(೧) ಪ್ರಶ್ನೆ
“ಏನಿದೆಲೆ ಸುಕುಮಾರ, ಬಾಡಿ ಬಿಳುಪೇರಿರುವೆ;
ಮೈಯಲ್ಲಿ ಬೇನೆಯೇನು?
ಏನಿಂತು ಬೆಂಗಾಡೊಳೊಬ್ಬನೇ ಬಳಸುತಿಹೆ;
ಜೀವಕ್ಕೆ ನೋವದೇನು?”
“ನೀರಿಲ್ಲ, ನೆರಳಿಲ್ಲ, ಹಕ್ಕಿಗಳ ಹಾಡಿಲ್ಲ;
ದೊರೆಮಗನಿಗಿತ್ತಲೇನು?
ಏನ ನೀಂ ಚಿಂತಿಸುತ ಬಳಲಿ ಬಸವಳಿದಿರುವೆ?
ಜೀವಕ್ಕೆ ನೋವದೇನು?"
“ಜ್ವರದಿಂದ ನಿನ್ನ ಹಣೆ ಬೆಮರಿ ಹನಿಕವಿದಿರುವ
ಬೆಳ್ನೆಯ್ದಿಲಂತೆ ಇಹುದು;
ಬಾಡಿದೊಂದು ಗುಲಾಬಿಯೆಸಳು ಬೇಗದಿ ನಿನ್ನ
ಕೆನ್ನೆಯಲಿ ಕಂದುತಿಹುದು.”
(೨) ಉತ್ತರ
“ಹಸಿರು ಬಯಲಲಿ ಕಂಡೆ ನಾನೋರ್ವ ರಮಣಿಯನು,
ಬಲು ಚೆಲುವೆ, ರತಿಯ ಮಗಳು;
ನೀಳಾದ ತಲೆನವಿರು, ಹಗುರಾದ ಕಾಲ್ನಡಿಗೆ
ಬೆರಗು ತುಂಬಿದ ಕಂಗಳು.
“ಅವಳ ತಲೆಗಾನೊಂದು ಪೂಸರವ ಕಟ್ಟಿದೆನು,
“ಅವಳ ತಲೆಗಾನೊಂದು ಪೂಸರವ ಕಟ್ಟಿದೆನು,
ಪರಿಮಳದ ಬಳೆಡಾಬನು
ತೊಡಿಸಿದೆನು ನೋಡುತವಳೊಲಿದಳಂತುಸಿರಿದಳು
ಮುದ್ದಾದ ಮುಲುಕುಗಳನು."
“ಕುಣಿವೆನ್ನ ಹಯದ ಮೇಲವಳ ಕುಳ್ಳಿರಿಸಿದೆನು;
ನಾನರಿಯೆ ಬೇರೆಯೊಂದ.
ಅತ್ತಿತ್ತಲವಳೋರೆ ಬಾಗುತ್ತ ಹಾಡಿದಳು
ಮೋಹಿನಿಯ ಗೀತವೊಂದ."
“ಅವಳೆನಗೆ ತಂದಿತ್ತಳಿನಿಕಂದಮೂಲಗಳ,
ಕಾಡುಜೇನಮರ್ದುಪನಿಯ;
ಒಂದು ಹೊಸ ಭಾಷೆಯಲಿ ದಿಟದಿ ಪೇಳಿದಳಿಂತು;
‘ಒಲವೆನಗೆ ನಿನ್ನೊಳಿನಿಯ.’ "
“ಅವಳೆನ್ನ ತನ್ನ ಕಿರು ಯಕ್ಷಿಗವಿಗೊಯ್ದಲ್ಲಿ
ಮರುಗಿ ಬಿಸುಸುಯ್ದಳಳುತ.
ಅವಳ ಬೆರಬೆರಗು ಕಂಗಳನಾಗ ಮುಚ್ಚಿದೆನು
ಮುತ್ತುಗಳ ನಾಲ್ಕನಿಡುತ."
“ಅವಳೆನ್ನ ನಿದ್ರಿಸಲು ತಟ್ಟಿ ಜೋಗುಟ್ಟಿದಳು
ಕಂಡೆ ನಾಂ ಕನಸಿನಲ್ಲಿ
ಹಾ, ಕೆಟ್ಟೆನದುವೆನಗೆ ಕಟ್ಟಕಡೆ ಕನಸಾಯ್ತು
ಮಲೆಬದಿಯ ತಣ್ಪಿನಲ್ಲಿ."
