Sunday 8 October 2023

ಬಾಳ್ಕೆಯ ತೋಟ - ಕೇತಕೀವನ


ಧರೆಯ ಜೀವನವೆಲ್ಲ
ಮರಣದೋಲಗವೆನುತ
ನರಳಿ ಫಲವೇನು ಸಖನೆ?
ಪಾಳಡವಿ ಧರೆಯೆಂದು
ಬಾಳು ಬರಿ ಕನಸೆಂದು
ಗೋಳಿಟ್ಟೊಡೇನು ಸುಖವೆ?

ಆದನಿತು ಸಂದನಿತು
ಕಾದಲ್ಮೆ ನಲ್ಮೆಗಳ
ಸಾದಿಪನ ಬದುಕು ಬರಿದೆ?
ಬಂದನಿತು ಸೊಗದಿನಾ
ನಂದವಡುವುದ ಬಿಟ್ಟು
ದಂದುಗದೊಳಿಹುದು ಸರಿಯೆ?

ಸಂತಸವದೇಕೆನುತ
ಚಿಂತೆಗೆಲ್ಲವ ತೆರಲು
ಪಂತವೇಂ ಬೊಮ್ಮನೊಡನೆ?
ಒಣಗು ಬಾಳ್ವೆಯಿದೆಂಬ
ಉಣಲಿಹುದ ಕಹಿಯೆಂಬ
ಒಣ ವಿರತಿಯವಗೆ ಮುಡುಪೆ?

ತವಿಸಿ ನೀಂ ಬಾಯ್ಬಿಡಲು
ಕಿವಿಗುಡುವರಾರದಕೆ?
ಕಿವುಡನಾ ಬಿದಿಯರಿಯೆಯಾ?
ಏಸುಜನರಳಲುವರು
ಏಸೇಸು ಬಳಲುವರು
ಗಾಸಿಯೇ ಗೆಲವೆನುವೆಯಾ?

ಸಾವ ಬೆದರಿನ ಸೆಕೆಗೆ
ಜೀವ ಸುಮವನು ಬಿಸುಟು
ಏವೈಪುದೊಂದು ಸಯ್ಪೆ?
ಒದಗಿ ಬಂದುದ ಕೊಳುತೆ
ಬಿದಿಯನಿದಿರಿಸಿ ನಗುತೆ
ಬದುಕ ಮೇಲೆನಿಸೆ ತಪ್ಪೆ?

ಇಳೆಯ ಬಾಳ್ಕೆಯ ತೋಟ-
ದೊಳಗೆ ಮುಳ್ಳಿಹುವು, ದಿಟ,
ಬಳಸಿಹುದು ಮಿತ್ತು ಪೊನಲು;
ಇರಲಿ, ನೀನಿತ್ತಲುಳಿ-
ದಿರುವಂದು ಮರೆಯದಿರು
ಸರಸಕಲ ಸುಮ ಫಲಗಳ.

ಮರಣ ತಪ್ಪದೆನುತ್ತೆ
ಇರುವನ್ನ ಮತ್ತತ್ತು
ದೊರೆತಿನಿಸುಮಂ ಬಿಡುವುದೇಂ?
ಮೃತ್ಯುವಿನ ಕಡಲ ತಡಿ
ನೃತ್ಯಭುವಿಯಾದೊಡೇಂ
ನರ್ತನಂ ರಮ್ಯವಲ್ತೆ?

No comments:

Post a Comment