Friday 6 October 2023

ಹಂಪೆ - ಕೇತಕೀವನ

ಈ ಮುರಿದ ಗೋಪುರಗಳೀ ಬಿರಿದ ಗುಡಿಗಳ್‍
ಈ ಮೆರೆದ ಕೋಟೆಗಳ ಪಾಳ್ಗೋಡೆ ಕಲ್ಗಳ್‍
ಈ ಭಗ್ನ ರಾಜಗೃಹ ಶಿಷ್ಟ ವೇದಿಕೆಗಳ್‍
ಈ ಬಿತ್ತರದ ಬೀದಿಸಾಲ್ಗಳೀ ಪಥಗಳ್‍

ಈ ನಷ್ಟದೇಗುಲಗಳೀ ಸೌಧಕಣಗಳ್‍
ಈ ನೂರು ಕಾಲುವೆಗಳೀ ಶಿಲ್ಪದಣುಗಳ್
ಇಂದೆನ್ನೊಳೊಗೆಯಿಸುತ್ತಿರ್ಪೊಂದು ಬೆರಗಂ
ಅಂದು ತಮ್ಮಂದಚಂದದಿನೊಗೆಯಿಸಿದುವೇಂ?

ಆಗಳಾ ವಿಜಯಸಾಮ್ರಾಜ್ಯಮಿರ್ದಂದು
ಭೋಗಸೌಭಾಗ್ಯಂಗಳಟ್ಟಹಾಸಂಗಳ್‍
ಬಣ್ಣಿಸಲ್ಕಾಗದವೊಲಿರ್ದವದರಿಂದೇಂ–
ಮನ್ನಣೆಯ ಗೆಲಿಸುವೀ ಬೆರಗಂದುಮಾಯ್ತೇಂ?
ತರುಣತೆಯೊಳಿಲ್ಲದಿಹ ಪೆರ್ಮೆ ತಾನೊಂದು
ದೊರೆಕೊಳ್ವುದಲ್ತೆ ಜೀರ್ಣತೆಯೊಳೆಲ್ಲರ್ಗಂ?

ವಂದಿಸುವೆನ್‍, ಎಲೆ ಕಾಲಪುರುಷ, ನಿನಗಿಂದು
ಸಂದ ನಿನ್ನಿರಿತಗಳಿನಳಿದುಳಿದು ನಿಂದು
ಅರ್ಚ್ಯತೆಯನಚ್ಚರಿಯನುಚ್ಚಚರಿತೆಯನುಂ
ಪೆರ್ಚಿಸಿಕೊಳುತ್ತಿರ್ಪುವೀ ಶಿಲೆಗಳಿನ್ನುಂ.

ರಾಜಾಧಿರಾಜರುಗಳಿತ್ತ ಮೆರೆದಂದು
ವಾಜಿ ಗಜ ತೇರುಗಳು ಪರಿದೋಡಿದಂದು
ಜನಪದದ ಸಿರಿಯಿತ್ತ ನಲಿದಾಡಿದಂದು
ಜನದ ಸಂದಣಿಯಿತ್ತ ಕಳಕಳಿಸಿದಂದು
ಆರಿಂತು ಪರಿಕಿಸಿದರೀ ಶಿಲೆಯ ತೊಲೆಯ
ಆರರಸಿ ಬಳಸಿದರು ಮಂಟಪದ ಕಲೆಯ?

ಮನವಲೆವುದೊರ್ಮೆ, ದಿಟ, ಪಿಂತಿನೊಳ್ಗತೆಗೆ
ನೆನಪೋಡುತಿಹುದಂದಿನುತ್ಸವದ ಕಡೆಗೆ
ಆದೊಡೇನೀತೆರದಿ ಕಾಲಲೀಲೆಯನು
ಬೋಧಿಪುವೆ ನೂತನದ ಪುರಗೋಪುರಗಳು?
ಮಾನವನ ಮನದಿಂಬು ಕಾಲನ ಕರುಂಬು
ಮಾನವನ ಕೈಮಾಳ್ಕೆ ಕಾಲನ ಕನಲ್ಕೆ
ಈ ರಭಸಗಳ್‍ ಮೊರೆಯುತಿಹುವು ಹಂಪೆಯೊಳು
ಹೋರುತಾ ಪ್ರಾಕ್ತನದ ಶಕಲರಾಶಿಯೊಳು.

ಓ ಪೊನಲೆ, ಓ ಬನವೆ, ಓ ಮಲೆಯ ಸಾಲೆ
ಆ ಪೊಳಲು ನುಂಗಿದಿರೆ! ನುಂಗಿ ಬೆಳೆದಿಹಿರೆ!

No comments:

Post a Comment