“ಕಂಡೆನರಸನರಸುಕುವರರನು, ವೀರರನು;
ಬಿಳುಪೇರ್ದರೆಲ್ಲ ಸಾವೊಲ್
ಅವರೆಲ್ಲರಿಂತೆಂದರ್ : ‘ಈ ರಮಣಿ ನಿಷ್ಕರುಣಿ;
ಪಿಡಿದಿಹಳು ನಿನ್ನ ಸೆರೆಯೊಳ್.’"
“ಇಂತೆಚ್ಚರಿಸಲವದಿರೊಣಗುತುಟಿಯಗಲಾಯ್ತು
ಬೆಚ್ಚಿಸುತ ಮಸಕಿನಲ್ಲಿ;
ನಾನೆಳ್ಚರಂಗೊಂಡು ಕಾಣುತಿಹೆನೆನ್ನನೀ
ಮಲೆಬದಿಯ ತಣ್ಪಿನಲ್ಲಿ."
“ಆದುದರಿನಾನಿಂತು ಸುಳಿದಾಡುತಿಹೆನಿಲ್ಲಿ
ಮೈಯಲ್ಲಿ ಬೇನೆಯಾಂತು;
ನಾನಿಂತು ಬೆಂಗಾಡೊಳೊಬ್ಬನೇ ಬಳಸುವೆನು
ಜೀವದಲಿ ನೋವನಾಂತು."
*****************
(೧) ಪ್ರಶ್ನೆ
ಎಲೈ ಕುಮಾರನೆ! ಇದೇಕೆ ಬಾಡಿ ಬಿಳುಪೇರಿದ ಹೂವಿನಂತಾಗಿರುವೆ? ಅದೇನೋ ಕಾಡುತ್ತಿರುವ ಚಿಂತೆಯ ಕಾವು ನಿನ್ನ ತನುಮನಗಳನ್ನು ಒಣಗಿಸುತ್ತಿರುವುದನ್ನು ಕಾಣುತ್ತಿದ್ದೇನೆ. ಮೈಯಲ್ಲಿ ಅದಾವ ಬೇನೆಯೂ ಇಲ್ಲವಷ್ಟೆ.
ಇದೇಕೆ ಮರುಭೂಮಿಯ ಕಾವಿನಲ್ಲಿ ಕಾಯುತ್ತಾ ಬಳಲುತ್ತಿರುವಂತೆ ಕಾಣುತ್ತಿದ್ದೇನೆ. ಅದಾರದೋ ಒಬ್ಬಳ ನಿರೀಕ್ಷೆಯಲ್ಲಿ ಅವಳ ಆಗಮನಕ್ಕಾಗಿ ಕಾಯುತ್ತಾ ಕಾಯುತ್ತಾ ದೇಹ ಮನಸ್ಸುಗಳ ಕಾವು ಏರುತ್ತಾ ಒಣಗಿರುವಂತಿದೆ. ಜೀವನಕ್ಕಾದ ನೋವು ಅದೇನೆಂದು ಹೇಳಬಾರದೇ?
ದೇಹದ ದಾಹವನ್ನು ಹಿಂಗಿಸಲು ನೀರಿನಾಸರೆಯಿಲ್ಲ. ಕಾಯುತ್ತಿರುವ ದೇಹವನ್ನು ರಕ್ಷಿಸಲು ನೆರಳಿನ ಆಸರೆಯಿಲ್ಲ. ಗಿಡಮರಗಳಿಲ್ಲ. ತರುಲತೆಗಳ ತನಿಗಾಳಿಯ ಸೋಂಕಿಲ್ಲ. ಹಕ್ಕಿಗಳ ಕಲರವಗಳಿಲ್ಲ. ನೋಡುಗರಿಗೆ ದೊರೆಮಗನಂತಿರುವೆ. ಇಂತಹ ಸುಕುಮಾರನು ಈ ರೀತಿಯಲ್ಲಿ ಕುಂದಿರಲು ಕಾರಣಗಳು ಏನಿರಬೇಕು?
ನೀನೇಕೆ ಬಳಲಿ ಬಸವಳಿದಿರುವೇ? ಜೀವನದಲ್ಲಿ ಗಾಢವಾದ ನೋವು ನುರಿತವದೇನು!? ಹೇಳಬಾರದೆ!?
ಜ್ವರದಿಂದ ನಿನ್ನ ಹಣೆಯಲ್ಲಿ ಬೆವರಹನಿಗಳು ಮಿನುಗುತ್ತಿವೆ. ಬೆವರಹನಿಗಳಿಂದ ಕೂಡಿದ ನಿನ್ನ ವದನಾರವಿಂದವು ಬಾಡಿದ ನೈದಿಲೆಯಂತೆ ಕಪ್ಪಿಟ್ಟಿದೆ. ಬಾಡಿರುವ ಗುಲಾಬಿಯ ಎಸಳು ನಿನ್ನ ಕೆನ್ನೆಯಲಿ ನಿಸ್ತೇಜವಾಗಿ ಮುದುಡಿಕೊಂಡಿರುವಂತೆ ಕಾಣುತ್ತಿದೆ.
