ್ನ ಹೃದಯದೆಲ್ಲ ಮಮತೆ
 ಬತ್ತಿಹೋಗಲಿ, 
ಚೆನ್ನು ಚೆಲುವು ಒಲವು ನಲಿವು 
ಸತ್ತುಹೋಗಲಿ.

******************

ಪ್ರೇಮನಿವೇದನೆಗೆ ಪೂರಕವಾದ ಪ್ರತಿಸ್ಪಂದನವಿಲ್ಲ. ತೊಳಲಾಡುತ್ತ  ಹಗಲುಗನಸು ಕಾಣುತ್ತಾ ಭ್ರಮನಿರಸನಗೊಂಡ ಭಗ್ನ ಪ್ರೇಮಿಯು ಪ್ರೇಮವೆಂಬ‌ ಮರೀಚಿಕೆಯು ನಾಶವಾಗಲೆಂದು ಶಪಿಸುತ್ತಿರುವ ಚಿತ್ರವು  ಸಹೃದಯನ ಮನಸ್ಸನ್ನು ಕಲಕುತ್ತದೆ.

ದೂರದಿಂದ ಕಂಡ ಮೋಹಕವಾದ ಹೂವು ಕೈವಶವಾಗದ ಮೇಲೆ ಇದ್ದೇನು ಫಲ! ನನ್ನನ್ನು ಮೋಸಗೊಳಿಸಿದಂತೆ ಇನ್ನಾರನ್ನೂ ಹತಾಶರನ್ನಾಗಿ ಮಾಡದಿರಲಿ. ಈ ಹೂವು ಬಾಡಿಸೊರಗಿಹೋಗಲಿ.ನನ್ನ  ಕಣ್ಣುಗಳಿಗೆ ಬೆಳಕು ನೀಡದೆ ಕತ್ತಲೆಯನ್ನು ಕವಿದ ಸೂರ್ಯನು ಕಗ್ಗತ್ತಲೆಯ ಕಾಡನ್ನು ಸೇರಲಿ.

ಕೈಗೆ ಬಂದ  ಹಣ್ಣು ಬಾಯಿಗಿಲ್ಲವಾಯಿತು. ಇಂತಹ ಭ್ರಮಾಲೋಕದ ಹಣ್ಣು ಸುಟ್ಟುಬೂದಿಯಾಗಿ ಹೋಗಲಿ.

ನನ್ನ ಕೈವಶವಾಗದ ಹೊನ್ನಪುತ್ಥಳಿಯು ಸೀದುಹೋಗಲಿ.
ನನ್ನ ತನುಮನಗಳನ್ನು ಬೆಂದು ಬೇಯಿಸುತ್ತಿರುವ ಬೆಂಕಿಯ ಕಾವು ತಣ್ಣಗಾಗಲಿ‌.
ನನ್ನನ್ನು ಅಣಕಿಸುವಂತೆ ಚುಚ್ಚುತ್ತಿರುವ ಮುಳ್ಳಕೊನೆಗಳು ನುಣ್ಣಗಾಗಲಿ.

ನನ್ನನ್ನು ಮರೆಯಲ್ಲಿ ನಿಂತು ಅಣಕಿಸುತ್ತಿರುವ ಒಲವಿನ ಕುಲುಕಾಟವು   ಕಪಿಯಾಗಲಿ. ಸೋತು ಸುಣ್ಣವಾಗಿರುವ ನನ್ನನ್ನು ಕೆಣಕುತ್ತಿರುವ ಥಳುಕು ಬಳುಕಿನ ಮೋಹವೆಂಬ ಮಾಯಾಂಗನೆಯು ಹಳಸಿದ ತಂಗುಳನ್ನವಾಗಲಿ.

ನನ್ನ ಪ್ರೀತಿಯನ್ನು ಆದರಿಸದ ಸ್ವೀಕರಿಸದ  ಗರ್ವದ ಮೊಟ್ಟೆಯು ಕಣ್ಮರೆಯಾಗಲಿ. ಅರ್ಥವಿಲ್ಲದ ನನ್ನ ನಿಸ್ತೇಜವಾದ ನಗುವು‌ ಆವಿಯಾಗಲಿ‌. 

ನನಗೊಲಿಯದ ಸೊಬಗಿನ ಸೋನೆಯು ಪರಮಶೂನ್ಯವಾಗಲಿ. ನನಗೊಲಿಯದ ಬೆಡಗು ಮಣ್ಣಾಗಲಿ.
ನನ್ನ ಪ್ರೇಮನಿವೇದನೆಗೆ ಸ್ಪಂದಿಸದ ಹೃದಯವು ಊದಿಕೊಳ್ಳಲಿ. ನನ್ನ  ಹೃದಯಮಿಡಿತಕ್ಕೆ ಸ್ಪಂದಿಸದ ಉಸಿರು ನಾಶವಾಗಿಹೋಗಲಿ. ನನ್ನ ಮನದಾಳದ ಮಮತೆ ಪ್ರೀತಿಗಳೆಲ್ಲವೂ  ಬತ್ತಿಹೋಗಲಿ.
ಚೆನ್ನು ಒಲವು  ನಲಿವುಗಳೆಲ್ಲವೂ ನಾಶವಾಗಿ ಹೋಗಲಿ.

ಭಾವಾನವಾದ:   ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

No comments:

Post a Comment