ಜೀವವೊಂದನೊಂದು ಕರೆದು
ಭಾವವೆರಡುಮೊಂದುವೆರೆದು
ನೋವು ನಲಿವುಗಳಲಿ ಕಲೆತು
ಬದುಕಲೆಳಸಿರೆ-
ಆವುದದರಿನಿಳೆಯೊಳಿನಿಯ
ಬಿದಿಯ ಕೈಸೆರೆ?
ಭುವಿಯ ಪಥವ ಸುಗಮವೆನಿಸೆ
ಬವಣೆ ಬನ್ನಗಳನು ಮರಸೆ
ಭವದ ಹೊರೆಯ ಹಗುರವೆನಿಸೆ
ಪ್ರೇಮರಕ್ಷೆಯಾ
ಹವಣಿಸಿಹಳು ಪ್ರಕೃತಿ ನರರಿ-
ಗಾತ್ಮಶಿಕ್ಷೆಯಾ.
ಪ್ರೇಮವೆಂಬುದೇನು? ಜಗದ
ಸ್ವಾಮಿಶಕ್ತಿಯೆಂಬರದರ
ಮೈಮೆಗಳನದಾರು ಗುಣಿಸಿ
ತಿಳಿಯಲಾರ್ಪರು?
ವ್ಯೋಮತಲವನಾರು ಪದದಿ-
ನಳೆಯಲಾರ್ಪರು?
ದಿನವು ಮೂಡೆ ಜೀವ ತರುಗೆ
ಕೊನರನಿರಿಸಿ ಸಂಜೆಯಾಗೆ
ನನೆಯ ಬಿರಿಸಿ ನಿಚ್ಚಮದನು
ಪೊಸತನೆಸಗಲು
ಮನದೆ ಮನಕೆ ಪರಿವುದೊಂದು
ರಸದಿನಿ ಹೊನಲು
ಪುದಿದು ವಿಶ್ವಲೀಲೆಯೊಳಗೆ
ಮಧುರಗೊಳಿಸಿ ಭವದ ಹುಳಿಯ
ಕುದಿಸಿ ತಣಿಸಿ ನಮ್ಮನೆಲ್ಲ
ಕಾವ ಪ್ರೀತಿಯು
ಎದೆಯ ಕಡೆವ ಮಂತುಮಾದ
ಜೀವನೀತಿಯು.
*********************
ಇನಿಯನು ವಿಧಿಯ ಕೈಸೆರೆ ಎಂಬುದು ಕವಿಯ ಕಳವಳ!
ಪ್ರಿಯಕರನು ಪ್ರೇಯಸಿಯೊಡನಿರುವ ಪ್ರೇಮವನ್ನು ಕಾದಿಟ್ಟುಕೊಂಡು ಎರಡು ಜೀವಗಳು ಒಂದಾಗಿ ಸೇರುವ ಕಾತರದಲ್ಲಿ ದಿನಗಳನ್ನು ಯುಗಗಳಂತೆ ಕಾಣುತ್ತಾನೆ. ಅತಿಸ್ನೇಹಃ ಪಾಪಶಂಕೀ! ತನ್ನ ಜೀವವು ಇನಿಯೆಗಾಗಿ ಅದೆಷ್ಟು ಹಂಬಲಿಸುತ್ತಿರುವುದೋ ಅದರ ಹತ್ತರಷ್ಟು, ಆಕೆಯ ಜೀವವು ಹಂಬಲಿಸುತ್ತಾ ಕಾತರಿಸುತ್ತಿರುವುದನ್ನು ಪ್ರಿಯಕರನು ಬಲ್ಲವನು.
ನೋವು ನಲಿವುಗಳಲ್ಲಿ ಒಂದಾಗಿ ಸುಂದರವಾದ ಜೀವನಸೌಧವನ್ನು ಕಟ್ಟಿಕೊಳ್ಳುವ ಕನಸಿನಲ್ಲಿ ಕ್ಷಣಗಳನ್ನು ಯುಗಗಳಾಗಿ ಎಣಿಸುತ್ತಾನೆ. ಈ ಭೂಮಿಯಲ್ಲಿರುವ ಇನಿಯನಕನಸು ನೆನಸಾಗುವುದೇ ಎಂಬುದಕ್ಕೆ ಇನಿಯನ ಉತ್ತರ ವಿಧಿಯ ಕೈಸೆರೆ! ಇನಿಯೆಯ ಅದೃಷ್ಟವಿದ್ದರೆ ಕನಸು ನೆನಸಾಗಬಹುದು!