(೨) ಉತ್ತರ :
ಹಸಿರುಕ್ಕುವ ಬಯಲಲ್ಲಿ ನಾನು ರಾಮಣೀಯಕದ ಕನ್ನೆಯನು ಕಂಡೆ. ರಮಣಿ ಎಂದಮೇಲೆ ಕೇಳಬೇಕೇ!? ರತಿಯ ಮಗಳೋ ಎಂಬಂತಹ ಕಡುಚೆಲುವೆಯಾಕೆ! ನೀಳವಾದ ನವಿರಾದ ಕೇಶರಾಶಿಯ ಸೊಬಗಿನ ರೂಪಸಿ! ಹೂಗಳ ಮೇಲೆ ಮೆಲುಹೆಜ್ಜೆಗಳಂತಹ ಹಗುರವಾದ ಕಾಲ್ನಡುಗೆ! ನೋಡುಗರಿಗೆ ಬೆರಗುಂಟುಮಾಡುವ ಬೊಗಸೆ ಕಂಗಳ ತುಂಟ, ಕಡೆಗಣ್ಣನೋಟ!
"ಅವಳ ಕೇಶರಾಶಿಯ ಸೊಬಗಿನಕಾಂತಿಯು ಇಮ್ಮಡಿಸುವುದೆಂಬ ಹಂಬಲದಿಂದ ಆಕೆಗಾಗಿ ಪರಿಮಳಿಸುತ್ತಿರುವ, ಹೂಮಾಲೆಯನ್ನು ಕಟ್ಟಿದೆನು. ಕನಸಿನರಮನೆಯಲ್ಲೇ ನಾ ಕಂಡ ಕನ್ಯೆಯ ನಡುವಿಗೆ ಒಲವಿನ ಒಡ್ಯಾಣವನ್ನು ನನ್ನ ಕೈಯಾರೆ ಬಿಗಿದು ಆಕೆಯ ಶರೀರ ಸೌಂದರ್ಯವನ್ನು ಕಣ್ತುಂಬಿಕೊಂಡೆ! ತುಸು ಅಂತರದಲ್ಲಿ ನಿಂತು ಅವಳ ಕಂಗಳಲ್ಲಿ ನನ್ನ ಕಣ್ಣುಗಳ ಬಿಂಬವನ್ನು ಕಂಡು, ಅವಳು ನನಗೊಲಿದಳೆಂದು ಮುದ್ದು ಮುದ್ದಾಗಿ ಉಸಿರಿದಂತೆನ್ನಿಸಿತು.
ನನ್ನ ಕನಸಿನ ಕುದುರೆಯ ಮೇಲೆ ರಮಣಿಯನ್ನು ಕುಳ್ಳಿರಿಸಿದೆನು. ಹಯದ ಬೆನ್ನೇರಿದ ಮದನಾಂಗಿಯು ಅತ್ತಿತ್ತ ಓರೆಯಾಗಿ ವಯ್ಯಾರದಿಂದ ಬಾಗುತ್ತಾ ತೊನೆದಾಡುತ್ತಾ ಮೋಹಿನಿಯಂತೆ ಮೋಹಕವಾದ ಹಾಡನ್ನು ಗುಣುಗುಣಿಸತೊಡಗಿದಳು.
ಸುರಸುಂದರಿ ರಮಣಿಯು ನನಗಾಗಿ ಕಾಡಿನಲ್ಲಿ ಹುಡುಕಾಡಿ, ಕಂದಮೂಲಫಲಗಳನ್ನು ಆರಿಸಿ ತಂದಳು.
ಜೇನಿನಹುಟ್ಟನ್ನರಸಿ ತಂದು ಮಧುಮಾಸ ಉಕ್ಕೇರುವಂತೆ, ಜೇನಹನಿಗಳ ಹನಿಗಳನ್ನು ನನ್ನ ತುಟಿಗಳ ಮೇಲಿರಿಸಿದಳು. ಮಾದಕವಾದ ನೋಟದಿಂದ ನಸುನಾಚುತ್ತಾ " ಇನಿಯ! ನಿನ್ನೊಳು ಎನಗೆ ಒಲವಿನ ಮಾಧುರ್ಯವು"
ಆ ಮಧುಮಾಲತಿಯಂತಹ ಚೆಂದುಳ್ಳಿ ಚೆಲುವೆಯು ನನ್ನನ್ನು ಕೈಗಳನ್ನು ಹಿಡಿದು, ತನ್ನ ಯಕ್ಷಿಣಿ ಗುಹೆಗೆ ಕರೆದೊಯ್ದಳು.
