ಮಾಂದಳಿರ ಸವಿಯುಂಡು ಮೈ ಮರೆತ ಬುಲ್ಬುಲನು
ಚೆಲು ಗುಲಾಬಿಯ ನನೆಯನರಳಿಸಲ್ಕೆಂದು,
ನಗು ನಗುತೆ ಕುಣಿದಾಡಿ ಪಾಡುತಿಹನ್, ಆಲೈಸು :
ಕಳ್ಳು, ಚೆಂಗಳ್ಳು, ಸವಿಗಳ್ಳು ಕಳ್ಳಿನಂತೆ.
ಮಾಂದಳಿರು - ಮಾವಿನ ಚಿಗುರು.
ಬುಲ್ಬುಲ = ಬುಲ್ಬುಲ್ ( ನೈಟಿಂಗೇಲ್ ) - ಒಂದು ಹಾಡು ಹಕ್ಕಿ,
ನನೆ = ಮೊಗ್ಗು,
ಪಾಡು = ಹಾಡು,
ಕಳ್ಳು = ಮಧು, ಮದ್ಯ.
ವಸಂತನ ಆಗಮನವಾದಾಗ ಪ್ರಕೃತಿಯಲ್ಲಿ ಎಲ್ಲ ಗಿಡ ಮರಗಳು ಹೊಸ ಚಿಗುರಿನಿಂದ ನಳನಳಿಸುತ್ತವೆ.
ಮಾವಿನ ಚಿಗುರಿನ ಅಂದವೇ ಬೇರೆ. ಮಾವಿನ ಚಿಗುರು ಎಲೆಗಳು ನೇರವಾಗಿ ಹಸಿರು ಬಣ್ಣ ಹೊಂದುವುದಿಲ್ಲ. ಆರಂಭದಲ್ಲಿ ಅವು ಕೆಂಪು ಮಿಶ್ರಿತವಾಗಿದ್ದು ಕ್ರಮೇಣ ಗಿಣಿ ಹಸಿರಿಗೆ ತಿರುಗಿ ಕೊನೆಗೆ ಗಾಢ ಹಸಿರನ್ನು ಹೊಂದುತ್ತವೆ.
ಮಾವಿನೆಲೆಗಳು ಕೆಂಪು ಮಿಶ್ರಿತ ಬಣ್ಣದಿಂದ ಮಿರುಗುವಾಗ ಅವು ಬಹಳ ತೆಳುವಾಗಿದ್ದು ಗಾಳಿಯ ಸಣ್ಣ ಬೀಸುವಿಕೆಗೂ ಬಳುಕುತ್ತ ತಮ್ಮ ಸಿಹಿಯಾದ ಕಂಪಿನಿಂದ ಹಕ್ಕಿಗಳನ್ನು ಆಕರ್ಷಿಸುತ್ತವೆ.
ಹಾಗೆ ಮಾವಿನ ಚಿಗುರಿನ ಮೋಹಕ ಕೆಂಪಿಗೂ, ಅದರ ಮಧುರ ಕಂಪಿಗೂ ಮನಸೋತು ಬರುವ ಹಕ್ಕಿ ಬುಲ್ಬುಲ್ ಹಕ್ಕಿ.
ಹೀಗೆ ಮಾವಿನ ಚಿಗುರ ಕಂಪಿನ ಸವಿಯನ್ನು ಸವಿದ ಬುಲ್ ಬುಲ್ ಹಕ್ಕಿಯು, ಆ ಸವಿಗೆ ಮಾರು ಹೋಗಿ ಮೈ ಮರೆತು ಚಲುವಾದ ಗುಲಾಬಿಯ ಮೊಗ್ಗನ್ನು ಅರಳಿಸಲೆಂದು ನಗು ನಗುತ ಕುಣಿದಾಡಿ ಹಾಡುತಿದೆ.
ಬುಲ್ಬುಲ್ ಹಕ್ಕಿಗೂ ಗುಲಾಬಿಗೂ ಒಂದು ಆಶ್ಚರ್ಯಕರ ಸಂಬಂಧವಿದೆ.
ಪರ್ಷಿಯಾ ದೇಶದ ಜಾನಪದ ಕಥೆಯೊಂದರಂತೆ ನೈಟಿಂಗೇಲ್ ಅಥವಾ ಬುಲ್ಬುಲ್ ಹಕ್ಕಿಯು ಮೂಲತಃ ಬಹಳ ಚನ್ನಾಗಿಯೇನು ಹಾಡುತ್ತಿರಲಿಲ್ಲ ಹಾಗೂ ಎಲ್ಲ ಗುಲಾಬಿಗಳು ಬಿಳೀ ಬಣ್ಣದವಾಗಿದ್ದವು.
ಒಂದು ದಿನ ಬಿಳೀ ಗುಲಾಬಿಯನ್ನು ಕಂಡು ಬುಲ್ಬುಲ್ ಹಕ್ಕಿಯು ಗುಲಾಬಿಯ ಅಂದಕ್ಕೆ ಮನಸೋತು ಗುಲಾಬಿಯನ್ನು ಆಳವಾಗಿ ಪ್ರೀತಿಸತೊಡಗಿತು. ಆಗಲೇ ಚಮತ್ಕಾರವೆಂಬಂತೆ ಬುಲ್ಬುಲ್ ಮಧುರವಾಗಿ ಹಾಡಲಾರಂಭಿಸಿತು.
