Friday 20 October 2023

ಒಲವೆಂದರೆ? - ಕೇತಕೀವನ - ಡಿವಿಜಿ

ಹೊನ್ನ ಕಡಗಗಳಿಂದ
ರನ್ನದೊಡವೆಗಳಿಂದ
ಬಣ್ಣದುಡಿಗೆಗಳಿಂದ
ಸೊಗಸುಗೊಳಿಸಿ
ನೆಲದೊಳೋಡಾಡಿಸದೆ
ಮಳೆಬಿಸಿಲ ತಾಕಿಸದೆ
ಗಳಿಗೆಯನ್ನೆಡೆಬಿಡದೆ
ಸೊಗದಿ ಪೊರೆದರ್‍.
ಒಲವದೆನುತಾನಂದು ನಾಂ ತಿಳಿಯದಾದೆ.

ಪಲಬಗೆಯ ತಿನಿಸುಗಳ
ತಲೆಯ ಮೇಲ್‍ ಪೊತ್ತಿಟ್ಟು
ನಿಲದೆ ಗಾವುದ ಮೂರ
ಭರದಿ ನಡೆದು
ಓದುವಾ ಮಗು ಮೆದ್ದು
ಮೊದವಡಲೆಂದು ಮಿಗಿ-
ಲಾದರದಿ ತಂದಿತ್ತು,
ಹರಸಿ ಪೋದರ್‍.
ಒಲವದೆನುತಾನಂದು ತಿಳಿಯದಾದೆ.

ದುಡಿದು ನಾಂ ಮನೆಗೆ ಬರ
ಲೊಡನೆ ನಸುನಗುತ ಬಂ-
ದಿಡುತ ಕೈಯೊಳು ಕೈಯ-
ನೊಡಲ ತಡವಿ
ಸವಿಯುಣಿಸ ನೀಡಿ ಮೃದು
ರವದಿ ಮಾತುಗಳಾಡಿ
ಎವೆಯಿಡದೆ ನೋಡಿ ತ-
ನ್ನೊಡಲ ಮರೆವಳ್‍.
ಒಲವದೆನುತಾನಂದು ತಿಳಿಯದಾದೆ.

ಮುಳಿಯಲಾಂ ಮುಳಿಯದರ್‍
ಪಳಿಯಲಾಂ ಪಳಿಯದರ್‍
ನಲಿಯಲಾಂ ಮೈಯುಬ್ಬಿ
ನಲಿಯುತಿರ್ದರ್‍.
ಅಳಿದರಾ ಜನರೆಲ್ಲ
ಕಳೆದುದಾ ಯುಗವೆಲ್ಲ
ಕಳವಳದೊಳಿಂದು ಪಾಲ್‍
ಕೊಳುವರಿಲ್ಲ.
ಒಲವು ತಾನೇನೆಂದು ತಿಳಿದೆನೀಗಳ್‍.

ನೋಡಿಹರುಷಿಪರಿಲ್ಲ
ನೀಡಲಾತುರರಿಲ್ಲ
ಪಾಡಿ ತಣಿಸುವರಿಲ್ಲ
ಇಂದದಾರುಂ.
ತೆರಳೆ ನಾಂ ಮನೆಯಿಂದ
ಮರೆಯಿನೀಕ್ಷಿಪರಿಲ್ಲ
ಅರಿತೆನ್ನ ಸಂತಯಿಪ
ಬಂಧುವಿಲ್ಲ.
ಒಲವು ತಾನೇನೆಂದು ತಿಳಿದೆನೀಗಳ್‍.

No comments:

Post a Comment