ಅವಳ ಮಾದಕವಾದ ಸೌಂದರ್ಯ, ಕುಡಿನೋಟದ ಮಾಧುರ್ಯಗಳಿಂದ ಬಿಸುಸುಯ್ಯುತ್ತ ಅಳುತ್ತಾ ಕಣ್ಣೀರಹನಿಗಳನ್ನು ಉದುರಿಸಿದಳು.
ಅವಳ ಬೆರಗುಕಣ್ಣುಗಳನ್ನು ಅಂಗೈಗಳಿಂದ ಮುಚ್ಚಿ ಮುದ್ದಾದ ಅವಳ ತುಟಿಗಳಿಗೆ ತುಟಿಗಳನ್ನು ಸೋಕಿಸುತ್ತ ಆಕೆಗೆ ಮುತ್ತಿನಸರವನ್ನು ತೊಡಿಸಿದೆನು.
ನನ್ನ ಆ ಕನಸಿನ ಕನ್ಯೆ ಜೋಗುಳ ಹಾಡು ಹಾಡುತ್ತಾ ನನ್ನನ್ನು ನಿದ್ದೆಯ ಲೋಕಕ್ಕೆ ಒಯ್ದಳು. ಕನಸೊಳಗೆ ಕನಸಾಯ್ತು. ಮಲೆಬದಿಯ ತಣುಪಿನ ಆ ಬನದಲ್ಲಿ ನನಗದು ಕಟ್ಟಕಡೆಯ ಕನಸಾಯಿತು.
ಕನಸಲ್ಲಿ ಕಂಡೆನಲ್ಲಿ ಅರಸುಕುಮಾರರನ್ನು. ವೀರರಂತೆ ಕಂಡ ಆ ಅರಸು ಮಕ್ಕಳೆಲ್ಲ ಹತಾಶೆಯಿಂದ ಬಿಳುಪೇರಿದಂತೆ ಕಾಣುತ್ತಿದ್ದರು. ಅವರೆಲ್ಲರೂ ಒಕ್ಕೊರಲಿನಿಂದ ಕೂಗಿ ಹೇಳುತ್ತಿದ್ದರು, " ಈ ನಿರ್ದಯಿಯಾದ ರಮಣಿಯನ್ನು ನಂಬಿ ಮೋಸಹೋಗಬೇಡ! ನೀನಿವಳ ಬೆಡಗಿನ ರೂಪಲಾವಣ್ಯಗಳ ಬಲೆಯಲ್ಲಿ ಸಿಲುಕಿರುವಂತಿದೆ. ನಿನ್ನನ್ನು ಬಲೆಯೊಳಗೆ ಕೆಡವಿದ ಈಕೆಯನ್ನು ನಂಬಬೇಡ" ಎಂದು ಎಚ್ಚರಿಸಿದರು.
ಅವರ ಇಂತಹ ಎಚ್ಚರದ ನುಡಿಗಳನ್ನು ಕೇಳುತ್ತಲೇ ಕನಸಿನಲೋಕದಲ್ಲಿ ವಿಹರಿಸುತ್ತಿದ್ದ ನಾನು ಎಚ್ಚರಗೊಂಡವನಾಗಿ ವಾಸ್ತವಲೋಕಕ್ಕೆ ಮರಳಿದೆನು. ಕನಸಿನ ಕನ್ಯೆಗೆ ಮುತ್ತಿನ ಸರತೊಡಿಸಿದ್ದು ಕನಸಿನಲ್ಲಿ ಎಂಬುದನ್ನು ನೆನಪಿಸಿಕೊಂಡು ಒಣತುಟಿಯು ಪೆಚ್ಚಾಯಿತು. ಎಚ್ಚರಗೊಂಡ ನಾನು ಸಸ್ಯಕಾಶಿಯೂ ಇಲ್ಲ. ಅರಣ್ಯರೋದನವಷ್ಟೇ ಕಂಡಂತಾಯಿತು. ಮರೀಚಿಕೆಯ ಬೆಂಬತ್ತಿದೆ. ಒಂಟಿಯಾಗಿದ್ದೆ.
ಏನೆನ್ನಲಿ! ಮೈ ಮನಸುಗಳು ಹಸಿಬೇನೆಯ ವೇದನೆಯಿಂದ ಒಂಟಿಯಾಗಿ ಗುರಿಯಿಲ್ಲದೆ ಬೆಂಗಾಡಿನಲ್ಲಿ ಅಲೆದಾಡುತ್ತಲೇ ಇದ್ದೇನೆ.
ಭಾವಾನವಾದ: ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
No comments:
Post a Comment