ದೆಸೆದೆಸೆಯಿಂ ಸಂಸಾರದ ।
ಬೆಸನಂಗಳ ಮೋಡದೋಳಿ-ಬಾಳಿನ ಬಾನಂ ॥
ಮುಸಿಕಿರಲಾ ಕತ್ತಲೆಯೊಳ್ ।
ಹಸಿತದ ಮಿನ್‍ಮಿನುಗಲಾಗ ಪಥ ಸುಳುವಲ್ತೆ ॥
ಪರಮ ಬ್ರಹ್ಮಸ್ಫುರಣಂ ।
ಸುರನಗರಾಮೋದ ಕಲಕಲ ಪ್ರತಿಕಲನಂ ॥
ಸರಲಹೃದಮೃತಸ್ರವಣಂ ।
ನರನಾರೀತರುಲತಾ ಪ್ರಸೂನಂ ಹಸನಂ ॥
ಭೀರು ನಿರುದ್ಯಮಿ ಮತ್ಸರಿ ।
ನೈರಾಶಿಗನಶುಭಿ ಕೃಪಣ ತಾಮಿವರಳುವರ್ ॥
ಪೌರುಷ ವಿವೇಕಶೀಲಂ ।
ಸ್ಮೇರಾಸ್ಯದೆ ಬಾಳ ಹೊರೆಯ ಲಘುತರವೆನಿಪನ್ ॥
ವನಧಿಯ ಲಂಘಿಪ ಮುನ್ನಾ ।
ವನಧಿಯ ಲಂಘಿಪ ಮುನ್ನಾ ।
ಹನುಮಂತಂ ನಕ್ಕನಲ್ತೆ ಗೋಳಾಡಿದನೇಂ? ॥
ಮುನಿದಾ ಭಾಮೆಗಮಳುವ- ।
ರ್ಜುನಗಂ ಧೃತಿ ಕೃಷ್ಣಮಂದಹಾಸದಿನಲ್ತೇಂ ॥
ಪ್ರೀತಿಯಿನರಲ್ದ ನಗುಗಣ್ ।
ಸೇತುವದದರಿಂದೆ ನಮ್ಮನುಚ್ಛ್ರಯಕೊಯ್ಯಲ್ ॥
ಭೀತಿಯೊಳದೆ ರಕ್ಷಾಮಣಿ ।
ಸೀತೆಯುಮಾ ಕಪಿಯ ಸಾಸದಿಂ ನಸುನಕ್ಕಳ್ ॥
ಸಂಸಾರವು ಸುಖದುಃಖಗಳ ಸಮ್ಮಿಶ್ರಣವು.
ReplyDeleteಆನಂದದ ತೆರೆಗಳೊಡನೆ ಈಜಾಡುತ್ತಾ ಎಲ್ಲೆಡೆ ಸವಿಯನ್ನೇ ಹಂಚಬೇಕೆಂಬ ಕನಸಲ್ಲಿದ್ದಾಗ, ಸುತ್ತೆಲ್ಲ ದುಃಖದ ಮೋಡಗಳ ಛಾಯೆಯು ಹರಡಿರುವುದನ್ನು ಕಾಣುತ್ತೇವೆ. ಎಲ್ಲವೂ ಅವನ ಮಹಾಪ್ರಸಾದವೆಂದು ಸುಖದುಃಖಗಳನ್ನು ಸಮವಾಗಿ ಸಮರ್ಪಣಾಭಾವದಿಂದ ಸ್ವೀಕರಿಸುವವನು ಅಮೃತಪ್ರಾಯನಾಗುತ್ತಾನೆ. ಕತ್ತಲೆಯು ಕಳೆದು ಬೆಳಕಾಗುವುದೆಂಬ ಆಶಾಭಾವನೆಯಿಂದ ಮಿರುಮಿಂಚುವ ಮಂದಹಾಸದ ಬೆಳಕನ್ನು ಸೂಸುತ್ತ ಬಾಳುವುದು ಅನಿವಾರ್ಯ!
ನಗುತ್ತಾ ನಗಿಸುತ್ತ ನಡೆಯುತ್ತಿದ್ದರೆ, ಜೊತೆಗಿದ್ದು ಪಯಣದಲ್ಲಿ ಸಹಕರಿಸುವವರು ಇರುತ್ತಾರೆ. ಅಳಲನ್ನು ಹಂಚದಿರೋಣ,ನಗುವನ್ನು ಹಂಚೋಣ.
ದೇವಲೋಕವು ಸದಾ ಸದಾ ಆನಂದ ಸಂತೋಷ ಆಮೋದಗಳ ಕಲಕಲನಿನಾದಗಳ ಅಲೆಗಳನ್ನೆಬ್ಬಿಸುತ್ತಲಿರುವುದಂತೆ. ಇದು ಪರಬ್ರಹ್ಮನ ಸ್ಪೂರ್ತಿ. ನರನಾರಿಯರೆಂಬ ತರುಲತೆಗಳು ಸರಳತೆಯಿಂದ ಮಂದಹಾಸದ ಚಿಗುರು ಪಲ್ಲವಗಳಿಂದ ನಳನಳಿಸುತ್ತಾ ಎಲ್ಲರನ್ನೂ ತನ್ನೆಡೆಗೆಆಕರ್ಷಿಸುವ ಗುಣವುಳ್ಳವರಾಗಬೇಕು.
