Monday, 13 November 2023

ಅಳು - ಕೇತಕೀವನ - ಡಿವಿಜಿ

ಮಧುವಿಹುದೇಂ ಕಂಬನಿಯೊಳ್‍ । 
ವಿಧಿ ಪೇಳ್‍ ಅಂತಲ್ಲದಿರ್ದೊಡೆನ್ನೊಡಲಿಂದಂ ॥ 
ರುಧಿರೆವ ನೀಡುವೆನೀಂಟಲ್‍ । 
ಬದುಕನೆ ನೀಂ ಬಗಿಯಲುಗುವ ನೀರುಪ್ಪಲ್ತೇಂ ॥

ನರಜೀವನ ಪರಿಪಾಕದ । 
ಮರುಮಂ ಬಾಷ್ಪೋಷ್ಣಮ್‍ ಅರಿಯೆ ಹಸಿತಮದಲ್ಲಂ ॥ 
ಕರಗಿಪುದೆದೆಯಂ ಕಣ್ಣೀರ್‍ । 
ಹರಣಕೆ ಪುಟವಿಡಿಸಲಂತು ನಗುವಿಂದಹುದೇಂ ॥ 

ಮರುಳಂ ಕೃತ್ರಿಮಿ ಗಾಂಪಂ । 
ಗರುವಿತನಣುಗಂ ವಿದೂಷಕಂ ನಗುವರಿವರ್‍ ॥ 
ಅರಿವರೆ ಬಾಳೊಳಗನವರ್‍ । 
ಪಿರಿಯೆದೆಯೊಳಗವಿಯಿನಲ್ತೆ ಕಣ್ಪೊನಲೊಗೆಗುಂ ॥

ರಘುವರಕಥಾಪ್ರವಾಹಮ- । 
ದೊಗೆದುದು ವಾಲ್ಮೀಕಿಕವಿಯ ಕರುಣಾಶ್ರುವಿನಿಂ ॥ 
ಜಗದಚ್ಚರಿ ತಾಜ್‍ ಬೆಳ್ಸರಿ । 
ನಗುವಿನ ಕಿಲಕಿಲವೆ? ಬಾಷ್ಪಬಿಂದುವದಲ್ತೇಂ ॥ 

ಪ್ರೀತಿಯ ನಿದಾಘ ಮುಖವಳು । 
ಸೇತುವದಳಲಿಂದೆ ನಮ್ಮನುಪಶಮಕೊಯ್ಯಲ್‍ ॥ 
ನೀತಿನದೀ ಸ್ರವಭುವಿಯದು । 
ಯಾತನೆಯರಿಯದನದೆಂತು ಶೋಧಿತನಕ್ಕುಂ ॥

1 comment:

