ತನ್ನ ಮೆಯ್ಸಿರಿಯಿಂದ
ಹೊನ್ನೊಡವೆಯೆಸಕವನು
ಇಮ್ಮಡಿಪಳವಳು
ಎನ್ನ ಇಮ್ಮಿದಳು.
ಮುಡಿಯ ಸೊಬಗಿಂದ
ತಾಂ ಮುಡಿದ ಹೂವಿನ ಬೆಡಗ
ಇಮ್ಮಡಿಪಳವಳು
ಎನ್ನ ಇಮ್ಮಿದಳು.
ನಯನರುಚಿಯಿಂ ಮನದ
ಪ್ರಿಯಭಾವಗಳ ಕೆಣಕಿ
ಇಮ್ಮಡಿಪಳವಳು
ಎನ್ನ ಇಮ್ಮಿದಳು.
ಮುಗುಳುನಗೆಯಿಂ ಜಗದ
ಸೊಗಸು ಸೊಗಗಳನೆಲ್ಲ
ಇಮ್ಮಡಿಪಳವಳು
ಎನ್ನ ಇಮ್ಮಿದಳು.
********
********
ಪ್ರೇಮಭಿಕ್ಷೆಗಾಗಿ ಹಾತೊರೆಯುತ್ತಾ ಕನಸುಕಾಣುತ್ತಿರುವ ಪ್ರೇಮಿಯು ತನ್ನ ಮನದನ್ನೆಯು ತನ್ನ ಸೌಂದರ್ಯದ ಹೊಂಬೆಳಕಿನಿಂದ ನನ್ನನ್ನು ಚೆಲುವನನ್ನಾಗಿಸಿದಳು ಎಂದು ಕನಸುಕಾಣುವ ಪರಿ ಅನನ್ಯವಾಗಿದೆ.
ನನ್ನ ಈ ಕನಸಿನರಾಣಿಯು ತನ್ನ ಮೈಮಾಟ ಸೌಂದರ್ಯಗಳಿಂದ ಬಂಗಾರದೊಡವೆಗಳ ಚೆಲುವನ್ನು ಮೀರಿಸುತ್ತಾಳೆ.
ಆಕೆಯ ಸೌಂದರ್ಯದಲ್ಲಿ ಮೀಯುತ್ತಿರುವ ನನ್ನನ್ನು ಈ ಮನದನ್ನೆಯು ಚೆಲುವನನ್ನಾಗಿ ರೂಪಿಸಿದಳು.
ರೂಪರಾಶಿಯಾದ ಎನ್ನ ಇನಿಯಳು ತನ್ನ ಮುಡಿಯ ಕೇಶರಾಶಿಯ ಸೊಬಗಿನಿಂದ ಮುಡಿಗೇರಿಸಿದ ಕೇದಗೆಯ ಹೂವಿನ ಬೆಡಗನ್ನು ಇಮ್ಮಡಿಸಿದಳು. ಮುಡಿದ ಹೂವಿನ ಕಾಂತಿಪರಿಮಳಗಳನ್ನು ಹೆಚ್ಚಿಸಿದಳು. ಈ ಸೌಂದರ್ಯದಲ್ಲಿ ಮಿಂದೇಳುತ್ತಿರುವ ನನ್ನೊಲವಿನ ಈ ರೂಪಸಿಯು ನನ್ನನ್ನು ಚೆಲುವನನ್ನಾಗಿ ರೂಪಿಸಿದಳು.
ಅಬ್ಬಬ್ಬಾ! ತನ್ನ ಕುಡಿನೋಟದ ಸವಿಯಿಂದ ಪ್ರಿಯಭಾವನೆಗಳ ತೆರೆಗಳನ್ನೆಬ್ಬಿಸಿ ಅನುರಣಿಸುತ್ತಾ ಇಮ್ಮಡಿಗೊಳಿಸುತ್ತಿದ್ದಾಳೆ. ಈ ನನ್ನ ಅರಗಿಣಿ ಸುರಸುಂದರಿಯ ಸೌಂದರ್ಯದ ಆಕರ್ಷಣೆಯ ಬೆಳಕಿನಿಂದ ನನ್ನನ್ನು ಚೆಲುವನ್ನಾಗಿ ರೂಪಿಸಿದಳು. ನನ್ನೊಳಗಿನ ಪ್ರೇಮಲಹರಿಯ ತರಂಗಗಳನ್ನೆಬ್ಬಿಸುತ್ತಾ ನನ್ನನ್ನು ಚೆಲುವನನ್ನಾಗಿಸಿ ಕುಣಿಸುತ್ತಿದ್ದಾಳೆ.
ತನ್ನ ಮುಗುಳುನಗೆಯಿಂದ ಚೆಲುವಿನ ಖನಿಯಾದ ಈ ಬೆಡಗಿಯು ಜಗತ್ತಿನ ಸೌಂದರ್ಯಸೊಬಗನ್ನು ಇಮ್ಮಡಿಗೊಳಿಸುತ್ತ ನನಗೆ ಅಮಿತಾನಂದವನ್ನುಂಟುಮಾಡುತ್ತಿದ್ದಾಳೆ. ಈಕೆಯ ಮಾಟವಾದ ಸೌಂದರ್ಯದ ಮೇಲಣ ಮೋಹವು ನನ್ನನ್ನೂ ಚೆಲುವನನ್ನಾಗಿ ರೂಪಿಸುತ್ತಿರುವುದು ಬಲು ಚೋದ್ಯವು!
ಭಾವಾನುವಾದ : © ಕೊಕ್ಕಡ ವೆಂಕಟ್ರಮಣಭಟ್ ಮಂಡ್ಯ
No comments:
Post a Comment