ಕಾಣದಿರೆ ಕೊರಗುವುದು;
ಕಾಣುತಿರೆ ಕೆರಳುವುದು :
ಎನ್ನೆದೆಯು ಚೆನ್ನರಸಿ ನಿನ್ನನೆಳಸಿ,
ಏನು ಬೇಹುದೊ ಅದಕೆ
ನೀನರಿಯಲಹುದದನು
ತಳ್ಕೈಸು ಬಾಳ್ಕೆ ಬೇಳ್ಪರುಮೆಯಿರಿಸಿ.
*********************
*********************
ಪ್ರೇಯಸಿಯ ಸನಿಹವನು ಹಂಬಲಿಸುತ್ತಿರುವ ಪ್ರೇಮಿಯು ಪ್ರೇಮವನು ಬಲಿಕೊಡಬೇಡ ಎಂದು ಅಳಲನ್ನು ತೋಡಿಕೊಳ್ಳುತ್ತಿದ್ದಾನೆ.
ನಿನಗಾಗಿ ಹಂಬಲಿಸುತ್ತ ಸೊರಗಿರುವ ನಿನ್ನರಸ ನಾನು ನಿನ್ನನ್ನು ಕಾಣದೆ ಕೊರಗುತ್ತಿರುವೆ.
ನಿನ್ನ ಸನಿಹದಿಂದ ಈ ನನ್ನ ತನುಮನಗಳು ಅರಳುತ್ತ ಕೆರಳುತ್ತ ಕುಣಿಯಲಾಶಿಸುವುದು.
ಈ ನನ್ನ ಹೃದಯವು ಚೆನ್ನರಸಿಯಾದ ನಿನ್ನ ಸಾಮೀಪ್ಯವನ್ನೆಳಸುತ್ತ , ನಿನ್ನ ಸನಿಹಕ್ಕಾಗಿ ಬೇಹುಗಾರಿಕೆಯಲ್ಲಿ ನಿರತನು. ಒಲವಿನಸೆಳೆತವೆಂಬುದು ಅದೆಂತಹ ಗೂಢಚಾರನೆಂಬುದನ್ನು ಚೆನ್ನನ್ನೇ ಅರಸುತ್ತಿರುವ ನೀನೂ ಬಲ್ಲೆ.
ನಮ್ಮಬಾಳುವೆಯ ಸುವರ್ಣಸೇತುವೆಯಾಗಿ ಬಾ! ನಿನ್ನ ಬಿಸಿಯಪ್ಪುಗೆಯು ಬಾಳಿಗೆ ಸಾರ್ಥಕತೆಯನ್ನುಂಟುಮಾಡಲಿ. ನಮ್ಮ ಒಲವಿನದೀಪವು ದಿವ್ಯ ಸಮರ್ಪಣೆಯ ಯಜ್ಞವಾಗಲಿ. ವ್ಯರ್ಥವಾದ ಬಲಿಯಾಗದಿರಲಿ.
ಭಾವಾನುವಾದ : ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
No comments:
Post a Comment