  1. ಸುಖದುಃಖಗಳು ಜೀವನದ ಅವಿಭಾಜ್ಯ ಅಂಗಗಳು. ನಗುವಿನ ಇನ್ನೊಂದು ಮುಖ ಅಳು. 'ಹೆಚ್ಚುನಗಬೇಡ ಅಳಲಿಕ್ಕಿದೆ' ಎಂದೆನ್ನುವರು ಹಿರಿಯರು. ನಗುಅಳುಗಳು ಜೀವನದ ಕಣ್ಣುಮುಚ್ಚಾಲೆ!
    ನಗುವಿನ ಅಲೆಗಳು ಪರಿಪರಿಯಾದರೆ ಅಳುವೂ ವಿಧವಿಧದಲ್ಲಿ ಕಾಡುವುದು, ಪೀಡಿಸುವುದು, ಬೇಯಿಸುವುದು.
    ಜೀವನದ ಪರಿಪಾಕದಲಿ ಮಾಗಿದವನು ಅಳಲನ್ನು ತೋರಿಕೊಡದೆ ತುಟಿಕಚ್ಚಿ ಸಹಿಸುವನು.
    ತುಟಿಮುಚ್ಚಿದರೂ ಕಂಗಳು ಅಳಲನ್ನು ಹೊರಸೂಸದೆ ಇರವು‌.
    ಕಣ್ಣಹನಿಗಳ ಬಿಸಿಯಹಿಂದೆ ಅಳುವೇ ಘನೀಭೂತವಾಗಿದೆ.
    ಕಣ್ಣಹನಿಗಳು ಮಧುವಲ್ಲ! ವಿಧಿಯು ನೀಡುವ ಕಹಿಯ ಔಷಧವು. ವಿಧಿಯ ಪರೀಕ್ಷೆಯಲಿ ಕೆನ್ನೀರಿನ ಹನಿಗಳನ್ನು ಹನಿಸಿ ಪರೀಕ್ಷಿಸುವಳು. ಬದುಕಿನ ಬಳ್ಳಿಯನ್ನೇ ಬಗೆದು ಹರಿಸುವ ಕಣ್ಣೀರಹನಿಯ ಉಪ್ಪಿನ ಹಿನ್ನೆಲೆ ಕರ್ಕಶವೆಂದು ಸಾರುವಳು!
    ಅಳು ನಗುಗಳ ಪರಿಪಾಕದಿಂದ ಹದವಾದ ಮಾನವನ ಕಂಗಳಿಂದೊಸರುವ ಹನಿಗಳ ಬಿಸುಪಿನ ಕಾವನ್ನು ಅರಿತರೆ, ಎದುರಿಗೆ ಮಿನುಗುವ ನಗುವು ಆಳದಲ್ಲಿರುವ ನೋವಿನ ಅಳಲನ್ನು ಸಾರಿಹೇಳುತ್ತದೆ. ಎದೆಯೊಳಗೆ ಘನೀಭೂತವಾದ ಅಳಲು ಕರಗಿ ಕಂಗಳಿಂದ ಹೊರಸೂಸುತ್ತದೆ.
    ಬಾಳದೋಣಿಯಲಿ ನಗುವು ಹಾಯಿಪಟ!
    ನಗೆಯ ಪರದೆಯಿಂದ ಜೀವಸಾಕ್ಷಾತ್ಕಾರದ ಪುಟವಿಡಲು ಸಾಧ್ಯವೇ !!
    ಗಾಂಪನಾದ ಮರುಳನೂ ಗಹಗಹಿಸಿ ನಗುತ್ತಾನೆ. ಕೃತಕವೇಷವನ್ನು ಧರಿಸಿ ನಟನಾಗಿ, ರಂಗದ ಮೇಲೆ ವಿದೂಷಕನೂ ನಗುತ್ತಾನೆ, ನಗಿಸುತ್ತಾನೆ. ಹುಚ್ಚನ ನಗುವಿಗೆ ಅರ್ಥವೇ ಇರದು. ನಟನ ನಗೆಗೆ ಉದ್ದೇಶವಿದ್ದರೂ ಅದು ನಟನೆಯೇ ವಿನಾ ನಿಜವಾದ ಜೀವನವಲ್ಲ. ಪರದೆಗೆ ಸೀಮಿತ. ನೋವಿನ ಪರಿಪಾಕವಲ್ಲ. ಎದೆಯೊಳಗೆ ಅವಿತಿರುವ ಅಳಲನ್ನು ಕಣ್ಣಹನಿಗಳು ಸಾರಿಹೇಳುತ್ತವೆ. ವಾಲ್ಮೀಕಿಯ ಎದೆಯೊಳಗವಿತ ಕರುಣಾರಸವು ರಘುವರನ ದಿವ್ಯಚರಿತೆಯ ಪ್ರವಾಹವಾಗಿ ಹರಿಯಿತು‌.
    ಕಾವ್ಯರಸಿಕರಿಗೆ ಸಂತೋಷ ಆನಂದದ ಲಹರಿಗಳನ್ನರಳಿಸಲು ಕಾರಣವಾದ ರಾಮಾಯಣದ ಆಳದಲಿ ಕವಿಯ ಕರುಣಾರ್ದ್ರತೆಯ ಅಳಲು ಅಂತರ್ವಾಹಿನಿಯಾಗಿದೆ. ಕಿಲಕಿಲ ನಗುವಿನ ಹಿಂದೆ ಅಳಲಿನಬಾಷ್ಪಗಳೇ ಬೇರುಗಳು.
    ಪ್ರೀತಿಯ ಹೊನಲು ಬತ್ತಿದರೆ ಅಳುವಿನಮುಖ ದರ್ಶನ. ಅಳಲಿನ ಸೇತುವೆಯ ಮೂಲಕ ವೇದನೆಯ ಉಪಶಮನ!
    ನೀತಿಸ್ರೋತದ ನದಿಯನ್ನು ಹರಿಸುವುದು ಜೀವನಪ್ರವಾಹ!
    ಜೀವನನದಿಯೊಳಗೆ ಅಂತರ್ವಾಹಿನಿಯಾದ ಯಾತನೆಯನ್ನು ಅರಿಯದವನು ಪರಿಶುದ್ಧ ನಾಗಲಾರನು. ಅಳುವಿನ ವೇದನೆಯನ್ನು ಮರೆಯಿಸುವ ಪರದೆಯು ನಗು.
    ನಗು ಅಳುಗಳು ಅನಿವಾರ್ಯ. ಅಳುವು ಜೀವನದ ಆಳದ ಅರಿವನ್ನುಂಟಮಾಡುತ್ತದೆ. ನಗೋಣ, ಅಳುವನ್ನು ಮರೆಯದಿರೋಣ ಇದು ಕೇತಕೀವನದಿ ಅರಳಿದ ತಾಳೆಹೂವಿನ ಸುಗಂಧಸಂದೇಶ.

    (ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ)

    ReplyDelete