ಅಷ್ಟೇ ಅಲ್ಲ, ಬುಲ್ಬುಲ್ ಗುಲಾಬಿಗೆ ತನ್ನ ಪ್ರೇಮ ನಿವೇದನೆ ಮಾಡಲು ನಿರ್ಧರಿಸಿತು. ಆಗ ಹಾಡುತ್ತಾ ತನ್ನ ಶರೀರವನ್ನು ಗುಲಾಬಿಗೆ ಒತ್ತುವಾಗ, ಮುಳ್ಳೊ0ದು ಬುಲ್ಬುಲನ ಹೃದಯಕ್ಕೆ ಚುಚ್ಚಿ ಅದರ ರಕ್ತವು ಗುಲಾಬಿಯ ಮೇಲೆಲ್ಲಾ ಚಲ್ಲಿತು.
"ಗುಲಾಬಿಯು ಕೆಂಪಾಯಿತು."
ಬುಲ್ಬುಲನ ಪ್ರೇಮದ ಬಲಿದಾನದಿಂದ ಕೆಂಪು ಗುಲಾಬಿಯ ಸೃಷ್ಟಿಯಾಯಿತು.
ಅಂದಿನಿಂದ ಬುಲ್ಬುಲ್ ಹಕ್ಕಿಗಳು ಮಧುರವಾಗಿ ಹಾಡುವುದನ್ನು ಕೇಳಿ ಕುಣಿಯುವುದನ್ನು ನೋಡಿ ಗುಲಾಬಿಯ ಮೊಗ್ಗುಗಳು ಸಂತೋಷದಿಂದ, ಅರ್ಪಣಾ ಭಾವದಿಂದ ಅರಳಿ ಬುಲ್ಬುಲಗಳ ಪ್ರೀತಿಗೆ ಸ್ಪಂದಿಸುವುದು ನಿರಂತರವಾಯಿತು.
ಈ ಸಂಬಂಧದ ಮತ್ತೊಂದು ಪ್ರಕೃತಿ ವೈಚಿತ್ರವೆಂದರೆ ಗುಲಾಬಿಗಳು ಅರಳುವ ವಸಂತ ಕಾಲದಲ್ಲಿ ಬುಲ್ಬುಲ್ ಹಕ್ಕಿಗಳು ಪರ್ಷಿಯಾಕ್ಕೆ ವಲಸೆ ಬರುತ್ತವೆ ಮತ್ತು ಗುಲಾಬಿಗಳನ್ನು ಕಂಡು, ಕುಣಿದು,
ಹಾಡಿ,
ನಲಿಸಿ,
ಅರಳಿಸಿ,
ಆನಂದಿಸಿ
ಗುಲಾಬಿಗಳ ಕಾಲ ಮುಗಿದಾಗ ಮರಳುತ್ತವೆ.
ಮಾವಿನ ಚಿಗುರಿನ ಕೆಂಪಿನ ಕಂಪನ್ನು ಉಂಡ ಬುಲ್ಬುಲನು ಮಧು ಅಥವಾ ಮದ್ಯವನ್ನು ಕುರಿತು ಹಾಡುತ್ತದೆ.
ಕಳ್ಳು - ಮದ್ಯ- ಮಧು
ಚೆಂಗಳ್ಳು - ಕೆಂಪು ಮದ್ಯ - ಕೆಂಪು ಮಧು
ಸವಿಗಳ್ಳು - ಸವಿಯಾದ ಮದ್ಯ - ಸವಿಯಾದ ಮಧು.
ಕಳ್ಳು - ಚೆಂಗಳ್ಳು - ಸವಿಗಳ್ಳು ಎನ್ನುತ್ತ ಪುನರಾವರ್ತನೆ ಮಾಡಿದರೆ ಅದು ಬುಲ್ಬುಲನ ಹಾಡಿನಂತಯೇ ಧ್ವನಿಸುತ್ತದೆ.
ಅಲ್ಲದೇ ಉಮರನು ಬಳಸಿರುವ ಪ್ರತಿಮೆಗಳಂತೆ ಮಧು ಎಂದರೆ ಭಗವಂತನ ಉಪಾಸನೆಯಿಂದ ಆಗುವ ಆನಂದ.
ಆದ್ದರಿಂದ ಮಧುವನ್ನು ಕುರಿತು ಹಾಡುವುದು ದೇವರ ಕುರಿತು ಹಾಡುವಷ್ಟೇ ಮಹತ್ವದ್ದು, ದೇವರ ಉಪಾಸನೆಯ ಒಂದು ಭಾಗ ಎಂಬ ಉಮರನ ದೃಷ್ಟಿಕೋನವನ್ನೂ ಈ ಪದ್ಯದಲ್ಲಿ ಕಾಣಿಸಲಾಗಿದೆ.
ರವೀಂದ್ರ ಕುಮಾರ್ ಎಲ್ವಿ
ಮೈಸೂರು.
No comments:
Post a Comment