Tuesday 3 October 2023

ಬಿನ್ನಹ - ಕೇತಕೀವನ

 [ನನ್ನ ತಾಯ ಅಣ್ಣಂದಿರು ಸಂಪ್ರದಾಯಸ್ಥರು. ಅವರು ಪ್ರತಿ ಸಾರಿಯೂ ಭೋಜನಾರಂಭದಲ್ಲಿ ಆಪೋಶನ ತೆಗೆದುಕೊಳ್ಳುವುದಕ್ಕೆ ಮುನ್ನ ಒಂದು ತೆಲುಗು ಪದ್ಯ ಹೇಳುತ್ತಿದ್ದರು. ಅದರ ಅನುವಾದ ಹೀಗೆ:]


ಒಂದು ಚಣ ಮುಂದಿಲ್ಲ,
ಒಂದು ಚಣ ಹಿಂದಿಲ್ಲ,
ತಂದೆ, ನೀಂ ಪೇಳ್ದ ದಿನ ಬದುಕಿ;

ಒಂದಗಳು ಹೆಚ್ಚಿಲ್ಲ,
ಒಂದಗಳು ಕೊರೆಯಿಲ್ಲ,
ತಂದೆ, ನೀನಿಟ್ಟೂಟವುಂಡು;

ಒಂದುಸಿರು ಮೇಲಿಲ್ಲ,
ಒಂದುಸಿರು ಕೀಳಿಲ್ಲ,
ತಂದೆ, ನೀಂ ಕೊಟ್ಟುಸಿರನುಸಿರಿ;

ಎಂದು ನೀಂ ಕರೆವೆ ನಾ-
ನಂದು ಬಹೆನಾದರದಿ
ತಂದೆ, ನಿನ್ನಡಿಯೆನ್ನ ನೆಲಸು.

1 comment:

  1. ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು ।
    ತಿಂದು ನಿನ್ನನ್ನಋಣ ತೀರುತಲೆ ಪಯಣ ॥
    ಹಿಂದಾಗದೊಂದು ಚಣ, ಮುಂದಕುಂ ಕಾದಿರದು ।
    ಸಂದ ಲೆಕ್ಕವದೆಲ್ಲ - ಮಂಕುತಿಮ್ಮ ॥ ೬೭೩ ॥

    ReplyDelete