ಪ್ರೇಮರಕ್ಷೆಯೆಂಬುದು ಆತ್ಮಶಿಕ್ಷೆಯೆಂದು ಕವಿ ಪ್ರೇಮಿಗಳ ಒಳತೊಳಲಾಟವನ್ನು ಆಳಕ್ಕಿಳಿದು ಅರಿಯುತ್ತಾರೆ. ಮಾನವನಾಗಿ ಲೋಕಜೀವನದ ಕರ್ತವ್ಯಗಳ ನಡುವೆ ಬರುವ ಎಡರುತೊಡರುಗಳ ಹೊರೆಯ ಭಾರವನ್ನು ಪ್ರೇಮಪೋಷಣೆಯು ಕಾರಣವಾಗುವುದು. ಆದರೆ ಪ್ರೇಮಲತೆಯನ್ನು ಪೋಷಿಸಿಬೆಳೆಸಿ ಸಂರಕ್ಷಿಸುವುದು ಬಲುದೊಡ್ಡ ಪರೀಕ್ಷೆಯೆಂಬುದು ದಿಟವು. ಪ್ರೇಮವು ಜಗದ ಸ್ವಾಮಿಶಕ್ತಿಯಂತೆ. ಅದರ ಮಹಿಮೆಯು ಅಪಾರವಾದುದು. ಅದರ ಸೆಳೆತದ ಅನನ್ಯ ಶಕ್ತಿಯ ರಿಂಗಣದ ಗುಣಿತ ಕುಣಿತಗಳನ್ನು ಊಹಿಸಲಾಗದು. ವ್ಯೋಮದಿಂದಾಚೆ ಹಾರಿಕುಣಿಯಲೆಳಸುವ ಪ್ರೇಮಲೋಕವನ್ನು ವಾಮನನಂತೆ ಅಳೆಯಲಾಗದು. ಪ್ರತಿದಿನವೂ ನೇಸರನಕಿರಣಗಳ ಸ್ಪರ್ಶದೊಡನೆ ಪ್ರೇಮತರುವು ಚಿಗುರಿ ಪಲ್ಲವಿಸಲು ಕಾತರಿಸುತ್ತದೆ. ಸಂಜೆಯವೇಳೆಗೆ ಕುಡಿನನೆಗಳು ಹಿಗ್ಗುತ್ತ ಹೊಸದಾದ ಚೈತನ್ಯದಿಂದ ಬೆಳೆಯಲು ಪೋಷಿಸಲು ಮನದಲ್ಲಿ ರಸದಿನಿಯ ಹೊನಲು ಹರಿಯುತ್ತದೆ.
ಪ್ರೇಮಮಹಿಮೆಯು ವಿಶ್ವವನ್ನೆಲ್ಲಾ ವ್ಯಾಪಿಸಿದ ಜಗನ್ನಾಟಕವನ್ನಾಡಿಸುವ ಪರಮಾತ್ಮನದೇ ಲೀಲಾವಿನೋದ. ಜನ್ಮ ಜನ್ಮಾಂತರಗಳ ಮಧುರಪಾಕವನ್ನು ಕುದಿಸಿ, ತಣಿಸಿ ನಮ್ಮನ್ನೆಲ್ಲಾ ಕಾಪಾಡುವ ಪೋಷಕದ್ರವ್ಯವೆಂದರೆ ಪ್ರೀತಿ- ಪ್ರೇಮ. ಹೃದಯಭಾಂಡದೊಳು ಮುದದಿ ಕೂಡಿರುವ ಜೀವನವೆಂಬ ಮೊಸರನ್ನು ಕಡೆದು ಸಂತಸದ ನವನೀತವನ್ನು ಮೂಡಿಸುವ ಕಡೆಗೋಲಿನ ಮಂಥನವೇ ಪ್ರೇಮಲೀಲೆಯ ನೀತಿ
ಭಾವಾನುವಾದ : ಕೊಕ್ಕಡ ವೆಂಕಟ್ರಮಣ ಭಟ್
No comments:
Post a Comment