ನೂರಾರು ದೂರುಗಳ ಹೇಳಿದರು ನಿನಗವರು,
ಸಲಸಲವು ಹಳಿದರೆನ್ನ,
ಎನ್ನ ಜೀವದ ನೋವದೇನೆಂದು ತಿಳಿಯದರು;
ಅವರ ನುಡಿ ನಿನಗೆ ಚೆನ್ನ.
ನೀನವರ ಕರುಬುಮಾತನು ಕೇಳಿ ಕೆರಳಿರುವೆ
ದಿಟವನರಸದೆಯೆ ಮುಳಿದು;
ಕಟ್ಟುಕತೆ ನಿಟ್ಟುಸಿರುಗಳಿಗೆ ಮರುಳಾಗಿರುವೆ
ಎನ್ನೆದೆಯ ನಿಜವ ಮರೆತು.
ಅವರ ಕಣ್ಗಳವಡದ ತಪ್ಪೆನ್ನೊಳೊಂದಿಹುದು
ಈಯೆದೆಯೊಳಾಳವಾಗಿ;
ಆ ತಪ್ಪಿನಿಂದೆನ್ನ ಬಾಳೆಲ್ಲ ನೊಂದಿಹುದು;
ಆ ಹಂಬಲೊಲುಮೆಗಾಗಿ.
ಒಲವು ನಿಲುವಿನ ನಡುವಣ ವಿರಸದಿ ನೊಂದ ಇನಿಯೆಯೊಬ್ಬಳ ಇನಿಯನ ತಪ್ಪು ಗ್ರಹಿಕೆ ಯ ಕುರಿತು ಮೂದಲಿಕೆಯ ಆರೋಪದ ಚಿತ್ರಣವನ್ನು ಡಿವಿಜಿ ಅವರು ಅನಾವರಣಗೊಳಿಸಿದರು.
ReplyDeleteನನ್ನನ್ನು ಕುರಿತು ನಿನ್ನಲ್ಲಿ ನೂರಾರು ದೂರುಗಳನ್ನು ನೀಡಿರಬೇಕು. ಪ್ರತಿಯೊಂದು ದೂರಲ್ಲೂ ನನ್ನ ಬಗೆಗೇ ಹಳಿದಿರಬೇಕು. ನನ್ನದೇ ತಪ್ಪುಸಾಸಿರಗಳನ್ನು ಲೆಕ್ಕಿಸಿರಬೇಕು. ನಿನ್ನದೇನಾದರೂ ತಪ್ಪುಗಳಿರಬಹುದೇ ಎಂದು ಒಂದಿನಿತೂ ಯೋಚಿಸಲಾರದಾದೆ ನೀನು.
ನನ್ನಮನದ ವೇದನೆಯ ಬನ್ನವನ್ನು ಏನೆಂದು ಒಂದಿನಿತೂ ಯೋಚಿಸಿರಲಾರದಾದೆ ನೀನು. ನನ್ನ ನೋವನ್ನು ಅರಿಯದಿದ್ದರೂ ಅವರ ದೂರಿನ ಮಾತುಗಳೇ ನಿನಗದೆಂತು ಚೆನ್ನಾಯಿತು!?
ನನ್ನನ್ನು ಅರಿಯುವಲ್ಲಿ ಎಡವಿರುವ ನೀನು
ಅವರ ಹೊಟ್ಟೆಕಿಚ್ಚಿನ ಚಾಡಿ ಮಾತುಗಳನ್ನು ನಂಬಿ ಕೆರಳಿರುವೆ. ನಿಜವನ್ನು ತಿಳಿಯದೆ ನನ್ನ ಬಗೆಗೆ ಕೋಪಿಸಿಗೊಂಡಿರುವೆ.
ಕಾಗಕ್ಕ ಗುಬ್ಬಕ್ಕ ಕಟ್ಟುಕತೆಗಳನ್ನು ಕೇಳಿ ನಿಟ್ಟುಸಿರು ಬಿಡುತ್ತಾ ಇಂತಹ ರಂಜನೆಯ ಕತೆಗಳಿಗೆ ಮರುಳಾಗಿಹೋಗಿರುವೆಯಲ್ಲ. ನನ್ನೆದೆಯ ವೇದನೆಯ ಬಿಸುಪನ್ನು ಅರಿಯದೆ ಹೋದುದು ವಿಷಾದಾಂತವಲ್ಲವೇ!?
ನೋಡುಗರ ಕಂಗಳಿಗೆ ಗೋಚರಿಸದ ತಪ್ಪೊಂದು ನನ್ನಲ್ಲಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈ ಎದೆಯೊಳಗೆ ಆಳವಾಗಿ ನಾಟಿರುವ ಆ ತಪ್ಪಿಂದ ನನ್ನ ಜೀವನವಿಡೀ ನೊಂದು ಬೆಂದಿರುವೆ. ಆ ಹಂಬಲವು ಇನ್ನೇನು ನಿನ್ನ ಒಲುಮೆಗಾಗಿ.
ಭಾವಾನುವಾದ- ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