ಜೀವನದ ಏರುಪೇರುಗಳಿಗೆ ಹೇಡಿಯಾಗಿ ಬಾಳಬಾರದು. ತಳ್ಳಂಕದಿಂದ ಕರ್ಮಭೀರುವಾಗಿ ಜಡನಾಗಲಾಗದು. ನಿರುದ್ಯಮಿಯಾದವನು ಅವರಿವರ ಏಳಿಗೆಯನ್ನು ಕಂಡು ಮತ್ಸರವೆಂಬ ದೆವ್ವವನ್ನು ಆಹ್ವಾನಿಸಲು ಕಾರಣವಾಗುವುದು. ನೋವುನುರಿತಗಳಿಗೆ ನಿರಾಶೆ, ಹತಾಶೆಗಳು ಉತ್ತರವಲ್ಲ. ತೆರೆಗಳ ಏಳುಬೀಳುಗಳು ಸಹಜವಾದ ಪ್ರಕ್ರಿಯೆ! ಹತಾಶೆಯೆಂಬ ಕತ್ತಲೆಯ ದಾರಿಯಲ್ಲಿ ನಡೆಯುವವನು ಕೃಪಣನಾಗುವನು. ಹತಾಶೆಯ ಕತ್ತಲಿನಿಂದ ಪರಮಬೆಳಕಿನತ್ತ ಮುಖಮಾಡಿ ಮಂದಹಾಸದಿಂದ ಮುನ್ನಡೆಯೋಣ! ತಮಸೋ ಮಾ ಜ್ಯೋತಿರ್ಗಮಯ!
ಪೌರುಷ ವಿವೇಕಗಳೆಂಬ ಪಂಜುಗಳ ಬೆಳಕಿನದಾರಿಯಲಿ ಹೆಜ್ಜೆಗಳನ್ನಿಡೋಣ. ತುಟಿಯಂಚಿನಲಿ ನಗುವಿನಬೆಳ್ಳಿರೇಖೆಗಳನ್ನು ಅಳಿಸಿಕೊಳ್ಳದೆ ಮುನ್ನಡೆಯುತ್ತಿರುವಾಗ ಶಿರವು ಹೊತ್ತ ಭಾರವು ಲಘುವೆನ್ನಿಸುವುದು ಸಹಜ! ನಗುವಿದ್ದಲ್ಲಿ ಸಂಗಾತಿಗಳಿರುವರು.
ಸಮುದ್ರಲಂಘನದ ಮುನ್ನುಡಿಯಾಗಿ ಹನುಮಂತನು ಆತ್ಮವಿಶ್ವಾಸದಿಂದ ಬೆಟ್ಟವನ್ನೇ ಬೆಳಗಿಸುವಂತೆ ನಕ್ಕನಂತೆ. ಯಾರಿಗೂ ಬಾರದ ಈ ಸಾಹಸದ ಸವಾಲು ನನಗೇ ಬರಬೇಕೇ ಎಂದು ಗೋಳಾಡದೆ ಬಂದ ಸವಾಲನ್ನು ನಗುನಗುತ್ತಾ ಕಪಿಸೇನೆಗೆ ಉತ್ಸಾಹದ ರೋಮಾಂಚನದ ಪುಳಕವನ್ನೆಬ್ಬಿಸುತ್ತಾ ಸಮುದ್ರಲಂಘನವನ್ನು ಸಾಧಿಸಿದನು. ಮುನಿಸುಗೊಂಡ ಸತ್ಯಭಾಮೆಗೆ ಶ್ರೀ ಕೃಷ್ಣನ ಮಂದಹಾಸದ ನವಿಲುಗರಿಯ ಸ್ಪರ್ಶವು ಉತ್ಸಾಹವನ್ನು ಕುದುರಿಸಿತು. ರಣರಂಗದಲಿ ಧೃತಿಗೆಟ್ಟು ಗಾಂಡೀವವನ್ನು ಚೆಲ್ಲಿ ಹೇಡಿಯಂತೆ ಬಂಧುಗಳನ್ನು ಕೊಲ್ಲಲಾರೆ ಎಂದು ಮೂಲೆಸೇರಿದಾಗ, ಶ್ರೀ ಕೃಷ್ಣನ ಮಂದಹಾಸವೇ ಅರ್ಜುನನ್ನು ಬಡಿದೆಬ್ಬಿಸಿತು. ಕರ್ತವ್ಯಪ್ರಜ್ಞೆಯ ಹೊಸಚೈತನ್ನು ಮೂಡಿಸಿತು.
ಒಳಪ್ರೀತಿಯಿಂದ ಅರಳಿದ ಕಣ್ಣೋಟವೇ ಶ್ರೇಯಸ್ಸಿನ ಸೇತುವೆ. ಭೀತಿಯಿಂದ ಹಿನ್ನಡೆಯಲ್ಲಿದ್ದಾಗ ಮಂದಹಾಸದ ನಗುವು ರಕ್ಷಾಮಣಿಯು. ಸೀತೆಯು ಭೀತಿಯಲ್ಲಿ ನಿರಾಶೆಯ ಕಾಳಕತ್ತಲೆಯಲ್ಲಿದ್ದಾಗ, ಉತ್ಸಾಹದಿಂದ ಆಶಾಜ್ಯೋತಿಯಂತೆ ರಕ್ಷಣಾಮಣಿಯಂತೆ ಸಾಹಸವನ್ನು ಮೆರೆದು ಅಶೋಕವನಕ್ಕೆ ಬಂದ ಕಪಿವೀರನನ್ನು ಕಂಡು ಜಾನಕಿಯು ನಸುನಕ್ಕಳಲ್ಲವೇ!
ಕತ್ತಲಲ್ಲೂ ಬೆಳಕಿನಡೆಗೆ ಚೈತನ್ಯವನು ಕುದುರಿಸುವ ನಗುವು ನಮ್ಮದಾಗಿರಲಿ ಎಂಬುದು ಕವಿವರನ ದಿವ್ಯಸಂದೇಶ.
ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